Tag: ಡಾ. ಕೃಷ್ಣ ಎಲಾ

  • ಜಿಕಾ ವೈರಸ್ ಲಸಿಕೆಗೆ ಪೇಟೆಂಟ್ ಸಿಕ್ಕಿದ ವಿಶ್ವದ ಮೊದಲ ಕಂಪನಿ ನಮ್ಮದು – ಭಾರತ್ ಬಯೋಟೆಕ್

    ಜಿಕಾ ವೈರಸ್ ಲಸಿಕೆಗೆ ಪೇಟೆಂಟ್ ಸಿಕ್ಕಿದ ವಿಶ್ವದ ಮೊದಲ ಕಂಪನಿ ನಮ್ಮದು – ಭಾರತ್ ಬಯೋಟೆಕ್

    – ಈಗಾಗಲೇ 16 ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದೇವೆ
    – ಬಿಎಸ್‌ಎಲ್‌ -3 ಹೊಂದಿರುವ ವಿಶ್ವದ ಏಕೈಕ ಕಂಪನಿ ನಮ್ಮದು
    – ಟೀಕೆಗಳಿಗೆ ಡಾ.ಕೃಷ್ಣ ಎಲ್ಲಾ ಸ್ಪಷ್ಟನೆ

    ನವದೆಹಲಿ: ನಮ್ಮ ಕಂಪನಿ ಪ್ರಾಮಾಣಿಕವಾಗಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದೆ. ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳನ್ನು ತಯಾರಿಸಿರುವ ದಾಖಲೆಯನ್ನು ಹೊಂದಿದೆ. ಎಲ್ಲಾ ಡೇಟಾದೊಂದಿಗೆ ನಾವೂ ಪಾರದರ್ಶಕವಾಗಿ ಲಸಿಕೆ ತಯಾರಿಸಿದ್ದೇವೆ ಎಂದು ಭಾರತ್ ಬಯೋಟೆಕ್‍ನ ಅಧ್ಯಕ್ಷರಾದ ಡಾ.ಕೃಷ್ಣ ಎಲ್ಲಾ ಹೇಳಿದ್ದಾರೆ.

    ಭಾರತದಲ್ಲಿ ಕೊವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ್ದಕ್ಕೆ ಎದ್ದಿರುವ ಪ್ರಶ್ನೆಗಳಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅವರು ಸ್ಪಷ್ಟನೆ ನೀಡಿದರು. ಕೊವಾಕ್ಸಿನ್‍ ಲಸಿಕೆಯನ್ನು ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದಾಗಿ ತುರ್ತು ಪರಿಸ್ಥಿತಿಯ ಸಂದರ್ಭ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಇದು ನೀರಿನಂತೆ ಸುರಕ್ಷಿತ ಎಂದರು.

    ನಮ್ಮ ಅನುಭವದ ಬಗ್ಗೆ ಪ್ರಶ್ನೆ ಮಾಡಬೇಡಿ. ನಮ್ಮದು ಜಾಗತಿಕ ಕಂಪನಿಯಾಗಿದ್ದು ಈಗಾಗಲೇ 16 ಲಸಿಕೆಗಳನ್ನು ತಯಾರಿಸಿದ್ದೇವೆ. ನಾವು ಡೇಟಾದೊಂದಿಗೆ ಪಾರದರ್ಶಕವಾಗಿಲ್ಲ ಎಂದು ಹೇಳುವುದು ಸರಿಯಲ್ಲ. ನಾವು ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗವನ್ನು ನಡೆಸಿದ್ದೇವೆ. ನಾವು ಭಾರತದ ಕಂಪನಿಯಾಗಿರಬಹುದು. ಆದರೆ ಜಾಗತಿಕ ಕಂಪನಿಯಾಗಿ ಗುರುತಿಸಿಕೊಂಡಿದ್ದೇವೆ ಎಂದು ತಿಳಿಸಿದರು.

    ಕೋವಿಡ್‌ 19ಗೆ ಮಾತ್ರವಲ್ಲ ಈಗಾಗಲೇ ನಾವು ಹಲವು ಲಸಿಕೆಗಳನ್ನು ಕಂಡು ಹಿಡಿದಿದ್ದೇವೆ. ಜಿಕಾ ವೈರಸ್‍ನ್ನು ಮೊದಲು ಗುರುತಿಸಿದವರು ನಾವೇ. ಜಿಕಾ ವೈರಸ್ ಮತ್ತು ಚಿಕನ್‍ಗುನ್ಯಾ ಲಸಿಕೆಗಾಗಿ ಜಾಗತಿಕ ಪೇಟೆಂಟ್ ಸಲ್ಲಿಸಿದ ಮೊದಲಿಗರು ನಾವೇ. ಜೈವಿಕ ಸುರಕ್ಷ ಮಟ್ಟ-3(ಬಿಎಸ್‍ಎಲ್-3) ಉತ್ಪಾದನಾ ಸೌಲಭ್ಯವನ್ನು ಹೊಂದಿರುವ ವಿಶ್ವದ ಏಕೈಕ ಕಂಪನಿ ನಮ್ಮದು ಎಂದು ಹೇಳುವ ಕೋವಾಕ್ಸಿನ್‌ ಅನುಮಾನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಪ್ರತ್ಯುತ್ತರಿಸಿದರು.

    ಕೊವಾಕ್ಸಿನ್ ಈಗಾಗಲೇ ಎರಡು ಹಂತಗಳ ಪರೀಕ್ಷೆಯಲ್ಲಿ ತೆರ್ಗಡೆಗೊಂಡಿದ್ದು ಮೂರನೇ ಹಂತದ ಪರಿಣಾಮಕಾರಿತ್ವವನ್ನು ಪರೀಕ್ಷಿಸುತ್ತಿದೆ. ಈ ಲಸಿಕೆ ಶೇ.70.42ರಷ್ಟು ಪ್ರಮಾಣ ಕೊರೊನಾದಿಂದ ರಕ್ಷಿಸುತ್ತದೆ ಎಂದು ತಿಳಿಸಿದರು.

    ಒಂದು ಕಂಪನಿಯು ಉತ್ತಮವಾದ ದತ್ತಾಂಶಗಳನ್ನು ಹೊಂದಿದ್ದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಆ ಕಂಪನಿ ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಬಳಸಬಹುದೆಂಬ ನಿರ್ಧಾರವನ್ನು ಅಮೆರಿಕ ಕೂಡ ಒಪ್ಪಿಕೊಂಡಿದೆ ಎಂದು ಹೇಳುವ ಮೂಲಕ ಭಾರತ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಕೊವಾಕ್ಸಿನ್ ಮತ್ತು ಅಸ್ಟ್ರಜೆನೆಕಾ ಕಂಪನಿ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್‌ ತುರ್ತುಬಳಕೆಗಾಗಿ ಅನುಮೋದನೆ ನೀಡಿತ್ತು. ಪುಣೆ ಮೂಲದ ಸೀರಮ್ ಸಂಸ್ಥೆ ಕೋವೀಶೀಲ್ಡ್‌ ಲಸಿಕೆಯನ್ನು ಉತ್ಪಾದನೆ ಮಾಡಿದೆ.