Tag: ಡಾ.ಸಿ.ಎನ್ ಅಶ್ವತ್ಥನಾರಾಯಣ

  • ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’

    ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’

    ಬೆಂಗಳೂರು: ಪಾಠ-ಪ್ರವಚನಗಳಲ್ಲಿ ಬೋಧಕರಿಗೂ ವಿದ್ಯಾರ್ಥಿಗಳಿಗೂ ಸಹಕರಿಸಿ, ಕಲಿಕೆಯನ್ನು ಸುಲಭವಾಗಿಸುವಂತಹ `ಈಗಲ್’ ರೋಬೋ ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬುಧವಾರದಂದು ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

    ಕ್ಷೇತ್ರದ ಶಾಸಕರಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಶಾಲೆಯ ಬೋಧಕರು ಮತ್ತು ವಿದ್ಯಾರ್ಥಿನಿಯರು ಇದರಲ್ಲಿ ಪಾಲ್ಗೊಂಡು, ರೋಬೋ ಕಾರ್ಯಕ್ಷಮತೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ರೋಬೋಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಹಾಗೆಯೇ, ಅದು ನೀಡಿದ ಉತ್ತರ ನೆರವನ್ನು ಕಂಡು ಬೆರಗಾದರು. ಇದನ್ನೂ ಓದಿ: ಮಲ್ಲೇಶ್ವರಂ 18ನೇ ಅಡ್ಡರಸ್ತೆ ಮೈದಾನದಲ್ಲಿ ವಾಕಿಂಗ್ ಪಥ ನಿರ್ಮಾಣ ಇಲ್ಲ: ಅಶ್ವತ್ಥನಾರಾಯಣ

    ರೋಬೋ ಬೋಧನೆ ನಂತರ ಮಾತನಾಡಿದ ಅಶ್ವತ್ಥನಾರಾಯಣ ಅವರು, ಇದು ಪ್ರಾಯೋಗಿಕ ಕಾರ್ಯಕ್ರಮವಾಗಿದ್ದು, ರೋಬೋದ ಕಾರ್ಯ ಸಾಮಥ್ರ್ಯವನ್ನು ವೀಕ್ಷಿಸಲಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಯ ಸಲುವಾಗಿ, ಇಂತಹ ರೋಬೋಗಳು ಇದ್ದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

    ರೋಬೋ ಶಿಕ್ಷಕರಿಗೆ ಪರ್ಯಾಯ ಅಲ್ಲ. ಆದರೆ ಶಿಕ್ಷಕರಿಗೆ ಬೋಧನೆಯಲ್ಲಿ ಸಹಕರಿಸುವ ಕೆಲಸ ಮಾಡಲಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಕೂಡ ಹೆಚ್ಚಾಗಲಿದೆ ಎಂದು ಹೇಳಿದರು.

    21ನೇ ಶತಮಾನವು ತಂತ್ರಜ್ಞಾನದ ಯುಗವಾಗಿದ್ದು, ಬೋಧನೆಯಲ್ಲಿ ಇದರ ಅಳವಡಿಕೆ ಅಗತ್ಯವಾಗಿದೆ. ಇದರಿಂದಾಗಿ, ಸರ್ಕಾರಿ ಶಾಲಾ-ಕಾಲೇಜುಗಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿಮೆಯಿಲ್ಲದಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಬಹುದು. ಇದರಿಂದ ಬಡಕುಟುಂಬಗಳ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನುಡಿದರು.

    ಮುಂದಿನ ದಿನಗಳಲ್ಲಿ `ಈಗಲ್’ ರೋಬೋವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ತೋರಿಸಲಾಗುವುದು. ನಂತರ ಅವರಿಂದಲೇ ಈ ಯೋಜನೆಗೆ ಚಾಲನೆ ಕೊಡಿಸುವ ಉದ್ದೇಶ ಇದೆ. ಮಲ್ಲೇಶ್ವರ ಕ್ಷೇತ್ರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಜಾರಿ ಮಾಡುವ ಉದ್ದೇಶ ಇದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!

    ಇಂಡಸ್ ಟ್ರಸ್ಟ್‌ನ ಸ್ಥಾಪಕ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಲೆ.ಜನರಲ್ ಅರ್ಜುನ್ ರಾಯ್, ಮಲ್ಲೇಶ್ವರ ಬಿಇಒ ಉಮಾದೇವಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ, ಶಾಲೆ ಉಪ ಪ್ರಾಂಶುಪಾಲ ರವಿಕುಮಾರ್ ಈ ಸಂದರ್ಭದಲ್ಲಿ ಇದ್ದರು.

     

  • ಹಿಜಬ್ ಪರ ವಾದಿಗಳ ಬೆದರಿಕೆಗೆ ಸರ್ಕಾರ ಮಣಿಯದು: ಅಶ್ವತ್ಥನಾರಾಯಣ

    ಹಿಜಬ್ ಪರ ವಾದಿಗಳ ಬೆದರಿಕೆಗೆ ಸರ್ಕಾರ ಮಣಿಯದು: ಅಶ್ವತ್ಥನಾರಾಯಣ

    ರಾಮನಗರ: ಮೊದಲಿಗೆ ನಾವು ಭಾರತೀಯರು ಮತ್ತು ಕನ್ನಡಿಗರು. ಆದ್ದರಿಂದ ಪ್ರತಿಯೊಬ್ಬರೂ ಇಲ್ಲಿ ಇದನ್ನು ಅರಿತು ನಡೆಯಬೇಕು. ಹಿಜಬ್ ವಿಚಾರದಲ್ಲಿ ನ್ಯಾಯಾಲಯವು ತಮಗೆ ಬೇಕಾದಂತೆ ತೀರ್ಪು ಕೊಡಬೇಕಿತ್ತು ಎನ್ನುವ ಮೊಂಡು ವಾದ ಸರಿಯಲ್ಲ. ಇಂತಹ ಬೆದರಿಕೆಗಳಿಗೆಲ್ಲ ಸರ್ಕಾರ ಮಣಿಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಹಿಜಬ್ ತೀರ್ಪಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತ್ಯಂತ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಉಡುಪುಗಳನ್ನು ನಿಷೇಧಿಸಲಾಗಿದೆ. ಇಷ್ಟಕ್ಕೂ ಶಾಲೆಗಳಲ್ಲಿ ಸಮವಸ್ತ್ರ ನಿಯಮವನ್ನು ತಂದಿದ್ದು ಬಿಜೆಪಿಯಲ್ಲ. ಹಿಜಬ್ ಪರ ಮಾತನಾಡುತ್ತಿರುವವರು ನಮ್ಮ ಪಕ್ಷಗಳೇ ಇದನ್ನೆಲ್ಲ ತಂದಿದೆ ಎಂದು ನಂಬಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ

    ನಮ್ಮಲ್ಲಿ ಯಾವುದೇ ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲರೂ ಅವರವರ ಅಭಿಪ್ರಾಯ ಹೇಳಬಹುದು. ಬೇಕಿದ್ದವರು ಸುಪ್ರೀಂ ಕೋರ್ಟಿಗೆ ಹೋಗಲಿ. ಆದರೆ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

    ಸಮವಸ್ತ್ರದ ವಿಚಾರದಲ್ಲಿ ಸರ್ಕಾರವು ಹಿಜಬ್ ಮತ್ತು ಕೇಸರಿ ಶಾಲು ಎರಡನ್ನೂ ದೂರವಿಟ್ಟಿದೆ. ನ್ಯಾಯಾಲಯ ಕೂಡ ವಿಚಾರವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ವಿವೇಚನೆಯ ತೀರ್ಪು ಕೊಟ್ಟಿದೆ. ಹಿಜಬ್ ಕಡ್ಡಾಯವೆಂದು ಕುರಾನಿನಲ್ಲಿ ಕೂಡ ಹೇಳಿಲ್ಲ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯದತ್ತ ಗಮನ ಕೊಡಬೇಕು. ಜೊತೆಗೆ ಎಲ್ಲರೂ ಸೌಹಾರ್ದದಲ್ಲಿ ನಂಬಿಕೆ ಇಡಬೇಕು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕರೀನಾ ಕಪೂರ್ ಕಮ್ ಬ್ಯಾಕ್ – ಜಪಾನಿ ಲೇಖಕನ ಕೃತಿಗೆ ಮಿಲ್ಕಿ ಬ್ಯೂಟಿ ಹೀರೋಯಿನ್

  • ಡಿಜಿಟಲೀಕರಣದಲ್ಲಿ ಭಾರತ ಅಮೆರಿಕಕ್ಕೂ ಮಾದರಿ: ಅಶ್ವತ್ಥನಾರಾಯಣ

    ಡಿಜಿಟಲೀಕರಣದಲ್ಲಿ ಭಾರತ ಅಮೆರಿಕಕ್ಕೂ ಮಾದರಿ: ಅಶ್ವತ್ಥನಾರಾಯಣ

    ಬೆಂಗಳೂರು: ಹಲವು ಇತಿಮಿತಿಗಳ ನಡುವೆಯೂ ಭಾರತದಲ್ಲಿ ಆಗಿರುವಷ್ಟು ಡಿಜಿಟಲೀಕರಣ ಪ್ರಪಂಚದ ಬೇರಾವ ದೇಶದಲ್ಲೂ ಆಗಿಲ್ಲ. ಈ ವಿಷಯದಲ್ಲಿ ದೇಶವು ಅಮೆರಿಕದಂತಹ ದೈತ್ಯರಾಷ್ಟ್ರಕ್ಕೂ ಮಾದರಿಯಾಗಿದ್ದು, ಇವತ್ತು ಇಡೀ ವಿಶ್ವವೇ ನಮ್ಮನ್ನು ಅನುಸರಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಎಫ್‌.ಕೆ.ಸಿ.ಸಿ.ಐ ಏರ್ಪಡಿಸಿದ್ದ 14ನೇ ವರ್ಷದ ಮಂಥನ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ದೇಶದಲ್ಲಿ ಅನಕ್ಷರತೆ, ಬಡತನ ಮತ್ತು ಮೂಲಸೌಲಭ್ಯಗಳ ಕೊರತೆ ಇನ್ನೂ ಇದೆ. ಇವೆಲ್ಲವನ್ನೂ ಕಿತ್ತೊಗೆಯಬೇಕೆಂದರೆ ತಂತ್ರಜ್ಞಾನಕ್ಕಿಂತ ಅತ್ಯುತ್ತಮ ಸಾಧನ ಇನ್ನೊಂದಿಲ್ಲ. ಇದನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲೀಕರಣದ ಕ್ರಾಂತಿಯನ್ನೇ ಸಾಧಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

    ಇಂದು ಬೆಂಗಳೂರು ಉದ್ಯಮಶೀಲತೆ, ತಂತ್ರಜ್ಞಾನ, ನವೋದ್ಯಮ, ನಾವೀನ್ಯತೆ, ಆವಿಷ್ಕಾರ ರಂಗಗಳಲ್ಲಿ ಜಗತ್ತಿನ ಅಗ್ರಮಾನ್ಯ 30 ನಗರಗಳಲ್ಲಿ ಒಂದಾಗಿದೆ. ದೇಶದಲ್ಲಂತೂ ಬೆಂಗಳೂರನ್ನು ಉಳಿದ ನಗರಗಳು ಅನುಸರಿಸುತ್ತಿವೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ನಾವೀನ್ಯತಾ ಪ್ರಾಧಿಕಾರ ರಚನೆ ಸೇರಿದಂತೆ ಹತ್ತು‌ ಹಲವು ಉಪಕ್ರಮಗಳನ್ನು ಜಾರಿಗೆ ತಂದಿದ್ದು, ಉದ್ದಿಮೆಗಳ ಬೆಳವಣಿಗೆಗೆ ನಿರ್ಣಾಯಕ ಸಹಕಾರ ನೀಡುತ್ತಿದೆ ಎಂದರು. ಇದನ್ನೂ ಓದಿ: ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್

    ಸಬ್ಸಿಡಿ, ಸಾಲ, ರಿಯಾಯಿತಿ ಮತ್ತು ವಿನಾಯಿತಿಗಳ ಆಧಾರದ ಮೇಲೆ ಉದ್ದಿಮೆಗಳನ್ನು ಬೆಳೆಸಲು ಸಾಧ್ಯವಿಲ್ಲ. ಜಾಗತಿಕ ಸ್ಪರ್ಧೆಯ ಈ ದಿನಮಾನದಲ್ಲಿ ಅತ್ಯುತ್ತಮ ಗುಣಮಟ್ಟವೊಂದೇ ನಮ್ಮ ಅಸ್ತಿತ್ವಕ್ಕೆ ಆಧಾರವಾಗಿದೆ. ಈಗ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ದಾರಿದೀಪವಾಗಿದೆ ಎಂದು ತಿಳಿಸಿದರು.

  • ಅತಿಥಿ ಉಪನ್ಯಾಸಕರ ಬೇಡಿಕೆ, ಒಂದೆರಡು ದಿನದಲ್ಲಿ ಸಿಹಿಸುದ್ದಿ-ಅಶ್ವಥ್ ನಾರಾಯಣ

    ಅತಿಥಿ ಉಪನ್ಯಾಸಕರ ಬೇಡಿಕೆ, ಒಂದೆರಡು ದಿನದಲ್ಲಿ ಸಿಹಿಸುದ್ದಿ-ಅಶ್ವಥ್ ನಾರಾಯಣ

    ಬೆಂಗಳೂರು: ರಾಜ್ಯದಲ್ಲಿರುವ 14 ಸಾವಿರ ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಸಾಕಷ್ಟು ಚರ್ಚಿಸಿದ್ದು, ಒಂದೆರಡು ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಆದ್ದರಿಂದ ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಟ್ಟು, ಬೋಧನೆಗೆ ಹಿಂದಿರುಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆ ಮತ್ತು ಸಮಸ್ಯೆಗಳನ್ನು ಕುರಿತು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಚೇರಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ತಮ್ಮ ನೇತೃತ್ವದಲ್ಲಿ ಮಂಗಳವಾರ ನಡೆದ ಮೂರು ತಾಸುಗಳ ಸಭೆಯ ನಂತರ ಅವರು ಈ ಭರವಸೆ ನೀಡಿದರು. ಸಭೆಯಲ್ಲಿ ಉಪನ್ಯಾಸಕರಿಗೆ ಸಂಬಂಧಿಸಿದ ನಾಲ್ಕೈದು ಸಂಘಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು.

    ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ತಿನ ಹಲವು ಸದಸ್ಯರೊಂದಿಗೆ ವಿಷಯವನ್ನು ಕುರಿತು ಚರ್ಚಿಸಲಾಯಿತು. ಜೊತೆಗೆ ಅತಿಥಿ ಉಪನ್ಯಾಸಕರ ಸಂಘಗಳ ಪರವಾಗಿ ಸಲ್ಲಿಸಿದ ಅಹವಾಲುಗಳನ್ನು ಕೂಡ ಪರಿಶೀಲಿಸಲಾಯಿತು. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!

    ನಂತರ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು. ಸಿಎಂ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಕಾರಣ ಒಂದೆರಡು ದಿನಗಳಲ್ಲಿ ಸೂಕ್ತ ತೀರ್ಮಾನ ಪ್ರಕಟಿಸಲಾಗುವುದು. ಅತಿಥಿ ಉಪನ್ಯಾಸಕರ ಸಮಸ್ಯೆ ಇತ್ಯರ್ಥದಲ್ಲಿ ಆರ್ಥಿಕ ಹೊರೆ ಮುಂತಾದ ಅಂಶಗಳಿವೆ. ಒಟ್ಟಿನಲ್ಲಿ ವಿಚಾರವನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುತ್ತಿದೆ ಎಂದರು. ಇದನ್ನೂ ಓದಿ: ಬರದನಾಡಲ್ಲಿ ಗ್ರಾಮೀಣ ರಸ್ತೆ, ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತು: ತಿಪ್ಪಾರೆಡ್ಡಿ

  • ರಾಷ್ಟ್ರೀಯ ಶಿಕ್ಷಣ ನೀತಿ: ಕಾಂಗ್ರೆಸ್ ವಿರುದ್ಧ ಅಶ್ವತ್ಥನಾರಾಯಣ ಕಿಡಿ

    ರಾಷ್ಟ್ರೀಯ ಶಿಕ್ಷಣ ನೀತಿ: ಕಾಂಗ್ರೆಸ್ ವಿರುದ್ಧ ಅಶ್ವತ್ಥನಾರಾಯಣ ಕಿಡಿ

    ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಕಾಂಗ್ರೆಸ್ ಪಕ್ಷ ದ್ವಂದ್ವ ನೀತಿ ಅನುಸರಿಸುವ ಮೂಲಕ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಗಂಭೀರ ಆರೋಪ ಮಾಡಿದರು.

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಬೆಂಗಳೂರಿನಲ್ಲಿಂದು ಬಿಜೆಪಿ ಕೇಂದ್ರ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ರಾಜ್ಯಕ್ಕೆ ನೂತನ ಶಿಕ್ಷಣ ನೀತಿ ಅವಶ್ಯಕತೆ ಇಲ್ಲ, ಇದರ ಜಾರಿಗೆ ಬಿಡಲ್ಲ: ಡಿಕೆಶಿ ಎಚ್ಚರಿಕೆ

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆತುರಾತುರವಾಗಿ ಜಾರಿ ಮಾಡಿಲ್ಲ. ಸಾಕಷ್ಟು ಪ್ರಕ್ರಿಯೆ ನಡೆದಿದೆ. ಅಪಾರ ಸಿದ್ಧತೆ ಮಾಡಿಕೊಂಡು ಜಾರಿಗೆ ತರಲಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹೊಸ ಶಿಕ್ಷಣ ನೀತಿಯ ಬಗ್ಗೆ ಎಲ್ಲ ಪ್ರಕ್ರಿಯೆಗಳು ಶುರುವಾದವು. 2015ರಿಂದ ಶುರುವಾದ ಈ ಪ್ರಕ್ರಿಯೆಗಳ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರವಿತ್ತು? ಯಾರು ಮುಖ್ಯಮಂತ್ರಿ ಆಗಿದ್ದರು ಎಂದು ಜನರಿಗೆ ಗೊತ್ತಿದೆ ಎಂದು ಸಿದ್ದರಾಮಯ್ಯರನ್ನು ಕುಟುಕಿದರು. ಇದನ್ನೂ ಓದಿ: ಪಂಚಮಸಾಲಿ 2ಎ ಮೀಸಲಾತಿ- ಸದನದಲ್ಲಿ ಸಿಎಂ ಉತ್ತರ

    ಅಂದು ದೇಶದ 2.50 ಲಕ್ಷ ಗ್ರಾಮ ಪಂಚಾಯಿತಿಗಳ ಜತೆ ಸಂವಹನ ನಡೆಸಲಾಯಿತು. ರಾಜ್ಯದಲ್ಲೂ ಈ ಪ್ರಕ್ರಿಯೆ ನಡೆಯಿತು. ಈ ಎಲ್ಲಾ ಮಹತ್ವದ ಪ್ರಕ್ರಿಯೆಗಳಲ್ಲೂ ಅಂದಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸಕ್ರಿಯವಾಗಿ ಭಾಗಿಯಾಗಿದ್ದರು. ಹಾಗಾದರೆ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಏನು ಮಾಡುತ್ತಿದ್ದರು? ಇವರಿಗೆ ಈ ವಿಚಾರ ಗೊತ್ತಿರಲಿಲ್ಲವೇ? ಅವರದೇ ಸರ್ಕಾರ ಏನೆಲ್ಲ ಸಲಹೆಗಳನ್ನು ಕೊಟ್ಟಿತ್ತು ಎಂಬುದನ್ನು ಒಮ್ಮೆ ಕಣ್ತೆರೆದು ನೋಡಲಿ ಎಂದು ಅಶ್ವತ್ಥನಾರಾಯಣ ಹೇಳಿದರು.

    ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಬಿಜೆಪಿ ಅಭಿವೃದ್ಧಿಪರ ವಿಚಾರದಲ್ಲಿ ರಾಜಕಾರಣ ಮಾಡಲ್ಲ ಎಂದ ಅವರು, ಪ್ರತಿಪಕ್ಷವಾಗಿ ಕಾಂಗ್ರೆಸ್ ಟೀಕೆ-ಟಿಪ್ಪಣಿ ಮಾಡುತ್ತಿದೆ. ಸರ್ಕಾರಕ್ಕೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.

    ವಿಚಾರ ಸಂಕಿರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ನಾಗೇಶ್, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ .ಎಂ.ಕೆ.ಶ್ರೀಧರ್, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಸಂಸದ ಪಿ.ಸಿ.ಮೋಹನ್, ಬಿಜೆಪಿ ಸೆಂಟ್ರಲ್ ಘಟಕದ ಅಧ್ಯಕ್ಷ ಮಂಜುನಾಥ ಹಾಜರಿದ್ದರು.

  • ತೆಂಗು ಸಂಸ್ಕರಣೆ ವ್ಯವಸ್ಥೆ ಖುದ್ದು ವೀಕ್ಷಿಸಿದ ಸಚಿವ ಅಶ್ವತ್ಥನಾರಾಯಣ

    ತೆಂಗು ಸಂಸ್ಕರಣೆ ವ್ಯವಸ್ಥೆ ಖುದ್ದು ವೀಕ್ಷಿಸಿದ ಸಚಿವ ಅಶ್ವತ್ಥನಾರಾಯಣ

    ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮೈಲನಾಯಕನ ಹೊಸಹಳ್ಳಿ ಗ್ರಾಮದಲ್ಲಿರುವ ರೈತರ ಉತ್ಪಾದಕರ ಸಂಸ್ಥೆಯ ಸಂಸ್ಕರಣಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರೈತರ ಜತೆ ಸಂವಾದ ನಡೆಸಿದರು.

    ರೈತರ ಉತ್ಪಾದಕರ ಸಂಸ್ಥೆಯು ನೇರವಾಗಿ ರೈತರಿಂದಲೇ ಖರೀದಿಸಿದ ತೆಂಗಿನ ಕಾಯಿಗಳನ್ನು ಸಂಸ್ಕರಿಸಿ, ಅವುಗಳನ್ನು ಮಧ್ಯವರ್ತಿಗಳ ಪ್ರಮೇಯವಿಲ್ಲದೆ ಗ್ರಾಹಕರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದು, ಈ ಪ್ರಯೋಗ ಯಶಸ್ವಿ ಮತ್ತು ಲಾಭದಾಯಕವೂ ಆಗಿದೆ. ಇಲ್ಲಿ ತೆಂಗಿನ ಕಾಯಿ ಸುಲಿದು ಕ್ರಮಬದ್ಧವಾಗಿ ಸಂಸ್ಕರಣೆ ಮಾಡಿ ಬೇರೆಡೆಗೆ ಪೂರೈಸುವ ವಿಧಾನವನ್ನು ಸಚಿವರು ಖುದ್ದು ವೀಕ್ಷಣೆ ಮಾಡಿದರು.

    ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಈ ಪ್ರದೇಶದಲ್ಲಿ ಮೊದಲಿನಿಂದಲೂ ತೆಂಗು ಬೆಳೆಯನ್ನು ರೈತರು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಅನೇಕ ದಶಕಗಳಿಂದ ನ್ಯಾಯಸಮ್ಮತ ಬೆಲೆ ಸಿಗದೇ ಕಷ್ಟಕ್ಕೆ ಸಿಲುಕಿದ್ದ ರೈತರು ಸುಲಿದಿರುವ ಒಂದು ಕೆಜಿ ತೆಂಗಿನ ಕಾಯಿಯನ್ನು ಕೇವಲ 25 ರೂ.ಗಳಿಗೆ ಮಾತ್ರ ಮಾರುವಂಥ ಸ್ಥಿತಿ ಇತ್ತು. ಆದರೆ ದಲ್ಲಾಳಿಗಳು ಇದನ್ನೇ ಲಾಭ ಮಾಡಿಕೊಂಡಿದ್ದರು ಎಂದರು.

    ಈಗ ಕೃಷಿ ಕಲ್ಪದಂಥ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿ ತಲೆ ಎತ್ತಿರುವ ರೈತರ ಉತ್ಪಾದಕರ ಸಂಸ್ಥೆಯು ನೇರವಾಗಿ ರೈತರಿಂದಲೇ ಒಂದು ಕೆಜಿ ತೂಕದ ಸುಲಿದಿರುವ ತೆಂಗಿಗೆ 35 ರೂ.ವರೆಗೂ ಬೆಲೆ ಕೊಟ್ಟು ಖರೀದಿ ಮಾಡುತ್ತಿದೆ. ಅಲ್ಲದೆ, ಇಲ್ಲಿನ ತೆಂಗನ್ನು ಅತ್ಯುತ್ತಮವಾಗಿ ಸಂಸ್ಕರಣೆ ಮಾಡಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರಕ್ಕೆ ಪೂರೈಕೆ ಮಾಡುತ್ತಿದೆ. ಇಲ್ಲಿಂದ ವಾರಕ್ಕೊಮ್ಮೆ ಒಂದು ಟ್ರಕ್ ತೆಂಗಿನ ಕಾಯಿ ಅಲ್ಲಿಗೆ ಸರಬರಾಜು ಆಗುತ್ತಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ನಾನು ಕುಡುಕ ಅಲ್ಲ, ಕುಡಿಯುವ ಅಭ್ಯಾಸವೂ ನನಗಿಲ್ಲ: ಸಿ.ಟಿ.ರವಿ

    ಜಿಲ್ಲೆಯಲ್ಲಿ ರೈತರು ಮತ್ತು ಬಳಕೆದಾರರ ನಡುವೆ ರೈತರ ಉತ್ಪಾದಕರ ಸಂಸ್ಥೆ ಮೂಲಕ ಉತ್ತಮ ಲಿಂಕ್ ಏರ್ಪಟ್ಟದ್ದು, ಇದಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು. ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ಕೊಡಲಾಗುವುದು ಎಂದ ಅವರು, ಈ ವ್ಯವಹಾರದಲ್ಲಿ ರೈತರ ಉತ್ಪಾದಕರ ಸಂಸ್ಥೆಗೆ ತನ್ನ ಖರ್ಚೆಲ್ಲ ಕಳೆದು ಅತ್ಯಲ್ಪ ಪ್ರಮಾಣದ ಲಾಭ ಇರುತ್ತದೆ ಎಂದರು.

    ಕೃಷಿ ಕಲ್ಪ ಫೌಂಡೇಶನ್ ಅಧ್ಯಕ್ಷ ಪ್ರಶಾಂತ ಪ್ರಕಾಶ್ ಅವರು ಮಾಡಿರುವ ಸಾಧನೆಯನ್ನು ಕೊಂಡಾಡಿದ ಅವರು, ಸುಧಾರಿತ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕೃಷಿ ಮಾಡದಿದ್ದರೆ ಭವಿಷ್ಯದಲ್ಲಿ ಆಹಾರದ ಅಗತ್ಯವನ್ನು ನೀಗಿಸುವುದು ಕಷ್ಟವಾಗುತ್ತದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಶಾಲಾ-ಕಾಲೇಜು ಆರಂಭಕ್ಕೆ ಸೋಮವಾರ ಮಾರ್ಗಸೂಚಿ

    ಈ ಸಂದರ್ಭದಲ್ಲಿ ಕೃಷಿ ಕಲ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರಶಾಂತ ಪ್ರಕಾಶ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಕೃಷಿ ಕಲ್ಪ ಫೌಂಡೇಷನ್ ಸಿಇಒ ಸಿ.ಎಂ.ಪಾಟೀಲ್, ಅರ್ಕಾವತಿ ಎಫ್ ಪಿ ಒ ಸಿಇಒ ವಿನುತಾ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

  • ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ: ಡಿಸಿಎಂ

    ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ: ಡಿಸಿಎಂ

    –  ಇಡೀ ಗ್ರಾಮ ಅಭಿವೃದ್ಧಿ ಭರವಸೆ

    ಬೆಂಗಳೂರು(ಮಾಗಡಿ): ನಾಡಪ್ರಭುಗಳ ವೀರ ಸಮಾಧಿ ಇರುವ ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮವನ್ನು ಒಂದು ವರ್ಷದೊಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಮುಂದಿನ ವರ್ಷದ ಜಯಂತಿಯನ್ನು ಇಲ್ಲಿಯೇ ಆಚರಿಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಇದನ್ನೂ ಓದಿ: ಕೆಂಪೇಗೌಡ ಜಯಂತಿ – 60 ಟನ್ ತರಕಾರಿ ವಿತರಿಸಿದ ಸೋಮಶೇಖರ್

    ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ನಿಮಿತ್ತ ಡಿಸಿಎಂ ಅವರು, ತಾಲೂಕಿನ ಕೆಂಪಾಪುರ ಗ್ರಾಮದಲ್ಲಿರುವ ನಾಡಪ್ರಭುಗಳ ವೀರ ಸಮಾಧಿಗೆ ಭಾನುವಾರ ಬೆಳಗ್ಗೆ ಪೂಜೆ ಸಲ್ಲಿಸಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ. ಹೀಗಾಗಿ ಸಮಾಧಿ ಸ್ಥಳ, ಕೆಂಪಾಪುರ ಕೆರೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದರು. ಇದನ್ನೂ ಓದಿ: ಬಿಜೆಪಿಯವರು ಕಾಂಗ್ರೆಸ್‍ಗೆ ಸಪೋರ್ಟ್ ಮಾಡ್ತೀವಿ ಸಿಎಂ ಆಗಿ ಎಂದಿದ್ದಾರೆ: ಎಸ್.ಎಸ್ ಮಲ್ಲಿಕಾರ್ಜುನ್

    ನಾಡಿನ ಮತ್ತು ದೇಶದ ಸಮಸ್ತ ಜನರು ಇಲ್ಲಿಗೆ ಭೇಟಿ ನೀಡುವಂತೆ ಆಗಬೇಕು. ಕೆಂಪೇಗೌಡರ ಕಾಲದ ವೈಭವವನ್ನು ಮರುಸೃಷ್ಠಿ ಮಾಡಿ  ಇಡೀ ಗ್ರಾಮವನ್ನು ಐತಿಹಾಸಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಯೋಜನೆ ಜಾರಿ ಹಂತದಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯನ್ನು ಕ್ಷಿಪ್ರವಾಗಿ ಮುಗಿಸಲಾಗುವುದು. ಅದಕ್ಕಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಫೆಬ್ರುವರಿ ನಾಡಪ್ರಭುಗಳ ಪ್ರತಿಮೆ ಅನಾವರಣ:

    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ನಿರ್ಮಾಣ ಆಗುತ್ತಿರುವ ಸೆಂಟ್ರಲ್ ಪಾರ್ಕ್‍ನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಲೋಹದ ಪ್ರತಿಮೆಯನ್ನು ಮುಂಬರುವ ಫೆಬ್ರವರಿ-ಮಾರ್ಚ್‍ನಲ್ಲಿ ಲೋಕಾರ್ಪಣೆ ಮಾಡಲಾಗುವುದು. ಕೋವಿಡ್‍ನಿಂದ ವಿಳಂಬವಾಗಿದ್ದ ಕಾಮಗಾರಿ ಪುನಾ ಭರದಿಂದ ಸಾಗಿದೆ. ನೋಯಿಡಾದಲ್ಲಿ ಪ್ರತಿಮೆ ಸಿದ್ಧವಾಗುತ್ತಿದೆ ಎಂದು ಇದೇ ವೇಳೆ ಡಿಸಿಎಂ ಅವರು ಹೇಳಿದರು.

    ಶಾಸಕ ಮಂಜುನಾಥ್, ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಒ ಇಕ್ರಂ, ಬಿಜೆಪಿ ಮುಖಂಡ ಎಚ್.ಎಂ.ಕೃಷ್ಣಮೂರ್ತಿ, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಹುಲವಾಡಿ ದೇವರಾಜ್ ಮುಂತಾದವರು ಜತೆಯಲ್ಲಿದ್ದರು.

  • ಜ್ವಲಂತ ಸಮಸ್ಯೆಗಳನ್ನು ಜೀವಂತ ಇಟ್ಟ ಕಾಂಗ್ರೆಸ್: ಡಿಸಿಎಂ ಕಿಡಿ

    ಜ್ವಲಂತ ಸಮಸ್ಯೆಗಳನ್ನು ಜೀವಂತ ಇಟ್ಟ ಕಾಂಗ್ರೆಸ್: ಡಿಸಿಎಂ ಕಿಡಿ

    ಬೆಂಗಳೂರು/ಬಳ್ಳಾರಿ: ದೇಶದಲ್ಲಿ 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವೂ ಎಲ್ಲ ಜ್ವಲಂತ ಸಮಸ್ಯೆಗಳನ್ನು ಜೀವಂತವಾಗಿ ಇಡಲು ಪ್ರಯತ್ನ ಮಾಡಿತೇ ವಿನಾ ಅವುಗಳಿಗೆ ಪರಿಹಾರ ಕಂಡುಕೊಳ್ಳಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಟೀಕಿಸಿದರು. ಇದನ್ನೂಓದಿ:  ಕೆಲಸದ ಒತ್ತಡದಿಂದಾಗಿ ವ್ಯಕ್ತಿಗೆ ಖಾಲಿ ಸಿರಿಂಜ್ ಚುಚ್ಚಿದ ನರ್ಸ್..

    ಬಳ್ಳಾರಿ ಬಿಜೆಪಿ ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ಈ-ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಮೋದಿ ಸರಕಾರದ 7 ವರ್ಷಗಳ ಸಾಧನೆ ವಿಷಯದ ಬಗ್ಗೆ ವರ್ಚುವಲ್ ಮೂಲಕ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಸಮಸ್ಯೆಗಳನ್ನು ನಿರಂತರವಾಗಿ ಬದುಕಿರುವಂತೆ ನೋಡಿಕೊಳ್ಳುತ್ತಿತ್ತು. ಆದರೆ, ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಅಂಥ ಸಮಸ್ಯೆಗಳಿಗೆ ಚರಮಗೀತೆ ಹಾಡುತ್ತಾ ಬರುತ್ತಿದೆ ಎಂದರು.

    ಕಾಶ್ಮೀರ, ರಾಮಮಂದಿರ, ವಲಸಿಗರ ದುಃಸ್ಥಿತಿ, ಉದ್ಯೋಗ, ಕೈಗಾರಿಕೆ, ಆರ್ಥಿಕತೆ, ಮೂಲಸೌಕರ್ಯ, ತೆರಿಗೆ, ಕಪ್ಪುಹಣ ಇತ್ಯಾದಿ ಅಂಶಗಳ ಬಗ್ಗೆ ಕಾಂಗ್ರೆಸ್ ಅದೆಷ್ಟು ಉಪೇಕ್ಷೆ ಮಾಡಿತ್ತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇತಿಹಾಸವೇ ಎಲ್ಲ ಸತ್ಯಗಳನ್ನು ಬಿಚ್ಚಿಡುತ್ತಿದೆ. ಆದರೆ, ಬಿಜೆಪಿ ಸರಕಾರ ಈ ಎಲ್ಲ ಸಮಸ್ಯೆಗಳಿಂದ ದೇಶವನ್ನು ಹೊರ ತಂದಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. ಇದನ್ನೂ ಓದಿ: ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಿಎಂಟಿಸಿ ಸೇವೆಗಳ ಕಾರ್ಯಾಚರಣೆ ಕಡಿತ

    ಒಂದು ಭಾರತ- ಎರಡು ರಾಷ್ಟ್ರ ಎನ್ನುವುದು ಕಾಂಗ್ರೆಸ್ ನೀತಿ:
    ಒಂದು ಭಾರತ- ಎರಡು ರಾಷ್ಟ್ರ ಎನ್ನುವುದು ಕಾಂಗ್ರೆಸ್ ನೀತಿ. ಒಂದೇ ಭಾರತ-ಒಂದೇ ದೇಶ ಎನ್ನುವುದು ಬಿಜೆಪಿಯ ನೀತಿ. ಈ ಕಾರಣಕ್ಕಾಗಿಯೇ ಜಮ್ಮು ಮತ್ತು ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ತೆಗೆಯಲಾಯಿತು. ಈಗ ಕಾಶ್ಮೀರವೂ ಭಾರತದ ಅಂತರ್ಭಾಗ. ಕಾಂಗ್ರೆಸ್‍ಗೆ ಇಂಥ ಇಚ್ಛಾಶಕ್ತಿ ಇರಲಿಲ್ಲ ಎಂದು ಅವರು ಕಿಡಿಕಾರಿದರು.

    ಈಶಾನ್ಯ ಭಾರತದಲ್ಲೂ ಸಮಸ್ಯೆಗಳ ಸರಮಾಲೆಯೇ ಇತ್ತು. ಬಾಂಗ್ಲಾ ಗಡಿಯಲ್ಲಿ ಒಳನುಸುಳುವಿಕೆ ಮಿತಿ ಮೀರಿತ್ತು. ಈಗ ಎಲ್ಲವೂ ನಿಂತಿದೆ. ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗುವ ಅಂಶಗಳನ್ನು ಇಟುಕೊಂಡೇ ಕಾಂಗ್ರೆಸ್ ರಾಜಕಾರಣ ಮಾಡುತ್ತಾ ಬಂದಿದೆ. ಇಂಥ ರಾಜಕೀಯ ಪ್ರವೃತ್ತಿಗೆ ಮೋದಿ ಅವರು ಇತಿಶ್ರೀ ಹಾಡುತ್ತಿದ್ದಾರೆ. ಇಷ್ಟು ಕಾಶ್ಮೀರ ಒಂದು ವಿಷಯವನ್ನಿಟ್ಟುಕೊಂಡು ಭಾರತದ ಮೇಲೆ ವಾಗ್ದಾಳಿ ನಡೆಸಲಾಗುತ್ತಿತ್ತು. ಈಗ ಜಗತ್ತಿಗೆ ಸತ್ಯದ ಅರಿವಾಗಿದೆ. ಆ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲಬೇಕು ಎಂದು ಡಿಸಿಎಂ ಹೇಳಿದರು. ಇದನ್ನೂ ಓದಿ:  ಬೆಂಗಳೂರು ಗ್ರಾ. ಉಸ್ತುವಾರಿ ಹೊಣೆ ಸಿಕ್ಕ ಬಳಿಕ ಚುರುಕಾದ ಸಚಿವ ಎಂಟಿಬಿ

    ಕೋವಿಡ್‍ನಿಂದಲೇ ಸ್ವಾವಲಂಬನೆಯತ್ತ:
    ಕೋವಿಡ್ ಸಂಕಷ್ಟ ಭಾರತಕ್ಕೆ ಬಂದಾಗ ಅದನ್ನೇ ಅವಕಾಶ ಮಾಡಿಕೊಂಡ ಮೋದಿ ಅವರು ಆತ್ಮನಿರ್ಭರ ಭಾರತ ಪರಿಕಲ್ಪನೆ ಅಡಿ ಕೈಗಾರಿಕೆ, ಉತ್ಪಾದನೆ, ಉದ್ಯೋಗ ಸೃಷ್ಠಿಗೆ ಉತ್ತೇಜನ ನೀಡಿದರು. ಕೇವಲ ಒಂದು ಪಿಪಿಇ ಕಿಟ್, ಮಾತ್ರೆ, ಔಷಧಿ, ಸ್ಯಾನಿಟೈಸರ್ ವಿಷಯದಲ್ಲಿ ಪರ ದೇಶಗಳ ಮೇಲೆ ಅವಲಂಭಿತವಾಗುತ್ತಿದ್ದ ಭಾರತವು ಕೇವಲ ಒಂದೂವರೆ ವರ್ಷದಲ್ಲೇ ಸಂಪೂರ್ಣ ಸ್ವಾವಲಂಭನೆ ಸಾಧಿಸಿತು. ಲಸಿಕೆ ತಯಾರಿಕೆಯಲ್ಲಿ ಜಗತ್ತಿನ ಅಗ್ರಮಾನ್ಯ ದೇಶವಾಗಿ ಹೊರಹೊಮ್ಮಿತು. ಇದು ಭಾರತದ ಸಾಧನೆ ಎಂದು ಡಿಸಿಎಂ ಒತ್ತಿ ಹೇಳಿದರು.

    ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಚನ್ನಬಸವ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ರಮೇಶ್, ಜಿಲ್ಲಾ ಪ್ರಭಾರಿ ಸಚ್ಚಿದಾನಂದ ಮುಂತಾದವರು ಭಾಗಿಯಾಗಿದ್ದರು.

  • ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ: ಡಿಸಿಎಂ

    ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ: ಡಿಸಿಎಂ

    – ಯೋಗ ಯಾವುದೇ ದೇಶ-ಧರ್ಮಕ್ಕೆ ಸೀಮಿತವಲ್ಲ 

    ಬೆಂಗಳೂರು: ಮನುಕುಲದ ಮಾನಸಿಕ ದೈಹಿಕ ಸದೃಢತೆಗಾಗಿ ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಡಿದ ಅವರು, ಯೋಗ ಶಿಕ್ಷಣವನ್ನು ರಾಜ್ಯದ ಪಠ್ಯಕ್ರಮದಲ್ಲಿ ಸೇರಿಸಲಾಗುವುದು. ಉನ್ನತ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:  ಗಾಳಿ-ಮಳೆಗೆ ಉರುಳುತ್ತಿರುವ ಮರಗಳ ರಕ್ಷಣೆಗೆ ಸರ್ಕಾರದ ಹೊಸ ಪ್ಲ್ಯಾನ್

    ಮನುಕುಲದ ಮಾನಸಿಕ ದೈಹಿಕ ಸದೃಢತೆಗಾಗಿ ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ. ಮಕ್ಕಳ ಏಕಾಗ್ರತೆ ಮತ್ತು ಬೆಳವಣಿಗೆಗೆ ಇದು ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.ಈ ವರ್ಷದಿಂದಲೇ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯೋಗವನ್ನು ಪಠ್ಯವನ್ನಾಗಿ ಅಳವಡಿಸುವ ಅಂಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ವಹಿಸಿದೆ. ಮಕ್ಕಳು ಆರಂಭದಿಂದಲೇ ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸುವುದರ ಜೊತೆಗೆ ಯೋಗದ ಮೂಲಕ ದೈಹಿಕ-ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದು ಡಿಸಿಎಂ ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಗೋವಿಂದರಾಜು ಅವರು ಯೋಗವನ್ನು ಶಿಕ್ಷಣದ ಪಠ್ಯದಲ್ಲಿ ಸೇರಿಸಬೇಕೆಂದು ಮನವಿ ಮಾಡಿದರು. ಅದಕ್ಕೆ ಡಿಸಿಎಂ ಸ್ಪಂದಿಸಿ ಈ ಪ್ರತಿಕ್ರಿಯೆ ನೀಡಿದರು.

    ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ:

    ಯೋಗ ದಿನಾಚರಣೆಗೆ ಸಾನ್ನಿಧ್ಯ ವಹಿಸಿ ಆಸೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು, ಯೋಗವು ಯಾವುದೇ ದೇಶ, ಜಾತಿ, ಧರ್ಮಕ್ಕೆ ಸೀಮಿತವಾದುದ್ದಲ್ಲ. ಇದು ಮನುಷ್ಯನ ಅಸ್ತಿತ್ವಕ್ಕೆ ಸೇರಿರುವಂಥದ್ದು. ಮನುಷ್ಯನನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ನಮ್ಮ ಹಿರಿಯರು ಸಂಶೋಧಿಸಿದ ವಿಜ್ಞಾನವೇ ಯೋಗ ಎಂದು ನುಡಿದರು.

    ಯೋಗ ಭಾರತಕ್ಕೆ ಸೇರಿದ್ದು ಎಂದು ಜಗತ್ತು ಅದನ್ನು ಬಳಸದೇ ಇರಬಾರದು. ಹಾಗೆ ಮಾಡಿದರೆ ಜಗತ್ತಿಗೇ ನಷ್ಟ. ಯುರೋಪಿಯನ್ ವಿಜ್ಞಾನಿ ಲಾವಾಶಿಯರ್ ಅವರು ಆಮ್ಲಜನಕವನ್ನು ಸಂಶೋಧಿಸಿದರು ಎಂಬ ಕಾರಣಕ್ಕೆ ನಾವು ಅದನ್ನು ಬಳಸದೇ ಇದ್ದರೆ ನಮಗೇ ನಷ್ಟ. ಹಾಗೆಯ ಯೋಗವೂ ಕೂಡ. ಯೋಗ ಜಗತ್ತಿನ ಪ್ರತಿಯೊಬ್ಬರ ಜೀವನ ಶೈಲಿ ಆಗಬೇಕು ಎಂದು ಸ್ವಾಮೀಜಿ ಅವರು ಆಶಯ ವ್ಯಕ್ತಪಡಿಸಿದರು.

    ವಚನಾನಂದ ಶ್ರೀಗಳಿಂದ ಯೋಗ ಮಾರ್ಗದರ್ಶನ:

    ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಯೋಗ ಮಾರ್ಗದರ್ಶನ ನೀಡಿದರು. ಯೋಗ ಪಟುಗಳಿಂದ ಶ್ರೀಗಳವರು ‘ಕಟ್ಟಿ ಚಕ್ರಾಸನ’, ‘ತ್ರಿಕೋನಾಸನ’, ‘ಊಧ್ರ್ವ ತಾಡಾಸನ’, ‘ಪಾದ ಹಸ್ತಾಸನ’, ‘ಉಸ್ಟ್ರಾಸನ’, ‘ಶಶಾಂಕಾಸನ’, ‘ಮಂಡೂಕಾಸನ’, ‘ಮಕರಾಸನ’, ‘ಭುಜಂಗಾಸನ’, ‘ಬಾಲ ಕ್ರೀಡಾಸನ’, ‘ಶಲ್ಬಾಸನ’, ‘ಉತ್ಥಾನ ಪಾದಾಸನ’, ‘ಅರ್ಧಪವನ ಮುಕ್ತಾಸನ’, ‘ಪವನ ಮುಕ್ತಾಸನ’ ಜತೆಗೆ, ‘ಕಪಾಲಬಾತಿ’, ‘ಪ್ರಾಣಯಾಮ’, ‘ನಾಡಿ ಶೋಧನ’, ‘ಶೀಥಲಿ ಪ್ರಾಣಯಾಮ’, ‘ಭ್ರಾಮರಿ ಪ್ರಾಣಯಾಮ’ ಮಾಡಿಸಿದರು.

    ಕ್ರೀಡಾ ಮತ್ತು ಯವಜನ ಸಬಲೀಕರಣ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್, ಯುವಜನ ಸೇವೆ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

  • ಸಂಚಾರದ ಹಾದಿಯಲ್ಲಿ ಹೆಜ್ಜೆಗುರುತು ಮೂಡಿಸಿ ಹೋದ ವಿಜಯ್: ಅರವಿಂದ ಲಿಂಬಾವಳಿ ಶೋಕ

    ಸಂಚಾರದ ಹಾದಿಯಲ್ಲಿ ಹೆಜ್ಜೆಗುರುತು ಮೂಡಿಸಿ ಹೋದ ವಿಜಯ್: ಅರವಿಂದ ಲಿಂಬಾವಳಿ ಶೋಕ

    ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

    ವಿಜಯ್ ತಮ್ಮ ಜೀವನ ಯಾನದ ಸಂಚಾರವನ್ನು ಅಪೂರ್ಣವಾಗಿಸಿ ಬದುಕು ತೊರೆದು ಹೋಗಿದ್ದಾರೆ. ಆದರೆ ಬದುಕಿನ ಸಂಚಾರದ ಹಾದಿಯಲ್ಲಿ ಅವರು ಅಂಗಾಂಗ ದಾನ ಮಾಡುವ ಮೂಲಕ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಇದು ಅತ್ಯಂತ ಭಾವನಾತ್ಮಕ, ಮನಮಿಡಿಯುವ ಸಂದರ್ಭ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಜೀವನದ ಪಯಣ ಮುಗಿಸಿದ ವಿಜಯ್ ಹಲವೇ ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಅವೆಲ್ಲವೂ ಚಲನಚಿತ್ರ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ ‘ನಾನು ಅವನಲ್ಲ ಅವಳು’ ಚಿತ್ರದ ಅವರ ಮನೋಜ್ಞ ಅಭಿನಯ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತ್ತು.ಸಂಚಾರಿ ಥಿಯೇಟರ್ಸ್ ಮೂಲಕ ರಂಗಭೂಮಿಯ ಬದುಕಿಗೆ ಕಾಲಿಟ್ಟ ವಿಜಯ್ ಅನೇಕ ಮಹತ್ವದ ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ಆನಂತರ ಕಿರುತೆರೆ ಮತ್ತು ಹಿರಿತೆರೆಗಳಿಗೂ ಪ್ರವೇಶಿಸಿ ತಮ್ಮ ಅಭಿನಯದ ಮೂಲಕ ಎಲ್ಲರ ಗಮನಸೆಳೆದರು.ಕೃಷ್ಣ ತುಳಸಿ ಚಿತ್ರದ ಅಂಧ ಯುವಕನ ಪಾತ್ರ ಸದಾ ಮನದಲ್ಲಿ ಉಳಿಯುವಂಥದ್ದು, ರಂಗಪ್ಪ ಹೋಗ್ಬಿಟ್ಟ, ಒಗ್ಗರಣೆ, ನಾತಿಚರಾಮಿ, ಪಿರಂಗಿಪುರ ಮತ್ತು ಹರಿವು ಮುಂತಾದ ಚಿತ್ರಗಳು ಅವರಿಗೆ ಅಪಾರ ಹೆಸರು ತಂದುಕೊಟ್ಟಿದೆ.

    ಭವಿಷ್ಯದಲ್ಲಿ ಇನ್ನೂ ದೊಡ್ಡ ಹೆಸರು ಮಾಡುವ ಎಲ್ಲಾ ಅವಕಾಶಗಳು ಇದ್ದ ವಿಜಯ್ ಅವರ ನಿಧನ ದುಃಖದಾಯಕ. ಪ್ರಗತಿಪರ ಚಿಂತನೆಯುಳ್ಳ, ಸಂವೇದನಾಶೀಲ ನಟ ಎನಿಸಿಕೊಂಡಿದ್ದ ವಿಜಯ್ ಸಾವಿನಲ್ಲೂ ತಮ್ಮ ಆದರ್ಶ ಮೆರೆದಿದ್ದಾರೆ. ಅಂಗಾಂಗ ದಾನ ಮಾಡಿದ ಅವರ ಕುಟುಂಬದ ನಿರ್ಣಯಕ್ಕೆ ನನ್ನ ಅನಂತ ವಂದನೆಗಳು. ಇಂತಹ ನಿರ್ಧಾರ ಕೈಗೊಳ್ಳುವುದು ಸಾಮಾನ್ಯ ಸಂಗತಿಯಲ್ಲ ,ಇತರರಿಗೆ ಮಾದರಿಯಾದ ಅವರ ಕುಟುಂಬಕ್ಕೆ ನನ್ನ ಕೃತಜ್ಞತೆಗಳು ಮತ್ತು ಸಂತಾಪಗಳನ್ನು ಸಲ್ಲಿಸುತ್ತೇನೆ. ಅವರ ದುಃಖ ದಲ್ಲಿನಾನೂ ಭಾಗಿ, ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಚಿಕಿತ್ಸೆ ಪಡೆಯುತ್ತಿದ್ದ ವಿಜಯ್ ಬದುಕಿ ಬರುತ್ತಾರೆ ಎಂಬ ವಿಶ್ವಾಸ ನಂಬಿಕೆ ನನಗಿತ್ತು. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಂತೆ ನಾನು ಕೂಡ ಪ್ರಾರ್ಥನೆ ಮಾಡಿದ್ದೆ. ಸೋಮವಾರ ಆಸ್ಪತ್ರೆಗೂ ಭೇಟಿ ನೀಡಿ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಉಸಿರಾಡುತ್ತಿದ್ದರು. ಹೀಗಾಗಿ ಅವರು ಬದುಕುಳಿಯುತ್ತಾರೆಂಬ ನಿರೀಕ್ಷೆ ಇತ್ತು. ಕೆಲ ದಿನಗಳ ಚಿಕಿತ್ಸೆ ನಂತರ ಅವರು ಮನೆ ಮರಳಲಿದ್ದಾರೆಂಬ ವಿಶ್ವಾಸ ಬಂದಿತ್ತು. ಆದರೆ, ಎಲ್ಲರ ನಿರೀಕ್ಷೆ ಹುಸಿ ಮಾಡಿ ಅವರು ಅಗಲಿದ್ದಾರೆ. ಇದು ನನಗೆ ವೈಯಕ್ತಿಕವಾಗಿ ಬಹಳಷ್ಟು ದುಃಖ ಉಂಟು ಮಾಡಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

    ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹಿರಿಮೆ ಅವರದ್ದು. ‘ನಾನು ಅವನಲ್ಲ…ಅವಳು’ ಚಿತ್ರದಲ್ಲಿ ಅವರದ್ದು ಅಮೋಘ ನಟನೆ. ಅಷ್ಟೇ ಅಲ್ಲ ಅವರು ನಟಿಸಿದ ಎಲ್ಲ ಪಾತ್ರಗಳಲ್ಲೂ ಜೀವಿಸುತ್ತಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದ ಸದಸ್ಯರಿಗೆ, ಅಭಿಮಾನಿಗಳಿ ಹಾಗೂ ಚಿತ್ರರಂಗಕ್ಕೆ ದಯಪಾಲಿಸಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.