Tag: ಡಾ ಕೆ ಸುಧಾಕರ್

  • ‘ವೈದ್ಯರ ನಡೆ, ಹಳ್ಳಿ ಕಡೆ’ ಮೊಬೈಲ್ ಕ್ಲಿನಿಕ್ ವಾಹನಕ್ಕೆ ಸುಧಾಕರ್ ಹಸಿರು ನಿಶಾನೆ

    ‘ವೈದ್ಯರ ನಡೆ, ಹಳ್ಳಿ ಕಡೆ’ ಮೊಬೈಲ್ ಕ್ಲಿನಿಕ್ ವಾಹನಕ್ಕೆ ಸುಧಾಕರ್ ಹಸಿರು ನಿಶಾನೆ

    ಚಿಕ್ಕಬಳ್ಳಾಪುರ: ಹಳ್ಳಿಯಲ್ಲಿರುವ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ‘ವೈದ್ಯರ ನಡೆ, ಹಳ್ಳಿಯ ಕಡೆ’ ಎಂಬ ಮೊಬೈಲ್ ಕ್ಲಿನಿಕ್ ವಾಹನಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

    ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಕೆ ಸುಧಾಕರ್, ಈ ವಿಶೇಷ ವಾಹನದಲ್ಲಿ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ತಂಡ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ಸಾರ್ವಜನಿಕರಿಗೆ ರ್ಯಾಪಿಡ್ ಆಂಟಿಜನ್ ಕೊರೊನಾ ಪರೀಕ್ಷೆ ಮಾಡಲಿದ್ದಾರೆ. ಸೋಂಕು ದೃಢಪಟ್ಟವರಿಗೆ ಸೂಕ್ತ ಚಿಕಿತ್ಸೆ ನೀಡಿ ಅಗತ್ಯವಿರುವರಿಗೆ ಆರೋಗ್ಯ ಕಿಟ್ ಗಳನ್ನು ಸ್ಥಳದಲ್ಲಿಯೇ ವಿತರಿಸುವ ವ್ಯವಸ್ಥೆಯೂ ಸಹ ಇರಲಿದೆ ಎಂದರು. ಇದನ್ನೂ ಓದಿ:ಉಚಿತ ಊಟ ವಿತರಿಸುತ್ತಿರೋ ವೈದ್ಯ ದಂಪತಿ

    ವ್ಯಾಪಕವಾಗಿ ಸೋಂಕು ಹರಡುತ್ತಿರುವುದರಿಂದಾಗಿ ಹಳ್ಳಿಗಳಲ್ಲಿ ಪರೀಕ್ಷೆ ಮಾಡಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ವಹಿಸುದು ಅನಿವಾರ್ಯವಾಗಿದೆ. ಇದರಿಂದ ಮತ್ತಷ್ಟು ಸೋಂಕು ಹರಡುವುದನ್ನು ಕೂಡಲೇ ತಪ್ಪಿಸಬಹುದು. ಕೋವಿಡ್ ಸೋಂಕಿನ ಸರಪಳಿಯನ್ನು ತುಂಡರಿಸಲು ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಕೂಲವಾಗಲಿದೆ. ರೋಗ ಲಕ್ಷಣಗಳಿದ್ದು ರ್ಯಾಟ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಪಕ್ಷದಲ್ಲಿ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿ ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲು ಸಹಾ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಸೌಲಭ್ಯವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ:ಆರೋಗ್ಯ ಸಚಿವರ ಜೊತೆಯಲ್ಲಿ ಹೋಗಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಬ್ಲಾಕ್‍ಮೇಲ್

    ಇದೇ ವೇಳೆ ರಾಜ್ಯದಲ್ಲಿ ಸದ್ಯ ಆಕ್ಸಿಜನ್ ಸಮಸ್ಯೆ ಏನೂ ಇಲ್ಲ. ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವಂತೆ ಐಸಿಯು, ವೆಂಟಿಲೇಟರ್ ಹಾಗೂ ಆಕ್ಸಿಜನ್ ಮೇಲೆ ಬೇಡಿಕೆ ಕಡಿಮೆಯಾಗಿದೆ. ಎಲ್ಲೂ ಕೂಡ ಆಕ್ಸಿಜನ್ ಸಮಸ್ಯೆ ಕಂಡುಬರುತ್ತಿಲ್ಲ ಎಂದರು.

    ನಂತರ ತಾಲೂಕಿನ ಕುಲುಮೇನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಆರ್.ಲತಾ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ನಗರಸಭೆ ಅಧ್ಯಕ್ಷರಾದ ಆನಂದರೆಡ್ಡಿ, ಉಪವಿಭಾಗಾಧಿಕಾರಿಗಳಾದ ಎ.ಎನ್.ರಘುನಂದನ್, ತಹಶೀಲ್ದಾರ್ ಗಣಪತಿಶಾಸ್ತ್ರಿ, ತಾಲೂಕು ಪಂಚಾಯಿತಿ ಇಒ ಹರ್ಷವರ್ದನ್, ಪೌರಾಯುಕ್ತ ಲೋಹಿತ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಜಿಲ್ಲೆಯಾದ್ಯಂತ 650 ಅಲೆಮಾರಿ-ಅರೆ ಅಲೆಮಾರಿ ಜನಾಂಗದವರಿಗೆ ಆಹಾರ ಕಿಟ್

    ಜಿಲ್ಲೆಯ ಆವಲಗುರ್ಕಿ ಗ್ರಾಮ ಪಂಚಾಯಿತಿಯ ಸೂಲಕುಂಟೆ ಗ್ರಾಮದಲ್ಲಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ನಿವಾಸಿಗಳಿಗೆ ಜಿಲ್ಲಾಡಳಿತ ಮತ್ತು ಇಶಾ ಪ್ರತಿಷ್ಠಾನ ವತಿಯಿಂದ ಉಚಿತ ಆಹಾರ ಧಾನ್ಯಗಳ ಕಿಟ್‍ಗಳನ್ನು ಡಾ.ಕೆ.ಸುಧಾಕರ್ ವಿತರಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್, ಆಧ್ಯಾತ್ಮ ಚಿಂತಕರಾದ ಇಶಾ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಅನುಯಾಯಿಗಳಾದ ರಾಘವೇಂದ್ರ ಶಾಸ್ತ್ರಿ ಹಾಗೂ ಪ್ರಭಾಕರ್ ಅವರ ಮೂಲಕ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ರಾಜ್ಯಾದ್ಯಂತ ಹಲವು ಕಡೆ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಗಳಿಗೆ ಸಾಂದ್ರಕಗಳು, ಆಕ್ಸಿಜನ್ ಸಿಲಿಂಡರ್‍ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ವೈದ್ಯರು, ದಾದಿಯರು, ರೋಗಿಗಳಿಗೆ ಉಚಿತವಾಗಿ ಆಹಾರ ಪದಾರ್ಥಗಳು, ಮಾಸ್ಕ್ ಗಳನ್ನು, ಕೋವಿಡ್ ಸುರಕ್ಷತಾ ಸಾಮಗ್ರಿಗಳನ್ನು ಈಗಾಗಲೇ ನೀಡಿದ್ದಾರೆ ಎಂದು ಅವರ ಕಾರ್ಯವನ್ನು ಪ್ರಶಂಸಿದರು. ಇದನ್ನೂ ಓದಿ:ಕೊರೊನಾ ವಾರಿಯರ್ಸ್‍ಗೆ ಚಿಕನ್ ಬಿರಿಯಾನಿ ವಿತರಿಸಿದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ

    ಜಿಲ್ಲೆಗೆ ಈಗಾಗಲೇ 100 ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿದ್ದು, ಇನ್ನೂ 100 ಸಿಲಿಂಡರ್ ಗಳನ್ನು ನೀಡಲು ಒಪ್ಪಿಗೆ ನೀಡಿದ್ದಾರೆ. ಇದೀಗ ಜಿಲ್ಲೆಯಾದ್ಯಂತ 650 ಅಲೆಮಾರಿ-ಅರೆ ಅಲೆಮಾರಿ ಜನಾಂಗದವರು, ಅಶಕ್ತರು, ಬಲಹೀನ ವರ್ಗದವರಿಗೆ ಆಹಾರ ಸಾಮಾಗ್ರಿಗಳು, ರೋಗಿಗಳಿಗೆ ಹಾಲು, ಬಿಸ್ಕೇಟ್, ಔಷಧಿಗಳನ್ನು ನೀಡುತ್ತಿದ್ದಾರೆ. ಇವತ್ತಿನ ಕಷ್ಟಕಾಲದಲ್ಲಿ ಇದು ಅತ್ಯಂತ ಪುಣ್ಯದ ಕೆಲಸವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

  • ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಮೇರೆಗೆ ವೈದ್ಯರು, ತಜ್ಞರ ನೇಮಕ: ಸುಧಾಕರ್

    ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಮೇರೆಗೆ ವೈದ್ಯರು, ತಜ್ಞರ ನೇಮಕ: ಸುಧಾಕರ್

    – ತಾಲೂಕು ಆಸ್ಪತ್ರೆಗಳ ಸುಧಾರಣೆಗೆ ಕ್ರಿಯಾ ಯೋಜನೆ
    – ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕ್ರಮ

    ಗದಗ: ಹಳೆ ಮೈಸೂರು ಮತ್ತು ಬೆಂಗಳೂರು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಹಿಂದುಳಿದ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ವೈದ್ಯರು ಮತ್ತು ತಜ್ಞರ ಹುದ್ದೆಗಳಿಗೆ ಆದ್ಯತೆ ಮೇರೆಗೆ ನೇಮಕ ಮಾಡಲಾಗುವುದು. ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ವೈದ್ಯರು ಮತ್ತು ತಜ್ಞರ ಹುದ್ದೆ ಖಾಲಿ ಇವೆ. ಅವುಗಳ ನೇಮಕಕ್ಕೆ ಆದ್ಯತೆ ನೀಡಲಾಗುವುದು, ಇಲ್ಲವಾದಲ್ಲಿ ಗ್ರಾಮೀಣ ಭಾಗದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹಿಂತಿರುಗಿದ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ತಾಲೂಕು ಆಸ್ಪತ್ರೆ ಆಗಿದ್ದರೂ ಇನ್ನೂ 30 ಹಾಸಿಗೆಗಳಿರುವ ಶಿರಹಟ್ಟಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಟ ಆರು ವೆಂಟಿಲೇಟರ್ ಮತ್ತು ಐವತ್ತು ಆಕ್ಸಿಜನ್ ಹಾಸಿಗೆಗಳನ್ನು ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

    ಮೆಡಿಕಲ್ ಕಾಲೇಜು ಆಸ್ಪತ್ರೆಯ ನಿರ್ಮಾಣ ಕಾರ್ಯ ವಿಳಂಬ ಆಗುತ್ತಿದೆ. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಕೆವಿಆರ್ ಕಂಪನಿ ಮುಖ್ಯಸ್ಥರ ಜೊತೆ ಶೀಘ್ರದಲ್ಲಿ ವೀಡಿಯೋ ಸಂವಾದ ನಡೆಸಲಾಗುವುದು. ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

    ಹೆಚ್ಚುವರಿಯಾಗಿ ಆಕ್ಸಿಜನ್ ಕಾನ್ಸಟ್ರೇಟರ್ಸ್‍ಗಳನ್ನು ಜಿಲ್ಲೆಗೆ ಕಳುಹಿಸಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಿಮ್ಸ್‍ನಲ್ಲಿ 270 ವೈದ್ಯರು ಇದ್ದಾರೆ. 87 ಬೋಧಕ ಹುದ್ದೆಗಳು ಖಾಲಿ ಇವೆ. ಅವುಗಳ ನೇಮಕಕ್ಕೆ ಎರಡು ವಾರದಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

    ನೋಂದಣಿ ಆಗಬೇಕು
    ಎಲ್ಲಾ 450 ಬೆಡ್‍ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲು ಇಡಲಾಗಿದೆ. ಕೋವಿಡ್ ಯೇತರ ರೋಗಗಳ ತುರ್ತು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಅವರಿಗೆ ಸಾಸ್ಟ್‍ನಿಂದ ನೋಂದಣಿ ಆಗದಿದ್ದರೂ ನೆರವು ನೀಡಬೇಕು. ಖಾಸಗಿ 54 ಆಸ್ಪತ್ರೆಗಳ ಪೈಕಿ 8 ಆಸ್ಪತ್ರೆಗಳು ಮಾತ್ರ ಸಾಸ್ಟ್‍ನಲ್ಲಿ ನೋಂದಣಿ ಆಗಿರುವುದರಿಂದ ಉಳಿದವುಗಳನ್ನು ನೋಂದಣಿ ಮಾಡಬೇಕು ಎಂದು ಸೂಚನೆ ನೀಡಿದರು.

    ಆಕ್ಸಿಜನ್‍ನ ನ್ಯಾಯಸಮ್ಮತ ಬಳಕೆ ಆಗಬೇಕು. ಆಡಿಟ್ ಮಾಡಬೇಕು, ಅದಕ್ಕೆ ತಜ್ಞರಿರುವ ಸಮಿತಿ ರಚಿಸಬೇಕು. ಈ ರೀತಿ ಮಾಡುತ್ತಿರುವುದರಿಂದ ಆಕ್ಸಿಜನ್ ಮೇಲಿನ ಒತ್ತಡ ಕಡಿಮೆ ಆಗಲಿದೆ. ಜಿಲ್ಲೆಗೆ 15 ಕೆಎಲ್ ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಕೊರತೆ ನಿವಾರಣೆ ಆದಂತಾಗುತ್ತದೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ವೆಂಟಿಲೇಟರ್ ಗಳನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

    ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರೆ ಸೆಂಟರ್‍ಗಳಿಗೆ ದಾಖಲು ಮಾಡಬೇಕು. ಪಿಎಚ್‍ಸಿ ವ್ಯಾಪ್ತಿಯಲ್ಲಿ ಒಂದು ಸಿಸಿಸಿ ಇರುವಂತೆ ನೋಡಿಕೊಳ್ಳಬೇಕು. ಪೌಷ್ಟಿಕ ಆಹಾರ, ಶುಚಿತ್ವಕ್ಕೆ ಒತ್ತು ನೀಡಬೇಕು. ಟೆಸ್ಟ್ ವರದಿಗಳು ಅದೇ ದಿನ ಬರುವಂತೆ ಎಚ್ಚರವಹಿಸಬೇಕು. ಸದ್ಯ 36 ಗಂಟೆಗಳಲ್ಲಿ ಸಿಗುತ್ತಿರುವ ಅವಧಿಯನ್ನು 24 ಗಂಟೆಗೆ ಇಳಿಸಬೇಕು. ಇದಕ್ಕೆ ಟಾರ್ಗೆಟೆಡ್ ಟೆಸ್ಟಿಂಗ್ ಮಾಡಬೇಕು. ಮೂರು ಪಾಳಿಯಲ್ಲಿ ಕೆಲಸ ಮಾಡಬೇಕು ಎಂದರು.

    ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿಗದಿಗೊಳಿಸಿರುವ ದರಕ್ಕಿಂತ ಹೆಚ್ಚು ಹಣ ಪಡೆಯಬಾರದು. ಸಿಟಿ ಸ್ಕ್ಯಾನ್ ಮಾಡಿಸಿಕೊಂಡವರಿಗೂ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಹಣ ಪಡೆಯಬಾರದು. ಒಂದು ವೇಳೆ ಆ ರೀತಿ ಹಣ ಪಡೆದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್, ಸಂಸದರಾದ ಶಿವಕುಮಾರ್ ಉದಾಸಿ, ಗದ್ದಿಗೌಡರ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಶಾಸಕರಾದ ರಾಮಣ್ಣ ರಮಣ್, ಎಂಎಲ್‍ಸಿ ಸಂಕನೂರ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

  • ಆರೋಗ್ಯ ಸಚಿವರ ತವರಲ್ಲಿ ನಿರುಪಯುಕ್ತವಾದ ವೆಂಟಿಲೇಟರ್​ಗಳು

    ಆರೋಗ್ಯ ಸಚಿವರ ತವರಲ್ಲಿ ನಿರುಪಯುಕ್ತವಾದ ವೆಂಟಿಲೇಟರ್​ಗಳು

    ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟ ಕಾಲದಲ್ಲಿ ಸೋಂಕಿತರ ಜೀವ ಉಳಿಸಲು ಬಳಕೆಯಾಗಬೇಕಾದ ವೆಂಟಿಲೇಟರ್ಸ್ ನಿರುಪಯುಕ್ತವಾಗಿರೋ ಘಟನೆ ಆರೋಗ್ಯ ಸಚಿವ ಕೆ. ಸುಧಾಕರ್ ತವರು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಗೌರಿಬಿದನೂರು ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ 5 ವೆಂಟಿಲೇಟರ್ಸ್ ಇದ್ದು ಕೇವಲ 1 ಮಾತ್ರ ಬಳಕೆ ಮಾಡಲಾಗುತ್ತಿದೆ. ಆಸ್ಪತ್ರೆಯ ಕೊಠಡಿಯಲ್ಲಿ ಉಳಿದ 4 ವೆಂಟಿಲೇಟರ್ಸ್ ಹಾಗೆ ಇಟ್ಟಿದ್ದು ಬಳಕೆ ಮಾಡದೆ ನಿರುಪಯುಕ್ತವಾಗಿವೆ. ಈ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ಬಹಳಷ್ಟು ಕಡೆ ವೆಂಟಿಲೇಟರ್ಸ್ ಇಲ್ಲ ಎಂದು ಪರದಾಡುತ್ತಿದ್ದಾರೆ. ಇತ್ತ ಈ ಆಸ್ಪತ್ರೆಯಲ್ಲಿ ವೆಂಟಿಲೇಟರ್ಸ್ ಇದ್ದರೂ ಬಳಕೆ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಆಸ್ಪತ್ರೆಯ ವೈದ್ಯಾಧಿಕಾರಿ ಶ್ರೀನಿವಾಸ್, ಕಳೆದ ಒಂದು ವರ್ಷದ ಹಿಂದೆ ವೆಂಟಿಲೇಟರ್ಸ್ ಬಂದಿವೆ. ಆದರೆ ಈಗ ಬಳಕೆ ಮಾಡಲು ಆಕ್ಸಿಜನ್ ಕೊರತೆ ಹಾಗೂ ಸಿಬ್ಬಂದಿ ಸಮಸ್ಯೆ ಇದೆ. ವೆಂಟಿಲೇಟರ್ ಬಳಸಿದ್ರೆ ಒಂದು ದಿನ 30-40 ಲೀಟರ್ ಆಕ್ಸಿಜನ್ ಬೇಕಾಗುತ್ತೆ. ಸಿಲಿಂಡರ್ ಗಳು ಖಾಲಿ ಆದರೆ ಇತರೆ ಸಾಮಾನ್ಯ ಆಕ್ಸಿಜನ್ ಪಡೆಯುವ ರೋಗಿಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ ಬಳಕೆ ಮಾಡುತ್ತಿಲ್ಲ. ವೆಂಟಿಲೇಟರ್ ಅಗತ್ಯ ಬಂದವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

  • ಜೂನ್ ಅಂತ್ಯದ ವೇಳೆಗೆ ಕೊರೊನಾ ಹತೋಟಿಗೆ: ಸುಧಾಕರ್

    ಜೂನ್ ಅಂತ್ಯದ ವೇಳೆಗೆ ಕೊರೊನಾ ಹತೋಟಿಗೆ: ಸುಧಾಕರ್

    ಹಾವೇರಿ: ತಜ್ಞರ ಪ್ರಕಾರ ಜೂನ್ ಅಂತ್ಯದ ವೇಳೆಗೆ ಕೊರೊನಾ ಹತೋಟಿಗೆ ಬರಲಿದೆ. ಎರಡನೇ ಅಲೆ ಬಹಳಷ್ಟು ತಗ್ಗಲಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ಅಂತ್ಯದ ವೇಳೆಗೆ ಕೊರೊನಾ ಹತೋಟಿಗೆ ಬರಲಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ತಜ್ಞರು ಹೇಳಿದಂತೆಯೇ ಇಲ್ಲಿಯವರೆಗೆ ನಡೆದಿದೆ. ನಾವು ಕೂಡ ಜೂನ್ ಅಂತ್ಯದ ವೇಳೆಗೆ ಎರಡನೇ ಅಲೆ ಕಡಿಮೆ ಆಗುತ್ತದೆ ಎಂದು ನಂಬಿದ್ದೇವೆ ಎಂದರು.

    ಲಾಕ್‍ಡೌನ್ ನಿಂದ ಚೈನ್ ಬ್ರೇಕ್ ಆಗುತ್ತದೆ. ಕಳೆದ 12 ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುವ ಕುರಿತು ಚಿಂತನೆ ನಡೆದಿದೆ ಎಂದರು.

    ಹಳ್ಳಿಗಳಲ್ಲಿ ಸೋಂಕಿತರಿಗೆ ಹೋಮ್ ಐಸೋಲೇಶನ್ ಬದಲು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆ ನೀಡಲು ನಿರ್ಧಾರ ಮಾಡಿದ್ದೇವೆ. ಹಳ್ಳಿಗಳಲ್ಲಿನ ಸೋಂಕಿತರಿಗೆ ಮೊದಲ ದಿನದಿಂದಲೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ನೀಡಿದರೆ ಸಾವಿನ ಪ್ರಮಾಣ ಕಡಿಮೆ ಆಗಲಿದೆ ಮತ್ತು ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

  • ಬ್ಲ್ಯಾಕ್ ಫಂಗಸ್ ಬಂದ್ರೆ ಮಾಹಿತಿ ನೀಡಿ, ಮುಚ್ಚಿಟ್ಟರೆ ಕಾನೂನು ಬಾಹಿರ – ಸುಧಾಕರ್

    ಬ್ಲ್ಯಾಕ್ ಫಂಗಸ್ ಬಂದ್ರೆ ಮಾಹಿತಿ ನೀಡಿ, ಮುಚ್ಚಿಟ್ಟರೆ ಕಾನೂನು ಬಾಹಿರ – ಸುಧಾಕರ್

    – ಬ್ಲ್ಯಾಕ್ ಫಂಗಸ್ ಬಂದವರಿಗೆ ಉಚಿತ ಚಿಕಿತ್ಸೆ

    ಬೆಂಗಳೂರು: ರಾಜ್ಯದಲ್ಲಿ ಯಾರಿಗೇ ಬ್ಲ್ಯಾಕ್ ಫಂಗಸ್ ಸೋಂಕು ಬಂದರೆ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಇದನ್ನು ಮುಚ್ಚಿಟ್ಟರೆ ಕಾನೂನು ಬಾಹಿರವಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಬ್ಲ್ಯಾಕ್ ಫಂಗಸ್ ಕುರಿತು ವಿವಿಧ ವಿಭಾಗಗಳ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ಬ್ಲ್ಯಾಕ್ ಫಂಗಸ್ ಕೆಲವರಲ್ಲಿ ಕಾಣಿಸಿಕೊಂಡಿದೆ. ಆದರೆ ಕೋವಿಡ್ ನಂತೆ ಈ ಸೋಂಕು ಹರಡುತ್ತದೆ ಎಂಬುದು ಸುಳ್ಳು. ಇದು ಕೊರೊನಾಗೆ ಸಮನಾದ ರೋಗವಲ್ಲ. ಕೋವಿಡ್ ಗೆ ಒಳಗಾದ ಅತಿಯಾದ ಮಧುಮೇಹವಿರುವವರು ಅಧಿಕ ಸ್ಟೀರಾಯಿಡ್ ಔಷಧಿ ಪಡೆಯುವವರಿಗೆ ಇದು ಬರುತ್ತದೆ. ಎಚ್‍ಐವಿ, ಕ್ಯಾನ್ಸರ್, ಅಂಗಾಂಗ ಕಸಿ ಮಾಡಿಕೊಂಡಿರುವವರಿಗೆ ಬರುವ ಸಾಧ್ಯತೆ ಇರುತ್ತದೆ. ಇಂತಹವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದರು.


    ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಶಿಲೀಂಧ್ರ ದಾಳಿ ಮಾಡಿ ಮೂಗಿಗೆ ಬರುತ್ತದೆ. ನಂತರ ಕಣ್ಣಿಗೆ ಹಾನಿ ಮಾಡುತ್ತದೆ. ಮೂಗಿಗೆ ಬಂದ ಕೂಡಲೇ ಎಚ್ಚರ ವಹಿಸಿ ಚಿಕಿತ್ಸೆ ಪಡೆಯಬೇಕು. ಆಸ್ಪತ್ರೆಗಳಲ್ಲಿ ಹ್ಯುಮಿಡಿಫೈರ್ ನಲ್ಲಿ ನೀರನ್ನು ಬಳಸುವುದರಿಂದ ಬರುತ್ತಿದೆ ಎಂಬ ಅಂದಾಜಿದೆ. ಇದು ಯಾವ ಮೂಲದಿಂದ ಬರುತ್ತಿದೆ ಎಂದು ಪತ್ತೆ ಮಾಡಲು ತಜ್ಞರಿಗೆ ಸೂಚಿಸಲಾಗಿದೆ. ಈ ಬಗ್ಗೆ ತಜ್ಞರು ವರದಿ ಸಲ್ಲಿಸಲಿದ್ದು, ವರದಿ ಆಧಾರದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

    ಬೌರಿಂಗ್ ನಲ್ಲಿ ಚಿಕಿತ್ಸೆ
    ಬ್ಲ್ಯಾಕ್ ಫಂಗಸ್ ಗೆ ಆಂಪೊಟೆರಿಸಿನ್ ಔಷಧಿ ನೀಡುತ್ತಿದ್ದು, ಒಬ್ಬ ರೋಗಿಗೆ 40-60 ವೈಲ್ ಗಳು ಬೇಕಾಗುತ್ತವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1,050 ರಷ್ಟು ವೈಲ್ ಗಳ ಮಂಜೂರಾತಿ ನೀಡಿದ್ದು, 450 ವೈಲ್ ಬಂದಿದೆ. ಜೊತೆಗೆ 20 ಸಾವಿರ ವೈಲ್ ಗೆ ಆದೇಶಿಸಲಾಗಿದೆ. ನಿನ್ನೆವರೆಗೆ 97 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು, ಮುಂದೆ ಮೈಸೂರು ಮೆಡಿಕಲ್ ಕಾಲೇಜು, ಶಿವಮೊಗ್ಗ ಮೆಡಿಕಲ್ ಕಾಲೇಜು, ಕಲಬುರ್ಗಿ ಜಿಮ್ಸ್, ಹುಬ್ಬಳ್ಳಿ ಕಿಮ್ಸ್, ಮಂಗಳೂರು ವೆನ್ ಲಾಕ್, ಉಡುಪಿ ಕೆಎಂಸಿ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಆಯಾ ಜಿಲ್ಲೆಗಳ ಜನರು ಅಲ್ಲಿಯೇ ಚಿಕಿತ್ಸೆ ಪಡೆಯಬಹುದು ಎಂದರು.

    ವೈದ್ಯರ ಸಲಹೆ ಇಲ್ಲದೆ ಸ್ಟೀರಾಯಿಡ್ ನೀಡುವಂತಿಲ್ಲ. ಮನೆ ಆರೈಕೆಯಲ್ಲಿರುವವರಿಗೆ ಸರ್ಕಾರ ಸ್ಟೀರಾಯಿಡ್ ನೀಡುತ್ತಿಲ್ಲ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿರುವ ಬ್ಲ್ಯಾಕ್ ಫಂಗಸ್ ಗೊಳಗಾದ ರೋಗಿಗಳ ಮಾಹಿತಿ ಸರ್ಕಾರದ ಬಳಿ ಇರುತ್ತದೆ. ಅದರಂತೆ ಔಷಧಿ ನೀಡಲಾಗುತ್ತದೆ. ಕೋವಿಡ್ ಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ಪೋಸ್ಟ್ ಕೋವಿಡ್ ರೋಗ ಆಗಿರುವುದರಿಂದ ಇದಕ್ಕೂ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

  • ಬೌರಿಂಗ್ ನಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ವ್ಯವಸ್ಥೆ- ಡಾ.ಕೆ.ಸುಧಾಕರ್

    ಬೌರಿಂಗ್ ನಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ವ್ಯವಸ್ಥೆ- ಡಾ.ಕೆ.ಸುಧಾಕರ್

    – ಉಚಿತ ಚಿಕಿತ್ಸೆ ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚೆ

    ಬೆಂಗಳೂರು: ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನೀಡಲು ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ವ್ಯವಸ್ಥೆ ಮಾಡುತ್ತಿದ್ದು, ನಂತರ ಬೇರೆ ಜಿಲ್ಲೆಗಳಿಗೂ ಈ ಸೇವೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್ ಅವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಸ್ಟೀರಾಯಿಡ್ ಅಧಿಕವಾಗಿ ಬಳಸಿರುವವರಿಗೆ ಹಾಗೂ ಮಧುಮೇಹ ಹೆಚ್ಚಿರುವವರಿಗೆ ಕೋವಿಡ್ ಬಂದಾಗ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಇದೆ. ಮೂಗಿನಿಂದ ಆರಂಭವಾಗುವ ಈ ರೋಗ ಕಣ್ಣಿಗೆ ಹಾನಿ ಮಾಡುತ್ತದೆ. ದೃಷ್ಟಿ ಕೂಡ ಕಳೆದುಕೊಳ್ಳುವ ಅಪಾಯವಿರುತ್ತದೆ. ಸರಿಯಾದ ಚಿಕಿತ್ಸೆ ನೀಡದಿದ್ದರೆ ಸಾವು ಕೂಡ ಬರಬಹುದು. ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಾಗಲೇ ಇಲ್ಲಿನ ನೇತ್ರ ತಜ್ಞರೊಂದಿಗೆ ಸಮಾಲೋಚನೆ ಮಾಡಲಾಗಿದೆ. ನಾಳೆಯಿಂದಲೇ ಬೌರಿಂಗ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ನಂತರ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಆರಂಭಿಸಲಾಗುವುದು ಎಂದರು.

    ನೇತ್ರ ತಜ್ಞರು ಸೇರಿದಂತೆ ಮೂರ್ನಾಲ್ಕು ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗುತ್ತಿದೆ. ಇದಕ್ಕೆ ಯಾವ ಬಗೆಯ ಚಿಕಿತ್ಸೆ ನೀಡಬೇಕೆಂದು ಈ ಸಮಿತಿ ಸಲಹೆ ನೀಡಲಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಸತತ ಏಳು ವಾರಗಳ ಕಾಲ ನೀಡಬೇಕಿದ್ದು, 2-3 ಲಕ್ಷ ರೂ. ಖರ್ಚಾಗುತ್ತದೆ. ಇದನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಯಾರಿಗೇ ಈ ಸಮಸ್ಯೆ ಇದ್ದರೂ ತಕ್ಷಣ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಬೇಕು. ಇದಕ್ಕೆ ಬೇಕಿರುವ ಆಂಪೊಟೆರಿಸಿನ್ ಔಷಧಿಯನ್ನು ಕೇಂದ್ರ ಸರ್ಕಾರ ನೀಡಲಿದ್ದು, 20 ಸಾವಿರ ಡೋಸ್ ಗೆ ಮನವಿ ಮಾಡಲಾಗಿದೆ. ಯಾರೂ ವೈದ್ಯರ ಬಳಿ ಸಲಹೆ ಪಡೆಯದೆ ಸ್ಟೀರಾಯಿಡ್ ಮೊದಲಾದ ಔಷಧಿ ಪಡೆಯಬಾರದು. ವೈದ್ಯರು ಕೂಡ ಜನರಿಗೆ ರೋಗ ನಿರೋಧಕ ಹೆಚ್ಚಿಸುವ ಔಷಧಿಯನ್ನು ಅನಗತ್ಯವಾಗಿ ನೀಡಬಾರದು ಎಂದು ತಿಳಿಸಿದರು.

    ಡೆಂಘೀ ತಡೆಗಟ್ಟಿ
    ಸೊಳ್ಳೆಯಿಂದ ಹರಡುವ ಡೆಂಘೀ ರೋಗ ರಾಜ್ಯದಲ್ಲಿ ಪ್ರತಿ ವರ್ಷ 15 ರಿಂದ 20 ಸಾವಿರ ಜನರಿಗೆ ಬರುತ್ತಿದೆ. ಮುಂಗಾರು ಆರಂಭವಾಗುತ್ತಿರುವುದರಿಂದ ಮಳೆಗಾಲದಲ್ಲಿ ಸೊಳ್ಳೆ ಹುಟ್ಟದಂತೆ ಜನರು ಕ್ರಮ ವಹಿಸಬೇಕು. ನೀರು ಸಂಗ್ರಹವಾಗುವ ಕಡೆಗಳಲ್ಲಿ ಎಚ್ಚರ ವಹಿಸಬೇಕು. ಒಂದು ವಾರ ಬಿಟ್ಟರೆ ಸೊಳ್ಳೆಗಳು ಹುಟ್ಟಿ ರೋಗ ಹರಡುತ್ತದೆ. ಈ ಸೊಳ್ಳೆ ಹಗಲಿನಲ್ಲಿ ಹೆಚ್ಚಾಗಿ ಕಚ್ಚಿ ವೈರಾಣು ಹರಡುತ್ತದೆ. ಮಹಿಳೆಯರು ಮತ್ತು ಮಕ್ಕಳ ವಿಚಾರದಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಯಾವುದೇ ರೀತಿ ಜ್ವರ, ಮೈ ಕೈ ನೋವು, ವಾಂತಿ, ಸ್ನಾಯುಸೆಳೆತ ಕಂಡುಬರುವುದು ಡೆಂಘೀ ಲಕ್ಷಣಗಳು. ಯಾವುದೇ ರೋಗ ಲಕ್ಷಣ ಕಂಡುಬಂದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕು ಎಂದರು.

  • ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ವಿಶೇಷ ಚಿಕಿತ್ಸೆ: ಸುಧಾಕರ್

    ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ವಿಶೇಷ ಚಿಕಿತ್ಸೆ: ಸುಧಾಕರ್

    – ಅಧಿಕ ಸ್ಟಿರಾಯ್ಡ್ ಬಳಕೆ, ಮಧುಮೇಹ ಇದ್ದವರಿಗೆ ಬ್ಲ್ಯಾಕ್ ಫಂಗಸ್

    ಬೆಂಗಳೂರು: ಬ್ಲ್ಯಾಕ್ ಫಂಗಸ್ ಕುರಿತು ಈಗಾಗಲೇ ಎಚ್ಚರ ವಹಿಸಿದ್ದು, ನಾಳೆಯಿಂದ ಬೌರಿಂಗ್ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಈ ವಿಶೇಷ ಚಿಕಿತ್ಸೆಯನ್ನು ಪ್ರಾರಂಭ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್‍ಗೆ ಸತತ 7 ವಾರಗಳ ಚಿಕಿತ್ಸೆ ಅವಶ್ಯಕತೆ ಇದೆ. ಒಬ್ಬ ವ್ಯಕ್ತಿಗೆ 2-3 ಲಕ್ಷ ಖರ್ಚು ಆಗುತ್ತೆ. ಉಚಿತವಾಗಿ ಚಿಕಿತ್ಸೆ ಕೊಡಿಸಲು ಸಿಎಂ ಜೊತೆ ಇಂದೇ ಮಾತನಾಡುತ್ತೇನೆ. ಸಮಸ್ಯೆ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಹೋಗಿ ಚೆಕ್ ಮಾಡಿಸಿಕೊಳ್ಳಿ. ಅಧಿಕ ಸ್ಟಿರಾಯ್ಡ್ ಬಳಕೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬ್ಲ್ಯಾಕ್ ಫಂಗಸ್ ಬರುತ್ತದೆ. ಅಲ್ಲದೆ ಮಧುಮೇಹ ಇರುವವರಿಗೆ ಕೊರೊನಾ ಸೋಂಕು ತಗುಲಿದ ಬಳಿಕ ಇದು ಬರುತ್ತದೆ. ಮೂಗಿನ ಮೂಲಕ ಈ ಫಂಗಲ್ ಇನ್‍ಫೆಕ್ಷನ್ ಆಗುತ್ತೆ. ಚಿಕಿತ್ಸೆ ಸರಿಯಾಗಿ ಆಗದಿದ್ದರೆ ಸಾವು ಸಂಭವಿಸುತ್ತದೆ. ಮಹಾರಾಷ್ಟ್ರದಲ್ಲಿ ಕಾಣಿಸಿದ ಕೂಡಲೇ, ನೇತ್ರ ತಜ್ಞರ ಜೊತೆ ಚರ್ಚೆ ಮಾಡಿದ್ದೇವೆ ಈ ಕುರಿತು ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.

    ವೈದ್ಯರ ಸಲಹೆ ಮೇರೆಗೆ ಸ್ಟಿರಾಯ್ಡ್ ಬಳಕೆ ಮಾಡಿ, ವೈದ್ಯರು ಅನಗತ್ಯವಾಗಿ ಸ್ಟಿರಾಯ್ಡ್ ಕೊಡಬಾರದು, ವೈದ್ಯರು ಎಚ್ಚರಿಕೆಯಿಂದ ಚಿಕಿತ್ಸೆ ಕೊಡಬೇಕು. ಇದುವರೆಗೂ ಎಷ್ಟು ಜನರಿಗೆ ಫಂಗಸ್ ಬಂದಿದೆ, ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇಲ್ಲ. ಇದಕ್ಕಾಗಿ ಸಮಿತಿ ರಚನೆ ಮಾಡಲಾಗುತ್ತದೆ. ಈ ಸಮಿತಿ ಸಲಹೆ ಕೊಡುತ್ತೆ ಎಂದು ವಿವರಿಸಿದರು.

    ಬ್ಲ್ಯಾಕ್ ಫಂಗಸ್ ಔಷಧಿ ಕೊರತೆ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದಲ್ಲೇ ಈ ಔಷಧಿ ಕೊರತೆ ಇದೆ. ಈಗಾಗಲೇ 20 ಸಾವಿರ ವೈಲ್ಸ್ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಕೇಂದ್ರ ಸಚಿವ ಸದಾನಂದಗೌಡರ ಜೊತೆ ಸಂಪರ್ಕದಲ್ಲಿದ್ದೇನೆ. ಕೇಂದ್ರ ಆರೋಗ್ಯ ಸಚಿವರ ಜೊತೆಯೂ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಯಾರೂ ಆತಂಕ ಪಡಬಾರದು ಎಂದರು.

    ಬ್ಲ್ಯಾಕ್ ಫಂಗಸ್ ಬಗ್ಗೆ ಅಂಕಿ ಅಂಶ ಇಲ್ಲವೆಂದ ಸಚಿವರು ನಿರ್ಲಕ್ಷ್ಯದ ಉತ್ತರ ನೀಡಿದ್ದು, ಎಷ್ಟು ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದೆ ಎಂಬ ಮಾಹಿತಿ ಇಲ್ಲ. ಇದರಿಂದ ಎಷ್ಟು ಸಾವಾಗಿದೆ ಎಂದು ನಿಖರವಾದ ಮಾಹಿತಿ ಇಲ್ಲ. ಖಾಸಗಿಯಾಗಿ ಅನೇಕರು ದಾಖಲಾಗಿದ್ದಾರೆ, ಹೀಗಾಗಿ ಮಾಹಿತಿ ಲಭ್ಯವಿಲ್ಲ. ಇದಕ್ಕಾಗಿ ತಜ್ಞರ ಸಮಿತಿ ರಚನೆ ಮಾಡುತ್ತಿದ್ದೇವೆ. ಅಂಕಿ ಅಂಶಗಳು, ಚಿಕಿತ್ಸೆ ವಿಧಾನದ ಬಗ್ಗೆ ಸಮಿತಿ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದರು.

    ಕಾಂಗ್ರೆಸ್ ನಿಂದ ಸ್ಟೀರಾಯ್ಡ್ ಇರುವ ಕಿಟ್ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಐಸಿಎಂಆರ್ ಸೂಚನೆ ಮತ್ತು ನಿಯಮದ ಅನ್ವಯ ನಾವು ಕಿಟ್ ಕೊಡುತ್ತಿದ್ದೇವೆ. ಯಾರಾದರೂ ಸಂಘ- ಸಂಸ್ಥೆಗಳು ಮುಂದೆ ಬಂದರೆ ಅವರ ಮೂಲಕ ಸಹ ಕಿಟ್ ವಿತರಣೆ ಮಾಡುತ್ತೇವೆ. ಆದರೆ ಯಾವುದೇ ನಿಯಮ ಪಾಲಿಸದೆ ಕಾಂಗ್ರೆಸ್ ನವರು ಕಿಟ್ ಕೊಡೊವುದು ಸರಿಯಲ್ಲ ಎಂದರು.

    ಕೊರೊನಾ ಟೆಸ್ಟ್ ಕಡಿಮೆ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪತ್ರವನ್ನು ನೋಡುತ್ತೇನೆ. ಅವರ ಪತ್ರಕ್ಕೆ ಉತ್ತರ ಬರೆಯುತ್ತೇನೆ. ತಜ್ಞರು, ಟಾಸ್ಕ್ ಫೋರ್ಸ್ ನವರು ತೀರ್ಮಾನ ಮಾಡಲಾಗಿದೆ. ಸಂಖ್ಯೆ ಮುಖ್ಯವಲ್ಲ, ಪಾಸಿಟಿವಿಟಿ ದರ ಇಳೆಯೋದು ನಮಗೆ ಮುಖ್ಯ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಕಡಿಮೆ ಆಗುತ್ತಿದೆ. ಆದರೆ ಬೇರೆ ಜಿಲ್ಲೆಯಲ್ಲಿ ಕೇಸ್ ಹೆಚ್ಚಳ ಆಗಿದೆ, ಪಾಸಿಟಿವಿಟಿ ದರ ಸಹ ಹೆಚ್ಚಾಗುತ್ತಿದೆ. ಜನ ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಗೆ ಹೋಗಿರುವುದರಿಂದ ಹೆಚ್ಚಳ ಆಗಿರಬಹುದು. ಜಿಲ್ಲೆಗಳಲ್ಲಿ ನಾವು ಟೆಸ್ಟ್ ಕಡಿಮೆ ಮಾಡಿಲ್ಲ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಕಡಿಮೆ ಆಗಿರುವುದಕ್ಕೆ ಟೆಸ್ಟ್ ಕಡಿಮೆ ಮಾಡಿರಬಹುದು. ಇದನ್ನ ವಿಪಕ್ಷಗಳ ನಾಯಕರಿಗೆ ಮನವರಿಕೆ ಮಾಡುತ್ತೇವೆ ಎಂದರು.

    ಇಂದು ವಿಶ್ವ ಡೆಂಗ್ಯೂ ದಿನಾಚರಣೆಯಾಗಿದ್ದು, ಡೆಂಗ್ಯೂ ಸೊಳ್ಳೆ ಮೂಲಕ ಹರಡುವ ರೋಗ. ನಮ್ಮಲ್ಲಿ ಪ್ರತಿ ವರ್ಷ 15-20 ಸಾವಿರ ಜನಕ್ಕೆ ಇದು ಬರುತ್ತೆ. ಮಳೆಗಾಲದಲ್ಲಿ ಇದು ಹೆಚ್ಚಳ ಆಗುವ ಸಾಧ್ಯತೆ ಇದೆ. ಶುಚಿತ್ವ ಇಲ್ಲದ ಕಡೆ ಸೊಳ್ಳೆ ಬಂದು ಈ ರೋಗ ಬರುತ್ತೆ, ಜನರು ಎಚ್ಚರಿಕೆಯಿಂದ ಇರಬೇಕು. ಹಗಲಿನಲ್ಲಿ ಈ ಸೊಳ್ಳೆ ಹೆಚ್ಚು ಕಚ್ಚುತ್ತೆ. ಎಲ್ಲರೂ ವಿಶೇಷ ಜಾಗೃತಿವಹಿಸಿ. ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಬಳಸಿ ರಕ್ಷಣೆ ಮಾಡಿಕೊಳ್ಳಿ. ಜ್ವರ, ತಲೆ ನೋವು, ವಾಂತಿ, ಮೈಕೈ ನೋವು, ರಕ್ತಸ್ರಾವ, ಹಲ್ಲಿನಲ್ಲಿ ರಕ್ತಸ್ರಾವ ಆಗೋದು ಈ ರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ ಎಂದು ತಿಳಿಸಿದರು.

  • 18 ರಿಂದ 44 ವರ್ಷ ವಯಸ್ಸಿನವರಿಗೆ ನಾಳೆಯಿಂದ ಲಸಿಕೆ -ಡಾ.ಕೆ ಸುಧಾಕರ್

    18 ರಿಂದ 44 ವರ್ಷ ವಯಸ್ಸಿನವರಿಗೆ ನಾಳೆಯಿಂದ ಲಸಿಕೆ -ಡಾ.ಕೆ ಸುಧಾಕರ್

    ಬೆಂಗಳೂರು: ರಾಜ್ಯ ಸರ್ಕಾರ ಖರೀದಿಸುತ್ತಿರುವ 2 ಕೋಟಿ ಡೋಸ್ ಕೋವಿಶೀಲ್ಡ್ ಪೈಕಿ ಶನಿವಾರ ರಾತ್ರಿ 3.5 ಲಕ್ಷ ಡೋಸ್ ರಾಜ್ಯಕ್ಕೆ ತಲುಪಿದ್ದು, ಈವರೆಗೂ ಒಟ್ಟು 6.5 ಲಕ್ಷ ಡೋಸ್ ಪೂರೈಕೆಯಾಗಿದೆ. ಹಾಗಾಗಿ ಮೇ 10 ರಿಂದ ರಾಜ್ಯಾದ್ಯಂತ 18 ರಿಂದ 44 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿರುವ ಸುಧಾಕರ್, ಕೇಂದ್ರ ಸರ್ಕಾರ ಈವರೆಗೂ 99,58,190 ಕೋವಿಶೀಲ್ಡ್, 10,91,280 ಕೋವ್ಯಾಕ್ಸಿನ್ ಸೇರಿ ಒಟ್ಟು 1,10,49,470 ಡೋಸ್ ಲಸಿಕೆಗಳನ್ನು ರಾಜ್ಯಕ್ಕೆ ಪೂರೈಕೆ ಮಾಡಿದೆ. ಹಾಗಾಗಿ ಮೇ 10ನೇ ತಾರೀಖಿನಿಂದ 18 ರಿಂದ 44 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ನಡೆಯಲಿದೆ.

    ಬೆಂಗಳೂರು ನಗರದ ಕೆಸಿ ಜನರಲ್, ಜಯನಗರ ಜನರಲ್ ಆಸ್ಪತ್ರೆ, ಸಿವಿ ರಾಮನಗರ ಆಸ್ಪತ್ರೆ, ಇಎಸ್‍ಐ ಆಸ್ಪತ್ರೆ ಮತ್ತು ಸರ್ಕಾರಿ ಮೆಡಿಕಲ್ ಕಾಲೇಜು ಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಇದಲ್ಲದೇ ರಾಜ್ಯದ ಇತರೆಡೆ, ಎಲ್ಲಾ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಲಸಿಕೆ ವಿತರಣೆ ಇರಲಿದೆ. ಇದರೊಂದಿಗೆ ರಾಜ್ಯದಲ್ಲಿ ವ್ಯಾಕ್ಸಿನೇಷನ್ ಸೆಂಟರ್ ಕೂಡ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಕೋವಿನ್ ಆ್ಯಪ್ ನಲ್ಲಿ ರಿಜಿಸ್ಟ್ರೇಶನ್ ಮಾಡಿಕೊಂಡಿದ್ದವರಿಗೆ ವ್ಯಾಕ್ಸಿನೇಷನ್ ನಡೆಯಲಿದ್ದು, ಆ್ಯಪ್ ರಿಜಿಸ್ಟ್ರೇಶನ್ ನಲ್ಲಿ ಯಾವ ದಿನಾಂಕ ವ್ಯಾಕ್ಸಿನೇಷನ್‍ಗೆ ನಿಗದಿ ಆಗಿರುತ್ತೋ ಅಂದೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಕೋವಿನ್ ಆ್ಯಪ್ ರಿಜಿಸ್ಟ್ರೇಶನ್ ಆಗಿರುವವರಿಗೆ ವ್ಯಾಕ್ಸಿನ್ ಸೆಂಟರ್ ಗೆ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.

  • ಸಚಿವ ಸಂಪುಟ ಸಭೆಯಲ್ಲಿ ಲಾಕ್‍ಡೌನ್ ಸಾಧಕ-ಬಾಧಕಗಳ ಬಗ್ಗೆ ಗಂಭೀರ ಚರ್ಚೆ: ಸುಧಾಕರ್

    ಸಚಿವ ಸಂಪುಟ ಸಭೆಯಲ್ಲಿ ಲಾಕ್‍ಡೌನ್ ಸಾಧಕ-ಬಾಧಕಗಳ ಬಗ್ಗೆ ಗಂಭೀರ ಚರ್ಚೆ: ಸುಧಾಕರ್

    ಬೆಂಗಳೂರು: ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ, ಬೆಂಗಳೂರಲ್ಲಿ 20 ಸಾವಿರಕ್ಕೂ ಅಧಿಕ ಹಾಗೂ ಇತರ ಜಿಲ್ಲೆಗಳಲ್ಲಿ ಸಹ ಸೋಂಕಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೀಗಾಗಿ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.

    ಈ ಕುರಿತು ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಸಭೆಯಲ್ಲಿ ಇಂದು ಗಂಭೀರ ಚರ್ಚೆ ನಡೆಯಲಿದೆ. ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದೆ. ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಲಾಕ್‍ಡೌನ್ ವಿಚಾರ ಸರ್ಕಾರದ ಗಮನದಲ್ಲಿದೆ. ಇಂದು ಸಾಧಕ ಬಾಧಕ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ನಾವು ರಾಜಕೀಯ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ನಮ್ಮ ಸರ್ಕಾರ ವೈಜ್ಞಾನಿಕವಾಗಿ ನಿರ್ಧಾರ ತಗೊಳ್ಳುತ್ತದೆ ಎಂದರು.

    ಕೆಲವರ ಸಾವು, ನೋವುಗಳನ್ನು ನೋಡಿ ಆತಂಕ, ಭಯ ಜನರಲ್ಲಿ ಹೆಚ್ಚುತ್ತಿದೆ. ಹೀಗಾಗಿ ಅಲ್ಪ ಪ್ರಮಾಣದ ರೋಗ ಲಕ್ಷಣಗಳು ಹಾಗೂ ರೋಗ ಲಕ್ಷಣಗಳು ಇಲ್ಲದಿದ್ದರೂ ಆಸ್ಪತ್ರೆಗೆ ದಾವಿಸುತ್ತಿದ್ದಾರೆ. ಇದರಿಂದ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಹೊರೆಯಾಗುತ್ತದೆ. ಹೀಗಾಗಿ ಅಲ್ಪ, ರೋಗ ಲಕ್ಷಣ ಇಲ್ಲದವರು ಮನೆಯಲ್ಲೇ ಟೆಲಿ ಕಾಲಿಂಗ್ ಮೂಲಕ ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ. ಗಂಭೀರ ಸ್ಥಿತಿಯಲ್ಲಿರುವವರು ಮಾತ್ರ ಆಸ್ಪತ್ರೆಗೆ ದಾಖಲಾದರೆ, ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ತಿಳಿಸಿದರು.

    ಜನರು ಆತಂಕದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಆಕ್ಸಿಜನ್ ಅಭಾವ ಸೃಷ್ಟಿಯಾಗಿದೆ. ಲಕ್ಷಣ ಇಲ್ಲದವರು, ಕಡಿಮೆ ಲಕ್ಷ ಮನೆಯಲ್ಲೇ ಚಿಕಿತ್ಸೆ ಪಡೆಯಿರಿ. ಇದರಿಂದ ಈಗ ಸೃಷ್ಟಿಯಾಗಿರುವ ಬಿಕ್ಕಟ್ಟು ತಪ್ಪಲಿದೆ. ಜನ ಅನಗತ್ಯವಾಗಿ ಆತಂಕ ಪಡೋದು ಬೇಡ, ಆಕ್ಸಿಜನ್ ಸ್ಯಾಚುರೇಷನ್ 90, 92 ಬಂದರೂ ಹಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದರು.

    ನಾವು ಎರಡನೇ ಅಲೆಯಲ್ಲಿದ್ದೇವೆ, ಬೇರೆ ದೇಶಗಳು ಮೂರು, ನಾಲ್ಕನೇ ಅಲೆಯಲ್ಲಿದ್ದಾರೆ. ಒಂದು ಅಲೆ 60-90 ದಿನಗಳ ಕಾಲ ಇರುತ್ತದೆ. ನಮ್ಮ ದೇಶದಲ್ಲಿ ಎರಡನೇ ಅಲೆ ಇನ್ನೂ 30-40 ದಿನ ಇರುತ್ತೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದಾರೆ. ಇಷ್ಟು ದಿನ ಜನ ಎಚ್ಚರಿಕೆ ವಹಿಸಬೇಕು.

    ದಿನ ನಿತ್ಯದ ಜೀವನ ಸಾಗಿಸಬೇಕಾದಲ್ಲಿ ಮರ್ಗಸೂಚಿಗಳನ್ನು ಪಾಲಿಸಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅನಗತ್ಯವಾಗಿ ಮನೆಯಿಂದ ಹೊರಬಾರದು. ಇಲ್ಲವಾದಲ್ಲಿ ಅಪಾಯ ತಪ್ಪಿದ್ದಲ್ಲ. ಒಂದೊಂದು ಅಲೆ ಸುಮಾರು 60-90 ದಿನಗಳ ಕಾಲ ಇರುತ್ತದೆ. ಈಗ ನಾವು 2 ತಿಂಗಳು ತಲುಪಿದ್ದೇವೆ. ಇನ್ನೂ 30-40 ದಿನ ಈ ಅಲೆ ಇರಲಿದೆ ಎಂದು ತಜ್ಞರು ಹೇಳಿದ್ದಾರೆ. ಈ 40 ದಿನ ಅನಗತ್ಯವಾಗಿ ಓಡಾಡಬಾರದು. ರೋಗ ಲಕ್ಷಣಗಳು ಇಲ್ಲದಿದ್ದರೂ ಕೆಲವರಿಗೆ ಪಾಸಿಟಿವ್ ಇರುತ್ತದೆ. ಕೆಲವರು ರೋಗ ಲಕ್ಷಣಗಳು ಇಲ್ಲದವರು ಬೇಕಾಬಿಟ್ಟಿಯಾಗಿ ಓಡಾಡಿ ಇತರರಿಗೆ ಹಬ್ಬಿಸುತ್ತಿದ್ದಾರೆ. ದಯವಿಟ್ಟು ಮನೆಯಲ್ಲೇ ಇರಿ ಎಂದು ಕೇಳಿಕೊಂಡರು.

    ಕೋಲಾರದಲ್ಲಿ ಆಕ್ಸಿಜನ್ ಸಮಸ್ಯೆಯಿಂದ ನಾಲ್ವರು ನಿಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇನ್ ಟೈಮ್ ನಲ್ಲಿ ಆಕ್ಸಿಜನ್ ಪೂರೈಸಲು ಆದಷ್ಟು ಶ್ರಮ ಪಡುತ್ತಿದ್ದೇವೆ. ಈಗಾಗಲೇ ಕಾಲ್ ಸೆಂಟರ್ ಮಾಡಿ 50 ಜನರನ್ನು ನೇಮಿಸಲಾಗಿದೆ. ಅಲ್ಲದೆ ಆಕ್ಸಿಜನ್, ರೆಮ್‍ಡಿಸಿವಿರ್ ಗೆ ಅಂತಾನೆ ಒಬ್ಬ ಐಎಎಸ್ ಅಧಿಕಾರಿ ನೇಮಿಸಲಾಗಿದೆ. ಹೀಗಾಗಿ ಯಾವ ಕಾರಣಕ್ಕೆ ನಿಧನರಾಗಿದ್ದಾರೆ ಎಂಬ ಮಾಹಿತಿಯನ್ನು ಡಿಎಚ್‍ಒ ಬಳಿ ಪಡೆಯುತ್ತೇವೆ. ಡೆತ್ ಆಡಿಟ್ ಬಂದ ಮೇಲೆ ಮಾತನಾಡುತ್ತೇನೆ ಎಂದರು.

    ಸರ್ಕಾರದ ಸ್ಟೋರ್ಸ್‍ನಲ್ಲಿ 26 ಸಾವಿರ ರೆಮ್‍ಡಿಸಿವಿರ್ ಬೇಕು. ಯಾರಾದರೂ ದುರುದ್ದೇಶದಿಂದ ರೆಮ್‍ಡಿಸಿವಿರ್ ಸ್ಟಾಕ್ ಮಾಡಿಕೊಂಡು, ಕೃತಕ ಅಭಾವ ಸೃಷ್ಟಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗೃಹ ಇಲಾಖೆಯಿಂದ ಮನವಿ ಮಾಡಿದ್ದು, ಕಾನೂನು ಕ್ರಮವನ್ನೂ ಕೈಗೊಳ್ಳುತ್ತೇವೆ. ಆಕ್ಸಿಜನ್, ರೆಮ್‍ಡಿಸಿವಿರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈ ಸೋಂಕು ನಮ್ಮ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ. ಅನೇಕ ದೇಶಗಳಲ್ಲಿ 1ನೇ ಅಲೆಗಿಂತ 2ನೇ ಅಲೆಯಲ್ಲಿ ಶೇ.200-500ರಷ್ಟು ಹೆಚ್ಚಗಿದೆ. ನಮ್ಮ ದೇಶದಲ್ಲಿ ಮೊದಲ ಅಲೆಗಿಂತ 2ನೇ ಅಲೆಯಲ್ಲಿ ಶೇ.267ರಷ್ಟು ಹೆಚ್ಚಾಗಿದೆ. ಹೀಗಾಗಿ ಗಂಭೀರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

    ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಭೇಟಿ ಮಾಡಲು ಆರೋಗ್ಯ ಇಲಾಖೆಯ ಸಾಂಕ್ರಮಿಕ ರೋಗ ತಜ್ಞ ಡಾ.ಮೊಹಮದ್ ಷರೀಫ್ ಆಗಮಿಸಿದ್ದು, ಸದಾಶಿವನಗರದಲ್ಲಿರುವ ಸಚಿವ ಸುಧಾಕರ್ ಮನೆಗೆ ಭೇಟಿ ನೀಡಿ, ವೈರಸ್ ಭೀಕರತೆ ಹಾಗೂ ಸಧ್ಯದ ಪರಿಸ್ಥಿತಿಯ ಬಗ್ಗೆ ಸುಧಾಕರ್ ಗೆ ಮಾಹಿತಿ ನೀಡಿದ್ದಾರೆ.

  • ರಾಜ್ಯದಲ್ಲಿ ರೆಮ್‍ಡೆಸಿವರ್, ಆಕ್ಸಿಜನ್ ಕೊರತೆ ಇಲ್ಲ: ಸುಧಾಕರ್

    ರಾಜ್ಯದಲ್ಲಿ ರೆಮ್‍ಡೆಸಿವರ್, ಆಕ್ಸಿಜನ್ ಕೊರತೆ ಇಲ್ಲ: ಸುಧಾಕರ್

    ಬೆಂಗಳೂರು: ರಾಜ್ಯದ ಸರ್ಕಾರಿ ಸಂಸ್ಥೆಗಳಲ್ಲಿ ರೆಮ್‍ಡೆಸಿವರ್ ಕೊರತೆಯಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರಿಗೆ ಕೊರತೆ ಇದ್ದಲ್ಲಿ ತಕ್ಷಣ ವ್ಯವಸ್ಥೆ ಮಾಡುತ್ತೇವೆ. ರೆಮ್‍ಡೆಸಿವರ್, ಆಕ್ಸಿಜನ್ ಕೊರತೆ ಆಗಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲ ಜಿಲ್ಲೆಗಳಲ್ಲಿ ರೆಮ್‍ಡೆಸಿವರ್ ಇಂಜಕ್ಷನ್ ಕೊರತೆ ಎನ್ನಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ರೆಮ್‍ಡೆಸಿವರ್ ತಯಾರು ಮಾಡುವ ಮೂರೂ ಸಂಸ್ಥೆಗಳಿವೆ. ಹೀಗಾಗಿ ಯಾವುದೇ ರೀತಿಯ ಕೊರತೆ ಇಲ್ಲ. ರೆಮ್‍ಡೆಸಿವರ್ ಇಡೀ ದೇಶದಲ್ಲಿ ತಯಾರಿಕೆ ಕಡಿಮೆ ಆಗಿದೆ. ಅಕ್ಟೋಬರ್ ನಿಂದ ಕೊರೊನಾ ಪ್ರಕರಣಗಳು ಕಡಿಮೆ ಆಗಿತ್ತು. ಹೀಗಾಗಿ ತಯಾರಿಕೆ ಕಡಿಮೆ ಆಗಿತ್ತು. ಸರ್ಕಾರಿ ವ್ಯವಸ್ಥೆಯಲ್ಲಿ ಚುಚ್ಚುಮದ್ದು ಕೊರತೆ ಆಗಿಲ್ಲ, ಇದರಲ್ಲಿ ರಾಜಕಾರಣ ಮಾಡಬಾರದು. ಎಲ್ಲರೂ ಸೇರಿಕೊಂಡು ಒಟ್ಟಾಗಿ ಹೋರಾಟ ಮಾಡಿದರೆ ಕೊರೊನಾ ಎದುರಿಸಬಹುದು ಎಂದು ವಿವರಿಸಿದರು.

    ಸಾವಿನ ಪ್ರಮಾಣ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ಅವರು, ಸಾವಿನ ಪ್ರಮಾಣವನ್ನು ಎಷ್ಟು ಸೋಂಕಿತರಲ್ಲಿ, ಎಷ್ಟು ಜನರ ಸಾವಾಗಿದೆ ಎಂದು ಅಳೆಯಬೇಕು. ನಮ್ಮ ರಾಜ್ಯದಲ್ಲಿ ಸಾವಿನ ಪ್ರಮಾಣ ಅರ್ಧದಷ್ಟೂ ಇಲ್ಲ. ಸಾವಿನ ಪ್ರಮಾಣ ಸದ್ಯ ಶೇ.0.5 ಅಥವಾ 0.6 ರಷ್ಟು ಮಾತ್ರ ಇದೆ. ಇದನ್ನು ಇನ್ನಷ್ಟು ಕಡಿಮೆ ಮಾಡುವ ಗುರಿ ಇದೆ. ಸಿಎಂ ಜೊತೆ ಚರ್ಚಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು.

    ವಲಯವಾರು ಕೊರೊನಾ ನಿಯಂತ್ರಣಕ್ಕೆ ಸಚಿವರು ಶ್ರಮ ಹಾಕುತ್ತಿದ್ದಾರೆ. ಜನರ ಸಹಭಾಗಿತ್ವ ಸಹ ಅಗತ್ಯ, ಅನೇಕ ರಾಜ್ಯಗಳಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಇದು ನಮ್ಮ ರಾಜ್ಯದಲ್ಲಿ ಆಗೋದು ಬೇಡ, ನಮ್ಮ ರಾಜ್ಯದ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಪರಿಸ್ಥತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು. ಬೇರೆ ರಾಜ್ಯಗಳಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಸಹ ಪರಿಶೀಲಿಸಲಾಗುವುದು.

    ಲಾಕ್‍ಡೌನ್, ಕರ್ಫ್ಯೂ ಬಗ್ಗೆ ಬೇರೆ ರಾಜ್ಯಗಳು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಗಮನಿಸುತ್ತಿದ್ದೇವೆ. ಸಿಎಂ, ಗೃಹ ಸಚಿವರು ಸೇರಿದಂತೆ ಎಲ್ಲರೂ ಅವರ ವಲಯಗಳಲ್ಲಿ ಗಮನಿಸಿತ್ತಿದ್ದಾರೆ. ಏನೇ ಆದರೂ ಜನರ ಸಹಕಾರ ಅಗತ್ಯ. ಜನ ಕೆಲವು ಕಾರ್ಯಕ್ರಮಗಳನ್ನು ಮುಂದೆ ಹಾಕುವುದರಿಂದ ಜೀವ ಹೋಗಲ್ಲ. ಜನರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.