Tag: ಡಿಎಂಕೆ

  • ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಸ್ಥಿತಿ ಗಂಭೀರ!

    ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಸ್ಥಿತಿ ಗಂಭೀರ!

    ಚೆನ್ನೈ: ಡಿಎಂಕೆ ಮುಖಸ್ಥ ಎಂ ಕರುಣಾನಿಧಿ ಆರೋಗ್ಯ ಬಿಗಡಾಯಿಸಿದ್ದು, ಚೆನ್ನೈನ ಅವರ ಮನೆಯನ್ನೇ ಆಸ್ಪತ್ರೆ ಮಾಡಿಕೊಂಡು ಕಾವೇರಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡ್ತಿದ್ದಾರೆ.

    94 ವರ್ಷದ ವಯೋವೃದ್ಧ ರಾಜಕಾರಣಿ ಕರುಣಾನಿಧಿ ಅವರಿಗೆ ವಯೋಸಹಜ ಕಾರಣಗಳಿಂದಾಗಿ ಆರೋಗ್ಯ ಕ್ಷೀಣಿಸಿದ್ದು, ಮೂತ್ರನಾಳ ಸೋಕಿನ ಕಾರಣ ಜ್ವರ ಬಂದಿದೆ. ಅವರಿಗೆ ಅಗತ್ಯವಿರುವ ಚಿಕಿತ್ಸೆಯನ್ನು ತಜ್ಞ ವೈದ್ಯರು ನೀಡ್ತಿದ್ದಾರೆ.

    ವಿಷಯ ತಿಳಿದ ಡಿಎಂಕೆ ಕಾರ್ಯಕರ್ತರು, ನಾಯಕರು ಭಾರೀ ಸಂಖ್ಯೆಯಲ್ಲಿ ಗೋಪಾಲಪುರದಲ್ಲಿರುವ ಕರುಣಾನಿಧಿ ನಿವಾಸದ ಮುಂದೆ ಸೇರಿದ್ದಾರೆ. ಕಮಲ್‍ಹಸನ್, ಎಐಎಡಿಎಂಕೆ ನಾಯಕರು ಎಂಕೆ ಸ್ಟಾಲಿನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದ್ರೆ ಕರುಣಾನಿಧಿ ಭೇಟಿಗೆ ಯಾರಿಗೂ ಅವಕಾಶ ನೀಡಿಲ್ಲ.

  • ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್: 9 ಸಾವು

    ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್: 9 ಸಾವು

    ಚೆನೈ: ಸ್ಟೆರ್‍ಲೈಟ್ ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ತಮಿಳುನಾಡಿನ ಟ್ಯುಟಿಕಾರಿನ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪೊಲೀಸರ ಗೋಲಿಬಾರ್ ನಿಂದಾಗಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.

    ಸುಮಾರು 20 ಸಾವಿರ ಜನರು ಜಿಲ್ಲಾಧಿಕಾರಿ ಕಚೇರಿ ಬಳಿ ಜನರು ಪ್ರತಿಭಟನೆಗೆ ಇಳಿದಿದ್ದರು. ಸ್ಟೆರ್‍ಲೈಟ್ ಕಂಪೆನಿಯನ್ನು ಮುಚ್ಚಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಪೊಲೀಸರಿಗೆ ಗೋಲಿಬಾರ್ ಮಾಡದೆ ಬೇರೆ ದಾರಿ ಇರಲಿಲ್ಲ ಎಂದು ಸಚಿವ ಜಯಕುಮಾರ್ ಹೇಳಿದ್ದಾರೆ.

    ಸ್ಥಳೀಯರು ಕಳೆದ ಮೂರು ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರದ ಗಮನಕ್ಕೆ ಸುಮಾರು ಬಾರಿ ತಂದರೂ ಗಂಭೀರವಾಗಿ ಪರಿಗಣಿಸಿಲ್ಲ. ಕಂಪೆನಿಯ 25 ವರ್ಷಗಳ ಪರವಾನಗಿ ಮುಗಿಯುವ ಹಂತದಲ್ಲಿದ್ದು, ನವೀಕರಣಕ್ಕೆ ಸರ್ಕಾರವನ್ನು ಒತ್ತಾಯಿಸುತ್ತಿದೆ ಎಂದು ತಿಳಿದ ಪ್ರತಿಭಟನಾಕಾರರು ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಿದ್ದಾರೆ. ಉದ್ರೇಕಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಒಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

    ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಮಾತನಾಡಿ, ಕೆಲವು ತಿಂಗಳಿನಿಂದ ಸ್ಟೆರ್‍ಲೈಟ್ ಕಂಪೆನಿಯನ್ನು ಮುಚ್ಚಿಸುವಂತೆ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಎಐಎಡಿಎಂಕೆ ಆಡಳಿತಾರೂಢ ಸರ್ಕಾರ ಜನರ ಅಹವಾಲನ್ನು ಪೂರೈಸುವಲ್ಲಿ ನಿರ್ಲಕ್ಷ ವಹಿಸಿದೆ. ಘಟಕವನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

    ಈ ಹಿಂದೆ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸದ್ದ ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಮಾತನಾಡಿ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸಾರ್ವಜನಿಕರು ಕ್ರಿಮಿನಲ್ ಗಳಲ್ಲ. ಇದು ಸರ್ಕಾರದ ನಿರ್ಲಕ್ಷ. ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಬೆಲೆ ಕೊಡಲಿಲ್ಲ ಅಂತಾ ವಾಗ್ದಾಳಿ ನಡೆಸಿದ್ದಾರೆ.

    2013ರಲ್ಲಿ ನೂರಾರು ಜನ ಉಸಿರಾಟದ ತೊಂದರೆಗೀಡಾಗಿದ್ದರು. ಅನಿಲ ಸೋರಿಕೆಯಿಂದ ಬಹಳಷ್ಟು ಮಂದಿ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿಂದ ಬಳಲಿದ್ದಾರೆ. ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಕಂಪೆನಿ ಪಾಲಿಸುತ್ತಿಲ್ಲ ಹಾಗಾಗಿ ಘಟಕವನ್ನು ಮುಚ್ಚುವಂತೆ ಜನರು ಆಗ್ರಹಿಸಿದ್ದರು.

    ಇದೇ ವರ್ಷ ಎಂಡಿಎಂಕೆ ಮುಖ್ಯಸ್ಥ ವೈಕೋ, ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ದೂರು ದಾಖಲಿಸಿದರು. ಮಾಲಿನ್ಯ ನಿಯಂತ್ರಣದ ನಿಯಮಗಳನ್ನು ಕಂಪೆನಿ ಪಾಲಿಸದೆ ಹಲವಾರು ವರ್ಷಗಳಿಂದ ಪರಿಸರವನ್ನು ಹಾಳುಮಾಡಿರುವುದಕ್ಕೆ 100 ಕೋಟಿ ದಂಡವನ್ನು ಕೋರ್ಟ್ ವಿಧಿಸಿತು. ಆ ಸಮಯದಲ್ಲಿ ವೇದಾಂತ ಸಂಸ್ಥೆಗಳ ಅಡಿಯಲ್ಲಿ ಸ್ಟೆರ್‍ಲೈಟ್ ನಡೆಯುತ್ತಿತ್ತು. ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಪಾಲಿಸುತ್ತಿದ್ದೇವೆ ಎಂದು ಕಂಪೆನಿ ವಾದಿಸಿತ್ತು.

    1996ರಲ್ಲಿ ಸ್ಟೆರ್‍ಲೈಟ್ ಕಾರ್ಯವನ್ನು ಆರಂಭಿಸಿದೆ. 1000 ಪೂರ್ಣ ಪ್ರಮಾಣದ ನೌಕರರನ್ನು, 2000 ಗುತ್ತಿಗೆ ನೌಕರರನ್ನು ಹೊಂದಿದೆ. 25 ಸಾವಿರ ಪರೋಕ್ಷ ಉದ್ಯೋಗವನ್ನು ಸೃಷ್ಟಿಸಿದೆ.

     

     

     

     

  • ಪ್ರತ್ಯೇಕ ದಕ್ಷಿಣ ರಾಷ್ಟ್ರ ರಚನೆಗೆ ನನ್ನ ಸ್ವಾಗತವಿದೆ: ಡಿಎಂಕೆ ನಾಯಕ ಎಂಕೆ ಸ್ಟಾಲಿನ್

    ಪ್ರತ್ಯೇಕ ದಕ್ಷಿಣ ರಾಷ್ಟ್ರ ರಚನೆಗೆ ನನ್ನ ಸ್ವಾಗತವಿದೆ: ಡಿಎಂಕೆ ನಾಯಕ ಎಂಕೆ ಸ್ಟಾಲಿನ್

    ಚೆನ್ನೈ: ಪ್ರತ್ಯೇಕ ದ್ರಾವಿಡ ರಾಷ್ಟ್ರ ಸಂಭವಿಸಿದಲ್ಲಿ ಇದಕ್ಕೆ ತಮ್ಮ ಸ್ವಾಗತವಿದ್ದು, ಅಂತಹ ಪರಿಸ್ಥಿತಿ ಬರುತ್ತದೆಂದು ಆಶಿಸುತ್ತೇನೆ ಎಂದು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಹೇಳಿದ್ದಾರೆ.

    ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಪ್ರತ್ಯೇಕ ದ್ರಾವಿಡ ರಾಷ್ಟ್ರ ಬೇಡಿಕೆ ಪ್ರಶ್ನೆಗೆ ಉತ್ತರಿಸಿ ದಕ್ಷಿಣ ಐದು ರಾಜ್ಯಗಳನ್ನು ಒಳಗೊಂಡ ದ್ರಾವಿಡ ರಾಷ್ಟ್ರ ಸ್ಥಾಪನೆಗೆ ನಮ್ಮ ಬೆಂಬಲವಿದೆ, ಅಂತಹ ಪರಿಸ್ಥಿತಿ ಬರುತ್ತದೆಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

    ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ಸರಿಯಾದ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟದಿಂದ ಹೊರನಡೆದಿದ್ದಾರೆ. ಈ ವೇಳೆಯಲ್ಲೇ ಎಂಕೆ ಸ್ಟಾಲಿನ್ ಪ್ರತ್ಯೇಕ ದ್ರಾವಿಡ ನಾಡು ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ.

    ಇದೇ ವೇಳೆ ತಮಿಳುನಾಡು ಸಿಎಂ ಹಾಗೂ ಎಐಎಂಡಿಕೆ ನಾಯಕ ಪಳನಿಸ್ವಾಮಿ ಅವರಿಗೆ ಪತ್ರ ಬರೆದಿರುವ ಕುರಿತು ತಿಳಿಸಿರುವ ಅವರು, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಮಂಡಿಸಲಿರುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಲು ಮನವಿ ಮಾಡಿರುವುದಾಗಿ ತಿಳಿಸಿದರು. ಎಐಎಂಡಿಕೆ ಪಕ್ಷವು ಲೋಕಸಭೆಯಲ್ಲಿ ಮೂರನೇ ಅತೀ ದೊಡ್ಡ ಪಕ್ಷವಾಗಿದೆ.

    ದ್ರಾವಿಡ ನಾಡು ರಾಷ್ಟ್ರ ಕಲ್ಪನೆಯೂ ತಮಿಳು, ಮಲೆಯಾಳಂ, ತೆಲುಗು ಮತ್ತು ಕನ್ನಡ ಬಾಷೆ ಮಾತನಾಡುವ ರಾಷ್ಟ್ರಗಳ ಮಾತೃಭೂಮಿಯ ಕಲ್ಪನೆಯಾಗಿದೆ. 1940 ರಲ್ಲಿ ತಮಿಳುನಾಡಿನ ಇವಿ ರಾಮಸ್ವಾಮಿ ಪೆರಿಯಾರ್ ಅವರು ಈ ಕಲ್ಪನೆಯನ್ನು ರೂಪಿಸಿದರು. ಈ ವೇಳೆ ತಮಿಳರ ಆತ್ಮಾಭಿಮಾನ ಎಂಬ ಹೆಸರಿನಲ್ಲಿ ಆಂದೋಲನವನ್ನು ಮುನ್ನೆಡೆಸಿ `ದ್ರಾವಿಡ ಮುನೇತ್ರ ಕಳಗಂ'(ಡಿಎಂಕೆ) ಪಕ್ಷವನ್ನು ಸ್ಥಾಪಿಸಿದ್ದರು. ಡಿಎಂಕೆ ಪಕ್ಷದ ಸ್ಥಾಪಕ ತತ್ವಗಳಲ್ಲಿ ಪ್ರತ್ಯೇಕ ದ್ರಾವಿಡ ರಾಷ್ಟ್ರ ನಿರ್ಮಾಣವೂ ಮೂಲ ಅಂಶವಾಗಿದೆ.

  • ಡಿಎಂಕೆ ಅಧ್ಯಕ್ಷ ಕರುಣಾನಿಧಿ ಆಸ್ಪತ್ರೆಗೆ ದಾಖಲು

    ಡಿಎಂಕೆ ಅಧ್ಯಕ್ಷ ಕರುಣಾನಿಧಿ ಆಸ್ಪತ್ರೆಗೆ ದಾಖಲು

     

    ಚೆನ್ನೈ: ತಮಿಳುನಾಡಿನ ವಿರೋಧ ಪಕ್ಷ ದ್ರಾವಿಡ ಮುನೇತ್ರ ಕಳಗಂ(ಡಿಎಂಕೆ) ಅಧ್ಯಕ್ಷ ಎಂ. ಕರುಣಾನಿಧಿ ಎಂಡೋಸ್ಕೋಪಿಕ್ ಪ್ರಕ್ರಿಯೆಗಾಗಿ ಬುಧವಾರದಂದು ಇಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕರುಣಾನಿಧಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯ್ತು ಎಂದು ವರದಿಯಾಗಿದೆ. ದೀರ್ಘ ಕಾಲದಿಂದ ಕರುಣಾನಿಧಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

    (ಪಕ್ರ್ಯೂಟೇನಿಯಸ್ ಎಂಡೋಸ್ಕೋಪಿಕ್ ಗ್ಯಾಸ್ಟ್ರೋನೊಮಿ) ಪಿಇಜಿ ಟ್ಯೂಬ್ ಬದಲಾವಣೆಗಾಗಿ ಕರುಣಾನಿಧಿಯವರನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಇಂದು ಅವರನ್ನು ಡಿಸ್ಚಾರ್ಜ್  ಮಾಡಲಾಗುತ್ತದೆ ಎಂದು ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್ ಅರವಿಂದನ್ ಹೇಳಿಕೆ ನೀಡಿದ್ದಾರೆ.

  • ಜಯಾ ಸಾವಿನ ತನಿಖೆಗೆ ಡಿಎಂಕೆ ಬೆಂಬಲ

    ಜಯಾ ಸಾವಿನ ತನಿಖೆಗೆ ಡಿಎಂಕೆ ಬೆಂಬಲ

    ಚೆನ್ನೈ: ತಮಿಳುನಾಡು ಮಾಜಿ ಸಿಎಂ ಮೃತ ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಯಬೇಕೆಂಬ ಓ ಪನ್ನೀರ್ ಸೆಲ್ವಂ ಅವರ ಒತ್ತಾಯಕ್ಕೆ ಡಿಎಂಕೆ ಬೆಂಬಲ ನೀಡಿದೆ.

    ಈ ಬಗ್ಗೆ ಟ್ವೀಟ್ ಮಾಡಿದ್ದ ಪನ್ನೀರ್ ಸೆಲ್ವಂ, ನಾನು ಸಿಎಂ ಆಗಿದ್ದಾಗ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಆರಂಭಿಸಲಾಗಿತ್ತು. ಆದರೆ ನಂತರ ಎಲ್ಲಾ ತಲೆಕೆಳಗಾಯಿತು ಎಂದು ಹೇಳಿದ್ದರು.

    ಶುಕ್ರವಾರದಂದು ಜಯಲಲಿತಾ ಅವರ 69ನೇ ಜನ್ಮವಾರ್ಷಿಕೋತ್ಸವದ ಪ್ರಯುಕ್ತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪನ್ನೀರ್‍ಸೆಲ್ವಂ, ಅಮ್ಮನ ಹೋರಾಟದಿಂದಲೇ ನಾವು ಇವತ್ತು ಇಲ್ಲಿದ್ದೀವಿ. ಅಮ್ಮನ ಸಾವಿನ ಬಗ್ಗೆ ನಮಗೆ ಉತ್ತರ ಬೇಕು ಅಂದ್ರು.

    ಈ ಬಗ್ಗೆ ಮಾತನಾಡಿರೋ ಡಿಎಂಕೆ ವಕ್ತಾರರಾದ ಸರವಣನ್, ನಮ್ಮ ನಾಯಕ ಎಂಕೆ ಸ್ಟ್ಯಾಲಿನ್ ಕೂಡ ಜಯಾ ಸಾವಿನ ತನಿಖೆಗೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಜಯಾ ಸಾವಿನ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಹೇಳಿದ್ದರು. ಇದರಲ್ಲಿ ಏಮ್ಸ್‍ನ ವೈದ್ಯರು ಕೂಡ ಇರುವುದರಿಂದ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಹೇಳಿದ್ದರು. ಇದೀಗ ಪನ್ನೀರ್ ಸೆಲ್ವಂ ಕೂಡ ಜಯಾ ಸಾವಿನ ತನಿಖೆ ಆಗಬೇಕು ಎಂದಿದ್ದು ನಮ್ಮ ನಾಯಕ ಹೇಳಿದ ವಿಚಾರಕ್ಕೆ ಪುಷ್ಠಿ ನೀಡಿದೆ ಅಂತ ಹೇಳಿದ್ರು.

    ಈ ನಡುವೆ ಶುಕ್ರವಾರದಂದು ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ವರದಿಗಾರರೊಂದಿಗೆ ಮಾತನಾಡಿ, ಜಯಲಲಿತಾ ಸಾವಿನ ಕುರಿತು ಯಾವುದೇ ರಹಸ್ಯಗಳಿಲ್ಲ ಎಂದು ಹೇಳಿದ್ದಾರೆ. ಕೆಲವರು ಆರೋಪ ಮಾಡುತ್ತಿರುವಂತೆ ಜಯಲಲಿತಾ ಸಾವಿನ ಹಿಂದೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.

    ಕಳೆದ ವರ್ಷ ಸುಮಾರು ಎರಡು ತಿಂಗಳ ಕಾಲ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಡಿಎಂಬರ್ 5ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ರು.

  • ಭಾರೀ ಹೈಡ್ರಾಮದ ಬಳಿಕ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿತು ಶಶಿಕಲಾ ಬಣ

    ಭಾರೀ ಹೈಡ್ರಾಮದ ಬಳಿಕ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿತು ಶಶಿಕಲಾ ಬಣ

    ಚೆನ್ನೈ: ಗದ್ದಲ, ಕೋಲಾಹಲ ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿದ್ದ ತಮಿಳುನಾಡು ವಿಶೇಷ ಅಧಿವೇಶನದಲ್ಲಿ ಕೊನೆಗೂ ಶಶಿಕಲಾ ಬಣ ಗೆದ್ದಿದೆ. ಸಿಎಂ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ಪರೀಕ್ಷೆಯಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

    ಕಾಂಗ್ರೆಸ್, ಡಿಎಂಕೆ ಶಾಸಕರ ಅನುಪಸ್ಥಿತಿಯಲ್ಲಿ ಸರ್ಕಾರದ ಪರವಾಗಿ 122 ಶಾಸಕರು ಮತವನ್ನು ಚಲಾಯಿಸಿದ್ದರೆ ವಿರುದ್ಧವಾಗಿ 11 ಮತಗಳು ಬಿದ್ದಿದೆ. ಈ ಮೂಲಕ ಅಧಿಕೃತವಾಗಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದೆ.

    ಭಾರೀ ಹೈಡ್ರಾಮ: ಕರ್ನಾಟಕದ ವಿಧಾನಸಭೆಯಲ್ಲಿ ಈ ಹಿಂದೆ ನಡೆದ ಇತಿಹಾಸ ತಮಿಳುನಾಡಿನಲ್ಲಿ ಮರುಕಳಿಸಿತ್ತು. ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾದ ಕೂಡಲೇ ಸಿಎಂ ಪಳನಿ ಸ್ವಾಮಿ ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಿದ ಬಳಿಕ ಡಿಎಂಕೆ ನಾಯಕ ಸ್ಟಾಲಿನ್ ರಹಸ್ಯ ಮತದಾನಕ್ಕೆ ಆಗ್ರಹಿಸಿದರು. ಸ್ಟಾಲಿನ್‍ಗೆ ಪನ್ನೀರ್ ಸೆಲ್ವಂ ಬಣದ ಶಾಸಕರು ರಹಸ್ಯ ಮತದಾನ ನಡೆಸುವಂತೆ ಸ್ಪೀಕರ್ ಅವರನ್ನು ಒತ್ತಾಯಿಸಿದರು.

    ಕಲಾಪದಲ್ಲಿ ಮಾತನಾಡಿದ ಸ್ಟಾಲಿನ್, ವಿಶ್ವಾಸಮತಯಾಚನೆಗೆ ಪೊಲೀಸ್ ರಕ್ಷಣೆಯಲ್ಲಿ ಶಾಸಕರನ್ನು ಕರೆ ತರಲಾಗಿದೆ. ಇದರಿಂದಾಗಿ ಶಾಸಕರಿಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹಸ್ಯ ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಪನ್ನೀರ್ ಸೆಲ್ವಂ ಬಣದ ಮುಖ್ಯ ಸಚೇತಕ ಮತ್ತು ಶಾಸಕ ಸೆಮ್ಮೈಲೈ ಮಾತನಾಡಿ, ಎಐಎಡಿಎಂಕೆ ಶಾಸಕರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಅವರನ್ನು ರಕ್ಷಿಸಿ ಎಂದು ಹೇಳಿದರು. ಆದರೆ ಸ್ಪೀಕರ್ ಧನ್‍ಪಾಲ್ ಅವರು, ವಿಶ್ವಾಸಮತಯಾಚನೆ ಹೇಗೆ ನಡೆಸಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಮತದಾನ ಹೇಗೆ ನಡೆಸಬೇಕು ಎನ್ನುವುದು ನನಗೆ ತಿಳಿದಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಮತದಾನಕ್ಕೆ ಅವಕಾಶ ನೀಡಿದರು.

    ಹೈಡ್ರಾಮ ಹೀಗಿತ್ತು: ರಹಸ್ಯ ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಡಿಎಂಎಕೆ, ಕಾಂಗ್ರೆಸ್, ಪನ್ನೀರ್ ಸೆಲ್ವಂ ಬಣದ ಶಾಸಕರು ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಡಿಎಂಕೆ ಶಾಸಕರು ಸ್ಪೀಕರ್ ಮುಂದುಗಡೆ ಇರುವ ಮೈಕ್ ಮತ್ತು ಟೇಬಲ್ ಕುರ್ಚಿಗಳು ಒಡೆದು ಹಾಕಿದರು. ಅಷ್ಟೇ ಅಲ್ಲದೇ ಸ್ಪೀಕರ್ ಧನ್ ಪಾಲ್ ಮೇಲೆ ಫೈಲ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಡಿಎಂಕೆಯ ಕೆಲ ಶಾಸಕರು ಸ್ಪೀಕರ್ ಧನ್‍ಪಾಲ್ ಶರ್ಟ್ ಎಳೆದ ಪ್ರಸಂಗ ನಡೆಯಿತು. ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

    ಸದನ ಮತ್ತೆ ಆರಂಭವಾದ ಕೂಡಲೇ ಡಿಎಂಕೆ ಶಾಸಕರ ಮತ್ತೆ ಪ್ರತಿಭಟನೆ ನಡೆಸಿದರು. ಈ ವೇಳೆ ಶರ್ಟ್ ಹಿಡಿದು ಎಳೆದಾಡಿದಕ್ಕೆ ಡಿಎಂಕೆಯ ಎಲ್ಲ ಶಾಸಕರನ್ನು ಸ್ಪೀಕರ್ ಸದನದಿಂದ ಹೊರಗಡೆ ಹಾಕುವಂತೆ ಮಾರ್ಷಲ್‍ಗಳಿಗೆ ಸೂಚಿಸಿದರು. ಮಾರ್ಷಲ್‍ಗಳು ಬಲವಂತವಾಗಿ ಶಾಸಕರನ್ನು ಹೊರಕ್ಕೆ ಹಾಕಿದರು. ಸ್ಪೀಕರ್ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಶಾಸಕರು ಸಭಾ ತ್ಯಾಗ ಮಾಡಿದರು. ಈ ಎಲ್ಲ ಹೈಡ್ರಾಮದ ಬಳಿಕ ಕೊನೆಗೆ ಮೂರು ಗಂಟೆಗೆ ನಡೆದ ಕಲಾಪದಲ್ಲಿ ಒಟ್ಟು 123 ಮತಗಳನ್ನು ಪಡೆಯುವ ಮೂಲಕ ಪಳನಿಸ್ವಾಮಿ ಬಹುಮತವನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾದರು.

    ರಾಜ್ಯಪಾಲರಿಗೆ ದೂರು: ಹರಿದ ಬಟ್ಟೆಯಲ್ಲಿ ವಿಧಾನಸಭೆಯಿಂದ ಹೊರಬಂದ ಡಿಎಂಕೆ ನಾಯಕ ಸ್ಟಾಲಿನ್ ಅದೇ ಬಟ್ಟೆಯಲ್ಲಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ.

    ಸಮಾಧಿಗೆ ಭೇಟಿ: ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಬಳಿಕ ಸಿಎಂ ಪಳನಿಸ್ವಾಮಿ ಚೆನ್ನೈನ ಮರೀನಾ ಬೀಚ್ ಸಮೀಪ  ಇರುವ ಜಯಾ ಸಮಾಧಿಗೆ ತಮ್ಮ ಶಾಸಕರ ಜೊತೆ ತೆರಳಿ ನಮನ ಸಲ್ಲಿಸಿದರು.

    ಶರ್ಟ್ ಬಿಚ್ಚಿದ್ದ ಗೂಳಿಹಟ್ಟಿ ಚಂದ್ರಶೇಖರ್: 2010ರ ಅಕ್ಟೋಬರ್‍ನಲ್ಲಿ ಬಿಎಸ್‍ಯಡಿಯೂರಪ್ಪ ವಿಶ್ವಾಸ ಮತಯಾಚನೆ ವೇಳೆ ಶಾಸಕಾರ ಮಾರಾಮಾರಿ ನಡೆದಿತ್ತು. ಈ ವೇಳೆ ಮಾರ್ಷಲ್‍ಗಳು ಗೂಳಿಹಟ್ಟಿ ಚಂದ್ರಶೇಖರ್ ಅವರನ್ನು ಹೊರಹಾಕಲು ಮುಂದಾದಾಗ ಅವರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು.

  • ತಮಿಳುನಾಡು ಅಸೆಂಬ್ಲಿಯಲ್ಲಿ ಹೈಡ್ರಾಮ: ಮೈಕ್, ಟೇಬಲ್ ಕುರ್ಚಿ ಒಡೆದು ಹಾಕಿದ ಶಾಸಕರು

    ತಮಿಳುನಾಡು ಅಸೆಂಬ್ಲಿಯಲ್ಲಿ ಹೈಡ್ರಾಮ: ಮೈಕ್, ಟೇಬಲ್ ಕುರ್ಚಿ ಒಡೆದು ಹಾಕಿದ ಶಾಸಕರು

    ಚೆನ್ನೈ:ಕರ್ನಾಟಕದ ವಿಧಾನಸಭೆಯಲ್ಲಿ ಈ ಹಿಂದೆ ನಡೆದ ಇತಿಹಾಸ ಈಗ ತಮಿಳುನಾಡಿನಲ್ಲಿ ಮರುಕಳಿಸಿದೆ. ಪಳನಿಸ್ವಾಮಿ ವಿಶ್ವಾಸ ಮತಯಾಚನೆ ವೇಳೆ ಡಿಎಂಕೆ ಶಾಸಕರು ಫೈಲ್‍ಗಳನ್ನು ಸ್ಪೀಕರ್ ಮೇಲೆ ಎಸೆದು ಕೋಲಾಹಲ ಸೃಷ್ಟಿಸಿದ್ದಾರೆ.

    ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾದ ಕೂಡಲೇ ಸಿಎಂ ಪಳನಿ ಸ್ವಾಮಿ ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಿದ ಬಳಿಕ ಡಿಎಂಕೆ ನಾಯಕ ಸ್ಟಾಲಿನ್ ರಹಸ್ಯ ಮತದಾನಕ್ಕೆ ಆಗ್ರಹಿಸಿದರು. ಸ್ಟಾಲಿನ್‍ಗೆ ಪನ್ನೀರ್ ಸೆಲ್ವಂ ಬಣದ ಶಾಸಕರು ಬೆಂಬಲ ವ್ಯಕ್ತಪಡಿಸಿದರು.

    ಕಲಾಪದಲ್ಲಿ ಮಾತನಾಡಿದ ಸ್ಟಾಲಿನ್, ವಿಶ್ವಾಸಮತಯಾಚನೆಗೆ ಪೊಲೀಸ್ ರಕ್ಷಣೆಯಲ್ಲಿ ಶಾಸಕರನ್ನು ಕರೆ ತರಲಾಗಿದೆ. ಇದರಿಂದಾಗಿ ಶಾಸಕರಿಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹಸ್ಯ ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಪನ್ನೀರ್ ಸೆಲ್ವಂ ಬಣದ ಮುಖ್ಯ ಸಚೇತಕ ಮತ್ತು ಶಾಸಕ ಸೆಮ್ಮೈಲೈ ಮಾತನಾಡಿ, ಎಐಎಡಿಎಂಕೆ ಶಾಸಕರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಅವರನ್ನು ರಕ್ಷಿಸಿ ಎಂದು ಹೇಳಿದರು. ಆದರೆ ಸ್ಪೀಕರ್ ಧನ್‍ಪಾಲ್ ಅವರು, ವಿಶ್ವಾಸಮತಯಾಚನೆ ಹೇಗೆ ನಡೆಸಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಮತದಾನ ಹೇಗೆ ನಡೆಸಬೇಕು ಎನ್ನುವುದು ನನಗೆ ತಿಳಿದಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಮತದಾನಕ್ಕೆ ಅವಕಾಶ ನೀಡಿದರು.

    ರಹಸ್ಯ ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಡಿಎಂಎಕೆ, ಕಾಂಗ್ರೆಸ್, ಪನ್ನೀರ್ ಸೆಲ್ವಂ ಬಣದ ಶಾಸಕರು ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಡಿಎಂಕೆ ಶಾಸಕರು ಸ್ಪೀಕರ್ ಮುಂದುಗಡೆ ಇರುವ ಮೈಕ್ ಮತ್ತು ಟೇಬಲ್ ಕುರ್ಚಿಗಳು ಒಡೆದು ಹಾಕಿದರು. ಅಷ್ಟೇ ಅಲ್ಲದೇ ಸ್ಪೀಕರ್ ಧನ್ ಪಾಲ್ ಮೇಲೆ ಫೈಲ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಸದನದವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

    ಶರ್ಟ್ ಬಿಚ್ಚಿದ್ದ ಗೂಳಿಹಟ್ಟಿ ಚಂದ್ರಶೇಖರ್: 2010ರ ಅಕ್ಟೋಬರ್‍ನಲ್ಲಿ ಬಿಎಸ್‍ಯಡಿಯೂರಪ್ಪ ವಿಶ್ವಾಸ ಮತಯಾಚನೆ ವೇಳೆ ಶಾಸಕರ ಮಾರಾಮಾರಿ ನಡೆದಿತ್ತು. ಈ ವೇಳೆ ಮಾರ್ಷಲ್‍ಗಳು ಗೂಳಿಹಟ್ಟಿ ಚಂದ್ರಶೇಖರ್ ಅವರನ್ನು ಹೊರಹಾಕಲು ಮುಂದಾದಾಗ ಅವರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು.

  • ಶಶಿಕಲಾ ರೆಸಾರ್ಟ್ ಬಿಟ್ಟರೂ ಶಾಸಕರ ಠಿಕಾಣಿ- ಅಧಿಕಾರಿಗಳಿಂದ ರೆಸಾರ್ಟ್‍ನ ವಿದ್ಯುತ್ ಸಂಪರ್ಕ ಕಟ್

    ಶಶಿಕಲಾ ರೆಸಾರ್ಟ್ ಬಿಟ್ಟರೂ ಶಾಸಕರ ಠಿಕಾಣಿ- ಅಧಿಕಾರಿಗಳಿಂದ ರೆಸಾರ್ಟ್‍ನ ವಿದ್ಯುತ್ ಸಂಪರ್ಕ ಕಟ್

    ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ಮಂಗಳವಾರ ತೀರ್ಪು ಪ್ರಕಟ ಆಗಲು ಸಮಯ ನಿಗದಿಯಾಗುತ್ತಿದ್ದ ಹಾಗೆ ಸೋಮವಾರವೇ ಶಾಸಕರ ಜೊತೆ ರೆಸಾರ್ಟ್ ಸೇರಿದ್ದ ಚಿನ್ನಮ್ಮ ತಡರಾತ್ರಿ ಪೋಯಸ್ ಗಾರ್ಡನ್ ಮನೆಗೆ ಬಂದಿದ್ದಾರೆ. ನಿನ್ನೆ ತಡರಾತ್ರಿ ಪೋಯಸ್ ಗಾರ್ಡನ್ ಮನೆಗೆ ತೆರಳುವುದಕ್ಕೆ ಮುಂಚೆ ಸ್ಥಳೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಶಶಿಕಲಾ, ಒಂದು ರೀತಿಯ ವಿದಾಯ ಭಾಷಣ ಮಾಡಿದ್ದಾರೆ.

    ನನಗೆ ಬೆಂಬಲ ಸೂಚಿಸಿದ ಎಲ್ಲಾ ಶಾಸಕರುಗಳಿಗೂ ಧನ್ಯವಾದ. ಎಐಡಿಎಂಕೆ ಪಕ್ಷ ಮಾತ್ರ ನನಗೆ ಮುಖ್ಯವಾಗಿದ್ದು, ನನ್ನನ್ನು ಪಕ್ಷದಿಂದ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ವಿಚಾರವನ್ನು ಅಲ್ಲಿನ ಜಯಾ ಟಿವಿ ಪ್ರಸಾರ ಮಾಡಿದೆ. ಇದಾದ ಬಳಿಕ ಪೋಯಸ್ ಗಾರ್ಡನ್ ಮನೆ ಮುಂದೆ ಜಮಾಯಿಸಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಚಿನ್ನಮ್ಮ, ನಾನು ಜೈಲಿಗೆ ಹೋಗುತ್ತಿದ್ದೇನೆ ಅಂತಾ ನೀವು ಅಳಬೇಡಿ ಅಂತಾ ಹೇಳಿದ್ದಾರೆ.

    ಬಳಿಕ ಜಯಲಲಿತಾ ಹಾಗೂ ನನ್ನ ಮೇಲೆ ಉದ್ದೇಶಪೂರ್ವಕವಾಗಿ ಕೇಸ್ ಹಾಕಿದ್ದು ಡಿಎಂಕೆ ಅಂತಾ ದೂರಿದ್ದಾರೆ. ಇದರ ಮಧ್ಯೆ ಕೊವತ್ತೂರು ರೆಸಾರ್ಟ್ ಖಾಲಿ ಮಾಡುವಂತೆ ಎಐಡಿಎಂಕೆ ಪಕ್ಷದ ಶಶಿಕಲಾ ಗುಂಪಿನ ಶಾಸಕರಿಗೆ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ರು. ಆದ್ರೆ ಶಾಸಕರು ಗೋಲ್ಡನ್ ಬೇ ರೆಸಾರ್ಟ್ ಖಾಲಿ ಮಾಡಲು ನಿರಾಕರಿಸಿದ್ರು, ಏನಾದ್ರು ಒತ್ತಾಯ ಮಾಡಿ ದಬ್ಬಾಳಿಕೆ ಮಾಡಿದ್ರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ರು. ಆ ಬಳಿಕ ರೆಸಾರ್ಟ್‍ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತ ಮಾಡಲಾಗಿದೆ. ಆದ್ರೂ ಕೂಡ ಶಾಸಕರು ಅಲ್ಲೇ ಬೀಡುಬಿಟ್ಟಿದ್ದಾರೆ.

    ಜಯಾ ಸಮಾಧಿಗೆ ಪನ್ನೀರ್, ದೀಪಾ ಭೇಟಿ: ಮಂಗಳವಾರ ಬೆಳಗ್ಗೆ ಸುಪ್ರೀಂಕೋರ್ಟ್‍ನಲ್ಲಿ ತೀರ್ಪು ಪ್ರಕಟ ಆಗ್ತಿದ್ದ ಹಾಗೆ ಜಯಲಲಿತಾ ಸೋದರ ಸಂಬಂಧಿಗಳಾದ ದೀಪಾ ಹಾಗೂ ದೀಪಕ್‍ರನ್ನು ಕರೆದು ಚಿನ್ನಮ್ಮ ಶಶಿಕಲಾ ಮಾತನಾಡಿದ್ರು. ಇದಾದ ಬಳಿಕ ಸಂಜೆ ದೀಪಾ, ಪನ್ನೀರ್ ಸೆಲ್ವಂ ಬಳಗ ಸೇರಿದ್ದು, ರಾತ್ರಿ ಜಯಾ ಸಮಾಧಿಗೆ ಪನ್ನೀರ್ ಸೆಲ್ವಂ ಹಾಗೂ ಈಗಾಗಲೇ ಪಕ್ಷದಿಂದ ವಜಾಗೊಂಡಿರುವ ಶಾಸಕರು ಹಾಗೂ ಸಂಸದರ ಜೊತೆ ಭೇಟಿ ನೀಡಿದ್ರು. ಇಂದಿನಿಂದ ನಾನು ಸಕ್ರಿಯ ರಾಜಕಾರಣಕ್ಕೆ ಬರುತ್ತೇನೆ ಅಂತಾ ದೀಪಾ ಸಮಾಧಿ ಬಳಿಯೇ ಘೋಷಣೆ ಮಾಡಿದ್ರು. ಈ ಮೂಲಕ ಪನ್ನೀರ್ ಸೆಲ್ವಂ ಬಣದ ಬಲ ನಿಧಾನವಾಗಿ ಹೆಚ್ಚಾಗುತ್ತಿದೆ. ಇದಕ್ಕೂ ಮೊದಲು ಎಐಎಡಿಎಂ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಎಡಪ್ಪಾಡಿ ಕೆ ಪಳನಿಸ್ವಾಮಿ ರಾಜ್ಯಪಾಲ ಸಿ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಿದ್ರು. ಈ ವೇಳೆ ಹಲವು ಸಚಿವರು ಪಳನಿಸ್ವಾಮಿಗೆ ಸಾಥ್ ನೀಡಿದ್ರು.

  • ಶಶಿಕಲಾ ವಿರುದ್ಧ ಸೆಲ್ವಂ ಬಂಡಾಯದ ಕಹಳೆ – ಖಜಾಂಚಿ ಸ್ಥಾನದಿಂದ ಕಿತ್ತೆಸೆದ ಶಶಿಕಲಾ

    – ಪನ್ನೀರ್ ಸೆಲ್ವಂಗೆ ಡಿಎಂಕೆ ಸಪೋರ್ಟ್

    ಚೆನ್ನೈ: ಜಯಲಲಿತಾ ನಿಧನದ ನಂತರ ಅಸ್ಥಿರತೆಯಲ್ಲಿದ್ದ ತಮಿಳುನಾಡಿನ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಅಮ್ಮನಿಲ್ಲದ ತಮಿಳುನಾಡಿನಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಅಮ್ಮನ ನಂಬಿಕಸ್ಥ ಬಂಟ ಪನ್ನೀರ್ ಸೆಲ್ವಂ. ಚಿನ್ನಮ್ಮ ಶಶಿಕಲಾ ವಿರುದ್ಧ ಅಮ್ಮನ ಬಲಗೈ ಬಂಟ ಪನ್ನೀರ್ ಸೆಲ್ವಂ ಬಂಡಾಯದ ಕಹಳೆ ಊದಿದ್ದಾರೆ.

    ಶಶಿಕಲಾ ನಟರಾಜನ್‍ಗಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದ ಓಪಿಎಸ್, ಅಚ್ಚರಿಯ ಬೆಳವಣಿಗೆಯಲ್ಲಿ ರಾತ್ರೋರಾತ್ರಿ ಚಿನ್ನಮ್ಮನ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಪನ್ನೀರ್ ಸೆಲ್ವಂ, ಚೆನ್ನೈನ ಮರೀನಾ ಬೀಚ್‍ನಲ್ಲಿರೋ ಜಯಲಲಿತಾ ಸಮಾಧಿಗೆ ದಿಢೀರ್ ಭೇಟಿಕೊಟ್ಟು ಸುಮಾರು 45 ನಿಮಿಷಗಳ ಕಾಲ ಧ್ಯಾನ ಮಾಡಿದ್ರು. ಬಳಿಕ ಮಾಧ್ಯಮದ ಜೊತೆ ಮಾತಾಡಿ, ಶಶಿಕಲಾ ಅವ್ರು ತನ್ನನ್ನ ಬಲವಂತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು ಅಂತ ಬಾಂಬ್ ಹಾಕಿದ್ರು. ನಾನು ಸಿಎಂ ಆಗಬೇಕು ಅಂತ ಆಸ್ಪತ್ರೆಯಲ್ಲಿದ್ದಾಗ ಅಮ್ಮ ಬಯಸಿದ್ರು. ಆದ್ರೆ, ಶಶಿಕಲಾ ಟೀಂ ನನಗೆ ಗೊತ್ತಿಲ್ಲದೇ ಶಾಸಕಾಂಗ ಪಕ್ಷದ ಸಭೆ ಕರೆದು ಅವಮಾನ ಮಾಡ್ತು. ಈಗ ಅಮ್ಮನ ಆತ್ಮವೇ ಬಂದು ಜನರಿಗೆ ಸತ್ಯ ಹೇಳುವಂತೆ ತಿಳಿಸಿದೆ. ಈಗ ಜನ ಹಾಗೂ ಕಾರ್ಯಕರ್ತರಿಗೆ ಸತ್ಯ ತಿಳಿಸುತ್ತಿದ್ದೇನೆ ಅಂತ ಹೇಳಿ ತಮಿಳುನಾಡು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರು.

    ಜಯಾ ಸಮಾಧಿಯಿಂದ ತನ್ನ ನಿವಾಸಕ್ಕೆ ಮರಳಿದ ಪನ್ನೀರ್ ಸೆಲ್ವಂಗೆ ಅಭೂತರ್ಪ ಬೆಂಬಲ ವ್ಯಕ್ತವಾಯ್ತು. ಜನರು ಸೆಲ್ವಂ ನಿವಾಸದ ಮುಂದೆ ಜಮಾಯಿಸಿ ಶಶಿಕಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇದರ ಬೆನ್ನಲ್ಲೇ ಪೋಯಸ್ ಗಾರ್ಡನ್ ನಿವಾಸದ ಮುಂದೆ ಶಶಿಕಲಾ ಅಭಿಮಾನಿಗಳು ಸೇರತೊಡಗಿದ್ರು.

    ತುರ್ತು ಸಭೆ ಕರೆದ ಶಶಿಕಲಾ: ದಂಗೆಯ ಮುನ್ನೆಚ್ಚರಿಕೆ ಅರಿತ ಶಶಿಕಲಾ ತಕ್ಷಣವೇ ತುರ್ತು ಸಭೆ ನಡೆಸಿದ್ರು. ಮಧ್ಯರಾತ್ರಿ 1 ಗಂಟೆವರೆಗೆ ನಡೆದ ಸಭೆಯಲ್ಲಿ ಪಕ್ಷದ ಖಜಾಂಚಿ ಸ್ಥಾನದಿಂದ ಪನ್ನೀರ್ ಸೆಲ್ವಂಗೆ ಗೇಟ್‍ಪಾಸ್ ಕೊಡಲಾಯಿತು. ಸಭೆಯಲ್ಲಿ 20 ಸಚಿವರು 80 ಶಾಸಕರು ಹಾಜರಿದ್ರು. ಸಭೆ ಬಳಿಕ ಮಾತನಾಡಿದ ಶಶಿಕಲಾ, ಅಣ್ಣಾಡಿಎಂಕೆ ಪಕ್ಷದ ಶಾಸಕರು ಒಂದೇ ಕುಟುಂಬ, ಬಿಕ್ಕಟ್ಟಿನ ಹಿಂದೆ ಡಿಎಂಕೆ ಕೈವಾಡ ಇದೆ. ಸೆಲ್ವಂಗೆ ನಾನು ಒತ್ತಡ ಹಾಕಿಲ್ಲ, ಅವ್ರನ್ನ ಪಕ್ಷದಿಂದ ಹೊರಹಾಕ್ತೇವೆ ಅಂತ ಶಾಂತಚಿತ್ತವಾಗೇ ಉತ್ತರಿಸಿದ್ರು. ಈ ಹೈಡ್ರಾಮಾಗೆ ಡಿಎಂಕೆ ಕಾರಣ ಅಂತ ದೂರಿದ ಪಕ್ಷದ ಹಿರಿಯ ನಾಯಕ ತಂಬಿದೊರೈ, ಚಿನ್ನಮ್ಮ ಶಶಿಕಲಾಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ಕೊಡಬೇಕು ಅಂದ್ರು.

    ನನ್ನ ನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿಲ್ಲ: ನಾನು ಎಐಎಡಿಎಂಕೆ ಪಕ್ಷದ ಕಟ್ಟಾಳು. ಯಾರೂ ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವಂತಿಲ್ಲ. ನನ್ನನ್ನ ಖಜಾಂಚಿ ಮಾಡಿದ್ದು ಅಮ್ಮ. ನಾನು ಅದನ್ನ ಮುಂದುವರಿಸ್ತೇನೆ. ನನ್ನ ಸ್ಥಾನವನ್ನ ಯಾರಿಂದಲೂ ಕಸಿದುಕೊಳ್ಳೋಕೆ ಸಾಧ್ಯವಿಲ್ಲ. ಈ ಬೆಳವಣಿಗೆಯಲ್ಲಿ ಡಿಎಂಕೆಯ ಪಾತ್ರವಿಲ್ಲ. ಪ್ರತಿಪಕ್ಷ ನಾಯಕರತ್ತ ನೋಡೋದು, ನಗು ಚೆಲ್ಲೋದು ಅಪರಾಧ ಅಲ್ಲವೇ ಅಲ್ಲ. ಖಂಡಿತಾ ಕ್ರೈಮ್ ಅಲ್ಲ ಅಲ್ವಾ. (ಕಳೆದ ಕೆಲ ದಿನಗಳ ಹಿಂದೆ ನಡೆದ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಸ್ಟಾಲಿನ್ ಕಡೆ ಸೆಲ್ವಂ ನಗು ಚೆಲ್ಲಿದ್ದರು) ನಾಳೆ ಏನಾಗುತ್ತೆ ಕಾದು ನೋಡಿ ಅಂತ ಪನ್ನೀರ್ ಸೆಲ್ವಂ ಪ್ರತಿಕ್ರಿಯಿಸಿದ್ದಾರೆ.

    ಕ್ಷಿಪ್ರ ರಾಜಕೀಯದಿಂದಾಗಿ ತಮಿಳುನಾಡಿನ ರಾಜಕೀಯ ಲೆಕ್ಕಾಚಾರವನ್ನ ನೋಡಬೇಕಾಗಿದೆ. ತಮಿಳುನಾಡು ಅಸೆಂಬ್ಲಿಯಲ್ಲಿ ಪಕ್ಷಗಳ ಬಲಾಬಲ ಹೀಗಿದೆ.
    * ಒಟ್ಟು ಕ್ಷೇತ್ರ – 235
    * ಸರಳ ಬಹುಮತ – 118
    * ಎಐಎಡಿಂಕೆ – 134
    * ಡಿಎಂಕೆ – 89
    * ಕಾಂಗ್ರೆಸ್ – 8
    * ಐಯುಎಂಎಲ್ – 1
    * ಖಾಲಿ – 1 (ಜಯಲಲಿತಾ ಸಾವಿನಿಂದ ಆರ್.ಕೆ. ನಗರ ಖಾಲಿ ಇದೆ)

    ಈಗ ಒಂದು ವೇಳೆ ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಸರ್ಕಾರ ರಚಿಸ್ತಾರೆ ಎಂದಾದರೆ ಪನ್ನೀರ್ ಸೆಲ್ವಂಗೆ ಅಣ್ಣಾಡಿಎಂಕೆಯಿಂದ 2/3 ಮೆಜಾರಿಟಿ ಅಂದ್ರೆ ಕನಿಷ್ಟ 90 ಶಾಸಕರ ಬೆಂಬಲದೊಂದಿಗೆ ಹೊರ ಹೋದರೆ ಪಕ್ಷಾಂತರ ಕಾಯ್ದೆ ಅನ್ವಯ ಆಗಲ್ಲ. ಅಷ್ಟು ಎಂಎಲ್‍ಎಗಳು ಸೆಲ್ವಂ ಹಿಂದೆ ಹೋಗ್ತಾರಾ? ಆದ್ರೆ ಪನ್ನೀರ್ ಸೆಲ್ವಂ ಜನನಾಯಕರಲ್ಲವಾದ್ದರಿಂದ ಅಷ್ಟೂ ಎಂಎಲ್‍ಎಗಳ ಬೆಂಬಲ ಸಿಗುವುದಲ್ಲ ಅಂತ ಹೇಳಲಾಗಿದೆ. ಆದರೂ, ಪನ್ನೀರ್ ಸೆಲ್ವಂಗೆ ಡಿಎಂಕೆ ಬಾಹ್ಯ ಬೆಂಬಲ ನೀಡೋದಾಗಿ ಘೋಷಿಸಿದೆ. ಒಂದೊಮ್ಮೆ 8 ಸೀಟ್ ಹೊಂದಿರೋ ಕಾಂಗ್ರೆಸ್ ಸಹ ಸಪೋರ್ಟ್ ಕೊಟ್ರೆ ಸೆಲ್ವಂ ಹಾಗೂ ಶಶಿಕಲಾ ನಡುವಿನ ನಂಬರ್ ಗೇಮ್ ಹೀಗಿರಲಿದೆ:
    * 90 ಶಾಸಕರ ಬೆಂಬಲ ಇದ್ದರೆ ಸೆಲ್ವಂ ಬಚಾವ್
    * ಸದ್ಯ ಸೆಲ್ವಂಗೆ 50 ಶಾಸಕರ ಬೆಂಬಲ..?
    * ಶಶಿಕಲಾ ನಟರಾಜನ್‍ಗೆ 84 (ಆದ್ರೆ ನೂರಕ್ಕೂ ಅಧಿಕ ಶಾಸಕರು ಮಧ್ಯರಾತ್ರಿ ಶಶಿಕಲಾ ಸಭೆಯಲ್ಲಿದ್ದರು)
    * ಸೆಲ್ವಂ+ಡಿಎಂಕೆ+ಕಾಂಗ್ರೆಸ್ – 147

    ಇತ್ತ ಸೆಲ್ವಂ, ಶಶಿಕಲಾ ಮಧ್ಯೆ ರಾಜಕೀಯ ಘರ್ಷಣೆ ನಡೀತಿದ್ರೆ. ಅತ್ತ ಶಶಿಕಲಾ ವಿರುದ್ಧವಾಗಿ ಅಖಾಡಕ್ಕೆ ಇಳಿಯೋಕೆ ಜಯಾ ಸೊಸೆ ದೀಪಾ ಸಜ್ಜಾಗ್ತಿದ್ದಾರೆ.