Tag: ಡಾ ಕೆ ಸುಧಾಕರ್

  • ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಗೂ 2 ಕೋವಿಡ್ ಟೆಸ್ಟ್ ಲ್ಯಾಬ್: ಸಚಿವ ಸುಧಾಕರ್

    ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಗೂ 2 ಕೋವಿಡ್ ಟೆಸ್ಟ್ ಲ್ಯಾಬ್: ಸಚಿವ ಸುಧಾಕರ್

    ದಾವಣಗೆರೆ: ಸರ್ಕಾರದ ಕ್ರಮಗಳು ಮತ್ತು ಜನರ ಸಹಕಾರದಿಂದ ಮಾತ್ರ ಕೊರೊನಾ ನಿಗ್ರಹ ಸಾಧ್ಯ. ಜನರ ಜೀವ ಮತ್ತು ಜೀವನವನ್ನು ಸುಸ್ಥಿತಿಗೆ ತರಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದ್ದು, ಜನರು ಸಹಕರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲಾಡಳಿತ ಭವನದದಲ್ಲಿ ಇಂದು ಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಕೊರೊನಾ ನಿಗ್ರಹ ಹಿನ್ನೆಲೆ ರಾಜ್ಯದಲ್ಲಿರುವ 60 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಲ್ಯಾಬ್ ಸ್ಥಾಪಿಸಲು ಸರ್ಕಾರ ಈಗಾಗಲೇ ಆದೇಶಿಸಿದ್ದು, ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಯಲ್ಲಿ 2 ಪರೀಕ್ಷಾ ಲ್ಯಾಬ್ ಸಿದ್ಧಗೊಳ್ಳುವ ವಿಶ್ವಾಸವಿದೆ. ಅಲ್ಲದೆ ದಾವಣಗೆರೆಯ ಎಸ್‍ಎಸ್ ಹೈಟೆಕ್ ಆಸ್ಪತ್ರೆಯ ಪಿಸಿಆರ್ ಲ್ಯಾಬ್‍ನಲ್ಲಿ ಶನಿವಾರದಿಂದ ಕೋವಿಡ್ ಪರೀಕ್ಷೆ ಆರಂಭಗೊಳ್ಳಲಿದ್ದು, ಅದಕ್ಕೆ ಚಾಲನೆ ನೀಡುತ್ತಿರುವುದು ಸಂತಸದ ವಿಷಯ ಎಂದರು.

    ನಗರದ ಸಿ.ಜಿ.ಆಸ್ಪತ್ರೆಯಲ್ಲಿಯೂ ಕೋವಿಡ್ ಪರೀಕ್ಷೆ ಲ್ಯಾಬ್ ಕಾರ್ಯಾರಂಭಗೊಂಡಿದ್ದು, ಭಾನುವಾರದಿಂದ ಆರ್‍ಟಿಪಿಸಿಆರ್ ಮೆಷಿನ್‍ಗಳನ್ನು ಅಳವಡಿಸಲು ತಿಳಿಸಿದ್ದೇನೆ. ಇನ್ನೊಂದು ಎರಡು ದಿನಗಳಲ್ಲಿ ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸಿದ್ಧಗೊಳ್ಳಲಿದ್ದು ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆ. ಪರೀಕ್ಷೆಗಾಗಿ ಜನರು ದಿನಗಳಟ್ಟಲೆ ಕಾಯುವುದು ತಪ್ಪುತ್ತದೆ. ಖಾಸಗಿ ಲ್ಯಾಬ್‍ಗಳಿಗೆ ದರ ನಿಗದಿಗೊಳಿಸಿದ್ದು, ಸರ್ಕಾರದ ವತಿಯಿಂದಲೇ ಕಿಟ್‍ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

    ಇಡೀ ಜಗತ್ತನ್ನು ಕಣ್ಣಿಗೆ ಕಾಣದೊಂದು ವೈರಾಣು ನಡುಗಿಸುತ್ತಿದೆ. ವಿಶ್ವದಲ್ಲಿ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಕೊರೊನಾ ನಿಯಂತ್ರಣ ಮಾಡುತ್ತಿದೆ. ದೇಶದಲ್ಲಿ ಸುಮಾರು 60 ಸಾವಿರ ಜನರಿಗೆ ಸೋಂಕು ತಗುಲಿದ್ದು, ನಮ್ಮ ರಾಜ್ಯ ಸೋಂಕಿತರ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರಂಭದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತಿದೆ ಎಂದರು.

    ಜೀವ ಉಳಿಸುವ ಜೊತೆಗೆ ಜನಜೀವನ ಸುಧಾರಣೆ ಎರಡೂ ಕೆಲಸಗಳನ್ನು ಸಮತೋಲನದಿಂದ ಸರಿದೂಗಿಸಬೇಕಿದೆ. ಕೊರೊನಾ ಕೂಡ ಇರುತ್ತದೆ. ಆದರೆ ನಾವು ಅದರಿಂದ ದೂರ ಇರಬೇಕು. ನಾಲ್ಕು ಟಿ ಅಂದರೆ ಟ್ರ್ಯಾಕಿಂಗ್, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‍ಮೆಂಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲಾಗುತ್ತಿದೆ. ಕೊರೊನಾ ನಿಯಂತ್ರಣ ಕೇವಲ ಸರ್ಕಾರದ ಕೈಯಲ್ಲಿಲ್ಲ ಬದಲಾಗಿ ಎಲ್ಲ ಜನತೆ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.

    ಅನಗತ್ಯ ಆತಂಕ ಬೇಡ:
    ಕೊರೊನಾ ರೋಗಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಎಷ್ಟೋ ಅಂತೆ-ಕಂತೆಗಳು ಆಗಿ ಹೋಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿದಿನ ಹೊಸ ಮಾರ್ಗಸೂಚಿಗಳನ್ನು ನೀಡುವ ಮೂಲಕ ಕೊರೊನಾ ನಿಯಂತ್ರಣದಲ್ಲಿ ಶ್ರಮ ವಹಿಸುತ್ತಿದೆ. ಕೊರೊನಾ ಸಾಮಾಜಿಕ ಕಳಂಕ ಅಲ್ಲ. ಯಾರಿಗೆ ಬೇಕಾದರೂ ಬರಬಹುದು. ಸೋಂಕಿನ ಬಗ್ಗೆ ಭಯ ಬೇಡ. ಯಾವ ವೈರಾಣುವೂ ಜನರನ್ನು ಸೋಲಿಸಿಲ್ಲ. ಬದಲಾಗಿ ಜನರು ವೈರಾಣುವನ್ನು ಸೋಲಿಸಿದ್ದಾರೆ. ಕೊರೊನಾವನ್ನೂ ಸೋಲಿಸಲು ಸ್ವಲ್ಪ ಸಮಯ ಬೇಕು. ಆದ ಕಾರಣ ಜನರು ಅಂತರ ಕಾಯ್ದುಕೊಳ್ಳುವ ಮೂಲಕ, ಸ್ವಚ್ಛತೆ, ಮಾಸ್ಕ್ ಧರಿಸುವ ಮೂಲಕ ಹಾಗೂ ಸರ್ಕಾರದ ನಿಯಮ, ಸೂಚನೆಗಳನ್ನು ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

    ಮಾಹಿತಿ, ಧೈರ್ಯ ತುಂಬಬೇಕು:
    ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಬಂದವರ ಪೈಕಿ ಈಗಾಗಲೇ ಶೇ.50 ಗುಣಮುಖರಾಗಿದ್ದಾರೆ. ಶೇ.80ರಷ್ಟು ಜನರು ಚಿಕಿತ್ಸೆ ಇಲ್ಲದೆಯೇ ಗುಣಮುಖರಾಗುತ್ತಾರೆ. ಮರಣ ಪ್ರಮಾಣ ಶೇ.3.1 ರಷ್ಟಿದ್ದು, ಅದರಲ್ಲೂ ಹೃದಯ ತೊಂದರೆ, ಕ್ಯಾನ್ಸರ್, ಡಯಾಬಿಟಿಕ್ ಇತರೆ ತೊಂದರೆಯಿಂದ ಬಳಲುವವರು ಮರಣಕ್ಕೆ ತುತ್ತಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಜನರಲ್ಲಿ ಭಯ ಬೇಡ. ಆದರೆ ಅಂತರ ಕಾಯ್ದುಕೊಂಡು, ಸ್ವಚ್ಛತೆ ಕಾಪಾಡಿಕೊಂಡು ನಿಯಮಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಜನರಿಗೆ ಸಮರ್ಪಕ ಮಾಹಿತಿ ಮತ್ತು ಧೈರ್ಯವನ್ನು ತುಂಬಬೇಕು ಎಂದರು.

    ಆರೋಗ್ಯಸೇತು ಆ್ಯಪ್:
    ಜಿಲ್ಲೆಯ ಎಲ್ಲ ಜನತೆ ಆರೋಗ್ಯಸೇತು ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಆಪ್ ಬಗ್ಗೆ ಸಾಕಷ್ಟು ಪ್ರಚಾರ ನೀಡಬೇಕು. ಈ ಆ್ಯಪ್‍ನ ಸಹಾಯದಿಂದ ತಾವು ಸೋಂಕಿತರಿಂದ ಎಷ್ಟು ಅಂತರದಲ್ಲಿದ್ದೀರಿ ಎಂದು ತಿಳಿಯುತ್ತದೆ ಹಾಗೂ ಸೋಂಕಿತರು ಹತ್ತಿರ ಬಂದರೆ ಸೂಚನೆ ನೀಡುತ್ತದೆ. ಆದ್ದರಿಂದ ಎಲ್ಲರೂ ಈ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿ ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಹಿನ್ನೆಲೆ ಕೆಲಸ ಆಗಬೇಕು. ಇಂದಿನಿಂದಲೇ ನಾನ್ ಕೋವಿಡ್ ಸೇವೆಗಳನ್ನು ಬಾಪೂಜಿ, ಎಸ್‍ಎಸ್ ಇತರೆ ಆಸ್ಪತ್ರೆಗಳಿಗೆ ಕಳುಹಿಸಬೇಕು. ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಹೆರಿಗೆ ವಿಭಾಗವನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ವರ್ಗಾಯಿಸಿ, ಕೋವಿಡ್ ಆಸ್ಪತ್ರೆಯಲ್ಲಿ ಕೇವಲ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ವ್ಯವಸ್ಥೆ ಆಗಬೇಕು ಎಂದು ಸೂಚಿಸಿದರು.

  • ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಬೆಂಗಳೂರು: ಕೊರೊನಾ ಭೀತಿ ನಡುವೆಯೂ ನಿಗದಿಯಂತೆ ಇಂಡಿಯನ್ ಪ್ರಿಮಿಯರ್ ಲೀಗ್‍ನ 13ನೇ ಆವೃತ್ತಿ ಟೂರ್ನಿ ನಡೆಯುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆಯಷ್ಟೇ ಸ್ಪಷ್ಟಪಡಿಸಿದ್ದರು. ಆದರೆ ಕೊರೊನಾ ದೇಶದಲ್ಲಿ ಹಬ್ಬುತ್ತಿರುವ ಪರಿ ನೋಡಿದರೆ ಐಪಿಎಲ್ ನಡೆಯುತ್ತಾ ಎಂಬ ಅನುಮಾನ ಶುರುವಾಗಿದೆ.

    ಉದ್ಯಾನಗರಿಯಲ್ಲಿ ನಾಲ್ಕು ಪಾಸಿಟೀವ್ ಕೇಸ್‍ಗಳು ಪತ್ತೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕಿದೆ. ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಬೆಂಗಳೂರು ಸಿದ್ಧವಿಲ್ಲ. ಐಪಿಎಲ್ ಪಂದ್ಯಗಳನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪತ್ರ ಬರೆದಿದ್ದಾರೆ.

    ಮಾರ್ಚ್ 29ರಿಂದ ಆರಂಭವಾಗಬೇಕಿರುವ ಐಪಿಎಲ್‍ನಲ್ಲಿ ಆರ್‌ಸಿಬಿಯ 7 ಲೀಗ್ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಬೇಕಿದೆ. ಐಪಿಎಲ್ ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಡೆಯಬೇಕಿರುವ ಪ್ರಸಿದ್ಧ ಕರಗ ಮಹೋತ್ಸವವನ್ನು ಮುಂದೂಡಲು ಸಹ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

  • ಜನೌಷಧಿ ಕೇಂದ್ರಗಳಲ್ಲಿ ಮಾಸ್ಕ್ ವಿತರಣೆ: ಶ್ರೀರಾಮುಲು

    ಜನೌಷಧಿ ಕೇಂದ್ರಗಳಲ್ಲಿ ಮಾಸ್ಕ್ ವಿತರಣೆ: ಶ್ರೀರಾಮುಲು

    ಬೆಂಗಳೂರು: ಸಿಲಿಕಾನ್ ಸಿಟಿಯ ವ್ಯಕ್ತಿಗೆ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಫುಲ್ ಆಲರ್ಟ್ ಆಗಿದೆ.

    ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಫೀಲ್ಡಿಗಿಳಿದು ಪರಿಶೀಲನೆ ನಡೆಸುತ್ತಿದ್ದಾರೆ. ಮಾಸ್ಕ್ ಗೆ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆಯೂ ಮಾಹಿತಿ ಪಡೆದಿರುವ ಸಚಿವ ಶ್ರೀರಾಮುಲು ಜನೌಷಧಿ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಸ್ಕ್ ವಿತರಿಸಲಾಗುವುದು ಎಂದು ಹೇಳಿದರು.

    ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಶ್ರೀರಾಮುಲು ದಿಢೀರ್ ಪರಿಶೀಲನೆ ನಡೆಸಿದ್ರು. ಕೊರೊನಾ ವೈರಸ್ ಪತ್ತೆ ಹಚ್ಚುವ ಕೇಂದ್ರಗಳನ್ನ ಪರಿಶೀಲನೆ ಮಾಡಿದ್ರು. ಇದೇ ವೇಳೆ ವಿಮಾನ ಪ್ರಯಾಣಿಕರ ತಪಾಸಣೆ ಕಾರ್ಯವನ್ನು ಖುದ್ದು ಪರಿಶೀಲನೆ ನಡೆಸಿದ್ರು.

    ಬಳಿಕ ವಿಧಾನಸೌಧಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೊರೊನಾ ವೈರಸ್ ಬಗ್ಗೆ ಯಾರೂ ಭಯ ಭೀತರಾಗೋದು ಬೇಡ. ಈಗಾಗಲೇ ಏರ್‌ಪೋರ್ಟಿನಲ್ಲಿ ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ, ಜನೌಷಧಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    450 ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕಿನ ವ್ಯಕ್ತಿಯು ಅಮೆರಿಕದಿಂದ ಬಂದಿದ್ದು, ಅವರು ಓಡಾಡಿದ ಟ್ಯಾಕ್ಸಿ, ಅವರ ಅಕ್ಕಪಕ್ಕದವರು ಹಾಗೂ ಕುಟುಂಬದವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜ್ಯ ಸರ್ಕಾರ ಈ ವೈರಸ್ ಅನ್ನು ಎದುರಿಸಲು ಸಮರ್ಥವಾಗಿದೆ ಎಂದರು.

  • ಎತ್ತಿನಗಾಡಿಯಲ್ಲಿ ಬಂದ ನೂತನ ಸಚಿವ ಸುಧಾಕರ್

    ಎತ್ತಿನಗಾಡಿಯಲ್ಲಿ ಬಂದ ನೂತನ ಸಚಿವ ಸುಧಾಕರ್

    – ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರದಲ್ಲೇ ನೇಮಕ

    ಚಿಕ್ಕಬಳ್ಳಾಪುರ: ಇತ್ತೀಚೆಗೆ ತಾನೇ ಖಾತೆ ಹಂಚಿಕೆಯಾಗಿದ್ದು, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಆಗಲಿದೆ ಅಂತ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ ಕೆ.ಸುಧಾಕರ್ ಹೇಳಿದರು.

    ಕೃಷಿಮೇಳ 2020 ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಸುಧಾಕರ್, ಬಜೆಟ್ ಮಂಡನೆಗಾಗಿ ವಿಧಾನಸಭೆ ಅಧಿವೇಶನ ಇರುವ ಕಾರಣ ರಾಜ್ಯಪಾಲರ ಭಾಷಣ ಇರುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಆ ಕಾರ್ಯದಲ್ಲಿ ಸ್ವಲ್ಪ ಬ್ಯುಸಿ ಇರಬಹುದು. ಹೀಗಾಗಿ ಅದಷ್ಟು ಶೀಘ್ರದಲ್ಲೇ ನೂತನ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ತಮ್ಮ ಸ್ವಂತ ಜಿಲ್ಲೆ ಚಿಕ್ಕಬಳ್ಳಾಪುರ ಆಗಿರುವ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಭೌಗೋಳಿಕವಾಗಿ ಹಾಗೂ ಜಿಲ್ಲೆಯ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವು ಕಾರಣ ತಮಗೆ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಿದರೇ ಒಳ್ಳೆಯದಾಗುತ್ತದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗಲಿದೆ ಅಂತ ಜಿಲ್ಲೆಯ ಉಸ್ತುವಾರಿ ಮಂತ್ರಿ ಸ್ಥಾನದ ಇಂಗಿತ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ವೇದಿಕೆ ಭಾಷಣದಲ್ಲಿ ಮಾತನಾಡುವ ವೇಳೆ ತಾವೇ ಜಿಲ್ಲೆಯ ಉಸ್ತುವಾರಿ ಸಚಿವರಾಗಲಿದ್ದು, ಮುಂದಿನ ದಿನಗಳಲ್ಲಿ ಯಾವುದೇ ತಾರತಮ್ಯ ಮಾಡದೇ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

    ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕೃಷಿಮೇಳ 2020 ರ ಸಿರಿಧಾನ್ಯಮೇಳ ಹಾಗೂ ಫಲಪುಷ್ಪಪ್ರದರ್ಶನಕ್ಕೆ ಎತ್ತಿನಗಾಡಿಯಲ್ಲಿ ಬರುವ ಮೂಲಕ ಗಮನ ಸೆಳೆದರು. ನಗರದ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳಕ್ಕೆ ಬಿಬಿ ರಸ್ತೆಯಿಂದ ಸರಿ ಸುಮಾರು ಅರ್ಧ ಕಿಲೋಮೀಟರ್ ದೂರದ ಕ್ರೀಡಾಂಗಣಕ್ಕೆ ಎತ್ತಿನಬಂಡಿಯಲ್ಲೇ ಬಂದ ಸಚಿವರು ಆಕರ್ಷಣೀಯ ಕೇಂದ್ರವಾಗಿದ್ದರು.

    ಕ್ರೀಡಾಂಗಣದಲ್ಲಿ ನಿರ್ಮಿಸಿಲಾಗಿದ್ದ ನರೇಗಾ ಕಾಮಗಾರಿಗಳ ಪ್ರಾತಕ್ಷಿತೆ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಟೇಪ್ ಕಟ್ ಮಾಡಿ ಚಾಲನೆ ನೀಡಿದ ಸಚಿವರು, ಗುಲಾಬಿ ಹೂಗಳಿಂದ ಅರಳಿ ನಿಂತಿದ್ದ ಹಂಪಿ ಕಲ್ಲಿನ ರಥದ ಎದುರು ಫೋಟೋ ತೆಗೆಸಿಕೊಂಡು ಗುಲಾಬಿ ಹೂಗಳ ಹಂಪಿಯ ಕಲ್ಲಿನ ರಥಧಾಕೃತಿಗೆ ಸಂತಸ ವ್ಯಕ್ತಪಡಿಸಿದರು. ತದನಂತರ ರೈತರ ಉಪಯೋಗಕ್ಕೆ ಬರುವ ವಿವಿಧ ಅಂಗಡಿ ಮಳಿಗೆಗಳನ್ನು ಕೃಷಿ ಮೇಳದಲ್ಲಿ ಆರಂಭಿಸಲಾಗಿದ್ದು, ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

    ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸದ ಬಚ್ಚೇಗೌಡ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ನರಸಿಂಹಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬಂದಿ ಸೇರಿದಂತೆ ರೈತ ಸಂಘಟನೆಗಳ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿ ಸಿರಿಧಾನ್ಯಗಳಿಗೆ ಮಾರುಕಟ್ಟೆ ವೃದ್ಧಿಯಾಗಿದ್ದು, ಅತಿ ಕಡಿಮೆ ನೀರಿನಲ್ಲೂ ಅಂದರೆ ಮಳೆಗಾಲದಲ್ಲೂ ಸಹ ಬೆಳೆಯಬಹುದಾದ ಸಿರಿಧಾನ್ಯಗಳನ್ನ ಉತ್ಪಾದನೆಗೆ ರೈತರು ಮುಂದಾಗಬೇಕು, ರಸಗೊಬ್ಬರಗಳ ಬಳಕೆಯನ್ನ ಕಡಿಮೆ ಮಾಡಿ ಸಾವಯುವ ಪದ್ದತಿಯಲ್ಲಿ ಬೇಸಾಯ ಮಾಡುವತ್ತ ಮರಳಿ ರೈತರು ಬರಬೇಕಿದೆ ಅಂತ ಮನವಿ ಮಾಡಿಕೊಂಡರು.

  • ಸಂಪುಟ ವಿಸ್ತರಣೆ- ಸಿಎಂಗೆ ಪರಮೋಚ್ಛ ಅಧಿಕಾರ: ಸುಧಾಕರ್

    ಸಂಪುಟ ವಿಸ್ತರಣೆ- ಸಿಎಂಗೆ ಪರಮೋಚ್ಛ ಅಧಿಕಾರ: ಸುಧಾಕರ್

    ಚಿಕ್ಕಬಳ್ಳಾಪುರ: ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಯಡಿಯೂರಪ್ಪನವರ ಪರಮೋಚ್ಛ ಅಧಿಕಾರ ಎಂದು ಶಾಸಕ ಡಾ.ಕೆ ಸುಧಾಕರ್ ಹೇಳಿದರು.

    ನಗರದಲ್ಲಿ ಮಾತನಾಡಿದ ಸುಧಾಕರ್, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ಹೇಳಿಕೆ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಬೇರೆಯವರು ಮಾತನಾಡದಿದ್ದರೆ ಒಳ್ಳೆಯದು. ನಾನು ಸಹ ಆ ವಿಚಾರದಲ್ಲಿ ಮಾತನಾಡದಿರುವುದೇ ಒಳ್ಳೆಯದು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೇಳಿಕೆ ಕೊಡಲು ಸಿಎಂಗೆ ಮಾತ್ರ ಅರ್ಹತೆಯಿದೆ ಎಂದರು.

    ರಾಜ್ಯ ಬಿಜೆಪಿ ಸರ್ಕಾರ ಒಳ್ಳೆಯ ಆಡಳಿತ ಕೊಡುತ್ತಿದೆ. ಪ್ರವಾಸೋದ್ಯಮ ಸಚಿವರಾಗಿ ಸಿಟಿ ರವಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದು, ಅವರು ಅದರ ಬಗ್ಗೆ ಗಮನ ಕೊಡಲಿ ಎಂದರು. ಎಲ್ಲರೂ ಸೇರಿ ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡೋಣ. ಯಾರೂ ಕೂಡ ಗೊಂದಲ ನಿರ್ಮಾಣ ಮಾಡುವಂತಹ ಹೇಳಿಕೆ ಕೊಡದೆ ಇರುವುದು ಒಳ್ಳೆಯದು ಎಂದು ಸುಧಾಕರ್ ಹೇಳಿದರು.

  • ಸಿನಿಮಾ ಡೈಲಾಗ್ ಮೂಲಕ ಬ್ರಹ್ಮಾನಂದಂ ಪ್ರಚಾರ

    ಸಿನಿಮಾ ಡೈಲಾಗ್ ಮೂಲಕ ಬ್ರಹ್ಮಾನಂದಂ ಪ್ರಚಾರ

    ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಇಂದು ಸಹ ಟಾಲಿವುಡ್ ಹಾಸ್ಯ ನಟ ಬ್ರಹ್ಮಾನಂದಂ ಚುನಾವಣಾ ಪ್ರಚಾರ ನಡೆಸಿದ್ದಾರೆ.

    ಬ್ರಹ್ಮಾನಂದಂ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದರು. ಈ ವೇಳೆ ಹೊನ್ನಪ್ಪನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಬ್ರಹ್ಮಾನಂದಂ ಕಾರನ್ನು ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ಹೋಬಳಿಯ ಹಳೇಹಳ್ಳಿ, ಪುರ, ಜರಬಂಡಹಳ್ಳಿ ಸೇರಿದಂತೆ ಮಂಚೇನಹಳ್ಳಿ ಪಟ್ಟಣದಲ್ಲಿ ಬ್ರಹ್ಮಾನಂದಂ ಚುನಾವಣಾ ಪ್ರಚಾರ ನಡೆಸಿದ್ದಾರೆ.

    ಈ ವೇಳೆ ಮಾತನಾಡಿದ ಬ್ರಹ್ಮಾನಂದಂ, ಎಲ್ಲರಿಗೂ ನಮಸ್ಕಾರ, ಇಂದು ನಾನು ಹೈದರಾಬಾದಿನಿಂದ ಇಲ್ಲಿವರೆಗೂ ಬಂದಿದ್ದೇನೆ ಎಂದರೆ ಅದಕ್ಕೆ ಸುಧಾಕರ್ ಅವರೇ ಕಾರಣ. ಬಿಜೆಪಿ ಅಭ್ಯರ್ಥಿ ಸುಧಾಕರ್ ಬುದ್ಧಿವಂತರು ಮತ್ತು ವಿದ್ಯಾವಂತರು. ಹೀಗಾಗಿ ಜನರಿಗಾಗಿ ಯಾವ ಯಾವ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ತಿಳಿದಿರುತ್ತದೆ. ಸುಧಾಕರ್ ಅವರು ನನ್ನ ಒಳ್ಳೆಯ ಸ್ನೇಹಿತ. ಅವರು ತುಂಬಾ ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಹೀಗಾಗಿ ಅವರಿಗೆ ನಿಮ್ಮ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ತಮ್ಮ ಸಿನಿಮಾ ಸ್ಟೈಲಿನಲ್ಲಿ ಅಭಿಮಾನಿಗಳಿಗಾಗಿ ಡೈಲಾಗ್ ಹೇಳಿದ್ದಾರೆ. ಈ ವೇಳೆ ಹಾಸ್ಯ ನಟ ಬ್ರಹ್ಮಾನಂದಂ ನೋಡಲು ಜನರು ಮುಗಿಬಿದ್ದಿದ್ದರು. ಈ ಹಿಂದಿನ ಚುನಾವಣೆಗಳಲ್ಲೂ ಸುಧಾಕರ್ ಅವರ ಪರವಾಗಿ ಟಾಲಿವುಡ್‍ನ ನಟ ಮೆಗಾಸ್ಟಾರ್ ಚಿರಂಜೀವಿ, ಬಹುಭಾಷಾ ತಾರೆಗಳಾದ ರಮ್ಯಕೃಷ್ಣ, ಖುಷ್ಬೂ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ತೆಲುಗು ಭಾಷಿಕ ಮತದಾರರ ಮನಸೆಳೆದಿದ್ದರು.

    ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಇಲ್ಲಿನ ಜನ ಈಗಲೂ ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಜೊತೆಗೆ ಟಾಲಿವುಡ್ ಸಿನಿಮಾಗಳನ್ನೇ ನೋಡುವುದರಿಂದ ಟಾಲಿವುಟ್ ನಾಯಕ, ನಟ-ನಟಿಯರನ್ನ ಇಷ್ಟಪಡುತ್ತಾರೆ. ಹೀಗಾಗಿ ಈ ಬಾರಿ ಯೂ ಸ್ಯಾಂಡಲ್‍ವುಡ್ ಸ್ಟಾರ್ಸ್ ಹಾಗೂ ಟಾಲಿವುಡ್ ಕಾಮಿಡಿ ಕಿಂಗ್ ಸುಧಾಕರ್ ಅವರ ಪರ ಪ್ರಚಾರಕ್ಕೆ ಮಾಡುತ್ತಿದ್ದಾರೆ.

  • ಸಿದ್ದರಾಮಯ್ಯ ಧರಿಸುವ ಪಂಚೆ ಶಲ್ಯದಷ್ಟು ಸರಳವಾಗಿಲ್ಲ: ಸಿ.ಟಿ ರವಿ

    ಸಿದ್ದರಾಮಯ್ಯ ಧರಿಸುವ ಪಂಚೆ ಶಲ್ಯದಷ್ಟು ಸರಳವಾಗಿಲ್ಲ: ಸಿ.ಟಿ ರವಿ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಿ.ಟಿ ರವಿ, ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಪರವಾಗಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

    ಪ್ರಚಾರದ ವೇಳೆ, ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಬೆಂಬಲಿಸಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಪಕ್ಷಾತೀತವಾಗಿ ಬಿಜೆಪಿ ಪಕ್ಷ ಸೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಅತಿ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸ್ವಾಭಿಮಾನದ ಅಲೆಯಿದ್ದು, ಮೆಡಿಕಲ್ ಕಾಲೇಜು ವಿಚಾರದಲ್ಲಿ ಡಿಕೆಶಿ ಸವಾಲು ಹಾಕಿದಾಗಲೇ ಜನರ ಸ್ವಾಭಿಮಾನ ರೊಚ್ಚಿಗೇಳುವಂತೆ ಮಾಡಿದೆ. ಹೀಗಾಗಿ ದೊಡ್ಡ ನಾಯಕರಾದ ಡಿಕೆಶಿ ದೊಡ್ಡದಾಗಿ ಯೋಚನೆ ಮಾಡಬೇಕು. ಅದು ಬಿಟ್ಟು ಸಣ್ಣತನ ಪ್ರದರ್ಶನ ಮಾಡಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ಒನ್ ಸೈಡ್ ಮ್ಯಾಚ್ ಎಂಬ ಪರಿಸ್ಥಿತಿ ಇದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಎರಡನೇ ಸ್ಥಾನಕ್ಕಾಗಿ ಪೈಪೋಟಿಗಿಳಿದಿವೆ ಎಂದರು.

    ಅಲ್ಲದೆ ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯ ಪಂಚೆ ಶಲ್ಯದಷ್ಟು ಸರಳವಾಗಿಲ್ಲ. ಅವರ ಪಂಚೆ ಹಾಗೂ ಶಲ್ಯಕ್ಕೆ ಅವರ ಐಷಾರಾಮಿ ಜೀವನ ಮಿಸ್ ಮ್ಯಾಚ್ ಆಗುತ್ತಿದೆ. ಸಿದ್ದರಾಮಯ್ಯ ಪ್ರತಿ ದಿನ ಹಾಕುವ ಗಾಗಾಲ್ಸ್ ನ ಬೆಲೆ ಏನು? ಎಂದು ಪ್ರಶ್ನೆ ಮಾಡಿದರು.

    ಯಡಿಯೂರಪ್ಪ ಅವರ ರಾಜೀನಾಮೆ ಕೇಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಒಂದು ಸೀಟು ಬಂದಾಗಲೇ ಸಿದ್ದರಾಮಯ್ಯ ನೈತಿಕತೆ ಇದ್ದಿದ್ರೆ ಅಂದೇ ರಾಜಕೀಯ ನಿವೃತ್ತಿ ಪಡೆಯಬೇಕಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ನಾನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯಷ್ಟು ದೊಡ್ಡ ಲೀಡರ್ ಅಲ್ಲ. ಈಗಲೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಕೆಲವರು ಕೃಪಾಕಟಾಕ್ಷದಿಂದ ನಾಯಕರಾದರೆ, ಕೆಲವರು ವಂಶಪಾರಂಪರ್ಯವಾಗಿ ನಾಯಕರಾಗಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ಗುದ್ದು ನೀಡಿದರು.

  • ಕುಟುಂಬ ರಾಜಕಾರಣ ಮಾಡೋದಕ್ಕೆ ಜೆಡಿಎಸ್ ಪಕ್ಷ ಹುಟ್ಟಿರೋದು: ಪುಟ್ಟಸ್ವಾಮಿ

    ಕುಟುಂಬ ರಾಜಕಾರಣ ಮಾಡೋದಕ್ಕೆ ಜೆಡಿಎಸ್ ಪಕ್ಷ ಹುಟ್ಟಿರೋದು: ಪುಟ್ಟಸ್ವಾಮಿ

    ಚಿಕ್ಕಬಳ್ಳಾಪುರ: ಜೆಡಿಎಸ್ ಪಕ್ಷ ಹುಟ್ಟಿರುವುದೇ ಕುಟುಂಬ ರಾಜಕಾರಣ ಮಾಡುವುದಕ್ಕೆ. ಕುಟುಂಬ ರಾಜಕಾರಣದಿಂದಲೇ ನಿಖಿಲ್ ಕುಮಾರಸ್ವಾಮಿ ಹಾಗೂ ಎಚ್.ಡಿ ದೇವೇಗೌಡ ಸೋತರು ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು.

    ಚಿಕ್ಕಬಳ್ಳಾಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಪರ ಪುಟ್ಟಸ್ವಾಮಿ ಚುನಾವಣಾ ಪ್ರಚಾರ ಸಭೆಗೆ ಇಳಿದಿದ್ದರು. ಈ ವೇಳೆ ಅವರು ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ ಕುಮಾರಸ್ವಾಮಿ ಹಾಗೂ ಅವರ ಸಹೋದರ ರೇವಣ್ಣ ಅಘೋಷಿತ ಸಿಎಂ, ಸಂಬಂಧಿಗಳಾದ ತಮ್ಮಣ್ಣ ಹಾಗೂ ಸಾರಾ ಮಹೇಶ್ ಸಚಿವರಾದರು. ಹೀಗಾಗಿ ಜೆಡಿಎಸ್ ಪಕ್ಷ ಜಾತ್ಯಾತೀತ ತತ್ವಗಳಿಗೆ ಅವಮಾನ ಮಾಡಿದೆ ಎಂದರು.

    ಅಲ್ಲದೆ ಪಕ್ಷವನ್ನು ನಂಬಿದ ಜನರೇ ಜೆಡಿಎಸ್ ಬಗ್ಗೆ ಅಸಹ್ಯಪಡುತ್ತಿದ್ದು, ನಿಖಿಲ್ ಹಾಗೂ ಎಚ್.ಡಿ ದೇವೇಗೌಡ ಅವರನ್ನು ಸೋಲಿಸಿದರು. ಮುಂದಿನ ಚುನಾವಣೆಗೆ ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ಹೇಳಿದರು.

    ಇದೇ ವೇಳೆ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಪುಟ್ಟಸ್ವಾಮಿ, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸಿಗ ಕಾಂಗ್ರೆಸ್ಸಿಗರು ಎರಡು ಭಾಗಗಳಾಗಿವೆ. ಉಪಚುನಾವಣಾ ಪ್ರಚಾರಕ್ಕೆ ಮೂಲ ಕಾಂಗ್ರೆಸ್ಸಿಗರು ಬರುತ್ತಿಲ್ಲ. ಈ ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗಳಿಸಲಿದ್ದು, ಇದರಿಂದ ವಿರೋಧ ಪಕ್ಷದ ನಾಯಕ ಸ್ಥಾನ ಕಳೆದುಕೊಳ್ಳಲಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆದರೂ ಆಶ್ಚರ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

  • ಅನುದಾನ ಜಾಸ್ತಿಯಾಗಿ ಸಮ್ಮಿಶ್ರ ಸರ್ಕಾರದಿಂದ ಹೊರಬಂದೆ: ಸುಧಾಕರ್ ವ್ಯಂಗ್ಯ

    ಅನುದಾನ ಜಾಸ್ತಿಯಾಗಿ ಸಮ್ಮಿಶ್ರ ಸರ್ಕಾರದಿಂದ ಹೊರಬಂದೆ: ಸುಧಾಕರ್ ವ್ಯಂಗ್ಯ

    ಚಿಕ್ಕಬಳ್ಳಾಪುರ: ಅನುದಾನ ಜಾಸ್ತಿಯಾಗಿ ಸಮ್ಮಿಶ್ರ ಸರ್ಕಾರದಿಂದ ಹೊರಬಂದೆ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಅನುದಾನ ಎಲ್ಲಿ ಬಂದಿದೆ? ಬಹುಶಃ ಮಂತ್ರಿಯಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಅವರಿಗೆ ಕೊಟ್ಟಿದ್ದಾರೇನೋ ಗೊತ್ತಿಲ್ಲ. ನಮ್ಮ ಕ್ಷೇತ್ರಕ್ಕೆ ಯಾವುದೇ ಅನುದಾನ ನೀಡಲಿಲ್ಲ. ಇದೇ ಕಾರಣಕ್ಕೆ ಮೈತ್ರಿ ಸರ್ಕಾರದಿಂದ ಹೊರಗೆ ಬಂದೆ ಎಂದು ಅಸಮಾಧಾನ ಹೊರ ಹಾಕಿದರು.

    ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋದರು. ಅದು ದ್ವೇಷದ ರಾಜಕಾರಣ ಅಲ್ವಾ? ರಾಮನಗರ, ಮಂಡ್ಯದಲ್ಲಿ ಮೆಡಿಕಲ್ ಕಾಲೇಜು ಇತ್ತು. ಆದರೂ ಕನಕಪುರಕ್ಕೆ ಮೆಡಿಕಲ್ ಕಾಲೇಜು ಯಾಕೆ ಬೇಕಿತ್ತು? ಚಿಕ್ಕಬಳ್ಳಾಪುರ ಜಿಲ್ಲೆಯವರು ಜನರಲ್ಲವೇ? ಯಾವ ಕಾರಣಕ್ಕೆ ಮೆಡಿಕಲ್ ಕಾಲೇಜು ವಾಪಾಸ್ ತೆಗೆದುಕೊಂಡು ಹೋದರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದರು.

    ಕನಕಪುರಕ್ಕೆ 450 ಕೋಟಿ ರೂ. ಕೊಟ್ಟಿದ್ದು ಯಾಕೆ? ಅದೇ ಅನುದಾನದಲ್ಲಿ ಕನಕಪುರಕ್ಕೆ 250 ಕೋಟಿ ರೂ., ಚಿಕ್ಕಬಳ್ಳಾಪುರಕ್ಕೆ 250 ಕೋಟಿ ರೂ. ಕೊಡಬಹುದಿತ್ತು. ಕೆಲವರ ಮೇಲೆ ವಿಶೇಷ ಪ್ರೀತಿ ತೋರಿದರು, ಇನ್ನು ಕೆಲವರನ್ನು ದ್ವೇಷಿಸಿದರು. ಒಂದು ವೇಳೆ ಎಲ್ಲರನ್ನೂ ಸಮಾನವಾಗಿ ನೋಡಿದ್ದರೆ ಸಮ್ಮಿಶ್ರ ಸರ್ಕಾರ ಉಳಿಯುತ್ತಿತ್ತು. ಸಮ್ಮಿಶ್ರ ಸರ್ಕಾರ ರಚನೆ ಮಾಡಿ ನಮ್ಮಂತ ಪ್ರಾಮಾಣಿಕರಿಗೆ ತೊಂದರೆ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ) ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಹನಲ್ಲವೆಂದು ನ್ಯಾಯಾಲಯ ಹೇಳಿಲ್ಲ. ಆದರೆ ನೇಮಕ ಸಂದರ್ಭದಲ್ಲಿ ನಿಯಮ ಪಾಲನೆಯಾಗಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ತಾಂತ್ರಿಕ ಅಂಶಗಳನ್ನು ಉಲ್ಲೇಖಿಸಿದ ಬಗ್ಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಸುಪ್ರೀಂಕೋರ್ಟ್ ಆದೇಶ ಏನೇ ಇದ್ದರೂ ನನ್ನ ನೇಮಕ ಮುಂದುವರಿಸುವುದು, ಸ್ಥಗಿತಗೊಳಿಸುವುದು ಬಿಜೆಪಿ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.

    ಇದೇ ವೇಳೆ ಅನರ್ಹ ಶಾಸಕರ ಪ್ರಕರಣ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 23ಕ್ಕೆ ಮುಂದೂಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರು, ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿರುದ್ಧ ನ್ಯಾಯ ಪಡೆಯುವುದು ನಮ್ಮ ಮೂಲಭೂತ ಹಕ್ಕು. ನಮ್ಮ ಅಳಲನ್ನು ಸುಪ್ರೀಂಕೋರ್ಟ್ ಮುಂದೆ ತೋಡಿಕೊಂಡಿದ್ದೇವೆ. ನಮಗೆ ನ್ಯಾಯ ಸಿಗುವ ನಿರೀಕ್ಷೆಯಿದೆ. ಪ್ರಕರಣದ ತೀರ್ಪು ಬಂದ ಬಳಿಕ ರಮೇಶ್ ಕುಮಾರ್ ಅವರ ಬಗ್ಗೆ ಮಾತನಾಡುತ್ತೇನೆ ಎಂದು ಪರೋಕ್ಷವಾಗಿ ಕಿಡಿಕಾರಿದರು.

    ಅನರ್ಹ ಶಾಸಕರಿಗೆ ಮಂತ್ರಿಗಿರಿ ಯಾವಾಗ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅವಧೂತರು ವಿನಯ್ ಗೂರೂಜಿ ಬಳಿ ಕೇಳಿಕೊಂಡು ಬರುತ್ತೇನೆ. ಆಮೇಲೆ ನಿಮಗೆ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು.

  • ಸತ್ಯ ಹರಿಶ್ಚಂದ್ರನಂತೆ ಮಾತನಾಡೋ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ: ರಮೇಶ್ ಕುಮಾರ್‌ಗೆ ಸುಧಾಕರ್ ಪ್ರಶ್ನೆ

    ಸತ್ಯ ಹರಿಶ್ಚಂದ್ರನಂತೆ ಮಾತನಾಡೋ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ: ರಮೇಶ್ ಕುಮಾರ್‌ಗೆ ಸುಧಾಕರ್ ಪ್ರಶ್ನೆ

    – ಮಾಜಿ ಸಚಿವ ಶಿವಶಂಕರರೆಡ್ಡಿ ವಿರುದ್ಧವೂ ವಾಗ್ದಾಳಿ

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರ ವಿರುದ್ಧ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ. ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್ ಅವರು, ರಮೇಶ್ ಕುಮಾರ್ ಅವರನ್ನು ನಾನು ಸ್ವಾಮಿ ಅಂತ ದೇವರ ಭಾವನೆಯಿಂದ ಕರೆಯುತ್ತಿದ್ದೆ. ಸತ್ಯ ಹರಿಶ್ಚಂದ್ರನಂತೆ ಮಾತನಾಡುವ ರಮೇಶ್ ಕುಮಾರ್ ಅವರೇ ಮಾಜಿ ಸಿಎಂ ದೇವರಾಜು ಅರಸು ಅವರ ಜೊತೆಯಲ್ಲಿದ್ದ ನೀವು ರಾಮಕೃಷ್ಣ ಹೆಗೆಡೆ ಜೊತೆ ಯಾಕೆ ಸೇರಿಕೊಂಡಿರಿ? ನಂತರ ರಾಮಕೃಷ್ಣ ಹೆಗಡೆ ಅವರಿಂದ ಎಚ್.ಡಿ.ದೇವೇಗೌಡರ ಬಳಿ ಯಾಕೆ ಹೋದ್ರಿ? ನಿಮ್ಮನ್ನು 5 ವರ್ಷ ಸ್ಪೀಕರ್ ಆಗಿ ನೇಮಕ ಮಾಡಿದ್ದ ಎಚ್.ಡಿ.ದೇವೇಗೌಡರಿಗೆ ಕೈ ಕೊಟ್ಟು ಕೊನೆಗೆ ಕೆ.ಎಚ್.ಮುನಿಯಪ್ಪ ಹಾಗೂ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಯಾಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರಿ? ಇದು ಪಕ್ಷಾಂತರ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ನೈತಿಕತೆ, ಪಾರದರ್ಶಕತೆ, ಧರ್ಮದ ಬಗ್ಗೆ ಸತ್ಯ ಹರಿಶ್ಚಂದ್ರನಂತೆ ಮಾತನಾಡುವ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ ಅಂತ ಹೇಳಿ. ವ್ಯಾಪಾರ ಎಂದು ಆರೋಪಿಸಿರುವ ನೀವು ಈ ಹಿಂದೆ ಮಾಡಿರೋದು ಏನು? ಸದನದಲ್ಲಿ ಹದ್ದುಗಳು ಅಂತ ಕರೆದ್ರಲ್ಲಾ ನೀವು ಯಾರು? ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನಿಮಗೆ ಮಂತ್ರಿ ಸ್ಥಾನ ಕೊಡಲಿಲ್ಲ ಅಂತ ನೀವು ಹೇಗೆ ನಡೆದುಕೊಂಡ್ರಿ? ಅಧಿಕೃತ ವಿರೋಧ ಪಕ್ಷದವರ ತರ ಮಾತನಾಡುತ್ತಿದ್ರಲ್ಲಾ ಮಿನಿಸ್ಟರ್ ಪೋಸ್ಟ್ ಕೊಟ್ಟ ಮೇಲೆ ಸೈಲೆಂಟ್ ಆಗಿದ್ದು ಯಾಕೆ? ಅಧಿಕಾರ ಇಲ್ಲದಾಗ ಒಂದು ರೀತಿ. ಇರುವಾಗ ಮತ್ತೊಂದು ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಕಿಡಿಕಾರಿದರು.

    ನೈತಿಕತೆ ಇದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಜೀನಾಮೆ ಕೊಡಿ ಎಂದು ಗೌರಿಬಿದನೂರು ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಅವರು, ಅನರ್ಹ ಶಾಸಕ ಸುಧಾಕರ್ ಅವರಿಗೆ ಆಗ್ರಹಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರು, ನನ್ನ ಶಾಸಕ ಸ್ಥಾನದ ಬೆಂಬಲದಿಂದಲೇ ಶಿವಶಂಕರರೆಡ್ಡಿ ಅವರು 14 ತಿಂಗಳು ಮಂತ್ರಿಯಾಗಿ ಅಧಿಕಾರ ಅನುಭವಿಸಿದರು. ಅವರು ಮಂತ್ರಿ ಆಗುವುದಕ್ಕೆ ನನ್ನ ಪಾಲು ಇದೆ. ಹೀಗಾಗಿ ನಾನು ಪಿಸಿಬಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಕೆಲವೇ ದಿನಗಳು ಕಳೆದಿವೆ. ಸಮಯ ಬಂದಾಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

    ಗೌರಿಬಿದನೂರು ಕ್ಷೇತ್ರದಲ್ಲಿ ಏನೆಲ್ಲಾ ನಡೆಯುತ್ತಿದೆ ಅಂತ ನನಗೆ ಗೊತ್ತಿದೆ. ನಿಮ್ಮ ಗುರುಗಳು, ತಂದೆ ಸಮಾನರಾದ ದಿವಂಗತ ಅಶ್ವತ್ಥರಾಯಣರೆರಡ್ಡಿ ಅವರ ವಿರುದ್ಧವೇ ಸ್ಫರ್ಧಿಸಿ ಸೋಲಿಸಿದರಲ್ಲಾ ಆಗ ಎಲ್ಲಿ ಹೋಗಿತ್ತು ನಿಮ್ಮ ನೈತಿಕತೆ? ಎಸಿಸಿ ಕಾರ್ಖಾನೆಯ ಜೊತೆ ನಿಮ್ಮ ಒಂಡಬಂಡಿಕೆ ಏನು ಅಂತ ಗೊತ್ತಿದೆ. ಎಸಿಸಿ ಸಿಮೆಂಟ್ ಕಾರ್ಖಾನೆಗೆ ಬೇಕಾಗುವ ಚೀಲ ತಯಾರಿಕಾ ಕಾರ್ಖಾನೆಯನ್ನು ನಿಮ್ಮ ಮಗ ಆರಂಭಿಸಿರುವುದು ಗೊತ್ತಿದೆ. ಸಾದಲಿ ಬಳಿ ಕಲ್ಲು ಗಣಿಗಾರಿಕೆ ಮಾಡುವುಕ್ಕೆ ಮುಂದಾಗಿರುವುದು ಗಮನಕ್ಕೆ ಬಂದಿದೆ ಎಂದು ಶಿವಶಂಕರರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.