Tag: ಡಿಜಿಟಲ್ ಶಿಕ್ಷಣ

  • ಮಾರ್ಚ್ ಹೊತ್ತಿಗೆ ಇಡೀ ಶಿಕ್ಷಣ ವ್ಯವಸ್ಥೆ ಡಿಜಿಟಲ್ ರೂಪಾಂತರ: ಅಶ್ವಥ್ ನಾರಾಯಣ್

    ಮಾರ್ಚ್ ಹೊತ್ತಿಗೆ ಇಡೀ ಶಿಕ್ಷಣ ವ್ಯವಸ್ಥೆ ಡಿಜಿಟಲ್ ರೂಪಾಂತರ: ಅಶ್ವಥ್ ನಾರಾಯಣ್

    -ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸದೆ ನಮಗೆ ಉಳಿಗಾಲವಿಲ್ಲ

    ಬಳ್ಳಾರಿ: ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅನ್ವಯಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದು, ಮುಂಬರುವ ಮಾರ್ಚ್ ಹೊತ್ತಿಗೆ ರಾಜ್ಯದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಆಗಿ ರೂಪಾಂತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್  ಹೇಳಿದ್ದಾರೆ.

    ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ನಾಸ್ಕಾಂ ನಡುವಿನ ಒಡಂಬಡಿಕೆಗೆ ಮತ್ತು ಎನ್‍ಇಪಿ ವಿಚಾರ ಸಂಕಿರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಡಿಜಿಟಲಿಕರಣದಿಂದಾಗಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಸ್ಕಿಲ್ಸ್ ಪಾಸ್ ಪೋರ್ಟ್, ಸ್ಕಿಲ್ಸ್ ವ್ಯಾಲೆಟ್ ಮತ್ತು ಬ್ಯಾಡ್ಜಸ್ ನಂತಹ ಜಾಗತಿಕ ಗುಣಮಟ್ಟದ ಕೌಶಲ್ಯಗಳು ಉಚಿತವಾಗಿ ಸಿಗಲಿವೆ ಎಂದರು. ಇದನ್ನೂ ಓದಿ: ಭಾರತೀಯ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿ: ಬೊಮ್ಮಾಯಿ

    ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸದೆ ನಮಗೆ ಉಳಿಗಾಲವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ನಾಸ್ಕಾಂನ `ಫ್ಯೂಚರ್ ಸ್ಕಿಲ್ಸ್ ಪ್ರೈಮ್’ ವೇದಿಕೆ ಸೇರಿದಂತೆ ಇತರ ಮೂಲಗಳಿಂದ ಈ ಶೈಕ್ಷಣಿಕ ವರ್ಷದಿಂದಲೇ 10 ಸಾವಿರ ಶಿಕ್ಷಕರಿಗೆ ಡಿಜಿಟಲ್ ತರಬೇತಿ ಕೊಡಲಾಗುವುದು. ಇನ್ಫೋಸಿಸ್ ಸಂಸ್ಥೆ ಮತ್ತು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಮೂಲಕವೂ 3 ಸಾವಿರ ಶಿಕ್ಷಕರಿಗೆ ಇಂತಹ ವಿಶ್ವ ಗುಣಮಟ್ಟದ ತರಬೇತಿಯನ್ನು ಒದಗಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

    ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಎರಡು ವರ್ಷಗಳಲ್ಲಿ 3.50 ಲಕ್ಷ ಕಲಿಕಾ ಸಾಮಗ್ರಿ ಸಿದ್ಧಪಡಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲಿದ್ದರೂ ನಿರಂತರವಾಗಿ ಕಲಿಯಬಹುದಾಗಿದೆ. ಬಹಳ ಉತ್ತಮವಾದ ಕಲಿಕೆಯ ಮಾದರಿಯನ್ನು ಪ್ರಪ್ರಥಮವಾಗಿ ಅಳವಡಿಸಿಕೊಂಡಿರುವ ರಾಜ್ಯದತ್ತ ಇಡೀ ಭಾರತವೇ ತಿರುಗಿ ನೋಡುತ್ತಿದೆ ಎಂದು ಸಚಿವರು ನುಡಿದರು. ಇದನ್ನೂ ಓದಿ: ಹೊಸ ಶಿಕ್ಷಣ ನೀತಿಯಲ್ಲಿ ಕಾಂಬಿನೇಶನ್‍ನಿಂದ ಕೋರ್ಸ್, ಸಬ್ಜೆಕ್ಟ್‌ಗೆ ಬದಲಾಯಿಸಲಾಗಿದೆ: ಅಶ್ವಥ್ ನಾರಾಯಣ್

    ಕರ್ನಾಟಕವೇ ಇವತ್ತು ದೇಶದ ಜ್ಞಾನ ಮತ್ತು ಆರ್ಥಿಕ ರಾಜಧಾನಿಯಾಗಿದ್ದು, ಅಮೆರಿಕದಂತೆ ಉಜ್ವಲ ಅವಕಾಶಗಳಿವೆ. ಈ ವಿಚಾರದಲ್ಲಿ ನಾವು ಮುಂಬೈಯನ್ನು ಹಿಂದಿಕ್ಕಿದ್ದೇವೆ. ಸಂಶೋಧನೆ ಮತ್ತು ಆವಿಷ್ಕಾರಗಳ ತೊಟ್ಟಿಲಾಗಿರುವ ರಾಜ್ಯದ ಶಿಕ್ಷಣ ಕ್ಷೇತ್ರದತ್ತ ಈಗ ಇಡೀ ವಿಶ್ವವೇ ನೋಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಆನ್‍ಲೈನ್ ಪಾಠ ಕೇಳಿ ಕುಗ್ಗಿದ್ದ ಮಕ್ಕಳಿಗೆ ವಿಶೇಷ ತರಬೇತಿ ನೀಡಿದ ಸುರಾನ ವಿದ್ಯಾಲಯ

    ಎನ್‍ಇಪಿ ಗುರಿಯಂತೆ ಪ್ರತಿಯೊಬ್ಬ ಶಿಕ್ಷಿಕನಿಗೂ ಉದ್ಯೋಗ ಸಿಗಬೇಕು, ಇಲ್ಲವೇ ಉದ್ಯೋಗದಾತನಾಗಬೇಕು. ಈ ನಿಟ್ಟಿನಲ್ಲಿ ಕಲಿಕೆ, ಪ್ರಾಯೋಗಿಕತೆ, ನಾಯಕತ್ವ, ಕೌಶಲ್ಯ ಮತ್ತು ಪ್ರಾಜೆಕ್ಟ್ ಆಧರಿತ ಕಲಿಕೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಆಯಾಯ ತರಗತಿಗಳಲ್ಲೇ ನಡೆಯಲಿದೆ ಎಂದು ವಿವರಿಸಿದರು.

  • ಹಳ್ಳ ಹಿಡೀತಿದೆ ಬಿಬಿಎಂಪಿ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ಕೊಡೋ ರೋಶಿನಿ ಯೋಜನೆ

    ಹಳ್ಳ ಹಿಡೀತಿದೆ ಬಿಬಿಎಂಪಿ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ಕೊಡೋ ರೋಶಿನಿ ಯೋಜನೆ

    ಬೆಂಗಳೂರು: ಬಿಬಿಎಂಪಿ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ಕೊಡೋ ಉದ್ದೇಶದಿಂದ ಜಾರಿಗೆ ಬಂದ ರೋಶಿನಿ ಯೋಜನೆ ಹಳ್ಳ ಹಿಡಿಯುತ್ತಿದೆ. ಕಳೆದ ಒಂದು ವರ್ಷದಲ್ಲಿ ರೋಶಿನಿ ಕೇವಲ ಕಡತಗಳಿಗೆ ಮಾತ್ರ ಸೀಮಿತವಾಗಿದ್ದು, ಪಾಲಿಕೆ ಶಾಲೆಗಳು ರೋಶಿನಿಯಿಂದ ಖಾಸಗೀಕರಣದ ಭಯವನ್ನು ಎದುರಿಸುತ್ತಿದೆ.

    ಬಿಬಿಎಂಪಿ ಶಾಲಾ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ಕೊಡೋ ಉದ್ದೇಶದೊಂದಿಗೆ ಸರ್ಕಾರ ರೋಶಿನಿ ಯೋಜನೆಯನ್ನ ಜಾರಿಗೆ ತಂದಿತ್ತು. ಟ್ಯಾಗ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ರೋಶಿನಿ ಯೋಜನೆಯನ್ನ ಉದ್ಘಾಟನೆ ಕೂಡ ಮಾಡಲಾಗಿತ್ತು. ಆದರೆ ಈ ಸಂಸ್ಥೆ ಪಾಲಿಕೆ ಶಾಲೆಗಾಗಿ ಬಿಡುಗಾಸಿನ ಕೆಲಸವನ್ನು ಮಾಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

    ರೋಶಿನಿ ಅನ್ನೋದು ಯೋಜನೆಯನ್ನು ಗುತ್ತಿಗೆ ಪಡೆದಿರೋ ಕಂಪನಿ ಮಾಲೀಕರ ಮಗಳ ಹೆಸರು. ಈ ಹೆಸರಿನಲ್ಲೇ ಸರ್ಕಾರದ ಜೊತೆ ಟ್ಯಾಗ್ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಬಿಬಿಎಂಪಿ ಶಾಲೆಗೆ ಟ್ಯಾಬ್, ಲ್ಯಾಪ್ ಟಾಪ್, ಡಿಜಿಟಲ್ ಶಿಕ್ಷಣ, ಟಿವಿ ಎಲ್ಲಾ ಕೊಡುತ್ತೇವೆ ಎಂದು ಶಾಲೆ ಆವರಣವನ್ನ ರೋಶಿನಿಮಯ ಮಾಡಿದ್ದಾರೆ. ಅಲ್ಲದೆ ಪಾಲಿಕೆ ಬೋರ್ಡ್ ಗಳನ್ನು ಕೂಡ ಕಿತ್ತುಹಾಕಿದ್ದಾರೆ. ಫ್ರೆಜರ್ ಟೌನ್ ಶಾಲೆಯಲ್ಲಂತೂ ಕೊಠಡಿಗೆ ಬೀಗ ಜಡಿದು ಹೋದವರು ಇವತ್ತಿನವರೆಗೂ ತಿರುಗಿ ನೋಡಿಲ್ಲ ಎನ್ನಲಾಗುತ್ತಿದೆ.

    ಇದೆಲ್ಲಾ ಯಾಕೆ ಎಂದು ಕೇಳೋ ಅಧಿಕಾರ ಪಾಲಿಕೆಗೆ ಇಲ್ಲ. ಯಾಕೆಂದರೆ ಒಪ್ಪಂದದ ಪ್ರಕಾರ ಪಾಲಿಕೆ ಶಾಲೆಗೆ ಸಾಫ್ಟ್ ವೇರ್ ಕಂಪನಿಗಳು ಸಿಎಸ್‍ಆರ್ ಫಂಡ್ ನೀಡಿದರೆ ಅದು ಈ ಟ್ಯಾಗ್ ಕಂಪನಿಗೆ ನೀಡಬೇಕು. ಹೀಗಾಗಿ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೇಳಿದರೆ, ನನಗೆ ಗೊತ್ತಿಲ್ಲ ಕಮಿಷನರ್ ಬಳಿ ಕೇಳಿ ಎಂದು ಹೇಳುತ್ತಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ರೋಶಿನಿಗಾಗಿ ಎಷ್ಟು ಸಿಎಸ್‍ಆರ್ ಹಣ ಬಂದಿದೆ ಎನ್ನುವ ಬಗ್ಗೆ ಪಾಲಿಕೆಗೆ ಗೊತ್ತಿಲ್ಲ. ಹೀಗೆ ಬಂದವರು ಹೋದವರು ಪಾಲಿಕೆ ಹೆಸರಲ್ಲಿ ಏನು ಬೇಕಾದರು ಮಾಡಬಹುದು ಎಂಬ ಆರೋಪವೂ ಹರಿದಾಡುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]