Tag: ಡಾ. ಜಿ ಪರಮೇಶ್ವರ್

  • ಚಿಂಚೋಳಿ ಉಪಸಮರ ಗೆಲ್ಲಲು ಕೈ, ಕಮಲ ಮಾಸ್ಟರ್ ಪ್ಲಾನ್

    ಚಿಂಚೋಳಿ ಉಪಸಮರ ಗೆಲ್ಲಲು ಕೈ, ಕಮಲ ಮಾಸ್ಟರ್ ಪ್ಲಾನ್

    ಗುಲ್ಬರ್ಗ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿವೆ. ಎರಡು ರಾಷ್ಟ್ರೀಯ ಪಕ್ಷಗಳು ಈ ಕ್ಷೇತ್ರವನ್ನು ಪ್ರತಿಷ್ಠೆಯ ಕಣವನ್ನಾಗಿಸಿದ್ದು ಭಾರೀ ಪೈಪೋಟಿ ಆರಂಭವಾಗಿದೆ.

    ಚಿಂಚೋಳಿ ಉಪಚುನಾವಣೆಯ ಉಸ್ತುವಾರಿಯನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ವಹಿಸಿಕೊಂಡಿದ್ದು ಅವರ ನಿರ್ದೇಶನದಂತೆ ಪ್ರಚಾರ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ತಾಲೂಕಿನ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಓರ್ವ ಸಚಿವ ಮತ್ತು ಇಬ್ಬರು ಶಾಸಕರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಸಚಿವರಾದ ಬಂಡೆಪ್ಪ ಕಾಶೆಂಪುರ್, ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್ ನೇತೃತ್ವದಲ್ಲಿ ಉಪಸಮರ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ.

    ಕಾಂಗ್ರೆಸ್ ನಾಯಕರ ಮಾಸ್ಟರ್ ಪ್ಲಾನ್‍ಗೆ ಕಮಲ ನಾಯಕರು ರಣತಂತ್ರವನ್ನು ರೂಪಿಸಿದ್ದು. ಮಾಜಿ ಸಚಿವ ವಿ ಸೋಮಣ್ಣ, ಲಕ್ಷ್ಮಣ ಸವದಿ, ಶಾಸಕರಾದ ರಾಜುಗೌಡ, ದತ್ತಾತ್ರೇಯ ಪಾಟೀಲ್ ಸೇರಿದಂತೆ ಹಲವಾರು ಶಾಸಕರನ್ನು ನೇಮಕ ಮಾಡಿದ್ದಾರೆ. ಕ್ಷೇತ್ರದ ಪ್ರತಿ ಜಿಲ್ಲಾ ಪಂಚಾಯತ್ ನಾಯಕರನ್ನು ಉಸ್ತುವಾರಿಯಾಗಿ ನೇಮಕ ಮಾಡಿ ಚುನಾವಣೆ ಗೆಲ್ಲಲು ಪ್ರಯತ್ನ ನಡೆಸುತ್ತಿದ್ದಾರೆ.

    ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಲಬುರಗಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಖಾಲಿಯಾಗಿರುವ ಈ ಕ್ಷೇತ್ರಕ್ಕೆ ಮೆ.19 ರಂದು ಉಪಚುನಾವಣೆ ಘೋಷಣೆಯಾಗಿದೆ.

  • ಬಿಎಸ್‍ವೈ ನಿವೃತ್ತಿಗೆ ಡಿಸಿಎಂ ಆಗ್ರಹ- ಇತ್ತ ಆತ್ಮಸಾಕ್ಷಿಗೆ ಡಿಕೆಶಿ ಅಭಿನಂದನೆ

    ಬಿಎಸ್‍ವೈ ನಿವೃತ್ತಿಗೆ ಡಿಸಿಎಂ ಆಗ್ರಹ- ಇತ್ತ ಆತ್ಮಸಾಕ್ಷಿಗೆ ಡಿಕೆಶಿ ಅಭಿನಂದನೆ

    ತುಮಕೂರು/ಬೆಂಗಳೂರು: ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿಗೆ ಪಡೆದುಕೊಳ್ಳಲಿ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ. ಇತ್ತ ತನ್ನ ತಪ್ಪೊಪ್ಪಿಕೊಂಡ ಬಿಎಸ್‍ವೈ ಅವರನ್ನು ಸಚಿವ ಡಿಕೆ ಶಿವಕುಮಾರ್ ಅಭಿನಂದಿಸಿದ್ದಾರೆ.

    ತುಮಕೂರಿನಲ್ಲಿ ಮಾತನಾಡಿದ ಡಿಸಿಎಂ, ಆಡಿಯೋ ಸಾಬೀತಾದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸೋದಾಗಿ ಹೇಳಿದ್ದರು. ಈಗ ಅವರೇ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಬಿಎಸ್‍ವೈ ಕೂಡಲೇ ನಿವೃತ್ತಿಯಾಗಲಿ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ ಸ್ಪೀಕರ್ ಅವರು ಕೂಡ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡೋದಾಗಿ ಅವರು ಹೇಳಿದ್ರು.  

    ಈ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮದ ಮೂಲಕ ತಿಳಿಯಿತು. ಆದ್ರೆ ಅವರು ಏನ್ ಹೇಳಿಕೆ ನೀಡಿದ್ದರು ಎಂದು ನನಗೆ ಗೊತ್ತಿಲ್ಲ. ತಾವು ಮಾಡಿದ ತಪ್ಪು ಒಪ್ಪಿಕೊಂಡಿದ್ದಾರೆ ಅಂದ್ರೆ ಅಲ್ಲಿ ಮಿಮಿಕ್ರಿ ಪ್ರಶ್ನೆ ಬರೋದಿಲ್ಲ ಅಂದ್ರು. ಇದನ್ನೂ ಓದಿ: ನಾನು ಹಿಟ್ಲರ್ ಅಲ್ಲ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ: ರಮೇಶ್‍ಕುಮಾರ್

    ರಾಜಕೀಯದಲ್ಲಿ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದ ಡಿಕೆಶಿ ತಪ್ಪೊಪ್ಪಿಕೊಂಡಿರುವ ಬಿಎಸ್‍ವೈ ಅವರ ಆತ್ಮಸಾಕ್ಷಿಗೆ ಇದೇ ವೇಳೆ ಅಭಿನಂದನೆ ಸಲ್ಲಿಸಿದ್ರು. ಈ ಮೂಲಕ ವಿಪಕ್ಷಗಳ ಟೀಕೆಗೆ ಸಚಿವರು ತಿರುಗೇಟು ನೀಡಿದ್ರು. ಆತ್ಮಸಾಕ್ಷಿಯಿಂದಲೇ ನಾನು ನಡೆಯಬೇಕು. ಉಳಿದ ವಿಚಾರವನ್ನು ಸ್ಪೀಕರ್ ಗೆ ಬಿಡೋಣ. ನಾಳೆ ಅವರು ಏನ್ ಹೇಳ್ತಾರೋ, ಪ್ರಕರಣ ಯಾವ ದೃಷ್ಟಿಯಲ್ಲಿ ಹೋಗುತ್ತದೆ ಎಂಬುದನ್ನು ಕಾದುನೋಡೋಣ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಮಾನ ನಿಲ್ದಾಣದಲ್ಲೇ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದ ಜಿ. ಪರಮೇಶ್ವರ್

    ವಿಮಾನ ನಿಲ್ದಾಣದಲ್ಲೇ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದ ಜಿ. ಪರಮೇಶ್ವರ್

    ಬೆಳಗಾವಿ: ಸಿಆರ್​ಪಿಎಫ್ ಯೋಧ ಉಮೇಶ್ ಅವರ ಪಾರ್ಥಿವ ಶರೀರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಹುತಾತ್ಮ ಯೋಧನಿಗೆ ವಿಮಾನ ನಿಲ್ದಾಣದಲ್ಲೇ ಗೌರವ ಸಲ್ಲಿಸಿ ಜಮಖಂಡಿಯತ್ತ ಪ್ರಯಾಣ ಬೆಳೆಸಿದರು.

    ಗೋಕಾಕ್ ಸಿಆರ್​ಪಿಎಫ್ ಯೋಧ ಮಣಿಪುರದಲ್ಲಿ ಹುತಾತ್ಮರಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಯೋಧನಿಗೆ ಗೌರವ ಸಲ್ಲಿಸಿದ್ದೇವೆ. ಹುತಾತ್ಮ ಯೋಧ ಉಮೇಶ್ 20 ಜನ ಯೋಧರ ಪ್ರಾಣ ಉಳಿಸಿದ್ದಾರೆ. ಯೋಧನ ಧೈರ್ಯ ಹಾಗೂ ಸಾಹಸಕ್ಕೆ ನಾನು ನನ್ನ ನಮನವನ್ನು ಸಲ್ಲಿಸುತ್ತೇನೆ. ಸರ್ಕಾರ ಯೋಧನ ಕುಟುಂಬಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.

    ಅಲ್ಲದೇ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು ಜಮಖಂಡಿ ಚುನಾವಣೆ ಉಸ್ತುವಾರಿ ಆಗಿ ನನ್ನನ್ನು ನೇಮಕ ಮಾಡಿದ್ದಾರೆ. 5 ಕ್ಷೇತ್ರದಲ್ಲಿ ನಮ್ಮ ಗೆಲ್ಲುವು ನಿಶ್ಚಿತವಾಗಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬಾರದು. ಮುಂದಿನ ಲೋಕಸಭಾ ಚುನಾವಣೆಗೆ ಈ ಎಲೆಕ್ಷನ್ ದಿಕ್ಸೂಚಿ ಅಲ್ಲ. ರಮೇಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಒಳ್ಳೆಯ ಫ್ರೆಂಡ್ಸ್. ಅವರಿಬ್ಬರು ಮಾತನಾಡುವುದು ಸಹಜ. ಇವರಿಬ್ಬರಿಗೂ ಬಹಿರಂಗವಾಗಿ ಮಾತನಾಡದಿರಲು ಸೂಚಿಸುತ್ತೇವೆ. ಎಂಇಎಸ್ ಕರಾಳ ದಿನ ಆಚರಣೆ ಹೊಸದಲ್ಲ. ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರದ ಗೊಂದಲದಿಂದ ಅಭಿವೃದ್ಧಿಗೆ ಹಿನ್ನೆಡೆ ಆಗಲ್ಲ: ಪರಮೇಶ್ವರ್

    ಸಮ್ಮಿಶ್ರ ಸರ್ಕಾರದ ಗೊಂದಲದಿಂದ ಅಭಿವೃದ್ಧಿಗೆ ಹಿನ್ನೆಡೆ ಆಗಲ್ಲ: ಪರಮೇಶ್ವರ್

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಂದರೆ ಗೊಂದಲ ಸರ್ವೆ ಸಾಮಾನ್ಯ. ಅದನ್ನು ಬಗೆಹರಿಸಿಕೊಂಡು ಹೋಗಲು ಒಪ್ಪಿಕೊಂಡಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಗೊಂದಲದಿಂದ ರಾಜ್ಯದ ಅಭಿವೃದ್ಧಿ ಹಿನ್ನೆಡೆಗೆ ಅವಕಾಶ ಕೊಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

    ನೆಲಮಂಗಲ ಸಮೀಪದ ಮಾದವಾರದ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ‘ವಿಶ್ವ ಬಸ್ ಪ್ರದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ, ನಾವು ಐದು ವರ್ಷ ಪೂರ್ಣವಾಗಿ ಸರ್ಕಾರ ನಡೆಸುತ್ತೇವೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು.

    ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದ ಅವರು, ಇನ್ನು ಸಿದ್ದರಾಮಯ್ಯ ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಕುರಿತು ಅವರನ್ನೇ ಹೇಳಬೇಕು. ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ನೀವೇ ಚುನಾವಣೆಯಲ್ಲಿ ನಿಂತು ಗೆಲುವು ಸಾಧಿಸಿ, ಮುಖ್ಯಮಂತ್ರಿಯಾಗಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಡಿಸಿಎಂ ಪರಮೇಶ್ವರ್ ಆಫರ್ ಕೊಟ್ಟು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

    ಆಧುನಿಕ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲು ಇಂತಹ ಪ್ರದರ್ಶನ ಸಹಾಯವಾಗುತ್ತದೆ. ಬೆಂಗಳೂರಿನಲ್ಲಿ ಪ್ರದರ್ಶನ ಆಯೋಜಿಸಿರುವುದರಿಂದ ಕೈಗಾರಿಕೋದ್ಯಮ ಬೆಳವಣಿಗೆಗೆ ಹಾಗೂ ಸಣ್ಣ ಉದ್ಯಮಿಗಳ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಉಷಾರಾಣಿಗೆ ಪ್ರಮೋಷನ್!

    ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಉಷಾರಾಣಿಗೆ ಪ್ರಮೋಷನ್!

    – ಸರ್ಕಾರದಿಂದ ಸನ್ಮಾನ, ಡಿಸಿಎಂ ಅಭಿನಂದನೆ

    ಬೆಂಗಳೂರು: ಚಿನ್ನದ ಪದಕ ಗೆಲ್ಲುವ ನೀರಿಕ್ಷೆ ಇತ್ತು ಆದ್ರೆ ಬೆಳ್ಳಿ ಗೆದ್ದಿದ್ದೇವೆ. ಇಂದು ರಾಜ್ಯ ಸರ್ಕಾರ ನನ್ನನ್ನು ಗೌರವಿಸಿ, ಬಿ ದರ್ಜೆಯ ಪ್ರಮೋಷನ್ ನೀಡಿದೆ ಅಂತ ಏಷ್ಯನ್ ಗೇಮ್ಸ್ ನ ಕಬಡ್ಡಿಯಲ್ಲಿ ಬೆಳ್ಳಿ ಪದಕ ಗೆದ್ದಿರುವ ರಾಜ್ಯ ಪೊಲೀಸ್ ಕಾನ್ಸ್ ಸ್ಟೇಬಲ್ ಉಷಾರಾಣಿ ಹೇಳಿದ್ದಾರೆ.

    ಉಷಾರಾಣಿ ಅವರು ರಾಷ್ಟ್ರಮಟ್ಟದಲ್ಲಿ ಕಬ್ಬಡಿ ತಂಡವನ್ನು ಪ್ರತಿನಿಧಿಸಿ, ಬೆಳ್ಳಿ ಗೆದ್ದಿದ್ದಾರೆ. ಹೀಗಾಗಿ ಸರ್ಕಾರದಿಂದ 15 ಲಕ್ಷ ಚೆಕ್ ನೊಂದಿಗೆ ಸನ್ಮಾನಿತಗೊಂಡರು. ಸನ್ಮಾನದ ನಂತರ ಗೆಲುವಿನ ಖುಷಿ ಹಂಚಿಕೊಂಡ ಅವರು, ಚಿನ್ನದ ಪದಕ ಗೆಲ್ಲುವ ನೀರಿಕ್ಷೆ ಇತ್ತು. ಆದ್ರೆ ಬೆಳ್ಳಿ ಗೆದ್ದಿದ್ದೇವೆ. ರಾಜ್ಯ ಸರ್ಕಾರ ನನ್ನನ್ನು ಗೌರವಿಸಿದ್ದಕ್ಕೆ ಹೆಮ್ಮೆ ಇದೆ. ಹೀಗಾಗಿ ತುಂಬಾ ಖುಷಿಯಾಗುತ್ತಿದೆ. ಬಿ ದರ್ಜೆಯ ಪ್ರಮೋಷನ್ ನೀಡಿದ್ದಾರೆ. ಇಲಾಖೆಯಲ್ಲಿ ಇದೇ ಮೊದಲಿಗೆ ಮುಂಬಡ್ತಿ ಕೊಡುತ್ತಿರುವುದು. ಅದು ನನಗೆ ಸಿಕ್ಕಿರೋದು ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಚಿನ್ನ ಗೆಲ್ಲುವ ಭರವಸೆ ಇದೆ. ನನ್ನ ಶ್ರಮಕ್ಕೆ ಇಲಾಖೆಯೂ ಸಹಕಾರ ಕೊಟ್ಟಿದೆ ಅಂತ ಅವರು ಹೇಳಿದ್ರು.

    ಉಷಾರಾಣಿ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಜಿ ನೀಲಮಣಿರಾಜು, ಎಡಿಜಿಪಿ ಭಾಸ್ಕರ್ ರಾವ್ ಮತ್ತು ಕಮಿಷನರ್ ಸುನೀಲ್ ಕುಮಾರ್ ಭಾಗಿಯಾದ್ದರು.  ಇದನ್ನೂ ಓದಿ: ಸಾಧನೆಯ ಹಾದಿಯನ್ನು ತೆರೆದಿಟ್ಟ ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತೆ ಉಷಾರಾಣಿ

    ಡಿಸಿಎಂ ಅಭಿನಂದನೆ:
    ಜಕಾರ್ತ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮಹಿಳಾ ತಂಡ ಬೆಳ್ಳಿ ಪದಕ ಪಡೆದಿದೆ. ಮಹಿಳಾ ಕಬ್ಬಡಿ ತಂಡದಲ್ಲಿ ಬೆಂಗಳೂರಿನ ಉಷಾರಾಣಿ ಭಾಗವಹಿಸಿದ್ದರು. ಇವರು ನಮ್ಮ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ನಮ್ಮ ರಾಜ್ಯಕ್ಕೆ ನಮ್ಮ ಇಲಾಖೆಗೆ ಕೀರ್ತಿ ತಂದಿದ್ದಾರೆ. ನಮ್ಮ ಇಲಾಖೆ ಮತ್ತು ಯುವಜನಾ ಕ್ರೀಡಾ ಇಲಾಖೆಯಿಂದ 15 ಲಕ್ಷ ಚೆಕ್ ನೀಡಿದ್ದೇವೆ. ನಮ್ಮ ಪೊಲೀಸ್ ಇಲಾಖೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದೇವೆ ಅಂತ ಡಿಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ

    ಹಿಮಾದಾಸ್ ಗೂ 15 ಲಕ್ಷ ರೂ.:
    ಸರ್ಕಾರದಲ್ಲಿ ನಿಯಮಾವಳಿಗಳನ್ನ ಬದಲಾವಣೆ ಮಾಡುತ್ತಿದ್ದೇವೆ. ಉಷಾರಾಣಿ ಅವರಿಗೆ ಬಿ ದರ್ಜೆಗೆ ಪ್ರಮೋಷನ್ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗಳಿಸಬೇಕು ಅಂತಾ ಆಶಿಸುತ್ತೇನೆ. ಅವರ ತಂದೆ ತಾಯಿ ಮತ್ತು ಕೋಚ್ ಜಗದೀಶ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇವೆ. ನಮ್ಮ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಬೆಳ್ಳಿ ಪದಕ ಪಡೆದ ಹಿಮಾದಾಸ್ ಅವರಿಗೂ 15 ಲಕ್ಷ ರೂಪಾಯಿ ಬಹುಮಾನ ನೀಡುತ್ತಿದ್ದೇವೆ. ನಮ್ಮ ರಾಜ್ಯದ ಫೋಲ್ಸ್ ಇರ್ಜಾ ಮತ್ತು ರೋಹಣ ಬೋಪಣ್ಣ ಅವ್ರಿಗೂ ಇಲಾಖೆ ವತಿಯಿಂದ ಗೌರವ ಸಮರ್ಪಣೆ ಮಾಡುತ್ತೇವೆ ಅಂತಾ ಪರಮೇಶ್ವರ್ ಅಂದ್ರು. ಇದನ್ನೂ ಓದಿ: 400 ಮೀಟರ್ ರೇಸ್: ಹಿಮಾದಾಸ್, ಅನಾಸ್‍ಗೆ ಬೆಳ್ಳಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಇದನ್ನೂ ಓದಿ:  ನಟ ಪುನೀತ್, ಡಿಸಿಪಿ ಚನ್ನಣ್ಣನವರಿಂದ ಹಿಮಾದಾಸ್ ಗೆ ಅಭಿನಂದನೆ

  • ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಸುತ್ತಿನ ವಾರ್-ಉಸ್ತುವಾರಿ ನೇಮಕ ಕಾದಾಟದಲ್ಲಿ ಮಾಜಿ ಸಿಎಂ ಫುಲ್ ಗರಂ

    ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಸುತ್ತಿನ ವಾರ್-ಉಸ್ತುವಾರಿ ನೇಮಕ ಕಾದಾಟದಲ್ಲಿ ಮಾಜಿ ಸಿಎಂ ಫುಲ್ ಗರಂ

    ಬೆಂಗಳೂರು: ಮೊದಲ ಹಂತದ ಮಂತ್ರಿ ಸ್ಥಾನ ಹಂಚಿಕೆ, ಬಜೆಟ್ ಮುಗಿತು, ಈಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಗೆ ಸಂಬಂಧಸಿದಂತೆ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಬುಗಿಲೆದ್ದಿದ್ದು, ವಿಧಾನಸಭೆಯ ಚುನಾವಣೆಯ ಪೈಪೋಟಿಯ ಕಾವು ಮತ್ತೆ ಮರುಕಳಿಸಿದೆ.

    ಮಂಗಳವಾರ ಸಮ್ಮಿಶ್ರ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಣಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ನೀಡಿದ್ದಕ್ಕೆ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರಂತೆ.

    ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಂಡದ ಯೋಜನೆಯಂತೆಯೇ ಜಿಲ್ಲಾ ಉಸ್ತುವಾರಿ ನೇಮಕ ನಡೆದಿದೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತಕ್ಷೇತ್ರದಿಂದ ಭಾರೀ ಪೈಪೋಟಿ ನೀಡಿ, ಜಯಗಳಿಸಿದ್ದ ಜಿ.ಟಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ಅಸಮಾಧಾನದ ಹೊಗೆ ಇನ್ನು ಶಮನಗೊಂಡಿಲ್ಲ. ಕಳೆದ ಕೆಲವು ದಿನಗಳಿಂದ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿಯೂ ಇಬ್ಬರ ನಾಯಕರ ಮಧ್ಯೆ ಶೀತಲ ಸಮರ ಏರ್ಪಟ್ಟಿತ್ತು. ಈಗ ಮೈಸೂರು ಜಿಲ್ಲಾ ಉಸ್ತುವಾರಿಯೂ ಜಿ.ಟಿ.ದೇವೇಗೌಡರು ಅಂದು ಕೊಂಡಂತೆ ಆಗಿದೆ.

    ತಮ್ಮ ಆಪ್ತ ಹಾಗೂ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕೊಟ್ಟಿರೋದಕ್ಕೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯವರ ಮಾತನ್ನೇ ಕೇಳುತ್ತಿಲ್ಲವಂತೆ. ಈಗ ಜಿಲ್ಲಾ ಉಸ್ತವಾರಿ ನೇಮಕದ ನಡೆ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಹಂಚಿಕೆ ಅಸಮಾಧಾನಕ್ಕೆ ಕಾರಣವಾಗಿದೆ.

  • ಕಾಂಗ್ರೆಸ್ ಸಿಎಲ್‍ಪಿ ಸಭೆ: ಏನೇನು ಚರ್ಚೆ ಆಯ್ತು? ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಕಾಂಗ್ರೆಸ್ ಸಿಎಲ್‍ಪಿ ಸಭೆ: ಏನೇನು ಚರ್ಚೆ ಆಯ್ತು? ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಬೆಂಗಳೂರು: ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ಈ ವೇಳೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಮೊದಲ ಸಿಎಲ್‍ಪಿ ಸಭೆ ಇಂದು ನಡೆದಿದ್ದು, ಸಭೆಯಲ್ಲಿ ಬಜೆಟ್ ಮಂಡನೆಯಿಂದಾದ ಗೊಂದಲದ ಜೊತೆಗೆ ಸಭಾಪತಿ ಸ್ಥಾನ ಜೆಡಿಎಸ್‍ಗೆ ಬಿಟ್ಟುಕೊಡುವ ವಿಚಾರ, ಸಂಪುಟ ವಿಸ್ತರಣೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ನಿಗಮ ಮಂಡಳಿ ನೇಮಕ, ಪೆಟ್ರೋಲ್, ವಿದ್ಯುತ್ ದರ ಏರಿಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

    ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ನೀವು ತಲೆ ಅಲ್ಲಾಡಿಸುತ್ತೀರಿ. ಡಿಸಿಎಂ ಹುದ್ದೆ, ಅಧಿಕಾರ ಬರುತ್ತೆ ಹೋಗುತ್ತೆ. ಆದ್ರೆ ನಮಗೆ ಪಕ್ಷ ಮುಖ್ಯವಾಗುತ್ತದೆ. ಕಾಂಗ್ರೆಸ್ ಪಕ್ಷದ ಬುಡ ಅಲುಗಾಡದಂತೆ ನೋಡಿಕೊಳ್ಳಿ ಎಂದು ಕೈ ಶಾಸಕರು ಪರಮೇಶ್ವರ್ ಅವರನ್ನು ಪ್ರಶ್ನಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.

    ಸಭೆಯಲ್ಲಿ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಬಗ್ಗೆ ಒಂದೇ ಒಂದು ವಿಷಯ ಪ್ರಸ್ತಾಪಕ್ಕೆ ಮಾಡದ್ದಕ್ಕೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ಕೆಟ್ಟ ಸಂದೇಶ ರವಾನೆ ಆಗುತ್ತದೆ. ಬಜೆಟ್ ಉತ್ತರದಲ್ಲಿ ಇದನ್ನ ಸರಿಪಡಿಸಬೇಕು. ಕಾಂಗ್ರೆಸ್ ನಾಯಕರ ಜೊತೆಗೆ ಸಮಾಲೋಚನೆ ಮಾಡದೇ ಪೆಟ್ರೋಲ್ ಸೆಸ್ ಏರಿಕೆ ಮಾಡಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಹೀಗಿರುವಾಗ ನಮ್ಮ ಸರ್ಕಾರದಲ್ಲೇ ಸೆಸ್ ಬೆಲೆ ಏರಿಕೆಗೆ ಸಮ್ಮತಿ ನೀಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸರ್ಕಾರಕ್ಕೆ ಪೆಟ್ರೋಲ್ ಮೇಲಿನ ಸೆಸ್ ಗೆ ಸಾವಿರ ಕೋಟಿ ಹೊರೆಯಾಗಬಹುದು. ಹಾಗಂತ ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದು ಸರಿಯಿಲ್ಲ. ಇದನ್ನು ವಾಪಾಸ್ ಪಡೆಯಬೇಕು. ಈ ಬಗ್ಗೆ ಸಿಎಂ ಗಮನ ಸೆಳೆಯಲು ಕಾಂಗ್ರೆಸ್ ನಾಯಕರು ತೀರ್ಮಾನಿಸಬೇಕು. ಇನ್ನೂ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಇದ್ದ ಏಳು ಕೆಜಿ ಅಕ್ಕಿಯನ್ನು ಕೊಡಬೇಕು. ಎರಡು ಕೆಜಿ 700 ಕೋಟಿ ರೂಪಾಯಿ ಹೆಚ್ಚಳವಾಗುತ್ತದೆ. ಅದು ಸರ್ಕಾರಕ್ಕೆ ಅಷ್ಟೊಂದು ಹೊರೆಯಾಗೋದಿಲ್ಲ. ಐದು ಕೆಜಿ ಯಿಂದ ಎರಡು ಕೆಜಿ ಗೆ ಇಳಿಸಿರೋದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗೆ ಈ ರೀತಿ ಕತ್ತರಿ ಹಾಕಿದ್ದು ಸರಿಯೇ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರನ್ನು ಶಾಸಕರು ಪ್ರಶ್ನಿಸಿದ್ದಾರೆ. ನಾಳೆ ಬಜೆಟ್ ಮೇಲೆ ಸಿಎಂ ಉತ್ತರ ಕೊಡುವಾಗ ಇವೆಲ್ಲವನ್ನು ಹೇಳಬೇಕು. ಈ ಬಗ್ಗೆ ಕಾಂಗ್ರೆಸ್ ನಾಯಕರು ಒಟ್ಟಾಗಿ ಸಿಎಂ ಗಮನಕ್ಕೆ ತರಬೇಕು ಅಂತ ಶಾಸಕರು ಆಗ್ರಹಿಸಿದ್ದಾರೆ.

    ಈ ವೇಳೆ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಭಾಗದ ಶಾಸಕರಿಂದ ಅಸಮಾಧಾನ ವ್ಯಕ್ತವಾಗಿದೆ. ಪೆಟ್ರೋಲ್ ಏರಿಕೆ ಬಗ್ಗೆ ನಾವೇ ಕೇಂದ್ರ ಸರ್ಕಾರದ ಹೋರಾಟ ಮಾಡಿದ್ವಿ. ಈಗ ನಾವೇ ಹೆಚ್ಚಳ ಮಾಡಿದ್ರೆ ನಾವು ಹೇಗೆ ಮುಂದೆ ಹೋರಾಟ ಮಾಡೋದು? ಜನ ಸಾಮಾನ್ಯರಿಗೆ ಹೊರೆ ಆಗುವಂತೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದು ಸರಿಯಲ್ಲ. ಹಿಂಗೆ ಆದ್ರೆ ನಾವು ಜನರ ಬಳಿ ಹೋಗೋದು ಹೇಗೆ ಅಂತ ಶಾಸಕರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

    ಸಭೆಯ ಮಧ್ಯೆ ಕೆಪಿಸಿಸಿ ಅಧ್ಯಕ್ಷ, ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೊರನಡೆದಿದ್ದರು.

    ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಕೆ ಪಾಟೀಲ್, ಸಿಎಂ ಹಾಗೂ ಸಿದ್ದರಾಮಯ್ಯಗೆ ಬರೆದ ಪತ್ರದ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿದೆ. ಬಜೆಟ್ ನಲ್ಲಿ ಉತ್ತರ ಕರ್ನಾಟಕ ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿರುವ ಬಗ್ಗೆ ತಿಳಿಸಿದ್ದೇನೆ. ನನ್ನ ಅನಿಸಿಕೆಯನ್ನ ಸಭೆಯಲ್ಲಿ ತಿಳಿಸಿದ್ದು, ಅದನ್ನು ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಪೂರ್ಣ ಕರ್ನಾಟಕಕ್ಕೆ ಒಳ್ಳೆಯಾದಾಗುವ ಕುರಿತು ನಿರ್ಧಾರ ಮಾಡ್ತಾರೆ ಅನ್ನೋ ಭರವಸೆ ಇದೆ. ನನ್ನ ಅನಿಸಿಕೆಯನ್ನು ಬಹುತೇಕ ಶಾಸಕರು ಕೂಡ ಒಪ್ಪಿಕೊಂಡ್ರು. ರೈತರ ಸಾಲಮನ್ನಾ ಎಲ್ಲಾ ಭಾಗದ ರೈತರಿಗೂ ಆಗಬೇಕು ಅನ್ನೊ ವಿಚಾರವನ್ನ ತಿಳಿಸಿದ್ದೇನೆ. ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಳ ವಿಚಾರವನ್ನೂ ಪ್ರಸ್ತಾಪ ಮಾಡಿದ್ದು, ಅದನ್ನ ಕಡಿಮೆ ಮಾಡಬೇಕು ಅಂತ ತಿಳಿಸಿದ್ದೇವೆ ಅಂತ ಹೇಳಿದ್ರು.

    ಮುಂದಿನ ಚುನಾವಣೆಗೆ ಶಿಸ್ತಿನಿಂದ ಕೆಲಸ ಮಾಡಲು ಸೂಚನೆ ಮಾಡಲಾಗಿದೆ. ಪರಿಷತ್ ಸಭಾಪತಿ ಸ್ಥಾನ ಬೇಗ ಮಾಡಬೇಕು ಅನ್ನೋದನ್ನ ಕೆಲವರು ಹೇಳಿದ್ದಾರೆ. ನಮ್ಮ ರಾಷ್ಟ್ರೀಯ ಕಾರ್ಯದರ್ಶಿ ಬಂದಿದ್ದಾರೆ. ಅವರು ಈ ಬಗ್ಗೆ ಚರ್ಚೆ ಮಾಡ್ತಾರೆ. ಮುಂದಿನ ಚುನಾವಣೆಗೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಅಂತ ಇದೇ ವೇಳೆ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

    ಆರ್ ವಿ ದೇಶಪಾಂಡೆ, ಕೆ ಜೆ ಜಾರ್ಜ್, ಪುಟ್ಟರಂಗಶೆಟ್ಟಿ, ಹ್ಯಾರೀಸ್, ತನ್ವೀರ್ ಸೇಠ್, ಎಚ್ ಎಂ ರೇವಣ್ಣ,ಸೋಮಶೇಖರ್ ರಾಜಶೇಖರ್ ಪಾಟೀಲ್, ಸಚಿವೆ ಜಯಮಾಲ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಐವಾನ್ ಡಿಸೋಜಾ, ಬಿಸಿ ಪಾಟೀಲ್, ಎಸ್ ಆರ್ ಪಾಟೀಲ್, ಶಿವಶಂಕರ್ ರೆಡ್ಡಿ, ಪ್ರಿಯಾಂಕ ಖರ್ಗೆ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

  • ಬಿಎಂಆರ್‌ಸಿಎಲ್‌ ಖಾತೆಗಾಗಿ ಸಿಎಂ ಎಚ್‍ಡಿಕೆ, ಡಿಸಿಎಂ ಪರಂ ನಡುವೆಯೇ ಹಗ್ಗಜಗ್ಗಾಟ!

    ಬಿಎಂಆರ್‌ಸಿಎಲ್‌ ಖಾತೆಗಾಗಿ ಸಿಎಂ ಎಚ್‍ಡಿಕೆ, ಡಿಸಿಎಂ ಪರಂ ನಡುವೆಯೇ ಹಗ್ಗಜಗ್ಗಾಟ!

    ಬೆಂಗಳೂರು: ಸಾಂದರ್ಭಿಕ ಶಿಶು ಮೈತ್ರಿ ಸರ್ಕಾರದಲ್ಲಿ ಈಗ ಮತ್ತೊಂದು ಹೊಸ ರಾಗ ಆರಂಭವಾಗಿದೆ. ಸಚಿವ ಸ್ಥಾನ ಹಂಚಿಕೆ ಸಮಸ್ಯೆ ಇನ್ನು ಬಾಕಿ ಇರುವಂತೆ ಸಿಎಂ ಹಾಗೂ ಡಿಸಿಎಂ ಮಧ್ಯೆ ಖಾತೆ ಹಂಚಿಕೆಯಲ್ಲಿ ಮನಸ್ತಾಪ ಎದುರಾಗುತ್ತಿದೆಯಂತೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನಡುವೆ ಖಾತೆ ಹಂಚಿಕೆಗಾಗಿ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ. ನನಗೆ ಅದು ಬೇಕು, ಕೊಟ್ಟುಬಿಡಿ ಎಂದು ಪರಮೇಶ್ವರ್ ಅವರು ಪಟ್ಟು ಹಿಡಿದಿದ್ದಾರಂತೆ.

    ಡಿಸಿಎಂ ಪರಮೇಶ್ವರ್ ಕೇಳಿದ್ದೇನು:
    ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಪರಮೇಶ್ವರ್ ಅವರು ಸದ್ಯ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಟ್ (ಬಿಎಂಆರ್ ಸಿಎಲ್) ಖಾತೆಯೂ ಬೇಕೆಂದು ಪಟ್ಟು ಹಿಡಿದಿದ್ದಾರೆ. ನಾನು ಈಗಾಗಲೇ ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವೆ. ಹೀಗಾಗಿ ಬಿಎಂಆರ್ ಸಿಎಲ್ ಖಾತೆ ನನ್ನ ಬಳಿಯೇ ಇದ್ದರೆ, ಅಭಿವೃದ್ಧಿ ಕಾರ್ಯ ಸಾಧ್ಯವಾಗುತ್ತದೆ ಎಂದು ಹೊಸ ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಇತ್ತ ಜಿ.ಪರಮೇಶ್ವರ್ ಅವರ ಬೇಡಿಕೆಯನ್ನು ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ದೂರ ತಳ್ಳುತ್ತಿದ್ದಾರೆ. ಈ ಮೂಲಕ ಇಬ್ಬರ ನಡುವೆ ಹಗ್ಗಜಗ್ಗಾಟ ಪ್ರಾರಂಭವಾಗಿದ್ದು, ಸಮಸ್ಯೆ ಮಾಜಿ ಪ್ರದಾಣಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ಬಳಿಗೆ ಹೋಗುವ ಸಾಧ್ಯತೆಗಳಿವೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

  • ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬರಲಿದ್ದಾರೆ 20 ಶಾಸಕರು: ಡಾ.ಜಿ.ಪರಮೇಶ್ವರ್ ಸ್ಫೋಟಕ ಹೇಳಿಕೆ

    ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬರಲಿದ್ದಾರೆ 20 ಶಾಸಕರು: ಡಾ.ಜಿ.ಪರಮೇಶ್ವರ್ ಸ್ಫೋಟಕ ಹೇಳಿಕೆ

    ಹಾಸನ: ಬಿಜೆಪಿ ಪಕ್ಷದಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ 20 ಶಾಸಕರು ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಇಂದು ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಪಕ್ಷ ಸೇರಲು ಸಿದ್ಧರಿದ್ದಾರೆ. ಅವರೆಲ್ಲಾ ನಿರಂತರವಾಗಿ ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರು ಸೋದರರಂತೆ ಕಳೆದ ಏಳು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಕೆಲ ಸಮಯ ಸರ್ಕಾರ ಒಳಗೂ ಸೇವೆ ಸಲ್ಲಿಸಿದ್ದೇನೆ. ಈಗ ಪಕ್ಷ ಸಂಘಟಿಸಲು ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು.

    ಬಿಜೆಪಿಯವರು ಮೊದಲು ತಮ್ಮ ಪಕ್ಷದ ಆಂತರಿಕ ಗೊಂದಲಗಳನ್ನು ಬಗೆಹರಿಸಿಕೊಳ್ಳಲಿ. ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದು ನಮ್ಮತ್ತ ಬೊಟ್ಟು ಮಾಡೋದು ಬೇಡ. ಬಿಜೆಪಿಯವರು ಏನೇ ಮಾಡಿದರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿ ಪಕ್ಷದ ಪರಿವರ್ತನಾ ಯಾತ್ರೆ ಹಾಗೂ ಜೆಡಿಎಸ್ ಪಕ್ಷದ ವಿಕಾಸ ಯಾತ್ರೆಯಿಂದ ನಮಗೇನು ಭಯವಿಲ್ಲ. ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ನಾವು ಚುನಾವಣೆ ಎದುರಿಸುತ್ತೇವೆ. ನಾನು ಸಿಎಂ ಹುದ್ದೆಯ ಆಕಾಂಕ್ಷಿ ಅಭ್ಯರ್ಥಿಯಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ಪಕ್ಷ ದಲಿತ, ಹಿಂದುಳಿದ ಪಕ್ಷವಾಗಿದೆ. ನಾವು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಮೂಲಕ ಜನರನ್ನು ತಲುಪುತ್ತೇವೆ. ಪಕ್ಷದ ಸಾಧನೆಯನ್ನು ಪುಸ್ತಕ ರೂಪದಲ್ಲಿ ಬಿಡುಗಡೆಗೊಳಿಸಲಾಗಿದೆ. ನಾವು ಯಾವುದೇ ಯಾತ್ರೆಗಳನ್ನು ಮಾಡುವುದಿಲ್ಲ. ಆದರೆ 224 ಕ್ಷೇತ್ರಗಳಲ್ಲಿಯೂ ನಮ್ಮ ಕಾರ್ಯಕರ್ತರನ್ನು ಚುನಾವಣೆಗೆ ಸಿದ್ಧಗೊಳಿಸುತ್ತೇವೆ ಎಂದರು.

  • ಪರಮೇಶ್ವರ್ ಕೈಯಿಂದ 10ರೂ. ತಗೊಂಡು ಅಜ್ಜಿ ಕ್ಯಾಂಟೀನ್ ನಲ್ಲಿ ಊಟ ಸವಿದ ರಾಹುಲ್!

    ಪರಮೇಶ್ವರ್ ಕೈಯಿಂದ 10ರೂ. ತಗೊಂಡು ಅಜ್ಜಿ ಕ್ಯಾಂಟೀನ್ ನಲ್ಲಿ ಊಟ ಸವಿದ ರಾಹುಲ್!

    ಬೆಂಗಳೂರು: ಬಹುನಿರೀಕ್ಷಿತ ಇಂದಿರಾ ಕ್ಯಾಂಟೀನ್ ಗೆ ಕನಕನ ಪಾಳ್ಯದಲ್ಲಿ ಇಂದು ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಬಳಿಕ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರ ಬಳಿಯಿಂದ 10 ರೂ, ತೆಗೆದುಕೊಂಡು ಟೋಕನ್ ಕೊಟ್ಟು ಊಟ ಮಾಡಿದ್ದಾರೆ.

    ಅನ್ನ ಸಾಂಬಾರ್ ಮತ್ತು ರೈಸ್ ಬಾತ್ ಸವಿಯುತ್ತಿರುವ ರಾಹುಲ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಸಾಥ್ ನೀಡಿದ್ರು. ಕ್ಯಾಂಟೀನ್ ಒಳಹೊಕ್ಕು ವ್ಯವಸ್ಥೆಗಳನ್ನು ಪರಿಶೀಲಿಸಿದ ರಾಹುಲ್, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕ್ಯಾಂಟೀನ್ ಮೆನು ಬಗ್ಗೆಯೂ ತೃಪ್ತಿ ಪಟ್ಟಿದ್ದಾರೆ.

    ಕಾರ್ಯಕ್ರಮ ಉದ್ಘಾಟನೆಯ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಬೆಂಗಳೂರಿನಲ್ಲಿ ಯಾರು ಹಸಿವಿನಿಂದ ಇರಬಾರದು. ಊಟ ದೊಡ್ಡ ವಿಚಾರವಲ್ಲ ಹೋಟೆಲ್‍ಗೆ ಹೋಗಿ ಅವರಿಗೆ ಇಷ್ಟ ಇರೋ ಮೆನು ಹೇಳಿ ಊಟ ಮಾಡಬಹುದು. ಆದ್ರೇ ಯಾರು ದುಡ್ಡು ಇಲ್ಲದವರಿದ್ದಾರೋ ಆಟೋ ಡ್ರೈವರ್‍ಗಳು, ಕಾರ್ಮಿಕರು, ಬಡವರು ಅವರಿಗಾಗಿ ಈ ಇಂದಿರಾ ಕ್ಯಾಂಟೀನ್ ನೆರವಾಗುತ್ತದೆ. ನನಗೆ ಹೆಮ್ಮೆ ಇದೆ ಕಾಂಗ್ರೆಸ್ ಸರ್ಕಾರ ಐದು ರೂಪಾಯಿಗೆ ಬೆಳಗ್ಗೆ ಉಪಹಾರ ನೀಡುತ್ತೆ ಅಂತ ಹೇಳಿದ್ರು.

    ಇಂದಿರಾ ಕ್ಯಾಂಟೀನ್ ಬೆಂಗಳೂರಿಗೆ ಸೀಮಿತವಾಗಿರಲ್ಲ. ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ವಿಸ್ತರಿಸೋದಾಗಿ ಸಿಎಂ ನನ್ನ ಜೊತೆ ಚರ್ಚೆ ನಡೆಸಿದ್ದಾರೆ. 10 ರೂಪಾಯಿಗೆ ಊಟ ಕೊಡ್ತಾರೆ. ಜೊತೆಗೆ ಅಷ್ಟೇ ಶುಚಿತ್ವ ಹಾಗೂ ರುಚಿಯನ್ನು ಕಾಯ್ದು ಕೊಳ್ಳಲು ಶ್ರಮ ವಹಿಸುತ್ತಿದ್ದಾರೆ. ನಾನು ಸಹ ಇದ್ದನ್ನೆ ರಿಕ್ವೇಸ್ಟ್ ಮಾಡುತ್ತೇನೆ. ಇದು ಪ್ರಾರಂಭ, ಬೆಂಗಳೂರಿನಲ್ಲಿ ಮುಂದೆ ಕರ್ನಾಟಕದ ಹಲವು ನಗರಗಳಿಗೆ ಈ ಯೋಜನೆ ಸಿಗಲಿದೆ ಅಂತಾ ಈಗಾಗಲೇ ಸಿದ್ದರಾಮಯ್ಯ ಜೀ ಹೇಳಿದ್ದಾರೆ. ಈ ವಿಚಾರ ಕೇಳಿ ಸಂತಸವಾಗಿದೆ. ರಾಜ್ಯ ಸರ್ಕಾರದ ಈ ಸಾಧನೆಗೆ ನನ್ನ ಅಭಿನಂದನೆಗಳು ಅಂದ್ರು.

    ರಾಹುಲ್ ಗಾಂಧಿ ಬಾಷಣ ಮಾಡುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ನೆರೆದಿದ್ದ ಮಂದಿ ಎದ್ದು ಹೋದ್ರು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಇಂದಿರಾ ಕ್ಯಾಂಟೀನ್ ಲೋಗೋ ಡಿಸೈನ್ ಮಾಡಿದ ಕ್ರಿಯೇಟಿವ್ ಇನ್ಫ್ರಾ ಸಂಸ್ಥೆಗೆ ಒಂದು ಲಕ್ಷ ಬಹುಮಾನ ನೀಡಿದ್ರು. 770 ಲೋಗೋಗಳ ಪೈಕಿ ಕ್ರಿಯೇಟಿವ್ ಇನ್ಫ್ರಾ ಸಂಸ್ಥೆಯ ಲೋಗೋ ಆಯ್ಕೆಯಾಗಿದೆ.

    ಕಾರ್ಯಕ್ರಮದಲ್ಲಿ ಸಚಿವ ಕೆಜೆ ಜಾರ್ಜ್, ರಾಮಲಿಂಗರೆಡ್ಡಿ, ಡಿಕೆ ಶಿವ ಕುಮಾರ್, ಕೃಷ್ಣ ಬೈರೇಗೌಡ, ಯುಟಿ ಖಾದರ್, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್, ಎಂಎಲ್ ಎ ಆರ್ ವಿ ದೇವರಾಜ್, ಮುನ್ನಿರತ್ನ, ಮೇಯರ್ ಪದ್ಮಾವತಿ, ಎಂಎಲ್ ಸಿ ಪಿ ಆರ್ ರಮೇಶ್, ಎಚ್ ಎಂ ರೇವಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಾಹುಲ್ ಗಾಂಧಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.