Tag: ಡಾ. ನಾಗೇಂದ್ರ

  • ಸಿಎಂ ಮನವೊಲಿಕೆ-ಷರತ್ತು ವಿಧಿಸಿ ಪ್ರತಿಭಟನೆ ಹಿಂಪಡೆದ ವೈದ್ಯರು

    ಸಿಎಂ ಮನವೊಲಿಕೆ-ಷರತ್ತು ವಿಧಿಸಿ ಪ್ರತಿಭಟನೆ ಹಿಂಪಡೆದ ವೈದ್ಯರು

    ಮೈಸೂರು: ನಂಜನಗೂಡು ಟಿಹೆಚ್‍ಒ ಆತ್ಮಹತ್ಯೆ ಪ್ರಕರಣ ಸಂಬಂಧ ಎರಡು ದಿನಗಳಿಂದ ಮೈಸೂರಿನಲ್ಲಿ ವೈದ್ಯಾಧಿಕಾರಿಗಳು ನಡೆಸುತ್ತಿದ್ದ ಪ್ರತಿಭಟನೆ ಸಿಎಂ ಮನವೊಲಿಕೆ ಹಿನ್ನೆಲೆ ವೈದ್ಯರ ಸಂಘ ಮುಷ್ಕರ ಹಿಂಪಡೆದಿದೆ. ಈ ಬಗ್ಗೆ ಸಂಘದ ಜಿಲ್ಲಾಧ್ಯಕ್ಷ ಡಾ.ದೇವಿ ಆನಂದ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ವೈದ್ಯರ ಕುರಿತ ಸಚಿವ ಡಾ. ಸುಧಾಕರ್ ಹೇಳಿಕೆ ಖಂಡಿಸಿದ ಅವರು ಸರ್ಕಾರದ ಮುಂದೆ ಹಲವು ಷರತ್ತು ಇಟ್ಟಿದ್ದಾರೆ. ಸಿಇಓ ಪ್ರಶಾಂತ್ ಮಿಶ್ರಾ ವಿಚಾರದಲ್ಲಿ ಹೇಗೆ ಸರ್ಕಾರ ವಿಚಾರಣೆ ಮುಗಿಯುವರೆಗೂ ಅಮಾನತ್ತು ಇಲ್ಲ ಎಂಬುದಕ್ಕೆ ಬದ್ಧವಾಗಿದೆಯೋ. ಅದು ಎಲ್ಲಾ ಸರಕಾರಿ ವೈದ್ಯರಿಗೂ ಅನ್ವಯವಾಗಬೇಕು.

    ಆರೋಗ್ಯ ಇಲಾಖೆ ಅಧಿಕಾರಿಗಳೇ ನಮಗೆ ನೋಡಲ್ ಅಧಿಕಾರಿಗಳಾಗಬೇಕು. ಕೆಎಎಸ್, ಐಎಎಸ್ ಅಧಿಕಾರಿಗಳು ಕೊರೊನಾ ನೊಡಲ್ ಆಫಿಸರ್ ಆಗುವುದು ಬೇಡ. ಗುತ್ತಿಗೆ ಆಧಾರದ ಮೇಲೆ ಅರೆಕಾಲಿಕ ವೈದ್ಯಕೀಯ ಸಿಬ್ಬಂದಿ ಹಾಗೂ ಗ್ರೂಪ್ ಡಿ ನೌಕರರನ್ನ ನೇಮಕ ಮಾಡಿಕೊಳ್ಳಬೇಕು ಎಂಬ ಷರತ್ತುಗಳನ್ನು ಸರ್ಕಾರದ ಮುಂದೆ ಇರಿಸಿದ್ದಾರೆ. ಪ್ರಕರಣ ವರದಿ ಬರೋವರೆಗು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಲು ವೈದ್ಯರ ಸಂಘ ನಿರ್ಧರಿಸಿದೆ.

    ಸಚಿವ ಸುಧಾಕರ ಹೇಳಿದ್ದೇನು?: ಮಂತ್ರಿಯಾಗಿ ನಾನೇ ಇಷ್ಟು ಟೆಸ್ಟ್ ಮಾಡಿ ಅಂತ ಡಿಸಿ ಹಾಗೂ ಸಿಇಒಗಳಿಗೆ ಟಾರ್ಗೆಟ್ ಕೊಡುತ್ತೇನಿ. ಯಾರನ್ನ ಅಮಾನತು ಮಾಡಬೇಕು. ಕಾರ್ಯದ ಒತ್ತಡ ಸ್ವೀಕಾರ ಮಾಡಿ ಕೆಲಸ ಮಾಡೋವರು ಸರ್ಕಾರದಲ್ಲಿರಬೇಕು. ಇಲ್ಲ ಅಂದ್ರೆ ಅವರು ಸ್ವತಂತ್ರರಿದ್ದಾರೆ. ಖಾಸಗಿಯಲ್ಲಿ ಕೆಲಸ ಮಾಡಲಿ. ಎಲ್ಲದಕ್ಕೂ ಲಿಮಿಟ್ ಇದೆ ಅಂತ ಪ್ರತಿಭಟನಾ ನಿರತ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ನಾಗೇಂದ್ರ ಅವರ ಕುಟುಂಬವೇ ಸರ್ಕಾರದ ತೀರ್ಮಾನಕ್ಕೆ ಒಪ್ಪಿದೆ. ಕಾರ್ಯವೈಖರಿಗೆ ಹೊಗಳಿದೆ. ಆದರೆ ಕೆಲವರು ಅಮಾಯಕರನ್ನು ಕೂರಿಸ್ಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಪರದೆ ಹಿಂದೆ ಪ್ರೇರೇಪಣೆ ಕೊಡಬೇಡಿ. ಗಣೇಶ ಅವರಿಗೆ ಸದ್ಬುದ್ಧಿ ಕೊಡ್ಲಿ ಅಂತ ಪ್ರತಿಭಟನಾನಿರತ ವೈದ್ಯರ ವಿರುದ್ಧ ಸಚಿವ ಸುಧಾಕರ್ ಕಿಡಿಕಾರಿದ್ದರು. ಹೇಳಿಕೆಗೂ ಇದಕ್ಕೂ ಮುನ್ನ ಟ್ವೀಟ್ ಮಾಡಿ, ನಾಗೇಂದ್ರ ಅವರ ಸಾವಿನ ವಿಷಯದಲ್ಲಿ ಸರ್ಕಾರಕ್ಕೆ ಯಾರನ್ನೂ ರಕ್ಷಿಸುವ ಇಚ್ಛೆಯಿಲ್ಲ. ಯಾರೇ ತಪ್ಪು ಮಾಡಿದರೂ ಅದಕ್ಕೆ ಕ್ಷಮೆಯಿಲ್ಲ. ಪ್ರತಿಭಟಿಸುವುದನ್ನು ನಿಲ್ಲಿಸಿ. ಜನ ಸೇವೆಯೇ ಜನಾರ್ಧನ ಸೇವೆ. ತನಿಖೆಯ ನಂತರ ಸತ್ಯ ತಿಳಿದೇ ತಿಳಿಯುತ್ತೆ ಅಂದಿದ್ದರು.

  • ಕೊರೊನಾ ಸಮಯದಲ್ಲೇ ಸರ್ಕಾರಕ್ಕೆ ವೈದ್ಯರಿಂದ ಡೆಡ್‍ಲೈನ್!

    ಕೊರೊನಾ ಸಮಯದಲ್ಲೇ ಸರ್ಕಾರಕ್ಕೆ ವೈದ್ಯರಿಂದ ಡೆಡ್‍ಲೈನ್!

    ಮೈಸೂರು: ರಾಜ್ಯದಲ್ಲಿ ಕೊರೊನಾ ರಣಕೇಕೆಯ ನಡುವೆ ವೈದ್ಯ ಸಿಬ್ಬಂದಿ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ.

    ಹೌದು. ನಂಜನಗೂಡು ಟಿಹೆಚ್‍ಒ ಡಾ. ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವೈದ್ಯ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದು, ನಾಳೆವರೆಗೆ ನೋಡ್ತೀವಿ, ಇಲ್ಲಾಂದ್ರೆ ಸೋಮವಾರದಿಂದ ಎಲ್ಲವೂ ಬಂದ್ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಈ ಸಂಬಂಧ ಸರ್ಕಾರಕ್ಕೆ ಆಗ್ರಹ ಮಾಡಿರುವ ವೈದ್ಯ ಸಿಬ್ಬಂದಿ, ಒಂದೋ ನಾವು, ಇಲ್ಲಾ ಅವರು. ನೀವೇ ಡಿಸೈಡ್ ಮಾಡಿ. ಟಿಎಚ್‍ಒ ಸಾವಿಗೆ ಕಾರಣರಾದವರನ್ನ ಸಸ್ಪೆಂಡ್ ಮಾಡ್ಲೇಬೇಕು. ವರ್ಗಾವಣೆ ಬೇಡ, ನಾಳೆಯೊಳಗೆ ಅಮಾನತು ಮಾಡಿದ್ರೆ ಸರಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ನಿಲ್ಲಿಸಿ ರೋಗಿಗಳ ಸಂಕಷ್ಟಕ್ಕೆ ನೆರವಾಗಿ- ವೈದ್ಯ ಸಿಬ್ಬಂದಿಯಲ್ಲಿ ಸುಧಾಕರ್ ಮನವಿ

    ಕೊರೊನಾ ರೋಗಿಗಳನ್ನ ನೋಡಲ್ಲ, ಟೆಸ್ಟಿಂಗ್ ಮಾಡಲ್ಲ. ಇಲ್ಲಾಂದ್ರೆ ಸೋಮವಾರದಿಂದ ರಾಜ್ಯಾದ್ಯಂತ ಕೋವಿಡ್ ಕೆಲಸ ಬಂದ್ ಮಾಡುತ್ತೇವೆ. ತುರ್ತು ಆರೋಗ್ಯ ಸೇವೆ ಅಷ್ಟೇ. ಉಳಿದ ಎಲ್ಲವೂ ಬಂದ್ ಮಾಡುತ್ತೇವೆ. ಸೋಮವಾರದಿಂದ ಹೆಲ್ತ್ ವಾರಿಯರ್ಸ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾದಿಕಾರಿಗಳ ಸಂಘ ವಾರ್ನಿಂಗ್ ಮಾಡಿದೆ.

  • ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ- ಜಿ.ಪಂ. ಸಿಇಒ ವಿರುದ್ಧ ಎಫ್‍ಐಆರ್ ದಾಖಲು

    ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ- ಜಿ.ಪಂ. ಸಿಇಒ ವಿರುದ್ಧ ಎಫ್‍ಐಆರ್ ದಾಖಲು

    – ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ

    ಮೈಸೂರು: ತೀವ್ರ ಸಂಚಲನ ಸೃಷ್ಟಿಸಿರುವ ನಂಜನಗೂಡು ಟಿಎಚ್‍ಓ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ದಂಬಂಧಿಸಿದಂತೆ ಜಿ.ಪಂ. ಸಿಇಒ ಪ್ರಶಾಂತ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿಇಒ ಪ್ರಶಾಂತ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ದಾಖಲಾದ ಹಿನ್ನೆಲೆ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಡಾ.ನಾಗೇಂದ್ರ ತಂದೆ ರಾಮಕೃಷ್ಣ ಅವರು ಮಗನ ಆತ್ಮಹತ್ಯೆ ಕುರಿತು ದೂರು ದಾಖಲಿಸಿದ್ದರು.

    ದೂರಿನಲ್ಲಿ ತಮ್ಮ ಮಗನ ಮೇಲೆ ಒತ್ತಡ ಇರುವುದರ ಬಗ್ಗೆ ತಂದೆ ಆರೋಪಿಸಿದ್ದಾರೆ. ಡಾ.ನಾಗೇಂದ್ರ ಅವರಿಗೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಕೈಗೋಳ್ಳುತ್ತೇವೆ ಎಂದು ಅಧಿಕಾರಿ ಹೆದರಿಸುತ್ತಿದ್ದರು ಎಂದು ತಂದೆ ಆರೋಪಿಸಿದ್ದಾರೆ. ನಾಗೇಂದ್ರ ತಂದೆ ರಾಮಕೃಷ್ಣ ಅವರ ದೂರಿನ ಅನ್ವಯ ಸಿಇಓ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡಿರುವ ಡಾ.ನಾಗೇಂದ್ರ ಕುಟುಂಬಕ್ಕೆ ಸರ್ಕಾರ 30 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದು, ನಾಗೇಂದ್ರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿ ಹುದ್ದೆ ನೀಡಲಾಗುವುದು. ತನಿಖೆ ನಡೆಸಿ ಅಧಿಕಾರಿ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ. ಎಲ್ಲರಿಗೂ ಕೆಲಸದ ಒತ್ತಡವಿರುತ್ತದೆ. ಕೆಲಸದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿದ್ದಾರೆ.

  • ಟಿಎಚ್‍ಒ ಆತ್ಮಹತ್ಯೆಗೆ ಟ್ವಿಸ್ಟ್- ಒತ್ತಡಕ್ಕೆ ಸಿಲುಕಿಯೇ ಆತ್ಮಹತ್ಯೆ ಮಾಡ್ಕೊಂಡ್ರಾ ವಾರಿಯರ್?

    ಟಿಎಚ್‍ಒ ಆತ್ಮಹತ್ಯೆಗೆ ಟ್ವಿಸ್ಟ್- ಒತ್ತಡಕ್ಕೆ ಸಿಲುಕಿಯೇ ಆತ್ಮಹತ್ಯೆ ಮಾಡ್ಕೊಂಡ್ರಾ ವಾರಿಯರ್?

    ಮೈಸೂರು: ಉನ್ನತ ಅಧಿಕಾರಿ ಜೊತೆ ಟಿಎಚ್‍ಓ ಡಾ. ನಾಗೇಂದ್ರ ಮಾತಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ವೈರಲ್ ಆಗಿದ್ದು, ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಆರೋಗ್ಯಾಧಿಕಾರಿ ನಾಗೇಂದ್ರ ಶುಕ್ರವಾರ ಬೆಳಗ್ಗೆ ತಮ್ಮ ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಕಳೆದ ಒಂದು ವರ್ಷದಿಂದ ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ನಾಗೇಂದ್ರ ಕಾರ್ಯನಿರ್ವಹಿಸುತ್ತಿದ್ದರು.

    ಡಾ. ನಾಗೇಂದ್ರ ಅವರಿಗೆ ಜಿಲ್ಲಾ ಪಂಚಾಯಿತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಂದ ಒತ್ತಡ ಇತ್ತು ಎನ್ನಲಾಗಿದೆ. ಕೊರೊನಾ ಟೆಸ್ಟ್ ಟಾರ್ಗೆಟ್ ಹೆಚ್ಚು ನೀಡಿ ಕಡ್ಡಾಯವಾಗಿ ಮಾಡಲೇಬೇಕೆಂದು ಒತ್ತಡ ಹಾಕಲಾಗಿದೆ. ಇಲಾಖೆಯಲ್ಲಿ ನೌಕರರ ಸಂಖ್ಯೆ ಬಹಳ ಕಡಮೆ ಇದ್ದರೂ ಹೆಚ್ಚುವರಿ ಕೆಲಸ ನೀಡುತ್ತಿದ್ದರು. ಜೊತೆಗೆ 6 ತಿಂಗಳಿಂದ ಒಂದು ದಿನವೂ ರೆಜೆ ನೀಡದೆ ಕೆಲಸ ಮಾಡಿಸಿಕೊಂಡಿದ್ದಾರೆ. ಈಗ ಉನ್ನತ ಅಧಿಕಾರಿ ಜೊತೆ ನಾಗೇಂದ್ರ ಮಾತಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ವೈರಲ್ ಆಗಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ಪಟ್ಟುಹಿಡಿದಿದ್ದಾರೆ.

    ಆಡಿಯೋ ಸಂಭಾಷಣೆ ಇಲ್ಲಿದೆ:

  • ಡಾ. ನಾಗೇಂದ್ರ ಪತ್ನಿಗೆ ಉಪನ್ಯಾಸಕಿ ಹುದ್ದೆ ನೀಡಲಾಗುವುದು: ಸುಧಾಕರ್

    ಡಾ. ನಾಗೇಂದ್ರ ಪತ್ನಿಗೆ ಉಪನ್ಯಾಸಕಿ ಹುದ್ದೆ ನೀಡಲಾಗುವುದು: ಸುಧಾಕರ್

    – ಕುಟುಂಬಕ್ಕೆ 30 ಲಕ್ಷ ಪರಿಹಾರ

    ಮೈಸೂರು: ಇಂದು ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಆರೋಗ್ಯಾಧಿಕಾರಿ ಪತ್ನಿಗೆ ಉಪನ್ಯಾಸಕಿ ಹುದ್ದೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ.

    ಡಾ. ನಾಗೇಂದ್ರ ಅವರ ಅಂತಿಮ ದರ್ಶನ ಪಡೆದ ಸುಧಾಕರ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣವನ್ನು ತನಿಖೆ ಮಾಡುವ ಸ್ವರೂಪದ ವಿಚಾರವಾಗಿ ನಾಳೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನು ಓದಿ: ಮೊದಲು ನೀವು ಇಲ್ಲಿಂದ ಹೊರಟು ಹೋಗಿ- ಸುಧಾಕರ್‌ಗೆ ವೈದ್ಯೆ ತರಾಟೆ

    ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು. ಮೃತರ ಕುಟುಂಬದ ರಕ್ಷಣೆ ಮಾಡುವುದು ಸರ್ಕಾರದ ಹೊಣೆಯಾಗಿದೆ. ನಾಗೇಂದ್ರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿ ಹುದ್ದೆ ನೀಡಲಾಗುವುದು. ಈಗಾಗಲೇ ಸರ್ಕಾರ 30 ಲಕ್ಷ ಪರಿಹಾರ ಘೋಷಣೆ ಮಾಡಿದೆ. ನಾಳೆ ಸಿಎಂ ಜೊತೆ ಚರ್ಚೆ ಮಾಡಿ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಇದು ಉದ್ದೇಶಪೂರ್ವಕವಾಗಿ ಆಗಿರುವ ಘಟನೆ ಅಲ್ಲ. ಎಲ್ಲರಿಗೂ ಕೆಲಸ ಒತ್ತಡವಿದೆ. ಈ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದರು.

    ಆರೋಗ್ಯಾಧಿಕಾರಿ ನಾಗೇಂದ್ರ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಾಗೇಂದ್ರ ಅವರು ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಅವರು ಕಳೆದ ಒಂದು ವರ್ಷದಿಂದ ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.