Tag: ಡಬ್ಲ್ಯೂಹೆಚ್‌ಒ

  • ಕುಳಿತಲ್ಲೇ ಫುಡ್‌ ಆರ್ಡರ್‌; ಬೊಜ್ಜು, ಶುಗರ್‌, ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ – ಶಾಕ್‌ ಕೊಟ್ಟ WHO, UNICEF ರಿಪೋರ್ಟ್‌

    ಕುಳಿತಲ್ಲೇ ಫುಡ್‌ ಆರ್ಡರ್‌; ಬೊಜ್ಜು, ಶುಗರ್‌, ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ – ಶಾಕ್‌ ಕೊಟ್ಟ WHO, UNICEF ರಿಪೋರ್ಟ್‌

    ಕುಳಿತಲ್ಲೇ ಆರ್ಡರ್ ಮಾಡಿದರೆ ಎಲ್ಲವೂ ಮನೆ ಬಾಗಿಲಿಗೆ ಬರುತ್ತವೆ. ಊಟ, ದಿನಸಿ, ತಿನಿಸುಗಳು ಹೀಗೆ ಬೇಕಾದ್ದನ್ನು ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಎಲ್ಲವೂ ಮೊಬೈಲ್‌ನಲ್ಲಿ ಒಂದು ಕ್ಲಿಕ್‌ನಲ್ಲಿ ಆಗುತ್ತವೆ. ನಗರ ಭಾಗದ ಜನರು ತುಂಬಾ ಬ್ಯುಸಿಯಾಗಿದ್ದಾರೆ. ತಮಗೆ ಬೇಕಾದ್ದನ್ನು ಹೊರಗಡೆ ಹೋಗಿ ತರುವಷ್ಟು ಸಮಯ ಇಲ್ಲ. ಹೀಗಾಗಿ, ಆನ್‌ಲೈನ್ ಸೇವೆಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಹೋಟೆಲ್, ರೆಸ್ಟೋರೆಂಟ್‌ಗಳಿಂದ ತಮ್ಮಿಷ್ಟದ ಊಟ-ತಿಂಡಿಗಳನ್ನು ಮನೆಗೆ ತರಿಸಿಕೊಂಡು ಸೇವಿಸುವ ಪರಿಪಾಠ ದಿನೇ ದಿನೆ ಹೆಚ್ಚುತ್ತಿದೆ. ಪರಿಣಾಮವಾಗಿ ಮನೆಯಲ್ಲೇ ಅಡುಗೆ ಮಾಡುಕೊಳ್ಳುವಂತಹ ಸಂಪ್ರದಾಯ ಕ್ಷೀಣಿಸುತ್ತಿದೆ. ತಂತ್ರಜ್ಞಾನ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆ. ಆದರೆ, ಈ ಪ್ರವೃತ್ತಿಯಿಂದ ಜನರ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮ ಕಳವಳಕಾರಿಯಾಗಿದೆ.

    ನೆರೆಹೊರೆಯ ಅಂಗಡಿಗೆ ಹೋಗುವ ಅಥವಾ ವೀಕೆಂಡ್ ಸಂತೋಷಕೂಟ ಯೋಜಿಸುವ ದಿನಗಳು ಮರೆಯಾಗಿವೆ. ಆನ್‌ಲೈನ್ ಫುಡ್ ಡೆಲಿವರಿ ಮಾಡುವ ಅಪ್ಲಿಕೇಶನ್‌ಗಳ ಹೆಚ್ಚಳವು ಜನರ ಆಹಾರ ಸೇವನೆ ಕ್ರಮವನ್ನೇ ಬದಲಾಯಿಸಿವೆ. ಆನ್‌ಲೈನ್‌ ಫುಡ್‌ ಡೆಲಿವರಿ (Online Food Delivery) ಪ್ಲಾಟ್‌ಫಾರ್ಮ್‌ಗಳ ಕಡೆಗಿನ ಜನರ ಒಲವು ಹೆಚ್ಚುತ್ತಿದೆ. ಇದರಿಂದ ಜನರ ದೈಹಿಕ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗಿದೆ. ಹೆಚ್ಚಿನ ಕ್ಯಾಲೊರಿ ಇರುವ ಆಹಾರಗಳ ಮೇಲಿನ ಅವಲಂಬನೆ ಜಾಸ್ತಿಯಾಗಿದೆ. ರುಚಿಯೆನಿಸುವ ಜಂಕ್‌ಫುಡ್ ಸೇವನೆಯೂ ಮಿತಿಮೀರಿದೆ. ಇದು ಜನರಿಗೆ ಅರಿವಾಗದಂತೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೊಜ್ಜು ಮತ್ತು ಇತರೆ ಆರೋಗ್ಯದ ಅಪಾಯಗಳು ಹೆಚ್ಚುತ್ತಿವೆ.

    WHO ಬಿಚ್ಚಿಟ್ಟ ಆತಂಕಕಾರಿ ವಿಷಯ ಏನು?
    2022 ರಲ್ಲಿ ವಿಶ್ವದಾದ್ಯಂತ ಎಂಟು ಜನರಲ್ಲಿ ಒಬ್ಬರು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಅಧಿಕ ತೂಕ ಹೊಂದಿದ್ದ 250 ಕೋಟಿ ವಯಸ್ಕರಲ್ಲಿ 89 ಕೋಟಿ ಜನರು ಬೊಜ್ಜು ಸಮಸ್ಯೆಗೆ ಒಳಗಾಗಿದ್ದಾರೆ. ಮಕ್ಕಳು ಮತ್ತು ಹದಿಹರೆಯದವರಲ್ಲಿಯೂ ಬೊಜ್ಜು ಹೆಚ್ಚಾಗಿದೆ. 5-19 ವರ್ಷ ವಯಸ್ಸಿನ ಸುಮಾರು 16 ಕೋಟಿ ಹದಿಹರೆಯದವರು ಬೊಜ್ಜು ಸಮಸ್ಯೆಗೆ ತುತ್ತಾಗಿದ್ದಾರೆ.

    ಬೊಜ್ಜು ಹೊಂದುವವರಲ್ಲಿ ಭಾರತವೇ ನಂ.1
    ಭಾರತದಲ್ಲಿಯೂ ಬೊಜ್ಜು ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದೆ. 2030 ರ ವೇಳೆಗೆ ಭಾರತವು ಜಾಗತಿಕವಾಗಿ ಅತಿ ಹೆಚ್ಚು ತೂಕ ಮತ್ತು ಬೊಜ್ಜು ಹೊಂದಿರುವ ಮಕ್ಕಳನ್ನು ಹೊಂದಬಹುದು ಎಂದು ಯುನಿಸೆಫ್ ಎಚ್ಚರಿಸಿದೆ. ಸುಮಾರು 3 ಕೋಟಿ ಹದಿಹರೆಯದವರು ಬೊಜ್ಜು ಹೊಂದುವ ನಿರೀಕ್ಷೆಯಿದೆ. ಜಗತ್ತಿನ ಒಟ್ಟು ಪ್ರಮಾಣದಲ್ಲಿ ಶೇ.11 ರಷ್ಟು ಭಾರತದ್ದೇ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೊಜ್ಜು/ತೂಕ ಹೆಚ್ಚಳದಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕೀಲು ಸಮಸ್ಯೆಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್‌ಸಿಡಿ) ಅಪಾಯವೂ ಹೆಚ್ಚುತ್ತಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

    1995ರಲ್ಲಿ ಆರಂಭ
    ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಪರಿಕಲ್ಪನೆ ಹೊಸದೇನಲ್ಲ. 1995 ರ ಆರಂಭದಲ್ಲಿ, Waiter.com (ಆಗ ವರ್ಲ್ಡ್ ವೈಡ್ ವೇಟರ್ ಎಂದು ಕರೆಯಲಾಗುತ್ತಿತ್ತು) ಎಂಬ ಪ್ಲಾಟ್‌ಫಾರ್ಮ್ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಇಂಟರ್ನೆಟ್ ಆಧಾರಿತ ಆಹಾರ ವಿತರಣೆಯನ್ನು ನೀಡಲು ಪ್ರಾರಂಭಿಸಿತು. ನಂತರ ಇತರ ಯುಎಸ್ ನಗರಗಳಿಗೆ ಇದು ವಿಸ್ತರಿಸಿತು. ಗ್ರಾಹಕರು ಡಿಜಿಟಲ್ ಮೆನುಗಳಿಗೆ ಆಕರ್ಷಿತರಾದರು. ತಮ್ಮ ಆರ್ಡರ್‌ಗಳನ್ನು ನೀಡಿದರು, ಆನ್‌ಲೈನ್ ಪಾವತಿ ಮಾಡಿದರು. ಇದು ಈಗ ಪ್ರಪಂಚದಾದ್ಯಂತ ವ್ಯಾಪಿಸಿದೆ.

    ಭಾರತದಲ್ಲಿ ಹೆಚ್ಚುತ್ತಿವೆ ಫುಡ್ ಆರ್ಡರ್‌ಗಳು
    ಕಳೆದ ದಶಕದಲ್ಲಿ ಭಾರತದಲ್ಲಿ ಈ ವಲಯವು ಉತ್ತುಂಗಕ್ಕೇರಿತು. ಹೆಚ್ಚಿದ ಸ್ಮಾರ್ಟ್‌ಫೋನ್‌ಗಳ ಬಳಕೆ, ಕಡಿಮೆ ಬೆಲೆಯ ಮೊಬೈಲ್ ಡೇಟಾ, ಆದಾಯದಲ್ಲಿನ ಹೆಚ್ಚಳ ಮೊದಲಾದ ಕಾರಣಗಳಿಗೆ ಫುಡ್ ಆರ್ಡರ್ ಪ್ರವೃತ್ತಿ ಮಿತಿಮೀರಿದೆ. 2008 ರಲ್ಲಿ ಸ್ಥಾಪನೆಯಾದ ಪ್ಲಾಟ್‌ಫಾರ್ಮ್‌ವೊಂದು, ರೆಸ್ಟೋರೆಂಟ್ ಅನ್ವೇಷಣೆ ಸೇವೆಯಾಗಿ ಪ್ರಾರಂಭವಾಯಿತು. ಆದರೆ, ಅದು 2015 ರಲ್ಲಿ ವಿತರಣಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿತು. 2014 ರಲ್ಲಿ ಪ್ರಾರಂಭವಾದ ಮತ್ತೊಂದು ಪ್ಲಾಟ್‌ಫಾರ್ಮ್‌ ತ್ವರಿತ ಸೇವೆ ಕ್ರಮದೊಂದಿಗೆ ಬಹುಬೇಗ ತನ್ನ ನೆಲೆ ವಿಸ್ತರಿಸಿಕೊಂಡಿತು. ಭಾರತದ ಆನ್‌ಲೈನ್ ಆಹಾರ ವಿತರಣಾ ಮಾರುಕಟ್ಟೆಯು 2019 ರಿಂದ 2023 ರವರೆಗೆ 2.8 ಪಟ್ಟು ಬೆಳೆದಿದೆ. ವಾರ್ಷಿಕವಾಗಿ 18% ನಷ್ಟು ಬೆಳೆಯುವ ನಿರೀಕ್ಷೆಯಿದೆ. ಇದು ಭಾರತೀಯ ಆಹಾರ ಸೇವಾ ಉದ್ಯಮದ ಬೆಳವಣಿಗೆಯ ದರಕ್ಕಿಂತ 1.5 ಪಟ್ಟು ಹೆಚ್ಚು ಎಂದು ಬೈನ್ & ಕಂಪನಿ ಹಾಗೂ ಐಪಿಒ-ಬೌಂಡ್ ಸ್ವಿಗ್ಗಿಯ 2024 ರ ವರದಿಯು ತಿಳಿಸಿದೆ. ಭಾರತದಲ್ಲಿ ಆಹಾರ ಸೇವೆಗಳ ಮಾರುಕಟ್ಟೆ 2030 ರ ವೇಳೆಗೆ ಸುಮಾರು 9-10 ಲಕ್ಷ ಕೋಟಿ ರೂ.ಗಳನ್ನು ಮುಟ್ಟುವ ನಿರೀಕ್ಷೆಯಿದೆ. ಈ ಹೊತ್ತಿಗೆ ಆನ್‌ಲೈನ್ ಆಹಾರ ವಿತರಣೆಯು ಒಟ್ಟಾರೆ ಮಾರುಕಟ್ಟೆಗೆ ಸುಮಾರು 20% ನಷ್ಟು ಕೊಡುಗೆ ನೀಡುವ ನಿರೀಕ್ಷೆಯಿದೆ. ಇದು ಆಹಾರ ಪದ್ಧತಿಯಲ್ಲಿ ಸಾಂಸ್ಕೃತಿಕ ಪರಿವರ್ತನೆಯನ್ನು ಸೂಚಿಸುತ್ತದೆ. ಒಂದು ಕಾಲದಲ್ಲಿ ಸಂದರ್ಭಗಳಿಗೆ ಮಾತ್ರ ಮೀಸಲಾಗಿದ್ದು, ಈಗ ದೈನಂದಿನ ಪರಿಪಾಠವಾಗಿ ಬದಲಾಗಿದೆ.

    ಆರೋಗ್ಯದ ಮೇಲಾಗುತ್ತಿರೋ ಎಫೆಕ್ಟ್ ಏನು?
    ಆನ್‌ಲೈನ್ ಫುಡ್ ಆರ್ಡರ್ ಪ್ರವೃತ್ತಿಯಿಂದ ಜನರ ಜೀವನಶೈಲಿಯಲ್ಲಿ ಬದಲಾವಣೆಯಾಗಿದೆ. ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಮನೆಯಲ್ಲೇ ಆರೋಗ್ಯಕರ ಅಡುಗೆ ತಯಾರಿಸುವ ಪರಿಪಾಠವೂ ಇಲ್ಲವಾಗಿದೆ. ಆರೋಗ್ಯಕರವಲ್ಲದ ಹೊರಗಡೆಯ ರುಚಿಕರ ಆಹಾರ ಮತ್ತು ಜಂಕ್‌ಫುಡ್‌ಗಳಿಗೆ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅಧಿಕ ತೂಕ, ಬೊಜ್ಜು ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಜನರು ತುತ್ತಾಗುತ್ತಿದ್ದಾರೆಂದು ಅಧ್ಯಯನಗಳು ತಿಳಿಸಿವೆ. 2024ರಲ್ಲಿ ಚೀನಾ ಅಧ್ಯಯನವೊಂದನ್ನು ನಡೆಸಿತು. ಆನ್‌ಲೈನ್‌ನಲ್ಲಿ ಹೆಚ್ಚಾಗಿ ಫುಡ್ ಆರ್ಡರ್ ಮಾಡಿ ಸೇವಿಸುವವರಲ್ಲಿ ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿದೆ. ಕುಳಿತಲ್ಲೇ ತಮಗೆ ಬೇಕಾದ್ದನ್ನು ಸುಲಭವಾಗಿ ಆರ್ಡರ್ ಮಾಡುತ್ತಾರೆ. ಇದರಿಂದ ಅತಿಯಾಗಿ ತಿನ್ನುವ ಹವ್ಯಾಸವೂ ರೂಢಿಯಾಗಿದೆ. ಹೆಚ್ಚಿನ ಕ್ಯಾಲೋರಿ ಇರುವ ತಿನಿಸುಗಳನ್ನೇ ಆಯ್ಕೆ ಮಾಡುತ್ತಾರೆ. ಪೌಷ್ಟಿಕತೆಗೆ ಬದಲಾಗಿ ಸಂಸ್ಕರಿಸಿದ ಆಹಾರಗಳನ್ನೇ ಹೆಚ್ಚಾಗಿ ಆರ್ಡರ್ ಮಾಡುತ್ತಾರೆ. ಹೀಗಾಗಿ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

    ‘ಕಳಪೆ ಆಹಾರ ಪದ್ಧತಿಗಳು: ಭಾರತದಲ್ಲಿ ಆನ್‌ಲೈನ್ ಫುಡ್ ಆರ್ಡರ್ ಕಡೆಗಿನ ಆಕರ್ಷಣೆ’ ಎಂಬ ಶೀರ್ಷಿಕೆಯಡಿ 2021 ರಲ್ಲಿ ಅಧ್ಯಯನ ನಡೆಸಲಾಗಿತ್ತು. ಜಂಕ್‌ಫುಡ್‌ನ್ನು ಹೆಚ್ಚಾಗಿ ಆರ್ಡರ್ ಮಾಡಿ ಸೇವಿಸುತ್ತಿರುವುದೇ ಜನರಲ್ಲಿ ಬೊಜ್ಜು ಸಮಸ್ಯೆಗೆ ಕಾರಣವಾಗಿದೆ. ಸಕ್ಕರೆಯುಕ್ತ ಆಹಾರದ ಅತಿಯಾದ ಸೇವನೆಯು ಹಲ್ಲುಗಳ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಮನೆ ಆಹಾರ ಸೇವಿಸುವವರಲ್ಲಿ ಯಾವುದೇ ಅನಾರೋಗ್ಯ ತೊಂದರೆಗಳು ಕಂಡುಬಂದಿಲ್ಲ ಎಂಬುದನ್ನು ಅಧ್ಯಯನ ಬಹಿರಂಗಪಡಿಸಿದೆ. ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಾಗ, ಹೆಚ್ಚಿನ ಕ್ಯಾಲೊರಿ, ಪೋಷಕಾಂಶಗಳ ಕೊರತೆ ಮತ್ತು ಅಲ್ಟ್ರಾ-ಸಂಸ್ಕರಿಸಿದ ಆಹಾರವನ್ನೇ ಜನರು ಆರಿಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಅಮೆರಿಕನ್ ಅಧ್ಯಯನದ ವರದಿಯಲ್ಲಿ, ಹೆಚ್ಚು ಆರ್ಡರ್ ಮಾಡಿದ ಆಹಾರಗಳಲ್ಲಿ ‘ಚೀಸ್ ಬರ್ಗರ್ ಮತ್ತು ಫ್ರೈಸ್, ಪಿಜ್ಜಾ, ನ್ಯಾಚೋಸ್, ಚೀಸ್‌ಕೇಕ್, ಬೇಬಿ ಬ್ಯಾಕ್ ಹಂದಿ ಪಕ್ಕೆಲುಬು, ಚಿಕನ್ ಮತ್ತು ವೇಫಲ್ ಸ್ಲೈಡರ್‌ಗಳು ಇತ್ಯಾದಿಗಳಿವೆ. ಆನ್‌ಲೈನ್ ಸೇವೆಗಳಲ್ಲಿ ಆಹಾರದ ಗುಣಮಟ್ಟ, ಸುರಕ್ಷತೆ ಇರಲ್ಲ. ಆರ್ಡರ್ ಮಾಡಿ ಆಹಾರದೊಳಗೆ ಇಲಿ, ಹಲ್ಲಿ, ಜಿರಳೆ, ಹುಳ, ಪ್ಲಾಸ್ಟಿಕ್ ಕವರ್ ಮೊದಲಾದವು ಇವೆ ಎಂದು ಗ್ರಾಹಕರು ದೂರಿರುವ ಸಾಕಷ್ಟು ಪ್ರಕರಣಗಳು ಇದಕ್ಕೆ ನಿದರ್ಶನ.

    ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಇ-ಕಾಮರ್ಸ್ ಆಹಾರ ವೇದಿಕೆಗಳಿಗೆ ಕಠಿಣ ನಿಯಮಗಳನ್ನು ರೂಪಿಸಿದೆ. ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ಗಳ 70 ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ, FSSAI ಎಲ್ಲಾ ರಶೀದಿಗಳು ಮತ್ತು ಇನ್‌ವಾಯ್ಸ್‌ಗಳಲ್ಲಿ ಪರವಾನಗಿ ಮತ್ತು ನೋಂದಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು, ಗೋದಾಮು ಮತ್ತು ಸಂಗ್ರಹಣಾ ಸೌಲಭ್ಯದ ವಿವರಗಳನ್ನು FoSCoS ಪೋರ್ಟಲ್‌ನಲ್ಲಿ ಬಹಿರಂಗಪಡಿಸಬೇಕು. ಎಲ್ಲಾ ಆಹಾರ ನಿರ್ವಾಹಕರು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣೀಕರಣ (FoSTaC) ಕ್ಕೆ ಒಳಗಾಗಬೇಕು, ಗೋದಾಮುಗಳನ್ನು ಪರವಾನಗಿ ನೀಡಬೇಕು ಮತ್ತು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶಿಸಿದೆ.

    ವೇಗದ ಜೀವನ.. ಕಾಯಿಲೆಗೆ ಆಹ್ವಾನ
    ನವಿ ಮುಂಬೈನ ಖಾರ್ಘರ್‌ನಲ್ಲಿರುವ ಮೆಡಿಕವರ್ ಆಸ್ಪತ್ರೆಯ ಡಯೆಟಿಕ್ಸ್ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಪಾಂಡಾ, ಆನ್‌ಲೈನ್ ಫುಡ್‌ ಆರ್ಡರ್‌ ಅಪ್ಲಿಕೇಶನ್‌ಗಳನ್ನು ತ್ವರಿತ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ, ಅವುಗಳ ವ್ಯಾಪಕ ಬಳಕೆಯು ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜು, ಮಧುಮೇಹ ಮತ್ತು ಜೀವನಶೈಲಿ-ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಫುಡ್‌ ಡೆಲಿವರಿ ಪ್ಲಾಟ್‌ಫಾರ್ಮ್‌ಗಳು ಅಲ್ಟ್ರಾ-ಸಂಸ್ಕರಿಸಿದ ಆಹಾರವನ್ನು ಸಾಮಾನ್ಯ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ. ಹೆಚ್ಚುತ್ತಿರುವ ಬೊಜ್ಜಿಗೆ ಅವುಗಳ ಕೊಡುಗೆ ಗಣನೀಯವಾಗಿದೆ. ಹಾಗಂತ, ಈ ಅಪ್ಲಿಕೇಶನ್‌ಗಳ ಮೇಲೆ ದೂಷಣೆ ಸರಿಯಲ್ಲ. ಜೀವನಶೈಲಿ ಆಯ್ಕೆಗಳು, ಆಹಾರ ಪದ್ಧತಿ ಮತ್ತು ವೈಯಕ್ತಿಕ ದಿನಚರಿ ಸಹ ಪ್ರಮುಖ ಪಾತ್ರವಹಿಸುತ್ತವೆ. ಹಠಾತ್‌ ನಿರ್ಧಾರ, ಬಾಯಿಚಪಲ ಮೊದಲಾದ ಕಾರಣಗಳು ಸಾಮಾನ್ಯವಾಗಿ ಜನರಿಗೆ ಹಸಿವಿಲ್ಲದಿದ್ದರೂ ತಿನ್ನಲು ಪ್ರೇರೇಪಿಸುತ್ತವೆ ಎಂದು ತಿಳಿಸಿದ್ದಾರೆ. ಫುಡ್‌ ಡೆಲಿವರಿಗೆ ಅಪ್ಲಿಕೇಶನ್‌ಗಳಿಂದ ನಿರಂತರವಾಗಿ ತಿನಿಸುಗಳು ಮತ್ತು ರಿಯಾಯಿತಿಗೆ ಸಂಬಂಧಿಸಿದ ಸಂದೇಶಗಳು ಮೊಬೈಲ್‌ಗೆ ಬರುತ್ತಿರುತ್ತವೆ. ಅದನ್ನು ನೋಡಿ ತಿನ್ನಲು ಆಸೆ ಪಡುವವರೇ ಹೆಚ್ಚು. ತಕ್ಷಣ ಬುಕ್‌ ಮಾಡಿ ಆರ್ಡರ್‌ ಪಡೆಯುವವರು ಹೆಚ್ಚಾಗಿದ್ದಾರೆ.

    ಈ ರೀತಿಯ ಆಕರ್ಷಣೆ ತಿನ್ನಲು ಹಸಿವಿಲ್ಲದಿದ್ದರೂ ತಿನ್ನುವಂತೆ ಮಾಡುತ್ತದೆ. ಇದನ್ನು ಜನರು ಮಿತಿಗೊಳಿಸಬೇಕು. ಪ್ರಜ್ಞಾಪೂರ್ವಕ ಆಯ್ಕೆಗಳು ಇರಬೇಕು. ಆಹಾರವನ್ನು ಸೇವಿಸುವ ಮೊದಲು ಅದು ಸುರಕ್ಷಿತ, ಆರೋಗ್ಯಕರ ಮತ್ತು ಪೌಷ್ಟಿಕಾಂಶಕ್ಕೆ ಸೂಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಲೇಬಲ್ ಅನ್ನು ಎಚ್ಚರಿಕೆಯಿಂದ ಓದುವುದು ಮತ್ತು ಮಾರ್ಕೆಟಿಂಗ್ ಒತ್ತಡಗಳನ್ನು ವಿರೋಧಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಜನರು ಆರೋಗ್ಯಕರ ಆಯ್ಕೆಗಳಿಗೆ ಒತ್ತು ನೀಡಬೇಕು. ಸರಿಯಾದ ಆಯ್ಕೆಗಳನ್ನು ಮಾಡಬೇಕು.

  • WHO | ಅತಿ ದೊಡ್ಡ ದಾನಿಯೇ ಹೊರಕ್ಕೆ – ಭಾರತದ ಮೇಲೂ ಎಫೆಕ್ಟ್?

    WHO | ಅತಿ ದೊಡ್ಡ ದಾನಿಯೇ ಹೊರಕ್ಕೆ – ಭಾರತದ ಮೇಲೂ ಎಫೆಕ್ಟ್?

    ಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಈ ಪೈಕಿ ಕೆಲವು ನಿರ್ಧಾರಗಳು ವಿವಾದವನ್ನು ಸೃಷ್ಟಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಹಿಂದೆ ಸರಿಯುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದು, ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಡಬ್ಲ್ಯೂಹೆಚ್‌ಒದಿಂದ ಹಿಂದೆ ಸರಿಯುವುದಕ್ಕೆ ಟ್ರಂಪ್ ಕೋವಿಡ್ ಸೇರಿದಂತೆ ಅನೇಕ ಬಲವಾದ ಕಾರಣಗಳನ್ನು ನೀಡಿದ್ದಾರೆ. ಜಾಗತಿಕ ಆರೋಗ್ಯ ವಿಚಾರದಲ್ಲಿ ಸಂಸ್ಥೆಯ ನಡೆಯನ್ನು ಪ್ರಶ್ನಿಸಿದ್ದಾರೆ. ಅವರ ನಿರ್ಧಾರದ ಹಿಂದೆ ಚೀನಾ ಕೂಡ ಟಾರ್ಗೆಟ್ ಆಗಿದೆ.

    ಸಾಂಕ್ರಾಮಿಕ ರೋಗಗಳು, ಹವಾಮಾನ-ಸಂಬಂಧಿತ ಕಾಯಿಲೆಗಳು ಮತ್ತು ತುರ್ತು ಆರೋಗ್ಯ ಸವಾಲುಗಳೊಂದಿಗೆ ಜಗತ್ತು ಹಿಡಿತ ಸಾಧಿಸುತ್ತಿರುವ ಹೊತ್ತಿನಲ್ಲಿ ಅಮೆರಿಕ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಡಬ್ಲ್ಯೂಹೆಚ್‌ಒಗೆ ಅಮೆರಿಕ ಅತಿದೊಡ್ಡ ದಾನಿ. ಆ ದೇಶವೇ ಸಂಸ್ಥೆಯಿಂದ ಹೊರನಡೆದಿರುವುದು ಸಹಜವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟçಗಳಲ್ಲಿ ಆತಂಕ ಮೂಡಿಸಿದೆ. ಇದರಿಂದ ಜಾಗತಿಕ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಭಾರತದ ಆರೋಗ್ಯ ಕ್ಷೇತ್ರದ ಮೇಲಾಗುವ ಎಫೆಕ್ಟ್ ಏನು? ಡಬ್ಲ್ಯೂಹೆಚ್‌ಒಗೆ ಚೀನಾ ಬೆಂಬಲವಾಗಿ ನಿಲ್ಲುತ್ತಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.

    ಡಬ್ಲ್ಯೂಹೆಚ್‌ಒ ಜಾಗತಿಕ ಆರೋಗ್ಯದ ಮೇಲೆ ಕೆಲಸ ಮಾಡುವ ಯುಎನ್ ಸಂಸ್ಥೆಯಾಗಿದೆ. ತಮ್ಮ ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ಬಲಪಡಿಸಲು ಜಾಗತಿಕ ದೇಶಗಳೊಂದಿಗೆ ಇದು ಕೆಲಸ ಮಾಡುತ್ತದೆ. ಡಬ್ಲ್ಯೂಹೆಚ್‌ಒ ಮಾರ್ಗಸೂಚಿಗಳು ಸರ್ಕಾರದ ನೀತಿಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ನಿರ್ದಿಷ್ಟ ರೋಗಗಳನ್ನು ನಿಭಾಯಿಸಲು ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರ ನೀಡುತ್ತದೆ.

    who

    ಟ್ರಂಪ್ ಹೇಳಿದ್ದೇನು?
    ಕೊರೊನಾ ಸಾಂಕ್ರಾಮಿಕ ಸೇರಿ ಇತರ ಅಂತರರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಡಬ್ಲ್ಯೂಹೆಚ್‌ಒ ವಿಫಲವಾಗಿದೆ. ಇದು ನಮ್ಮನ್ನು (ಅಮೆರಿಕ) ಅಳಿಸಿ ಹಾಕಲು ನೋಡಿತ್ತು. ಎಲ್ಲರೂ ನಮ್ಮನ್ನು ತುಳಿಯಲು ನೋಡಿದ್ದರು. ಆದರೆ, ಇನ್ಮುಂದೆ ಇದು ನಡೆಯುವುದಿಲ್ಲ. ಮುಂದಿನ 12 ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬರಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ ಬೃಹತ್‌ ಗಡಿಪಾರು ಕಾರ್ಯಾಚರಣೆ – 538 ಅಕ್ರಮ ವಲಸಿಗರು ಅರೆಸ್ಟ್‌, ನೂರಾರು ಮಂದಿ ಗಡಿಪಾರು

    ಟ್ರಂಪ್ ಕಾರ್ಯಕಾರಿ ಆದೇಶದಲ್ಲೇನಿದೆ?
    * ಡಬ್ಲ್ಯೂಹೆಚ್‌ಒ ನೀಡುತ್ತಿದ್ದ ಆರ್ಥಿಕ ನೆರವನ್ನು ಅಮೆರಿಕ ನಿಲ್ಲಿಸಲಿದೆ. (ಯುಎಸ್ ನಿಧಿಗಳು ಮತ್ತು ಸಂಪನ್ಮೂಲಗಳ ಯಾವುದೇ ವರ್ಗಾವಣೆ ಇರಲ್ಲ)
    * ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅಮೆರಿಕದ ಸರ್ಕಾರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವುದು.
    * ಡಬ್ಲ್ಯೂಹೆಚ್‌ಒ ಜೊತೆ ಅಗತ್ಯ ಮಾತುಕತೆ ನಡೆಸಲು ಪಾಲುದಾರರನ್ನು ಮರು ನೇಮಕ ಮಾಡುವುದು.
    * ಸಾಂಕ್ರಾಮಿಕ ರೋಗಗಳ ನಿರ್ವಹಣೆ ಒಪ್ಪಂದ ಮಾತುಕತೆಗಳು ನಿಲ್ಲಿಸಲಿದೆ. (ಸಾಂಕ್ರಾಮಿಕ ರೋಗಗಳಿಗೆ ಪ್ರತಿರೋಧ ಒಡ್ಡಲು ದೇಶಗಳನ್ನು ಸಜ್ಜುಗೊಳಿಸುವುದು. ಸಾಂಕ್ರಾಮಿಕ ರೋಗ ಸಂಭವಿಸಿದರೆ ಜಾಗತಿಕ ಸಹಕಾರಕ್ಕಾಗಿ ಚೌಕಟ್ಟನ್ನು ರಚಿಸುವುದು. ಔಷಧಗಳು ಮತ್ತು ಲಸಿಕೆಗಳಂತಹ ವೈದ್ಯಕೀಯ ಸಹಕಾರ ನೀಡುವ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವುದು ಒಪ್ಪಂದದ ಗುರಿಯಾಗಿತ್ತು.)

    ಅತಿ ದೊಡ್ಡ ದಾನಿ ಅಮೆರಿಕ
    ಅಮೆರಿಕವು ಡಬ್ಲ್ಯೂಹೆಚ್‌ಒಗೆ ಅತಿ ದೊಡ್ಡ ದಾನಿಯಾಗಿತ್ತು. ಹೆಚ್ಚಿನ ಆರ್ಥಿಕ ಬೆಂಬಲ ಯುಎಸ್‌ನಿಂದಲೇ ಸಿಗುತ್ತಿತ್ತು. ವಿಶ್ವ ಆರೋಗ್ಯ ಸಂಸ್ಥೆ ಒಟ್ಟು ನಿಧಿಯ 18% ನೆರವನ್ನು ಅಮೆರಿಕ ನೀಡುತ್ತಿತ್ತು. ಹೀಗಿರುವಾಗ, ಅಮೆರಿಕ ಹೊರನಡೆಯುವುದು ಡಬ್ಲ್ಯೂಹೆಚ್‌ಒ ಮೇಲೆ ಭಾರಿ ಆರ್ಥಿಕ ಪರಿಣಾಮ ಬೀರುತ್ತದೆ. 140 ಕೋಟಿ ಜನಸಂಖ್ಯೆ ಹೊಂದಿರುವ ದೇಶ ಚೀನಾ. ಅಮೆರಿಕ 300% ನಷ್ಟು ಜನಸಂಖ್ಯೆಯನ್ನು ಈ ದೇಶ ಹೊಂದಿದೆ. ಆದರೆ, ಡಬ್ಲ್ಯೂಹೆಚ್‌ಒ ಸುಮಾರು 90% ನಷ್ಟು ಕಡಿಮೆ ಆರ್ಥಿಕ ನೆರವು ನೀಡುತ್ತದೆ ಎಂಬುದು ಟ್ರಂಪ್ ಕಾರ್ಯಕಾರಿ ಆದೇಶದ ವಾದ.

    ನಿಧಿಗೆ ಹಣ ಹೇಗೆ ಬರುತ್ತೆ?
    ಆರೋಗ್ಯ ಸಂಸ್ಥೆಯ ನಿಧಿಯು ಮೂಲಭೂತವಾಗಿ ಎರಡು ರೀತಿಯಲ್ಲಿ ಬರುತ್ತದೆ. ಒಂದು- ಅದರ ಎಲ್ಲಾ ಸದಸ್ಯ ರಾಷ್ಟ್ರಗಳಿಂದ ಕಡ್ಡಾಯವಾಗಿ ನಿಧಿ ಸಂಗ್ರಹವಾಗುತ್ತದೆ. ಎರಡು- ವಿವಿಧ ದೇಶಗಳು ಮತ್ತು ಸಂಸ್ಥೆಗಳು ಸ್ವಯಂಪ್ರೇರಿತ ಕೊಡುಗೆಗಳನ್ನು ನೀಡುತ್ತವೆ. ಅತಿದೊಡ್ಡ ಪಾವತಿದಾರನಾಗಿರುವ ಅಮೆರಿಕ 22.05% ಕೊಡುಗೆ ನೀಡುತ್ತದೆ. ಚೀನಾ 15% ಆರ್ಥಿಕ ನೆರವು ಕೊಡುತ್ತದೆ. ಆರೋಗ್ಯ ಸಂಸ್ಥೆಗೆ ಹರಿದು ಬರುವ ಒಟ್ಟು 578 ಮಿಲಿಯನ್ ಯುಎಸ್ ಡಾಲರ್‌ನಲ್ಲಿ ಅಮೆರಿಕವೇ ಸರಿಸುಮಾರು 138 ಮಿಲಿಯನ್ ಡಾಲರ್ ನೆರವು ನೀಡುತ್ತಿದೆ. ಚೀನಾ 87.6 ಮಿಲಿಯನ್ ಡಾಲರ್ ಕೊಡುಗೆ ಕೊಡುತ್ತಿದೆ. ಸ್ವಯಂಪ್ರೇರಿತ ಕೊಡುಗೆಗಳಲ್ಲಿಯೂ ಅಮೆರಿಕವೇ ದೊಡ್ಡ ದಾನಿಯಾಗಿದ್ದು, 2023 ರಲ್ಲಿ ಒಟ್ಟು ಕೊಡುಗೆಗಳಲ್ಲಿ ಸುಮಾರು 13% (356.3 ಮಿಲಿಯನ್ ಡಾಲರ್) ಪಾಲನ್ನು ಹೊಂದಿದೆ. ಚೀನಾ ಒಟ್ಟು ಕೊಡುಗೆಗಳು 0.14% (3.9 ಮಿಲಿಯನ್ ಡಾಲರ್) ಮಾತ್ರ. ಎರಡನೆಯ ಅತಿ ದೊಡ್ಡ ಸ್ವಯಂಪ್ರೇರಿತ ಕೊಡುಗೆದಾರರೆಂದರೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್.

    ಯುಎಸ್ ಅಧ್ಯಕ್ಷೀಯ ಚುನಾವಣೆಗಳ ಕಾರಣ ಅನಿಶ್ಚಿತತೆಯಿಂದ ಕಳೆದ ವರ್ಷ ಡಬ್ಲ್ಯೂಹೆಚ್‌ಒ ಹೆಚ್ಚು ಸ್ವಯಂಪ್ರೇರಿತ ಕೊಡುಗೆಗಳನ್ನು ಸ್ವೀಕರಿಸಲು ಕಾರಣವಾಯಿತು. ನವೆಂಬರ್‌ನಲ್ಲಿ ಕೊನೆಗೊಂಡ 2024 ರ ಫಂಡಿಂಗ್ ಸುತ್ತಿನಲ್ಲಿ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಸ್ಪೇನ್ 1.7 ಬಿಲಿಯನ್ ಡಾಲರ್ ನೀಡುವುದಾಗಿ ವಾಗ್ದಾನ ಮಾಡಿದ್ದವು. ಇದು 2025-28 ರ ನಡುವೆ ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯವಿರುವ 7.1 ಡಾಲರ್ ಶತಕೋಟಿಯ 53% ಅನ್ನು ಡಬ್ಲ್ಯೂಹೆಚ್‌ಒ ಪಡೆಯಲು ಕಾರಣವಾಯಿತು. ಇದು 2020 ರಲ್ಲಿ ಅದರ ಹಿಂದಿನ ನಾಲ್ಕು ವರ್ಷಗಳ ಅವಧಿಗೆ ಪಡೆದುಕೊಂಡ 17% ಕ್ಕಿಂತ ಹೆಚ್ಚಾಗಿದೆ.

    ಡಬ್ಲ್ಯೂಹೆಚ್‌ಒ ಪ್ರತಿಕ್ರಿಯೆ ಏನು?
    ಅಮೆರಿಕದ ಈ ನಿರ್ಧಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ವಿಷಾದಿಸಿದೆ. ಯುಎಸ್ ತನ್ನ ನಿಲುವನ್ನು ಪುನರ್‌ವಿಮರ್ಶೆಗೆ ಒಳಪಡಿಸುತ್ತದೆ ಎಂದು ನಂಬಿದ್ದೇವೆ. ಅಮೆರಿಕನ್ನರು ಸೇರಿದಂತೆ ವಿಶ್ವದ ಜನರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವಲ್ಲಿ ಡಬ್ಲ್ಯೂಹೆಚ್‌ಒ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಯುಎಸ್ ಮತ್ತು ಇತರೆ ಸದಸ್ಯ ರಾಷ್ಟ್ರಗಳ ಭಾಗವಹಿಸುವಿಕೆಯಿಂದ ಡಬ್ಲ್ಯೂಹೆಚ್‌ಒ ಕಳೆದ 7 ವರ್ಷಗಳಲ್ಲಿ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಹೇಳಿಕೊಂಡಿದೆ.

    ಭಾರತದ ಮೇಲೆ ಬೀಳುತ್ತಾ ಎಫೆಕ್ಟ್?
    ಡಬ್ಲ್ಯೂಹೆಚ್‌ಒ ತನ್ನ ನಿಧಿಯ ಗಮನಾರ್ಹ ಪ್ರಮಾಣವನ್ನು ಕಳೆದುಕೊಳ್ಳುವುದರಿಂದ, ಭಾರತ ಸೇರಿದಂತೆ ಅನೇಕ ದೇಶಗಳ ಆರೋಗ್ಯ ವಲಯದಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. ಹೆಚ್‌ಐವಿ-ಮಲೇರಿಯಾ-ಕ್ಷಯರೋಗ, ಸೂಕ್ಷ್ಮಾಣುಜೀವಿಗಳ ವಿರುದ್ಧದ ಪ್ರತಿರೋಧ ಮೊದಲಾದ ಭಾರತ ಸರ್ಕಾರದ ಹಲವಾರು ಆರೋಗ್ಯ ಕಾರ್ಯಕ್ರಮಗಳಲ್ಲಿ ಡಬ್ಲ್ಯೂಹೆಚ್‌ಒ ಭಾಗವಹಿಸುತ್ತದೆ. ಮುಖ್ಯವಾಗಿ, ಇದು ದೇಶದ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಂಸ್ಥೆಯ ತಂಡಗಳು ಲಸಿಕೆ ವ್ಯಾಪ್ತಿಯನ್ನು ಸಹ ಮೇಲ್ವಿಚಾರಣೆ ಮಾಡುತ್ತವೆ. ಅಷ್ಟೇ ಅಲ್ಲ, ಡಬ್ಲ್ಯೂಹೆಚ್‌ಒ ಪ್ರಪಂಚದಾದ್ಯಂತದ ದೇಶಗಳ ಆರೋಗ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತದೆ. ನಿಧಿ ಕಡಿತವು ಈ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಂಸ್ಥೆಗೆ ಸಾಧ್ಯವಾಗುವುದಿಲ್ಲ ಎಂದು ಭಾರತದ ಸಾರ್ವಜನಿಕ ಆರೋಗ್ಯ ತಜ್ಞರು ವಿಶ್ಲೇಷಿಸಿದ್ದಾರೆ.

    ಅಮೆರಿಕ ತಜ್ಞರು ಹೊರಕ್ಕೆ?
    ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಮೆರಿಕ ತಜ್ಞರು ಹೊರನಡೆಯುವ ಸಾಧ್ಯತೆ ಕೂಡ ಇದೆ. ಯುಎಸ್ ಪರಿಣಿತರ ನಷ್ಟವು ಡಬ್ಲ್ಯೂಹೆಚ್‌ಒ ಪಾತ್ರದ ಮೇಲೆ ಪರಿಣಾಮ ಬೀರಲಿದೆ. ವೈರಸ್, ದೀರ್ಘ ಕಾಯಿಲೆ, ಸಾಂಕ್ರಾಮಿಕ ರೋಗಗಳು ಮೊದಲಾದವುಗಳಿಗೆ ಸಂಬಂಧಿಸಿದಂತೆ ಡಬ್ಲ್ಯೂಹೆಚ್‌ಒ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಅದನ್ನು ಜಾಗತಿಕ ದೇಶಗಳು ತಮ್ಮ ಸ್ಥಳೀಯ ಕಾರ್ಯಕ್ರಮಗಳಿಗೆ (ಆರೋಗ್ಯಕ್ಕೆ ಸಂಬಂಧಿಸಿ) ಬಳಸಿಕೊಳ್ಳುತ್ತವೆ. ಈ ಮಾರ್ಗಸೂಚಿಗಳನ್ನು ಸಾಮಾನ್ಯವಾಗಿ ಎಲ್ಲಾ ಪ್ರಕಟಿತ ಪುರಾವೆಗಳನ್ನು ಸಂಗ್ರಹಿಸಿ, ಅವುಗಳನ್ನು ಶ್ರೇಣೀಕರಿಸಿ ನಂತರ ತಜ್ಞರ ಸಮಿತಿಗಳಲ್ಲಿಟ್ಟು ಚರ್ಚಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ರೋಗ ಸ್ಥಳೀಯತೆ ಮತ್ತು ಅಲ್ಲಿ ನಡೆಸುವ ಸಂಶೋಧನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮಿತಿಗಳನ್ನು ರಚಿಸಲಾಗುತ್ತದೆ. ಬೇರೆ ಬೇರೆ ದೇಶಗಳ ಪ್ರತಿನಿಧಿಗಳೂ ಆ ಸಮಿತಿಯಲ್ಲಿರುತ್ತದೆ. ಯುಎಸ್ ತಜ್ಞರು ಅಂತಹ ಹಲವಾರು ಸಮಿತಿಗಳ ಭಾಗವಾಗಿದ್ದಾರೆ. ಅವರನ್ನು ಹೊರತೆಗೆದರೆ ಡಬ್ಲ್ಯೂಹೆಚ್‌ಒ ಕೆಲಸದ ಮೇಲೆ ಪರಿಣಾಮ ಬೀರುತ್ತದೆ.

    ಸದಸ್ಯ ರಾಷ್ಟ್ರಗಳು ಹೊರಬರಬಹುದೇ?
    ಡಬ್ಲ್ಯೂಹೆಚ್‌ಒನ ಸಂವಿಧಾನದಲ್ಲಿ ಸದಸ್ಯ ರಾಷ್ಟ್ರಗಳು ಹೊರಬರುವುದಕ್ಕೆ ಯಾವುದೇ ಅವಕಾಶವಿಲ್ಲ. ಆದಾಗ್ಯೂ, 1948 ರಲ್ಲಿ ಸಂಸ್ಥೆಗೆ ಸೇರುವ ಸಮಯದಲ್ಲಿ ಯುಎಸ್ ಕಾಂಗ್ರೆಸ್ ಒಂದು ಷರತ್ತನ್ನು ಹಾಕಿತು. ಒಂದು ವರ್ಷದ ಸೂಚನೆಯನ್ನು ನೀಡಿದ ನಂತರ ಮತ್ತು ಪ್ರಸಕ್ತ ವರ್ಷದ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಿದ ನಂತರ ದೇಶವು ಸಂಸ್ಥೆಯಿAದ ಹೊರನಡೆಯಬಹುದು. ಹೊರನಡೆಯುವ ಪ್ರಕ್ರಿಯೆ ಕೂಡ ತಕ್ಷಣಕ್ಕೆ ಆಗುವುದಿಲ್ಲ. ಒಂದು ವರ್ಷದವರೆಗಿನ ಅವಧಿ ಇರುತ್ತದೆ. ಈ ಅವಧಿಯಲ್ಲಿ ಯುಎಸ್‌ನ ನಿರ್ಧಾರದ ಮರುಪರಿಶೀಲನೆಗೆ ಅವಕಾಶವೂ ಇರುತ್ತದೆ.

    ಅಮೆರಿಕ ಎಷ್ಟು ಮುಖ್ಯ?
    1948 ರಲ್ಲಿ ಸ್ಥಾಪನೆಯಾದಾಗಿನಿಂದ ಡಬ್ಲ್ಯೂಹೆಚ್‌ಒಗೆ ಮೂಲಾಧಾರವಾಗಿ ವಾಷಿಂಗ್ಟನ್ ಸೇವೆ ಸಲ್ಲಿಸಿದೆ. ಸಂಸ್ಥೆಯ ಅತಿದೊಡ್ಡ ಏಕೈಕ ದಾನಿಯಾಗಿದೆ. ಸಂಸ್ಥೆಯ 2023 ಬಜೆಟ್‌ನ 18% ರಷ್ಟು ಕೊಡುಗೆಯನ್ನು ಅಮೆರಿಕ ನೀಡಿತು. ಇದು ವಾರ್ಷಿಕವಾಗಿ ನೂರಾರು ಮಿಲಿಯನ್ ಡಾಲರ್‌ಗಳಷ್ಟಿದೆ. ಈ ನಿಧಿಗಳು ರೋಗಗಳನ್ನು ನಿರ್ಮೂಲನೆ ಮಾಡುವುದರಿಂದ ಹಿಡಿದು ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ತುರ್ತುಸ್ಥಿತಿಗಳಿಗೆ ಸ್ಪಂದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. 2024-2025ರಲ್ಲಿ ಡಬ್ಲೂö್ಯಹೆಚ್‌ಒನ ಬಜೆಟ್ 6.8 ಶತಕೋಟಿ ಡಾಲರ್‌ನಷ್ಟಿದೆ. ಅದರಲ್ಲಿ ಯುಎಸ್ ಕೊಡುಗೆಗಳು 22% ಕಡ್ಡಾಯ ನಿಧಿಯನ್ನು ಹೊಂದಿವೆ. ಈ ಪ್ರಮಾಣದ ಆರ್ಥಿಕ ಬೆಂಬಲವನ್ನು ಜಗತ್ತಿನ ಯಾವ ದೇಶವೂ ನೀಡಿಲ್ಲ.

    ಡಬ್ಲ್ಯೂಹೆಚ್‌ಒ ಕೈ ಹಿಡಿಯುತ್ತ ಭಾರತ, ದಕ್ಷಿಣ ದೇಶಗಳು?
    ಯುನೈಟೆಡ್ ಸ್ಟೇಟ್ಸ್ ಸೃಷ್ಟಿಸಿದ ನಿರ್ವಾತವನ್ನು ಚೀನಾ (China) ಮತ್ತು ಭಾರತ (India) ಸೇರಿದಂತೆ ಜಾಗತಿಕ ದಕ್ಷಿಣದ ದೇಶಗಳು ತುಂಬುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ‘ಪ್ರಧಾನಿ ಮೋದಿ ಅವರು ಜನರಿಗಾಗಿ ಸಮಗ್ರ ಆರೋಗ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಉದಾಹರಣೆಯನ್ನು ನೀಡುತ್ತಿದ್ದಾರೆ. ಜಾಗತಿಕ ದಕ್ಷಿಣದ ಧ್ವನಿಯಾಗಿ ಭಾರತವು ಅಗ್ರಸ್ಥಾನದಲ್ಲಿದೆ. ಹೊಸ ಜಾಗತಿಕ ಕ್ರಮದಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಇತರರ ದೇಶಗಳು ನಮಗೆ ಬೇಕು. ಅವರ ಜೊತೆಗೆ ಇತರೆ ದೇಶಗಳನ್ನು ಮೇಲೆತ್ತುವ ಕಾರ್ಯ ಆಗಬೇಕಿದೆ’ ಎಂದು ತಜ್ಞರಾದ ಡಾ. ಅಲಕಿಜಾ ಅಭಿಪ್ರಾಯಪಟ್ಟಿದ್ದಾರೆ.

     

  • ಚೀನಾ ವಿರುದ್ಧ ಅಸಮಾಧಾನ – WHO ನಿಂದ ಹೊರನಡೆಯಲು ಟ್ರಂಪ್‌ ನಿರ್ಧಾರ?

    ಚೀನಾ ವಿರುದ್ಧ ಅಸಮಾಧಾನ – WHO ನಿಂದ ಹೊರನಡೆಯಲು ಟ್ರಂಪ್‌ ನಿರ್ಧಾರ?

    ಮೆರಿಕದ (America) ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ (Donald Trump) ಅಧಿಕಾರ ವಹಿಸಿಕೊಳ್ಳುವ ಮುನ್ನವೇ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ನೆರೆಯ ರಾಷ್ಟ್ರಗಳನ್ನು ಎದುರುಹಾಕಿಕೊಳ್ಳುವ ದುಸ್ಸಾಹಸಕ್ಕೂ ಮುಂದಾಗುತ್ತಿದ್ದಾರೆ. ಪನಾಮ ಕಾಲುವೆ ವಿಚಾರದಲ್ಲಿ ಚೀನಾವನ್ನು ಎಳೆದು ತಂದಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರಕ್ಕೂ ಟ್ರಂಪ್‌ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

    ಮುಂದಿನ ತಿಂಗಳು ಶ್ವೇತಭವನದಲ್ಲಿ ಟ್ರಂಪ್‌ ತಮ್ಮ 2ನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ. ಈ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸುವುದು ಟ್ರಂಪ್‌ ಆದ್ಯತೆಯಾಗಿದೆ. ಅವುಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯುವುದೂ ಒಂದಾಗಿದೆ. ಟ್ರಂಪ್‌ ತಮ್ಮ ಮೊದಲ ಅವಧಿಯಲ್ಲೂ ಈ ನಿರ್ಧಾರ ಪ್ರಕಟಿಸಿದ್ದರು. ಈ ಬಾರಿ ಅದನ್ನು ಸಾಕಾರಗೊಳಿಸಬೇಕೆಂಬ ನಿಲುವು ಹೊಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಚೀನಾ ಮಾತನ್ನು ಕೇಳುತ್ತಿದೆ, ಅದರ ತಪ್ಪುಗಳನ್ನು ಮುಚ್ಚಿಡುತ್ತಿದೆ ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿರುವ ಸಹಾಯಧನ ನಿಲ್ಲಿಸಲು ಟ್ರಂಪ್‌ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಂತರ ಕಾಯ್ದುಕೊಂಡರೆ, ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ವಿವಾದದ ಹಿನ್ನೆಲೆ ಏನು ಅನ್ನೋದನ್ನ ಮೊದಲು ತಿಳಿಯೋಣ… ಇದನ್ನೂ ಓದಿ: 179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ

    who

    ಟ್ರಂಪ್‌ ಸಿಟ್ಟು ಈಗಿನದ್ದಲ್ಲ
    ಟ್ರಂಪ್‌ ಮೊದಲ ಅಧಿಕಾರವಧಿಯಲ್ಲೂ ವಿಶ್ವ ಆರೋಗ್ಯ ಸಂಸ್ಥೆಯನ್ನು ದೂರವಿಡಲು ಪ್ರಯತ್ನಿಸಿದ್ದರು. ಚೀನಾದಿಂದಾಗಿ ಕೋವಿಡ್ ಪ್ರಪಂಚದಾದ್ಯಂತ ಹರಡಿತ್ತು. ಇದು ತಿಳಿದಿದ್ದರೂ ಡಬ್ಲ್ಯೂಹೆಚ್‌ಓ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿಲ್ಲ. ಇದಕ್ಕೆ ಕಾರಣ ಚೀನಾ ಎಂದು ಗೊತ್ತಿದ್ದರೂ, ಚೀನಾ ಹೆಸರು ಪ್ರಸ್ತಾಪಿಸಲಿಲ್ಲ. WHO ಚೀನಾ ಕಡೆಗೆ ಹೆಚ್ಚು ಒಲವು ತೋರುತ್ತಿರುವುದರಿಂದ ಈಗಲೂ ವಿಶ್ವದ ಹಲವು ದೇಶಗಳನ್ನು ಅಸಮಾಧಾನಗೊಳಿಸಿದೆ. ಟ್ರಂಪ್‌ ಕೊರೊನಾವನ್ನು ʻಚೀನಾ ವೈರಸ್‌ʼ ಎಂದೇ ಕರೆದಿದ್ದರು. WHO ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಹಾಗಾಗಿ ಟ್ರಂಪ್‌ನ ಅಸಮಾಧಾನ ಹಾಗೆಯೇ ಉಳಿದಿದೆ.

    ತಾತ್ಕಾಲಿಕ ಅಂತರ ಕಾಯ್ದುಕೊಂಡಿದ್ದ ಟ್ರಂಪ್‌
    ಚೀನಾ ಮಾತನ್ನು ಕೇಳುತ್ತಿದೆ ಎಂಬ ಅಸಮಾಧಾನದಿಂದಲೇ ಅಮೆರಿಕ 2020ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾಗುತ್ತಿದ್ದ ಧನಸಹಾಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಡಬ್ಲ್ಯೂಹೆಚ್‌ಒನಲ್ಲಿ ರಚನಾತ್ಮಕ ಸುಧಾರಣೆ ಜಾರಿಗೆಯಾಗುವವರೆಗೂ ಅಮೆರಿಕ ಈ ಸಂಸ್ಥೆಗೆ ಹಣ ಸಹಾಯ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿತ್ತು. ಅಲ್ಲದೇ ಮುಂದಿನ ನಾಲ್ಕು ತಿಂಗಳಲ್ಲಿ ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವುದಾಗಿಯೂ ಔಪಚಾರಿಕವಾಗಿ ಘೋಷಣೆ ಮಾಡಿತ್ತು. ಅದೇ ವರ್ಷದಲ್ಲಿ ಕೊರೊನಾ ವೈರಸ್‌ ವಿಶ್ವಾದ್ಯಂತ ಹರಡಿತು. ಇದನ್ನೂ ಓದಿ: ಶತಾಯುಷಿ, ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ನಿಧನ

    ಗಮನಿಸಬೇಕಾದ ಸಂಗತಿಯೆಂದರೆ, ಆರಂಭದಿಂದಲೂ ಅಮೆರಿಕವೇ ವಿಶ್ವ ಆರೋಗ್ಯ ಸಂಸ್ಥೆಗೆ ಅತ್ಯಧಿಕ ಧನಸಹಾಯ ಮಾಡುತ್ತಾ ಬಂದಿತ್ತು. ಆದರೂ ವಿಶ್ವ ಆರೋಗ್ಯ ಸಂಸ್ಥೆ ಕಡಿಮೆ ದೇಣಿಗೆ ನೀಡುತ್ತಿದ್ದ ಚೀನಾ ಪರ ಇದೆ, ಅದರ ತಪ್ಪುಗಳನ್ನು ಮುಚ್ಚಿಡುತ್ತಿದೆ ಎಂಬುದು ಟ್ರಂಪ್‌ ಆರೋಪವಾಗಿತ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆಗೆ ಹಣ ಸಹಾಯ ನಿಲ್ಲಿಸುವುದು ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಹಲವು ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಉದ್ಯಮಿ ಬಿಲ್‌ಗೇಟ್ಸ್‌ ಕೂಡ, ವಿಶ್ವ ಆರೋಗ್ಯ ಸಂಸ್ಥೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಅಧಿಕವಿದೆ, ಡಬ್ಲೂಎಚ್‌ಓ ಪ್ರಯತ್ನದಿಂದಾಗಿ ಕೋವಿಡ್‌-19 ಹರಡುವಿಕೆ ತಗ್ಗುತ್ತಿದೆ ಎಂದು ಹೇಳಿದ್ದರು. ಈ ವೇಳೆ ಟ್ರಂಪ್‌ ವಿರುದ್ಧ ಹಲವು ದೇಶಗಳು ಆಕ್ರೋಶ ಹೊರಹಾಕಿದ್ದವು.

    ಮುಂದಿನ ಅವಧಿಯಲ್ಲಿ ಜೋ ಬೈಡನ್‌ ಅವರು ಅಧಿಕಾರ ವಹಿಸಿಕೊಂಡಾಕ್ಷಣ, ಟ್ರಂಪ್‌ ಅವರ ನಿರ್ಧಾರವನ್ನು ಹಿಂತೆದುಕೊಂಡರು. ಅಮೆರಿಕವನ್ನು ಡಬ್ಲ್ಯೂಹೆಚ್‌ಒಗೆ ಪುನಃ ಸೇರಿಸಿಕೊಂಡರು. ಈಗ 2ನೇ ಅವಧಿಗೆ ನಿಯೋಜಿತ ಅಧ್ಯಕ್ಷರಾಗಿರುವ ಡೊನಾಲ್ಡ್‌ ಟ್ರಂಪ್‌ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯಲಿದ್ದಾರೆ ಎಂದು ಹೇಳಲಾಗಿದೆ. ಆದ್ರೆ ಟ್ರಂಪ್‌ ಈ ಕುರಿತು ಇತ್ತೀಚೆಗೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಅದು ಅವರ ಹಳೆಯ ನಡವಳಿಕೆ ಎಂದು ಕೆಲವು ವರದಿಗಳು ಹೇಳಿವೆ. ಇದನ್ನೂ ಓದಿ: ಮಹಿಳೆಯರನ್ನು ಉದ್ಯೋಗದಿಂದ ಕೈಬಿಡಿ – ಎನ್‌ಜಿಒಗಳಿಗೆ ತಾಲಿಬಾನ್‌ ಎಚ್ಚರಿಕೆ

    ವಿಶ್ವ ಆರೋಗ್ಯ ಸಂಸ್ಥೆ ಜೊತೆಗಿನ ವಿವಾದ ಏನು?
    ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವಸಂಸ್ಥೆಯ ಒಂದು ಭಾಗವಾಗಿದೆ. 1948ರಲ್ಲಿ ಜಿನೀವಾದಲ್ಲಿ ಇದಕ್ಕೆ ಅಡಿಪಾಯ ಹಾಕಲಾಯಿತು. ಆರೋಗ್ಯ ಸಂಬಂಧಿತ ಸಂಶೋಧನೆಗಳನ್ನು ನೋಡಿಕೊಳ್ಳುವುದು, ಕೋವಿಡ್‌ನಂತಹ ಸಾಂಕ್ರಾಮಿಕ ಸಂರ್ಭದಲ್ಲಿ ಆರೋಗ್ಯ ತುರ್ತುಪರಿಸ್ಥಿತಿಗಳನ್ನು ನಿಭಾಯಿಸುವುದು ಇದರ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಇದರಲ್ಲಿ ವಿಶ್ವಮಟ್ಟದಲ್ಲಿ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತದೆ. ಹಾಗೂ ಅಗತ್ಯವಿರುವ ದೇಶಗಳಿಗೆ ಆರೋಗ್ಯ ಸೌಲಭ್ಯ ಒದಗಿಸುವುದು ಸಹ ಇದರ ಕೆಲಸವಾಗಿದೆ. ಪ್ರಸ್ತುತ ವಿಶ್ವ ಆರೋಗ್ಯಸಂಸ್ಥೆ 194 ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದೆ.

    WHO ನಿಂದ ಅಮೆರಿಕ ಹೊರನಡೆದರೆ ಏನಾಗುತ್ತದೆ?
    * ಕೋವಿಡ್ ನಂತರ, ಜಗತ್ತು ಮತ್ತೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಬಹುದು ಎಂಬ ಆತಂಕ ನಿರಂತರವಾಗಿದೆ.
    * ಅಮೆರಿಕ ಮಾತ್ರವಲ್ಲದೇ ಅಮೆರಿಕ ಹಾದಿಯನ್ನು ಅನುಸರಿಸುವ ದೇಶಗಳ ಮೇಲೂ ಪರಿಣಾಮ ಬೀರುತ್ತದೆ.
    * ಜಗತ್ತು ಈಗ ಯುದ್ಧದ ಭಯದಲ್ಲಿದೆ. ಅನೇಕ ರಾಷ್ಟ್ರಗಳು ರಕ್ಷಣಾವೆಚ್ಚಗಳನ್ನು ಹೆಚ್ಚಿಸುತ್ತಿವೆ. ಹೀಗಾಗಿ ಅಮೆರಿಕವನ್ನು ತೋರಿಸಿ ಇತರ ರಾಷ್ಟ್ರಗಳು ಡಬ್ಲ್ಯೂಹೆಚ್‌ಒಗೆ ಧನಸಹಾಯ ನಿಲ್ಲಿಸಬಹುದು.
    * ಅಲ್ಲದೇ ಅಮೆರಿಕ ಹೊರನಡೆದು ಚೀನಾ ಆ ಸ್ಥಾನವನ್ನು ಪಡೆದುಕೊಂಡರೆ, ಸರ್ವಾಧಿಕಾರಿ ಧೋರಣೆ ನಡೆಯಬಹುದು. ಚೀನಾ ತನ್ನ ಇಚ್ಛೆಯಂತೆ ಅದರ ನೀತಿಗಳನ್ನು ಅಲ್ಲಿಯೂ ಜಾರಿಗೆ ತರುತ್ತದೆ. ಇದು ವಿಶ್ವದ ಇತರ ರಾಷ್ಟ್ರಗಳಿಗೆ ಅಪಾಯ ಎಂದು ಹೇಳಲಾಗಿದೆ.

  • 5 ಲಕ್ಷ ಅಲ್ಲ, 40 ಲಕ್ಷ ಭಾರತೀಯರು ಕೋವಿಡ್‌ನಿಂದ ಸಾವು: ಕೇಂದ್ರಕ್ಕೆ ರಾಹುಲ್‌ ತರಾಟೆ

    5 ಲಕ್ಷ ಅಲ್ಲ, 40 ಲಕ್ಷ ಭಾರತೀಯರು ಕೋವಿಡ್‌ನಿಂದ ಸಾವು: ಕೇಂದ್ರಕ್ಕೆ ರಾಹುಲ್‌ ತರಾಟೆ

    ನವದೆಹಲಿ: ಕೋವಿಡ್ ಸಮಯದಲ್ಲಿ 5 ಲಕ್ಷ ಅಲ್ಲ, ಸರ್ಕಾರದ ನಿರ್ಲಕ್ಷ್ಯದಿಂದಾಗಿ 40 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

    ಈ ಬಗ್ಗೆ ಟ್ವಿಟ್ಟರ್‌ನಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸತ್ಯವನ್ನು ಮಾತನಾಡುವುದಿಲ್ಲ, ಇತರರಿಗೂ ಮಾತನಾಡಲು ಬಿಡುವುದಿಲ್ಲ. ಕೋವಿಡ್ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಯಾರೂ ಸತ್ತಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹನುಮ ಜಯಂತಿ ವೇಳೆ ಹಿಂಸಾಚಾರ – ಯುಪಿಯಲ್ಲಿ ಕಟ್ಟೆಚ್ಚರ

    ನಾನು ಮೊದಲು ಕೂಡ ಹೇಳಿದ್ದೆ. ಕೋವಿಡ್ ಸಮಯದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ 5 ಲಕ್ಷ ಅಲ್ಲ, 40 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇದು ನಿಮ್ಮ ಜವಾಬ್ದಾರಿ ಮೋದಿ ಜಿ, ಕೋವಿಡ್‌ನಿಂದಾಗಿ ಸಾವನ್ನಪ್ಪಿರುವ ಎಲ್ಲಾ ಕುಟುಂಬದವರಿಗೂ ತಲಾ 4 ಲಕ್ಷ ರೂ. ಪರಿಹಾರ ನೀಡಬೇಕು ಎಂದು ರಾಹುಲ್ ಗಾಂಧಿ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

    ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್‌ಒ) ಶನಿವಾರ ಕೋವಿಡ್-19 ನಿಂದ ಮೃತಪಟ್ಟವರ ಸಂಖ್ಯೆಯನ್ನು ಅಂದಾಜಿಸಲು ಭಾರತಕ್ಕೆ ತಿಳಿಸಿತ್ತು. ಭಾರತದ ಭೌಗೋಳಿಕ ಗಾತ್ರ ಹಾಗೂ ಜನಸಂಖ್ಯೆ ಆಧಾರದ ಮೇಲೆ ಸಾವಿನ ಅಂಕಿ ಅಂಶವನ್ನು ಅಂದಾಜು ಮಾಡಲು ಬಳಸಿರುವ ಗಣಿತದ ಮಾದರಿಯನ್ನು ಪರಿಶೀಲಿಸಲು ತಿಳಿಸಿತ್ತು. ಇದನ್ನೂ ಓದಿ: ದೇಶದಲ್ಲಿ ಹಿಜಬ್‌ಗೆ ಯಾವುದೇ ನಿಷೇಧವಿಲ್ಲ: ಕೇಂದ್ರ ಸಚಿವ ಮುಖ್ತರ್‌ ಅಬ್ಬಾಸ್‌

    ಡಬ್ಲ್ಯೂಹೆಚ್‌ಒ ಜಾಗತಿಕ ಕೋವಿಡ್ ಮರಣ ಸಂಖ್ಯೆಯ ವರದಿಯನ್ನು ತಿಳಿಸಲು ಭಾರತ ಅಡ್ಡಿಪಡಿಸುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ದಿ ನ್ಯೂಯಾರ್ಕ್ ಟೈಮ್ಸ್ ಶನಿವಾರ ಲೇಖನವನ್ನು ಬರೆದಿತ್ತು. ಇದರ ಬೆನ್ನಲೇ ಡಬ್ಲ್ಯೂಹೆಚ್‌ಒ ಅಂಕಿ ಅಂಶವನ್ನು ಪರಿಶೀಲಿಸಲು ಭಾರತವನ್ನು ತಿಳಿಸಿದ್ದು, ಸರ್ಕಾರ ಕೋವಿಡ್-19ನ ನಿಜವಾದ ಸಾವಿನ ವರದಿಯನ್ನು ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

    ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಭಾನುವಾರದ ಅಂಕಿ ಅಂಶದ ಪ್ರಕಾರ, ಕಳೆದ ದಿನ ಕೋವಿಡ್‌ನಿಂದ 4 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5,12,751 ಕ್ಕೆ ಏರಿದೆ.