Tag: ಡಿಕಿ ಶಿವಕುಮಾರ್

  • ಜಿಲ್ಲಾ ರಾಜಕಾರಣದಲ್ಲಿ ಡಿಕೆಶಿ ಬಂದ್ರೆ ತಕ್ಕ ಉತ್ತರ ಕೊಡ್ತೀವಿ: ರಮೇಶ್ ಜಾರಕಿಹೊಳಿ ಕಿಡಿ – ವಿಡಿಯೋ

    ಜಿಲ್ಲಾ ರಾಜಕಾರಣದಲ್ಲಿ ಡಿಕೆಶಿ ಬಂದ್ರೆ ತಕ್ಕ ಉತ್ತರ ಕೊಡ್ತೀವಿ: ರಮೇಶ್ ಜಾರಕಿಹೊಳಿ ಕಿಡಿ – ವಿಡಿಯೋ

    ಬೆಳಗಾವಿ: ಜಿಲ್ಲೆಯಲ್ಲಿ ಪಕ್ಷದ ಪರ ಕಾರ್ಯನಿರ್ವಹಿಸಲು ನಾವು ಸಮರ್ಥವಾಗಿದ್ದು, ಇಲ್ಲಿನ ರಾಜಕಾರಣದ ಬಗ್ಗೆ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳುವ ಅವಶ್ಯಕತೆ ಇಲ್ಲ ಎಂದು ರಮೇಶ್ ಜಾರಕಿಹೊಳಿ ಖಾರವಾಗಿಯೇ ಹೇಳಿಕೆ ನೀಡಿದ್ದಾರೆ.

    ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾ ರಾಜಕಾರಣದಲ್ಲಿ ಈ ಹಿಂದೆಯೂ ಸುಮಾರು ಬಾರಿ ಪ್ರವೇಶ ಮಾಡಲು ಸಚಿವ ಡಿಕೆ ಶಿವಕುಮಾರ್ ಅವರು ಪ್ರಯತ್ನಿಸಿದ್ದರು. ಆದರೆ ಅಂದು ಪ್ರವೇಶ ಮಾಡಲು ಬಿಡಲಿಲ್ಲ. ಇಂದು ಕೂಡ ಅಷ್ಟೇ. ಅವರು ಯಾರು ನಮಗೆ ಹೇಳಲು, ನಾವು ಪಕ್ಷ ಸಂಘಟನೆ ಮಾಡಲು ಸಮರ್ಥವಾಗಿದ್ದೇವೆ. ಪಕ್ಷಕ್ಕೆ ಒಳ್ಳೆ ಆಗುವ ಅಂಶಗಳ ಕುರಿತು ಸಲಹೆ ನೀಡಲು ಮಾತ್ರ ಸಾಧ್ಯವಿದ್ದು. ಅನಗತ್ಯವಾಗಿ ರಾಜಕೀಯ ಮಾಡಲು ಇಲ್ಲಿ ಅವಕಾಶವಿಲ್ಲ ಎಂದು ನೇರವಾಗಿಯೇ  ಏಕವಚನದಲ್ಲೇ ಕಿಡಿಕಾರಿದ್ದಾರೆ.

    ಸತೀಶ್ ಜಾರಕಿಹೊಳಿ ಈ ಹಿಂದೆ ಸ್ಥಳೀಯ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುವತ್ತೇವೆ ಎಂದು ಹೇಳಿದ್ದು, ಅವರ ಹೇಳಿಕೆಯನ್ನು ನಾನು ಸಮರ್ಥಸಿಕೊಳ್ಳುತ್ತೇನೆ. ಇಲ್ಲಿ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಒಂದೊಮ್ಮೆ ಅನಗತ್ಯವಾಗಿ ಜಿಲ್ಲಾ ರಾಜಕೀಯಕ್ಕೆ ಪ್ರವೇಶ ಮಾಡಲು ಯಾರು ಪ್ರಯತ್ನಿಸಿದರು ನಾವೇ ತಕ್ಕ ಉತ್ತರ ಕೊಡುತ್ತೇವೆ ಎಂದರು.

    ಪಕ್ಷದ ಹೈಕಮಾಂಡ್ ಕೂಡ ಈ ಕುರಿತು ಸಂಪೂರ್ಣ ಜವಾಬ್ದಾರಿ ನೀಡಿದ್ದು, ಯಾವುದೇ ಸಮಸ್ಯೆ ಇಲ್ಲ. ನಮಗೆ ಯಾವಾಗ ಏನು ಮಾಡಬೇಕು ಎಂಬುದು ಗೊತ್ತಿದೆ. ಒಂದೊಮ್ಮೆ ಈ ಕುರಿತು ಹೈಕಮಾಂಡ್ ನಮಗೆ ಹೇಳಿದರೆ ಕೇಳುತ್ತೆವೆ. ನಮ್ಮಲ್ಲಿ ಬೆಳೆದವರು ಈಗ ಎಂಎಲ್‍ಎಗಳಾಗಿದ್ದಾರೆ, ದೊಡ್ಡ ನಾಯಕರಿದ್ದಾರೆ. ಒಂದು ಬಾರಿ ಎಂಎಲ್‍ಎ ಆಗಿದ ತಕ್ಷಣ ದೊಡ್ಡವರು ಎಂಬ ಭಾವನೆ ಇದೆ ಎಂದು ಹೆಸರು ಹೇಳದೇ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಜಿಲ್ಲೆಯ ಪಿಎಲ್‍ಡಿ ಬ್ಯಾಂಕ್ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅದರ ಬಗ್ಗೆ ನಾನು ಏನು ಮಾತಾಡಲ್ಲ ಎಂದರು. ಇನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತ ಪ್ರಶ್ನೆಗೆ ಅವರು ನನಗೆ ಯಾರು ಗೊತ್ತೆ ಇಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv