ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ಶ್ವಾನಗಳ ಅಬ್ಬರ ಜೋರಾಗಿದ್ದು, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಶ್ವಾನವೊಂದು ತಾನು ಮಾಡಿದ ಪಾತ್ರಕ್ಕೆ ಡಬ್ ಮಾಡಿದೆ.
ಇದು ಅಕ್ಕಪಕ್ಕದ ಇಂಡಸ್ಟ್ರಿಯಲ್ಲಿ ಆದ ಮಿರಾಕಲ್ ಅಲ್ಲ. ನಮ್ಮ ಸ್ಯಾಂಡಲ್‍ವುಡ್ ಇಂಡಸ್ಟ್ರಿಯಲ್ಲಿ ಆಗಿದೆ. ಸಿನಿಮಾಗಳಲ್ಲಿ ಶ್ವಾನಗಳು ನಟಿಸುವುದು ಸಾಮಾನ್ಯವಾಗಿದೆ. ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ಹಾಗೂ ಸಂಯುಕ್ತ ಹೊರನಾಡು ನಟನೆಯ `ನಾನು ಮತ್ತು ಗುಂಡ’ ಸಿನಿಮಾದಲ್ಲಿ ಸಿಂಬಾ ಹೆಸರಿನ ಶ್ವಾನ ನಟನೆ ಮಾಡುವುದು ಮಾತ್ರವಲ್ಲದೆ ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಿದೆ.
`ನಾನು ಮತ್ತು ಗುಂಡ’ ಸಿನಿಮಾದಲ್ಲಿ ನಟಿಸಿರುವ ಶ್ವಾನ ಮೈಕ್ ಮುಂದೆ ನಿಂತು ಡಬ್ಬಿಂಗ್ ಮಾಡುತ್ತಿರುವ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಶ್ವಾನ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದೆ. ಚಿತ್ರದ ಪೂರ್ತಿ ಈ ನಾಯಿ ನಾಯಕನ ಜೊತೆಯಲ್ಲಿಯೇ ಇರುತ್ತದೆ. ಈ ಚಿತ್ರದಲ್ಲಿ ಸ್ಯಾಮ್, ಗುಂಡ ಹಾಗೂ ಸಿಂಬಾ ಎನ್ನುವ ಮೂರು ಶ್ವಾನಗಳನ್ನ ಬಳಕೆ ಮಾಡಿಕೊಳ್ಳಲಾಗಿದೆ.
ಖ್ಯಾತ ಚಿತ್ರಸಾಹಿತಿ ಕಮ್ ನಿರ್ದೇಶಕ ರಘುಹಾಸನ್ ನಿರ್ಮಾಣದಲ್ಲಿ ಶ್ರೀ ನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಸಂಭಾಷಣೆ ಶರತ್ ಚಕ್ರವರ್ತಿ ನೀಡಿದ್ದಾರೆ. ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದೆ. ಚುನಾವಣೆ ಮುಗಿದ ನಂತರ ನಾನು ಮತ್ತು ಗುಂಡ ಚಿತ್ರತಂಡ ಸಿನಿಮಾವನ್ನ ಬಿಡುಗಡೆ ಮಾಡುವ ಯೋಚನೆಯನ್ನು ಮಾಡಿದೆ.
ಹೈದರಾಬಾದ್: ಕನ್ನಡದ ಮಣ್ಣಿನಲ್ಲಿ ಹುಟ್ಟಿ ಬೆಳೆದು ಪರಭಾಷಾ ಚಿತ್ರಗಳಲ್ಲಿ ಮಿಂಚುತ್ತಿರುವ ನಟಿ ಅನುಷ್ಕಾ. ಈಕೆ 12 ವರ್ಷಗಳಿಂದ ತಮಿಳು ಹಾಗೂ ತೆಲುಗಿನಲ್ಲಿ ಸುಮಾರು 47ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಹಾಗೂ ತೆಲುಗನ್ನು ಸರಾಗವಾಗಿ ಮಾತಾಡುವ ಈಕೆ ಇದುವರೆಗೂ ತಾನು ನಟಿಸಿರುವ ಯಾವ ಚಿತ್ರಕ್ಕೂ ಡಬ್ಬಿಂಗ್ ಮಾಡಿಲ್ಲ.
ಅನುಷ್ಕಾಗೆ ತನ್ನ ನಟನೆಯ ಚಿತ್ರಗಳಿಗೆ ತನ್ನದೇ ಕಂಠದಲ್ಲಿ ಡಬ್ಬಿಂಗ್ ಮಾಡುವ ಆಸೆಯಿದೆಯಂತೆ. ಆದರೆ ಅವರ ವಾಯ್ಸ್ ಸಣ್ಣ ಮಗುವಿನ ಹಾಗಿದೆಯಂತೆ. ಮನೆಯವರೂ ಸಹ ಮಗುವಿನ ಹಾಗೆ ಮಾತನಾಡುತ್ತೀಯ ಎಂದೇ ರೇಗಿಸುತ್ತಾರಂತೆ. ‘ನಾನು ನಟಿಸುವ ಪಾತ್ರಗಳಿಗೆ ಗಂಭೀರವಾದ ಕಂಠದ ಅವಶ್ಯಕತೆಯಿದೆ. ನನ್ನ ವಾಯ್ಸ್ ಡಬ್ಬಿಂಗ್ ಮಾಡಿದರೆ ಕಾಮಿಡಿಯಾಗಿರುತ್ತದೆ’ ಎಂದು ಸ್ವತಃ ಅನುಷ್ಕಾ ಹೇಳಿಕೊಂಡಿದ್ದಾರೆ. ಆದ್ದರಿಂದ ಅನುಷ್ಕಾ ತಮ್ಮ ಚಿತ್ರಗಳಲ್ಲಿ ಡಬ್ಬಿಂಗ್ ಮಾಡುವ ಆಸೆಯಿದ್ದರೂ ಇದುವರೆಗೂ ಯಾವುದೇ ನಿರ್ದೇಶಕರ ಬಳಿ ಡಬ್ಬಿಂಗ್ ಬಗ್ಗೆ ಮಾತಾಡಿಲ್ಲವಂತೆ. ಇದನ್ನೂ ಓದಿ: ಅನುಷ್ಕಾ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್: ಮತ್ತೊಬ್ಬ ಕನ್ನಡತಿಯೊಂದಿಗೆ ಪ್ರಭಾಸ್ ರೊಮ್ಯಾನ್ಸ್!
ಕನ್ನಡದಲ್ಲಿ ನಟಿ ರಮ್ಯಾ ಕೂಡಾ ಇದೇ ಸಮಸ್ಯೆಯಿಂದ ಹಲವಾರು ಪ್ರಶಸ್ತಿಗಳಿಂದ ವಂಚಿತರಾಗಿದ್ದರು. ಸಾಮಾನ್ಯವಾಗಿ ಕಲಾವಿದರಿಗೆ ಸಿಗುವ ಪ್ರಶಸ್ತಿಗಳು ಅವರದ್ದೇ ದನಿಯಿದ್ದರೆ ಮಾತ್ರ ಮಾನ್ಯತೆ ಪಡೆಯುತ್ತವೆ. ಎಷ್ಟೊಂದು ಪ್ರಶಸ್ತಿಗಳಿಂದ ವಂಚಿತರಾದ ರಮ್ಯಾ ತಮ್ಮ ಚಿತ್ರಗಳಿಗೆ ತಾವೇ ದನಿ ನೀಡುವ ಪ್ರಯತ್ನ ಮಾಡಿ ಅದರಲ್ಲಿ ವಿಫಲರಾಗಿದ್ದರು. ಆದರೆ ಅನುಷ್ಕಾ ತಮ್ಮ ದನಿಯ ಕುರಿತಾಗಿ ಕ್ಲಿಯರ್ ಆಗಿದ್ದಾರೆ. ಯಾವುದೇ ಕಾರಣಕ್ಕೂ ಪರದೆಗೆ ನನ್ನ ದನಿ ಹೊಂದುವುದಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಂಡಿದ್ದಾರೆ!. ಇದನ್ನೂ ಓದಿ:ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ
ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದು, 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.
ಎರಡು ದಿನಗಳ ಹಿಂದೆ ಸಿನಿಮಾದ ಡಬ್ಬಿಂಗ್ ಸಹ ಮಾಡಿದ್ದರು. ಉಸಿರಾಟದ ತೊಂದರೆಯಾಗಿ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿಸಲಾಗಿತ್ತು, ಗುಣಮುಖರಾಗುತ್ತಿದ್ದರು. ಆದರೆ ಇಂದು ಬೆಳಗ್ಗೆ 7:15ಕ್ಕೆ ತೀವ್ರ ಉಸಿರಾಟದ ತೊಂದರೆಯಾಗಿ ಅಸುನೀಗಿದ್ದಾರೆ. ದುಬೈನಿಂದ ಕಾಶಿನಾಥ್ ಅವರ ಮಗಳು ಹೊರಟಿದ್ದಾರೆ, ಸಂಜೆ 4ಕ್ಕೆ ಬೆಂಗಳೂರಿಗೆ ಬರುತ್ತಾರೆ. ಬಂದ ನಂತರ ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಕಾಶಿನಾಥ್ ಸಹೋದರಿ ಗಾಯತ್ರಿ ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಕಾಶಿನಾಥ್ ತಾಯಿ ಸಾವನ್ನಪ್ಪಿದ್ದರು. ತಾಯಿ ಸಾವು ಕಾಶಿನಾಥ್ ಅವರನ್ನ ಬಹುವಾಗಿ ಕಾಡಿತ್ತು. ತಾಯಿ ಜೊತೆ ತುಂಬಾ ಅಟಾಚ್‍ಮೆಂಟ್ ಇತ್ತು. ಅವರ ಸಾವಿನಿಂದ ಇವರು ಇನ್ನಷ್ಟು ಕುಗ್ಗಿದ್ದರು. ಆರೋಗ್ಯದ ಬಗ್ಗೆ ಯಾರಿಗೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಗಾಯತ್ರಿ ಹೇಳಿದ್ರು.
ಬೆಂಗಳೂರು: ಕನ್ನಡದಲ್ಲಿ ಎರಡನೇ ಡಬ್ಬಿಂಗ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದು ತಮಿಳಿನ `ಆರಂಭಂ’ ಸಿನಿಮಾವನ್ನು ಕನ್ನಡದಲ್ಲಿ `ಧೀರ’ ಎಂದು ಹೆಸರಿಟ್ಟು ಡಬ್ ಮಾಡಿ ಬಿಡುಗಡೆಯಾಗಲು ಚಿತ್ರತಂಡ ಸಿದ್ಧವಾಗಿದೆ.
ಈ ಹಿಂದೆ ತಮಿಳು ನಟ ಅಜಿತ್ ಕುಮಾರ್ ಅಭಿನಯಿಸಿದ ಸಿನಿಮಾ ಕನ್ನಡದಲ್ಲಿ ಡಬ್ ಆಗಿ `ಸತ್ಯದೇವ್ ಐಪಿಎಸ್’ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈಗ ಅವರು ಅಭಿನಯಿಸಿರುವ ಮತ್ತೊಂದು ತಮಿಳು ಸಿನಿಮಾ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತಿದೆ.
ನಟ ಅಜಿತ್ ಅಭಿನಯದ `ಆರಂಭಂ’ ಚಿತ್ರವನ್ನು ಕನ್ನಡದಲ್ಲಿ `ಧೀರ’ ಎಂಬ ಹೆಸರಿನಲ್ಲಿ ಡಬ್ ಮಾಡಿ ತೆರೆಗೆ ತರಲು ನಿರ್ಮಾಪಕರು ಸಿದ್ಧವಾಗಿದ್ದಾರೆ. ಈಗಾಗಲೇ ಕನ್ನಡದಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿದು ಸೆನ್ಸಾರ್ ಅನ್ನು ಮುಗಿಸಿ ಚಿತ್ರಮಂದಿರಕ್ಕೆ ಕಾಲಿಡಲು ಸಜ್ಜಾಗಿದೆ.
ಚಿತ್ರದ ಟೀಸರ್ ಅನ್ನು ಚಿತ್ರತಂಡ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದ್ದು, ದರ್ಶನ್ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಬಿ. ಕೃಷ್ಣಮೂರ್ತಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟ ಆರ್ಯ, ನಟಿ ನಯನತಾರ, ತಾಪ್ಸಿ ಪನ್ನು ಅಭಿನಯಿಸಿದ್ದಾರೆ. ಇದೊಂದು ಲವ್ ಅಂಡ್ ಸಸ್ಪೆನ್ಸ್ ಸಿನಿಮಾವಾಗಿದೆ.
ಈ ಹಿಂದೆ ಸತ್ಯದೇವ್ ಐಪಿಎಸ್ ಬಿಡುಗಡೆ ಸಂದರ್ಭದಲ್ಲಿ ಜಗ್ಗೇಶ್, ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರದ ಬಗ್ಗೆ ನಿರ್ಮಾಪಕ ಕೃಷ್ಣಮೂರ್ತಿ ಅವರು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ)ಗೆ ದೂರು ನೀಡಿದ್ದರು. ಈ ಸಂಬಂಧ ಅಡ್ಡಿಪಡಿಸಿದ್ದಕ್ಕೆ ಸಿಸಿಐ ಸಾರಾ ಗೋವಿಂದ್, ವಾಟಾಳ್ ನಾಗರಾಜ್, ಜಗ್ಗೇಶ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು.
ಕೃಷ್ಣಮೂರ್ತಿಯವರು ಕನ್ನಡದಕ್ಕೆ ಡಬ್ ಮಾಡಿರುವ ಮುಂದಿನ ಚಿತ್ರ ಧೀರ ಬಿಡುಗಡೆಗೆ ಯಾರೂ ಯಾವುದೇ ರೀತಿ ಅಡೆ ತಡೆಗಳನ್ನ ಮಾಡಬಾರದೆಂದು ಸಿಸಿಐ ಆದೇಶ ಹೊರಡಿಸಿದೆ. ಹಾಗೆಯೇ ಸತ್ಯದೇವ್ ಐಪಿಎಸ್ ಚಿತ್ರ ಬಿಡುಗಡೆಗೆ ಆದ ತೊಡಕುಗಳ ಬಗ್ಗೆ ತನಿಖೆ ನಡೆಸುವಂತೆ ಡಿಜಿ (ಇನ್ವೆಸ್ಟಿಗೇಷನ್) ಅವರಿಗೆ ಸಿಸಿಐ ಆದೇಶ ಹೊರಡಿಸಿತ್ತು.
ಬೆಂಗಳೂರು: ಭಾರತೀಯ ಸ್ಪರ್ಧಾತ್ಮಕ ಆಯೋಗದಿಂದ(ಸಿಸಿಐ)ನಟ ಜಗ್ಗೇಶ್, ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್ ಮತ್ತು ನಿರ್ದೇಶಕ ಎಂ ಎಸ್ ರಮೇಶ್ ಅವರಿಗೆ ನೋಟಿಸ್ ಜಾರಿಯಾಗಿದೆ.
ಕಳೆದ ಮಾರ್ಚ್ 3 ರಂದು ಡಬ್ಬಿಂಗ್ ಚಿತ್ರ `ಸತ್ಯದೇವ್ ಐಪಿಎಸ್’ ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ವಾಟಾಳ್ ನಾಗರಾಜ್ ಸೇರಿದಂತೆ ಸಾ ರಾ ಗೋವಿಂದು, ಜಗ್ಗೇಶ್ ಮುಂತಾದವರು ವಿರೋಧ ವ್ಯಕ್ತಪಡಿಸಿ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸಿದ್ದರು. ಹೀಗಾಗಿ ಡಬ್ಬಿಂಗ್ ಪರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಕೃಷ್ಣಮೂರ್ತಿ ಈ ವಿರೋಧವನ್ನು ಖಂಡಿಸಿ ಸಿಸಿಐಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕದಲ್ಲಿ ಡಬ್ಬಿಂಗ್ ವಿರೋಧಿಸಿದವರ ಬಗ್ಗೆ ಸಿಸಿಐ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಿದೆ.
ಮುಂಬೈ: ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹಾಲಿವುಡ್ ಟ್ರೇಲರ್ ರಿಲೀಸ್ ಆಗಿದೆ. ಸ್ಪೈಡರ್‍ಮ್ಯಾನ್ ಹೋಮ್‍ಕಮಿಂಗ್ ಟ್ರೇಲರ್ ಯೂಟ್ಯೂಬ್‍ನಲ್ಲಿ ರಿಲೀಸ್ ಆಗಿದೆ.
ಮೂಲ ಇಂಗ್ಲಿಷ್ ಭಾಷೆಯಲ್ಲಿರುವ ಈ ಚಿತ್ರ ಕನ್ನಡ ಸೇರಿದಂತೆ, ಹಿಂದಿ, ತಮಿಳು, ತೆಲುಗು, ಮರಾಠಿ, ಗುಜರಾತ್ ನಲ್ಲಿ ಬಿಡುಗಡೆಯಾಗಿದೆ. ಜನ್ ವಾಟ್ಸ್ ನಿರ್ದೇಶನದ ಟಾಪ್ ಹಾಲಂಡ್, ಮೈಕಲ್ ಕೀಟನ್ ಅಭಿನಯದ ಈ ಚಿತ್ರ ಜುಲೈ 7 ರಂದು ಬಿಡುಗಡೆಯಾಗಲಿದೆ.
ಕನ್ನಡದಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದನ್ನು ಡಬ್ಬಿಂಗ್ ಪರ ನಿಲುವ ಹೊಂದಿರುವ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಯೂ ಟ್ಯೂಬ್ ಲಿಂಕ್ ಶೇರ್ ಮಾಡಿ ಸ್ವಾಗತಿಸಿದ್ದಾರೆ. ಈ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗುವುದನ್ನು ನಾವು ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ತೀವ್ರ ವಿರೋಧದ ಮಧ್ಯೆಯೂ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಳೆದ ಮಾರ್ಚ್ ಮೊದಲ ವಾರದಲ್ಲಿ ತಮಿಳಿನ ಡಬ್ ಸಿನಿಮಾ ಸತ್ಯದೇವ್ ಐಪಿಎಸ್ ರಿಲೀಸ್ ಆಗಿತ್ತು.
ಬೆಂಗಳೂರು: ಡಬ್ಬಿಂಗ್ ಮಾಡಿದ್ರೆ ಯಾರದ್ದೋ ಮಗುವಿಗೆ ಇನ್ಯಾರೋ ತಂದೆ ಆದಂಗೆ ಇರುತ್ತೆ ಅಂತ ನಟ ದರ್ಶನ್ ಹೇಳಿದ್ದಾರೆ.
ಇಂದು ಫ್ರೀಡಂ ಪಾರ್ಕ್‍ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಡಬ್ಬಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ದರ್ಶನ್, ಖಂಡಿತ ಡಬ್ಬಿಂಗ್ ವಿರುದ್ಧದ ಹೋರಾಟಕ್ಕೆ ಸಾಥ್ ಕೊಡ್ತಿನಿ. ಪಕ್ಕದ ರಾಜ್ಯದ ಎಲ್ಲಾ ಊಟ ನಮ್ಮ ಊರಲ್ಲಿ ಸಿಗುತ್ತೆ. ಅದೇ ನಮ್ಮ ಊಟ ಉಪ್ ಸಾರು ಮುದ್ದೆ ಬೇರೆ ಊರಲ್ಲಿ ಸಿಗುತ್ತಾ ಎಂದು ಪ್ರಶ್ನಿಸಿ ಖಂಡಿತ ಡಬ್ಬಿಂಗ್ ಬೇಡ ಅಂದ್ರು.
ಜಗ್ಗೇಶ್ ಗರಂ: ಇದೇ ವೇಳೆ ನಟ ಜಗ್ಗೇಶ್ ಮಾತನಾಡಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದವರ ವಿರುದ್ಧ ವಾಗ್ದಾಳಿ ನಡೆಸಿದ್ರು. ನಾನು ಡಬ್ಬಿಂಗ್ ವಿರೋಧಿಸಿ ಮಾತನಾಡಿದ್ದಕ್ಕೆ ಅದ್ಯಾರಿಗೋ 50 ಲಕ್ಷ ಲಾಸ್ ಆಗಿದ್ಯಂತೆ. ನಾನು ಕಟ್ಟಿಕೊಡಬೇಕಂತೆ. ನೀನು ಸಿಗು ಕಟ್ಟಿಕೊಡ್ತೀನಿ. ನಾನೇನು ರೇಪ್ ಮಾಡಿದ್ದಿನಾ? ಕಳ್ಳತನ ಮಾಡಿದ್ದಿನಾ? ಕನ್ನಡದ ಪರ ಸೊಲ್ಲೆತ್ತಿದ್ದೀನಿ. ಜೈಲಿಗೆ ಕಳಿಸಿದ್ರೆ ಸಂತೋಷವಾಗಿ ಹೋಗ್ತಿನಿ. ಕಾಲರ್ ಎತ್ತಿ ಬೇಕಾದ್ರೆ ಕನ್ನಡಕ್ಕಾಗಿ ಜೈಲಿಗೆ ಹೋಗ್ತೀನಿ. ಇದಕ್ಕೆಲ್ಲಾ ಕೇರ್ ಮಾಡಲ್ಲ ಅಂದ್ರು.
ಕನ್ನಡದ ನೆಲಕ್ಕೆ 35 ರ್ವಗಳಿಂದ ನಮ್ಮದೇ ಆದ ಕಲಾ ಸೇವೆ ಮಾಡಿದ್ದೇವೆ. ನಮಗೆ ಎಲ್ಲವೂ ಸಿಕ್ಕಿದೆ. ಮುಂದಿನ ಪೀಳಿಗೆಯವರು ಬೆಳೆಯೋದು ಬೇಡ್ವಾ? ಅಂದ್ರು. ಎಫ್‍ಎಂ ರೇಡಿಯೋಗಳ ವಿರುದ್ಧ ವಾಗ್ದಾಳಿ ಮಾಡಿದ ಜಗ್ಗೇಶ್, ಕನ್ನಡ ಸ್ಟೇಷನ್ ಅಂತ ಇರೋದು. ಆದ್ರೆ ಹಿಂದಿ ಹಾಡು ಹಾಕ್ತಾರೆ. ಈಗ ನಮ್ಮ ಸಿನಿಮಾವನ್ನ ಕಸೆದುಕೊಳ್ಳುತ್ತಿದ್ದಾರೆ. ಅಕ್ಕಪಕ್ಕದ ರಾಜ್ಯದಲ್ಲಿ ಕನ್ನಡಿಗರು ಹೆಚ್ಚು ಜನರಿದ್ದಾರೆ. ಅಲ್ಲಿ ಕನ್ನಡ ಚಿತ್ರಗಳ ಪ್ರದರ್ಶನದ ಬಗ್ಗೆ ಯಾಕೆ ಧ್ವನಿ ಎತ್ತಲಿಲ್ಲ ಅಂತ ಪ್ರಶ್ನಿಸಿದ್ರು.
80 ವರ್ಷಗಳ ಇತಿಹಾಸವಿರುವ ಈ ಕನ್ನಡ ಚಿತ್ರರಂಗವನ್ನ ಸಾಯಿಸಬೇಡಿ. ಕನ್ನಡ ಶಾಲೆಗಳ ಮುಚ್ಚಿ ಹೋದಾಗ ಏನ್ ಮಾಡಿದ್ರಿ ಸ್ವಾಮಿ ಅಂತ ಪ್ರಶ್ನಿಸಿದ್ರು. ಹೆದರಿಕೆ ಕರೆಗಳು ಬರ್ತಿವೆ. ನಾನು ಈ ರೀತಿಯ ಫೋನ್ ಕಾಲ್‍ಗಳಿಗೆ ಹೆದರೋದಿಲ್ಲ ಅಂತ ಹೇಳಿದ್ರು.
ನಿರ್ದೇಶಕ ಎಂಎಸ್ ರಮೇಶ್: ಯಾವುದೇ ಕಾರಣಕ್ಕೂ ಡಬ್ಬಿಂಗ್ ಬರಲು ಬಿಡಲ್ಲ.
ಸಾಧು ಕೋಕಿಲ: ತಾಕತ್ ಇದ್ರೆ ಎಲ್ಲ ಭಾಷೆಯನ್ನ ಕನ್ನಡ ಭಾಷೆಯಲ್ಲಿ ಡಬ್ ಮಾಡಲಿ. ಅದು ಮಾಡೋಕೆ ಆಗಲ್ಲ. ಸಿನಿಮಾ ಯಾಕೆ ಡಬ್ ಮಾಡ್ತಾರೆ.
ಬುಲೆಟ್ ಪ್ರಕಾಶ್: ಹೋರಾಟ ಇಲ್ಲಿಗೆ ನಿಲ್ಲಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೊರಾಟ ನಡೆಯುತ್ತೆ.
ನಾಗತಿಹಳ್ಳಿ ಚಂದ್ರಶೇಖರ್: ಕಂಠದಾನ ಮಾಡಿ ಇಡೀ ಸಿನಿಮಾ ಪ್ರೋಸೆಸ್ ಮಟ್ಟ ಹಾಕಲಾಗುತ್ತಿದೆ. ಇದು ಕಥೆ ಮತ್ತು ಸೃಜನಶೀಲ ಚಿತ್ರಗಳಿಗೆ ಅಪಾಯಕಾರಿ. ಒಟ್ಟು ಭಾಷೆಗೆ ಪೆಟ್ಟು ಬೀಳುತ್ತಿದೆ. ಕನ್ನಡ ಪರ ಹೋರಾಟಗಾರರು ನಮ್ಮ ನಾಡು ನುಡಿಗಾಗಿ ಹೋರಾಟ ಮಾಡ್ತಿದ್ದಾರೆ. ಸಂಸ್ಕೃತಿಯ ಬಗ್ಗೆ ಸ್ವಲ್ಪನಾದ್ರೂ ಗೌರವ ಕೊಡಬೇಕು.
ವಿ.ಮನೋಹರ್: ಡಬ್ಬಿಂಗ್‍ಗೆ ಅವಕಾಶ ನೀಡಿದ್ರೆ ಕನ್ನಡ ಚಿತ್ರರಂಗಕ್ಕೆ ಉಳಿಗಾಲವಿಲ್ಲ.
ಹಾಸ್ಯ ನಟ ಮಿತ್ರ: ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಸಿನಿಮಾಗಳು ಬರಬಾರದು. ನಮ್ಮ ಹೋರಾಟ ಮುಂದುವರೆಯುತ್ತೆ.
ಸೃಜನ್: ಕನ್ನಡ ಚಿತ್ರರಂಗದಲ್ಲಿ ಸಾವಿರಾರು ಕುಟುಂಬ ಕೆಲಸ ಮಾಡ್ತಿದೆ. ಡಬ್ಬಿಂಗ್ ಬಂದ್ರೆ ಅವರ ಕುಟುಂಬ ಬೀದಿಗೆ ಬರುತ್ತೆ. ಯಾವುದೇ ಕಾರಣಕ್ಕೂ ಡಬ್ಬಿಂಗ್ ಬೇಡ. ಡಬ್ಬಿಂಗ್ ಸಿನಿಮಾ ನೋಡೋಲ್ಲ ಅಂತ ಪ್ರಮಾಣ ಮಾಡಿ ಆಗ ಡಬ್ಬಿಂಗ್ ಬರಲ್ಲ.
ಪ್ರಜ್ವಲ್ ದೇವರಾಜ್: ಚಿತ್ರರಂಗದಿಂದ ಸಾವಿರಾರು ಕುಟುಂಬಗಳು ಊಟ ಮಾಡ್ತಿವೆ. ದೊಡ್ಡವರ ಮಾರ್ಗದರ್ಶನದಲ್ಲಿ ಹೋರಾಟ ಮಾಡ್ತಿವಿ.
ಮಂಡ್ಯ ರಮೇಶ್: ನಿರ್ಮಾಪಕರು ಮನಸ್ಸು ಮಾಡಿದ್ರೆ ಡಬ್ಬಿಂಗ್ ನಿಲ್ಲಿಸೋದು ದೊಡ್ಡ ವಿಷಯವಲ್ಲ. ಡಬ್ಬಿಂಗ್ ಕಲಾವಿದರು ಯಾವುದೇ ಡಬ್ಬಿಂಗ್ ಮಾಡಬಾರದು. ಡಬ್ಬಿಂಗ್ ಖಂಡಿತ ಬೇಡ.
ಪ್ರತಿಭಟನೆಯಲ್ಲಿ ಭಾಗಿಯಾದವರು: ದರ್ಶನ್, ಜಗ್ಗೇಶ್, ಸೃಜನ್ ಲೋಕೇಶ್, ದರ್ಶನ್, ಪ್ರಜ್ವಲ್ ದೇವರಾಜ್, ದಿನಕರ್ ತುಗುದೀಪ್, ಕವಿರಾಜ್, ವಾಟಾಳ್ ನಾಗರಾಜ್, ಪ್ರವೀಣ್ ಕುಮಾರ್ ಶೆಟ್ಟಿ, ಕುಮಾರ್, ನಟ ರವಿಶಂಕರ್, ತಬಲನಾಣಿ, ನಿರ್ದೇಶಕ ಸಾಯಿಪ್ರಕಾಶ್, ಮಿತ್ರಾ, ಸಂಗೀತ ನಿರ್ದೇಶಕ ವಿ. ಮನೋಹರ್ ಸೇರಿದಂತೆ ಸ್ಯಾಂಡಲ್‍ವುಡ್‍ನ ನಟರು, ನಿದೇಶಕರು, ಕನ್ನಡಪರ ಸಂಘಟನೆಗಳು ಹಾಗೂ ಕಿರುತೆರೆ ನಟರು ಡಬ್ಬಿಂಗ್ ವಿರುದ್ಧದ ಪ್ರತಿಭಟನಾಯಲ್ಲಿ ಭಾಗಿಯಾಗಿದ್ರು.
ಬೆಂಗಳೂರು: ಡಬ್ಬಿಂಗ್ ಬೇಕೋ ಬೇಡವೋ ಅಂತ ಜನ ನಿರ್ಧಾರ ಮಾಡ್ತಾರೆ. ಡಬ್ಬಿಂಗ್ ಬೇಡ ಅನ್ನೋಕೆ ನನ್ಯಾರು? ಕನ್ನಡಿಗರು ಹುಲಿಗಳು. ಕನ್ನಡ ಜನರಲ್ಲಿ ಜಾಗೃತಿ ಮೂಡಿಸುವುದು ಬೇಡ, ಅವರಿಗೆ ಎಲ್ಲ ಗೊತ್ತಿದೆ ಅಂತ ನಟ ಶಿವರಾಜ್‍ಕುಮಾರ್ ಹೇಳಿದ್ದಾರೆ.
ಕನ್ನಡದ ಜನತೆ ಡಬ್ಬಿಂಗ್ ವಿರೋಧಿಸಿದ್ದಾರೆ. ಕಳೆದ ವಾರ ತೆರೆಕಂಡ ತಮಿಳಿನ ಕನ್ನಡ ಡಬ್ಬಿಂಗ್ ಚಿತ್ರವನ್ನ ಯಾರೂ ನೋಡಿಲ್ಲ. ಇದರಿಂದ ಪ್ರೇಕ್ಷಕರ ಅಭಿಪ್ರಾಯ ಡಬ್ಬಿಂಗ್ ಬೇಡವೆಂದಿದ್ದಾರೆ. ಇದೇ ಅಭಿಪ್ರಾಯ ಮುಂದುವರೆಯಬೇಕು. ಆಗ ಯಾವ ಡಬ್ಬಿಂಗ್ ಚಿತ್ರವೂ ಬರುವುದಿಲ್ಲ. ವೈಯಕ್ತಿಕವಾಗಿ ನಾನು ಡಬ್ಬಿಂಗ್ ವಿರೋಧಿಸುತ್ತೇನೆ. ಅದ್ರೆ ಜನರ ಅಭಿಪ್ರಾಯ ಮುಖ್ಯ. ಕನ್ನಡತನ ಅನ್ನೋದು ಎಲ್ಲರಲ್ಲೂ ಬರಬೇಕು ಅಂತ ಶಿವಣ್ಣ ಹೇಳಿದ್ರು.
ಇಂದು ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ, ಡಬ್ಬಿಂಗ್ ವಿರುದ್ಧ ಪ್ರತಿಭಟನೆ ಇವತ್ತಿಂದ ನಡೆಯುತ್ತಿಲ್ಲ. ಜನರೇ ಡಬ್ಬಿಂಗ್ ಬೇಡ ಅಂತ ಅಂದ್ಮೇಲೆ ಪ್ರತಿಭಟನೆ ಯಾಕೆ? ಜನರೊಂದಿಗೆ ನಾವ್ ಇರ್ತೀವಿ ಅಂತ ತಿಳಿಸಿದ್ರು.
ಇಂದು ಡಬ್ಬಿಂಗ್ ವಿರುದ್ದ ಪ್ರತಿಭಟನೇ ಮಾಡಲು ವಾಟಾಳ್ ನಾಗರಾಜ್ ಸಾರಥ್ಯದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಮಾಡಲು ವೇದಿಕೆ ಸಜ್ಜಾಗಿದೆ. ಮೈಸೂರ್ ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಡಬ್ಬಿಂಗ್ ವಿರುದ್ದ ಜಾಥವನ್ನ ಹಮ್ಮಿಕೊಳ್ಳಲಾಗಿದೆ. ಜ್ಞಾನಜ್ಯೋತಿ ಸಂಭಾಂಗಣದಲ್ಲಿ ಕಿರುತೆರೆ ಹಾಗೂ ಹಿರಿತೆರೆಯ ಎಲ್ಲಾ ಕಲಾವಿದರು ಒಟ್ಟಾಗಿ ಸೇರಿ ಜಾಥಾಗೆ ಸಾಥ್ ನೀಡಲಿದ್ದಾರೆ.
ಬೆಂಗಳೂರು: ಕನ್ನಡದಲ್ಲಿ ಸಾಕಷ್ಟು ಹೊಸಬರ ಚಿತ್ರಗಳು ಬರುತ್ತಿದೆ. ಇಂತಹ ಸಮಯದಲ್ಲಿ ಡಬ್ಬಿಂಗ್ ಯಾಕೆ ಬೇಕು ಎಂದು ಹಿರಿಯ ನಟ ಸುಂದರ್ ರಾಜ್ ಪ್ರಶ್ನಿಸಿದ್ದಾರೆ.
ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಡಬ್ಬಿಂಗ್ ವಿರೋಧಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾತನಾಡಿದ ಅವರು ಡಬ್ಬಿಂಗ್ ಬಂದರೆ ಕಾರ್ಮಿಕ ವರ್ಗ ನಿರ್ನಾಮವಾಗುತ್ತದೆ. ಕನ್ನಡ ಚಿತ್ರಕ್ಕೆ ಈಗಾಗಲೇ ಥಿಯೇಟರ್ ಕೊರತೆ ಇದೆ.ಈ ಸಂದರ್ಭದಲ್ಲಿ ನಾವೆಲ್ಲ ಒಂದಾಗಬೇಕಿತ್ತು. ಆದರೆ ಅಸಹ್ಯವಾಗಿ ಡಬ್ಬಿಂಗ್ ಮಾಡಲು ಇಳಿದಿದ್ದಾರೆ ಎಂದು ಕಿಡಿ ಕಾರಿದರು.
ಇವತ್ತು ನಟರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ಡಾ.ರಾಜ್ ಕಾಲದಲ್ಲಿ ನಮಗೆ ನಮಗೆ ಒಪ್ಪತ್ತಿನ ಊಟಕ್ಕೂ ಸಾಧ್ಯವಿರುತ್ತಿರಲಿಲ್ಲ. ಕಷ್ಟದಿಂದ ಕಟ್ಟಿದ ಚಿತ್ರರಂಗವಿದು. ಡಬ್ಬಿಂಗ್ ತಂದು ಚಿತ್ರರಂಗವನ್ನ ಹಾಳುಮಾಡಬೇಡಿ ಎಂದು ಹೇಳಿದರು.
ಘರ್ಷಣೆಗೆ ಕಾರಣ: ನಮಗೂ ತಮಿಳರಿಗೂ ಕಾವೇರಿ ಗಲಾಟೆ ನಡೆಯುತ್ತಿರುವಾಗಲೇ ತಮಿಳು ಚಿತ್ರ ಡಬ್ಬಿಂಗ್ ಆಗುತ್ತಿದೆ. ಇದರಿಂದಾಗಿ ಕನ್ನಡಿಗರ ಹಾಗೂ ತಮಿಳರ ಮಧ್ಯೆ ಘರ್ಷಣೆ ಕಾರಣವಾಗಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ. ಈ ಆಶಾಂತಿಗೆ ಕಾರಣರಾದ ಡಬ್ಬಿಂಗ್ ಮಾಡುವವರನ್ನು ಗಡೀಪಾರು ಮಾಡಬೇಕು ಎಂದು ವಾಟಾಳ್ ನಾಗರಾಜು ಆಗ್ರಹಿಸಿದರು.
ಮೌನ ಏಕೆ: ಕನ್ನಡ ಸಾಹಿತ್ಯ ಪರಿಷತ್ ಮೌನವಾಗಿದ್ದು, ಸರ್ಕಾರ ಡಬ್ಬಿಂಗ್ ವಿರೋಧಿ ಮಸೂದೆ ತರಬೇಕು. ಕನ್ನಡ ಚಿತ್ರಗಳಿಗೆ, ಕಲಾವಿದರಿಗೆ, ಕಿರುತೆರೆಯ ಭವಿಷ್ಯ ಉಳಿಸಲು ನಮಗೆ ಡಬ್ಬಿಂಗ್ ಬೇಡ. ನನ್ನ 53 ವರ್ಷದ ಹೋರಾಟ ಕನ್ನಡಕ್ಕಾಗಿ ಇದು ಸಾರ್ಥಕವಾಗಬೇಕು. ರಾಜಕೀಯವಾಗಿ ನಾನು ಮಂತ್ರಿ, ಮುಖ್ಯಮಂತ್ರಿ ಯಾಗಬಹುದಿತ್ತು. ಆದರೆ ನಾನು ಕನ್ನಡಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಡಬ್ಬಿಂಗ್ ಮಾಡುವವರು ಕನ್ನಡ ವಿರೋಧಿಗಳು, ದ್ರೋಹಿಗಳು ಎಂದು ವಾಟಳ್ ಕಿಡಿಕಾರಿದರು.
ಪ್ರತಿಭಟಟನೆ ನಮ್ಮ ಹಕ್ಕು: ಸಾಹಿತಿಗಳು, ಬರಹಗಾರರು ಮೌನವಾಗಿದ್ದೀರಿ ಯಾಕೆ? ನೀವು ಮೌನ ಮುರಿದು ಬೀದಿಗಿಳಿದು ಎಲ್ಲರೂ ಹೋರಾಟ ಮಾಟಬೇಕು. ನ್ಯಾಯಾಲಯ ಡಬ್ಬಿಂಗ್ ಗೆ ಅವಕಾಶ ನೀಡಿರಬಹುದು ಆದರೆ ಪ್ರತಿಭಟನೆ ಮಾಡಬೇಡಿ ಎಂದು ಹೇಳಿಲ್ಲ, ಪ್ರತಿಭಟನೆ ಮಾಡುವುದು ನಮ್ಮ ಹಕ್ಕು ಎಂದು ವಾಟಾಳ್ ನಾಗರಾಜು ತಿಳಿಸಿದರು.
ಪಬ್ಲಿಸಿಟಿ ಇಲ್ಲ: ತಮಿಳು ತೆಲುಗಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಿದೆ. ಆದರೆ ಅಂತಹ ಪಬ್ಲಿಸಿಟಿ ಕನ್ನಡಕ್ಕಿಲ್ಲ. ಇಂತಹ ಪರಿಸ್ಥಿತಿ ಯಲ್ಲಿ ಡಬ್ಬಿಂಗ್ ತರುವುದು ಬೇಡ. ನಮ್ಮ ನಿರ್ಮಾಪಕರು ನೋವು ಅರ್ಥಮಾಡಿಕೊಳ್ಳಬೇಕು. ಎಂದು ನಟಿ ಸಂಜನಾ ಹೇಳಿದರು.
ಶೋಕಿಗಾಗಿ ಕೆಲಸ: ಕನ್ನಡ ಚಿತ್ರರಂಗವನ್ನು ಡಾ ರಾಜ್ ಸೇರಿದಂತೆ ಅನೇಕ ಗಣ್ಯರು ಕಷ್ಟಪಟ್ಟು ಕಟ್ಟಿದ್ದಾರೆ ಇಂತಹ ಚಿತ್ರ ರಂಗವನ್ನು ಡಬ್ಬಿಂಗ್ ಮೂಲಕ ಕೆಡವ ಬೇಡಿ. ಶೋಕಿಗಾಗಿ ನಿರ್ಮಾಪಕರಾಗಬೇಕು ಎಂದವರು ಮಾತ್ರ ಡಬ್ಬಿಂಗ್ ಬೇಕು ಅಂತಿದ್ದಾರೆ. ನಾಡು ನುಡಿ ಭಾಷೆ ಬಗ್ಗೆ ಪ್ರೀತಿ ಇರುವವರು ಇಂತಹ ಕೆಲಸ ಮಾಡೋದಿಲ್ಲ. ನಾನು ಅಂದೂ ಕೂಡ ಡಬ್ಬಿಂಗ್ ವಿರೋಧಿಸಿದ್ದೆ. ಇಂದೂ ವಿರೋಧಿಸುತ್ತೇನೆ ಎಂದು ನಟಿ ಹೇಮಾ ಚೌಧರಿ ಹೇಳಿದರು.
ಲಯ ತಪ್ಪುತ್ತೆ: ಕಾರ್ಪೊರೇಟ್ ಕಂಪನಿಗಳ ಹುನ್ನಾರದಿಂದ ಈ ಡಬ್ಬಿಂಗ್ ಪೆಡಂಭೂತ ಬಂದಿದೆ. ಮಕ್ಕಳ ಮನೋವಿಕಾಸಕ್ಕೆ ಬೇಕಾಗುವಂತ ಸಿನಿಮಾ ಮಾತ್ರ ಬೇಕಾದ್ರೆ ಡಬ್ಬಿಂಗ್ ಮಾಡಿ. ಡಬ್ಬಿಂಗ್ ಸಿನಿಮಾದಿಂದ ಕನ್ನಡ ಭಾಷೆಯ ಲಯ ತಪ್ಪುತ್ತದೆ. ಡಬ್ಬಿಂಗ್ ನಿಂದ ಮುಂದೊಂದು ದಿನ ಕನ್ನಡ ಭಾಷೆ ಅಳಿಸಿ ಹೋಗುತ್ತದೆ ಎಂದು ಸಾಹಿತಿ ಹಾಗೂ ನಿರ್ದೆಶಕ ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.
ಬೆಂಗಳೂರು: ಕರ್ನಾಟಕದಲ್ಲಿ ಡಬ್ಬಿಂಗ್ ಪರ-ವಿರೋಧ ಹೋರಾಟ ಮತ್ತೆ ತೀವ್ರಗೊಂಡಿದ್ದು, ತಮಿಳಿನ ನಟ ಅಜಿತ್ ಅಭಿನಯದ `ಸತ್ಯದೇವ್ ಐಪಿಎಸ್’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ ಮಂಗಳೂರು, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ಇಂದು ರಿಲೀಸ್ ಆಗಬೇಕಿದ್ದ ಈ ಸಿನೆಮಾ ಸ್ಯಾಂಡಲ್‍ವುಡ್ ಮಂದಿಯ ಡಬ್ಬಿಂಗ್ ವಿರೋಧಕ್ಕೆ ಕೇವಲ ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ಮಂಗಳೂರು ಚಿತ್ರಮಂದಿರಗಳಲ್ಲಿ ಮಾತ್ರ ತೆರೆಕಾಣಲು ಸಿದ್ಧತೆಯಾಗಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ದಾವಣಗೆರೆ, ಚಿತ್ರದುರ್ಗದಲ್ಲಿ ಸಿನಿಮಾ ಪ್ರದರ್ಶನ ರದ್ದಾಗಿದೆ.
ಮಂಗಳೂರಿನ ಸುಚಿತ್ರ ಚಿತ್ರಮಂದಿರದಲ್ಲಿ ಚಿತ್ರ ನೋಡಲು ಪ್ರೇಕ್ಷಕರೇ ಇಲ್ಲದಂತಾಗಿದೆ. ಈ ಚಿತ್ರ ಮಂದಿರದಲ್ಲಿ 902 ಸೀಟ್‍ಗಳಿದ್ದು, ಅದರಲ್ಲಿ 16 ಮಂದಿ ಮಾತ್ರ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಒಟ್ಟಿನಲ್ಲಿ ಇದರಿಂದ ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಕ್ಕೆ ಪ್ರೇಕ್ಷಕರ ಬೆಂಬಲವೇ ಇಲ್ಲ ಎಂಬಂತಾಗಿದೆ.
ಹುಬ್ಬಳ್ಳಿಯಲ್ಲಿ ಯಾವುದೇ ಭಾಷೆಯ ಚಿತ್ರ ಬರಲಿ ಜನ ನೋಡ್ತಾರೆ. ಆದ್ರೆ ಸತ್ಯದೇವ್ ಡಬ್ಬಿಂಗ್ ಚಿತ್ರವನ್ನು ಮಾತ್ರ ಯಾರೂ ಕೂಡ ನೋಡಲು ಇಚ್ಚಿಸುತ್ತಿಲ್ಲ. ಕನ್ನಡ ಪರ ಸಂಘಟನೆ ಹಾಗೂ ಫಿಲ್ಮ್ ಛೇಂಬರ್ ಆಫ್ ಕಾಮರ್ಸ್ ಈ ಡಬ್ಬಿಂಗ್ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಚಿತ್ರದ ಪೋಸ್ಟರ್‍ಗಳನ್ನು ತೆಗೆದುಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನಟ ಅಜಿತ್ ಅಭಿನಯದ ಸತ್ಯಜಿತ್ ಐಪಿಎಸ್ ಡಬ್ಬಿಂಗ್ ಸಿನಿಮಾ ಸುಮಾರು 60 ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ಡಬ್ಬಿಂಗ್ ವಾಣಿಜ್ಯ ಮಂಡಳಿ ಆಧ್ಯಕ್ಷರಾದ ಕೃಷ್ಣೆಗೌಡರು ಗುರುವಾರ ತಿಳಿಸಿದ್ದರು.