Tag: ಡಿಜಿಸಿಎ

  • ಹಬ್ಬದ ಅವಧಿಯಲ್ಲಿ ಹೆಚ್ಚುವರಿ ವಿಮಾನದ ವ್ಯವಸ್ಥೆ, ದರ ನಿಯಂತ್ರಣಕ್ಕೆ ಡಿಜಿಸಿಎ ಸೂಚನೆ

    ಹಬ್ಬದ ಅವಧಿಯಲ್ಲಿ ಹೆಚ್ಚುವರಿ ವಿಮಾನದ ವ್ಯವಸ್ಥೆ, ದರ ನಿಯಂತ್ರಣಕ್ಕೆ ಡಿಜಿಸಿಎ ಸೂಚನೆ

    ನವದೆಹಲಿ: ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಒತ್ತಡವನ್ನು ನಿರ್ವಹಿಸಲು ವಿಮಾನಯಾನ ಸಂಸ್ಥೆಗಳು ಹೆಚ್ಚಿನ ವಿಮಾನಗಳ ವ್ಯವಸ್ಥೆ ಮಾಡಲು ಮತ್ತು ಟಿಕೆಟ್ ದರಗಳನ್ನು ಸೀಮಿತಗೊಳಿಸಲು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಸೂಚಿಸಿದೆ.

    ದೀಪಾವಳಿ, ಛತ್ ಮತ್ತು ಇತರ ಹಬ್ಬಗಳ ಸಮಯದಲ್ಲಿ ವಿಮಾನಯಾನದ ಬೇಡಿಕೆಯ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಟಿಕೆಟ್‌ಗಳು ಲಭ್ಯವಾಗುವಂತೆ ಮತ್ತು ಪ್ರಯಾಣದ ಅವಕಾಶಗಳು ಹೆಚ್ಚಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ಡಿಜಿಸಿಎ ತನ್ನ ಆದೇಶದಲ್ಲಿ, ವಿಮಾನಯಾನ ಸಂಸ್ಥೆಗಳು (MoCA) ತಮ್ಮ ಟಿಕೆಟ್ ದರಗಳನ್ನು ಸಮಂಜಸವಾಗಿಡಲು ಮತ್ತು ದರಗಳ ಏರಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಹೆಚ್ಚಿನ ಬೇಡಿಕೆಯಿರುವ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಕ್ರಿಮಿನಾಶಕ ಸಿಂಪಡಿಸಿದ್ದ ಆಹಾರ ಸೇವನೆ ಶಂಕೆ – 60ಕ್ಕೂ ಹೆಚ್ಚು ಕುರಿಗಳು ಸಾವು

    ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳು ದೊರೆತು, ಟಿಕೆಟ್ ದರಗಳ ಮೇಲಿನ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಕ್ರಮವು ಪ್ರಯಾಣಿಕರಿಗೆ ಹಬ್ಬದ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಸೇರಿಕೊಳ್ಳಲು ತವರಿಗೆ ತೆರಳುವವರಿಗೆ ಸಹಾಯಕವಾಗಲಿದೆ. ಡಿಜಿಸಿಎ ಈ ಆದೇಶದ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿದ್ದು, ವಿಮಾನಯಾನ ಸಂಸ್ಥೆಗಳು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ . ಇದನ್ನೂ ಓದಿ: ಒಂದು ತಿಂಗಳ ಒಳಗೆ ಫ್ರೆಂಚ್‌ ಪ್ರಧಾನಿ ಪಟ್ಟದಿಂದ ಇಳಿದ ಲೆಕೋರ್ನು – 3 ವರ್ಷದಲ್ಲಿ 7 ಮಂದಿ ರಾಜೀನಾಮೆ

  • Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ

    Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ

    – ಪ್ರಾಥಮಿಕ ತನಿಖಾ ವರದಿಯ ಕೆಲ ಅಂಶಗಳಿಗೆ ಸುಪ್ರೀಂ ಕೋರ್ಟ್ ಆಕ್ಷೇಪ
    – ಕೇಂದ್ರ ಮತ್ತು ಡಿಜಿಸಿಎ ಪ್ರತಿಕ್ರಿಯೆ ಕೇಳಿದ ಕೋರ್ಟ್

    ನವದೆಹಲಿ: ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ (Air India Plane Crash)ದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿದ ಪ್ರಾಥಮಿಕ ವರದಿಯ ಕೆಲವು ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

    ದುರಂತದ ಬಗ್ಗೆ ಸ್ವತಂತ್ರ, ನ್ಯಾಯಯುತ ಮತ್ತು ಕಾಲಮಿತಿಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ಜುಲೈ 12 ರಂದು ಬಿಡುಗಡೆಯಾದ AAIB ಪ್ರಾಥಮಿಕ ವರದಿಯು ಪೈಲಟ್‌ಗಳ (Pilots) ಕಡೆಯಿಂದ ಲೋಪಗಳನ್ನು ಸೂಚಿಸಿದೆ ಎಂಬುದನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಗಮನಿಸಿತು. ಈ ಅಂಶಗಳು ದುರದೃಷ್ಟಕರ, ಬೇಜವಾಬ್ದಾರಿ ಎಂದ ಪೀಠ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿತು.

    ಈ ವರದಿಯ ಉಲ್ಲೇಖಗಳನ್ನು ಪ್ರಶ್ನಿಸಿ ವಿಮಾನಯಾನ ಸುರಕ್ಷತೆ ಎನ್‌ಜಿಒ ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್, ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿತ್ತು. ಇಂಧನ-ಸ್ವಿಚ್ ದೋಷಗಳು ಮತ್ತು ವಿದ್ಯುತ್ ದೋಷಗಳಂತಹ ವ್ಯವಸ್ಥಿತ ವೈಪರೀತ್ಯಗಳನ್ನು ಕಡಿಮೆ ಮಾಡಿ, ಪೈಲಟ್ ದೋಷದ ನಿರೂಪಣೆ ಮಾಡಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಟೀಕಿಸಲಾಗಿತ್ತು. ಅಂತಾರಾಷ್ಟ್ರೀಯ ಪೈಲಟ್‌ ಒಕ್ಕೂಟ ಕೂಡ ಪ್ರಾಥಮಿಕ ತನಿಖಾ ವರದಿಯನ್ನು ಪ್ರಶ್ನಿಸಿತ್ತು.

    ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ದಿನಗಳು ಕಳೆದಿದೆ. ಆದರೆ ಇದುವರೆಗೂ ಕೇವಲ ಪ್ರಾಥಮಿಕ ವರದಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಲ್ಲದೇ ವರದಿಯಲ್ಲಿ ಯಾವುದೇ ಅಪಘಾತಕ್ಕೆ ನಿಖರ ಕಾರಣ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಉಲ್ಲೇಖ ಇರದಿರುವುದರಿಂದ, ಬೋಯಿಂಗ್ ವಿಮಾನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಇಂದು ಅಪಾಯದಲ್ಲಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

    ಅಪಘಾತದ ತನಿಖೆಗಾಗಿ ರಚಿಸಲಾದ ಐವರು ಸದಸ್ಯರ ತಂಡವು, ವಾಯುಯಾನ ನಿಯಂತ್ರಕ ಡಿಜಿಸಿಎಯ ಮೂವರು ಸದಸ್ಯರನ್ನು ಹೊಂದಿದ್ದು, ಗಂಭೀರ ಹಿತಾಸಕ್ತಿ ಸಂಘರ್ಷವನ್ನು ಸೃಷ್ಟಿಸುತ್ತದೆ. ಅಪಘಾತಕ್ಕೆ ಯಾವ ಸಂಸ್ಥೆಯನ್ನು ಪ್ರಶ್ನಿಸಲಾಗುತ್ತಿದೆಯೋ ಅದೇ ಸಂಸ್ಥೆಯ ಸದಸ್ಯರು ಹೇಗೆ ತನಿಖೆ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದರಲ್ಲದೇ ಅಪಘಾತದ ನಿಜವಾದ ಕಾರಣ ಸ್ಪಷ್ಟಪಡಿಸಲು ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ನಿಂದ ಡೇಟಾವನ್ನು ಪಡೆಯಲು ಭೂಷಣ್ ಕೋರಿದರು.

    ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, ಅರ್ಜಿದಾರರ ವಾದ ಪುರಸ್ಕರಿಸಿತಾದರೂ, ಪ್ರಾಥಮಿಕ ತನಿಖೆಯ ಎಲ್ಲಾ ವರದಿಗಳನ್ನು ಸಾರ್ವಜನಿಕಗೊಳಿಸಿವುರಿಂದ ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿತು. ಆದ್ರೆ ಅಪಘಾತಕ್ಕೆ ಪೈಲಟ್‌ ದೋಷ ನಿರೂಪಣೆಯನ್ನು ದ್ವಿಸದಸ್ಯ ಪೀಠ ದುರದೃಷ್ಟಕರ ಎಂದು ಬಣ್ಣಿಸಿತು.

    ಅಲ್ಲದೇ ಕೆಲವು ಮಾಹಿತಿಯನ್ನು ಪ್ರತಿಸ್ಪರ್ಧಿ ವಿಮಾನಯಾನ ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಗಮನಿಸಿದ ಪೀಠವು ಡಿಜಿಸಿಎ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿಗೊಳಿಸಲು ಸೂಚನೆ ನೀಡಿತು. ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

  • ಮೂವರು ಅಧಿಕಾರಿಗಳನ್ನು ವಜಾಗೊಳಿಸಿ, ಇಲ್ದೆ ಇದ್ರೆ ಲೈಸನ್ಸ್‌ ರದ್ದು ಆಗುತ್ತೆ: ಏರ್‌ ಇಂಡಿಯಾಗೆ ಡಿಜಿಸಿಎ ಎಚ್ಚರಿಕೆ

    ಮೂವರು ಅಧಿಕಾರಿಗಳನ್ನು ವಜಾಗೊಳಿಸಿ, ಇಲ್ದೆ ಇದ್ರೆ ಲೈಸನ್ಸ್‌ ರದ್ದು ಆಗುತ್ತೆ: ಏರ್‌ ಇಂಡಿಯಾಗೆ ಡಿಜಿಸಿಎ ಎಚ್ಚರಿಕೆ

    ನವದೆಹಲಿ: ಮೂವರು ಹಿರಿಯ ಅಧಿಕಾರಿಗಳನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕುವಂತೆ ಏರ್‌ ಇಂಡಿಯಾಗೆ (Air India) ನಾಗರಿಕ ವಿಮಾನಯಾನ ನಿಯಂತ್ರಕ (DGCA) ಸೂಚಿಸಿದೆ.

    ವಿಮಾನ ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಗಳಿಂದ ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ತಕ್ಷಣ ತೆಗೆದುಹಾಕುವಂತೆ ಆದೇಶಿಸಲಾಗಿದೆ.

    ಹೆಸರು ಬಹಿರಂಗಪಡಿಸದ ಮೂವರು ಅಧಿಕಾರಿಗಳ ವಿರುದ್ಧ ವಿಳಂಬ ಮಾಡದೇ ಆಂತರಿಕ ತನಿಖೆ ನಡೆಸಬೇಕು. ಒಂದು ವೇಳೆ ವಿಫಲವಾದರೆ ವಿಮಾನಯಾನ ಸಂಸ್ಥೆಯು ತನ್ನ ಕಾರ್ಯಾಚರಣೆಯ ಅನುಮತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಸೇರಿದಂತೆ ಕಠಿಣ ಕ್ರಮಕ್ಕೆ ಕಾರಣವಾಗಬಹದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೇಂದ್ರ ಸಚಿವ ಸೋಮಣ್ಣ ಕಾಲಿಗೆ ಬಿದ್ದ ಹಾಸನ ಡಿಸಿ

    ಸಾಂದರ್ಭಿಕ ಚಿತ್ರ

    ವಿಮಾನಯಾನ ಸಂಸ್ಥೆಯ ದೇಶೀಯ ಮತ್ತು ಅಂತರರಾಷ್ಟ್ರೀಯ ಜಾಲದಾದ್ಯಂತ ಸಿಬ್ಬಂದಿ ನಿಯೋಜನೆಯನ್ನು ಮೇಲ್ವಿಚಾರಣೆ ಮಾಡುವ ಏರ್ ಇಂಡಿಯಾದ ಇಂಟಿಗ್ರೇಟೆಡ್ ಆಪರೇಷನ್ಸ್ ಕಂಟ್ರೋಲ್ ಸೆಂಟರ್ (ಐಒಸಿಸಿ) ಲೆಕ್ಕಪರಿಶೋಧನೆಯ ಬಳಿಕ ಡಿಜಿಸಿಎ ಈ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: 10 ಅಡಿ ಆಳದಲ್ಲಿ ಸೊಸೆಯನ್ನು ಹೂತಿದ್ದ ಪಾಪಿಗಳು – ಓಡಿ ಹೋಗಿದ್ದಾಳೆ ಎಂದು ಕತೆ ಕಟ್ಟಿದ್ದ ಪತಿ ಕುಟುಂಬಸ್ಥರು ಅರೆಸ್ಟ್‌!

    ನಿಯಂತ್ರಕ ಹೊರಡಿಸಿದ ಶೋಕಾಸ್ ನೋಟಿಸ್ ಪ್ರಕಾರ, ಮೇ 16 ಮತ್ತು ಮೇ 17 ರಂದು ಬೆಂಗಳೂರಿನಿಂದ ಲಂಡನ್ ಹೀಥ್ರೂಗೆ ಏರ್ ಇಂಡಿಯಾ ನಿರ್ವಹಿಸುವ ಎರಡು ವಿಮಾನಗಳು – ಎಐ 133 – ಗರಿಷ್ಠ ಹಾರಾಟದ ಕರ್ತವ್ಯ ಸಮಯ ಮಿತಿ 10 ಗಂಟೆಗಳನ್ನು ಮೀರಿತ್ತು ಎಂದು ತಿಳಿಸಿದೆ.

    ಶೋಕಾಸ್‌ ನೋಟಿಸ್‌ನಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಲಾಗಿತದ್ದು 7 ದಿನಗಳ ಒಳಗಡೆ ಉತ್ತರಿಸಬೇಕೆಂದು ಏರ್‌ ಇಂಡಿಯಾಗೆ ಸೂಚಿಸಿದೆ.

  • Air India Crash | 215 ಡಿಎನ್‌ಎ ಮ್ಯಾಚ್‌ – 198 ಮೃತದೇಹ ಹಸ್ತಾಂತರ

    Air India Crash | 215 ಡಿಎನ್‌ಎ ಮ್ಯಾಚ್‌ – 198 ಮೃತದೇಹ ಹಸ್ತಾಂತರ

    ಅಹಮದಾಬಾದ್‌: ಏರ್‌ ಇಂಡಿಯಾವಿಮಾನ ದುರಂತದಲ್ಲಿ (Air India Crash) ಮೃತಪಟ್ಟವರ ಪೈಕಿ ಈವರೆಗೆ ಒಟ್ಟು 215 ಮಂದಿ ಗುರುತು ಪತ್ತೆಯಾಗಿದ್ದು, 198 ಮೃತ ದೇಹಗಳನ್ನ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಹಮದಾಬಾದ್ ಸಿವಿಲ್ ಹಾಸ್ಪಿಟಲ್ ಅಧೀಕ್ಷಕ ರಾಕೇಶ್ ಜೋಶಿ ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಒಟ್ಟು 215 ಡಿಎನ್‌ಎ (DNA) ವರದಿಗಳು ಮ್ಯಾಚ್‌ ಆಗಿವೆ. ಈ ಪೈಕಿ 198 ಮೃತದೇಹಗಳನ್ನ ಹಸ್ತಾಂತರಿಸಲಾಗಿದೆ. ಈ ಪೈಕಿ 149 ಭಾರತೀಯರು, 7 ಪೋರ್ಚುಗೀಸ್‌, 32 ಬ್ರಿಟಿಷ್‌ ಮತ್ತಿ ಕೆನಡಿಯನ್‌ ಪ್ರಜೆಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

    15 ಮೃತದೇಹಗಳನ್ನು ಏರ್‌ ಅಂಬುಲೆನ್ಸ್‌ ಹಾಗೂ 183 ಮೃತದೇಹಗಳನ್ನು ರೋಡ್‌ ಅಂಬುಲೆನ್ಸ್‌ ಮೂಲಕ ಸಾಗಿಸಲಾಗಿದೆ. ಇದೆಲ್ಲವೂ ಸೇರಿ ಒಟ್ಟಾರೆ 222 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. 8 ಮಂದಿ ಮೃತದೇಹಗಳ ಗುರುತು ಮಾತ್ರ ಪತ್ತೆಯಾಗಿಲ್ಲ ಎಂದು ವಿವರಿಸಿದ್ದಾರೆ.

    ಬ್ಲ್ಯಾಕ್‌ ಬಾಕ್ಸ್‌ ಅಮೆರಿಕಗೆ ರವಾನೆ
    ಸದ್ಯ ಪತನವಾಗಿರುವ ಏರ್‌ ಇಂಡಿಯಾ ಬೋಯಿಂಗ್-787 ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಅನ್ನು ಡಿಕೋಡ್‌ ಮಾಡಲು ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜೂನ್‌ 13ರಂದು ಬಿಜೆ ಮೆಡಿಕಲ್‌ ಹಾಸ್ಟೆಲಿನ ಮೇಲ್ಛಾವಣಿಯಲ್ಲಿದ್ದ ಏರ್‌ ಇಂಡಿಯಾ ವಿಮಾನದ ಬ್ಲ್ಯಾಕ್‌ ಬಾಕ್ಸ್‌ (Black Box) ಅನ್ನು‌ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಶಪಡಿಸಿಕೊಂಡಿತ್ತು. ಆದ್ರೆ ಬ್ಲ್ಯಾಕ್‌‌ ಬಾಕ್ಸ್‌ಗೆ ಬೆಂಕಿ ಬಿದ್ದು ಬಾಹ್ಯವಾಗಿ ಹಾನಿಯಾಗಿದೆ. ಇದರಿಂದ ಸ್ಥಳೀಯ ತನಿಖಾಧಿಕಾರಿಗಳಿಂದ ಮಾಹಿತಿ ಹೊರ ತೆಗೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಡೇಟಾ ರಿಕವರಿಗಾಗಿ ಬ್ಲ್ಯಾಕ್‌ಬಾಕ್ಸ್‌ ಅನ್ನು ಅಮೆರಿಕಾಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

  • ಶ್ರೀನಗರಕ್ಕೆ ಹೆಚ್ಚುವರಿ ವಿಮಾನ ಸೇವೆ ನೀಡುವಂತೆ ಕಂಪನಿಗಳಿಗೆ DGCA ಸೂಚನೆ

    ಶ್ರೀನಗರಕ್ಕೆ ಹೆಚ್ಚುವರಿ ವಿಮಾನ ಸೇವೆ ನೀಡುವಂತೆ ಕಂಪನಿಗಳಿಗೆ DGCA ಸೂಚನೆ

    ನವದೆಹಲಿ: ಶ್ರೀನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ಸೇವೆಯನ್ನು ನಿಯೋಜಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ.

    ಪಹಲ್ಗಾಮ್‌ ದಾಳಿ ನಂತರ ಸಾವಿರಾರು ಸಂಖ್ಯೆಯ ಪ್ರವಾಸಿಗರು ಜಮ್ಮು ಕಾಶ್ಮೀರದಲ್ಲಿ ಸಿಲುಕಿದ್ದಾರೆ. ಇವರನ್ನು ಸುರಕ್ಷಿತವಾಗಿ ಕರೆ ತರಲು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳನ್ನು ನಿಯೋಜಿಸಬೇಕು ಮತ್ತು ಪ್ರಯಾಣ ರದ್ದುಗೊಳಿಸಿದರೆ ಟಿಕೆಟ್‌ ಶುಲ್ಕವನ್ನು ಮರುಪಾವತಿಸುವಂತೆ ಸೂಚಿಸಿದೆ. ಇದನ್ನೂ ಓದಿ: ರೈಫಲ್‌ ಕಸಿದುಕೊಳ್ಳಲು ಹೋಗಿ ಉಗ್ರರ ಗುಂಡೇಟಿಗೆ ಕುದುರೆ ರೈಡರ್‌ ಬಲಿ

     

    ಹೆಚ್ಚಿದ ಬೇಡಿಕೆಗೆ ಪ್ರತಿಕ್ರಿಯೆಯಾಗಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಶ್ರೀನಗರದಿಂದ ಭಾರತದಾದ್ಯಂತ ವಿವಿಧ ಸ್ಥಳಗಳಿಗೆ ಪ್ರವಾಸಿಗರನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ವಿಮಾನಯಾನ ಸಂಸ್ಥೆಗಳು ತ್ವರಿತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಡಿಜಿಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮಹಿಳೆಯರಿಂದ ಪುರುಷರನ್ನು ಬೇರ್ಪಡಿಸಿ ಹತ್ಯೆ – 20 ನಿಮಿಷದಲ್ಲಿ ನರಮೇಧ ಮಾಡಿದ್ದು ಹೇಗೆ?

    ಡಿಜಿಸಿಎ ಸೂಚನೆ ಬೆನ್ನಲ್ಲೇ ಏರ್ ಇಂಡಿಯಾ ಮತ್ತು ಇಂಡಿಗೋ ಬುಧವಾರ ಶ್ರೀನಗರದಿಂದ ಹೆಚ್ಚುವರಿ ವಿಮಾನ ಸೇವೆ ಆರಂಭಿಸಿದೆ.

    ಈ ಸಂದರ್ಭದಲ್ಲಿ ಲಾಭ ಪಡೆಯಲು ವಿಮಾನಯಾನ ಕಂಪನಿಗಳು ಟಿಕೆಟ್‌ ದರವನ್ನು ಏರಿಕೆ ಮಾಡಿದರೆ ಆನ್‌ಲೈನ್‌ನಲ್ಲಿ ದೂರು ನೀಡುವಂತೆ DGCA ಜನರಲ್ಲಿ ಮನವಿ ಮಾಡಿದೆ.

  • ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

    ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

    ಪಾಟ್ನಾ: ಪುಣೆಯಿಂದ ಬರುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್‌ ಸಮಯದಲ್ಲಿ ಡಿಜೆ ಲೇಸರ್‌ ಬೆಳಕು (Laser light) ಹಾಯಿಸಿದ ಪರಿಣಾಮ ಲ್ಯಾಂಡಿಂಗ್‌ ಕಾರ್ಯಾಚರಣೆ ವೇಳೆ ಸಮತೋಲನ ತಪ್ಪಿದ ಘಟನೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ (Patna Airport) ನಡೆದಿದೆ. ಆದ್ರೆ ಪೈಲಟ್‌ನ ಸಾಹಸದಿಂದಾಗಿ ಯಾವುದೇ ದುರಂತ ಸಂಭವಿಸಿದೇ ನೂರಾರು ಜೀವಗಳು ಬದುಕುಳಿದಿವೆ.

    ಹೌದು.. ಗುರುವಾರ (ನಿನ್ನೆ) ಪುಣೆಯಿಂದ ಹೊರಟಿದ್ದ ಇಂಡಿಗೋ ವಿಮಾನ (IndiGo flight) ಪಾಟ್ನಾ ಏರ್‌ಪೋರ್ಟ್‌ನಲ್ಲಿ ಸಂಜೆ 6:40ಕ್ಕೆ ಲ್ಯಾಂಡ್‌ ಆಗಬೇಕಿತ್ತು. ಈ ವೇಳೆ ಯಾರೋ ಡಿಜೆ ಲೇಸರ್ ಬೆಳಕು ಹಾಯಿಸಿದ್ದಾರೆ. ಲೇಸರ್‌ ಬೆಳಕು ಕಾಕ್‌ಪಿಟ್‌ಗೆ ರಾಚಿದ್ದರಿಂದ ಪೈಲಟ್‌ಗೆ ಗೊಂದಲ ಉಂಟಾಗಿದೆ. ಜೊತೆಗೆ ವಿಮಾನ ನಿಯಂತ್ರಣ ಕಳೆದುಕೊಂಡಿದೆ, ಈ ವೇಳೆ ಸಮಯಪ್ರಜ್ಞೆ ತೋರಿದ ಪೈಲಟ್‌ ವಿಮಾನವನ್ನು ಹತೋಟಿಗೆ ತಂದು ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    AI Photo

    ಘಟನೆ ಸಂಬಂಧ ಲೇಸರ್‌ ಬೆಳಕು ಹಾಯಿಸಿದ ಅಪರಿಚಿತನ ಪತ್ತೆಗೆ ಪಾಟ್ನಾ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ. ಅತ್ತ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಡಿಜಿಸಿಎ ಆದೇಶಿಸಿದೆ.

  • ವಿಮಾನ ನಿಯಮ ಕಾಯ್ದೆ ಉಲ್ಲಂಘನೆ- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ

    ವಿಮಾನ ನಿಯಮ ಕಾಯ್ದೆ ಉಲ್ಲಂಘನೆ- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ

    ಶಿವಮೊಗ್ಗ: ವಿಮಾನ ನಿಯಮ ಕಾಯ್ದೆ (Aviation Rules) ಉಲ್ಲಂಘಿಸಿದ್ದಕ್ಕೆ ವಿಮಾನಯಾನ ನಿರ್ದೇಶನಾಲಯವು (DGCA) ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga Airport) ನೋಟಿಸ್ ಜಾರಿ ಮಾಡಿದ್ದು, 20 ಲಕ್ಷ ರೂ. ದಂಡ (Penalty) ವಿಧಿಸಿದೆ. ನೊಟೀಸ್ ತಲುಪಿದ 30 ದಿನಗಳ ಒಳಗೆ ದಂಡ ಪಾವತಿಸಬೇಕು ಎಂದು ಆಪರೇಷನ್ಸ್ ವಿಭಾಗದ ನಿರ್ದೇಶಕ ಚಂದ್ರ ಮಣಿ ಪಾಂಡೆ ಆದೇಶಿಸಿದ್ದಾರೆ.

    ಕಳೆದ ಜುಲೈ 10 ರಿಂದ 12ರವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಜಿಸಿಎ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಸಂದರ್ಭ ನಿರ್ವಹಣೆ ಕೊರತೆ ಗಮನಕ್ಕೆ ಬಂದಿತ್ತು. ವಿಮಾನಯಾನಕ್ಕೆ ಅಗತ್ಯ ಮಾನದಂಡ ಮತ್ತು ಸುರಕ್ಷತೆ ಕ್ರಮ ಕೈಗೊಳ್ಳದ ಹಿನ್ನೆಲೆ ದಂಡ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಗತ್ಯ ಸಂಖ್ಯೆಯ ಉಸಿರಾಟದ ಉಪಕರಣಗಳು, ರಕ್ಷಣಾ ಉಡುಪು ಇಲ್ಲ. ಅಗ್ನಿಶಾಮಕ ವಿಭಾಗದಲ್ಲಿ 18 ಸಿಬ್ಬಂದಿ ಇದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಹಾಜರಾತಿ ಪುಸ್ತಕದ ಪರಿಶೀಲನೆ ವೇಳೆ 13 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು. ಕ್ರಾಶ್ ಫೈರ್, ಟೆಂಡರ್ ಫೈರ್ ಇಂಜಿನ್ ನಿರ್ವಹಣೆಗೆ ಸಿಬ್ಬಂದಿ ಇಲ್ಲ. ಸಿಎಫ್‌ಟಿ ವಾಹನ ಟೆಸ್ಟ್ಗಳ ರೆಕಾರ್ಡ್ ಇರಲಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ನಿಮ್ಮದಲ್ಲದ ಸೈಟ್‌ಗೆ ಪರಿಹಾರ ಕೇಳೋದು ಆತ್ಮಸಾಕ್ಷಿಯಾ?: ಕಾರಜೋಳ

    ರನ್ ವೇ ಆ್ಯಂಡ್ ಸೇಫ್ಟಿ ಏರಿಯಾ ನಿರ್ವಹಣೆ ಸಮರ್ಪಕವಾಗಿಲ್ಲ. ರನ್ ವೇನ ಟ್ರಾನ್ಸ್‌ವರ್ಸ್ ಭಾಗದಲ್ಲಿ ಮಣ್ಣು ಕುಸಿತ ಸೇರಿದಂತೆ ಕೆಲವು ನ್ಯೂನತೆಗಳಿದ್ದು, ನಿರ್ವಹಣೆ ಸರಿ ಇಲ್ಲ. ರನ್ ವೇ ಭಾಗದಲ್ಲಿ ಕಲ್ಲುಗಳು ಪತ್ತೆಯಾಗಿವೆ. ರನ್ ವೇ ಅಂಚಿನಲ್ಲಿ ಲೈಟ್ ಪ್ಯಾನಲ್‌ಗಳ ನಿರ್ವಹಣೆ ಸರಿ ಇಲ್ಲ ಎಂದು ತಿಳಿಸಲಾಗಿದೆ. ನ್ಯೂನತೆಗಳ ಕುರಿತು ವಿಮಾನಯಾನ ನಿರ್ದೇಶನಾಲಯವು ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಆ.1ರಂದು ನೊಟೀಸ್ ಜಾರಿ ಮಾಡಿತ್ತು. ಹತ್ತು ದಿನದ ಬಳಿಕ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಉತ್ತರ ನೀಡಿತ್ತು. ಆದರೆ ಉತ್ತರ ಸಮಾಧಾನಕರವಾಗಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿ ನೋಟಿಸ್ ನೀಡಿದೆ. ಇದನ್ನೂ ಓದಿ: ಸಿಎಂ ಪತ್ನಿ ಸೈಟ್‌ ಮರಳಿಸಿದ್ದು ತಪ್ಪೇ? ಈ ಕೇಸ್‌ನಲ್ಲಿ ತಪ್ಪೇನಿದೆ:  ತಿಮ್ಮಾಪುರ್‌ ಪ್ರಶ್ನೆ

  • Shivamogga Airport| 20 ದಿನಕ್ಕಷ್ಟೇ ಲೈಸೆನ್ಸ್‌- ಷರತ್ತು ಪೂರೈಸದಿದ್ದರೆ ವಿಮಾನ ಹಾರಾಟಕ್ಕೆ ತೊಡಕು

    Shivamogga Airport| 20 ದಿನಕ್ಕಷ್ಟೇ ಲೈಸೆನ್ಸ್‌- ಷರತ್ತು ಪೂರೈಸದಿದ್ದರೆ ವಿಮಾನ ಹಾರಾಟಕ್ಕೆ ತೊಡಕು

    ಶಿವಮೊಗ್ಗ: ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಿಂದ (Shivamogga Airport) ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ( DGCA) ನೀಡಿದ್ದ ಅನುಮತಿ ಇನ್ನು 20 ದಿನದಲ್ಲಿ ಮುಕ್ತಾಯಗೊಳ್ಳಲಿದೆ. ಒಂದು ವರ್ಷಕ್ಕೆ ವಿಸ್ತರಿಸಬೇಕಿದ್ದ ಡಿಜಿಸಿಎ ಈ ಬಾರಿ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಲೈಸೆನ್ಸ್‌ ವಿಸ್ತರಿಸಿದೆ. ಹೀಗಾಗಿ ವಿಮಾನ ಪ್ರಯಾಣಿಕರಿಗೆ ವಿಮಾನ ಹಾರಾಟ ನಡೆಸುತ್ತಾ ಅಥವಾ ಹಾರಾಟ ಸ್ಥಗಿತಗೊಳಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಕಳೆದ ಬಾರಿ ಒಂದು ವರ್ಷದ ಅವಧಿಗೆ ಲೈಸೆನ್ಸ್‌ ನೀಡಿತ್ತು. ಈ ಅವಧಿ ಆಗಸ್ಟ್‌ 23ಕ್ಕೆ ಮುಕ್ತಾಯಗೊಂಡಿದೆ. ಲೈಸೆನ್ಸ್‌ ನವೀಕರಣದ ವೇಳೆ ಕೆಲವು ಕಾರಣ ನೀಡಿ ಲೈಸೆನ್ಸ್‌ ಅವಧಿಯನ್ನು ಕೇವಲ ಒಂದು ತಿಂಗಳಿಗೆ ವಿಸ್ತರಣೆ ಮಾಡಿದೆ. ಸೆ.23ಕ್ಕೆ ಈ ಅವಧಿ ಮುಗಿಯಲಿದೆ. ಈ ಲೈಸೆನ್ಸ್‌ ಅವಧಿ ನವೀಕರಣಗೊಳ್ಳದೆ ಇದ್ದರೆ ಶಿವಮೊಗ್ಗದಿಂದ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗಲಿದೆ. ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆ ದಿನಾಂಕ ಮುಂದೂಡಿಕೆ ಇಲ್ಲ: ಕೆಇಎ

    ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮವು (KSIIDC) ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ. ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಪರವಾನಗಿ ನೀಡುವಾಗ ಸುರಕ್ಷತೆ ಮತ್ತು ಭದ್ರತೆ ವಿಚಾರಗಳ ಬಗ್ಗೆ ಕೆಲವು ಷರತ್ತು ವಿಧಿಸಿತ್ತು. ಕೆಎಸ್‌ಐಐಡಿಸಿ ಸಂಸ್ಥೆಯು ಈ ಷರತ್ತುಗಳನ್ನು ಪೂರ್ತಿಯಾಗಿ ಪೂರೈಸಿಲ್ಲ. ಇದೇ ಕಾರಣಕ್ಕೆ ಈಗ ಡಿಜಿಸಿಎ ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್‌ ಅವಧಿಯನ್ನು ಕೇವಲ ಒಂದು ತಿಂಗಳಿಗೆ ಮಾತ್ರ ನವೀಕರಿಸಿದೆ. ಇದನ್ನೂ ಓದಿ: ಹಾವೇರಿ ನಗರಸಭೆ `ಬಿಜೆಪಿ’ ತೆಕ್ಕೆಗೆ – ಬಹುಮತವಿದ್ದರೂ ಕಾಂಗ್ರೆಸ್‌ಗೆ ಭಾರೀ ಮುಖಭಂಗ

    ವಿಮಾನ ನಿಲ್ದಾಣದ ರನ್‌ವೇ ಸುರಕ್ಷತಾ ಪ್ರದೇಶವು ಮಾನದಂಡಕ್ಕೆ ಅನುಗುಣವಾಗಿಲ್ಲ. ರಕ್ಷಣಾ ಸಾಧನಗಳ ಖರೀದಿ ವಿಳಂಬವಾಗಿದೆ. ಫೈರ್‌ ಸೇಫ್ಟಿ ನೋಡಿಕೊಳ್ಳುವ ಸಿಬ್ಬಂದಿ ಕೊರತೆ ಇದೆ. ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್‌ಟಿ) ಇಲ್ಲ. ಭದ್ರತಾ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಇವುಗಳನ್ನು ಪೂರೈಸಿದರೆ ಲೈಸೆನ್ಸ್‌ ನವೀಕರಣ ಮಾಡಲಾಗುವುದು ಎಂದು ಡಿಜಿಸಿಎ ತಿಳಿಸಿದೆ ಎಂದು ತಿಳಿದು ಬಂದಿದೆ.

     

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ (BY Raghavendra) ಕೆಲ ದಿನಗಳ ಹಿಂದೆ ಕೆಎಸ್‌ಐಐಡಿಸಿ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತು ಚರ್ಚಿಸಿದ್ದೇನೆ. ಅಗತ್ಯ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದೇನೆ. ಕೆಎಸ್‌ಐಐಡಿಸಿ ಅಧಿಕಾರಿಗಳು ತಕ್ಷಣ ಈ ಸಮಸ್ಯೆಗಳನ್ನು ಪರಿಹರಿಸುವುದು ಸೂಕ್ತ ಎಂದು ತಿಳಿಸಿದರು.

    ಒಟ್ಟಾರೆ ಮಧ್ಯ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಈಗಾಗಲೇ ಶಿವಮೊಗ್ಗದಿಂದ ಬೆಂಗಳೂರು, ಗೋವಾ, ಹೈದರಾಬಾದ್‌ ಮತ್ತು ತಿರುಪತಿಗೆ ನಿತ್ಯ ವಿಮಾನಗಳು ಹಾರಾಟ ನಡೆಸುತ್ತಿವೆ. ಇಂಡಿಗೋ ಮತ್ತು ಸ್ಟಾರ್‌ ಏರ್‌ಲೈನ್ಸ್‌ ಸೇವೆ ನೀಡುತ್ತಿವೆ. ಸದ್ಯದಲ್ಲೇ ಸ್ಪೈಸ್‌ ಏರ್‌ಲೈನ್ಸ್‌ ಕೂಡ ವಿಮಾನಯಾನ ಆರಂಭಿಸುವ ಸಾಧ್ಯತೆ ಇದೆ.

    ಶಿವಮೊಗ್ಗದ ನಗರದಿಂದ 10 ಕಿ.ಮೀ ದೂರದಲ್ಲಿರುವ ಸೋಗಾನೆ ಬಳಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.  2023ರ ಫೆಬ್ರವರಿ 27 ರಂದು ಯಡಿಯೂರಪ್ಪ ಅವರ ಹುಟ್ಟು ಹಬ್ಬದ ದಿನದಂದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಲ್ದಾಣವನ್ನು ಉದ್ಘಾಟಿಸಿದ್ದರು.

  • ಡ್ರೋಣ್ ಪ್ರತಾಪ್ ವಿರುದ್ಧ ಡಿಜಿಸಿಎಗೆ ದೂರು ರವಾನೆ

    ಡ್ರೋಣ್ ಪ್ರತಾಪ್ ವಿರುದ್ಧ ಡಿಜಿಸಿಎಗೆ ದೂರು ರವಾನೆ

    ಬಿಗ್ ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ (Drone Pratap)ಗೆ ಈಗ ಅಸಲಿ ಸಂಕಷ್ಟ ಎದುರಾಗಿದೆ. ದಿನವೊಂದಕ್ಕೆ ಹೊಸ ಹೊಸ ಪ್ರಕರಣಗಳು ಪ್ರತಾಪ್ ಮೇಲೆ ದಾಖಲಾಗ್ತಾ ಇತ್ತು. ಆದ್ರೆ, ಈಗ ಪ್ರಕರಣ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಡಿಜಿಸಿಎ (DGCA) ಹೆಸರಲ್ಲಿ ಮೋಸ ಮಾಡಿ ಡ್ರೋಣ್ ಮಾರಾಟ ಮಾಡ್ತಾ ಇದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಡ್ರೋಣ್ ತಯಾರಿ ಮಾಡಲಿಕ್ಕೆ ಆಗಲಿ ಡ್ರೋಣ್ ಮಾರಾಟ ಮಾಡೋದಕ್ಕೆ ಆಗಲಿ ಡಿಜಿಸಿಎ ಅನುಮತಿ ಪರವಾನಿಗೆ ಪಡೆಯಬೇಕು. ಆದರೆ, ಪ್ರತಾಪ್ ಆ ಪರವಾಣಿಗೆ ಪಡೆದಿಲ್ಲ ಅಂತ ಪರಮೇಶ್ ಎಂಬುವವರು ದೂರು ನೀಡಿದ್ದರು. ಈಗ ದೂರಿ‌ನ ಅಂಶವಾಗಿ ರಾಜರಾಜೇಶ್ವರಿ ನಗರ ಪೊಲೀಸರು ದೂರಿನ (Complaint) ಮಾಹಿತಿಯನ್ನು ಡಿಜಿಸಿಎ ಗೆ ಕಳುಹಿಸಿಕೊಟ್ಟಿದ್ದಾರೆ.

    ಈ ಮಾಹಿತಿ ಮೇರೆಗೆ ಡಿಜಿಸಿಎ ಯಾವ ಕ್ರಮಕೈಗೊಳ್ಳುತ್ತೆ, ನೋಟೀಸ್ ನೀಡಿ ವಿಚಾರಣೆಗೆ ಕರೆಯುತ್ತಾ ಕಾದುನೋಡ್ಬೇಕಿದೆ. ಜೊತೆಗೆ ಡ್ರೋನ್ ಪ್ರತಾಪ್ ಮೇಲೆ ಈಗಾಗಲೇ ಮೂರು ದೂರುಗಳು ದಾಖಲಾಗಿದೆ. ಆದರೆ, ಒಂದಕ್ಕೂ ಎಫ್.ಐ.ಆರ್ ಆಗಿಲ್ಲ ಎನ್ನುವ ಮಾತು ಕೂಡ ಕೇಳಿ ಬಂದಿದೆ.

     

    ಏನೇ ದೂರುಗಳು ದಾಖಲಾದರು ಪ್ರತಾಪ್ ಮಾತ್ರ ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ತನ್ನ ಪಾಡಿಗೆ ತಾನು ಹೊಸ ಶೋನಲ್ಲಿ ಪಾಲ್ಗೊಂಡಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಕಾಮಿಡಿ ಪಾತ್ರ ಮಾಡುತ್ತಾ ಹಾಯಾಗಿದ್ದಾರೆ.

  • ರನ್‌ವೇನಲ್ಲೇ ಕುಳಿತು ಊಟ ಸೇವಿಸಿದ ಪ್ರಯಾಣಿಕರು – ಇಂಡಿಗೋಗೆ 1.2 ಕೋಟಿ ದಂಡ

    ರನ್‌ವೇನಲ್ಲೇ ಕುಳಿತು ಊಟ ಸೇವಿಸಿದ ಪ್ರಯಾಣಿಕರು – ಇಂಡಿಗೋಗೆ 1.2 ಕೋಟಿ ದಂಡ

    ನವದೆಹಲಿ: ಮುಂಬೈ ಏರ್‌ಪೋರ್ಟ್‌ನ ರನ್‌ವೇನಲ್ಲೇ (Mumbai Airport) ಪ್ರಯಾಣಿಕರು ಕುಳಿತು ಆಹಾರ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ (IndiGo) ಸಂಸ್ಥೆಗೆ 1.2 ಕೋಟಿ ರೂ. ದಂಡ ವಿಧಿಸಲಾಗಿದೆ.

    ಈಚೆಗೆ ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ರನ್‌ವೇನಲ್ಲೇ ಕುಳಿತು ಊಟ ಸೇವಿಸಿದ್ದರು. ಆ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ವಿಮಾನ ಸಂಸ್ಥೆಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (BCAS) ದಂಡ ವಿಧಿಸಿದೆ. ಇದನ್ನೂ ಓದಿ: ಅಮಿತ್‌ ಶಾ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ ಮಾಜಿ ಸಿಎಂ ಹೆಚ್‌ಡಿಕೆ

    ದೇಶದ ವಿಮಾನಯಾನ ನಿಯಂತ್ರಕ, ಡಿಜಿಸಿಎ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ವೀಡಿಯೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಲೋಪಕ್ಕಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ 30 ಲಕ್ಷ ರೂ. ದಂಡ ವಿಧಿಸಿದೆ.

    ಗೋವಾ-ದೆಹಲಿ ಮಾರ್ಗದ ಇಂಡಿಗೋ ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ರನ್‌ವೇನಲ್ಲೇ ಕುಳಿತು ಊಟ ಸೇವಿಸಿದ್ದರು. ಈ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಗೆಳತಿಯನ್ನು ಕತ್ತುಹಿಸುಕಿ ಕೊಂದು ತಾನೂ ಆತ್ಮಹತ್ಯೆ ಮಾಡ್ಕೊಂಡ!

    ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಹಾಗೂ ಮುಂಬೈ ವಿಮಾನ ನಿಲ್ದಾಣಕ್ಕೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿತ್ತು. ಇದೇ ವೇಳೆ ಮುಂಬೈ ವಿಮಾನ ನಿಲ್ದಾಣಕ್ಕೆ ಡಿಜಿಸಿಎ 30 ಲಕ್ಷ ರೂ. ದಂಡ ವಿಧಿಸಿತ್ತು.