Tag: ಡಾ ಕೆ ಸುಧಾಕರ್

  • ಮಾಜಿ  ಸ್ಪೀಕರ್​ಗೆ  ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ: ಸುಧಾಕರ್

    ಮಾಜಿ  ಸ್ಪೀಕರ್​ಗೆ  ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ: ಸುಧಾಕರ್

    ಚಿಕ್ಕಬಳ್ಳಾಪುರ: ನಿಮಗೆ ಮಾನ ಮರ್ಯಾದೆ ಇದ್ದರೆ ಮೊದಲು ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ, ನಿಮ್ಮನ್ನು ಕಾಂಗ್ರೆಸ್ ಪಕ್ಷದಿಂದ ವಜಾ ಮಾಡಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅನರ್ಹ ಶಾಸಕ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ನಾನು ದೋಸ್ತಿ ಸರ್ಕಾರದ ಆಡಳಿತದ ವಿರುದ್ಧ ಹಾಗೂ ನನ್ನ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ ಎಂದು ಮನನೊಂದು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದರು.

    ಈ ಕ್ಷಣದವರೆಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ನಾನು ಮಾತನಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷದವರೇ ನನ್ನನ್ನು ವಜಾ ಮಾಡಿ ಅನರ್ಹ ಮಾಡಿದ್ದಾರೆ. ಬಸವಣ್ಣನವರು, ಅಂಬೇಡ್ಕರ್ ಆದ ಮೇಲೆ ನಾನು ಇದ್ದೀನಿ ಎಂದು ಈ ರಾಜ್ಯಕ್ಕೆ ಹೇಳಿಕೊಂಡು ತಿರುಗುತ್ತಿರುವ ಇವರ ಬಗ್ಗೆ ಸುಪ್ರೀಂ ಕೋರ್ಟ್ ಹೇಳುತ್ತೆ. ಮುಂದಿನ ದಿನಗಳಲ್ಲಿ ಈ ಜನರ ಆಶೀರ್ವಾದದಿಂದ ಮತ್ತೆ ನಾನು ಶಾಸಕನಾಗಿ ಸದನಕ್ಕೆ ಹೋಗುತ್ತೇನೆ. ಸದನದಲ್ಲಿ ಯಾವ ರೀತಿ ನಮ್ಮ ಮನಸ್ಸುಗಳನ್ನು ನೋಯಿಸಿದ್ದರು. ಅದೇ ರೀತಿ ನಿಮ್ಮ ವ್ಯಕ್ತಿತ್ವದ ಚರಿತ್ರೆಯನ್ನು ರಾಜ್ಯದ ಜನರ ಮುಂದಿಡುವ ಕೆಲಸ ಮಾಡುವೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

    ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದ ಸುಧಾಕರ್, ಯಾವ ಕಾರಣಕ್ಕೆ ನನ್ನನ್ನ ಅನರ್ಹ ಮಾಡಿದ್ದೀರಿ? ಯಾವುದೇ ವಿಚಾರಣೆ ತನಿಖೆ ಆಗದೆ ಹೇಗೆ ಅನರ್ಹ ಮಾಡಿದ್ರೀ? ಕಾಂಗ್ರೆಸ್ ಪಕ್ಷದ ವಿರುದ್ಧ ನಾನು ಏನು ಮಾಡಿದ್ದೀನಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಮೌಲ್ಯಗಳು ಇದ್ರೆ ಮೊದಲು ರಮೇಶ್ ಕುಮಾರ್ ಅವರನ್ನು ವಜಾ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ಮಾಜಿ ಸಚಿವ ಹಾಗೂ ಹಾಲಿ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ವಿರುದ್ಧವೂ ಕಿಡಿಕಾರಿದ ಸುಧಾಕರ್, ಎಂಎಲ್‍ಸಿ ಚುನಾವಣೆಯಲ್ಲಿ ಜೆಡಿಎಸ್ ಪರ ಶಿವಶಂಕರರೆಡ್ಡಿ ಕೆಲಸ ಮಾಡಲಿಲ್ವಾ? ಪಕ್ಕದ ಕ್ಷೇತ್ರದ ಕಾಂಗ್ರೆಸ್ ಶಾಸಕನಾದ ನನ್ನನ್ನ ರಾಜಕೀಯವಾಗಿ ಮುಗಿಸುವಂತಹ ಕೆಲಸ ಮಾಡಲಿಲ್ವಾ? ಹೀಗಾಗಿ ಮೊದಲು ಅವರನ್ನು ಪಕ್ಷದಿಂದ ವಜಾ ಮಾಡಿ. ನಿಮ್ಮ ನೈತಿಕತೆ ನನಗೆ ಹೇಳಿ ಕೊಡ್ತೀರಾ. ನಿಮಗೆ ನೈತಿಕತೆ ಇದೆಯಾ ಜನ ನೋಡ್ತಾ ಇದ್ದಾರೆ ನಾನು ಒಬ್ಬ ವ್ಯಕ್ತಿ (ಸಿದ್ದರಾಮಯ್ಯ) ಯಿಂದ ಇಷ್ಟೆಲ್ಲಾ ನೋವು ತಡೆದುಕೊಂಡಿದ್ದೆ ಎಂದು ತಿಳಿಸಿದರು.

  • ಪರಿಸರ ರಕ್ಷಣೆ ಮಾಡೋದು ಬಹು ದೊಡ್ಡ ಸವಾಲು- ಡಾ.ಕೆ. ಸುಧಾಕರ್

    ಪರಿಸರ ರಕ್ಷಣೆ ಮಾಡೋದು ಬಹು ದೊಡ್ಡ ಸವಾಲು- ಡಾ.ಕೆ. ಸುಧಾಕರ್

    – ಬೆಳ್ಳಂದೂರು ಮಾಲಿನ್ಯ ನಿಯಂತ್ರಣಕ್ಕೆ ಮೊದಲ ಆದ್ಯತೆ

    ಚಿಕ್ಕಬಳ್ಳಾಪುರ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆ ಕೇವಲ ಹುದ್ದೆಯಲ್ಲ ಇದೊಂದು ಜವಾಬ್ದಾರಿ. 21 ನೇ ಶತಮಾನದಲ್ಲಿ ಪರಿಸರ ರಕ್ಷಣೆ ಮಾಡುವುದು ದೊಡ್ಡ ಸವಾಲು ಎಂದು ನೂತನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮತ್ತು ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಹೇಳಿದ್ದಾರೆ.

    ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಸುಧಾಕರ್, ನೇರವಾಗಿ ತಾಲೂಕಿನ ನಂದಿ ಗ್ರಾಮದ ಪ್ರಸಿದ್ಧ ಶ್ರೀಭೋಗನಂದೀಶ್ವರನ ದೇಗುಲಕ್ಕೆ ಭೇಟಿ ನೀಡಿ ದೇವರ ಆರ್ಶೀವಾದ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ನನ್ನ ಮೊದಲ ಆದ್ಯತೆ ಎಂದರು.

    ಬೆಂಗಳೂರಿನ ಬೆಳ್ಳಂದೂರು ಕೆರೆ ಮಾಲಿನ್ಯ ತಡೆಗಟ್ಟೋದು ನನ್ನ ಮೊದಲ ಆದ್ಯತೆಗಳಲ್ಲೊಂದಾಗಿದೆ. ಈಗಾಗಲೇ ಮಾನ್ಯ ಉಚ್ಛ ನ್ಯಾಯಾಲಯ ಬೆಳ್ಳಂದೂರು ಕೆರೆಯ ಸಂರಕ್ಷಣೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ. ಈ ಸಂಬಂಧ ಜುಲೈ 1 ರಂದು ತಜ್ಞರ ಜೊತೆ ಸಭೆ ನಡೆಸಲಿದ್ದೇನೆ ಎಂದು ಹೇಳಿದರು.

    ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ವಿ ಮಂಜುನಾಥ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷ ಈ ಹಿಂದೆ ತೆಗೆದುಕೊಂಡ ತೀರ್ಮಾನದಂತೆ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಕೊಡುವುದಾಗಿ ಮೊದಲೇ ಮಾತುಕತೆ ಆಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗೂಂಡೂರಾವ್ ಸೂಚಿಸಿದ್ದಾರೆ ಎಂದು ಹೇಳಿದರು.

    ಮೈತ್ರಿ ಸರ್ಕಾರದ ದೋಸ್ತಿ ಪಕ್ಷ ಜೆಡಿಎಸ್ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರೊದು ಸರಿಯಲ್ಲ. ಉನ್ನತ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕಿದೆ. ಆದರೂ ಜೆಡಿಎಸ್‍ನವರಿಗೆ ಅಧ್ಯಕ್ಷ ಸ್ಥಾನ ಕೊಡೋದಿಲ್ಲ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

  • ‘ಕೈ’ ಕೊಟ್ಟು ಕಮಲ ಸೇರ್ತಾರಾ ಸುಧಾಕರ್? ಶಾಸಕರ ತಂದೆ ಸ್ಪಷ್ಟನೆ

    ‘ಕೈ’ ಕೊಟ್ಟು ಕಮಲ ಸೇರ್ತಾರಾ ಸುಧಾಕರ್? ಶಾಸಕರ ತಂದೆ ಸ್ಪಷ್ಟನೆ

    ಚಿಕ್ಕಬಳ್ಳಾಪುರ: ಸಿಎಂ ವಿರುದ್ಧ ಮುನಿಸಿಕೊಂಡಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅತೃಪ್ತ ಶಾಸಕ ಡಾ ಕೆ. ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿ ಸೇರೋದು ಪಕ್ಕನಾ ಅನ್ನೋ ಅನುಮಾನ ಮತ್ತಷ್ಟು ಬಲವಾಗ್ತಿದೆ. ಈ ಅನುಮಾನಗಳಿಗೆ ಪುಷ್ಠಿ ಕೊಡುವಂತೆ, ಸದ್ದಿಲ್ಲದೇ ಶಾಸಕ ಸುಧಾಕರ್ ತಂದೆ ಪಿ.ಎನ್ ಕೇಶವರೆಡ್ಡಿ ಕೆಲ ರಹಸ್ಯ ಸಭೆಗಳನ್ನು ನಡೆಸುತ್ತಿದ್ದು, ಸಮ್ಮಿಶ್ರ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದಾರೆ.

    ಸತತ ಎರಡನೇ ಬಾರಿಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಸುಧಾಕರ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದರು. ಆದರೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡಿದ್ದ ಸುಧಾಕರ್ ಪದೇ ಪದೇ ಸರ್ಕಾರದ ವಿರುದ್ಧ ಅಸಮಾಧಾನದ ಮಾತುಗಳನ್ನಾಡುತ್ತಲೇ ಮುಖ್ಯಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗಾಗಿ ಸಮ್ಮಿಶ್ರ ಸರ್ಕಾರದ ವಿರೋಧ ಕಟ್ಟಿಕೊಂಡ ಸುಧಾಕರ್ ಬಿಜೆಪಿ ನಾಯಕರ ಜೊತೆ ಓಡನಾಟ ಹೊಂದಿಕೊಂಡು ಅಪರೇಷನ್ ಕಮಲದತ್ತ ಮುಖ ಮಾಡಿದ್ದಾರೆ ಎಂದು ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿರುವ ವಿಷಯ.

    ಸರ್ಕಾರ ಉಳಿಸಿಕೊಳ್ಳೋಕೆ ಕೇವಲ ಪಕ್ಷೇತರರಿಗೆ ಸಚಿವ ಸ್ಥಾನ ಕೊಟ್ಟಿರುವುದರಿಂದ ಮತ್ತಷ್ಟು ಅಸಮಾಧಾನಗೊಂಡಿರೋ ಶಾಸಕ ಸುಧಾಕರ್ ಒಳಗೊಳಗೆ ಬಿಜೆಪಿ ಪಕ್ಷ ಸೇರೋಕೆ ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ತಂದೆಯ ನೇತೃತ್ವದಲ್ಲಿ ಇಡೀ ಕ್ಷೇತ್ರದಲ್ಲಿ ಬೆಂಬಲಿಗರ ಜೊತೆ ರಹಸ್ಯ ಸಭೆಗಳನ್ನು ನಡೆಸಿ ಪಕ್ಷ ಬಿಡುವ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕಳೆದ ಎರಡು ದಿನಗಳಿಂದ ಬೆಂಬಲಿಗರ ಜೊತೆ ಸಭೆ ನಡೆಸಿ ಮಾತನಾಡಿರುವ ಶಾಸಕ ಸುಧಾಕರ್ ತಂದೆ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಪಿ.ಎನ್ ಕೇಶವರೆಡ್ಡಿ ಸಮ್ಮಿಶ್ರ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದು ಸ್ವತಃ ವರಿಷ್ಠರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

    ಇದರ ಬಗ್ಗೆ ಮಾತನಾಡಿರುವ ಕೇಶವರೆಡ್ಡಿ ಅವರು, ಮೊದಲ ಬಾರಿ ಗೆದ್ದರು ವರಿಷ್ಠರ ಮಕ್ಕಳಿಗೆ ಸಚಿವ ಸ್ಥಾನ ಕೊಡುತ್ತಾರೆ. ಆದರೆ ಎರಡು ಬಾರಿ ಗೆದ್ದರು ನನ್ನ ಮಗನಿಗೆ ಸಚಿವ ಸ್ಥಾನ ಇಲ್ಲ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ ಅನುದಾನ, ಸುಧಾಕರ್ ಮಾಡಿದ ಅಭಿವೃದ್ಧಿ ಕೆಲಸಗಳು ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಮಾಡಲಾಗುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ರಾಜ್ಯ ಮಟ್ಟದ ಕೆಲ ನಾಯಕರು ಸ್ವಾರ್ಥಕ್ಕಾಗಿ ಜೆಡಿಎಸ್ ಪಕ್ಷದ ಜೊತೆ ಕೈ ಜೋಡಿಸಿದ್ದಾರೆ ಎಂದು ಮೈತ್ರಿ ಪಕ್ಷದ ವಿರುದ್ಧ ಗುಡುಗಿದರು.

    ನನ್ನ ಮಗ ಸುಧಾಕರ್ ಬೆಳೆದು ಬಿಡುತ್ತಾನೆ ಎಂದು ಸಚಿವ ಸ್ಥಾನ ಕೊಡುತ್ತಾ ಇಲ್ಲ. ನಿಗಮ ಮಂಡಳಿಯೂ ಕೊಡಲಿಲ್ಲ. ಇದಲ್ಲದೇ ಕನಿಷ್ಠ ಕ್ಷೇತ್ರಕ್ಕೆ ಅನುದಾನವನ್ನೇ ಕೊಡದೇ ತಾರತಮ್ಯ ಮಾಡುತ್ತಿದ್ದಾರೆ. ಹೀಗಾಗಿ ನಾವು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರೋದಾದ್ರೇ ತಾವೆಲ್ಲಾ ಬೆಂಬಲಿಸುತ್ತಿರಾ ಅನ್ನೋ ಪ್ರಶ್ನೆಯನ್ನು ಬೆಂಬಲಿಗರ ಮುಂದಿಟ್ಟಿದ್ದೇವೆ. ಇದಕ್ಕೆ ಬೆಂಬಲಿಗರೆಲ್ಲರೂ ಕೂಡ ಶಾಸಕರು ಎಲ್ಲಿದ್ರೇ ಅಲ್ಲೇ ನಾವು ಎಂದು ಎಲ್ಲರೂ ಬೆಂಬಲಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ.

    ಒಟ್ಟಿನಲ್ಲಿ ಸಚಿವ ಸ್ಥಾನವೂ ಇಲ್ಲ, ಅತ್ತ ನಿಗಮ ಮಂಡಳಿಯೂ ಕೊಡಲ್ಲ ಎಂದು ಅವಮಾನ ಮಾಡಿದ ಸಮ್ಮಿಶ್ರ ಸರ್ಕಾರದ ನಾಯಕರಿಗೆ ಪಾಠ ಕಲಿಸಲೇಬೇಕು ಎಂದು ಪಣ ತೊಟ್ಟಂತಿರೋ ಶಾಸಕ ಸುಧಾಕರ್ ಈಗ ಪಕ್ಷ ಬಿಡೋಕೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಹಾಗೆ ಭಾಸವಾಗುತ್ತಿದೆ.

  • ನನ್ನ ಅಸಮಾಧಾನ ಭಿನ್ನಾಭಿಪ್ರಾಯ ಮುಗಿದುಹೋದ ಅಧ್ಯಾಯ: ಸುಧಾಕರ್

    ನನ್ನ ಅಸಮಾಧಾನ ಭಿನ್ನಾಭಿಪ್ರಾಯ ಮುಗಿದುಹೋದ ಅಧ್ಯಾಯ: ಸುಧಾಕರ್

    – ಮೈತ್ರಿ ಪರ ಸಾಫ್ಟ್ ಕಾರ್ನರ್ ತೋರಿದ ಶಾಸಕರ
    – ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲವೇ ಅಲ್ಲ

    ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ನಡೆ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಮಾತುಗಳನ್ನಾಡುತ್ತಿದ್ದ ಶಾಸಕ ಡಾ. ಕೆ.ಸುಧಾಕರ್ ಅವರು ಈಗ ದೋಸ್ತಿಗಳ ಪರ ಸಾಫ್ಟ್ ಕಾರ್ನರ್ ತೋರಿದ್ದಾರೆ.

    ನಗರದಲ್ಲಿ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿ ಮಾತನಾಡಿದ ಶಾಸಕರು, ಮುಂದಿನ ಚುನಾವಣೆಗಳಿಗೆ ತಳಮಟ್ಟದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಂದಾಗಲೇಬೇಕು. ಈ ಅನಿವಾರ್ಯತೆಯನ್ನು ಲೋಕಸಭಾ ಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೇರಿದಂತೆ ಎಲ್ಲಾ ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಫಲಿತಾಂಶ ಎಚ್ಚರಿಕೆಯ ಘಂಟೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಎಸ್‍ಎಂ ಕೃಷ್ಣ ಭೇಟಿ ವೇಳೆ ಬಿಎಸ್‍ವೈ ಆಗಮನ ಕಾಕತಾಳೀಯವಷ್ಟೇ – ರಮೇಶ್, ಸುಧಾಕರ್ ಸ್ಪಷ್ಟನೆ

    ರಾಜಕೀಯವಾಗಿ ನಮ್ಮ ಬೇರುಗಳನ್ನು ಗಟ್ಟಿ ಮಾಡಿಕೊಳ್ಳುವ ಅವಶ್ಯಕತೆ ಇದೆ. ಫಲಿತಾಂಶದ ನಂತರ ರಾಜ್ಯದಲ್ಲಿ ಉತ್ತಮ ಆಡಳಿತ ಕೊಡುವ ಮುಖಾಂತರ ಅಭಿವೃದ್ಧಿ ಮಾಡಲು ನಾವೆಲ್ಲಾ ತೀರ್ಮಾನಿಸಿದ್ದೇವೆ. ಚುನಾವಣೆಯ ಹಿಂದೆ ಇದ್ದಂತಹ ನಂಬಿಕೆ ವಿಶ್ವಾಸದ ಕೊರತೆಗಳು ಈಗ ಮುಗಿದ ಅಧ್ಯಾಯ. ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‍ನ ನಾಯಕರು ಎಲ್ಲವನ್ನೂ ಕೂಲಂಕಷವಾಗಿ ವಿಚಾರ ಮಾಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಅವರನ್ನು ನಾವು ನಂಬಿದ್ದೇವೆ. ಹೀಗಾಗಿ ರಾಜ್ಯದಲ್ಲಿ ಹೊಸ ಅಧ್ಯಾಯ ಶುರುವಾಗಿದೆ ಎಂದರು.

    ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲವೇ ಅಲ್ಲ. ಯಾವ ಸ್ಥಾನಕ್ಕಾಗಿಯೂ ನಾನು ಮನವಿ, ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು. ಈ ಮೂಲಕ ಇಷ್ಟು ದಿನ ಆಪರೇಷನ್ ಕಮಲ ಅಂತ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಶಾಸಕರು ಈಗ ಯೂ ಟರ್ನ್ ಹೊಡೆದರಾ ಎನ್ನುವ ಪ್ರಶ್ನೆ ಎದುರಾಗಿದೆ.

  • ಮೈತ್ರಿ ಮಾಡೋದ್ರಲ್ಲಿ ಜೆಡಿಎಸ್ ಅವರೇ ಬೆಸ್ಟ್: ಸುಧಾಕರ್ ವ್ಯಂಗ್ಯ

    ಮೈತ್ರಿ ಮಾಡೋದ್ರಲ್ಲಿ ಜೆಡಿಎಸ್ ಅವರೇ ಬೆಸ್ಟ್: ಸುಧಾಕರ್ ವ್ಯಂಗ್ಯ

    ಚಿಕ್ಕಬಳ್ಳಾಪುರ: ಮೈತ್ರಿ ಮಾಡೋದ್ರಲ್ಲಿ ಜೆಡಿಎಸ್ ಅವರೇ ಬೆಸ್ಟ್, ಯಾರ ಜೊತೆ ಹೇಗೆ ಮೈತ್ರಿ ಮಾಡಿಕೊಳ್ಳೋದು ಅಂತ ಅವರಿಗೆ ಚೆನ್ನಾಗಿ ಗೊತ್ತಿದೆ ಅಂತ ಜೆಡಿಎಸ್ ಪಕ್ಷ ಹಾಗೂ ನಾಯಕರ ಬಗ್ಗೆ ಶಾಸಕ ಡಾ.ಕೆ ಸುಧಾಕರ್ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ನಗರಸಭೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕೈ ತಪ್ಪಿರುವ ವಿಚಾರವಾಗಿ ಬೇಸರ ವ್ಯಕ್ತಪಡಿಸಿದರು. ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನೇ ಕೇಳಿರಲಿಲ್ಲ. ಆದ್ರೆ ನನ್ನ ಕ್ಷೇತ್ರದ ಒಬ್ಬರಿಗೆ ಹಾಗೂ ಜಿಲ್ಲೆಯಲ್ಲಿ ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ನಾಯಕರ ಬಳಿ ಮನವಿ ಮಾಡಿದ್ದೆ. ಆದ್ರೆ ಹೈಕಮಾಂಡ್ ನನಗೂ ಸಹ ಅಧ್ಯಕ್ಷ ಸ್ಥಾನ ಘೋಷಣೆ ಮಾಡಿತ್ತು. ಈಗ ಆ ಸ್ಥಾನವು ಕೈ ತಪ್ಪಿದೆ ಅಂದ್ರೆ ಅದಕ್ಕೆ ಹೈಕಮಾಂಡ್ ಉತ್ತರ ನೀಡಬೇಕು. ಯಾಕೆ ಏನು ಅಂತ ಜೆಡಿಎಸ್ ನವರ ಜೊತೆ ಹೈಕಮಾಂಡ್ ಚರ್ಚೆ ನಡೆಸಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಈ ವೇಳೆ ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಾಡ್ತಿದಿಯಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧಾಕರ್ ಅವರು, ಮೈತ್ರಿ ಮಾಡೋದ್ರಲ್ಲಿ ಜೆಡಿಎಸ್ ಅವರೇ ಬೆಸ್ಟ್. ಯಾರ ಜೊತೆ ಹೇಗೆ ಮೈತ್ರಿ ಮಾಡಿಕೊಳ್ಳೋದು ಅಂತ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರನ್ನ ಬಿಟ್ರೆ ಬೇರೆ ಯಾರು ಅಷ್ಟು ಚೆನ್ನಾಗಿ ಮೈತ್ರಿ ಮಾಡಲು ಆಗಲ್ಲ ಎಂದು ಹೇಳಿ ವ್ಯಂಗ್ಯ ಮಾಡಿದರು. ಅಲ್ಲದೆ ಇದು ಸಿಇಟಿ ಶ್ರೇಯಾಂಕ ಪಟ್ಟಿಯಂತೆ ಮೊದಲ ಲಿಸ್ಟ್ ಇರಬೇಕು, ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಬರಬಹುದೇನೋ ಅಂತ ನಗುತ್ತಲೇ ತಮ್ಮ ಬೇಸರ ಹೊರಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಗಮ ಮಂಡಳಿಯಲ್ಲಿಯೂ ಶಾಸಕ ಸುಧಾಕರ್‌ಗೆ ಕೊಕ್

    ನಿಗಮ ಮಂಡಳಿಯಲ್ಲಿಯೂ ಶಾಸಕ ಸುಧಾಕರ್‌ಗೆ ಕೊಕ್

    ಬೆಂಗಳೂರು: ಸಚಿವ ಸ್ಥಾನಕ್ಕೆ ಸಾಕಷ್ಟು ಓಡಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಅವರಿಗೆ ನಿರೀಕ್ಷೆಯಲ್ಲಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವೂ ಕೈತಪ್ಪಿದೆ.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಳುಹಿಸಿದ್ದ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಾ.ಸುಧಾಕರ್ ಅವರನ್ನು ಸೂಚಿಸಲಾಗಿತ್ತು. ಆದರೆ ಸಿಎಂ ಕುಮಾರಸ್ವಾಮಿ ಅವರು ಅಂಕಿತ ಹಾಕಿದ ಪಟ್ಟಿಯಲ್ಲಿ ಶಾಸಕರ ಹೆಸರು ಕೈಬಿಡಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಈ ಮೂಲಕ ಕುಮಾರಸ್ವಾಮಿ ಅವರು ಶಾಸಕ ಸುಧಾಕರ್ ಅವರ ಮೇಲೆ ಮತ್ತೇ ದ್ವೇಷ ಮುಂದುವರಿಸಿದರಾ ಎನ್ನುವ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಇದನ್ನು ಓದಿ: ನಿಗಮ ಮಂಡಳಿ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಅಂಕಿತ, ಯಾರಿಗೆ ಯಾವ ಮಂಡಳಿ?

    ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಡಾ.ಸುಧಾಕರ್ ಅವರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡಿಲ್ಲ ಎನ್ನಲಾಗಿದೆ. ಇತ್ತ ಬಿಡಿಎ, ಬಿಎಂಟಿಸಿ, ರೇಷ್ಮೆ ಕೈಗಾರಿಕಾ ನಿಗಮ, ಕೆಆರ್ ಡಿಸಿ ಮಂಡಳಿಗೆ ಯಾವುದೇ ಶಾಸಕರ ನೇಮಕವಾಗಿಲ್ಲ. ಹೀಗಾಗಿ ಡಾ.ಸುಧಾಕರ್ ಜೊತೆಗೆ ಸಂಭಾವ್ಯ ಪಟ್ಟಿಯಲ್ಲಿದ್ದ ಎಸ್.ಟಿ.ಸೋಮಶೇಖರ್, ಸುಬ್ಬಾರೆಡ್ಡಿ, ವೆಂಕಟರಮಣಯ್ಯ ಮತ್ತು ಎನ್.ಎ.ಹ್ಯಾರೀಸ್, ಗೋಪಾಲಸ್ವಾಮಿ ಅವರಿಗೂ ನಿರಾಸೆಯಾಗಿದೆ.

    ನಿಗಮ ಮಂಡಳಿ ಪಟ್ಟಿಯಲ್ಲಿ ದಿನೇಶ್ ಗುಂಡೂರಾವ್ ಅವರು 19 ಶಾಸಕರ ಹೆಸರನ್ನು ಸೂಚಿಸಿದ್ದರು. ಆದರೆ ಅವರಲ್ಲಿ ಐವರು ಶಾಸಕರನ್ನು ಕೈಬಿಡಲಾಗಿದೆ. ಇತ್ತ ಸಂಸದೀಯ ಕಾರ್ಯದರ್ಶಿಗಳ ಲಿಸ್ಟ್ ನಿಂದ ಗೋಪಾಲಸ್ವಾಮಿ ಅವರಿಗೆ ಕೊಕ್ ನೀಡಲಾಗಿದೆ. ದೆಹಲಿ ವಿಶೇಷ ಪ್ರತಿನಿಧಿ ಸ್ಥಾನಕ್ಕೆ ಸೂಚಿಸಿದ್ದ ಶಾಸಕ ಅಜಯ್ ಸಿಂಗ್, ಯೋಜನ ಆಯೋಗದ ಉಪಾಧ್ಯಕ್ಷರ ಸ್ಥಾನಕ್ಕೆ ಸಲಹೆ ನೀಡಿದ್ದ ಶರಣಬಸಪ್ಪ ದರ್ಶನಾಪುರ, ಸಿಎಂ ರಾಜಕೀಯ ಕಾರ್ಯದರ್ಶಿಗೆ ಸೂಚಿಸಿದ್ದ ವಿ.ಮುನಿಯಪ್ಪ ಅವರ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಅವರು ಅಂಕಿತ ಹಾಕಿಲ್ಲ. ಹೀಗಾಗಿ ನಿಗಮ ಮಂಡಳಿ ನೇಮಕಾತಿಯಿಂದ 9 ಶಾಸಕರು ನಿರಾಸೆಗೆ ಗುರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಇಲ್ಲ – ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದು ಸರಿಯಲ್ಲ : ಶಾಸಕ ಸುಧಾಕರ್

    ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಇಲ್ಲ – ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದು ಸರಿಯಲ್ಲ : ಶಾಸಕ ಸುಧಾಕರ್

    ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಡೆಸಿದ ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಇಲ್ಲ. ಅಲ್ಲದೇ ಸರ್ಕಾರ ರಚನೆಯಾದ 6 ತಿಂಗಳ ಒಳಗೆ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು ಸರಿಯಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಂಪುಟ ವಿಸ್ತರಣೆ ಅಸಮಾಧಾನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ವಿಸ್ತರಣೆ ವೇಳೆ ಒಕ್ಕಲಿಗ ಸಮುದಾಯದವರಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಒಕ್ಕಲಿಗ ಸಮುದಾಯದಲ್ಲಿ ಡಿಕೆ ಶಿವಕುಮಾರ್ ಮತ್ತು ಕೃಷ್ಣಬೈರೇಗೌಡ ಈ ಇಬ್ಬರೇ ಸಚಿವರಿದ್ದು, ಮತ್ತೊಬ್ಬರಿಗೆ ಅವಕಾಶ ನೀಡಬಹುದಿತ್ತು. ಆದರೆ ಒಕ್ಕಲಿಗ ಸಮುದಾಯದಿಂದ ನನಗೆ ನೀಡಬೇಕು ಎಂದು ಹೇಳುತ್ತಿಲ್ಲ. ನಮ್ಮ ಸಮುದಾಯದವರಾದ ಕೃಷ್ಣಪ್ಪ, ಎಸ್.ಟಿ ಸೋಮಶೇಖರ್ ಇಬ್ಬರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಈ ಬಗ್ಗೆ ಸಚಿವ ಡಿಕೆ ಶಿವಕುಮಾರ್ ಸಹ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ರಮೇಶ್ ಜಾರಕಿಹೊಳಿ ಅವರನ್ನು 6 ತಿಂಗಳಲ್ಲೇ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದು ಸರಿಯಲ್ಲ. ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಇಲ್ಲ. ಬಿಜಾಪುರ ಜಿಲ್ಲೆಯಲ್ಲಿ 3 ಜನರಿಗೆ ಸಚಿವ ಸ್ಥಾನ ಕೊಡುವ ಬದಲು ಹಾವೇರಿ, ದಾವಣಗೆರೆಗೆ ಒಂದು ಸ್ಥಾನ ಕೊಡಬಹುದಿತ್ತು. ಅಲ್ಲದೇ ಪಕ್ಷೇತರ ಶಾಸಕರಾದ ಶಂಕರ್ ಅವರನ್ನು ಸಚಿವ ಸ್ಥಾನದಿಂದ ತೆಗೆದಿದ್ದು ಕೂಡ ಸರಿಯಲ್ಲ. ಪಕ್ಷೇತರರಾದ ಕಾರಣ ಶಂಕರ್ ಮತ್ತು ನಾಗೇಶ್ ಇಬ್ಬರಿಗೂ ಮೊದಲೇ ನಿಗಮ ಮಂಡಳಿ ಸ್ಥಾನ ನೀಡಬೇಕಿತ್ತು. ಏಕೆಂದರೆ ಸರ್ಕಾರದ ರಚನೆ ವೇಳೆ ಕಾಂಗ್ರೆಸ್ ಮೈತ್ರಿಗೆ ಬಹುಮತ ಇತ್ತು ಎಂದು ವಾದವನ್ನು ಸಮರ್ಥಿಸಿಕೊಂಡರು.

    ಅಸಮಾಧಾನಿತ ಶಾಸಕರನ್ನು ಬಿಜೆಪಿ ಸಂಪರ್ಕ ಮಾಡುವ ವಿಚಾರ ಪ್ರತಿಕ್ರಿಯೆ ನೀಡಿದ ಶಾಸಕ ಸುಧಾಕರ್, ರಾಜ್ಯದ ಮಾಜಿ ಮುಖ್ಯಮಂತ್ರಿಯಾದವರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದು ಸರಿಯಲ್ಲ. ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನ ಆಗಿರುವುದು ನಿಜ. ಹಾಗಂತ ನಾನು ಬಿಜೆಪಿಗೆ ಹೋಗುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಹೀಗಾಗಿ ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ. ನನಗೆ ಆಗಿರುವ ಅನ್ಯಾಯದ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆ ಮಾಡುತ್ತೇನೆ ಎಂದರು.

    ನನಗೆ ಆರ್ಹತೆ ಇದೆ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವ ಎಲ್ಲ ಅರ್ಹತೆ ತಮಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ ಸುಧಾಕರ್, ನಾನು ಮೆಡಿಕಲ್ ಡಾಕ್ಟರ್ ಆಗಿದ್ದರು ಫೊರೆನ್ಸಿಕ್, ಮೈಕ್ರೋ ಬಯಾಲಜಿ, ಪರಿಸರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ನಿರ್ವಹಣೆ ಮಾಡುವ ಎಲ್ಲ ಅರ್ಹತೆಗಳೂ ಇವೆ. ಹಸಿರು ನ್ಯಾಯಾಧೀಕರಣ ಮಾನದಂಡಗಳಲ್ಲಿ ತಿಳಿಸಿರುವ ಅರ್ಹತೆ ತಮಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಿರಿ ಕೊಟ್ಟಿರುವ ಬಗ್ಗೆ ಯಾರಿಗಾದರೂ ಆಕ್ಷೇಪ ಇದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಕೈ’ ಶಾಸಕ ಸುಧಾಕರ್ ವಿತರಿಸಿದ ಸೀರೆಗೆ ನಡುರಸ್ತೆಯಲ್ಲೇ ಬೆಂಕಿ ಹಚ್ಚಿದ ಮತದಾರ!

    `ಕೈ’ ಶಾಸಕ ಸುಧಾಕರ್ ವಿತರಿಸಿದ ಸೀರೆಗೆ ನಡುರಸ್ತೆಯಲ್ಲೇ ಬೆಂಕಿ ಹಚ್ಚಿದ ಮತದಾರ!

    ಚಿಕ್ಕಬಳ್ಳಾಪುರ: ಕ್ಷೇತ್ರದ ಶಾಸಕ ಡಾ ಕೆ ಸುಧಾಕರ್ ಕಡೆಯಿಂದ ವಿತರಣೆ ಮಾಡಲಾಗಿದ್ದ ಸೀರೆಗೆ ಮತದಾರರೊಬ್ಬರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರೋ ವಿಡಿಯೋ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿದೆ.

    ಶಾಸಕ ಡಾ ಕೆ ಸುಧಾಕರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದ ಮನೆ-ಮನೆಗೆ ತೆರಳಿ ಮಹಿಳಾ ಮತದಾರರಿಗೆ ಸೀರೆ ವಿತರಣೆ ಮಾಡುತ್ತಿದ್ದಾರೆ. ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮದ ನೆಪದಲ್ಲಿ ಮಹಿಳಾ ಮತದಾರರ ಮನವೊಲಿಕೆಗೆ ಶಾಸಕ ಸುಧಾಕರ್ ಮುಂದಾಗಿದ್ದಾರೆ.

    ಇದೀಗ ಶಾಸಕ ಸುಧಾಕರ್ ಕಡೆಯಿಂದ ವಿತರಣೆ ಮಾಡಲಾಗಿದ್ದ ಸೀರೆಯನ್ನ ನಡು ರಸ್ತೆಯಲ್ಲಿ ಹಾಕಿ, ಬೆಂಕಿ ಹಚ್ಚಿದ ವ್ಯಕ್ತಿಯೊರ್ವ ಇಷ್ಟು ವರ್ಷಗಳ ಕಾಲ ಸೀರೆ ವಿತರಣೆ ಮಾಡದ ನೀವು ಈಗ ಚುನಾವಣಾ ಸಮಯದಲ್ಲಿ ಯಾಕೆ ಸೀರೆ ವಿತರಣೆ ಮಾಡುತ್ತಿದ್ದೀರಿ ಅಂತ ಶಾಸಕ ಸುಧಾಕರ್ ಗೆ ಪ್ರಶ್ನೆ ಮಾಡಿದ್ದಾರೆ.

    ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಶಾಸಕ ಸುಧಾಕರ್ ತಮ್ಮ ಒಡೆತನದ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕ್ಷೇತ್ರಾದ್ಯಂತ ಮಹಿಳಾ ಮತದಾರರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದರು. ರಂಗೋಲಿ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದವರಿಗೆ ಬಹುಮಾನ ನೀಡಲು ಇದೇ ತಿಂಗಳ 24 ರಂದು ಬೃಹತ್ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡುವ ನೆಪದಲ್ಲಿ ಸೀರೆ ಹಂಚಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.