Tag: ಡಾ ಕೆ ಸುಧಾಕರ್

  • ಚಿತ್ರದುರ್ಗದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಗ್ರೀನ್ ಸಿಗ್ನಲ್: ಡಾ.ಕೆ ಸುಧಾಕರ್

    ಚಿತ್ರದುರ್ಗದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಗ್ರೀನ್ ಸಿಗ್ನಲ್: ಡಾ.ಕೆ ಸುಧಾಕರ್

    ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯದ ಬಲವರ್ಧನೆಗಾಗಿ ಹೊಸ ಮೆಡಿಕಲ್ ಕಾಲೇಜುಗಳನ್ನು ಆರಂಭಿಸುವ ಕಾರ್ಯದಲ್ಲಿ ಇನ್ನಷ್ಟು ಪ್ರಗತಿ ಕಂಡುಬಂದಿದ್ದು, ಈಗ 500 ಕೋಟಿ ರೂ. ವೆಚ್ಚದ ಚಿತ್ರದುರ್ಗ ಮೆಡಿಕಲ್ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

    ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಈ ಮಹತ್ವದ ಹೆಜ್ಜೆಯಿಂದಾಗಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಕಾರ್ಯಕ್ಕೆ ಮತ್ತಷ್ಟು ಆದ್ಯತೆ ದೊರೆತಿದೆ ಎಂದು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ 100 ಎಂಬಿಬಿಎಸ್ ಸೀಟುಗಳ ಕಾಲೇಜು ಆರಂಭವಾಗಲಿದ್ದು, ನೂತನ ಕಟ್ಟಡ ನಿರ್ಮಾಣ ಭರದಿಂದ ಸಾಗಿದೆ. ಈ ನಡುವೆಯೇ, ಚಿತ್ರದುರ್ಗದಲ್ಲಿ 150 ಎಂಬಿಬಿಎಸ್ ಸೀಟುಗಳನ್ನು ಹೊಂದಲಿರುವ ‘ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ’ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಸಿವಿಲ್ ಕಾಮಗಾರಿ ಸೇರಿ ಒಟ್ಟು 500 ಕೋಟಿ ರೂ. ಖರ್ಚಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

    ಜನಸಂಖ್ಯೆಗೆ ಅನುಗುಣವಾಗಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿರುವ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಜೊತೆ ಹೊಸದಾಗಿ 4 ಸಂಸ್ಥೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥಗೆ 100 ಎಂಬಿಬಿಎಸ್ ಸೀಟುಗಳ ಪ್ರವೇಶ ಮಿತಿಯೊಂದಿಗೆ 2022-23 ನೇ ಸಾಲಿಗೆ ಲೆಟರ್ ಆಫ್ ಇಂಟೆಂಟ್ ನೀಡಲಾಗಿದೆ. ಇದರ ಜೊತೆಗೆ ಈಗ ಚಿತ್ರದುರ್ಗದಲ್ಲೂ ಕಾಲೇಜು ಕಟ್ಟಡದ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಈ ಮೂಲಕ ರಾಜ್ಯದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯರಾಗುವ ಕನಸು ನನಸಾಗಲಿದೆ. ಅಷ್ಟೇ ಅಲ್ಲದೆ ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡ ಆಸ್ಪತ್ರೆಗಳಲ್ಲಿ ಬಡವರಿಗೆ ಉನ್ನತ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಲಿದೆ ಎಂದು ತಿಳಿಸಿದ್ದಾರೆ.

    ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳ ಪ್ರಕಾರ ಪ್ರತಿ 1,000 ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು. ಆದರೆ ಕರ್ನಾಟಕದಲ್ಲಿ 1,800 ಜನಸಂಖ್ಯೆಗೆ ಒಬ್ಬ ವೈದ್ಯರ ಲಭ್ಯತೆ ಇದೆ. ಈ ಅಸಮತೋಲನ ಸರಿಪಡಿಸಲು ಹಾಗೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಇದೇ ಪ್ರಯತ್ನದ ಭಾಗವಾಗಿ ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಸಲಗದ ನಂತರ ಮತ್ತೆ ನಿರ್ದೇಶನಕ್ಕೆ ದುನಿಯಾ ವಿಜಯ್

    2014-15 ಸಾಲಿನ ಆಯವ್ಯಯದಲ್ಲಿನ ಘೋಷಣೆಯಂತೆ ಚಿತ್ರದುರ್ಗದಲ್ಲಿ 150 ಸೀಟುಗಳ ಎಂಬಿಬಿಎಸ್ ಕಾಲೇಜನ್ನು 2015-16ರಲ್ಲೇ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಆದರೆ 2013-14 ರ ಆರ್ಥಿಕ ವರ್ಷದಲ್ಲಿ ಕಲಬುರ್ಗಿ, ಗದಗ, ಕೊಪ್ಪಳ, ಕಾರಾವಾರ, ಕೊಡಗು ಮತ್ತು ಚಾಮರಾಜನಗರದಲ್ಲಿ ಹೊಸ 6 ಮೆಡಿಕಲ್ ಕಾಲೇಜುಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಹೊಂದಿಸಿಕೊಳ್ಳಬೇಕಾಗಿದ್ದರಿಂದ ತುಮಕೂರು, ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮುಂದೂಡಲಾಗಿತ್ತು. 2021-22ನೇ ಸಾಲಿನ ಬಜೆಟ್ ನಲ್ಲಿ, ಚಿತ್ರದುರ್ಗ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ.

    ಚಿತ್ರದುರ್ಗದ ಮೆಡಿಕಲ್ ಕಾಲೇಜನ್ನು 2023-24 ನೇ ಸಾಲಿನಿಂದ ಆರಂಭಿಸಲು ಅಗತ್ಯ ಪ್ರಕ್ರಿಯೆಗಳನ್ನು ನಡೆಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ. ಇದಕ್ಕೆ ಪೂರಕವಾಗಿ ಸಿದ್ಧತೆ ನಡೆಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ತರುತ್ತಿದ್ದು, ಈ ಹೊಸ ಕಾಲೇಜು ನಿರ್ಮಾಣ ಕೂಡ ಸುಧಾರಣೆಯ ಭಾಗವಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

  • ಕ್ಯಾನ್ಸರ್ ರೋಗಿಗಳನ್ನು ಪ್ರೀತಿ ಮತ್ತು ಜಾಗ್ರತೆಯಿಂದ ಆರೈಕೆ ಮಾಡಿ: ಡಾ.ಕೆ.ಸುಧಾಕರ್

    ಕ್ಯಾನ್ಸರ್ ರೋಗಿಗಳನ್ನು ಪ್ರೀತಿ ಮತ್ತು ಜಾಗ್ರತೆಯಿಂದ ಆರೈಕೆ ಮಾಡಿ: ಡಾ.ಕೆ.ಸುಧಾಕರ್

    ಬೆಂಗಳೂರು: ಕ್ಯಾನ್ಸರ್ ಪದದ ಅರ್ಥ ಸಾವು ಎಂದಲ್ಲ. ಇದೊಂದು ರೋಗದ ಹೆಸರು. ಕ್ಯಾನ್ಸರ್ ಬಂದಾಕ್ಷಣ ಸಾವು ಬಂದಿದೆ ಎಂಬ ಆತಂಕವನ್ನು ದೂರ ಮಾಡಲು ಜಾಗೃತಿ ಅಗತ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಬೆಂಗಳೂರಿನಲ್ಲಿ ಕ್ಯಾನ್ಸರ್ ದಿನದ ಪ್ರಯುಕ್ತ ಕ್ಯಾನ್ಸರ್ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಕ್ಯಾನ್ಸರ್ ದಿನ ಆಚರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯಂತೆ ಒಂದು ವಾರ ಕ್ಯಾನ್ಸರ್ ಸಪ್ತಾಹ ವಿನೂತನವಾಗಿ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ

    ವಿಶ್ವ ಸಂಸ್ಥೆಯ ಪ್ರಕಾರ ಶಿಕ್ಷಣದ ಕೊರತೆ, ಬಡತನ ಇರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಕ್ಯಾನ್ಸರ್ ಶಿಬಿರ ಹಮ್ಮಿಕೊಂಡಿದೆ. ಕಿದ್ವಾಯಿ ಸಂಸ್ಥೆ, ಅನೇಕ ಸಂಘ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಇದಕ್ಕೆ ಕೈ ಜೋಡಿಸಿವೆ. ಎಷ್ಟು ಬೇಗ ಕ್ಯಾನ್ಸರ್ ಪತ್ತೆಯಾಗುತ್ತದೋ ಅಷ್ಟು ಬೇಗ ಗುಣಪಡಿಸಬಹುದು. ಕ್ಯಾನ್ಸರ್ ರೋಗಿಗಳನ್ನು ಪ್ರೀತಿ ಮತ್ತು ಎಚ್ಚರಿಕೆಯಿಂದ ಆರೈಕೆ ಮಾಡಿ ಎಂದು ಹೇಳಿದರು.

    ಕ್ಯಾನ್ಸರ್ ಪದ ಕೇಳಿದ ಕೂಡಲೇ ಜನ ಭಯಭೀತರಾಗುತ್ತಾರೆ. ಈ ಭಯದಿಂದ ದೇಹದಲ್ಲಿ ಬದಲಾವಣೆ ಆಗುತ್ತಿದ್ದರೂ ಜನರು ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ. 21ನೇ ಶತಮಾನದಲ್ಲಿ ತಂತ್ರಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರಗಳ ಫಲದಿಂದ ಔಷಧಿ ಬಂದಿದೆ. 1 ಮತ್ತು 2ನೇ ಹಂತದ ಕ್ಯಾನ್ಸರ್ ಇದ್ದರೆ ಅದರಿಂದ ಗುಣಮುಖರಾಗಬಹುದು ಎಂದರು. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

    ವಿಶ್ವದಲ್ಲಿ ವರ್ಷದಲ್ಲಿ ಸುಮಾರು 1 ಕೋಟಿ ಜನರು ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಾರೆ. ಭಾರತದಲ್ಲಿ 12 ರಿಂದ 13 ಲಕ್ಷ ಜನರು, ರಾಜ್ಯದಲ್ಲಿ 20 ರಿಂದ 25 ಸಾವಿರ ಜನರಲ್ಲಿ ಪ್ರತಿ ವರ್ಷ ಕ್ಯಾನ್ಸರ್ ಹೊಸದಾಗಿ ಪತ್ತೆಯಾಗುತ್ತದೆ. 30 ವರ್ಷ ಮೇಲ್ಪಟ್ಟ ಮಹಿಳೆಯರು ಜಾಗೃತರಾಗಿರಬೇಕು. ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ನಿಂದ 30% ರಿಂದ 40% ಮಹಿಳೆಯರು ಸಾವನ್ನಪ್ಪುತ್ತಾರೆ. ಆದರೆ ಇದು ಸಾಮಾನ್ಯ ಕ್ಯಾನ್ಸರ್. 5 ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪುರುಷರು ಶ್ವಾಸಕೋಶ ಹಾಗೂ ಬಾಯಿಯ ಕ್ಯಾನ್ಸರ್‍ಗೆ ಬಲಿಯಾಗುತ್ತಿದ್ದಾರೆ. ಪೌಷ್ಠಿಕ ಆಹಾರ, ದೈಹಿಕ ಚಟುವಟಿಕೆ ಜೊತೆ ದುಶ್ಚಟಗಳಿಂದ ದೂರ ಇರುವುದು ಕ್ಯಾನ್ಸರ್ ತಡೆಯಲು ಸಹಕಾರಿ ಎಂದು ಹೇಳಿದರು.

    ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ತಪಾಸಣೆಗೆ ವ್ಯವಸ್ಥೆ ಇದೆ. ಇದನ್ನು ತಾಲೂಕು ಆಸ್ಪತ್ರೆಗಳಿಗೂ ವಿಸ್ತರಣೆ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೂ ಇದನ್ನು ಶೀಘ್ರದಲ್ಲೇ ವಿಸ್ತರಣೆ ಮಾಡಲಾಗುವುದು. ಮೈಸೂರು ಮತ್ತು ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಹುಬ್ಬಳ್ಳಿಯಲ್ಲೂ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.

  • ಎಲ್ಲರಿಗೂ ಮಾನಸಿಕ ಆರೋಗ್ಯದ ತಪಾಸಣೆ ಅಗತ್ಯ: ಸುಧಾಕರ್

    ಎಲ್ಲರಿಗೂ ಮಾನಸಿಕ ಆರೋಗ್ಯದ ತಪಾಸಣೆ ಅಗತ್ಯ: ಸುಧಾಕರ್

    ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ನಿಮ್ಹಾನ್ಸ್ ಸಂಸ್ಥೆಯು ನೀತಿ ಆಯೋಗ ಹಾಗೂ ಆರೋಗ್ಯ ಇಲಾಖೆಯ ನೆರವಿನಲ್ಲಿ ‘ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮ’ (ಕರ್ನಾಟಕ ಬ್ರೇನ್ ಹೆಲ್ತ್ ಇನೀಶಿಯೇಟಿವ್) ಜಾರಿ ಮಾಡಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ.

    ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿಮ್ಹಾನ್ಸ್ ನಿಂದ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಮಾನಸಿಕ ರೋಗಗಳ ತಪಾಸಣೆ ಮಾಡುವ ಹಾಗೂ ಚಿಕಿತ್ಸೆ ನೀಡುವ ಕುರಿತು ವೈದ್ಯರಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ರೋಗಿಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಇದನ್ನೂ ಓದಿ: ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

    ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೋವಿಡ್ ಸಂದರ್ಭದಲ್ಲಿ ನಿಮ್ಹಾನ್ಸ್ ನೇತೃತ್ವದಲ್ಲಿ, ಅನೇಕ ಕೊರೊನಾ ರೋಗಿ ಹಾಗೂ ಕುಟುಂಬದವರ ಮಾನಸಿಕ ಆರೋಗ್ಯ ನಿರ್ವಹಣೆಗೆ ಒತ್ತು ನೀಡಲಾಯಿತು. ಕೆಲ ಪ್ರಕರಣಗಳಲ್ಲಿ ಆತ್ಮಹತ್ಯೆಯ ಘಟನೆಯೂ ನಡೆಯಿತು. ಆ ವೇಳೆ ಅನೇಕರಿಗೆ ಮಾನಸಿಕ ಆರೋಗ್ಯ ಆಪ್ತ ಸಮಾಲೋಚನೆ ಸೇವೆ ನೀಡಲಾಯಿತು. ಇದನ್ನು ಇನ್ನಷ್ಟು ಮುಂದುವರಿಸಲಾಗುತ್ತಿದೆ. ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶ. ಮೆದುಳಿನ ಆರೋಗ್ಯ ಇಡೀ ದೇಹದ ಒಟ್ಟು ಆರೋಗ್ಯ ಕಾಪಾಡಲು ಅಗತ್ಯವಾಗಿದೆ. ನಿಮ್ಹಾನ್ಸ್, ಜನರ ಬಳಿಯೇ ಹೋಗಿ ಆರೋಗ್ಯ ಸೇವೆ ನೀಡುವಂತಹ ಪ್ರತಿಷ್ಠಿತ ಸಂಸ್ಥೆಯಾಗಿದೆ. ಸಾಮಾನ್ಯ ಫಿಸಿಶೀಯನ್ ಕೂಡ ಮಾನಸಿಕ ಆರೋಗ್ಯ ಸೇವೆ ನೀಡುವಂತೆ ನಿಮ್ಹಾನ್ಸ್ ತರಬೇತಿ ನೀಡಲಿದೆ ಎಂದರು.

    ನವಜಾತ ಶಿಶುವಿಗೂ ಮಾನಸಿಕ ಆರೋಗ್ಯದ ತಪಾಸಣೆ ಮಾಡಿ ರೋಗ ಪತ್ತೆ ಮಾಡುವ ಅಗತ್ಯವಿದೆ. ಸಾಮಾಜಿಕ ಪರಿಸ್ಥಿತಿ, ಕೌಟುಂಬಿಕ ಸ್ಥಿತಿ ಮೊದಲಾದ ಕಾರಣಗಳಿಂದ ಅನೇಕರು ಮಾನಸಿಕ ಒತ್ತಡದಿಂದ ಬಳಲುತ್ತಾರೆ. ಇದು ಪ್ರತಿ ದಿನದ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಹೆಚ್ಚು ಮಾನಸಿಕ ಆರೋಗ್ಯ ತಜ್ಞರು ರಾಜ್ಯಕ್ಕೆ ಬೇಕಾಗಿದೆ. ರಾಜ್ಯದಲ್ಲಿ ಸುಮಾರು 2 ಲಕ್ಷ ಮಂದಿ ವೈದ್ಯ ಶಿಕ್ಷಣ ಪಡೆಯುತ್ತಿದ್ದಾರೆ. ಇವರನ್ನು ಬಳಸಿಕೊಂಡು ಮಾನಸಿಕ ಅನಾರೋಗ್ಯಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.  ಇದನ್ನೂ ಓದಿ: ಆಟೋ ಚಾಲಕನಿಂದ ಮಹಿಳೆಗೆ ಕಿರುಕುಳ – ಆರೋಪಿ ಅರೆಸ್ಟ್

    ಈ ಪ್ರಾಯೋಗಿಕ ಕಾರ್ಯಕ್ರಮವನ್ನು ಉತ್ತಮವಾಗಿ ಜಾರಿ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕು. ನಂತರ ಮುಂದಿನ ಬಜೆಟ್ ನಲ್ಲಿ ಈ ಕಾರ್ಯಕ್ರಮಕ್ಕಾಗಿ ಹೆಚ್ಚು ಅನುದಾನ ಮೀಸಲಿಡಬಹುದು ಎಂದರು.

    ಆಸ್ಪತ್ರೆ ದಾಖಲಾತಿ ಕಡಿಮೆ
    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಳೆದ ವಾರ 22% ಇದ್ದು, ಈ ವಾರ 32% ಆಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 3,442, ಖಾಸಗಿ ಆಸ್ಪತ್ರೆಗಳಲ್ಲಿ 1,788 ಸೇರಿ ಒಟ್ಟು 5,230 ರೋಗಿಗಳು ದಾಖಲಾಗಿದ್ದಾರೆ. 3.62 ಲಕ್ಷ ಸಕ್ರಿಯ ಪ್ರಕರಣಗಳಲ್ಲಿ 2% ಗಿಂತ ಕಡಿಮೆ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ದರಿಂದ ಈ ರೋಗ ತೀವ್ರವಾಗಿ ಪರಿಣಾಮ ಬೀರಿಲ್ಲ. ಐದಾರು ದಿನಗಳೊಳಗೆ ಲಕ್ಷಣಗಳು ಕಡಿಮೆಯಾಗುತ್ತವೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಆದರೂ ಎಚ್ಚರಿಕೆ ಕ್ರಮಗಳನ್ನು ಅನುರಿಸಬೇಕು ಎಂದರು. ಇದನ್ನೂ ಓದಿ: ಕೈ ತಪ್ಪಿದ್ದಕ್ಕೆ ಅಸಮಾಧಾನ ಇಲ್ಲ, ತುಮಕೂರು ಸಿಕ್ಕಿದ್ರೆ ಖುಷಿಯಾಗ್ತಿತ್ತು: ಮಾಧುಸ್ವಾಮಿ

    ಫೆಬ್ರವರಿ ಎರಡು, ಮೂರನೇ ವಾರದಲ್ಲಿ ಮೂರನೇ ಅಲೆ ಕಡಿಮೆಯಾಗಲಿದೆ ಎಂದು ಐಸಿಎಂಆರ್ ಕೂಡ ಹೇಳಿದೆ ಹೆಚ್ಚು ಎಚ್ಚರ ವಹಿಸಿದರೆ ಮೂರನೇ ಅಲೆ ನಿಯಂತ್ರಣಕ್ಕೆ ತರಬಹುದು. ರಾಜ್ಯದಲ್ಲಿ ಮೊದಲ ಡೋಸ್ 100% ಹಾಗೂ ಎರಡನೇ ಡೋಸ್ 84% ಆಗಿದೆ. ಆದ್ದರಿಂದ ಜನರಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಬೆಳೆದಿದೆ ಎಂದರು.

    ವಿಷನ್ ವರದಿ
    ಆರೋಗ್ಯ ಇಲಾಖೆಯಿಂದ ವಿಷನ್ ವರದಿ ರೂಪಿಸಲಾಗುತ್ತಿದೆ. ಮುಂದಿನ 20 ವರ್ಷಗಳಲ್ಲಿ ಕರ್ನಾಟಕ ಹೇಗೆ ಸ್ವಾಸ್ಥ್ಯ ರಾಜ್ಯವಾಗಬೇಕು ಹಾಗೂ ಮೂರು ಹಂತಗಳ ಆರೋಗ್ಯ ವ್ಯವಸ್ಥೆಯ ಬಲವರ್ಧನೆ ಹೇಗಾಗಬೇಕೆಂದು ವರದಿ ರೂಪಿಸಲಾಗುತ್ತಿದೆ. ವರದಿ ರೂಪಿಸುವ ಸಮಿತಿಯಲ್ಲಿ 30 ಹಿರಿಯ ತಜ್ಞರಿದ್ದಾರೆ. ಕಳೆದೊಂದು ವರ್ಷದಲ್ಲಿ ಸುಮಾರು 750 ತಜ್ಞರು ಇದನ್ನು ರೂಪಿಸಲು ಭಾಗಿಯಾಗಿದ್ದಾರೆ. ಜನವರಿ 28 ಕ್ಕೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಆರು ತಿಂಗಳಾಗುತ್ತದೆ. ಆ ವೇಳೆ ಅವರು ವರದಿ ಬಿಡುಗಡೆ ಮಾಡಲಿದ್ದಾರೆ ಎಂದರು.

    ಕೇಂದ್ರ ಬಜೆಟ್‍ನ ಬಗ್ಗೆ ಜನರಿಗೆ ದೊಡ್ಡ ನಿರೀಕ್ಷೆ ಇದೆ. ದೇಶದ ಆರ್ಥಿಕತೆಯನ್ನು ಕೋವಿಡ್ ಪೂರ್ವ ಹಾಗೂ ಕೋವಿಡ್ ನಂತರದ ಕಾಲ ಎಂದು ವಿಂಗಡಿಸಬಹುದು. ಕೋವಿಡ್ ನಂತರದ ಈ ಕಾಲದಲ್ಲಿ ಸಮೃದ್ಧ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಉತ್ತಮ ಬಜೆಟ್ ನೀಡುವ ವಿಶ್ವಾಸವಿದೆ ಎಂದರು.

  • ನಮ್ಮ ಆರೋಗ್ಯ ನಮ್ಮ ಕೈಯಲ್ಲಿ: ಡಾ.ಕೆ.ಸುಧಾಕರ್

    ನಮ್ಮ ಆರೋಗ್ಯ ನಮ್ಮ ಕೈಯಲ್ಲಿ: ಡಾ.ಕೆ.ಸುಧಾಕರ್

    -ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ

    ಬೆಂಗಳೂರು:  ನಮ್ಮ ಆರೋಗ್ಯ ನಮ್ಮ ಕೈಯಲ್ಲಿ, ಜೀವ ಹಾಗೂ ಜೀವನ ಎರಡೂ ಮುಖ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕೋವಿಡ್-19 3ನೇ ಅಲೆ 2 ರಿಂದ 3 ವಾರಗಳಲ್ಲಿ ತೀವ್ರತೆ ಕಳೆದುಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಆಗಿರುವುದು ಸಮಾಧಾನ ತಂದಿದೆ. ವೈಜ್ಞಾನಿಕವಾಗಿ ಪರಾಮರ್ಶೆ ಮಾಡಿ, ತಜ್ಞರ ಅಭಿಪ್ರಾಯ ಪಡೆದು ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿದೆ ಎಂದು ತಿಳಿಸಿದ್ದಾರೆ .

    ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಈಗ ಜನರು ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಅರಿತು ನಡೆಯಬೇಕು. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಒಂದು ವೇಳೆ ಮತ್ತೆ ಕೊರೊನಾ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುವುದು ಗಣನೀಯವಾಗಿ ಹೆಚ್ಚಾದರೆ ಸರ್ಕಾರ ಬೇರೆ ದಾರಿ ಇಲ್ಲದೆ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ

    ಮುಖ್ಯಮಂತ್ರಿಗಳ ಜೊತೆ ನಡೆದ 3 ಗಂಟೆಗಳ ಸುಧೀರ್ಘ ಸಭೆಯಲ್ಲಿ ರಚನಾತ್ಮಕ ಸಲಹೆಗಳನ್ನು ತೆಗೆದುಕೊಂಡು ವೈಜ್ಞಾನಿಕ ಆಧಾರದಲ್ಲಿ ಸರ್ಕಾರ ನಿರ್ಧಾರ ಮಾಡಿದೆ. ಜನರು ಅನಗತ್ಯವಾಗಿ ಗುಂಪು ಸೇರುವುದನ್ನು ಕಡಿಮೆ ಮಾಡಬೇಕು. ಒಳಾಂಗಣ ಹಾಗೂ ಹೊರಾಂಗಣ ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕುವುದು ಉತ್ತಮ ಎಂದು ಸಚಿವರು ಮನವಿ ಮಾಡಿದರು. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

    ರಾಜ್ಯದಲ್ಲಿ ICMR ಮಾರ್ಗಸೂಚಿಯಂತೆ ಕೊರೊನಾ ಲಕ್ಷಣ ಹೊಂದಿರುವವರಿಗೆ ಮಾತ್ರ ಟೆಸ್ಟ್ ಮಾಡಲಾಗುವುದು. ಜನರು ಎಚ್ಚರಿಕೆಯಿಂದ ಇದ್ದಷ್ಟು ಕೊರೊನಾ ವಿರುದ್ಧ ಹೋರಾಡಲು ಸಹಾಯವಾಗುತ್ತದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ನಿನ್ನೆಗಿಂತ ಇಂದು ಕೇಸ್ ಇಳಿಕೆ – ಒಟ್ಟು 27,156, ಪಾಸಿಟಿವಿಟಿ ರೇಟ್ 12.45%

    ನಿನ್ನೆಗಿಂತ ಇಂದು ಕೇಸ್ ಇಳಿಕೆ – ಒಟ್ಟು 27,156, ಪಾಸಿಟಿವಿಟಿ ರೇಟ್ 12.45%

    ಬೆಂಗಳೂರು: ರಾಜ್ಯದಲ್ಲಿ ನಿನ್ನೆಗಿಂತ ಇಂದು ಅಲ್ಪ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಇಳಿಕೆ ಕಂಡಿದೆ. ನಿನ್ನೆ ಒಟ್ಟು 34,047 ಪ್ರಕರಣ ದಾಖಲಾಗಿದ್ದರೆ, ಇಂದು ಒಟ್ಟು 27,156 ಕೇಸ್ ಪತ್ತೆಯಾಗಿದೆ.

    ಇಂದು ಮರಣ ಪ್ರಕರಣ ಏರಿಕೆ ಕಂಡಿದ್ದು, ಒಟ್ಟು 14 ಮರಣ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 15,947 ಹೊಸ ಕೇಸ್ ಮತ್ತು 5 ಮರಣ ಪ್ರಕರಣ ದಾಖಲಾಗಿದೆ. ಪಾಸಿಟಿವಿಟಿ ರೇಟ್ ನಿನ್ನೆ 19.29% ರಷ್ಟಿದ್ದರೆ, ಇಂದು 12.45%ಕ್ಕೆ ಇಳಿಕೆ ಕಂಡಿದೆ. ರಾಜ್ಯದಲ್ಲಿ ಒಟ್ಟು 2,17,297 ಸಕ್ರಿಯ ಪ್ರಕರಣಗಳು ದಾಖಲಾದರೆ, ಬೆಂಗಳೂರಿನಲ್ಲಿ 1,58,000 ಸಕ್ರಿಯ ಪ್ರಕರಣವಿದೆ. ಒಟ್ಟು 7,827 ಮಂದಿ ವಿವಿಧ ಆಸ್ಪತ್ರೆಗಳಿಂದ ಇಂದು ಬಿಡುಗಡೆಗೊಂಡಿದ್ದು, ಇಂದು 2,17,998 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ನೆಗೆಟಿವ್

    ರಾಜ್ಯದಲ್ಲಿ ಇಂದು ಒಟ್ಟು 2,16,816 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 2,17,998 ಸ್ಯಾಂಪಲ್ (ಆರ್‌ಟಿಪಿಸಿಆರ್ 1,81,136 + 36,862 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಜನವರಿ 31ರ ವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 82, ಬಳ್ಳಾರಿ 560, ಬೆಳಗಾವಿ 294, ಬೆಂಗಳೂರು ಗ್ರಾಮಾಂತರ 538, ಬೆಂಗಳೂರು ನಗರ 15,947, ಬೀದರ್ 75, ಚಾಮರಾಜನಗರ 101, ಚಿಕ್ಕಬಳ್ಳಾಪುರ 209, ಚಿಕ್ಕಮಗಳೂರು 236, ಚಿತ್ರದುರ್ಗ 178, ದಕ್ಷಿಣ ಕನ್ನಡ 490, ದಾವಣಗೆರೆ 121, ಧಾರವಾಡ 784, ಗದಗ 71, ಹಾಸನ 1,050, ಹಾವೇರಿ 27, ಕಲಬುರಗಿ 463, ಕೊಡಗು 137, ಕೋಲಾರ 463, ಕೊಪ್ಪಳ 89, ಮಂಡ್ಯ 917, ಮೈಸೂರು 1,770, ರಾಯಚೂರು 140, ರಾಮನಗರ 96, ಶಿವಮೊಗ್ಗ 364, ತುಮಕೂರು 1,147, ಉಡುಪಿ 442, ಉತ್ತರ ಕನ್ನಡ 203, ವಿಜಯಪುರ 128 ಮತ್ತು ಯಾದಗಿರಿಯಲ್ಲಿ 18 ಪಾಸಿಟಿವ್ ಪ್ರಕರಣ ದಾಖಲಾಗಿದೆ.

  • ಕೋವಿಡ್ ಸಂದರ್ಭದಲ್ಲಿ ತಂತ್ರಜ್ಞಾನ ಪರಿಣಾಮಕಾರಿ ಬಳಕೆ, 2.5 ಲಕ್ಷ ಸಿಬ್ಬಂದಿಗೆ ತರಬೇತಿ: ಸಚಿವ ಸುಧಾಕರ್

    ಕೋವಿಡ್ ಸಂದರ್ಭದಲ್ಲಿ ತಂತ್ರಜ್ಞಾನ ಪರಿಣಾಮಕಾರಿ ಬಳಕೆ, 2.5 ಲಕ್ಷ ಸಿಬ್ಬಂದಿಗೆ ತರಬೇತಿ: ಸಚಿವ ಸುಧಾಕರ್

    ಬೆಂಗಳೂರು: ಕೋವಿಡ್ ಸಮಯದಲ್ಲಿ ಕರ್ನಾಟಕವು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿದ್ದು, ಈವರೆಗೆ ಸುಮಾರು 2.5 ಲಕ್ಷ ಆರೋಗ್ಯ ಸಿಬ್ಬಂದಿಗೆ ತಂತ್ರಜ್ಞಾನದ ಮೂಲಕ ತರಬೇತಿ ನೀಡಲಾಗಿದೆ. ಇದು ಉಳಿದ ರಾಜ್ಯಗಳಿಗೂ ಮಾದರಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

    ಸ್ಟೆಪ್ ಒನ್ ಸಂಸ್ಥೆಯ ಸಹಯೋಗದಲ್ಲಿ ಕೋವಿಡ್ ರೋಗಿಗಳ ಮನೆ ಐಸೋಲೇಶನ್ ಗೆ ಸಂಬಂಧಿಸಿದಂತೆ 10,000 ವೈದ್ಯ, ಆಯುಷ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಧಾಕರ್ ಅವರು ಮಾತನಾಡಿದರು.

    ಈ ವೇಳೆ ಅವರು, ಕೋವಿಡ್ ಮೊದಲ ಅಲೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಹೊಸ ವೈರಾಣು ಕುರಿತು ತರಬೇತಿ ನೀಡಬೇಕಿತ್ತು. ಆದರೆ ಲಾಕ್‍ಡೌನ್ ಮೊದಲಾದ ಕಾರಣಗಳಿಂದಾಗಿ ತರಬೇತಿ ನೀಡಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ನೆರವಿನಲ್ಲಿ ತಂತ್ರಜ್ಞಾನ ಬಳಸಿ 2.5 ಲಕ್ಷ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಈ ಬಗೆಯ ಪರಿಣಾಮಕಾರಿ ತಂತ್ರಜ್ಞಾನ ಬಳಕೆಯನ್ನು ಕೇಂದ್ರ ಸರ್ಕಾರ ಕೂಡ ಗುರುತಿಸಿದೆ ಎಂದು ಪ್ರಶಂಸಿಸಿದರು. ಇದನ್ನೂ ಓದಿ: ವಸತಿ ಶಾಲೆಯ 16 ಮಕ್ಕಳಿಗೆ ವಕ್ಕರಿಸಿದ ಕೊರೊನಾ


    5 ಟಿ ಕ್ರಮವನ್ನು ಕೂಡ ಯಶಸ್ವಿಯಾಗಿ ಜಾರಿ ಮಾಡಲಾಗಿದೆ. ಮೂರನೇ ಅಲೆಯಲ್ಲಿ 2-3 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದರೂ ತೀವ್ರತೆ ಕಡಿಮೆ ಇದೆ. 93% ರೋಗಿಗಳು ಮನೆ ಐಸೋಲೇಶನ್ ನಲ್ಲೇ ಇದ್ದಾರೆ. 5-6% ಜನರು ಆಸ್ಪತ್ರೆ ಹಾಗೂ 1% ಜನರು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದಾರೆ ಎಂದರು.

    ಸ್ಟೆಪ್ ಒನ್ ಸಂಸ್ಥೆಯು ಕೋವಿಡ್ ಹೋರಾಟದಲ್ಲಿ ಸರ್ಕಾರದೊಂದಿಗೆ ಭಾಗಿಯಾಗಿ ಸಾವಿರಾರು ವೈದ್ಯರೊಂದಿಗೆ ಕೆಲಸ ಮಾಡಿ ಮನೆ ಐಸೋಲೇಶನ್ ಕ್ರಮ ಯಶಸ್ವಿಯಾಗಲು ನೆರವಾಗಿದೆ. ಇದರಿಂದಾಗಿ ರಾಜ್ಯ, ದೇಶದಲ್ಲೇ ಮಾದರಿಯಾಗಿದೆ. ನೀತಿ ಆಯೋಗ ಕೂಡ ಹೋಮ್ ಐಸೋಲೇಶನ್ ಹಾಗೂ ಇದಕ್ಕೆ ಸಂಬಂಧಿಸಿದ ತಾಂತ್ರಿಕ ನೆರವುಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದೆ. ಎಲ್ಲ ವೈದ್ಯ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ವೈದ್ಯರು ಹಾಗೂ ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರ ಸಹಯೋಗದಿಂದಾಗಿ ಮನೆ ಐಸೋಲೇಶನ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗಿದೆ ಎಂದು ವಿವರಿಸಿದರು.

    10 ಸಾವಿರ ಸಿಬ್ಬಂದಿ ನಿಯೋಜನೆ!
    ಹೋಮ್ ಐಸೋಲೇಶನ್ ನಲ್ಲಿರುವವರ ಆರೋಗ್ಯ ಮೇಲೆ ಹೆಚ್ಚು ನಿಗಾ ಇರಿಸಲಾಗಿದೆ. ಇದಕ್ಕಾಗಿ ಸುಮಾರು 10 ಸಾವಿರ ವೈದ್ಯ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ಇನ್ನೂ 10 ಸಾವಿರ ಸಿಬ್ಬಂದಿಯನ್ನು ನಿಯೋಜಿಸುವ ಉದ್ದೇಶವಿದೆ. 500 ತಜ್ಞ ವೈದ್ಯರು ಈ ವ್ಯವಸ್ಥೆಗೆ ಬೆಂಬಲ ನೀಡುತ್ತಿದ್ದಾರೆ. ಎರಡನೇ ಅಲೆಯಲ್ಲಿ ರೋಗಿಗಳಿಗೆ 1.33 ಕೋಟಿ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಲಾಗಿತ್ತು. 42.57 ಲಕ್ಷ ವೈದ್ಯರ ಕನ್ಸಲ್ಟೇಶನ್ ಮಾಡಲಾಗಿತ್ತು. 36 ಸಾವಿರ ರೋಗಿಗಳಿಗೆ ಮಾನಸಿಕ ಆರೋಗ್ಯ ಕೌನ್ಸಿಲಿಂಗ್ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ರೆಸಾರ್ಟ್ ನಲ್ಲಿ 30ಕ್ಕೂ ಹೆಚ್ಚು ಕೋವಿಡ್ ಪ್ರಕರಣ ದೃಢ – ರೆಸಾರ್ಟ್ ಮುಚ್ಚದೆ ಎಂದಿನಂತೆ ಕಾರ್ಯ

    ಅನೇಕ ರೋಗಿಗಳು ಅಗತ್ಯವಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದನ್ನು ತಪ್ಪಿಸಿ ಅಗತ್ಯವಿರುವವರಿಗೆ ಹಾಸಿಗೆ ಒದಗಿಸಲು ವೈದ್ಯರ ಸಲಹೆ, ಮಾರ್ಗದರ್ಶನ ಅಗತ್ಯ. ದೂರವಾಣಿ ಕರೆ ಮಾಡಿ ಮಾರ್ಗದರ್ಶನ ನೀಡುವುದರಿಂದ ಅನೇಕರ ಜೀವ ಉಳಿಸಲು ಸಹಾಯಕವಾಗುತ್ತದೆ ಎಂದರು.

  • ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗಲ್ಲ, ಗಂಟಲಲ್ಲಿ ಮಾತ್ರ ಇರುತ್ತೆ: ಸುಧಾಕರ್

    ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗಲ್ಲ, ಗಂಟಲಲ್ಲಿ ಮಾತ್ರ ಇರುತ್ತೆ: ಸುಧಾಕರ್

    -ಕಾಂಗ್ರೆಸ್‍ಗೆ ಜನರ ಹಿತಕಾಪಾಡುವ ಮನಸ್ಸು ಇದೆ ಅಂತ ಅಂದುಕೊಳ್ತೀನಿ

    ಬೆಂಗಳೂರು: ಕೊರೊನಾದ ಈ ಅಲೆ ದೀರ್ಘ ಕಾಲ ಇರೋದಿಲ್ಲ. ವೇಗವಾಗಿ ಹರಡುತ್ತೆ, ಬೇಗ ಮುಕ್ತಾಯ ಆಗುತ್ತೆ. ಹೀಗಾಗಿ ಕನಿಷ್ಠ 4-6 ವಾರ ಜನ ಎಚ್ಚರಿಕೆವಹಿಸಬೇಕು. ಕೊರೊನಾ ಬಂದ್ರು ಯಾರು ಆತಂಕ ಪಡುವುದು ಬೇಡ ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗೋದು ಕಡಿಮೆ. ಗಂಟಲಲ್ಲಿ ಮಾತ್ರ ಇದು ಇರುತ್ತೆ. ಹೀಗಾಗಿ ಯಾರು ಆತಂಕ ಪಡಬೇಡಿ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

    ಓಮಿಕ್ರಾನ್ ಎರಡು ಡೋಸ್ ಲಸಿಕೆ ಪಡೆದವರ ಮೇಲೆ ಪ್ರಭಾವ ಕಡಿಮೆ ಇರುತ್ತೆ. ಹೀಗಾಗಿ ಜನ ಎರಡು ಡೋಸ್ ಲಸಿಕೆ ಪಡೆಯಬೇಕು. 15-18 ವಯಸ್ಕರಿಗೆ ನಿನ್ನೆ 3 ಲಕ್ಷ 50 ಸಾವಿರ ಲಸಿಕೆ ಕೊಟ್ಟಿದ್ದೇವೆ. ದೇಶದಲ್ಲಿ ಲಸಿಕೆ ನಿಡೋದ್ರಲ್ಲಿ 3ನೇ ಸ್ಥಾನದಲ್ಲಿ ಇದ್ದೇವೆ. ಈಗಾಗಲೇ 25% ಲಸಿಕೆ ಮಕ್ಕಳಿಗೆ ಕೊಡಲಾಗಿದೆ. 28 ದಿನಗಳು ಆದ ಮೇಲೆ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಕೊಡುತ್ತೇವೆ. ಕೋವ್ಯಾಕ್ಸಿನ್ ಮಾತ್ರ ಎರಡನೇ ಡೋಸ್ ಲಸಿಕೆ ಕೊಡಲಾಗುತ್ತೆ. ಲಸಿಕೆ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತೆ. 10-15 ದಿನಗಳಲ್ಲಿ ಎಲ್ಲಾ ಮಕ್ಕಳಿಗೂ ಮೊದಲ ಡೋಸ್ ಲಸಿಕೆ ಕೊಡುವ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!

    60 ವರ್ಷ ಮೇಲ್ಪಟ್ಟವರಿಗೆ 3ನೇ ಡೋಸ್ ಜನವರಿ 10 ರಿಂದ ಕೊಡುತ್ತೇವೆ. ಕೊರೊನಾ ವಾರಿಯರ್ಸ್‍ಗೆ 3ನೇ ಡೋಸ್ ಲಸಿಕೆ ಕೊಡ್ತೀವಿ. ಫ್ರಂಟ್ ಲೈನ್ ವಾರಿಯರ್ಸ್‍ಗೂ 3ನೇ ಡೋಸ್ ಲಸಿಕೆ ಕೊಡುತ್ತೇವೆ. ಜನರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಸಹಕಾರ ಮುಖ್ಯ. ಆರೋಗ್ಯದ ತುರ್ತು ಪರಿಸ್ಥಿತಿ ಇರುವುದರಿಂದ ಜನರು, ರಾಜಕೀಯ ಪಕ್ಷಗಳು ಸಹಕಾರ ಕೊಡಬೇಕು. ಜನಸಾಮಾನ್ಯರು 4 ರಿಂದ 6 ವಾರಗಳ ಕಾಲ ಜನ ಎಚ್ಚರಿಕೆಯಿಂದ ಇರಬೇಕು. ಈ ಅಲೆ ಬೇಗ ಹರಡಿದ್ದರೂ ಅಷ್ಟೇ ವೇಗವಾಗಿ ಕಡಿಮೆ ಆಗುತ್ತದೆ. ಈಗಾಗಲೇ ಬೇರೆ ದೇಶಗಳನ್ನು ಗಮನಿಸಿದರೆ ಹೀಗೆ ಇದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಆರ್​ಸಿಬಿ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಪಾಸಿಟಿವ್

    ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಬಗ್ಗೆ ಮಾತನಾಡಿ, ಕಾಂಗ್ರೆಸ್‍ಗೆ ಜನರ ಹಿತಕಾಪಾಡುವ ಮನಸ್ಸು ಇದೆ ಅಂತ ಅಂದುಕೊಳ್ಳುತ್ತೇನೆ. ಹೀಗಾಗಿ ಪಾದಯಾತ್ರೆ ಮಾಡಬೇಕಾ ಅಂತ ಯೋಚನೆ ಮಾಡಲಿ. ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆ ಏನ್ ಆಗಿದೆ ಅಂತ ಎಲ್ಲರಿಗೂ ಗೊತ್ತು. ಅನೇಕ ವರ್ಷ ಅವರು ಅಧಿಕಾರ ನಡೆಸಿದ್ದಾರೆ. ಇಂತಹ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು ಅಂತ ಅವರು ಅರ್ಥ ಮಾಡಕೊಳ್ಳಬೇಕು. ಜನರು ಎಲ್ಲಾ ನೋಡ್ತಿದ್ದಾರೆ. ಎಲ್ಲವನ್ನು ಜನ ಅರ್ಥ ಮಾಡಿಕೊಳ್ತಾರೆ. ಕಾಂಗ್ರೆಸ್ ನಾಯಕರು ದೀರ್ಘಕಾಲ ಆಡಳಿತ ಮಾಡಿದ್ದಾರೆ. ಸಿಎಂ, ಮಂತ್ರಿ ಆದವರು ಅ ಪಕ್ಷದಲ್ಲಿ ಇದ್ದಾರೆ. ಜನರ ಹಿತದೃಷ್ಟಿಯಿಂದ ಅವರು ನಿರ್ಧಾರ ಮಾಡ್ತಾರೆ ಅಂತ ಅಂದುಕೊಡಿದ್ದೇನೆ. ಅವರ ಹಠ ಮುಂದುವರಿಸಿದರೆ ಕಾನೂನು ಪ್ರಕಾರ ಕ್ರಮ ಆಗುತ್ತೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಿಕ್ಸಿಂಗ್ ಡೋಸ್ 4 ಪಟ್ಟು ಪ್ರಭಾವಿ- ಸಂಶೋಧಕರು

  • ದೇಶದಲ್ಲಿ ಕೊರೊನಾ ಹೆಚ್ಚಾಗಲು ಮೋದಿ ರ‍್ಯಾಲಿ ಕಾರಣ : ಡಿ.ಕೆ.ಸುರೇಶ್

    ದೇಶದಲ್ಲಿ ಕೊರೊನಾ ಹೆಚ್ಚಾಗಲು ಮೋದಿ ರ‍್ಯಾಲಿ ಕಾರಣ : ಡಿ.ಕೆ.ಸುರೇಶ್

    ರಾಮನಗರ: ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡಲು ಸೂಕ್ತ ಸಮಯವಲ್ಲ ಎಂದು ಹೇಳಿಕೆ ನೀಡಿದ ಆರೋಗ್ಯ ಸಚಿವರಿಗೆ ಡಿ.ಕೆ ಸುರೇಶ್, ದೇಶದಲ್ಲಿ ಕೊರೊನಾ ಹೆಚ್ಚಾಗಲು ಮೋದಿ ರ‍್ಯಾಲಿ ಕಾರಣ ಎಂದು ಟಾಂಗ್ ನೀಡಿದ್ದಾರೆ.

    ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯ ವಿಚಾರವಾಗಿ ಡಾ.ಕೆ ಸುಧಾಕರ್, ಈ ಪಾದಯಾತ್ರೆ ಮಾಡಲು ಇದು ಸೂಕ್ತ ಸಮಯವಲ್ಲ. ಕೊರೊನಾ ವೇಗವಾಗಿ ಹರಡುತ್ತಿದೆ. ಕೊರೊನಾ ಕೇಸ್ ಹೆಚ್ಚಾದ್ರೆ ಕಾಂಗ್ರೆಸ್ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ: ಪ್ರೀತಂಗೌಡ

    ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಸುಧಾಕರ್ ಅವರು ಮೋದಿಯವರಿಗೆ ಹೇಳಿ ಭಾರತೀಯ ಜನತಾ ಪಕ್ಷದವರು ನಡೆಸುತ್ತಿರುವಂತಹ ಎಲ್ಲಾ ರ‍್ಯಾಲಿಯನ್ನು ನಿಲ್ಲಿಸಬೇಕು. ಏಕೆಂದರೆ ಓಮಿಕ್ರಾನ್ ಬಿಜೆಪಿಯವರ ರ‍್ಯಾಲಿಯಿಂದಲೇ ಜಾಸ್ತಿಯಾಗುತ್ತಿದೆ ಎಂದು ತಿರುಗೇಟು ನೀಡಿದರು.

    ನೀವು ನಾವು ಹೇಳಿದ ಮಾತನ್ನು ಕೇಳಿದರೆ ನಾವು ನೀವು ಹೇಳಿದಂತಹ ಮಾತನ್ನು ಕೇಳುತ್ತೇವೆ. ಹಾಗೆಯೇ ದೇಶದಲ್ಲಿ ಕೊರೊನಾ ಹೆಚ್ಚಲು ಮೋದಿ ರ‍್ಯಾಲಿಯೆ ಮುಖ್ಯ ಕಾರಣವಾಗಿದೆ. ಇದರೊಂದಿಗೆ ಬಿಜೆಪಿ ಸರ್ಕಾರ ನಡೆಸುತ್ತಿರುವಂತಹ ಕರ‍್ಯಕ್ರಮ, ಮೆರವಣಿಗೆಗಳು ಕೂಡ ಕಾರಣವಾಗಿದೆ ಎಂದು ಡಿ.ಕೆ ಸುರೇಶ್ ಆರೋಗ್ಯ ಸಚಿವರ ಹೇಳಿಕೆಗೆ ವಾಗ್ದಾಳಿ ನೀಡಿದ್ದಾರೆ. ಇದನ್ನೂ ಓದಿ: ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ, ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ: ಡಿಕೆಶಿ

  • ರಾಜ್ಯದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್ ದೃಢ – 43ಕ್ಕೇರಿದ ಸೋಂಕಿತರ ಸಂಖ್ಯೆ

    ರಾಜ್ಯದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್ ದೃಢ – 43ಕ್ಕೇರಿದ ಸೋಂಕಿತರ ಸಂಖ್ಯೆ

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಹೊಸ 5 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಕರ್ನಾಟಕದಲ್ಲಿ 43ಕ್ಕೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

    ಈ ಕುರಿತಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಅಮೆರಿಕದಿಂದ ರಾಜ್ಯಕ್ಕೆ ಬಂದ 22 ವರ್ಷದ ಯುವತಿ ಮತ್ತು 24 ವರ್ಷದ ಯುವಕ, ದುಬೈನಿಂದ ಬಂದ 53 ವರ್ಷದ ವ್ಯಕ್ತಿ, ಘಾನಾ ದೇಶದಿಂದ ಬಂದ 61 ವರ್ಷದ ವ್ಯಕ್ತಿ ಹಾಗೂ ಮುಂಬೈನಿಂದ ಬಂದ 41 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ.

    ಸೋಂಕಿತರ ಟ್ರಾವೆಲ್ ಹಿಸ್ಟ್ರಿ ಗಮನಸಿದರೆ ಡಿ.22ರಂದು ಅಮೆರಿಕದಿಂದ ಬೆಂಗಳೂರಿಗೆ ಯುವತಿ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿದ ವೇಳೆ ಯುವತಿಗೆ ಕೊರೊನಾ ದೃಢಪಟ್ಟಿದೆ. ಅಲ್ಲದೇ ಈ ಯುವತಿ ಎರಡು ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದರು ಎಂದು ತಿಳಿಸಲಾಗಿದೆ. ಯುವತಿ ದಾವಣಗೆರೆ ಮೂಲದವರಾಗಿದ್ದು, ಇದೀಗ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಹದೇಶ್ವರ – ಹುಂಡಿಯಲ್ಲಿ 2.27 ಕೋಟಿ ರೂ. ಸಂಗ್ರಹ

    ಅಮೆರಿಕದಿಂದ ಬಂದ ಮತ್ತೋರ್ವ ಯುವಕನಿಗೆ ಡಿಸೆಂಬರ್ 23ರಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್‍ನಲ್ಲಿ ವೇಳೆ ಓಮಿಕ್ರಾನ್ ಪಾಸಿಟಿವ್ ವರದಿಯಾಗಿದೆ. ಎರಡು ಡೋಸ್ ಲಸಿಕೆ ಪಡೆದಿದ್ದ ಬೆಂಗಳೂರು ಮೂಲದ ಯುವಕ ಇದೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ

    ದುಬೈನಿಂದ ಬಂದ 53 ವರ್ಷದ ವ್ಯಕ್ತಿ ಡಿಸೆಂಬರ್23ರಂದು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಟೆಸ್ಟಿಂಗ್ ವೇಳೆ ಇವರಿಗೆ ಪಾಸಿಟಿವ್ ಬಂದಿದೆ. ತಮಿಳುನಾಡು ಮೂಲದವರಾಗಿರುವ ಈ ವ್ಯಕ್ತಿ ಸದ್ಯ ತಿರುಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಇಂದು 566 ಪ್ರಕರಣ – ಬೆಂಗಳೂರಿನಲ್ಲಿ 400 ಕೇಸ್, 4 ಸಾವು

    ಘಾನಾ ದೇಶದಿಂದ ಬಂದ 61 ವರ್ಷದ ವ್ಯಕ್ತಿ ಡಿಸೆಂಬರ್ 23ರಂದು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ವಿಮಾನ ನಿಲ್ದಾಣದಲ್ಲಿ ಇವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕೊರೊನಾ ಸೋಂಕು ವರದಿಯಾಗಿರಲಿಲ್ಲ. ಆದರೆ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಇದೀಗ ಇವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬೈನಿಂದ ಡಿ.23ರಂದು ಬೆಂಗಳೂರಿಗೆ ಆಗಮಿಸಿದ್ದ 41 ವರ್ಷದ ವ್ಯಕ್ತಿ ಇದೀಗ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಜನತೆಯ ಹಿತದೃಷ್ಟಿಯಿಂದ ಕಠಿಣ ಕ್ರಮ: ಸುಧಾಕರ್ ಸಮರ್ಥನೆ

    ಜನತೆಯ ಹಿತದೃಷ್ಟಿಯಿಂದ ಕಠಿಣ ಕ್ರಮ: ಸುಧಾಕರ್ ಸಮರ್ಥನೆ

    ಬೆಂಗಳೂರು: ಜನತೆಯ ಹಿತದೃಷ್ಟಿಯಿಂದ ಕೆಲವು ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ನೈಟ್ ಕಫ್ರ್ಯೂ ಬಗ್ಗೆ ಜನರಿಗೆ ಅಸಮಾಧಾನವಾಗುತ್ತಿರುವ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೈಟ್ ಕಫ್ರ್ಯೂ ಕೇವಲ ಹತ್ತು ದಿನಗಳ ಕಾಲ ಮಾತ್ರ. ಈ ರೀತಿ ಕ್ರಮಗಳನ್ನು ತೆಗೆದುಕೊಳ್ಳಲು ನಮಗೇನು ಖುಷಿ ಇಲ್ಲ. ಜನತೆಯ ಹಿತದೃಷ್ಟಿಯಿಂದ ಕೆಲವು ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತೆ. ತಾಂತ್ರಿಕ ಸಲಹಾ ಸಮಿತಿ ಕೊಟ್ಟ ಸಲಹೆಗಳ ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ. ಜನತೆ ದಯಮಾಡಿ ಸಹಕಾರ ಮಾಡಬೇಕು. ಹದಿನಾಲ್ಕು ದಿನಗಳ ಕಾಲ ಆದ ನಂತರ ಪರಿಸ್ಥಿತಿ ನೋಡಿ ಕ್ರಮ ಕೈಗೊಳ್ತೀವಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಓಮಿಕ್ರಾನ್ ವೈರಸ್‍ಗೆ ಬೆಚ್ಚಿಬಿದ್ದ ಜನ – ಡಿಸೆಂಬರ್‌ನಲ್ಲಿ ಹೆಚ್ಚು ವ್ಯಾಕ್ಸಿನೇಷನ್

    night curfew

    ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಶಿಶುಗಳ ಮರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಳ್ಳಾರಿ ಜಿಲ್ಲೆಯ ಡಿಎಚ್‍ಓ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಈ ಕುರಿತು ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.

    ಸಂಕ್ರಾಂತಿ ನಂತರ ರಾಜಕೀಯದಲ್ಲಿ ಕೆಲ ಬದಲಾವಣೆ ವಿಚಾರವಾಗಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಎಲ್ಲ ಕೆಲಸಗಳು ಆಗ್ತಿವೆ. ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಇದು ಇನ್ನಷ್ಟು ಗಟ್ಟಿ ಆಗುತ್ತದೆ. ವಿರೋಧ ಪಕ್ಷಗಳು ಕೂಡಾ ನಮ್ಮ ಅಭಿವೃದ್ಧಿ ಕೆಲಸಗಳನ್ನು ನೋಡಿ ಹತಾಶರಾಗ್ತಾರೆ. ಸಚಿವರ ಬದಲಾವಣೆ ವಿಚಾರ ಸಿಎಂ ವಿವೇಚನೆಗೆ ಬಿಟ್ಟದ್ದು. ಯಾರು ತಂಡದಲ್ಲಿ ಇರಬೇಕು, ಯಾರು ಇರಬಾರದು ಅನ್ನೋದನ್ನು ಸಿಎಂ ನಿರ್ಧಾರ ಮಾಡ್ತಾರೆ ಎಂದರು. ಇದನ್ನೂ ಓದಿ: ಕ್ರಿಸ್‍ಮಸ್ ದಿನ ಬಡ ಮಕ್ಕಳೊಂದಿಗೆ ಕಾಲಕಳೆದ ಶ್ವೇತಾ ಶ್ರೀವಾತ್ಸವ್