Tag: ಡಾ. ಬಿಆರ್ ಅಂಬೇಡ್ಕರ್

  • ಭಾರತರತ್ನ ಪ್ರಶಸ್ತಿಯನ್ನು ಅಂಬೇಡ್ಕರ್ ಗೆ ನೀಡಿಲ್ಲ ಯಾಕೆ: ಕಾಂಗ್ರೆಸ್‍ಗೆ ಮೋದಿ ಪ್ರಶ್ನೆ

    ಭಾರತರತ್ನ ಪ್ರಶಸ್ತಿಯನ್ನು ಅಂಬೇಡ್ಕರ್ ಗೆ ನೀಡಿಲ್ಲ ಯಾಕೆ: ಕಾಂಗ್ರೆಸ್‍ಗೆ ಮೋದಿ ಪ್ರಶ್ನೆ

    ಅಹಮದಾಬಾದ್: ಡಾ.ಬಿಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಅಂಗವಾಗಿ ಅವರಿಗೆ ವಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ ಯಾಕೆ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಗುಜರಾತ್ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಒಂದು ಕುಟುಂಬ ಅತಿದೊಡ್ಡ ಅನ್ಯಾಯ ಮಾಡಿದೆ ಎಂದು ಹೇಳುವ ಮೂಲಕ ನೆಹರು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದಲ್ಲಿ ಜವಾಹರಲಾಲ್ ನೆಹರೂ ಅವರ ಪ್ರಭಾವ ಇದ್ದಾಗ ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಆಯ್ಕೆಯಾಗುವುದು ಕಠಿಣವಾಗಿತ್ತು ಎಂದು ಆರೋಪ ಮಾಡಿದರು.

    ಬಿಜೆಪಿ ಆಡಳಿತದ ಅವಧಿಯಲ್ಲಿ ರಾಜ್ಯದ ಕಾನೂನು ಹಾಗೂ ಸುವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಯುವ ಸಮುದಾಯಕ್ಕೆ ಉತ್ತಮ ತಂತ್ರಜ್ಞಾನ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಗುಜರಾತ್ ಯುವ ಜನತೆಗೆ ಈಗ ಕಫ್ರ್ಯೂ ಎಂಬ ಪದದ ಪರಿಚಯವೇ ಇಲ್ಲವಾಗಿದೆ. ನಮ್ಮ ಗುರಿ ಯುವ ಸಮುದಾಯ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಸಾಮರ್ಥ್ಯ ನಿರ್ಮಾಣ ಮಾಡುವುದು ಎಂದು ಹೇಳಿದರು.

    ಪ್ರಧಾನಿ ಮೋದಿ ಅವರು ಇಂದು ಗುಜರಾತ್‍ನ ದಾಹೊದ್ ಮತ್ತು ನಟ್ರಾಂಗ್ ಪ್ರದೇಶದಲ್ಲಿ ಮತ್ತೆರಡು ಚುನಾವಣೆ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ನಂತರ ಶುಕ್ರವಾರ ದಂದು ಲುನಾವಾಡಾ, ಬೊಡಲಿ, ಆನಂದ್ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಕೊನೆಯ ಪ್ರಚಾರ ಸಮಾರಂಭವು ಮೆಹ್ಸಾನಾ ಪ್ರದೇಶದ ಪಟಿದಾರ್ ಕೋಟೆಯಲ್ಲಿ ನಡೆಯಲಿದೆ.

    ಗುಜರಾತ್ ಚುನಾವಣೆಯ ಪ್ರಚಾರ ಕಾರ್ಯಕ್ರಮಗಳಿಗೆ ಓಖೀ ಚಂಡಮಾರುತದ ಪ್ರಭಾವವು ಬೀರಿದ್ದು, ಪ್ರಚಾರದಲ್ಲಿ ಭಾಗವಹಿಸ ಬೇಕಿದ್ದ ಉತ್ತರಪ್ರದೇಶ ಸಿಎಂ ಯೋಗಿ ಅದಿತ್ಯನಾಥ್, ರಾಜಸ್ತಾನ್ ಸಿಎಂ ವಾಸುಂದರ ರಾಜೇ, ಬಿಜೆಪಿ ನಾಯಕ ಮನೋಜ್ ತಿವಾರಿ ಸೇರಿದಂತೆ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದಾರೆ.

    ಇಂದು ದೇಶದ್ಯಾಂತ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಅಚರಿಸಲಾಗುತ್ತಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರ ಪತಿ ವೆಂಕಯ್ಯನಾಯ್ಡು, ಸೇರಿದಂತೆ ದೇಶದ ಪ್ರಮುಖ ಮುಖಂಡರು ಅಂಬೇಡ್ಕರ್ ಅವರಿಗೆ ಗೌರವ ವಂದನೆ ಸಲ್ಲಿಸಿದರು.