Tag: ಡಾ. ಅಶ್ವಥ್ ನಾರಾಯಣ

  • ಕೊರೊನಾ ಭೀತಿ- ಜಿಲ್ಲಾಧಿಕಾರಿಯೊಂದಿಗೆ ಡಿಸಿಎಂ ವಿಡಿಯೋ ಕಾನ್ಫರೆನ್ಸ್

    ಕೊರೊನಾ ಭೀತಿ- ಜಿಲ್ಲಾಧಿಕಾರಿಯೊಂದಿಗೆ ಡಿಸಿಎಂ ವಿಡಿಯೋ ಕಾನ್ಫರೆನ್ಸ್

    ಬೆಂಗಳೂರು: ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯ ಪರಿಸ್ಥಿತಿಯನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವಲೋಕಿಸಿದರು. ಅಲ್ಲದೆ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

    ಬೆಂಗಳೂರಿನಲ್ಲಿ ಗುರುವಾರ ಕಲಬುರಗಿ ಜಿಲ್ಲಾಧಿಕಾರಿ ಶರತ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಜಿಲ್ಲೆಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳು, ಮಾಸ್ಕುಗಳನ್ನು ಕೂಡಲೇ ಒದಿಗಿಸುವುದಾಗಿ ತಿಳಿಸಿದ್ದಾರೆ.

    ಪರೀಕ್ಷೆ ನಡೆಸುವ ಸಂದರ್ಭದಲ್ಲಿ ವೈದ್ಯರು ಧರಿಸುವ 900 ರಕ್ಷಾ ಕವಚಗಳು (ಪರ್ಸನಲ್ ಪ್ರೊಟೆಕ್ಷನ್ ಗೇರ್), 1000 ಎನ್ 95 ಮಾಸ್ಕುಗಳು ಹಾಗೂ ಸಾರ್ವಜನಿಕರು ಬಳಸುವ ಮೂರು ಪದರಗಳ 3000 ಮಾಸ್ಕುಗಳನ್ನು ಶುಕ್ರವಾರ ಬೆಳಗ್ಗೆ ಹೊತ್ತಿಗೆ ಕಲಬುರಗಿಗೆ ತಲುಪಿಸಲಾಗುವುದು. ಅಲ್ಲದೆ ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ.ಗೋಪಾಲಕೃಷ್ಣ ಅವರನ್ನು ಕೂಡಲೇ ಕಲಬುರಗಿ ಜಿಲ್ಲೆಗೆ ನಿಯೋಜಿಸುತ್ತಿರುವುದಾಗಿ ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ.

    ಸೋಮವಾರದ ವೇಳೆಗೆ ರೋಗ ಪತ್ತೆ ಮಾಡುವ ಪ್ರಯೋಗಾಲಯವನ್ನು ಕಲಬುರ್ಗಿಯಲ್ಲಿ ಸ್ಥಾಪಿಸಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಈ ವೇಳೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ, ಬಿ.ಜಿ.ಪಾಟೀಲ ಇದ್ದರು.

  • ದಕ್ಷಿಣ ಕೊರಿಯಾ ಕಂಪನಿ ಜೊತೆ ಡಾ. ಅಶ್ವಥ್ ನಾರಾಯಣ ಮಾತುಕತೆ

    ದಕ್ಷಿಣ ಕೊರಿಯಾ ಕಂಪನಿ ಜೊತೆ ಡಾ. ಅಶ್ವಥ್ ನಾರಾಯಣ ಮಾತುಕತೆ

    ಬೆಂಗಳೂರು: ದಕ್ಷಿಣ ಕೊರಿಯಾದ ಹೂಡಿಕೆ ಕಂಪನಿ ನಿಯೋಪ್ಲಕ್ಸ್ (Neoplux)ನಿಯೋಗದ ಜೊತೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಗುರುವಾರ ಬೆಳಗ್ಗೆ ಮಾತುಕತೆ ನಡೆಸಿದರು.

    ಭಾರತ ಹಾಗೂ ದಕ್ಷಿಣ ಕೊರಿಯಾ ನಡುವಿನ ಸಹಯೋಗಕ್ಕೆ ವೇದಿಕೆ ಕಲ್ಪಿಸುವ ಟಿಕೆಎನ್ ಅಡ್ವೈಸರ್ಸ್ ಹಾಗೂ ಸಿಟಿ ಪ್ರೆನ್ಯೂರ್ ಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸ್ಟಾರ್ಟ್ ಅಪ್ ವಲಯದಲ್ಲಿ ಹೊಸ ಅವಕಾಶ ಹಾಗೂ ಸಹಯೋಗದ ಸಾಧ್ಯತೆ ಕುರಿತು ನಿಯೋಪ್ಲಕ್ಸ್ ನ ಸಿಇಓ ಸ್ಯಾಂಗ್ ಹಾ ಲೀ ನೇತೃತ್ವದ ತಂಡದ ಜೊತೆಗೆ ಮಾತುಕತೆ ನಡೆಸಲಾಗಿದೆ ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.

    ಭಾರತದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 8 ಸ್ಟಾರ್ಟ್ ಅಪ್‍ಗಳ ಪೈಕಿ ಐದನ್ನು ಬೆಂಗಳೂರಿನಲ್ಲೇ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸಿದ ನಿಯೋಪ್ಲಕ್ಸ್, ನಗರದಲ್ಲೇ ಸಂಸ್ಥೆಯ ಕೇಂದ್ರ ಕಚೇರಿ ತೆರೆಯುವ ಇಂಗಿತವನ್ನೂ ವ್ಯಕ್ತಪಡಿಸಿದೆ. ಯುವ ಉದ್ಯಮಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸಿಟಿಪ್ರೆನ್ಯೂರ್ಸ್, ಮುಂದಿನ ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ಸಮಾವೇಶ ಆಯೋಜಿಸುವ ಆಶಯ ವ್ಯಕ್ತಪಡಿಸಿದೆ.

    ಈ ಸಮಾವೇಶದಲ್ಲಿ 30ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿ ತಿಳಿಸಿದರು. ನವೋದ್ಯಮಿಗಳಿಗೆ ಹೂಡಿಕೆದಾರರು, ಸರ್ಕಾರಿ ಅಧಿಕಾರಿಗಳು, ಖಾಸಗಿ ವಲಯದ ದಿಗ್ಗಜರೊಂದಿಗೆ ಸಂಪರ್ಕ ಕಲ್ಪಿಸಿ ಅಗತ್ಯ ನೆರವು ಒದಗಿಸುವ ಸಿಟಿಪ್ರೆನ್ಯೂರ್ಸ್, ವಿಶ್ವಸಂಸ್ಥೆಯ ಅರ್ಬನ್ ಇನ್ನೋವೇಶನ್ ಚಾಲೆಂಜ್‍ನಲ್ಲಿ ಭಾಗಿಯಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.