Tag: ಡಾ ಕೆ ಸುಧಾಕರ್

  • ವೈದ್ಯಕೀಯ ವಿದ್ಯಾರ್ಥಿಗಳು ಲಸಿಕೆ ಪಡೆದು ಸ್ಫೂರ್ತಿಯಾಗಿ: ಸುಧಾಕರ್

    ವೈದ್ಯಕೀಯ ವಿದ್ಯಾರ್ಥಿಗಳು ಲಸಿಕೆ ಪಡೆದು ಸ್ಫೂರ್ತಿಯಾಗಿ: ಸುಧಾಕರ್

    – ಲಸಿಕೆಯಿಂದ ಅಡ್ಡ ಪರಿಣಾಮವಿಲ್ಲ

    ಬೆಂಗಳೂರು: ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದು ಸಾಮಾನ್ಯ ಜನರಿಗೆ ಸ್ಫೂರ್ತಿ ಶಕ್ತಿಯಾಗಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

    ವಾಣಿ ವಿಲಾಸ ಆಸ್ಪತ್ರೆಯಲ್ಲಿ ಪ್ರಸೂತಿ ಟ್ರೈಯಾಜ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಐಸಿಯು ಉದ್ಘಾಟನೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ಆರಂಭವಾದ ಹತ್ತೇ ತಿಂಗಳಲ್ಲಿ ರಾಜ್ಯಕ್ಕೆ ಲಸಿಕೆ ಬಂದಿದೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಲಸಿಕೆಯ ರಾಯಭಾರಿಗಳಾಗಬೇಕು. ವಿದ್ಯಾರ್ಥಿಗಳು ಆದ್ಯತೆಯಲ್ಲಿ ಬಂದು ಲಸಿಕೆ ಪಡೆದಾಗ ಬೇರೆ ಇಲಾಖೆಗಳ ಸಿಬ್ಬಂದಿಗೆ ಧೈರ್ಯ ಬರುತ್ತದೆ. ಲಸಿಕೆ ಪಡೆಯಲು ಕೆಲವರು ಪರೀಕ್ಷೆಯ ನೆಪ ಒಡ್ಡುತ್ತಿದ್ದಾರೆ. ಆದರೆ ಪರೀಕ್ಷೆಗೂ ಲಸಿಕೆಗೂ ಸಂಬಂಧವಿಲ್ಲ. ಲಸಿಕೆ ಪಡೆದವರಿಗೆ ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಅನೇಕ ಅಧಿಕಾರಿಗಳು ಮುಂದೆ ಬಂದು ಲಸಿಕೆ ಪಡೆದು ಮಾದರಿಯಾಗಿದ್ದಾರೆ. ಈ ನೈತಿಕ ಸ್ಫೂರ್ತಿಯನ್ನು ಜನರಿಗೆ ನೀಡುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಳ್ಳಬೇಕು ಎಂದು ಕೋರಿದರು.

    ಕೆಲ ರಾಜ್ಯಗಳಲ್ಲಿ ಲಸಿಕೆ ಪಡೆಯದಿದ್ದರೆ ಸಂಬಳ ನೀಡುವುದಿಲ್ಲ ಎಂದು ಕೂಡ ಹೇಳಲಾಗಿದೆ. ಆದರೆ ನಮ್ಮಲ್ಲಿ ಆ ರೀತಿಯ ನಿರ್ಬಂಧ ಹೇರಿಲ್ಲ. ಭಾರತದ ಲಸಿಕೆಗೆ 25 ದೇಶಗಳಲ್ಲಿ ಬೇಡಿಕೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಉಚಿತವಾಗಿ ಲಸಿಕೆ ನೀಡುವಾಗ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದರು.

    ಕೋವಿಡ್ ಬಂದ ಬಳಿಕ, ಆರೋಗ್ಯ ಇಲ್ಲದಿದ್ದರೆ ಏನೂ ಇಲ್ಲ ಎಂದು ಅರ್ಥವಾಗಿದೆ. ಆದ್ದರಿಂದ ಏಳೆಂಟು ತಿಂಗಳಲ್ಲಿ ರಾಜ್ಯ ಸರ್ಕಾರ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಿದೆ. ಆರೋಗ್ಯ ಇಲಾಖೆಯಡಿ ಸುಮಾರು 3 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳು, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ನಾಲ್ಕೂವರೆ ಸಾವಿರ ಆಕ್ಸಿಜನ್ ಹಾಸಿಗೆ ಇತ್ತು. ಈಗ ಎರಡೂ ಇಲಾಖೆಗಳ ಆಸ್ಪತ್ರೆಗಳು ಸೇರಿ ಒಟ್ಟು 30 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳನ್ನು ಅಳವಡಿಸಲಾಗಿದೆ. ಈ ಸಾಲಿನ ಬಜೆಟ್ ನಲ್ಲೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

    ಕೋವಿಡ್ ಆರಂಭದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಗಣನೀಯ ಸೇವೆ ಸಲ್ಲಿಸಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಆದ 200ಕ್ಕೂ ಹೆಚ್ಚು ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಇದಕ್ಕಾಗಿ ವಿಶೇಷ ಅಭಿನಂದನೆಗಳು ಎಂದರು.

  • ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದದರ್ಜೆಗೆ, ದಿನದ 24 ಗಂಟೆ ಸೇವೆ: ಸುಧಾಕರ್

    ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದದರ್ಜೆಗೆ, ದಿನದ 24 ಗಂಟೆ ಸೇವೆ: ಸುಧಾಕರ್

    ಹುಬ್ಬಳ್ಳಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಅಲ್ಲದೆ 24/7 ಕಾರ್ಯ ನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕಿಮ್ಸ್, ಡಿಮ್ಹಾನ್ಸ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಕೇಂದ್ರಕ್ಕೆ ಒಬ್ಬ ಆಯುಷ್ ವೈದ್ಯಾಧಿಕಾರಿ ಸೇರಿದಂತೆ ಮೂವರು ವೈದ್ಯಾಧಿಕಾರಿಗಳನ್ನು ನೇಮಿಸಲಾಗುವುದು. ರಾಜ್ಯದಲ್ಲಿ ಮೂರು ಸ್ತರದ ಆರೋಗ್ಯ ಕೇಂದ್ರಗಳು ಕರ್ತವ್ಯ ನಿರ್ವಹಿಸುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು 24/7 ಕರ್ತವ್ಯ ನಿರ್ವಹಿಸಲಿವೆ ಎಂದರು.

    ಹೊಸದಾಗಿ 2,500 ವೈದ್ಯರ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಗ್ರೂಪ್ ಡಿ ಹಾಗೂ ನರ್ಸಿಂಗ್ ಸಿಬ್ಬಂದಿ ಕೊರತೆಯಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ನೇಮಕಾತಿ ಮಾಡಿಕೊಳ್ಳಲಾಗುವುದು. ಉತ್ಕೃಷ್ಟ ಆರೋಗ್ಯ ಸೇವೆಯ ಜೊತೆಗೆ ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಸಂಕಲ್ಪ ಹೊಂದಲಾಗಿದೆ. ತಾಲೂಕು ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಆಯುಷ್‍ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ವಿಮಾ ಯೋಜನೆಯಡಿ ಹೆಚ್ಚಿನ ಗುರಿಯನ್ನು ಆರೋಗ್ಯ ಕೇಂದ್ರಗಳಿಗೆ ನಿಗದಿ ಮಾಡಲಾಗಿದೆ. ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ ಎಂದರು.

    ಕಿಮ್ಸ್ ನಲ್ಲಿ ಅಂಗಾಂಗ ಕೇಂದ್ರ
    ಉತ್ತರ ಕರ್ನಾಟಕ ಸಂಜೀವಿನಿ ಎನಿಸಿರುವ ಕಿಮ್ಸ್ ನಲ್ಲಿ ಅಂಗಾಂಗ ದಾನ ಮಾಡುವವರಿಂದ ಉಪಯುಕ್ತ ಅಂಗಗಳನ್ನು ಪಡೆದು, ಇತರರಿಗೆ ಅಳವಡಿಸಲು ಅನುಕೂಲವಾಗುವಂತೆ ಅಂಗಾಂಗ ಕೇಂದ್ರ ಸ್ಥಾಪನೆ ಮಾಡಲಾಗುವದು. ಮರಣದ ನಂತರ ಅಂಗಗಳನ್ನು ದಾನ ಮಾಡುವಂತೆ ಜನರನ್ನು ಓಲೈಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕಿಮ್ಸ್ ನಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಧಾರವಾಡ ಜಿಲ್ಲೆಯ ಅಳ್ನಾವರ ಹಾಗೂ ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಾಲೂಕು ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವದು. ಜಿಲ್ಲೆಯಲ್ಲಿ ಶಿಶು ಹಾಗೂ ತಾಯಂದಿರ ಮರಣ ಪ್ರಮಾಣ ಉಳಿದ ಜಿಲ್ಲೆಗಳಿಗಿಂತ ಜಾಸ್ತಿಯಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಹಾಗೂ ಕಬ್ಬಿಣ ಅಂಶದ ಮಾತ್ರೆಗಳನ್ನು ಸರಿಯಾಗಿ ವಿತರಣೆ ಮಾಡಲು ನಿರ್ದೇಶನ ನೀಡಲಾಗಿದೆ. ಆಹಾರ ಸಂರಕ್ಷಣೆ ಅಧಿಕಾರಿ ಹಾಗೂ ಔಷಧ ನಿಯಂತ್ರಣಾಧಿಕಾರಿಗಳು ಶುಚಿತ್ವ, ಔಷಧ ವಿತರಣೆ ಬಗ್ಗೆ ನಿಯಂತ್ರಣ ವಹಿಸುವಂತೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸುವಂತೆ ತಿಳಿಸಲಾಗುವುದು ಎಂದರು.

    ಕೋವಿಡ್ ಲಸಿಕೆ ಸುರಕ್ಷಿತ
    ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಪಡೆದ ದೇಶದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಲಸಿಕೆ ಪಡೆಯುವುದರಿಂದ ಕೊವೀಡ್ ರೋಗದ ವಿರುದ್ಧ ಹೋರಾಡಲು ರೋಗ ನಿರೋಧಕ ಶ್ತಕಿ ಹೆಚ್ಚಾಗುತ್ತದೆ. ಕೋವಿಶೀಲ್ಡ್ ಲಸಿಕೆಯ ಮೂರು ಹಂತದ ಪರಿಶೀಲನೆ ಜರುಗಿದೆ. ಒತ್ತಾಯ ಪೂರ್ವಕವಾಗಿ ಲಸಿಕೆ ನೀಡುತ್ತಿಲ್ಲ ಎಂದರು.

    ದೇಶದಲ್ಲೇ ಅತೀ ಹೆಚ್ಚು ಕೋವಿಡ್ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ. ಹೊಸ ಲಸಿಕೆ ಪಡೆಯುವಲ್ಲಿ ಸಹಜವಾಗಿ ಅಳುಕಿನ ಮನೋಭಾವ ಇರುತ್ತೆ. ಲಸಿಕೆ ಪಡೆದವರು ಆರೋಗ್ಯವಾಗಿ, ಕ್ಷೇಮವಾಗಿ ಇರುವುದನ್ನು ನೋಡಿದಾಗ ಇತರರಿಗೂ ಲಸಿಕೆ ಬಗ್ಗೆ ಇರುವ ಭಯ ಹೋಗುತ್ತದೆ. ರಾಜ್ಯದಲ್ಲಿ ಖ್ಯಾತ ವೈದ್ಯರಾದ ಡಾ.ದೇವಿಶೆಟ್ಟಿ, ಡಾ.ಭುಜಂಗ ಶೆಟ್ಟಿ, ಡಾ.ಬಲ್ಲಾಳ್, ಡಾ.ಸುದರ್ಶನ್ ಸಹ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಉನ್ನತ ಮಟ್ಟದ ವೈದ್ಯರು ಲಸಿಕೆ ಮೇಲೆ ಭರವಸೆ ಇಟ್ಟಿರುವುದು ಎಲ್ಲರಿಗೂ ಮಾದರಿಯಾಗಿದೆ. ಹೃದಯಾಘಾತಕ್ಕೂ ಲಸಿಕೆಗೂ ಸಂಬಂಧವಿಲ್ಲ. ಬಳ್ಳಾರಿಯಲ್ಲಿ ಲಸಿಕೆ ಪಡೆದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆ ವರದಿ ಬಂದಿದೆ. ಜನರು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

    ಸಭೆಯಲ್ಲಿ ಶಾಸಕ ವಿ.ಎಸ್.ಸಂಕನೂರ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಆರೋಗ್ಯ ಇಲಾಖೆ ನಿರ್ದೇಶಕ ಡಾ.ಪಾಟೀಲ್ ಓಂ ಪ್ರಕಾಶ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಜಿ.ಗಿರೀಶ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾ ವೈದ್ಯಾಧಿಕಾರಿ ಡಾ.ಯಶವಂತ ಮದೀನಕರ್, ಡಿಮಾನ್ಸ್ ನಿರ್ದೇಶಕ ಡಾ.ಮಹೇಶ್ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.

    ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸಚಿವ ಡಾ.ಸುಧಾಕರ್ ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಆರೋಗ್ಯ ಕೇಂದ್ರ ಚಿಕಿತ್ಸಾ ಕೊಠಡಿ, ಔಷಧಾಲಯ, ಪ್ರಯೋಗಾಲಯ, ಪ್ರಸೂತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಸಚಿವರಿಗೆ ಮನವಿ ಮಾಡಿದರು.

  • ಇಂದು ಐತಿಹಾಸಿಕ ಲಸಿಕಾ ಆಂದೋಲನ ದಿನ : ಡಾ.ಕೆ.ಸುಧಾಕರ್

    ಇಂದು ಐತಿಹಾಸಿಕ ಲಸಿಕಾ ಆಂದೋಲನ ದಿನ : ಡಾ.ಕೆ.ಸುಧಾಕರ್

    ಬೆಂಗಳೂರು: ಇಂದು ಐತಿಹಾಸಿಕ ಲಸಿಕಾ ಆಂದೋಲನ ದಿನವಾಗಿದೆ. ದೇಶದಲ್ಲಿ ಒಂದೇ ಕಾಲಕ್ಕೆ ಲಸಿಕೆ ಎಲ್ಲೆಡೆ ಬಿಡುಗಡೆ ಆಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಏಕಕಾಲಕ್ಕೆ 243 ಕಡೆ ಲಸಿಕೆ ನೀಡುವ ಕೆಲಸ ಆರಂಭಗೊಳ್ಳಲಿದೆ. 24,300 ಜನರಿಗೆ ಒಂದೇ ಜಾಗದಲ್ಲಿ ಲಸಿಕೆ ಕೊಡಲಾಗುತ್ತದೆ. ಪ್ರತಿಯೊಬ್ಬರು ಸಂಪೂರ್ಣ ವಿಶ್ವಾಸದೊಂದಿಗೆ ತೆಗೆದುಕೊಳ್ಳಿ. ಕೊರೊನಾ ಲಸಿಕೆಯನ್ನು ತೆಗೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ. ಕೊರೊನಾ ವೈರಸ್ ನಿಂದ ಶಾಶ್ವತ ಪರಿಹಾರ ಸಿಗುತ್ತದೆ. ನಮ್ಮ ದೇಶದ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿರುವುದು ನಮ್ಮ ದೇಶದ ಹೆಮ್ಮೆಯಾಗಿದೆ ಎಂದು ತಿಳಿಸಿದರು.

    ಲಸಿಕಾ ವಿತರಣೆ ಕಾರ್ಯಕ್ರಮ ಉದ್ಘಾಟನೆ ಆದ ನಂತರ ಜಯನಗರ ಸರ್ಕಾರಿ ಆಸ್ಪತ್ರೆ, ಸೆಂಟ್ ಜಾನ್ಸ್ ಹಾಗೂ ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಗೆ ಭೇಟಿ ಸ್ವತಃ ನಾನೇ ಪರಿಶೀಲನೆ ನಡೆಸುತ್ತೇನೆ. ನಮ್ಮ ವಿಜ್ಞಾನಿಗಳು ಇಷ್ಟು ಬೇಗ ವ್ಯಾಕ್ಸಿನ್ ಕಂಡು ಹಿಡಿಯುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಕೆಲವು ವೈರಸ್‍ಗಳಿಗೆ ವ್ಯಾಕ್ಸಿನ್ ಕಂಡು ಹಿಡಿಯಲು 9 ವರ್ಷ 25 ವರ್ಷ ಎಲ್ಲಾ ತಗೆದುಕೊಂಡರು ಸಾಧ್ಯವಾಗುತ್ತಿರಲಿಲ್ಲ. ಆದರೆ ಕೊರೊನಾಗೆ ಒಂದು ವರ್ಷದೊಳಗೆ ವ್ಯಾಕ್ಸಿನ್ ಕಂಡು ಹಿಡಿದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

    ಪ್ರಧಾನಿ ಮೋದಿ ದೇಶದಾದ್ಯಂತ ಒಂದೇ ಕಾಲಕ್ಕೆ ಇಂದು ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಕೂಡಾ ಸಿಎಂ ಚಾಲನೆ ನೀಡುತ್ತಿದ್ದಾರೆ. ಕೊರೊನ ಯೋಧರು ಸಂಪೂರ್ಣ ವಿಶ್ವಾಸ ದೊಂದಿಗೆ ಲಸಿಕೆಯನ್ನು ತೆಗೆದುಕೊಳ್ಳ ಬಹುದಾಗಿದೆ ಎಂದರು.

  • ಶಾಲಾ-ಕಾಲೇಜು ಪುನರಾರಂಭ – ಪೋಷಕರಿಗೆ ಸುಧಾಕರ್ ಕಿವಿಮಾತು

    ಶಾಲಾ-ಕಾಲೇಜು ಪುನರಾರಂಭ – ಪೋಷಕರಿಗೆ ಸುಧಾಕರ್ ಕಿವಿಮಾತು

    ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಆರಂಭವಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಟ್ವೀಟ್ ಮಾಡಿ ಪೋಷಕರಿಗೆ ಕಿವಿಮಾತು ಹೇಳಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಸೋಂಕು ಹಿನ್ನೆಲೆ ಕಳೆದ 9 ತಿಂಗಳಿನಿಂದ ಮುಚ್ಚಲಾಗಿದ್ದ ಶಾಲಾ-ಕಾಲೇಜುಗಳನ್ನು ವರ್ಷದ ಆರಭದಿಂದ ಪುನಃ ತೆರೆಯಲಾಗಿದೆ. ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿ ಎರಡನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಬಹಳ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಈ ನಿರ್ಧಾರ ಕೈಗೊಂಡಿದೆ. ಕೋವಿಡ್-19 ನಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷರಿಗೆ ಕೆಲವು ಗೊಂದಲ ಮತ್ತು ಆತಂಕಗಳಿರುತ್ತದೆ. ಆದ್ರೆ ಪೋಷಕರು ಆತಂಕ ಪಡುವ ಅಗತ್ಯವಿಲ್ಲ, ಯಾವುದೇ ಗೊಂದಲವಿಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ ಎಂದು ಬರೆದುಕೊಂಡಿದ್ದಾರೆ.

    ಮಕ್ಕಳನ್ನು ಯಾವುದೇ ಆತಂಕವಿಲ್ಲದೆ ಶಾಲೆಗೆ ಕಳುಹಿಸಿ. ಅದರಲ್ಲಿಯೂ ಗ್ರಾಮೀಣ ಭಾಗದ ಪೋಷಕರಲ್ಲಿ ನಾನು ಮನವಿ ಮಾಡುತ್ತೇನೆ, ಮಕ್ಕಳ ಆಗಮನಕ್ಕೆ ಅವರ ಶಾಲೆ ಕಾಯುತ್ತಿದೆ, ಶಿಕ್ಷಕರು ಮಕ್ಕಳನ್ನು ಸ್ವಾಗತಿಸಲು ಎದುರು ನೋಡುತ್ತಿದ್ದಾರೆ. ಸರ್ಕಾರ ಸದಾ ನಿಮ್ಮೊಂದಿಗಿದೆ. ಬನ್ನಿ, ಕೊರೊನಾ ಓಡಿಸೋಣ, ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ ಎಂದು ಹೇಳಿದ್ದಾರೆ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂದರ್ಭದಲ್ಲೂ ಇದೇ ರೀತಿ ಕೊರೊನ ವೈರಸ್‍ನಿಂದ ಬಗೆಗೆ ಆತಂಕ ಸಹಜವಾಗಿತ್ತು. ಆದರೆ ಅತ್ಯಂತ ಯಶಸ್ವಿಯಾಗಿ ಪರೀಕ್ಷೆಯನ್ನು ನಡೆಸುವ ಮೂಲಕ ಸರ್ಕಾರ ತನ್ನ ಬದ್ಧತೆ ನಿರೂಪಿಸಿತ್ತು. ಈಗಲೂ ಸಹ ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ‘ಕೊರೊನಾ ಓಡಿಸೋಣ ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ’ ಎಂಬುದೇ ಸರ್ಕಾರದ ಧ್ಯೇಯ ಎಂದು ತಿಳಿಸಿದ್ದಾರೆ.

  • ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ ವಿಧಿವಶ- ಗಣ್ಯರಿಂದ ಸಂತಾಪ

    ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ ವಿಧಿವಶ- ಗಣ್ಯರಿಂದ ಸಂತಾಪ

    ಚಿಕ್ಕಬಳ್ಳಾಪುರ: ನಗರದ ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ (72) ತಡರಾತ್ರಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗಣ್ಯಾತಿಗಣ್ಯರು ಸೋಶಿಯಲ್ ಮೀಡಿಯಾ ಮೂಲಕವಾಗಿ ಸಂತಾಪ ಸೂಚಿಸಿದ್ದಾರೆ.

    ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ನಾಯಕಿ, ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ ಅವರ ನಿಧನದ ಸುದ್ದಿ ತೀವ್ರ ಆಘಾತ ಮೂಡಿಸಿದೆ. ದೇವರಾಜು ಅರಸು ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯಿಂದ ರಾಜಕೀಯ ಪ್ರವೇಶಿಸಿದ ಶ್ರೀಮತಿ ರೇಣುಕಾ ಅವರು ಮೂರು ಬಾರಿ ಶಾಸಕರಾಗಿ, ಶ್ರೀ ಗುಂಡೂರಾವ್ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಭಗವಂತ ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಆಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಚಿಕ್ಕಬಳ್ಳಾಪುರ ಮಾಜಿ ಶಾಸಕಿ, ರೇಷ್ಮೆ, ಕ್ರೀಡೆ, ಯುವಜನ ಸೇವೆ ಖಾತೆ ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

    1972 ಮತ್ತು 1978 ರಲ್ಲಿ ಚಿಕ್ಕಬಳ್ಳಾಪುರ ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ರೇಣುಕಾ ರಾಜೇಂದ್ರನ್ ಗುಂಡೂರಾಯರ ಸರ್ಕಾರದಲ್ಲಿ ಯುವಜನ ಸೇವೆ ಮತ್ತು ರೇಷ್ಮೆ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ ಇಬ್ಬರು ಪುತ್ರರು ಒಬ್ಬ ಪುತ್ರಿಯರಿದ್ದಾರೆ. ಇವರ ಅಂತ್ಯ ಸಂಸ್ಕಾರ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ.

  • ಕಾಂಗ್ರೆಸ್, ಜೆಡಿಎಸ್ ಎಷ್ಟು ಸಲ ಮದುವೆಯಾಗೋದು? ಡೈವೋರ್ಸ್ ಆಗೋದು? – ಸುಧಾಕರ್ ವ್ಯಂಗ್ಯ

    ಕಾಂಗ್ರೆಸ್, ಜೆಡಿಎಸ್ ಎಷ್ಟು ಸಲ ಮದುವೆಯಾಗೋದು? ಡೈವೋರ್ಸ್ ಆಗೋದು? – ಸುಧಾಕರ್ ವ್ಯಂಗ್ಯ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಎಷ್ಟು ಸಲ ಮದುವೆಯಾಗೋದು? ಡೈವೋರ್ಸ್ ಆಗೋದು ಎಷ್ಟು ಸಲ ಎಂದು ಪ್ರಶ್ನಿಸುವ ಮೂಲಕ ಆರೋಗ್ಯ ಸಚಿವ ಸುಧಾಕರ್ ವ್ಯಂಗ್ಯವಾಡಿದ್ದಾರೆ.

    ಮಾಜಿ ಸಿಎಂಗಳಾದ ಎಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಆರೋಪ-ಪ್ರತ್ಯಾರೋಪಗಳ ಸಂಬಂಧ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದಾಗ ಇದೊಂದು ಅನೈತಿಕ ಸಂಬಂಧ ಎಂದು ನಾನು ಮೊದಲೇ ಹೇಳಿದ್ದೆ. ಜನಾಭಿಪ್ರಾಯಕ್ಕೆ ವಿರುದ್ದವಾದ ಸರ್ಕಾರ. ಆದರೆ ಈಗ ಅವರೇ ಈ ಸತ್ಯವನ್ನ ಒಪ್ಪಿಕೊಂಡಿದ್ದಾರೆ. ಇದು ಬಹಳ ಸಂತೋಷ ಹಾಗೂ ಸ್ವಾಗತಾರ್ಹ ಎಂದರು.

    ಮುಂದೆಯಾದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ತಮ್ಮ ತಮ್ಮ ಧೋರಣೆ ನಿಲುವುಗಳಿಗೆ ತಕ್ಕ ಹಾಗೆ ಜನರ ಮುಂದೆ ಹೋಗಲಿ. ಮುಂದಿನ ದಿನಗಳಲ್ಲಿ ಮತ್ತೆ ಪರಸ್ಪರ ಒಂದಾಗದಿರಲಿ. ಆಗ ಮಾತ್ರ ಅವರಿಗೆ ಗೌರವ ಉಳಿಯುತ್ತೆ ಎಂದು ಹೇಳಿದರು.

    ಮದುವೆ ಆಗಿ ಹೋಗಿದೆ. ಯಡಿಯೂರಪ್ಪ ಸಿಎಂ ಆಗಿಯೂ ಆಗಿದೆ. ಎಚ್‍ಡಿಕೆ ಒಂದೇ ವರ್ಷ ಸಿಎಂ ಆಗಬೇಕು ಅಂತ ಬರೆದಿತ್ತು. ಇದೆಲ್ಲಾ ವಿಧಿಯಾಟ ಈಗ ಏನೂ ಮಾಡಲು ಆಗುವುದಿಲ್ಲ ಎಂದರು.

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಸಿಎಂ ಹಾಗೂ ಬಿಜೆಪಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳು ಚರ್ಚೆ ಮಾಡಿ ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಸೂಕ್ತ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಉತ್ತರಿಸಿದರು.

    ಇದೇ ವೇಳೆ ತೆಲಂಗಾಣದ ಹೈದರಾಬಾದ್ ಮಹನಾಗರ ಪಾಲಿಕೆ ಚುನಾವಣಾ ಫಲಿತಾಂಶದ ಪ್ರತಿಕ್ರಿಯಿಸಿ, ಫಲಿತಾಂಶ ನಿರೀಕ್ಷೆಯಂತೆ ಹೆಚ್ಚಿನ ಮತಗಳು ಬಂದಿರುವುದು ಸಂತೋಷ ತಂದಿದೆ. ಶೇ.10 ರಷ್ಟು ಇದ್ದ ಮತಗಳು ಈಗ ಶೇ.36 ರಷ್ಟು ಬಂದಿವೆ. ಜನ ಟಿಆರ್‍ಎಸ್‍ನ ದುರಾಡಳಿತ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ದ ಸೆಣಸಾಡಿ ಬಿಜೆಪಿಗೆ ಬೆಂಬಲಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೇರಲಿದೆ ಎಂದು ಡಾ. ಕೆ ಸುಧಾಕರ್ ಭವಿಷ್ಯ ನುಡಿದರು.

  • ಬೆಂಗ್ಳೂರು ಗಲಭೆಕೋರರು ಪಾತಾಳದಲ್ಲಿ ಅಡಗಿದ್ರೂ ಬಿಡೋದಿಲ್ಲ: ಸುಧಾಕರ್

    ಬೆಂಗ್ಳೂರು ಗಲಭೆಕೋರರು ಪಾತಾಳದಲ್ಲಿ ಅಡಗಿದ್ರೂ ಬಿಡೋದಿಲ್ಲ: ಸುಧಾಕರ್

    – ಎಸ್‍ಡಿಪಿಐ ಸಂಘಟನೆ ಬ್ಯಾನ್ ಆಗಬೇಕು

    ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ನಡೆದ ಗಲಭೆಗೆ ಕಾರಣಕರ್ತರಾದ ಗಲಭೆಕೋರರು ಪಾತಾಳದಲ್ಲಿ ಅಡಗಿದ್ದರೂ ಅವರನ್ನ ಬಿಡೋದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ಗಲಭೆಕೋರರನ್ನು ಹಿಡಿಯುವ ಸಾಮರ್ಥ್ಯ ಸರ್ಕಾರಕ್ಕಿದ್ದು, ಸಮಾಜಘಾತುಕರನ್ನ ಸೆರೆಹಿಡಿಬೇಕೆಂಬ ಚೈತನ್ಯ ನಮ್ಮ ಪೊಲೀಸರಿಗಿದೆ ಎಂದರು. ಇದೇ ವೇಳೆ ಎಸ್‍ಡಿಪಿಐ ಸಂಘಟನೆ ಕ್ರೌರ್ಯ ಹಾಗೂ ಹಿಂಸೆಗೆ ದಾರಿ ಮಾಡಿಕೊಟ್ಟಿದ್ದು. ಇಂತಹ ಸಮಾಜಘಾತುಕ ಎಸ್‍ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು ಎಂದು ತನ್ನ ಅಭಿಪ್ರಾಯವನ್ನು ಹಂಚಿಕೊಂಡರು. ಇದನ್ನೂ ಓದಿ: ಗಲಭೆ ನಿಯಂತ್ರಿಸಲು ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ: ಡಿಕೆಶಿ

    ಕೊರೊನಾ ಸಂಬಂಧ ಪ್ರತಿಕ್ರಿಯಿಸಿ, ವೈಜ್ಞಾನಿಕವಾಗಿ ರಾಜ್ಯದಲ್ಲಿ ಇನ್ನೂ ಕೆಲ ವಾರಗಳು ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದ್ದು, ತದನಂತರ ಕಡಿಮೆಯಾಗಲಿದೆ. ಬೇರೆ ದೇಶಗಳಂತೆ ನಮ್ಮ ದೇಶದಲ್ಲಿ ಕಡಿಮೆ ಆಗಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆಯಿದ್ದು, ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಶೇ1.7 ರಷ್ಟಿದೆ ಎಂದರು.

    ಡಿಸೆಂಬರ್ ಹಾಗೂ ಜನವರಿಯೊಳಗೆ ಕೊರೊನಾ ವೈರಸ್ ಕಡಿವಾಣಕ್ಕೆ ಲಸಿಕೆ ಸಿಗುವ ವಿಶ್ವಾಸದ ನೀರೀಕ್ಷೆಯಲ್ಲಿದ್ದೇವೆ ಅಂತ ತಿಳಿಸಿದರು. ಇದನ್ನೂ ಓದಿ:ಯಾರನ್ನೂ ಬ್ಲಾಕ್‍ಮೇಲ್ ಮಾಡೋ ಪ್ರಶ್ನೆ ಇಲ್ಲ- ಡಿಕೆಶಿಗೆ ಬೊಮ್ಮಾಯಿ ತಿರುಗೇಟು

  • ಬೆಂಗಳೂರಿಗೆ 665 ಅಂಬ್ಯುಲೆನ್ಸ್: ಸಚಿವ ಡಾ.ಕೆ.ಸುಧಾಕರ್

    ಬೆಂಗಳೂರಿಗೆ 665 ಅಂಬ್ಯುಲೆನ್ಸ್: ಸಚಿವ ಡಾ.ಕೆ.ಸುಧಾಕರ್

    -ಮೃತದೇಹ ಹಸ್ತಾಂತರಕ್ಕೆ ಸೂಚನೆ

    ಬೆಂಗಳೂರು: ನಗರದಲ್ಲಿ ಕೊರೊನಾ ರೋಗಿಗಳು ಮತ್ತು ಇತರೆ ರೋಗಿಗಳನ್ನು ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಿಗೆ ಕರೆದೊಯ್ಯಲು 665 ಅಂಬುಲೆನ್ಸ್ ಗಳನ್ನು ನಿಯೋಜಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ, ನಗರದಲ್ಲಿ 665 ಅಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗಿದೆ. ಕೊರೊನಾ ಸೋಂಕಿಗೊಳಗಾದ ಮತ್ತು ಇತರೆ ರೋಗಿಗಳನ್ನು ಆಸ್ಪತ್ರೆ ಹಾಗೂ ಕೋವಿಡ್ ಕೇಂದ್ರಕ್ಕೆ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಬಿಬಿಎಂಪಿಯ ಪೂರ್ವ ವಲಯದಲ್ಲಿ 127, ಪಶ್ಚಿಮ ವಲಯದಲ್ಲಿ 141, ದಕ್ಷಿಣದಲ್ಲಿ 110, ರಾಜರಾಜೇಶ್ವರಿ ನಗರದಲ್ಲಿ 40, ಬೊಮ್ಮನಹಳ್ಳಿಯಲ್ಲಿ 43, ಮಹದೇವಪುರದಲ್ಲಿ 52, ದಾಸರಹಳ್ಳಿಯಲ್ಲಿ 24, ಯಲಹಂಕದಲ್ಲಿ 33 ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ 11 ಹಾಗೂ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 84 ಅಂಬ್ಯುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ.

    ಮೃತದೇಹ ಹಸ್ತಾಂತರಕ್ಕೆ ಕ್ರಮ: ಕುಮಾರಸ್ವಾಮಿ ಲೇಔಟ್ ನ ಸಾಗರ್ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದ ರೋಗಿಯ ಮೃತದೇಹ ಹಸ್ತಾಂತರಕ್ಕೆ ಸಚಿವ ಡಾ.ಕೆ.ಸುಧಾಕರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಎರಡು ದಿನಗಳಿಂದ ಮೃತದೇಹವನ್ನು ಇಟ್ಟುಕೊಂಡಿದ್ದ ಆಸ್ಪತ್ರೆಯ ಸಿಬ್ಬಂದಿ, 9 ಲಕ್ಷ ರೂ. ಶುಲ್ಕ ಪಾವತಿಸಿದ ಬಳಿಕವೇ ಮೃತದೇಹ ಹಸ್ತಾಂತರಿಸುವುದಾಗಿ ಕುಟುಂಬ ಸದಸ್ಯರಿಗೆ ಹೇಳಿದ್ದರು. ಹಣ ಪಾವತಿಸಿದ ನಂತರ ಮೃತದೇಹ ಕೊಡುತ್ತೇವೆ ಎಂದು ಹೇಳಿ ಕುಟುಂಬದವರನ್ನು ಹಿಂಸೆ ಮಾಡಿರುವುದು ಖಂಡನೀಯ. ಕೊರೊನಾ ಸಂಕಷ್ಟದ ಕಾಲದಲ್ಲಿ ಹಣ ಗಳಿಸುವುದು ಖಾಸಗಿ ಆಸ್ಪತ್ರೆಗಳಿಗೆ ಮಾನದಂಡವಾಗಬಾರದು. ಆಸ್ಪತ್ರೆ ಮುಖ್ಯಸ್ಥರೊಂದಿಗೆ ಮಾತನಾಡಿ, ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇನೆ” ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

  • ಸಚಿವ ಸುಧಾಕರ್ ತಂದೆಗೆ ಕೊರೊನಾ ಸೋಂಕು ದೃಢ

    ಸಚಿವ ಸುಧಾಕರ್ ತಂದೆಗೆ ಕೊರೊನಾ ಸೋಂಕು ದೃಢ

    ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರ ತಂದೆಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ನನ್ನ ತಂದೆಯವರ ಕೋವಿಡ್ ಪರೀಕ್ಷಾ ವರದಿ ಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ಬರೆದುಕೊಂಡಿದ್ದಾರೆ.

    ಜ್ವರ, ಕೆಮ್ಮು ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ 82 ವರ್ಷದ ನನ್ನ ಪೂಜ್ಯ ತಂದೆಯವರು ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್-19 ಪರೀಕ್ಷೆಗೂ ಒಳಗಾಗಿದ್ದಾರೆ. ವರದಿಯ ಫಲಿತಾಂಶವನ್ನು ಕಾಯುತ್ತಿದ್ದೇವೆ. ಅವರು ಶೀಘ್ರ ಗುಣಮುಖರಾಗುವಂತೆ ನೀವೂ ಪ್ರಾರ್ಥಿಸಿ ಎಂದು ಕೋರಿಕೊಳ್ಳುತ್ತಿದ್ದೇನೆ. ನಿಮ್ಮ ಶುಭ ಹಾರೈಕೆಗಳಿರಲಿ ಎಂದು ಈ ಮೊದಲು ಟ್ವೀಟ್ ಮಾಡಿದ್ದರು.

  • ಸಚಿವ ಸುಧಾಕರ್ ತಂದೆಗೆ ಜ್ವರ, ಕೆಮ್ಮು ಸಮಸ್ಯೆ- ಆಸ್ಪತ್ರೆಗೆ ದಾಖಲು

    ಸಚಿವ ಸುಧಾಕರ್ ತಂದೆಗೆ ಜ್ವರ, ಕೆಮ್ಮು ಸಮಸ್ಯೆ- ಆಸ್ಪತ್ರೆಗೆ ದಾಖಲು

    ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರ ತಂದೆಗೆ ಜ್ವರ, ಕೆಮ್ಮು ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ಜ್ವರ, ಕೆಮ್ಮು ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ 82 ವರ್ಷದ ನನ್ನ ಪೂಜ್ಯ ತಂದೆಯವರು ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್-19 ಪರೀಕ್ಷೆಗೂ ಒಳಗಾಗಿದ್ದಾರೆ. ವರದಿಯ ಫಲಿತಾಂಶವನ್ನು ಕಾಯುತ್ತಿದ್ದೇವೆ. ಅವರು ಶೀಘ್ರ ಗುಣಮುಖರಾಗುವಂತೆ ನೀವೂ ಪ್ರಾರ್ಥಿಸಿ ಎಂದು ಕೋರಿಕೊಳ್ಳುತ್ತಿದ್ದೇನೆ. ನಿಮ್ಮ ಶುಭ ಹಾರೈಕೆಗಳಿರಲಿ ಎಂದು ಕೇಳಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ಆದಷ್ಟು ಬೇಗ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. ಕೆ.ಸುಧಾಕರ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ, ಆತಂಕ ಪಡಬೇಡಿ, ತಂದೆಯವರಿಗೆ ಏನು ಆಗುವುದಿಲ್ಲ ಅಣ್ಣಾ. ಅವರು ಆರೋಗ್ಯವಾಗಿ ಆಸ್ಪತ್ರೆಯಿಂದ ಗುಣಮುಖರಾಗಿ ಬರಲೆಂದು ದೇವರ ಬಳಿ ನಾವೆಲ್ಲ ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.