Tag: ಡಾ.ಸಿ.ಎನ್ ಅಶ್ವತ್ಥನಾರಾಯಣ

  • ಸಂಚಾರಿ ವಿಜಯ್ ಚಿಕಿತ್ಸೆ ಪೂರ್ಣ ಖರ್ಚು ಭರಿಸಲು ಮುಂದಾದ ಡಿಸಿಎಂ

    ಸಂಚಾರಿ ವಿಜಯ್ ಚಿಕಿತ್ಸೆ ಪೂರ್ಣ ಖರ್ಚು ಭರಿಸಲು ಮುಂದಾದ ಡಿಸಿಎಂ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸಂಚಾರಿ ವಿಜಯ್ ಅವರ ಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮುಂದೆ ಬಂದಿದ್ದಾರೆ.

    ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ನಟ ಸಂಚಾರಿ ವಿಜಯ್ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದೆ. ಈ ಮಧ್ಯೆ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮುಂದೆ ಬಂದು ಭರವಸೆಯನ್ನು ನೀಡಿದ್ದಾರೆ.

    ಇಂದು ಬೆಳಗ್ಗೆ ವಿಜಯ್ ಅವರು ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆಯ ಆಡಳಿತ ವರ್ಗದ ಮುಖ್ಯಸ್ಥರಿಗೆ ಖುದ್ದಾಗಿ ಕರೆ ಮಾಡಿ ವಿಜಯ್ ಅವರ ಯೋಗ-ಕ್ಷೇಮ ವಿಚಾರಿಸಿದ್ದಾರೆ. ಚಿಕಿತ್ಸೆ ಆಗುವ ಸಂಪೂರ್ಣ ವೆಚ್ಚವನ್ನು ತಮ್ಮ ನೇತೃತ್ವದ ಡಾ. ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್ ಭರಿಸುತ್ತದೆ ಎಂದು ಹೇಳಿದ್ದಾರೆ.

    ಅಪಘಾತವಾಗಿದ್ದು ಹೇಗೆ?:
    ಶನಿವಾರ ರಾತ್ರಿ ಗೆಳೆಯನ ಮನೆಯಲ್ಲಿ ಊಟ ಮಾಡಿಕೊಂಡು ಬೈಕಿನಲ್ಲಿ ನಟ ಹಿಂದಿರುಗುತ್ತಿದ್ದರು. ಗೆಳೆಯ ನವೀನ್ ಬೈಕ್ ಓಡಿಸುತ್ತಿದ್ದು, ವಿಜಯ್ ಹಿಂಬದಿಯಲ್ಲಿ ಕುಳಿತಿದ್ದರು. ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ನಟ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು.  ಇದನ್ನೂ ಓದಿ: ಸಂಚಾರಿ ವಿಜಯ್ ಕೋಮಾದಲ್ಲಿದ್ದಾರೆ, ಪರಿಸ್ಥಿತಿ ಗಂಭೀರ- ಅಪೋಲೋ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

    ವಿಜಯ್ ಬಲ ತೊಡೆ ಭಾಗ ಮುರಿದಿದ್ದು, ಮೆದುಳಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ತಲೆಗೆ ಪೆಟ್ಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದರಿಂದ ರಾತ್ರಿಯೇ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತಿದೆ. ಮೆದುಳಿನ ರಕ್ತಸ್ತ್ರಾವ ತಡೆಗೆ ಸರ್ಜರಿ ನಡೆದಿತ್ತು. ಡಾ.ಅರುಣ್.ಎಲ್.ನಾಯ್ಕ್ ಟೀಂ ಸಂಚಾರಿ ವಿಜಯ್ ಗೆ ಚಿಕಿತ್ಸೆ ನಿಡಿದ್ದರು. ಆರೋಗ್ಯದ ಮಾಹಿತಿ ನೀಡಲು ಆಸ್ಪತ್ರೆ 48 ಗಂಟೆ ಸಮಯ ಕೇಳಿತ್ತು. ಅಲ್ಲದೆ ನಟನಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ತಲೆಭಾಗಕ್ಕೆ ಬಲವಾದ ಪೆಟ್ಟು – ಸಂಚಾರಿ ವಿಜಯ್ ಬೈಕ್ ಅಪಘಾತವಾಗಿದ್ದೇಗೆ?

    ಮೂಲತಃ ರಂಗಭೂಮಿ ಕಲಾವಿದರಾಗಿರುವ ಸಂಚಾರಿ ವಿಜಯ್, ‘ನಾನು ಅವನಲ್ಲ, ಅವಳಲ್ಲ’ ಸಿನಿಮಾ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಸಿನಿಮಾ ಜೊತೆಯಲ್ಲಿ `ಉಸಿರು’ ಹೆಸರಿನ ತಂಡವನ್ನು ಕಟ್ಟಿಕೊಂಡು ಲಾಕ್‍ಡೌನ್‍ನಲ್ಲಿ ಸಂಕಷ್ಟ ಸಿಲುಕಿದವರಿಗೆ ಸಹಾಯ ಮಾಡುತ್ತಿದ್ದರು.

  • ಭಾನುವಾರವೂ ಡಿಸಿಎಂ ಲಸಿಕೆ ರೌಂಡ್ಸ್ – ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ 1,400 ಜನರಿಗೆ ಉಚಿತ ಲಸಿಕೆ

    ಭಾನುವಾರವೂ ಡಿಸಿಎಂ ಲಸಿಕೆ ರೌಂಡ್ಸ್ – ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ 1,400 ಜನರಿಗೆ ಉಚಿತ ಲಸಿಕೆ

    ಬೆಂಗಳೂರು: ಆದಷ್ಟು ಬೇಗ ಮಲ್ಲೇಶ್ವರ ಕ್ಷೇತ್ರದ ಪ್ರತಿಯೊಬ್ಬರಿಗೂ ವ್ಯಾಕ್ಷಿನೇಷನ್ ಮಾಡಿಸಬೇಕೆಂದು ಸಂಕಲ್ಪ ತೊಟ್ಟಿರುವ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಭಾನುವಾರವೂ ಬೆಳಗ್ಗೆಯಿಂದ ಇಡೀ ದಿನ ಕ್ಷೇತ್ರದ ವಿವಿಧೆಡೆ ನಡೆದ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡರು.

    ಇಂದು ಮೂರು ಕಡೆಗಳಲ್ಲಿ ಲಸಿಕೆ ಶಿಬಿರಗಳು ನಡೆದಿದ್ದು, ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್ ವತಿಯಿಂದ ಲಸಿಕೆ ಖರೀದಿ ಮಾಡಿ ಉಚಿತವಾಗಿ ಜನರಿಗೆ ನೀಡಲಾಗಿಯಿತು.

    ಅಶ್ವತ್ಥನಗರದಲ್ಲಿ 400, ನೇತಾಜಿ ವೃತ್ತದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ 500 ಹಾಗೂ ಗಾಯತ್ರಿ ದೇವಿ ಪಾರ್ಕ್‍ನಲ್ಲಿ 500 ಲಸಿಕೆಗಳನ್ನು ಬಿಪಿಎಲ್ ಕಾರ್ಡ್‍ದಾರರು, ಬಡವರು ಮತ್ತಿತರೆ ಜನರಿಗೆ ಕೊಡಲಾಯಿತು. ಈ ಮೂರು ಕಡೆ ಒಟ್ಟು 1,400 ಲಸಿಕೆಗಳನ್ನು ನೀಡಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಜತೆಗೆ, ಗುಟ್ಟಹಳ್ಳಿಯಲ್ಲೂ ಸಾರ್ವಜನಿಕರಿಗೆ ಬಿಬಿಎಂಪಿ ಕಡೆಯಿಂದ ವ್ಯಾಕ್ಸಿನ್ ಶಿಬಿರವನ್ನು ಆಯೋಜಿಸಲಾಗಿತ್ತು. ಇಲ್ಲಿಗೂ ಡಿಸಿಎಂ ಭೇಟಿ ನೀಡಿ ಪರಿಶೀಲನೆ ಮಾಡಿದರು.

    ಎಲ್ಲ ಕಡೆಗೂ ಭೇಟಿ ನೀಡಿದ್ದ ವೇಳೆ ವ್ಯಾಕ್ಸಿನ್ ನೀಡುತ್ತಿದ್ದ ಮುಂಚೂಣಿ ಕಾರ್ಯಕರ್ತರ ಯೋಗ ಕ್ಷೇಮ ವಿಚಾರಿಸುವುದರ ಜತೆಗೆ, ಲಸಿಕೆ ಪಡೆಯುತ್ತಿದ್ದ ಜನರನ್ನು ಮಾತನಾಡಿಸಿದರು. ಯಾವುದೇ ಸಮಸ್ಯೆ ಇದ್ದರೂ ತಕ್ಷಣವೇ ಕರೆ ಮಾಡುವಂತೆ ತಿಳಿಸಿದರು.

    ಲಸಿಕೆ ಪಡೆದವರು ಇದುವರೆಗೆ ಲಸಿಕೆ ಪಡೆಯದವರಿಗೆ ತಿಳಿ ಹೇಳಿ. ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಪಡೆಯಬೇಕು. ಮಾರಕ ಕಾಯಿಲೆಯಿಂದ ಪಾರಾಗಲು ಇದೊಂದೇ ಪರಿಹಾರ ಎಂದು ಡಿಸಿಎಂ ಹೇಳಿದರು.

  • ಡಿಸಿಎಂ ಭರವಸೆಯಂತೆ ಹಾಸನ ಜಿಲ್ಲೆಗೆ 10 ಕೋಟಿ ರೂ. ಬಿಡುಗಡೆ

    ಡಿಸಿಎಂ ಭರವಸೆಯಂತೆ ಹಾಸನ ಜಿಲ್ಲೆಗೆ 10 ಕೋಟಿ ರೂ. ಬಿಡುಗಡೆ

    – ಒಂದೇ ದಿನದಲ್ಲಿ 30 ವೆಂಟಿಲೇಟರ್‌ಗಳ ರವಾನೆ

    ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ನೀಡಿದ್ದ ಭರವಸೆಯಂತೆ ಕೋವಿಡ್ ನಿರ್ವಹಣೆಗಾಗಿ ರಾಜ್ಯ ಸರಕಾರ ಹೆಚ್ಚುವರಿಯಾಗಿ 10 ಕೋಟಿ ರೂ.ಗಳನ್ನು ಹಾಸನ ಜಿಲ್ಲೆಗೆ ಬಿಡುಗಡೆ ಮಾಡಿದೆ.

    ಈ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಶನಿವಾರ ಹಾಸನ ಜಿಲ್ಲೆಗೆ ಭೇಟಿ ನೀಡಿ ಕೋವಿಡ್ ಸ್ಥಿತಿ ಪರಿಶೀಲನೆ ನಡೆಸಿದ ವೇಳೆ ಜಿಲ್ಲಾಧಿಕಾರಿಗಳು ಹೆಚ್ಚುವರಿ ಬೆಡ್, ಔಷಧಿ ಖರೀದಿ ಹಾಗೂ ಖಾಸಗಿ ಲ್ಯಾಬ್‍ಗಳಲ್ಲಿ ಕೋವಿಡ್ ಸ್ಯಾಂಪಲ್ ಪರೀಕ್ಷೆಗೆ ಹಣಕಾಸು ಕೊರತೆ ಇದೆ ಎಂದು ತಿಳಿಸಿದರು. ಸೋಮವಾರ ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದೆ. ಅದರಂತೆ ಸೋಮವಾರ ಮಧ್ಯಾಹ್ನದ ಒಳಗಾಗಿಯೇ 10 ಕೋಟಿ ರೂ.ಗಳನ್ನು ಹಾಸನ ಜಿಲ್ಲೆಗೆ ಮಂಜೂರು ಮಾಡಲಾಗಿದೆ ಎಂದರು.

    ಎರಡನೇ ಅಲೆಯನ್ನು ಎದುರಿಸಲು ಮೊದಲ ಹಂತದಲ್ಲೇ ಹಾಸನಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 10 ಕೋಟಿ ರೂ. ನೀಡಲಾಗಿತ್ತು. ಈಗ ಹೆಚ್ಚುವರಿಯಾಗಿ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಡಿಸಿಎಂ ಹೇಳಿದರು.

    30 ವೆಂಟಿಲೇಟರ್:
    ಶನಿವಾರ ಹಾಸನ ಜಿಲ್ಲಾ ಸಭೆಯಲ್ಲಿ 30 ವೆಂಟಿಲೇಟರ್‌ಗಳಿಗೆ ಜಿಲ್ಲಾಡಳಿತ ಮತ್ತು ಚುನಾಯಿತ ಪ್ರತಿನಿಧಿಗಳು ಬೇಡಿಕೆ ಸಲ್ಲಿಸಿದ್ದರು. ಅವುಗಳನ್ನು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಹಾಸನಕ್ಕೆ ಕಳಿಸಿಕೊಡಲಾಯಿತು. ಕೋವಿಡ್ ಕೆಲಸದಲ್ಲಿ ರಾಜ್ಯ ಸರಕಾರ ಕ್ಷಿಪ್ರವಾಗಿ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಸೋಂಕು ನಿವಾರಣೆ ವಿಷಯದಲ್ಲಿ ಸರಕಾರ ಯಾವುದೇ ಮೀನಾಮೇಷ ಎಣಿಸುವುದಿಲ್ಲ. ಖರ್ಚು ಮಾಡಲು ಹಿಂಜರಿಯುತ್ತಿಲ್ಲ. ಯಾವುದೇ ಸೌಲಭ್ಯ ಬೇಕಿದ್ದರೂ ತಕ್ಷಣವೇ ಒದಗಿಸಲಾಗುತ್ತಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದರು.

  • ಯಲಹಂಕ ಆಸ್ಪತ್ರೆಯಲ್ಲಿ 14 ವೆಂಟಿಲೇಟರ್ ಬೆಡ್, 50 ಆಮ್ಲಜನಕ ಬೆಡ್ ವ್ಯವಸ್ಥೆ ಲೋಕಾರ್ಪಣೆ ಮಾಡಿದ ಡಿಸಿಎಂ

    ಯಲಹಂಕ ಆಸ್ಪತ್ರೆಯಲ್ಲಿ 14 ವೆಂಟಿಲೇಟರ್ ಬೆಡ್, 50 ಆಮ್ಲಜನಕ ಬೆಡ್ ವ್ಯವಸ್ಥೆ ಲೋಕಾರ್ಪಣೆ ಮಾಡಿದ ಡಿಸಿಎಂ

    ಬೆಂಗಳೂರು: ಯಲಹಂಕದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಿರುವ 14 ವೆಂಟಿಲೇಟರ್‍ಗಳ ಐಸಿಯು ಬೆಡ್ ವ್ಯವಸ್ಥೆ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ಶಾಲೆಯಲ್ಲಿ ಸ್ಥಾಪಿಸಿರುವ ಆಮ್ಲಜನಕ ಸಹಿತ 50 ಬೆಡ್‍ಗಳ ಆರೈಕೆ ಕೇಂದ್ರಕ್ಕೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೋಮವಾರ ಚಾಲನೆ ನೀಡಿದರು.

    ‘ವಿಶ್ವವಾಣಿ’ ಫೌಂಡೇಶನ್ ಹಾಗೂ ‘ಅಜೀಂ ಪ್ರೇಮ್ ಜಿ’ ಫೌಂಡೇಶನ್ ಸಹಯೋಗದಲ್ಲಿ ಈ ಕೋವಿಡ್ ಐಸಿಯು ವೆಂಟಿಲೇಟರ್ ವಾರ್ಡ್ ಸ್ಥಾಪನೆಯಾಗಿದ್ದು, ಈ ಭಾಗದ ಸೋಂಕಿತರಿಗೆ ಹೆಚ್ಚು ಅನುಕೂಲವಾಗಲಿದೆ.

    ಉದ್ಘಾಟನೆ ನಂತರ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ಟೆಕ್ನಾಲಜಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಖಾಸಗಿಯವರ ಸಹಯೋಗದಲ್ಲಿ ಉತ್ತಮ ಆರೋಗ್ಯ ಮೂಲಸೌಕರ್ಯ ಒದಗಿಸುವ ಕೆಲಸ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಆಗುತ್ತಿದೆ. ಈ ನಿಟ್ಟಿನಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪ್ರಯತ್ನ ಶ್ಲಾಘನೀಯ ಎಂದರು.

    ರಾಜ್ಯದ ಉದ್ದಗಲಕ್ಕೂ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಸರಕಾರ ಸರ್ವ ರೀತಿಯ ಕ್ರಮ ವಹಿಸಿದೆ. ಕಾಲಮಿತಿಯೊಳಗೆ ಈ ಕೆಲಸ ಮಾಡಿ ಮುಗಿಸಲಾಗುವುದು. ಸರಕಾರಿ & ಖಾಸಗಿ ಸಹಯೋಗದಲ್ಲಿ ಈ ಮಹತ್ಕಾರ್ಯವನ್ನು ಸಾಧಿಸಲಾಗುವುದು ಎಂದ ಅವರು, ಕೋವಿಡ್‍ನಂಥ ಸಾಂಕ್ರಾಮಿಕ ಮಾರಿಯನ್ನು ಎದುರಿಸಬೇಕಾದರೆ ನಮ್ಮಲ್ಲಿ ಅತ್ಯುತ್ತಮ ಗುಣಮಟ್ಟದ ವೈದ್ಯ ವ್ಯವಸ್ಥೆ ಇರಲೇಬೇಕು ಎಂದರು.

    ಯಲಹಂಕದಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಮಾತನಾಡಿ, ಕ್ಷೇತ್ರದಲ್ಲಿ ಯಾರೊಬ್ಬರೂ ಆರೋಗ್ಯ ಸೇವೆಯಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಉತ್ತಮ ರೀತಿಯ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದೇವೆ. ಕ್ಷೇತ್ರದಲ್ಲಿ ಜನಸಾಮಾನ್ಯರಿಗೂ ವೆಂಟೆಲೇಟರ್ ಸೌಲಭ್ಯ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದರ ಉಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

    ಆಸ್ಪತ್ರೆಯಲ್ಲಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ಮತ್ತು ಡಾಕ್ಡರ್ಸ್ ಫಾರ್ ಯೂ ಸಂಸ್ಥೆಯ ಸಿಬ್ಬಂದಿ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಕೋವಿಡ್ ಕೇರ್ ಕೇಂದ್ರದಲ್ಲಿ ಸೋಂಕಿತರಿಗೆ ರಿಕ್ರಿಯೇಷನ್ ಗೂ ಅವಕಾಶ ಇದ್ದು ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕ್ರಿಕೆಟ್ ಆಡುವುದರ ಮೂಲಕ ಅದಕ್ಕೂ ಚಾಲನೆ ನೀಡಿದರು. ಕ್ರಿಕೆಟ್, ವಾಲಿಬಾಲ್, ಕೇರಂ ಇತ್ಯಾದಿ ಆಟಗಳಿಗೂ ಯಲಹಂಕ ದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಿಶ್ವನಾಥ ತಿಳಿಸಿದರು.

    ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, ಆಸ್ಪತ್ರೆ ಮುಖ್ಯಸ್ಥೆ ಡಾ.ಅಸ್ಮಾ, ಡಿಎಚ್‍ಒ ಡಾ.ಶ್ರೀನಿವಾಸ್, ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ಮತ್ತು ಡಾಕ್ಟರ್ ಫಾರ್ ಯೂ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

  • 2 ಕೋಟಿ ಕೋವಿಡ್ ಲಸಿಕೆಗೆ ಜಾಗತಿಕ ಟೆಂಡರ್: ಡಿಸಿಎಂ

    2 ಕೋಟಿ ಕೋವಿಡ್ ಲಸಿಕೆಗೆ ಜಾಗತಿಕ ಟೆಂಡರ್: ಡಿಸಿಎಂ

    ಡಿಸಿಎಂ ನೇತೃತ್ವದ ಉನ್ನತ ಸಭೆಯಲ್ಲಿ ತೀರ್ಮಾನ

    – ಅಗತ್ಯ ಔಷಧಿ, RAT ಕಿಟ್‌, RTPCR ಕಿಟ್‌ ಖರೀದಿಗೆ ಸಮ್ಮತಿ

    ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ವ್ಯಾಕ್ಸಿನ್ ಬೇಡಿಕೆಯನ್ನು ಪೂರೈಸಲು ಎರಡು ಕೋಟಿ ಕೋವಿಡ್ ಲಸಿಕೆಯನ್ನು ಜಾಗತಿಕ ಟೆಂಡರ್ ಮೂಲಕ ಖರೀದಿ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

    3 ಕೋಟಿ ವ್ಯಾಕ್ಸಿನ್ ಖರೀದಿಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ 1 ಕೋಟಿ ಕೋವ್ಯಾಕ್ಸಿನ್, 2 ಕೋಟಿ ಕೋವಿಶೀಲ್ಡ್ ಲಸಿಕೆ ಸೇರಿದೆ. 18 ವರ್ಷದಿಂದ ಮೇಲ್ಪಟ್ಟು ಜನರಿಗೆ ಲಸಿಕೆ ಕೊಡಲು ಆರಂಭಿಸಿದ ನಂತರ  ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಖರೀದಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

    ಡಿಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಆಖ್ತರ್, ಔಷಧಿ ಖರೀದಿ ಉಸ್ತುವಾರಿ ಅಂಜುಂ ಪರ್ವೇಜ್, ರಾಜ್ಯ ಔಷಧ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಲತಾ ಕುಮಾರಿ, ಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ್ ಪಾಟೀಲ್ ಸಭೆಯಲ್ಲಿ ಭಾಗಿಯಾಗಿದ್ದರು.

    ಸಭೆಯ ನಂತರ ಮಾಹಿತಿ ನೀಡಿದ ಡಿಸಿಎಂ, ಈವರೆಗೂ ಕೇಂದ್ರ ಸರಕಾರ ಹಂಚಿಕೆ ಮಾಡುತ್ತಿದ್ದ ಲಸಿಕೆಯನ್ನು ಬಿಟ್ಟರೆ ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್ ಕರೆದು ಖಾಸಗಿ ಕಂಪನಿಗಳಿಂದ ಖರೀದಿ ಮಾಡಿರಲಿಲ್ಲ. ಇವತ್ತೇ ಟೆಂಡರ್ ಕರೆಯಲು ಸೂಚಿಸಲಾಗಿದ್ದು, ಯಾವ ಕಂಪನಿ ಬೇಕಾದರೂ ಟೆಂಡರ್‍ನಲ್ಲಿ ಭಾಗವಹಿಸಬಹುದು. ಏಳು ದಿನದ ಒಳಗಾಗಿ ಈ ಪ್ರಕ್ರಿಯೆ ಮುಗಿಸಿ ಟೆಂಡರ್ ಪಡೆಯುವ ಕಂಪನಿಯು ಲಸಿಕೆಯನ್ನು ಪೂರೈಕೆ ಆರಂಭಿಸಬೇಕು ಎಂದರು.

    1 ಲಕ್ಷ ಪಲ್ಸ್ ಆಕ್ಸಿ ಮೀಟರ್ ಖರೀದಿ:

    ಸೋಂಕಿತರಿಗೆ ಅಗತ್ಯವಾದ ಪಲ್ಸಾಕ್ಸಿ ಮೀಟರ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕೂಡಲೇ ಒಂದು ಲಕ್ಷ ಪಲ್ಸಾಕ್ಸಿ ಮೀಟರ್‍ಗಳನ್ನು ಖರೀದಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಅವುಗಳನ್ನು ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಹಂಚಲಾಗುವುದು. ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮತ್ತು ಸೋಂಕಿತರು ಗುಣಮುಖರಾದ ನಂತರ ವಾಪಸ್ ಪಡೆಯುವುದು ಆಯಾ ಡಿಎಚ್‍ಒ & ಟಿಎಚ್‍ಒ ಹೊಣೆ. ಈ ಮೂಲಕ ಪಲ್ಸಾಕ್ಸಿ ಮೀಟರ್ ಬ್ಯಾಂಕ್ ಮಾಡುವ ಉದ್ದೇಶ ಇದೆ ಎಂದು ಡಿಸಿಎಂ ಹೇಳಿದರು.

    ಸೋಂಕಿತರಿಗೆ ಅತ್ಯಗತ್ಯವಾಗಿ ಬೇಕಾದ ಐವರ್‍ಮೆಕ್ಟಿನ್ ಮಾತ್ರೆಯನ್ನು 10 ಲಕ್ಷ ಖರೀದಿ ಮಾಡಲಾಗಿದ್ದು, ಇದೇ 14ಕ್ಕೆ ಪೂರೈಕೆ ಶುರುವಾಗುತ್ತದೆ. ಅಲ್ಲದೆ, ಇನ್ನೂ 25 ಲಕ್ಷ ಮಾತ್ರೆ ಖರೀದಿಸುವಂತೆ ಸೂಚಿಸಿದ್ದೇನೆ. ಇದು ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಲಭ್ಯ ಇರಬೇಕು. ಜತೆಗೆ, 35 ಲಕ್ಷ ಜಿಂಕ್ ಟ್ಯಾಬ್ಲೆಟ್ ಹಾಗೂ ಒಂದು ಕೋಟಿ ಕಾಲ್ಸಿಚಿನ್ ಮಾತ್ರೆಗಳನ್ನೂ ಕೂಡಲೇ ಖರೀದಿ ಮಾಡಲು ನಿರ್ಧರಿಸಲಾಗಿದೆ. ಈ ಎಲ್ಲ ಔಷಧಿಗಳು ರಾಜ್ಯದ ಎಲ್ಲ ಜಿಲ್ಲಾ, ತಾಲೂಕು, ಆಸ್ಪತ್ರೆ ಹಾಗೂ ಪ್ರಾಥಮಿಕ & ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

    ಈಗ 10.50 ಲಕ್ಷ ರಾಟ್ ಕಿಟ್ ಇವೆ, ಇನ್ನೂ ವಾರಕ್ಕೆ ಆಗುತ್ತವೆ. ಈಗ ದಿನಕ್ಕೆ 50 ಸಾವಿರದಂತೆ ಪೂರೈಕೆ ಆಗುತ್ತಿವೆ. ಜತೆಗೆ, 37 ಲಕ್ಷ ಆರ್‍ಟಿಪಿಸಿಆರ್ ಕಿಟ್‍ಗಳನ್ನೂ ಖರೀದಿ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

    ರೆಮಿಡಿಸಿವರ್ ಸರಬರಾಜು ಮಾಡದ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ:

    ಇದೇ ವೇಳೆ ಮುಖ್ಯ ಕಾರ್ಯದರ್ಶಿಗಳ ಜತೆ ಮಾತನಾಡಿದ ಡಿಸಿಎಂ ಅವರು, ನೊಟೀಸ್ ಕೊಟ್ಟರೂ ಸಕಾಲಕ್ಕೆ ರೆಮಿಡಿಸಿವರ್ ಪೂರೈಕೆ ಮಾಡದ ಕಂಪನಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರನ್ನು ದಾಖಲು ಮಾಡಿಕೊಳ್ಳುವ ಮುನ್ನ ಭೌತಿಕ ಪರೀಕ್ಷೆ ನಡೆಸಿಯೇ ದಾಖಲು ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಗಂಭೀರ ಸೋಂಕಿತರಿಗೆ ಹಾಸಿಗೆಗಳು ಸಿಗುತ್ತವೆ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

    ಲಸಿಕೆಗಾಗಿ ಹಳ್ಳಿಗಳಿಗೆ ಹೋಗುವುದು ಬೇಡ:

    ನಗರದ ಜನರು ಲಸಿಕೆ ಪಡೆಯಲು ಗ್ರಾಮೀಣ ಪ್ರದೇಶಕ್ಕೆ ಹೋಗುವುದು ಬೇಡ. ಅವರು ನಗರದಲ್ಲೇ ಲಸಿಕೆ ಪಡೆಯಲಿ. ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆ ಮಾಡಲು ಎಲ್ಲ ಕ್ರಮ ವಹಿಸಲಾಗಿದೆ ಎಂದ ಡಿಸಿಎಂ, ಈ ಬಗ್ಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಮಾಹಿತಿ ನೀಡಿದರು.

  • ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಕೋವಿಡ್ ಲಸಿಕೆ ತಯಾರಿ- ಅಶ್ವತ್ಥನಾರಾಯಣ

    ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಕೋವಿಡ್ ಲಸಿಕೆ ತಯಾರಿ- ಅಶ್ವತ್ಥನಾರಾಯಣ

    – ಆವಿಷ್ಕಾರ, ನವೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ
    – ಫ್ರಾನ್ಸ್ ನಡುವೆ ಮಹತ್ವದ ಒಪ್ಪಂದ
    – ಫ್ರೆಂಚ್ ವಿದೇಶಾಂಗ ಸಚಿವರ ಜೊತೆ ಡಿಸಿಎಂ ಮಾತುಕತೆ

    ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ನಮ್ಮ ಜನರನ್ನು ರಕ್ಷಣೆ ಮಾಡಿಕೊಳ್ಳಲು ಭಾರತವು ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಇನ್ನು ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಲಸಿಕೆಗಳನ್ನು ಉತ್ಪಾದನೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ (KITS) ಮತ್ತು ಇಂಡೋ- ಫ್ರೆಂಚ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ (IFCCI) ನಡುವೆ ಏರ್ಪಟ್ಟ ಒಪ್ಪಂದದ ವೇಳೆ ಮಾತನಾಡಿದ ಅಶ್ವತ್ಥನಾರಾಯಣ ಅವರು, “ಸದ್ಯಕ್ಕೆ ಮಾಸಿಕ 7 ಕೋಟಿ ಕೋವಿಡ್ ಲಸಿಕೆಯನ್ನು ಉತ್ಪಾದನೆ ಮಾಡುತ್ತಿದೆ. ಇದಕ್ಕೆ ಇನ್ನೂ 10 ಕೋಟಿ ಲಸಿಕೆ ಸೇರಲಿದೆ. ತದ ನಂತರ ಕರ್ನಾಟಕವೂ ಸೇರಿ ದೇಶಾದ್ಯಂತ ಲಸಿಕೆ ಅಭಿಯಾನ ಮತ್ತಷ್ಟು ವೇಗಗೊಳ್ಳಲಿದೆ. ಇದರ ಜತೆ ಮತ್ತಷ್ಟು ಹೊಸ ಲಸಿಕೆಗಳು ಕೂಡ ಬರಲಿವೆ. ಅವು ರಾಜ್ಯಕ್ಕೂ ಲಭ್ಯವಾಗಲಿವೆ” ಎಂದರು.

    ಕೋವಿಡ್ ಮತ್ತಿತರೆ ಜಾಗತಿಕ ಸವಾಲುಗಳ ನಡುವೆಯೂ ಕರ್ನಾಟಕದಲ್ಲಿ ವಿದೇಶಿ ಹೂಡಿಕೆ ಮೇಲ್ಮುಖವಾಗಿಯೇ ಇದೆ. ಅದಕ್ಕೂ ಮೊದಲು, ಅಂದರೆ, 2000ರಿಂದ 2019ರವರೆಗೆ ರಾಜ್ಯಕ್ಕೆ 49.7 ಶತಕೋಟಿ ಡಾಲರ್ ವಿದೇಶಿ ಹೂಡಿಕೆ ಹರಿದುಬಂದಿದೆ. ವಿದೇಶಿ ಹೂಡಿಕೆ ಒಳಹರಿವಿನಲ್ಲಿ ರಾಜ್ಯವು ಮಹಾರಾಷ್ಟ್ರ ಮತ್ತು ನವದೆಹಲಿಯ ನಂತರ ಮೂರನೇ ಅಗ್ರರಾಜ್ಯವಾಗಿದೆ. ಕೋವಿಡ್‍ಗೂ ಮೊದಲು ಕರ್ನಾಟಕ ಹೂಡಿಕೆ ಅತ್ಯುತ್ತಮ ತಾಣವಾಗಿತ್ತು. ಅದೇ ರೀತಿ ಕೋವಿಡ್ಡೋತ್ತರ ಕಾಲದಲ್ಲಿಯೂ ಹೂಡಿಕೆಗೆ ಪ್ರಶಸ್ತ್ಯ ನೆಲೆಯಾಗಿದೆ ಎಂದು ನುಡಿದರು.

    ಮಾಹಿತಿ ತಂತ್ರಜ್ಞಾನ (ಐಟಿ) ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಕರ್ನಾಟಕ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತದ ಐಟಿ ರಫ್ತಿಗೆ ಕರ್ನಾಟಕ ಅತಿದೊಡ್ಡ ಕೊಡುಗೆ ಶೇ.40ರಷ್ಟಿ ಇದೆ. ಇದು ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗಿಂತ ಹೆಚ್ಚು ಹಾಗೂ ಅದರಲ್ಲಿ ಕರ್ನಾಟಕ ಮತ್ತಿತರೆ ರಾಜ್ಯಗಳ ನಡುವೆ ಭಾರೀ ಅಂತರವಿದೆ. ಕೈಗಾರಿಕೆ, ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿ ಇತ್ಯಾದಿ ಕ್ಷೇತ್ರಗಳಲ್ಲಿ ಕರ್ನಾಟಕವು ಅತ್ಯಂತ ಸಮೃದ್ಧ ರಾಜ್ಯವಾಗಿದೆ. ಒಟ್ಟು ದೇಶಿಯ ಉತ್ಪನ್ನದಲ್ಲಿ (GSDP) 220 ಶತಕೋಟಿ ಡಾಲರ್ ಹೊಂದಿದೆ. ಮುಖ್ಯವಾಗಿ ಐಟಿ, ಬಿಟಿ, ಇಎಸ್‍ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ) ಮತ್ತು ಎವಿಜಿಸಿ (ಆನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ಮುಂತಾದ ಕ್ಷೇತ್ರಗಳಿಗಾಗಿ ಪ್ರತ್ಯೇಕ ನೀತಿಗಳನ್ನೂ ರೂಪಿಸಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ತಿಳಿಸಿದರು.

    ಈ ಒಪ್ಪಂದ ಬಹಳ ಮಹತ್ವದ್ದು:
    ಮೊದಲಿನಿಂದಲೂ ಭಾರತ ಮತ್ತು ಫ್ರಾನ್ಸ್ ಸಹಜ ಪಾಲುದಾರ ದೇಶಗಳಾಗಿವೆಯಲ್ಲದೆ ಸಾಂಸ್ಕೃತಿಕ, ಆರ್ಥಿಕ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಎರಡೂ ದೇಶಗಳು ನಿಕಟವಾಗಿ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಫ್ರಾನ್ಸ್ ಬಹಳ ನಿಕಟವಾಗಿ ಕೆಲಸ ಮಾಡುತ್ತಿವೆ. ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ (KITS)ಮತ್ತು ಇಂಡೋ-ಫ್ರೆಂಚ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ (IFCCI) ನಡುವೆ ಏರ್ಪಟ್ಟ ಒಪ್ಪಂದ ಅತ್ಯಂತ ಮಹತ್ವಪೂರ್ಣವಾಗಿದೆ. ಈ ಒಪ್ಪಂದದ ಮೂಲಕ ಭಾರತ ಮತ್ತು ಫ್ರಾನ್ಸ್ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಕರ್ನಾಟಕದ ಪಾತ್ರ ಮುನ್ನೆಲೆಗೆ ಬಂದಂತೆ ಆಗಿದೆ. ತಂತ್ರಜ್ಞಾನ, ಸ್ಟಾರ್ಟ್ ಆಪ್ ಇನ್ನಿತರೆ ಕ್ಷೇತ್ರಗಳಲ್ಲಿ ರಾಜ್ಯವು ಫ್ರಾನ್ಸ್ ಜತೆ ಮತ್ತಷ್ಟು ನಿಕಟವಾಗಿ ಕೆಲಸ ಮಾಡಲಿದೆ. ಒಪ್ಪಂದವು ಎರಡೂ ದೇಶಗಳ ನಡುವಿನ ನಾವೀನ್ಯತಾ ಸಹಯೋಗದ ಬೆಳವಣಿಗೆಗೆ ಪ್ರಮುಖ ಮೈಲಿಗಲ್ಲು. ಈ ಒಪ್ಪಂದವು ಎರಡೂ ದೇಶಗಳ ಉದ್ಯಮಶೀಲತೆ ಮತ್ತು ಆವಿಷ್ಕಾರದ ಹಿನ್ನೆಲೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.

    ಒಪ್ಪಂದಕ್ಕೆ ಐಟಿ ಇಲಾಖೆ ನಿರ್ದೇಶಕ ಗೋಪಾಲಕೃಷ್ಣ ಮತ್ತು ಇಂಡೋ-ಫ್ರೆಂಚ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟದ ಯಹೋನನ್ ಸ್ಯಾಮ್ಯುಯಲ್ ಅಂಕಿತ ಹಾಕಿದರು. ಒಪ್ಪಂದ ಏರ್ಪಡುವುದಕ್ಕೂ ಮುನ್ನ ಡಿಸಿಎಂ ಡಾ.ಅಶ್ವತ್ಥನಾರಾಯಣ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಅವರು ಫ್ರಾನ್ಸ್ ನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜೀನ್ ವಿಯಾಸ್ ಲೆ ಡ್ರಿಯಾನ್ ಹಾಗೂ ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಇಮ್ಯಾನ್ಯುಯಲ್ ಲೆನಿಯಾನ್, ಬೆಂಗಳೂರು ಫ್ರಾನ್ಸ್ ರಾಯಭಾರ ಕಚೇರಿಯ ಕಾನ್ಸುಲೇಟ್ ಜನರಲ್ ಮಾರ್ಜೋರಿ ವ್ಯಾನ್‍ಬೆಲಿಂಗ್ಹೆಮ್ ಜತೆ ಮಾತುಕತೆ ನಡೆಸಿದರು. ಕಾರ್ಯಕ್ರಮದಲ್ಲಿ ಐಟಿ ಇಲಾಖೆಯ ಪ್ರಧಾನ ವ್ಯವಸ್ಥಾಪಕಿ ಚಂಪಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಆನ್ ಲೈನ್ ತರಗತಿಗಳು ಇರುತ್ತವೆ, ಆದರೆ ಆನ್ ಲೈನ್ ಪರೀಕ್ಷೆ ಸಾಧ್ಯವಿಲ್ಲ: ಅಶ್ವತ್ಥನಾರಾಯಣ

    ಆನ್ ಲೈನ್ ತರಗತಿಗಳು ಇರುತ್ತವೆ, ಆದರೆ ಆನ್ ಲೈನ್ ಪರೀಕ್ಷೆ ಸಾಧ್ಯವಿಲ್ಲ: ಅಶ್ವತ್ಥನಾರಾಯಣ

    ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷ 2021-22ರಲ್ಲಿ ಮೊದಲು ಆನ್ ಲೈನ್ ತರಗತಿಗಳನ್ನು ಆರಂಭ ಮಾಡಲಾಗುವುದು. ಆದರೆ, ಆನ್ ಲೈನ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಸೋಮವಾರ ಕೋವಿಡ್ ಹಿನ್ನಲೆಯಲ್ಲಿ ನಡೆದ ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಆನ್ ಲೈನ್ ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿಗಳ ಪೋಷಕರು ಬೇಡಿಕೆ ಇಡುತ್ತಿದ್ದಾರೆ. ನಮ್ಮ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಪರೀಕ್ಷೆ ಏನಿದ್ದರೂ ಆಫ್ ಲೈನ್‍ನಲ್ಲಿ ನಡೆಯುತ್ತದೆ. ಕೆಲ ವಿಶ್ವವಿದ್ಯಾಲಯಗಳು ಆನ್ ಲೈನ್ ಪರೀಕ್ಷೆ ಮಾಡಿಕೊಳ್ಳುತ್ತಿವೆ. ನಮ್ಮಲ್ಲಿ ಮಾತ್ರ ಇದಕ್ಕೆ ಅವಕಾಶವಿಲ್ಲ ಎಂದಿದ್ದಾರೆ.

    ಸದ್ಯಕ್ಕೆ ಬಸ್ ಮುಷ್ಕರದಿಂದ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಎಂಜಿನಿಯರಿಂಗ್ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಕೊಂಚ ವ್ಯತ್ಯಯವಾಗಿದೆ. ಮುಷ್ಕರ ನಿಂತ ಕೂಡಲೇ ಪರೀಕ್ಷೆಗಳು ಶುರುವಾಗುತ್ತವೆ ಎಂದಿದ್ದಾರೆ.

    ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ಆಫ್ ಲೈನ್ ತರಗತಿಗಳನ್ನೂ ಆರಂಭ ಮಾಡಲಾಗುವುದು. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆಫ್ ಲೈನ್ ಅಥವಾ ಆನ್ ಲೈನ್ ಕ್ಲಾಸ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹದು. ಆದರೆ, ಎರಡರಲ್ಲಿ ಯಾವುದಾದರೂ ಒಂದರಲ್ಲಿ ಹಾಜರಾತಿ ಕಡ್ಡಾಯ ಎಂದು ತಿಳಿಸಿದ್ದಾರೆ.

  • ಕೇರಳದ ಮಲಂಕರ ಮಾರ್ಥೋಮ ಸಿರಿಯನ್ ಚರ್ಚ್ ಮುಖ್ಯಸ್ಥರ ಜೊತೆ ಡಿಸಿಎಂ ಸೌಹಾರ್ದ ಮಾತುಕತೆ

    ಕೇರಳದ ಮಲಂಕರ ಮಾರ್ಥೋಮ ಸಿರಿಯನ್ ಚರ್ಚ್ ಮುಖ್ಯಸ್ಥರ ಜೊತೆ ಡಿಸಿಎಂ ಸೌಹಾರ್ದ ಮಾತುಕತೆ

    ತಿರುವನಂತಪುರ: ಕೇರಳ ಬಿಜೆಪಿ ಸಹ ಉಸ್ತುವಾರಿ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಇಂದು ತಿರುವಲ್ಲಾದಲ್ಲಿರುವ ಮಲಂಕರ ಮಾರ್ಥೋಮ ಸಿರಿಯನ್ ಚರ್ಚ್‍ನ ಮುಖ್ಯಸ್ಥರಾದ ರೆವರೆಂಡ್ ಫಾದರ್ ಡಾ. ಥಿಯೋಡೋಶಿಯಸ್ ಮಾರ್ ಥೋಮಾ ಅವರನ್ನು ಭೇಟಿಯಾಗಿ ಸೌಹಾರ್ದ ಮಾತುಕತೆ ನಡೆಸಿದರು.

    ಕ್ಯಾಥೋಲಿಕರ ಪವಿತ್ರ ಪ್ರಾರ್ಥನಾ ಸ್ಥಳವಾದ ಈ ಚರ್ಚ್ ಕೇರಳದ ಕ್ರೈಸ್ತರ ಪಾಲಿಗೆ ಬಹುಮುಖ್ಯ ಶ್ರದ್ಧಾ ಕೇಂದ್ರವಾಗಿದ್ದು, ಅಶ್ವತ್ಥನಾರಾಯಣ ಅವರು ಕೆಲ ಕಾಲ ಫಾದರ್ ಡಾ.ಥಿಯೋಡೋಶಿಯಸ್ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

    ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, “ರಾಜಕೀಯ ಉದ್ದೇಶದಿಂದ ಈ ಚರ್ಚ್‍ಗೆ ಬಂದಿಲ್ಲ. ಪ್ರಸ್ತುತ ನಾನು ಕೇರಳ ಬಿಜೆಪಿ ಸಹ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಈ ಮೊದಲೇ ಚರ್ಚ್ ಬಗ್ಗೆ ಕೇಳಿದ್ದೆ. ಈಗ ಇಲ್ಲಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದೆ ಎಂದರು.

    ಇದು ವಿಶ್ವದ ಪ್ರಾಚೀನ ಚರ್ಚ್‍ಗಳಲ್ಲಿ ಒಂದಾಗಿದೆ. ಯೇಸುಕ್ರಿಸ್ತರ ಶಿಷ್ಯರಾಗಿದ್ದ ಸಂತ ಥಾಮಸ್ (ಸಿರಿಯಾಕ್‍ನಲ್ಲಿ ಮಾರ್ ಥೋಮಾ) ಕ್ರಿ.ಶ 52ರಲ್ಲಿ ಭಾರತಕ್ಕೆ ಬಂದು ಮಲಬಾರ್ ಕರಾವಳಿಯಲ್ಲಿ ಈ ಚರ್ಚ್‍ನ್ನು ಸ್ಥಾಪಿಸಿದರೆಂದು ಫಾದರ್ ತಿಳಿಸಿದರು. ಹೀಗಾಗಿ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಚಟುವಟಿಕೆಗಳನ್ನು ನೋಡಿ ಸಂತೋಷವಾಗಿದೆ ಎಂದು ಅಶ್ವತ್ಥನಾಯಣ ಅವರು ಹೇಳಿದರು.

    ಇಲ್ಲಿನ ಶಿಸ್ತು, ಸೇವಾ ಮನೋಭಾವ ಕಂಡು ನನಗೆ ಅಚ್ಚರಿ ಉಂಟಾಯಿತು. ಪ್ರತಿಯೊಂದು ಕೆಲಸವನ್ನು ಅತ್ಯಂತ ಕರಾರುವಕ್ಕಾಗಿ, ಉದ್ದೇಶ ಸಾಕಾರಕ್ಕಾಗಿ ಎಲ್ಲರೂ ಪ್ರಯತ್ನ ಮಾಡುತ್ತಾರೆ. ಇದು ಅನುಕರಣೀಯ ಎಂದು ಅಭಿಪ್ರಾಯಪಟ್ಟರು.