Tag: ಡಿಕ್ಕಿ

  • ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರ್: ಯುವಕ ಸಾವು

    ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರ್: ಯುವಕ ಸಾವು

    ಮಂಡ್ಯ: ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನೊಳಗಿದ್ದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

    ಶ್ರೀರಂಗಪಟ್ಟಣದ ಕಿರಂಗೂರು ವೃತ್ತದ ಬಳಿ ಅಪಘಾತ ನಡೆದಿದ್ದು, ನೀಲನಹಳ್ಳಿ ಗ್ರಾಮದ 23 ವರ್ಷದ ಯುವಕ ಅಭಿಷೇಕ್ ಮೃತಪಟ್ಟಿದ್ದಾರೆ. ರಸ್ತೆ ಬದಿಯ ಲಾರಿಯೊಂದು ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಕಾರು ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಕಾರಿನೊಳಗಿದ್ದ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತಕ್ಕೆ ಕಾರು ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯೆ ಕಾರಣ ಎಂದು ತಿಳಿದು ಬಂದಿದೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ – ಚಿಕ್ಕೋಡಿಯಲ್ಲಿ ಮೂವರು ಸ್ಥಳದಲ್ಲೇ ಸಾವು

    ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ – ಚಿಕ್ಕೋಡಿಯಲ್ಲಿ ಮೂವರು ಸ್ಥಳದಲ್ಲೇ ಸಾವು

    ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಕ್ಕದಲ್ಲಿ ಅಳವಡಿಸಿದ್ದ ರಸ್ತೆ ಫಲಕಕ್ಕೆ ಆಲ್ಟೋ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಟ್ಟಿದ್ದಾರೆ.

    ಈ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರ ಹಿಟ್ನಿ ಕ್ರಾಸ್ ಬಳಿ ನಡೆದಿದೆ. ಮೃತರು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಮೂಲದವರು ಎಂದು ತಿಳಿದು ಬಂದಿದೆ.

    ಮೃತರು ವಕೀಲ ವೃತ್ತಿ ಮಾಡುತ್ತಿರಬಹುದೆಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಗುರುತು ಪತ್ತೆ ಮಾಡಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸ್ಥಳಕ್ಕೆ ಸಂಕೇಶ್ವರ ಹಾಗೂ ನಿಪ್ಪಾಣಿ ನಗರ ಪೊಲೀಸರು ಭೇಟಿ ನೀಡಿ ಶವಗಳನ್ನು ಹೊರತೆಗೆಯುವ ಕಾರ್ಯವನ್ನು ನಡೆಸಿದ್ದಾರೆ.

    ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

  • ಖಾಸಗಿ ಬಸ್‍ಗೆ ಕಾರ್ ಡಿಕ್ಕಿ- ಬಾಲಕಿ ಸೇರಿ ಮೂವರು ಗಂಭೀರ

    ಖಾಸಗಿ ಬಸ್‍ಗೆ ಕಾರ್ ಡಿಕ್ಕಿ- ಬಾಲಕಿ ಸೇರಿ ಮೂವರು ಗಂಭೀರ

    ಮೈಸೂರು: ಖಾಸಗಿ ಬಸ್ ಹಾಗೂ ಚಾವರ್ಲೆಟ್ ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕಪಿಲಾ ಸೇತುವೆ ಮೇಲೆ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಚಾಮರಾಜನಗರ ಜಿಲ್ಲೆಯ ಚಂದಕವಾಡಿ ಗ್ರಾಮದ ಮಹದೇವಸ್ವಾಮಿ(38), ರತ್ನಮ್ಮ(43) ಹಾಗೂ ದಿಶಾ(8) ಎಂಬುವುದಾಗಿ ಗುರುತಿಸಲಾಗಿದೆ.

    ಖಾಸಗಿ ಬಸ್ ನರಸೀಪುರ ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದು, ಕಾರ್ ಕೂಡ ಮೈಸೂರು ಕಡೆ ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿದೆ. ಸದ್ಯ ಗಾಯಾಳುಗಳನ್ನು ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಅಮಾವಾಸ್ಯೆ ಪೂಜೆಗೆಂದು ಹೊರಟ ಮಂಡ್ಯ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವು

    ಅಮಾವಾಸ್ಯೆ ಪೂಜೆಗೆಂದು ಹೊರಟ ಮಂಡ್ಯ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವು

    ಮಂಡ್ಯ: ಅಮಾವಾಸ್ಯೆ ಪೂಜೆ ಸಲ್ಲಿಸಲು ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ಹೊರಟಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ, ಮದ್ದೂರು ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಶಿಕ್ಷಕರ ಬಡಾವಣೆಯ ನಿವಾಸಿಯಾದ ನಿವೃತ್ತ ಶಿಕ್ಷಕ ತಿಮ್ಮಯ್ಯ ಅವರ ಪತ್ನಿ 54 ವರ್ಷದ ಸುಧಾ ಎಂಬವರೇ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಸುಧಾ ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಅಮವಾಸ್ಯೆ ಪೂಜೆ ಸಲ್ಲಿಸಲು ಮದ್ದೂರಮ್ಮ ದೇವಾಲಯಕ್ಕೆ ಹೊರಟಿದ್ದರು. ಈ ವೇಳೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಸುಧಾ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.

    ಘಟನೆಯಿಂದ ಸುಧಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವಾಲಯಕ್ಕೆ ಪೂಜೆಗೆಂದು ಹೋದ ಸುಧಾ ಅವರು ಮೃತಪಟ್ಟಿರುವ ವಿಷಯ ಕೇಳಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

    ಘಟನೆ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾರಿ, ಕ್ರೂಸರ್ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ 12 ಮಂದಿಗೆ ಗಾಯ

    ಲಾರಿ, ಕ್ರೂಸರ್ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ 12 ಮಂದಿಗೆ ಗಾಯ

    ದಾವಣಗೆರೆ: ಲಾರಿ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ 12 ಮಂದಿಗೆ ಗಾಯಗಳಾದ ಘಟನೆ ನಡೆದಿದೆ.

    ಜಗಳೂರು ತಾಲೂಕಿನ ದೇವಿಕೆರೆ ಬಳಿ ಇಂದು ಮುಂಜಾನೆ ಈ ಅವಘಡ ಸಂಭವಿಸಿದೆ. ಇಬ್ಬರು ಚಿಕ್ಕಮಕ್ಕಳು ಸೇರಿದಂತೆ ಆರು ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳುಗಳನ್ನು ದಾವಣಗೆರೆ ನಿಟ್ಟುವಳ್ಳಿಯ ಶ್ರಿನಿವಾಸ್, ಪರಶುರಾಮ, ದೀಪಿಕಾ, ಮಹಾಲಕ್ಷ್ಮಿ, ರೇಣುಕಮ್ಮ, ಸಿಂಚನಾ, ಇಂಚರಾ, ರವಿಕುಮಾರ್, ನೇತ್ರಾವತಿ, ಶಶಿಕಲಾ, ಮಣಿ, ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.

    ಪಾವಗಡ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ದೇವಿಕೆರೆ ಸಮೀಪ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ರೂಸರ್ ನ ಮುಂಭಾಗದಲ್ಲಿ ಕುಳಿತವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಎಲ್ಲಾ ಗಾಯಾಳುಗಳನ್ನು ದಾವಣಗೆರೆ ಬಾಪೂಜೆ, ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಜಗಳೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇನ್ನೋವಾ ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಮಹಿಳೆ ದಾರುಣ ಸಾವು

    ಇನ್ನೋವಾ ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಮಹಿಳೆ ದಾರುಣ ಸಾವು

    ಕೋಲಾರ: ಎರಡು ಇನ್ನೋವಾ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ಕೋಲಾರ ತಾಲೂಕು ಪಟ್ನಾ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಬೆಂಗಳೂರು ರಾಮಮೂರ್ತಿ ನಗರ ನಿವಾಸಿ ರೂಪಾ(28) ಮೃತ ದುರ್ದೈವಿ ಮಹಿಳೆ. ಇವರು ಕೋಲಾರ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

    ಘಟನೆಯಲ್ಲಿ ಕೋಲಾರ ನಗರಸಭೆ 27 ನೇ ವಾರ್ಡ್ ಸದಸ್ಯೆ ಸಾಕಮ್ಮ ಹಾಗೂ ಪ್ರಭಾಕರ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಫ್ಲೈಓವರ್ ಮೇಲೆ ಕಾರ್ ಪಲ್ಟಿ: ಅಪಾಯದಿಂದ ಪಾರಾದ ಚಾಲಕ

    ಫ್ಲೈಓವರ್ ಮೇಲೆ ಕಾರ್ ಪಲ್ಟಿ: ಅಪಾಯದಿಂದ ಪಾರಾದ ಚಾಲಕ

    ಬೆಂಗಳೂರು: ಚಾಲಕನ ನಿಯಂತ್ರಣ ಕಳೆದುಕೊಂಡು ಕಾರ್‍ವೊಂದು ರಸ್ತೆ ವಿಭಜಕಕ್ಕೆ ಗುದ್ದಿ ಪಲ್ಟಿಯಾದ ಘಟನೆ ತಡರಾತ್ರಿ ಹೆಬ್ಬಾಳ ಫೈಓವರ್ ಮೇಲೆ ನಡೆದಿದೆ.

    ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅತಿ ವೇಗವೇ ಈ ಅಪಘಾತಕ್ಕೆ ಕಾರಣವಾಗಿದ್ದು ಕಾರ್ ಸಂಪೂರ್ಣ ಜಖಂಗೊಂಡಿದೆ. ಕಾರ್ ನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ.

    ಹೆಬ್ಬಾಳ ಸಂಚಾರಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬೈಕ್ ಗೆ ಅಪರಿಚಿತ ವಾಹನ  ಡಿಕ್ಕಿಯಾಗಿ ಇಬ್ಬರು ಬಲಿ- ಮುಗಿಲುಮುಟ್ಟಿದ ಸಂಬಂಧಿಕರ ಆಕ್ರಂದನ

    ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬಲಿ- ಮುಗಿಲುಮುಟ್ಟಿದ ಸಂಬಂಧಿಕರ ಆಕ್ರಂದನ

    ಮಂಡ್ಯ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಗೇಟ್ ಬಳಿ ನಡೆದಿದೆ.

    50 ವರ್ಷದ ಬಸವರಾಜ್ ಮತ್ತು 60 ವರ್ಷದ ಸಣ್ಣೇಗೌಡ ಮೃತ ದುರ್ದೈವಿಗಳು. ಮಂಗಳವಾರ ರಾತ್ರಿ ರಾಮನಗರ ಜಿಲ್ಲೆಯ ಯಲಿಯೂರು ಗ್ರಾಮಕ್ಕೆ ಹೋಗಿ ಬೈಕ್‍ನಲ್ಲಿ ವಾಪಸ್ ಬರ್ತಿದ್ರು. ಈ ವೇಳೆ ಬೆಂಗಳೂರು, ಮೈಸೂರು ಹೆದ್ದಾರಿಯಲ್ಲಿ ರುದ್ರಾಕ್ಷಿಪುರ ಗೇಟ್ ಬಳಿ ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.

    ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಿಬ್ಬರು ಹನುಮಂತಪುರ ಗ್ರಾಮದವರಾಗಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

  • ಕಾರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು- ಸ್ಥಳೀಯರಿಂದ ರಸ್ತೆ ತಡೆದು ಪ್ರತಿಭಟನೆ

    ಕಾರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು- ಸ್ಥಳೀಯರಿಂದ ರಸ್ತೆ ತಡೆದು ಪ್ರತಿಭಟನೆ

    ಹಾಸನ: ಬೈಕ್ ಸವಾರನಿಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಯೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಹಾಸನದಲ್ಲಿ ನಡೆದಿದೆ.

    25 ವರ್ಷದ ಮಹೇಶ್ ಮೃತ ಬೈಕ್ ಸವಾರ. ಚನ್ನರಾಯಪಟ್ಟಣ ಹೊರವಲಯ ಬೆಲಸಿಂದ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವ ಮತ್ತೊಬ್ಬರನ್ನು ಸದ್ಯ ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಬಳಿಕ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

    ರಸ್ತೆ ಮಧ್ಯೆ ಕಲ್ಲು ಇಟ್ಟು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಬಳಿ ಅಧಿಕಾರಿಗಳ ಬರಬೇಕೆಂದು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆಗೆ ಮುಂದಾಗಿದ್ದಾರೆ.

    ಪದೇಪದೇ ಇಲ್ಲಿ ಅಪಘಾತಗಳು ನಡೆಯುತಿದ್ದು, ಸಾಕಷ್ಟು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಅವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿರೋ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

  • ಬೈಕ್‍ಗೆ ಲಾರಿ ಡಿಕ್ಕಿ- ಕೆಲಸಕ್ಕೆ ಹೋಗ್ತಿದ್ದ ಸವಾರ ಸ್ಥಳದಲ್ಲೇ ಸಾವು

    ಬೈಕ್‍ಗೆ ಲಾರಿ ಡಿಕ್ಕಿ- ಕೆಲಸಕ್ಕೆ ಹೋಗ್ತಿದ್ದ ಸವಾರ ಸ್ಥಳದಲ್ಲೇ ಸಾವು

    ಬೆಂಗಳೂರು: ಬೈಕ್‍ಗೆ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ನಡೆದಿದೆ.

    ಮೃತರನ್ನು ವಿನಯ್ ಕುಮಾರ್ (36) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಹಾವೇರಿ ಜಿಲ್ಲೆಯವರು ಎಂದು ತಿಳಿದುಬಂದಿದೆ. ಅತ್ತಿಬೆಲೆಯಲ್ಲಿ ನೆಲೆಸಿದ್ದ ವಿನಯ್ ಕುಮಾರ್ ಬೈಕ್‍ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

    ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.