Tag: ಡಾ. ಹರ್ಷವರ್ಧನ್

  • ಹೈದರಾಬಾದ್ ಕರ್ನಾಟಕದ ಜನರ ಸೇವೆಗೆ ಟ್ರೋಮಾ ಸೆಂಟರ್ ಸಿದ್ಧ: ಸುಧಾಕರ್

    ಹೈದರಾಬಾದ್ ಕರ್ನಾಟಕದ ಜನರ ಸೇವೆಗೆ ಟ್ರೋಮಾ ಸೆಂಟರ್ ಸಿದ್ಧ: ಸುಧಾಕರ್

    – ಕೇಂದ್ರ ಸಚಿವ ಡಾ. ಹರ್ಷವರ್ಧನ್ ಲೋಕಾರ್ಪಣೆ
    – ಟ್ರೋಮಾ ಸೆಂಟರ್ ವಿಶೇಷತೆ ಏನು?

    ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಟ್ರೋಮಾ ಸೆಂಟರ್ ತೆರೆದಿರುವುದು ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ಅವರು ಅಭಿಪ್ರಾಯಪಟ್ಟರು.

    ಪ್ರಧಾನಿ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್) ಬಳ್ಳಾರಿಯಲ್ಲಿ “ಸೂಪರ್ ಸ್ಪೆಷಾಲಿಟಿ ಟ್ರಾಮಾ ಘಟಕ”ವನ್ನು ಸೋಮವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಅವರು ಉದ್ಘಾಟಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಪಾಲ್ಗೊಂಡಿದ್ದರು.

    ಈ ವೇಳೆ ಮಾತನಾಡಿದ ಸಚಿವ ಡಾ. ಸುಧಾಕರ್, ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯುನ್ನತ ಟ್ರೋಮಾ ಸೆಂಟರ್ ತೆರೆದಿರುವುದು ಅತ್ಯಂತ ಅವಶ್ಯವಾಗಿದೆ. ಪ್ರತಿ ವರ್ಷ ರಾಜ್ಯದಲ್ಲಿ 4.7 ಲಕ್ಷ ಜನರು ರಸ್ತೆ ಅಪಘಾತಕ್ಕೆ ಒಳಗಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಮೃತಪಡುತ್ತಿದ್ದಾರೆ. ರಸ್ತೆ ಅಪಘಾತ ನಡೆದ 1 ಗಂಟೆ ಗೋಲ್ಡನ್ ಹವರ್ ಎಂದು ಪರಿಗಣಿಸುತ್ತೇವೆ. ಈ ಅವಧಿಯಲ್ಲಿ ಚಿಕಿತ್ಸೆ ನೀಡಿದರೆ ಬದುಕಿಸಬಹುದು. ಇಂತಹ ತುರ್ತು ಚಿಕಿತ್ಸೆಗಾಗಿ ದೂರದ ಬೆಂಗಳೂರಿಗೆ ಬರುವ ಅಗತ್ಯವಿತ್ತು. ಈಗ ಬಳ್ಳಾರಿ ಸುತ್ತಮುತ್ತಲಿನ ಜಿಲ್ಲೆ ಹಾಗೂ ರಾಜ್ಯದಲ್ಲಿ ತುರ್ತು ಚಿಕಿತ್ಸೆ ಟ್ರೋಮಾ ಕೇಂದ್ರದಲ್ಲಿ ಪಡೆಯಬಹುದು ಎಂದರು.

    ನೂತನ ಟ್ರೋಮಾ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಅಪಾರ. ಒಟ್ಟು 200 ಬೆಡ್ ಸಾಮಥ್ರ್ಯದ ಟ್ರೋಮಾ ಸೆಂಟರ್ 72 ಐಸಿಯು ಬೆಡ್, 20 ವೆಂಟಿಲೇಟರ್ ಹಾಗೂ ಜನರಲ್ ವಾರ್ಡ್ ಗಳನ್ನು ಒಳಗೊಂಡಿದೆ. ಹತ್ತಿರದ ನೆರೆ ರಾಜ್ಯದಲ್ಲಿ ಅಪಘಾತವಾದರೂ ಸಹ ಈ ಟ್ರೋಮಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲು ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

    ವೈದ್ಯಕೀಯ ಸೇವೆಯಲ್ಲಿ ಇತರೆ ರಾಜ್ಯಗಳಿಂತ ಕರ್ನಾಟಕ ಮುಂಚೂಣಿಯಲ್ಲಿದೆ. ಕೋವಿಡ್ ಪರಿಸ್ಥಿತಿ ನಿಯಂತ್ರಿಸಲು ಹಾಗೂ ಸೂಕ್ತ ಚಿಕಿತ್ಸೆಗಾಗಿ ಕಡಿಮೆ ಅವಧಿಯಲ್ಲಿ 20 ಸಾವಿರ ಐಸಿಯು ಬೆಡ್‍ಗಳ ನಿರ್ಮಾಣವನ್ನು ಮಾಡುವ ಮೂಲಕ ರಾಜ್ಯದ ಸಾಮಥ್ರ್ಯ ತೋರಿಸಿದ್ದೇವೆ ಎಂದರು.

    2021ರೊಳಗೆ ನೂತನ ವೈದ್ಯಕೀಯ ಕಾಲೇಜು ಪ್ರಾರಂಭ:
    ಕಾರ್ಯಕ್ರಮದ ನಡುವೆ ಕೇಂದ್ರ ಸಚಿವ ಹರ್ಷವರ್ಧನ್ ಅವರು ಕರ್ನಾಟಕದಲ್ಲಿ ಶೀಘ್ರವೇ ವೈದ್ಯಕೀಯ ಕಾಲೇಜು ಪ್ರಾರಂಭಿಸುವಂತೆ ಹೇಳಿದರು. ಅದಕ್ಕೆ ಉತ್ತರಿಸಿದ ಸಚಿವರು, ಚಿಕ್ಕಬಳ್ಳಾಪುರ ಸೇರಿದಂತೆ 4 ನೂತನ ವೈದ್ಯಕೀಯ ಕಾಲೇಜುಗಳು 2021ರೊಳಗೆ ಕಾರ್ಯಾರಂಭ ಮಾಡಲಿವೆ ಎಂದು ಹೇಳಿದರು. ಇತ್ತೀಚೆಗೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ವೇಳೆ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದಾಗಿ ಉಲ್ಲೇಖಿಸಿದರು.

    ಕಾರ್ಯಕ್ರಮದಲ್ಲಿ ವಿಮ್ಸ್ ನ ನೂತನ ಸಿಟಿ ಸ್ಕ್ಯಾನರ್‍ನನ್ನು ಸಚಿವರ ಡಾ. ಸುಧಾಕರ್ ಉದ್ಘಾಟಿಸಿದರು. ಸಮಾರಂಭದಲ್ಲಿ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವರಾದ ಅಶ್ವಿನ್ ಕುಮಾರ್ ಚೌಬೆ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಇತರರು ಪಾಲ್ಗೊಂಡಿದ್ದರು.

    ಟ್ರೋಮಾ ಸೆಂಟರ್ ನ ವಿಶೇಷತೆ:
    150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಟ್ರೋಮಾ ಕೇಂದ್ರದಲ್ಲಿ ಒಟ್ಟು 200 ಬೆಡ್ ಒಳಗೊಂಡಿದೆ. 72 ಐಸಿಯು ಬೆಡ್, 20 ವೆಂಟಿಲೇಟರ್, ಸಿಟಿ ಸ್ಕ್ಯಾನ್, ಡಿಜಿಟಲ್ ಎಕ್ಸ್ ರೇ ಸೌಕರ್ಯ ಇರಲಿದೆ. ಜೊತೆಗೆ ಸೂಪರ್ ಸ್ಪೆಷಾಲಿಟಿ ಎಮರ್ಜೆನ್ಸಿ ಹಾಗೂ ಟ್ರೋಮಾ, ನ್ಯೂರೋ ಸರ್ಜರಿ ಹಾಗೂ ಆರ್ಥೋಪೆಡಿಕ್ ಸೇವೆ ಸಹ ಒಳಗೊಂಡಿದೆ.

  • ಕೇಂದ್ರ ಆರೋಗ್ಯ ಸಚಿವರಿಂದ ಕರೆ- ಚಾಮರಾಜನಗರಕ್ಕೆ ಮೆಚ್ಚುಗೆ

    ಕೇಂದ್ರ ಆರೋಗ್ಯ ಸಚಿವರಿಂದ ಕರೆ- ಚಾಮರಾಜನಗರಕ್ಕೆ ಮೆಚ್ಚುಗೆ

    – ಹಾಟ್‍ಸ್ಪಾಟ್‍ಗಳ ಮಧ್ಯೆ ಇದ್ದರೂ ಕೊರೊನಾ ಬಂದಿಲ್ಲ
    – ದಕ್ಷಿಣ ಭಾರತದ ಏಕೈಕ ಜಿಲ್ಲೆ ಚಾಮರಾಜನಗರ

    ಚಾಮರಾಜನಗರ: ಹಾಟ್‍ಸ್ಪಾಟ್‍ಗಳ ಮಧ್ಯೆ ಇದ್ದರೂ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ದೂರವಾಣಿ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೌದು. ರಾಜ್ಯದಲ್ಲಿ, ಅದರಲ್ಲೂ ದಕ್ಷಿಣ ಭಾರತದ ಜಿಲ್ಲೆಗಳಲ್ಲಿ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಚಾಮರಾಜನಗರ ಜಿಲ್ಲೆ ಪಾತ್ರವಾಗಿದೆ. ವಿಶೇಷವೆಂದರೆ ಜಿಲ್ಲೆಯು ಕೊರೊನಾ ಹಾಟ್‍ಸ್ಪಾಟ್ ಜಿಲ್ಲೆ ಹಾಗೂ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ತಮಿಳುನಾಡು, ಕೇರಳ ರಾಜ್ಯಗಳು ಒಂದೆಡೆಯಾದರೆ ಮೈಸೂರು, ಮಂಡ್ಯ ಇನ್ನೊಂದೆಡೆ ಇವೆ. ಹೀಗಿದ್ದರೂ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗಿಲ್ಲ.

    ಜಿಲ್ಲಾಡಳಿತದ ಕಾರ್ಯವೈಖರಿ, ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ.

    “ಕೇಂದ್ರ ಆರೋಗ್ಯ ಸಚಿವರ ಕರೆ ನಿರೀಕ್ಷೆ ಮಾಡಿರಲಿಲ್ಲ. ಬಹಳ ಆಶ್ಚರ್ಯ ಜೊತೆಗೆ ಹೆಮ್ಮೆಯಾಯ್ತು. ಬಹಳ ಖುಷಿಯಾಗಿದೆ, ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಕೇಂದ್ರ ಸಚಿವರೇ ಕರೆ ಮಾಡಿರುವುದು ಬಹಳ ಅಪರೂಪದ ಸಂಗತಿ. ನಮ್ಮ ಇಡೀ ತಂಡಕ್ಕೆ ಹಾಗೂ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸಿದರು” ಎಂದು ಡಾ.ಎಂ.ಆರ್.ರವಿ ಹೇಳಿದ್ದಾರೆ.

    “ಸ್ವತಃ ಆರೋಗ್ಯ ಸಚಿವರೇ ಖುದ್ದಾಗಿ ಗುರುತಿಸಿರುವುದು ಹೆಮ್ಮೆಯ ಸಂಗತಿ. ದೆಹಲಿಗೆ ಬಂದಾಗ ತಮ್ಮ ಕಚೇರಿಗೆ ಬಂದು ಹೋಗುವಂತೆ ಆರೋಗ್ಯ ಸಚಿವರು ತಿಳಿಸಿದ್ದಾರೆ” ಎಂದರು.

    ದಕ್ಷಿಣ ಭಾರತದಲ್ಲಿಯೇ ಚಾಮರಾಜನಗರ ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಇದುವರೆಗೂ ತೆಲಂಗಾಣದ ವಾರಂಗಲ್ ಗ್ರಾಮೀಣ ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಕೊರೊನಾ ಪತ್ತೆಯಾಗಿರಲಿಲ್ಲ. ಆದರೆ ವಾರಂಗಲ್ ಗ್ರಾಮೀಣ ಭಾಗದಲ್ಲಿ ಮಂಗಳವಾರ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ದಕ್ಷಿಣ ಭಾರತದಲ್ಲಿ ಕೊರೊನಾ ಮುಕ್ತ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಚಾಮರಾಜನಗರ ಪಾತ್ರವಾಗಿದೆ.

  • ಸಾರ್ವಜನಿಕರೇ, ಕೊರೊನಾ ಕುರಿತ ಪ್ರಶ್ನೆ ಕೇಳಿ – ಉತ್ತರ ನೀಡುತ್ತೆ ಕೇಂದ್ರ ಸರ್ಕಾರ

    ಸಾರ್ವಜನಿಕರೇ, ಕೊರೊನಾ ಕುರಿತ ಪ್ರಶ್ನೆ ಕೇಳಿ – ಉತ್ತರ ನೀಡುತ್ತೆ ಕೇಂದ್ರ ಸರ್ಕಾರ

    ನವದೆಹಲಿ: ಬೆನ್ನು ಬಿಡದೆ ಕಾಡುತ್ತಿರುವ ಕೊರೊನಾ ವೈರಸ್ ಸಂಬಂಧ ಸಾರ್ವಜನಿಕರಲ್ಲಿ ನೂರಾರು ಪ್ರಶ್ನೆಗಳಿವೆ. ಈ ಗೊಂದಲಗಳನ್ನು ಬಗೆಹರಿಸಲು ಈಗ ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದ್ದು, ವಿನೂತನ ಪ್ರಯೋಗವೊಂದನ್ನು ಆರಂಭಿಸಿದೆ.

    ಟ್ವಿಟರ್‌ನಲ್ಲಿ @CovidIndiaSeva ಗೆ ಸಾರ್ವಜನಿಕರು ನೇರವಾಗಿ ತಮ್ಮ ಪ್ರಶ್ನೆಗಳನ್ನು ಟ್ವೀಟ್ ಮಾಡಬಹುದಾಗಿದೆ. ಜನರ ಪ್ರಶ್ನೆಗಳಿಗೆ ಇನ್ಮುಂದೆ ಕೇಂದ್ರ ಆರೋಗ್ಯ ಇಲಾಖೆ ಉತ್ತರಿಸಲಿದೆ.

    ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಕ್ರಮಗಳ ಇತ್ತೀಚಿನ ಹೊಸ ಮಾಹಿತಿಗಳು, ಸಾರ್ವಜನಿಕರ ಪ್ರಶ್ನೆಗಳು, ಆರೋಗ್ಯ ಸೇವೆಗಳು, ರೋಗಲಕ್ಷಣಗಳನ್ನು ಹೊಂದಿರುವವರ ಸಹಾಯಕ್ಕಾಗಿ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.

    ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಪ್ರತಿಕ್ರಿಯಿಸಿದ್ದು, ಆನ್‍ಲೈನ್ ಮೂಲಕ ಜನರಿಗೆ ಪರಿಹಾರ ಕಂಡುಕೊಂಡುವ ಪ್ರಯತ್ನ ಮಾಡುತ್ತಿರುವುದು ಸಂತಸವಾಗಿದೆ. ಇದು ಕೊರೊನಾ ವಿರುದ್ಧದ ಹೋರಾಟದ ಒಂದು ಭಾಗ ಎಂದಿದ್ದಾರೆ.

    ಇದು ಕೇವಲ ಕೇಂದ್ರ ಆರೋಗ್ಯ ಇಲಾಖೆ ಮಾತ್ರ ಒಳಗೊಂಡಿರದೇ ರಾಜ್ಯವಾರು ಪೊಲಿಸ್ ಮಹಾನಿರ್ದೇಶಕರು, ಸರ್ಕಾರ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಕಾರ್ಯಾಲಯ, ಕೇಂದ್ರ ಹಣಕಾಸು, ಕೈಗಾರಿಕೆ, ವಿದೇಶಾಂಗ ಸಚಿವಾಲಗಳಿಗೂ ಟ್ಯಾಗ್ ಮಾಡಲಿದೆ. ಜನರ ಹಲವು ಪ್ರಶ್ನೆಗಳಿಗೆ ಎಲ್ಲ ಆಯಾಮಗಳಲ್ಲೂ ಉತ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ.

    ಇದಕ್ಕಾಗಿ ತಜ್ಞರ ತಂಡವೊಂದನ್ನು ರಚಿಸಲಾಗಿದ್ದು, ಸಂಪೂರ್ಣ ಪಾರದರ್ಶಕವಾಗಿರಲಿದೆ. ಅಲ್ಲದೇ ಪ್ರಶ್ನೆಯೊಂದು ಹೆಚ್ಚು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿಕೊಂಡಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾತ್ಮಕವಾಗಿ ಕಾರ್ಯ ನಿರ್ವಹಿಸುವ ಪ್ರಯತ್ನವೂ ಆಗಿದೆ.

  • ಪೇಜಾವರ ಸ್ವಾಮೀಜಿ ವೈದ್ಯಕೀಯ ನೆರವಿಗೆ ಸಿದ್ಧ- ಆರೋಗ್ಯ ಸಚಿವ ಡಾ. ಹರ್ಷವರ್ಧನ್

    ಪೇಜಾವರ ಸ್ವಾಮೀಜಿ ವೈದ್ಯಕೀಯ ನೆರವಿಗೆ ಸಿದ್ಧ- ಆರೋಗ್ಯ ಸಚಿವ ಡಾ. ಹರ್ಷವರ್ಧನ್

    ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಕೇಂದ್ರ ಆರೋಗ್ಯ ಸಚಿವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಕೆಎಂಸಿ ವೈದ್ಯಕೀಯ ಅಧೀಕ್ಷಕರಿಗೆ ಕರೆ ಮಾಡಿ ಮಾತನಾಡಿರುವ ಸಚಿವ ಡಾ. ಹರ್ಷವರ್ಧನ್ ಸ್ವಾಮೀಜಿಗಳ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಡಾ. ಅವಿನಾಶ್ ಅವರಲ್ಲಿ ಸ್ವಾಮೀಜಿಗೆ ಇರುವ ಸಮಸ್ಯೆ ಮತ್ತು ಚಿಕಿತ್ಸೆ ಕುರಿತಾದ ಮಾಹಿತಿ ಪಡೆದುಕೊಂಡರು.

    ಅಗತ್ಯ ಬಿದ್ದರೆ ವೈದ್ಯಕೀಯ ನೆರವು ಕೊಡುತ್ತೇವೆ. ಕೇಂದ್ರ ಸರಕಾರದ ಆರೋಗ್ಯ ಇಲಾಖೆಯನ್ನು ಯಾವುದೇ ಸಂದರ್ಭದಲ್ಲಿ ಸಂಪರ್ಕಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ಪೇಜಾವರ ಮಠದ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ. ಮಠದ ಆಪ್ತ ವಾಸುದೇವ ಭಟ್ ಮಾತನಾಡಿ, ಸಚಿವರು ಕೆಎಂಸಿ ವೈದ್ಯರ ಜೊತೆ ಸಂಪರ್ಕದಲ್ಲಿದ್ದಾರೆ. ಪೇಜಾವರಶ್ರೀ ಆಪ್ತ ಕಾರ್ಯದರ್ಶಿಗಳನ್ನು ಕೂಡ ಸಂಪರ್ಕಿಸಿದ್ದಾರೆ ಎಂದರು.

  • ಸೈಕಲ್‍ನಲ್ಲಿ ಆಗಮಿಸಿ ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ

    ಸೈಕಲ್‍ನಲ್ಲಿ ಆಗಮಿಸಿ ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ

    ನವದೆಹಲಿ: ಸೈಕಲ್‍ನಲ್ಲಿ ಸಿಂಪಲ್ ಆಗಿ ಆರೋಗ್ಯ ಸಚಿವಾಲಯಕ್ಕೆ ಬಂದ ಡಾ. ಹರ್ಷವರ್ಧನ್ ಅವರು ಕೇಂದ್ರ ಸರ್ಕಾರದ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ವೀಟ್ ಮಾಡಿದ ಅವರು, ನನ್ನ ಮೇಲೆ ನಂಬಿಕೆ ಇಟ್ಟು ಆರೋಗ್ಯ ಸಚಿವರ ಸ್ಥಾನ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇಂದು ನಾನು ಕೇಂದ್ರ ಸರ್ಕಾರದ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಮೋದಿ ಸರ್ಕಾರ ದೇಶದ ಜನತೆಯ ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತದೆ. ಆರೋಗ್ಯ ಸಚಿವನಾಗಿ ನನ್ನ ಕರ್ತವ್ಯ ಹಾಗೂ ಜವಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಶ್ರಮಿಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಅಷ್ಟೇ ಅಲ್ಲದೆ ಇಂದು `ವಿಶ್ವ ಬೈಸಿಕಲ್ ದಿನ’ವಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವರು ಸೈಕಲಿಂಗ್ ತಮ್ಮ ಅಚ್ಚುಮೆಚ್ಚಿನ ಕ್ರೀಡೆ ಎಂದು ಹೇಳಿಕೊಂಡಿದ್ದಾರೆ.

    ವೈದ್ಯ ಮತ್ತು ರಾಜಕಾರಣಿ ಡಾ.ಹರ್ಷವರ್ಧನ್ ಮತ್ತೊಮ್ಮೆ ಆರೋಗ್ಯ ಸಚಿವಾಲಯದ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದೆ ಮೇ 2014 ರಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಹರ್ಷವರ್ಧನ್ ನಂತರ ಮೇ 2017 ರಲ್ಲಿ ಭೂ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡಿದ್ದರು. ನಂತರ ಜೆ.ಪಿ. ನಡ್ಡ ಆರೋಗ್ಯ ಸಚಿವರಾಗಿದ್ದರು.

  • ಇಡೀ ಪ್ರಪಂಚ ನಮ್ಮತ್ತ ನೋಡುವಂತೆ ಮಾಡಿದ್ದು ಪ್ರಧಾನಿ ಮೋದಿ: ಡಾ.ಹರ್ಷವರ್ಧನ್

    ಇಡೀ ಪ್ರಪಂಚ ನಮ್ಮತ್ತ ನೋಡುವಂತೆ ಮಾಡಿದ್ದು ಪ್ರಧಾನಿ ಮೋದಿ: ಡಾ.ಹರ್ಷವರ್ಧನ್

    ಬೆಳಗಾವಿ: ಪ್ರಪಂಚದ 20 ರಾಷ್ಟ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಆದರೇ ಇಡೀ ಪ್ರಪಂಚದ ಚಿತ್ತ ಭಾರತದ ಮೇಲಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ, ಅವರು ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಭವಿಷ್ಯ ನುಡಿದಿದ್ದಾರೆ.

    ಜಿಲ್ಲೆಯಲ್ಲಿ ವೈದ್ಯರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ ಕೇಂದ್ರ ಸಚಿವರು, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಮೋದಿ ಅವರು ಇಡೀ ಪ್ರಪಂಚವೇ ನಮ್ಮತ್ತ ನೋಡುವಂತೆ ಮಾಡಿದ್ದಾರೆ. ಕಾಂಗ್ರೆಸ್‍ನಿಂದ ರಫೆಲ್ ಹಾಗೂ ಡೈರಿ ಕುರಿತ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡದಿರುವುವುದೇ ಒಳಿತು. ಕಾಂಗ್ರೆಸ್ಸಿನವರ ಬಗ್ಗೆ ಮಾತನಾಡಿ ಸಮಯ ಹಾಳುಮಾಡುವುದ್ಯಾಕೆ ಎಂದು ಟಾಂಗ್ ನೀಡಿದ್ದಾರೆ.

    ಪ್ರಧಾನಿ ಮೋದಿ ಕರ್ನಾಟಕದಿಂದ ಸ್ಪರ್ಧೆ ಮಾಡ್ತಾರೆ ಎಂಬ ವಿಚಾರ ಕೇವಲ ವದಂತಿ. ನನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಊಹಾಪೋಹಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ದೇಶದಲ್ಲಿ ಬಿಜೆಪಿ ಬಹುಮತ ಬರುವಷ್ಟು ಸೀಟುಗಳನ್ನು ಗೆಲ್ಲುತ್ತೆ. ಎಷ್ಟು ಸೀಟುಗಳು ಬರುತ್ತವೆ ಎನ್ನುವುದನ್ನು ಹೇಳುವುದಿಲ್ಲ. ಆದ್ರೆ ಕರ್ನಾಟಕದಲ್ಲಿ ಕಳೆದ ಬಾರಿಯ 17 ಸೀಟುಗಳಿಗಿಂತ ಹೆಚ್ಚು ಬಿಜೆಪಿ ಗೆಲ್ಲುತ್ತದೆ. ಕೊನೆಗಳಿಗೆಯಲ್ಲಿ ರಾಜ್ಯದಲ್ಲಿ ಕ್ಲೀನ್‍ಸ್ವಿಪ್ ಕೂಡ ಆಗಬಹುದು. ಹಾಗೆಯೇ ಪಕ್ಷದ ಶಿಸ್ತಿನ ಸಿಪಾಯಿ ಸುರೇಶ್ ಅಂಗಡಿ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ ಎಂದು ಸಂಸದ ಹರ್ಷವರ್ಧನ್ ಹೊಗಳಿದರು.