ಚಿಕ್ಕಬಳ್ಳಾಪುರ: ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ. ಎರಡನೇ ಅಲೆ ನಮ್ಮ ನಿರೀಕ್ಷೆಯನ್ನು ಮೀರಿ ಪರಿಸ್ಥಿತಿ ಭೀಕರವಾಗಿಸುತ್ತಿದೆ. ಹೀಗಾಗಿ ಸಾರ್ವಜನಿಕರೇ ಸ್ವತಃ ಜನತಾ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಪರ್ಯಾಯ ಅಲ್ಲ, ಇದರಿಂದ ಜನಜೀವನ ಅಸ್ತವ್ಯಸ್ಯವಾಗುತ್ತೆ. ಜೀವನೋಪಾಯಕ್ಕೆ ಕಷ್ಟ ಆಗುತ್ತೆ. ಇದೆಲ್ಲವನ್ನೂ ಅರ್ಥ ಮಾಡಿಕೊಂಡು ಜನರೇ ಜನತಾ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದರು.
ಅನಗತ್ಯವಾಗಿ ಗುಂಪುಗೂಡಬೇಡಿ, ವಿವಾಹ, ಸಮಾರಂಭಗಳನ್ನು ಸರಳವಾಗಿ ಮಾಡಿ. ಬಹಳ ದೊಡ್ಡ ಸಂಖ್ಯೆಯಲ್ಲಿ ಸಮಾರಂಭ ಮಾಡಬಾರದು. ಈ ಬಗ್ಗೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಧಾರ್ಮಿಕ, ರಾಜಕೀಯ, ವಿವಾಹ ಹಾಗೂ ಇತರೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ಕಡಿವಾಣ ಹಾಕಬೇಕು. ಇಲ್ಲವಾದರೆ ಆಯಾ ಜಿಲ್ಲಾಡಳಿತಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
– ರಾಜ್ಯ ಸರ್ಕಾರ ಬೇಡಿಕೆಗೆ ಸ್ಪಂದಿಸಿರುವ ರೀತಿಯನ್ನು ಗಮನಿಸಿ
ಬೆಂಗಳೂರು: ಸಾರಿಗೆ ನೌಕರರು ಯಾರದ್ದೋ ಮಾತಿಗೆ ಕಿವಿಗೊಡದೆ ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ಗಮನಿಸಬೇಕು. ಮುಷ್ಕರವನ್ನು ಕೈಬಿಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೌಕರರಿಗೆ ಮನವಿ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ನೌಕರರಿಗಾಗಿ ಕೈಗೊಂಡಿರುವ ಕ್ರಮಗಳನ್ನು ಸಾರ್ವಜನಿಕರು ಕೂಡ ಗಮನಿಸಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ನಮ್ಮ ರಾಜ್ಯ ಸರ್ಕಾರವು ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದೆ. ಒಂದು ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ. ಸರ್ಕಾರ ಈ ರೀತಿ ನೌಕರರಿಗೆ ಸ್ಪಂದಿಸಿರುವುದನ್ನು ಗಮನಿಸಿ ಮುಷ್ಕರ ಕೈ ಬಿಡಬೇಕು ಎಂದು ಹೇಳಿದ್ದಾರೆ.
ಸಾರಿಗೆ ಸಂಸ್ಥೆಯ ನೌಕರರು ಶ್ರಮಜೀವಿಗಳಾಗಿದ್ದು, ಸಾರ್ವಜನಿಕ ಸೇವೆಗಾಗಿ ಬಹಳ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಹಾಗೂ ನೌಕರರ ಪರಸ್ಪರ ಕೊಡುಕೊಳ್ಳುವಿಕೆಗಳಿಂದಾಗಿ ರಾಜ್ಯದ ಜನತೆಗೆ ಉತ್ತಮ ರಸ್ತೆ ಸಾರಿಗೆ ಸೇವೆ ಒದಗಿಸಲಾಗುತ್ತಿದೆ. ಕಾಲಕಾಲಕ್ಕೆ ಯಡಿಯೂರಪ್ಪನವರು ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟವಾದಾಗಲೂ ನೌಕರರು ಬದುಕು, ಅವರ ಕುಟುಂಬದ ಹಿತಕ್ಕಾಗಿ ಒಟ್ಟು 1,953.45 ಕೋಟಿ ರೂಪಾಯಿಗಳಷ್ಟು ವೇತನವನ್ನು ಪಾವತಿಸಲಾಗಿದೆ. ವೇತನ ಬಾಕಿ ಇಟ್ಟುಕೊಂಡು ನೌಕರರು ಸಂಕಷ್ಟಕ್ಕೆ ಸಿಲುಕಿಸುವಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡಿಲ್ಲ. ಸರ್ಕಾರದನೌಕರರ ಹಿತ ಕ್ರಮವನ್ನು ಪರಿಗಣಿಸಿ ನೌಕರರು ಮುಷ್ಕರ ಬಿಟ್ಟು, ನಾಗರಿಕ ಸ್ನೇಹಿ ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
2020ರ ಡಿಸೆಂಬರ್‍ನಲ್ಲಿ ನೌಕರರು 4 ದಿನಗಳ ಕಾಲ ಮುಷ್ಕರ ಮಾಡಿದ್ದರು. ಆ ಸಮಯದಲ್ಲಿ 10 ಬೇಡಿಕೆಗಳಲ್ಲಿ, 9 ಬೇಡಿಕೆ ಈಡೇರಿಸುವುದಾಗಿ ಸರ್ಕಾರವು ಸಾರಿಗೆ ನೌಕರರಿಗೆ ಭರವಸೆ ನೀಡಿತ್ತು. ನಂತರ ಕೊಟ್ಟ ಮಾತಿನಂತೆಯೇ ನಡೆದುಕೊಂಡು ನಮ್ಮ ಸರ್ಕಾರ, 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದೆ. ಆದರೆ 6 ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸುವಂತೆ ಕೋರಿದ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಬೇಕಿದೆ. ಇದಕ್ಕಾಗಿ ಸಮಿತಿ ಕೂಡ ರಚನೆ ಮಾಡಿದ್ದು, ಈ ಸಮಿತಿಯು 6 ಸಭೆಗಳನ್ನು ನಡೆಸಿ ಚರ್ಚೆ ಮಾಡಿದೆ. ಇಷ್ಟೆಲ್ಲ ಕ್ರಮ ವಹಿಸಿದ ಬಳಿಕವೂ ನೌಕರರು ಮುಷ್ಕರ ನಡೆಸುವುದು ಸರಿಯಲ್ಲ. ಆದ್ದರಿಂದ ನೌಕರರು ಮುಷ್ಕರ ಬಿಟ್ಟು ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಚಿವರು ಕೋರಿದ್ದಾರೆ.
ಮಂಗಳೂರು: ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮರುನಿರ್ಮಿಸಿ ಜಾಗತಿಕ ಮಟ್ಟದ ಆರೋಗ್ಯ ಕೇಂದ್ರವಾಗಿ ರೂಪಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮಾತನಾಡಿದ ಸಚಿವರು, ಪುಂಜಾಲಕಟ್ಟೆ ಪಿಎಚ್ ಸಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದು, ನಾಲ್ಕು ಎಕರೆ ವಿಸ್ತೀರ್ಣದ ಜಾಗದಲ್ಲಿದೆ. ಇಲ್ಲಿನ ಒಪಿಡಿಗೆ ಹೆಚ್ಚು ಜನರು ಬರುತ್ತಿದ್ದಾರೆ. ಆದ್ದರಿಂದ ಈ ಆಸ್ಪತ್ರೆಯನ್ನು ಉತ್ತಮಪಡಿಸಬೇಕಿದೆ. ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅನುಮತಿ ನೀಡಿದ್ದಾರೆ. ಇದೇ ಯೋಜನೆಯಡಿ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.
6 ಕೋಟಿ ರೂ. ನಲ್ಲಿ ಅಭಿವೃದ್ಧಿ ಮಾಡಿ, ಉತ್ತಮ ಆರೋಗ್ಯ ಕೇಂದ್ರವಾಗಿಸಲಾಗುವುದು. ಜೊತೆಗೆ ವೈದ್ಯರು, ನರ್ಸ್ ಗಳಿಗೆ, ಡಿ ಗ್ರೂಪ್ ನೌಕರರಿಗೆ ಇಲ್ಲಿಯೇ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ್ದು, ಕೆಲ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಈ ಆಸ್ಪತ್ರೆಗೆ ಡಿ ಗ್ರೂಪ್ ನೌಕರರ ನೇಮಕ ಸಂಬಂಧ ಮನವಿ ಬಂದಿದ್ದು, ಈ ಕುರಿತು ಪರಿಶೀಲಿಸಲಾಗುವುದು. ಇಲ್ಲಿನ ತಜ್ಞ ವೈದ್ಯರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಲು ಅವಕಾಶವಿದ್ದು, ಅದನ್ನು ನಡೆಸಲು ಸೂಚಿಸಲಾಗಿದೆ. ಕೆಲ ಉಪಕರಣಗಳನ್ನು ನೀಡಬೇಕೆಂಬ ಬೇಡಿಕೆ ಇದ್ದು, ಅದನ್ನೂ ನೀಡಲಾಗುವುದು ಎಂದರು.
ಇಲ್ಲಿನ ಸ್ಥಳೀಯ ಶಾಸಕರು ಪ್ರತಿ 15 ದಿನಗಳಿಗೊಮ್ಮೆ ಬಂದು ವೈದ್ಯರ ರೋಗಿಗಳ ಸಮಸ್ಯೆ ಆಲಿಸುತ್ತಿದ್ದಾರೆ. ಇಂತಹ ಜನಪ್ರತಿನಿಧಿಗಳಿದ್ದರೆ ಸಮಸ್ಯೆಗಳು ಬೇಗ ಪರಿಹಾರವಾಗುತ್ತದೆ. ಇಡೀ ದಿನ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರ, ಬಂಟ್ವಾಳ ತಾಲೂಕು ಆಸ್ಪತ್ರೆ, ವೆನ್ ಲಾಕ್ ಜಿಲ್ಲಾಸ್ಪತ್ರೆ ಹಾಗೂ ಲೇಡಿ ಗೋಷನ್ ಹೆರಿಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬೆಂಗಳೂರು: ಏಪ್ರಿಲ್ 1 ರಿಂದ ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಬಂದರೂ ಕೋವಿಡ್ ವರದಿ ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬಿಬಿಎಂಪಿ ಎಂಟು ವಲಯಗಳ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಂದೇ ದಿನ 1,400 ಸೋಂಕಿತರು ಪತ್ತೆಯಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಇದು ಅತಿ ಹೆಚ್ಚು. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಹೊರರಾಜ್ಯಗಳಿಂದ ಬರುತ್ತಿರುವವರಲ್ಲಿ ಹೆಚ್ಚಾಗಿ ಕೋವಿಡ್ ಸೋಂಕು ಕಂಡುಬರುತ್ತಿದೆ. ಕೇರಳ, ಮಹಾರಾಷ್ಟ್ರ, ಪಂಜಾಬ್ ಚಂಡೀಗಡದಿಂದ ರಾಜ್ಯಕ್ಕೆ ಬಂದವರಿಗೆ ಕೊರೊನಾ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಯಾವುದೇ ರಾಜ್ಯದಿಂದ ಬಂದರೂ ಕೊರೊನಾ ವರದಿ ಕಡ್ಡಾಯಗೊಳಿಸಲಾಗಿದೆ ಎಂದರು.
ಬೆಂಗಳೂರು ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕಚೇರಿಯಲ್ಲಿ ಇಂದು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು.
ಲಸಿಕೆ ವಿತರಣೆ, ಪರೀಕ್ಷೆ ಹೆಚ್ಚಳ, ಪರಿಣಾಮಕಾರಿ ಸಂಪರ್ಕ ಪತ್ತೆ, ಅಂಬ್ಯುಲೆನ್ಸ್, ಹಾಸಿಗೆ, ಐಸಿಯು, ವೆಂಟಿಲೇಟರ್ ಗಳ ಲಭ್ಯತೆ, ಮಾರ್ಷಲ್ ಗಳ ನಿಯೋಜನೆ ಸೇರಿದಂತೆ ಹಲವು ವಿಷಯಗಳನ್ನು ಪರಿಶೀಲಿಸಲಾಯಿತು. pic.twitter.com/Zqfrn2z19b
ಸಭೆ, ಸಮಾರಂಭಗಳಿಗೆ ಒಳಾಂಗಣದಲ್ಲಿ 200, ಹೊರಾಂಗಣದಲ್ಲಿ 500 ಮಂದಿ ಸೇರಲು ಅವಕಾಶ ನೀಡಲಾಗಿದೆ. ಪ್ರತಿ ವಾರ್ಡ್ ಗೆ ಒಂದರಂತೆ ಅಂಬುಲೆನ್ಸ್ ನಿಯೋಜಿಸಲಾಗಿದೆ. ಸೋಂಕಿತರ ಸಂಖ್ಯೆ ನೋಡಿಕೊಂಡು ಅಂಬುಲೆನ್ಸ್ ಸಂಖ್ಯೆ ಕೂಡ ಹೆಚ್ಚಿಸಲಾಗುವುದು. ಸೋಂಕಿತರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು, ನಿಗಾ ಇರಿಸುವುದು ಮೊದಲಾದ ಕ್ರಮಗಳನ್ನು ನಿರ್ಧರಿಸಲಾಗುವುದು ಎಂದರು.
ಸೋಂಕು ನಿಯಂತ್ರಣಕ್ಕೆ ನಿಗದಿತ ಪ್ರದೇಶಗಳಲ್ಲಿ ಸ್ಯಾನಿಟೈಜ್ ಮಾಡಲಾಗುವುದು. ಹಾಸಿಗೆ, ಐಸಿಯು ಲಭ್ಯತೆ ಬಗ್ಗೆ ಆನ್‍ಲೈನ್ ನಲ್ಲೇ ಮಾಹಿತಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರನ್ನು ಕೋವಿಡ್ ಮುಕ್ತ ಮಾಡಲು ಜನರ ಸಹಕಾರ ಬೇಕಿದೆ ಎಂದರು.
ಸಭೆ-ಸಮಾರಂಭಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ಮಾಲ್, ಹೋಟೆಲುಗಳಲ್ಲಿ ನಿಯಮಿತ ಜನಸಂದಣಿ, ಸಾಮಾಜಿಕ ಅಂತರ ನಿಯಮಗಳು ಉಲ್ಲಂಘನೆಯಾದಲ್ಲಿ ಹವಾ ನಿಯಂತ್ರಿತವಲ್ಲದ ಸಭಾಂಗಣ/ಸ್ಥಳಗಳ ಮಾಲೀಕರಿಗೆ ₹5,000 ಮತ್ತು ಹವಾನಿಯಂತ್ರಿತ ಸಭಾಂಗಣ, ಸ್ಟಾರ್ ಹೋಟೆಲ್ ಹಾಗೂ ಸಾರ್ವಜನಿಕ ಸಭೆಗಳ ಆಯೋಜಕರಿಗೆ ₹10,000 ದಂಡ ವಿಧಿಸಲಾಗುವುದು.
ಸೋಂಕಿತರಿಗೆ ಸೀಲ್
ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಕೈಗೆ ಸೀಲ್ ಹಾಕಲು ನಿರ್ಧರಿಸಲಾಗಿದೆ. ಯುವಕರು, ರೋಗ ಲಕ್ಷಣ ಇಲ್ಲದವರು ಸೋಂಕಿತರಾದರೂ ಹೊರಗೆ ಓಡಾಡುವುದರಿಂದ ಸೋಂಕು ಹರಡುತ್ತದೆ. ಇದನ್ನು ನಿಯಂತ್ರಿಸಲು ಕೈಗೆ ಗುರುತು ಹಾಕಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ನೂತನ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಮಾಸ್ಕ್ ಧರಿಸದಿದ್ದರೆ ಬಿಬಿಎಂಪಿ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ₹250 ಹಾಗೂ ಇತರೆ ಪ್ರದೇಶಗಳಲ್ಲಿ ₹100 ದಂಡ ವಿಧಿಸಲಾಗುವುದು.
ರೂಪಾಂತರಿ ವೈರಸ್
45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕೆಂದು ಆದೇಶವಾಗಿದೆ. ದೇಶದಲ್ಲಿ ರೂಪಾಂತರಿ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿದೆ. ಕೆಲವರಲ್ಲಿ ಹೊಸ ವೈರಾಣು ಕಾಣಿಸಿಕೊಂಡಿದ್ದು, ಸುಮಾರು 700 ಇಂತಹ ಪ್ರಕರಣ ಪತ್ತೆಯಾಗಿವೆ. ತಜ್ಞರ ಪ್ರಕಾರ ಇದು ಬಹಳ ಬೇಗ ಹರಡುತ್ತದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳಾಗುತ್ತಿವೆ. ಸಾರ್ವಜನಿಕರು ಮುಂದಿನ 2 ತಿಂಗಳು ಬಹಳ ಎಚ್ಚರಿಕೆಯಿಂದಿರಬೇಕು. ಸೋಂಕಿನ ಪ್ರಕರಣಗಳು ಹೆಚ್ಚಾಗಬಾರದು. ಒಂದು ಪ್ರಕರಣ ಕಂಡುಬಂದರೆ 20 ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದರು.
ಚುನಾವಣೆ ಎಂದಾಕ್ಷಣ ಕೊರೊನಾ ಬರದೇ ಇರುವುದಿಲ್ಲ. ಜನರು ಗುಂಪುಗೂಡುವುದನ್ನು ಕಡಿಮೆ ಮಾಡುವುದೇ ನಮಗೆ ಮುಖ್ಯ. ಹೀಗಾಗಿ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಲಾಗುವುದು. ಚಿತ್ರರಂಗದ ಕಲಾವಿದರಿಗೂ ಮನವಿ ಮಾಡಲಾಗಿದೆ. ನಾಯಕ ನಟರು ಕೂಡ ಸಾಮಾಜಿಕ ಕಳಕಳಿ ಹೊಂದಿದ್ದು, ಅವರು ಕೂಡ ಈ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ವಿಕ್ಟೋರಿಯಾದಲ್ಲಿ 400 ಹಾಸಿಗೆ ಮೀಸಲಿಡಲಾಗಿದೆ. ಪ್ರಕರಣ ಹೆಚ್ಚಿದರೆ ಹಾಸಿಗೆ ಸಂಖ್ಯೆ ಹೆಚ್ಚಿಸಲಾಗುವುದು. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ಬೌರಿಂಗ್, ಚರಕ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗುವುದು. ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ಸಹಾಯ ಪಡೆಯಲಾಗುವುದು. ಈ ಕುರಿತು ಖಾಸಗಿ ಆಸ್ಪತ್ರೆಗಳೊಂದಿಗೆ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಈಗ ಪ್ರಕರಣ ಹೆಚ್ಚಿದರೂ ಮೊದಲಿನಷ್ಟು ತೀವ್ರತೆ ಇಲ್ಲ. ಆದರೂ ಎಚ್ಚರಿಕೆ ವಹಿಸಲೇಬೇಕು ಎಂದರು.
ಅಪಾರ್ಟ್ಮೆಂಟ್ ಗಳಲ್ಲಿ ಹೆಚ್ಚು ಪಾಸಿಟಿವ್ ಕಂಡುಬರುತ್ತಿದೆ. ಒಬ್ಬರಿಗೆ ಪಾಸಿಟಿವ್ ಆದರೆ ಆ ಕುಟುಂಬದ ಎಲ್ಲರಿಗೂ ಕೋವಿಡ್ ಬರುತ್ತಿದೆ. ಹೀಗಾಗಿ ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಥಿಯೇಟರ್, ಮದುವೆ ಛತ್ರ, ವಿವಿಧ ಕಾರ್ಯಕ್ರಮ ಗಳು, ಧಾರ್ಮಿಕ ಸ್ಥಳ, ಶಾಲಾ ಕಾಲೇಜು ಆವರಣದಲ್ಲಿ ಹೆಚ್ಚಾಗಿ ಮಾರ್ಷಲ್ ಗಳು ಹೋಗಿ ಗಮನಹರಿಸಲಿದ್ದಾರೆ.
– ಸಿಡಿ ಕೇಸ್, ಸುಧಾಕರ್ ವಿರುದ್ಧ ಕೇಸ್ ದಾಖಲಿಸುತ್ತೇವೆಂದ ಸಿದ್ದರಾಮಯ್ಯ
ಬೆಂಗಳೂರು: ನೀವು ಏಕ ಪತ್ನಿ ವ್ರತಸ್ಥರಾ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೇಳಿದ್ದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದ್ದು, ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ.
ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕಾಂಗ್ರೆಸ್ ನಿಂದ ಮಾನನಷ್ಟ ಮೊಕದ್ದಮೆ ಅಸ್ತ್ರ ಬಳಕೆಗೆ ನಿರ್ಧರಿಸಲಾಗಿದ್ದು, ಎಲ್ಲ ಕಾಂಗ್ರೆಸ್ ಶಾಸಕರುಗಳು ಅವರವರ ಕ್ಷೇತ್ರದಲ್ಲಿ ಸುಧಾಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಕಾನೂನು ತಜ್ಞರ ಅಂತಿಮ ಅಭಿಪ್ರಾಯ ಪಡೆದು. ಪ್ರತಿಯೊಬ್ಬ ಶಾಸಕರು ಅವರವರ ಕ್ಷೇತ್ರದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಲ್ಲರೂ ಏಕ ಪತ್ನಿ ವ್ರತಸ್ಥರೆ. ಹಿಂದೂ ಮ್ಯಾರೇಜ್ ಆಕ್ಟ್ ನಲ್ಲಿ ಒಬ್ಬರನ್ನೇ ಮದುವೆ ಆಗೋಕೆ ಅವಕಾಶ ಇರೋದು. ಎರಡೆರಡು ಆಗೋಕೆ ಅವಕಾಶ ಇಲ್ಲ. ಸುಧಾಕರ್ ಬಹಳ ಉದ್ಧಟತನದ ಹೇಳಿಕೆ ಕೊಟ್ಟಿದ್ದಾರೆ. 225 ಎಂದರೆ ಸ್ವತಃ ಅವರು, ಸ್ಪೀಕರ್ ಹಾಗೂ ಸಿಎಂ ರನ್ನು ಒಳಗೊಂಡಂತೆ ಎಲ್ಲರಿಗೂ ಅನ್ವಯವಾಗುತ್ತೆ. ಮನೆಯವರು ಅನುಮಾನದಿಂದ ನೋಡುತ್ತಿದ್ದಾರೆ. ಇದು ಬೇಜವಬ್ದಾರಿ ಹೇಳಿಕೆ, ಪ್ರಿವಿಲೇಜ್ ಆಗುತ್ತೆ. ಸದನದ ಹೊರಗೆ ಮಾತನಾಡಿದರೂ, ಹೌಸ್ ನಡೆಯುವಾಗ ಮಾತನಾಡಿದ್ದಾರೆ. ಎಲ್ಲ 225 ಜನರ ಮೇಲೂ ಹೇಳಿದ್ದಾರೆ. ಮಹಿಳಾ ಶಾಸಕಿಯರೂ ಇದ್ದಾರೆ, ಅವರು ಹೊರಗಡೆ ಏನು ಹೇಳಬೇಕು, ಇದು ಸ್ಟುಪಿಡ್ ಹೇಳಿಕೆ. ಸುಧಾಕರ್ ತಾನು ಕಳ್ಳ, ಪರರನ್ನು ನಂಬ ಎಂಬಂತಾಗಿದೆ. ಅವರದ್ದೆಲ್ಲ ಸಿಡಿ ಇದೆ, ಅದಕ್ಕೆ ವಿಲಿ ವಿಲಿ ಒದ್ದಾಡುತ್ತಿದ್ದಾರೆ. ಹೀಗಾಗಿಯೇ 6 ಜನ ಕೋರ್ಟ್ ಗೆ ಹೋಗಿದ್ದಾರೆ. ನಿಮ್ಮದು ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಹೆಚ್ಚಾಗಿದೆ ಎಂದು ಹರಿಹಾಯ್ದರು.
ಹೆಣ್ಣು ಮಕ್ಕಳನ್ನೂ ಸೇರಿ ಹೇಳಿದ್ದಾರೆ, ಅವರು ಏನು ಮಾಡಬೇಕು. ಹಳ್ಳಿಯಲ್ಲಿ ಏನೋ ಗಂಡಸರು ಬಿಡ್ರಪ್ಪ ಅಂತಾರೆ. ಆದರೆ ಹೆಣ್ಣು ಮಕ್ಕಳ ವಿಚಾರದಲ್ಲಿ ಒಪ್ಕೋತಾರಾ? ಮಹಿಳಾ ಶಾಸಕಿಯರು ಏನು ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ. ಸಿಡಿ, 6 ಜನ ಕೋರ್ಟ್ ಗೆ ಹೋಗಿರುವುದು, ಸಚಿವ ಸುಧಾಕರ್ ಹೇಳಿದ್ದು ಸೇರಿ ಎಲ್ಲವನ್ನೂ ಎಸ್‍ಐಟಿಗೆ ನೀಡಿ, ಚೀಫ್ ಜಸ್ಟಿಸ್ ಕಣ್ಗಾವಲಿನಲ್ಲಿ ತನಿಖೆ ನಡೆಸಲು ಒತ್ತಾಯಿಸುತ್ತೇವೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹೋಗಲು ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇವೆ, ಕಾನೂನು ಹೋರಾಟ ಮಾಡುತ್ತೇವೆ. ಹೈಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ನಿಗಾದಲ್ಲಿ ತನಿಖೆಯಾಗಬೇಕು. ಸಿಎಂ ಹಾಗೂ ಸ್ಪೀಕರ್ ಗೆ ಪತ್ರವನ್ನೂ ಕೊಡುತ್ತೇವೆ ಎಂದು ತಿಳಿಸಿದರು.
ಇದು ಹೇಡಿ ಸರ್ಕಾರ
ಚರ್ಚೆ ನಡೆಯದೆ ಸಿಎಂ ಭಾಷಣ ಓದಿದ್ದಾರೆ, ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ರೆವಿನ್ಯೂ ಡಿಫಿಸಿಟ್(ಆದಾಯ ಕೊರತೆ) ಎನ್ನಲಾಗುತ್ತದೆ. ಇದನ್ನು ತುಂಬಲು ಸಾಲ ಮಾಡಬೇಕು. ಈ ವರ್ಷ 70 ಸಾವಿರ ಕೋಟಿ ಸಾಲ ತೆಗೆದುಕೊಂಡಿದ್ದಾರೆ. ಕೇಂದ್ರದಿಂದ ತಮ್ಮ ಪಾಲು ಕೇಳಲು ಇವರಿಗೆ ಧೈರ್ಯವಿಲ್ಲ, ಹೇಡಿ ಸರ್ಕಾರ ಇದು. 2.5 ಲಕ್ಷ ಕೋಟಿ ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಹೋಗುತ್ತದೆ. ಅದರಲ್ಲಿ 34,900 ಕೋಟಿ ಮಾತ್ರ ರಾಜ್ಯಕ್ಕೆ ಬಂದಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕರೊನಾಗೆ 5 ಸಾವಿರ ಕೋಟಿ ಖರ್ಚು ಮಾಡಿದ್ದೇನೆ ಎನ್ನುತ್ತಾರೆ. ಅದೇ ಕೇಂದ್ರದಿಂದ ಪಡೆದಿದ್ದರೆ ಇಲ್ಲಿ ಕರೊನಾಗೆ ಖರ್ಚು ಮಾಡಬಹುದಿತ್ತು. ಈಗ ಬೇರೆ ಅಭಿವೃದ್ಧಿ ಕೆಲಸ ಆಗಿಲ್ಲ, ಇದಕ್ಕೆ ಕಾರಣ ಕರೊನಾ ಎಂದು ಕೈ ತೋರಿಸುತ್ತಾರೆ ಎಂದು ಕಿಡಿಕಾರಿದರು.
ಪ್ರತಿ ಇಲಾಖೆ ಸೇರಿ 6 ಸೆಕ್ಟರ್ ಮಾಡಿಕೊಂಡಿದ್ದಾರೆ. ಎಷ್ಟು ಖರ್ಚು ಆಯಿತು ಎನ್ನುವ ಮಾಹಿತಿ ಇಲ್ಲ. ಜೂನ್ 2022ರಿಂದ ಜಿಎಸ್ ಟಿ ಕಾಂಪಾನ್ಸೆಷನ್ ನಿಲ್ಲುತ್ತೆ, ನಮ್ಮ ಪಾಲನ್ನೂ ಕಡಿಮೆ ಮಾಡಿದ್ದಾರೆ. ಇವರ ಕೈಯಲ್ಲಿ ರಾಜ್ಯ ಸರ್ಕಾರ ಇದ್ದರೆ ಸುರಕ್ಷಿತವಾಗಿ ಇರುತ್ತಾ? ರಾಜ್ಯ ಸರ್ಕಾರ ದಿವಾಳಿಯತ್ತ ಹೋಗುತ್ತೆ. ಇವರ ಕೈಯಲ್ಲಿ ನಿಯಂತ್ರಣ ಮಾಡುವುದಕ್ಕೆ ಆಗುತ್ತಾ? ನೀವು ತುಪ್ಪನಾದ್ರೂ ತಿನ್ನಿ, ಬೆಣ್ಣೆನಾದ್ರು ತಿನ್ನಿ, ಮಜ್ಜಿಗೆನಾದರೂ ಕುಡಿರಿ. ಸಾಲ ಸಿಗುತ್ತೆ ಅಂತ ಸಾಲ ಮಾಡೊದಲ್ಲ, ಸಾಲ ತೀರಿಸುವುದಕ್ಕೆ ನಮಗೆ ಶಕ್ತಿ ಇದ್ಯಾ ನೋಡಿಕೊಳ್ಳಬೇಕು. ಯಡಿಯೂರಪ್ಪ ಅವರ ಮನೆಗೆ ಖರ್ಚು ಮಾಡಿದರು ಎಂದು ನಾನು ಹೇಳುತ್ತಿಲ್ಲ. ಸಾಲ ಮಾಡಿ ಎಂದಾದರೂ ಸಂಬಳ ಕೊಟ್ಟಿದ್ದಿರಾ ಯಡಿಯೂರಪ್ಪ ಎಂದು ಪ್ರಶ್ನಿಸಿದರು.
ಸಿಎಂ ತಾರಾತುರಿನಲ್ಲಿ ಭಾಷಣ ಮಾಡಿದ್ದಾರೆ. ಇನ್ನೂ ಸಂಪೂರ್ಣ ಬಜೆಟ್ ಮೇಲೆ ಚರ್ಚೆ ಆಗಿಲ್ಲ. 24 ಪುಟಗಳನ್ನು ಓದಿದ್ದಾರೆ. ಸಂತೆಯಲ್ಲಿ ಮಾನ ಹೋಗುವ ವ್ಯಕ್ತಿ ಸೊಪ್ಪು, ಸೆದೆಯಿಂದ ಮಾನ ಮುಚ್ಚಿಕೊಂಡ ಹಾಗೆ ಓದಿ ಮುಗಿಸಿದ್ದಾರೆ. ಈ ವರ್ಷ ರೆವಿನ್ಯೂ ಡಿಫಿಸಿಟ್ (ಆದಾಯ ಕೊರತೆ) 19,485 ಕೋಟಿ ಹೆಚ್ಚುತ್ತದೆ. 143 ಕೋಟಿ ರೆವಿನ್ಯೂ ಸರ್ಪಲಸ್ ಹೆಚ್ಚಾಗುತ್ತೆ ಎಂದಿದ್ದರು. ಈ ವರ್ಷ 20 ಸಾವಿರ ಕೋಟಿ ರೆವಿನ್ಯೂ ಡಿಫಿಸಿಟ್ ಆಗುತ್ತೆ. ಮುಂದಿನ ವರ್ಷ 20 ಸಾವಿರ ಕೋಟಿಗಿಂತ ಹೆಚ್ಚಾಗುತ್ತದೆ ಎಂದಿದ್ದರು. ಆದರೆ ನಾವು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ. ರಾಜ್ಯ ಆರ್ಥಿಕ ದಿವಾಳಿಯತ್ತ ಹೋಗುತ್ತಿದೆ, ಅದಕ್ಕೆ ಉತ್ತರ ನೀಡಿಲ್ಲ. ಅವರೇ ಹೇಳಿರುವ ಪ್ರಕಾರ ರೆವಿನ್ಯೂ ಡಿಫಿಸಿಟ್ ಪ್ರತಿ ವರ್ಷ ಹೆಚ್ಚಾಗುತ್ತಾ ಹೋಗುತ್ತೆ. ಈ ವರ್ಷ 70 ಸಾವಿರ ಕೋಟಿ ಸಾಲ ತಗೊಂಡಿದ್ದಾರೆ. ಅದರಲ್ಲಿ 20 ಸಾವಿರ ಕೋಟಿ ಎಲ್ಲಿ ಹೋಯಿತು? ರಾಜ್ಯ ದಿವಾಳಿ ಆಗುವುದಿಲ್ಲವೇ? ರಾಜ್ಯ ಇವರ ಕೈಯಲ್ಲಿ ಇದ್ದರೆ ಆರ್ಥಿಕವಾಗಿ ಸರಿ ಮಾಡುವುದಕ್ಕೆ ಆಗುತ್ತಾ? 13 ಬಜೆಟ್ ನಲ್ಲಿ ನಾನು ಫಿಸಿಕಲ್ ಡಿಫಿಸಿಟ್ ನಿರ್ವಹಿಸಿದ್ದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಗದಗ: ಕೊರೊನಾ ಲಸಿಕೆ ಪಡೆಯುವಂತೆ ಗ್ರಾಮದ ತುಂಬಾ ಡಂಗೂರ ಸಾರುವ ಮೂಲಕವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದೀಗ ಆರೋಗ್ಯ ಸಚಿವರಾದ ಡಾ. ಕೆ ಸುಧಾಕರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಜಾನಪದ ಕಲಾವಿದ ವೀರಪ್ಪ ಕಾಳಿ ಕೊರೊನಾ ಲಸಿಕೆ ಪಡೆಯುವಂತೆ ಗ್ರಾಮದ ತುಂಬಾ ಡಂಗೂರ ಸಾರಿದ್ದಾರೆ. ಡಂಗೂರ ಬಾರಿಸಿ ಕೂಗಿ ಹೇಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಗದಗ ಜಿಲ್ಲೆಯ ಜಕ್ಕಲಿ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಕೊರೊನಾ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ದೃಶ್ಯ ಪ್ರೇರಣಾದಾಯಕವಾಗಿದೆ. ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಜನಾಂದೋಲನ ಆಗಬೇಕು. ಜಾಗೃತಿ ಮೂಡಿಸಲು ನಮ್ಮ ಹಳ್ಳಿಗಳು ಸಾಂಪ್ರದಾಯಿಕ ವಿಧಾನಗಳನ್ನು ಬಳಸುತ್ತಿರುವುದು ಸ್ಪೂರ್ತಿದಾಯಕವಾಗಿದೆ ಎಂದು ಬರೆದುಕೊಂಡು ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಗದಗ ಜಿಲ್ಲೆಯ ಜಕ್ಕಲಿ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಕೊರೊನಾ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ದೃಶ್ಯ ಪ್ರೇರಣಾದಾಯಕವಾಗಿದೆ.
As PM @narendramodi ji said, Covid-19 vaccination drive should become a Janandolan. It’s inspiring to see our villages using traditional methods to raise awareness. pic.twitter.com/cbKjJfY5ro
ಊರಲ್ಲಿ ಯಾವುದೇ ವಿಷಯಕ್ಕೂ ವೀರಪ್ಕ ಕಾಳಿ ಅವರೆ ಡಂಗೂರ ಸಾರುತ್ತಾರೆ. ಆರೋಗ್ಯ, ಪಡಿತರ ಆಹಾರ, ಜಾತ್ರೆ, ಉತ್ಸವ, ಹಬ್ಬ ಹರಿದಿನಗಳು ಜೊತೆಗೆ ಲಸಿಕೆ ವಿಚಾರವಾಗಿ ಡಂಗೂರ ಸಾರಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ. ಮೊದಲಿನಿಂದಲೂ ಈ ವೀರಪ್ಪನ ಕುಟುಂಬವೇ ಗ್ರಾಮಕ್ಕೆ ಸಂದೇಶ ಸಾರುತ್ತಾ ಬರುತ್ತಿದೆ. ಸುಮಾರು 40 ವರ್ಷಗಳಿಂದ ವೀರಪ್ಪ ಕಾಳಿ ಡಂಗೂರ ಸಂದೇಶ ನೀಡುತ್ತಾ ಬಂದಿದ್ದಾರೆ. ಈಗ ಕೊರೊನಾ ವಿಷಯದಲ್ಲಿ ಬಹುಕಾಯಿಲೆಯುಳ್ಳ 45 ವರ್ಷ ಮೆಲ್ಪಟ್ಟವರು ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರೂ ತಪ್ಪದೇ ಸಮೀಪದ ನರೇಗಲ್ ಸರ್ಕಾರಿ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದುಕೊಳ್ಳಬೇಕು ಎಂದು ಡಂಗೂರ ಸಾರಿದ್ದಾರೆ.
ಈ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಡಂಗೂರ ಸಾರುವ ವ್ಯಕ್ತಿ ವೀರಪ್ಪ ಸಾಕಷ್ಟು ಖುಷಿ ಪಟ್ಟಿದ್ದಾರೆ. ಈ ಡಂಗೂರ ಸಂದೇಶ ವಿಷಯ ಸರ್ಕಾರದ ಗಮನಕ್ಕೆ ಬಂದಿದ್ದು, ತುಂಬಾನೆ ಖುಷಿ ಆಗುತ್ತಿದೆ ಎಂದು ಜಕ್ಕಲಿ ಗ್ರಾಮದ ವೀರಪ್ಪ ಕಾಳಿ ಅವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಮತ್ತೆ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಅಂತಹ ಪರಿಸ್ಥಿತಿ ಬರದೆ ಇರಲಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಆ ಪರಿಸ್ಥಿತಿ ಬರದೆ ಇರಲು ಸಿಎಂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾಡಳಿತಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಹೆಚ್ಚಿನ ಲಸಿಕೆ ನೀಡುವ ಕೆಲಸ ಆಗಲಿದೆ ಅಂತ ಹೇಳಿದರು.
ಸ್ವಾತಂತ್ರ್ಯ ಹೋರಾಟದ ಇತಿಹಾಸವಿರುವ ವಿದುರಾಶ್ವತ್ಥವನ್ನು ಅಂತರಾಷ್ಟ್ರೀಯ ಸ್ಮರಣ ಕೇಂದ್ರವಾಗಿ ರೂಪಿಸಬೇಕು. ವಿದುರಾಶ್ವತ್ಥದಲ್ಲಿ 1938ರಲ್ಲಿ ಧ್ವಜಾರೋಹಣ ನೆರವೇರಿಸುವ ವೇಳೆ ಬ್ರಿಟಿಷರು ಗುಂಡಿನ ದಾಳಿ ನಡೆಸಿ ಅಧಿಕೃತವಾಗಿ 09 ಮಂದಿ ಹೋರಾಟಗಾರರು ಹುತಾತ್ಮರಾದರು. ಆದರೆ ಅದು ಅನಧಿಕೃತವಾಗಿ 30ಕ್ಕೂ ಹೆಚ್ಚು ಮಂದಿ ಎಂದು ಹೇಳಲಾಗುತ್ತದೆ. ಈ ಸ್ಥಳಕ್ಕೆ ವಿದುರ ಬಂದು ಅಶ್ವತ್ಥಕಟ್ಟೆ ನಿರ್ಮಿಸಿದರು ಎಂಬ ಹಿನ್ನೆಲೆ ಇದೆ. ಇಲ್ಲಿ ನಾಗಪೂಜೆ ಕೂಡ ನಡೆಯುತ್ತಿದೆ. ಹೀಗಾಗಿ ಇದನ್ನು ಐತಿಹಾಸಿಕ, ಧಾರ್ಮಿಕ ತಾಣವಾಗಿ ಅಭಿವೃದ್ಧಿಪಡಿಸಿ, ಅಂತಾರಾಷ್ಟ್ರೀಯ ಸ್ಮರಣ ಕೇಂದ್ರವಾಗಿ ರೂಪಿಸಬೇಕು. ಈಗಾಗಲೇ ಸಮಿತಿಯು ಡಿಪಿಆರ್ ಮಾಡಿಕೊಟ್ಟಿದ್ದು, ಇದಕ್ಕಾಗಿ 15-16 ಕೋಟಿ ರೂ. ಖರ್ಚಾಗುತ್ತದೆ. ಈ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಕೋರಿದರು.
ಸ್ವಾತಂತ್ರ್ಯ ಪಡೆದು 75 ವರ್ಷವಾಗುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಸಂಭ್ರಮಾಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಚಿಂತನೆ ನಡೆಸಲು ಕಾರ್ಯಕ್ರಮ ನಡೆಸುವಂತೆ ಕರೆ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಅನೇಕರು ಹುತಾತ್ಮರಾಗಿದ್ದು, ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯುತ್ತಿದೆ. ಐತಿಹಾಸಿಕ, ಧಾರ್ಮಿಕ ಕ್ಷೇತ್ರವಾದ ವಿದುರಾಶ್ವತ್ಥದಲ್ಲಿ ಕೂಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕೃಷ್ಣಾ ನದಿಯಿಂದ 5 ಟಿಎಂಸಿಯನ್ನು ಆಂಧ್ರ ಪ್ರದೇಶದ ಸಹಕಾರದಿಂದ ಪಡೆದರೆ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸಬಹುದು. ನಮ್ಮ ನದಿ ಮೂಲಗಳಿಂದ ಆ ರಾಜ್ಯದ ಜನರಿಗೆ ನೀರು ನೀಡಬಹುದು. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಿದ್ದು, ಮುಂದಿನ ವರ್ಷದ ಜೂನ್ ಗೆ ಸಿದ್ಧವಾಗಲಿದೆ. ಕೋವಿಡ್ ಆರ್ಥಿಕ ಸಂಕಷ್ಟವಿರುವುದರಿಂದ ಈ ಬಾರಿ ಹೆಚ್ಚಿನ ಗಾತ್ರದ ಬಜೆಟ್ ನೀಡುವುದಿಲ್ಲ ಎಂಬ ಅಪನಂಬಿಕೆ ಇತ್ತು. ಆದರೆ ಮುಖ್ಯಮಂತ್ರಿಗಳು ಹೆಚ್ಚು ಗಾತ್ರದ ಬಜೆಟ್ ಮಂಡಿಸಿ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ನೀಡಿದ್ದಾರೆ. ಮಹಿಳಾ ಅಸಮಾನತೆ ದೂರವಾಗಿಸಲು, ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಂಡಿಸಿದ ಬಜೆಟ್ ನಲ್ಲಿ ಮಹಿಳಾ ಸಬಲೀಕರಣಕ್ಕೆ ಉತ್ತಮ ಕೊಡುಗೆ ನೀಡಲಾಗಿದೆ. ನಂದಿ ಬೆಟ್ಟ, ಎತ್ತಿನೆಹೊಳೆ ಯೋಜನೆ ಜಾರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡಲಾಗಿದೆ ಎಂದರು.
– ರೋಪ್ ವೇ ಕನಸು ನನಸಾಗುವ ಕಾಲ ಸನ್ನಿಹಿತ
– 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
ಚಿಕ್ಕಬಳ್ಳಾಪುರ: ನಂದಿ ಗಿರಿಧಾಮವನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಂದಿಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿಬೆಟ್ಟ ಹಾಗೂ ಸುತ್ತಲಿನ ಪ್ರದೇಶ ಆಕರ್ಷಕವಾಗಿದೆ. ಇದಕ್ಕೆ ಐತಿಹಾಸಿಕ, ಧಾರ್ಮಿಕ ಪ್ರಾಮುಖ್ಯವಿದ್ದು, ವಿಶೇಷವಾದ ಸಸ್ಯ ಸಂಪತ್ತು ಇದೆ. ಇವೆಲ್ಲವನ್ನೂ ಗಮನಿಸಿ ಪ್ರವಾಸೋದ್ಯಮ ಕ್ಷೇತ್ರವಾಗಿಸಬಹುದು. ಇದಕ್ಕಾಗಿ ನಮ್ಮ ಸರ್ಕಾರ ಈಗಾಗಲೇ 10 ಕೋಟಿ ರೂ. ಅನುದಾನ ನೀಡಿದೆ ಎಂದು ತಿಳಿಸಿದರು.
ಕಳೆದ 15 ವರ್ಷಗಳಿಂದ ರೋಪ್ ವೇ ಬೇಕು ಎಂದು ಜನರು ಬೇಡಿಕೆ ಇಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕಂಪನಿಯೊಂದು ಇದನ್ನು ಮಾಡಲು ಮುಂದಾಗಿ ನಂತರ ಕಾರಣಾಂತರದಿಂದ ಯೋಜನೆ ಕೈ ಬಿಟ್ಟಿತ್ತು. ಈಗ ಆ ಕನಸು ನನಸಾಗಲಿದೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು 10 ಎಕರೆಗೂ ಹೆಚ್ಚು ಜಾಗವನ್ನು ಪಡೆಯಲು ಪ್ರಯತ್ನಿಸಲಾಗಿದೆ. ಈ ರೀತಿ ಮಾಸ್ಟರ್ ಪ್ಲಾನ್ ಮಾಡಿ ಅನುಷ್ಠಾನಗೊಳಿಸಲಾಗುವುದು. ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಯಬಹುದು ಎಂದರು.
ತಕ್ಷಣದಲ್ಲಿ ಟೆಂಡರ್ ಆಗಿ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ನಂದಿಬೆಟ್ಟವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ರೂಪುಗೊಳಿಸಬೇಕಿದೆ. ಈ ತಾಣವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ಬೆಂಗಳೂರು ನಗರದಿಂದ ಒಂದು ಗಂಟೆಯಲ್ಲಿ ಬರಬಹುದು. ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಇದರ ಜೊತೆಗೆ ಎಕೋ-ಟೂರಿಸಂ, ಸುತ್ತಮುತ್ತಲಿನ 5 ಬೆಟ್ಟಗಳಿಗೆ ಚಾರಣ ದಾರಿಗಳು, ಪುರಾತತ್ವ ಸ್ಮಾರಕಗಳು, ನೆಲ್ಲಿಕಾಯಿ ಬಸವಣ್ಣ ಮತ್ತು ಮಂಟಪಗಳು ಸಂರಕ್ಷಣೆ, ಸುಂದರೀಕರಣ ಸೇರಿದಂತೆ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮುಖ್ಯಮಂತ್ರಿಗಳು ಮಂಡಿಸಲಿರುವ ಆಯವ್ಯಯದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಲಿದ್ದಾರೆ. ರಾಜ್ಯದಲ್ಲಿ ವಿಶಿಷ್ಠ ಪ್ರವಾಸಿ ತಾಣಗಳಿವೆ ಎಂದರು.
ನಂದಿಬೆಟ್ಟದಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣ ನಿಷೇಧಿಸಲು ತೀರ್ಮಾನಿಸಲಾಗಿದೆ. ಯಾವುದೇ ರೀತಿಯ ಪ್ಲಾಸ್ಟಿಕ್ ಒಳಗೆ ತೆಗೆದುಕೊಂಡು ಹೋಗಲು ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರೋಪ್ ವೇ ಕನಸು ನನಸು
ನಂದಿ ಗಿರಿಧಾಮಕ್ಕೆ ರೋಪ್ ವೇ ಮಾರ್ಗ ನಿರ್ಮಾಣದ ಕನಸು ನನಸಾಗುವ ಕಾಲ ದೂರ ಇಲ್ಲ ಎಂದು ಸುಧಾಕರ್ ತಿಳಿಸಿದರು. ಇಂದು ಬೆಳ್ಳಂ ಬೆಳಗ್ಗೆ ನಂದಿ ಗಿರಿಧಾಮಕ್ಕೆ ಆಗಮಿಸಿದ ಸಚಿವ ಸುಧಾಕರ್, ಕಾಲ್ನಡಿಗೆ ಮೂಲಕ ಇಡೀ ನಂದಿಬೆಟ್ಟದಲ್ಲಿ ರೌಂಡ್ಸ್ ಹಾಕಿದರು. ಅಭಿವೃದ್ದಿ ಕಾರ್ಯಗಳ ಸಂಬಂಧ ನಂದಿಗಿರಿಧಾಮದ ನೆಹರು ನಿಲಯದಲ್ಲಿ ಸಭೆ ನಡೆಸಿದರು. ನಂದಿಗಿರಿಧಾಮ ಅಭಿವೃದ್ದಿಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಅಭಿವೃದ್ದಿ ಕಾರ್ಯಗಳಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಕೂಡಲೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು. ಪಾಥ್ ವೇನಲ್ಲಿ ಸ್ವಚ್ಛತೆ ಕಾಪಾಡಿಲ್ಲ, ಗಿಡಗಳನ್ನು ತೆಗೆದಿಲ್ಲ ಎಂದು ತೋಟಗಾರಿಕಾ ಅಧಿಕಾರಿಗಳ ವಿರುದ್ಧ ಸಚಿವ ಸುಧಾಕರ್ ಗರಂ ಆದರು.
ಬೆಂಗಳೂರು: ಸಚಿವ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಕ್ವಾರಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಕ್ವಾರಿಗಳ ವಿಚಾರದಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಘಟನೆ ನಡೆದಿರುವ ಕ್ವಾರಿ ಸಹ ಅವರ ಸಂಬಂಧಿಕರದೇ ಆಗಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೋಡು ಮಾದರಿಯಲ್ಲೇ ಚಿಕ್ಕಬಳ್ಳಾಪುರದಲ್ಲಿ ಇಂದು ಸ್ಫೋಟ ನಡೆದಿದೆ. ಈ ಕ್ವಾರಿ ನಡೆಸುತ್ತಿರೋದು ಮಂತ್ರಿಗಳ ಸಂಬಂಧಿಕರು ಎಂಬ ಮಾಹಿತಿ ಇದೆ. ಇದರ ಹಿಂದಿರುವ ರಾಜಕಾರಣಿಗಳ ಪಾತ್ರದ ಬಗ್ಗೆ ತನಿಖೆ ಆಗಬೇಕು. ಈ ಸರ್ಕಾರ ಬರೀ ಲೂಟಿ ಮಾಡುವುದರಲ್ಲಿ ಮಗ್ನವಾಗಿದೆ ಐದಾರು ಜನ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಜಿಲೆಟಿನ್ ಇಷ್ಟೊಂದು ಹೇಗೆ ಸಂಗ್ರಹ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಬ್ರಷ್ಠಾಚಾರ ಇರುವುದೇ ಕಾರಣ. ಸರ್ಕಾರ ಸತ್ತುಬಿದ್ದಿದೆ. ಲೂಟಿ ಮತ್ತು ದಂಧೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಜಿಲೆಟಿನ್ ಇಷ್ಟೊಂದು ಸುಲಭವಾಗಿ ಹೇಗೆ ಸಿಗುತ್ತಿದೆ. ವ್ಯವಸ್ಥಿತವಾಗಿ ಸಾಗಾಣಿಕೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಘಟನೆಗೆ ಸರ್ಕಾರದ ಬೇಜವಾಬ್ದಾರಿತನವೇ ಕಾರಣ. ಬೆಳಿಗಿನ ಜಾವ ಹೋಗಿ ಕೆಲಸ ಮಾಡಿ ಎಂದು ನಾವು ಹೇಳಿಲ್ಲವೆಂದು ಸಿಎಂ ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ. ಇದೊಂದು ಅತ್ಯಂತ ಖಂಡನೀಯವಾದ ಹೇಳಿಕೆ. ಕೆಲಸ ಮಾಡಲು ಆಗುವುದಿಲ್ಲ ಎಂದರೆ ಬಿಟ್ಟು ಹೋಗಿ, ಸಮರ್ಥರು ಬಂದು ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದರು.
ಬೆಂಗಳೂರು: ಮಕ್ಕಳು ಹಾಗೂ ಗರ್ಭಿಣಿಯರಿಗೆ ಏಳು ರೋಗಗಳು ಬಾರದಂತೆ ತಡೆಯಲು ಕೇಂದ್ರ ಸರ್ಕಾರ ಇಂದ್ರಧನುಷ್ 3.0 ಅಭಿಯಾನ ಅನುಷ್ಠಾನಗೊಳಿಸಿದ್ದು, ರಾಜ್ಯದ 13 ಜಿಲ್ಲೆಗಳಲ್ಲಿ ಮಾರ್ಚ್ 22 ರವರೆಗೆ ಇಂದ್ರಧನುಷ್ ಲಸಿಕೆ ಅಭಿಯಾನ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ 13 ಜಿಲ್ಲೆಗಳಲ್ಲಿ ಲಸಿಕೆ ನೀಡಲಾಗುವುದು. ಫೆಬ್ರವರಿ 22 ರಿಂದ ಮಾರ್ಚ್ 22 ರವರೆಗೆ ಈ ಅಭಿಯಾನ ನಡೆಸಲಾಗುವುದು. ಈವರೆಗೆ ತಲುಪಲಾಗದ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಈ ಲಸಿಕೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಬಿಜೆಪಿ ಸರ್ಕಾರ 2014 ರ ಡಿಸೆಂಬರ್ 25 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿಂದ ಈ ಲಸಿಕೆ ಅಭಿಯಾನ ಆರಂಭಿಸಿತ್ತು. ನಂತರ 2017 ರ ಅಕ್ಟೋಬರ್ 8 ರಂದು ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ ಗೆ ಚಾಲನೆ ನೀಡಲಾಗಿತ್ತು. ಈಗ ಮುಂದಿನ ಭಾಗವಾಗಿ 3.0 ಗೆ ಚಾಲನೆ ದೊರೆತಿದೆ. ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳಿರುವಂತೆಯೇ, ಇಂದ್ರಧನುಷ್ ಏಳು ರೋಗಗಳು ಬಾರದಂತೆ ತಡೆಯುತ್ತದೆ ಎಂದರು.
ಡಿಫ್ತೀರಿಯಾ, ವೂಫಿಂಗ್ ಕಾಫ್, ಟೆಟಾನಸ್, ಟ್ಯುಬರ್ ಕ್ಯುಲೋಸಿಸ್, ಪೋಲಿಯೋ, ಮಿಸಲ್ಸ್, ಹೆಪಟೈಟಸ್-ಬಿ ಸೇರಿ ಏಳು ರೋಗಗಳು ಬಾರದಂತೆ ಲಸಿಕೆ ನೀಡಲಾಗುವುದು. ಬೆಂಗಳೂರು, ಬಿಬಿಎಂಪಿ ವ್ಯಾಪ್ತಿ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿರುವ ವಲಸಿಗರನ್ನು ಹೊಂದಿದ ಸ್ಲಂ, ಇಟ್ಟಿಗೆ ಸುಡುವ ಜಾಗ, ಅಲೆಮಾರಿಗಳು ವಾಸಿಸುವ ಸ್ಥಳ, ಕಟ್ಟಡ ನಿರ್ಮಾಣ ಸ್ಥಳ ಮೊದಲಾದ ಕಡೆಗಳಲ್ಲಿ ಮಕ್ಕಳಿಗೆ ಇಂದ್ರಧನುಷ್ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.