Tag: ಡಬಲ್ ಇಂಜಿನ್

  • ಡಬಲ್ ಇಂಜನ್ನಿನ ಮಜವೇ ಬೇರೆ!

    ಡಬಲ್ ಇಂಜನ್ನಿನ ಮಜವೇ ಬೇರೆ!

    – ನಗುವಿನೊಂದಿಗೆ ಗಾಢ ಕುತೂಹಲಗಳ ನಾಕಾಬಂಧಿ!

    ರೇಟಿಂಗ್: 4/5 
    ಬೆಂಗಳೂರು: ನೋಡುಗರನ್ನೆಲ್ಲ ಟ್ರೈಲರ್ ಮೂಲಕವೇ ತುದಿಗಾಲಲ್ಲಿ ನಿಲ್ಲಿಸಿದ್ದ ಚಂದ್ರ ಮೋಹನ್ ನಿರ್ದೇಶನದ ‘ಡಬಲ್ ಇಂಜಿನ್’ ಚಿತ್ರ ಬಿಡುಗಡೆಯಾಗಿದೆ. ತೆಳುವಾದ ಡಬಲ್ ಮೀನಿಂಗ್ ಡೈಲಾಗುಗಳ ಮೂಲಕವೇ ಕಚಗುಳಿ ಇಟ್ಟಿದ್ದರಿಂದ ಅಂಥಾ ನಿರೀಕ್ಷೆಯಿಟ್ಟುಕೊಂಡು ಬಂದವರನ್ನೂ ಮತ್ತೊಂದು ಜಗತ್ತಿಗೆ ಕರೆದೊಯ್ದು ಭರಪೂರ ನಗುವಿನ ಜೊತೆಗೇ ಗಂಭೀರ ವಿಚಾರಗಳನ್ನೂ ಪ್ರಸ್ತುತ ಪಡಿಸೋದು ಈ ಚಿತ್ರದ ನಿಜವಾದ ಸ್ಪೆಷಾಲಿಟಿ!

    ಭರಪೂರ ಹಾಸ್ಯದ ಮೂಲಕವೇ ಅತ್ಯಂತ ಗಂಭೀರ ವಿಚಾರವೊಂದನ್ನು ಹೇಳೋದು ಸವಾಲಿನ ವಿಚಾರ. ಆದರೆ ಅಂಥಾ ಕಲೆಯನ್ನು ಕರತಲಾಮಲಕ ಮಾಡಿಕೊಂಡಿರುವ ಚಂದ್ರಮೋಹನ್ ಅದರಲ್ಲಿ ಗೆದ್ದಿದ್ದಾರೆ. ಪ್ರತೀ ಹಳ್ಳಿಗಳಲ್ಲಿಯೂ ಸಾಮಾನ್ಯವಾಗಿ ಇರುವ ಪಡ್ಡೆಗಳಂಥಾದ್ದೇ ವ್ಯಕ್ತಿತ್ವ ಹೊಂದಿರುವ ಮೂವರು ಹುಡುಗರು. ತಲತಲಾಂತರಗಳಿಂದ ಮಾಡಿಕೊಂಡು ಬಂದರೆ ಹೊಲದ ಮಣ್ಣು ಬಾಯಿಗೆ ಬೀಳಬಹುದೇ ಹೊರತು ಕೈ ತುಂಬಾ ಕಾಸು ಮಾಡಲಾಗೋದಿಲ್ಲ ಎಂಬುದನ್ನು ಬಲವಾಗಿ ನಂಬಿ ಅಡ್ಡಾಡಿಕೊಂಡಿರೋ ಆ ಮೂವರು ಊರವರ ಕಣ್ಣಲ್ಲಿ ಕೆಲಸಕ್ಕೆ ಬಾರದವರು. ಇಂಥಾ ಮೂವರು ಹುಡುಗರೂ ಇದ್ದಕ್ಕಿದ್ದಂತೆ ಒಂದೇ ಏಟಿಗೆ ಕೋಟಿ ಕೋಟಿ ಕಾಸು ಮಾಡೋ ಆಸೆಯೊಂದಿಗೆ ಚಕ್ರಸುಳಿಯೊಂದಕ್ಕೆ ಪ್ರವೇಶ ಮಾಡುತ್ತಾರೆ.

    ಹೀಗೆಂದಾಕ್ಷಣ ಆ ಮೂವರು ಕೊಲೆ, ಸುಲಿಗೆ ಕಳ್ಳತನದಂಥಾ ಮಾಮೂಲಿ ಅನಾಹುತಕ್ಕೆ ಕೈ ಹಾಕುತ್ತಾರೆಂದುಕೊಂಡರೆ ಅದನ್ನು ಈ ಚಿತ್ರ ಸುಳ್ಳು ಮಾಡುತ್ತದೆ. ಈ ಹುಡುಗರು ತಕ್ಷಣಕ್ಕೆ ಊಹಿಸಲಾಗದಂಥಾದ್ದೊಂದು ಕೆಲಸಕ್ಕೆ ಕೈ ಹಾಕುತ್ತಾರೆ. ಅದುವೇ ಇಡೀ ಚಿತ್ರದ ಅಸಲೀ ಶಕ್ತಿ. ಡಬಲ್ ಎಂಜಿನ್ ಚಿತ್ರದಲ್ಲಿ ಕ್ಷಣ ಕ್ಷಣಕ್ಕೂ ಕುತೂಹಹಲವಿದೆ, ಯಾರೂ ಊಹಿಸಲು ಸಾಧ್ಯವಾಗದಂಥಾ ತಿರುವುಗಳಿವೆ. ಆದರೆ ಕಥೆ ಅದೆಷ್ಟೇ ಗಂಭೀರವಾಗಿ ಸಾಗಿದರೂ ಪ್ರತೀ ಕ್ಷಣವೂ ನಗುವಿಗೇನೂ ಕೊರತೆ ಇಲ್ಲ. ಮೂವರು ಹುಡುಗರ ಜೊತೆಗೊಬ್ಬಳು ಸುಂದರಾಂಗಿ, ಅವರ ಜೊತೆಗೆ ಪೊಲೀಸ್ ಅಧಿಕಾರಿಗಳು, ಪ್ರೀತಿಯನ್ನು ದಕ್ಕಿಸಿಕೊಳ್ಳುವ ಪಡಿಪಾಟಲು, ಯಾರನ್ನೋ ತೃಪ್ತಿಪಡಿಸುವ ಪ್ರಾಮಾಣಿಕತೆ, ಹೃದಯ ಮಿಡಿಯುವ ಸನ್ನಿವೇಶ ಎಲ್ಲವೂ ಇದೆ. ಅದೆಲ್ಲ ಇದ್ದರೂ ಎಲ್ಲಿಯೂ ಗೊಂದಲ ಕಾಡದಂತೆ, ಒಂದರೆ ಕ್ಷಣವೂ ಕಥೆಯನ್ನು ಸಡಿಲ ಬಿಡದಂತೆ ನಗುವಿನ ಜೊತೆಗೇ ರೋಚಕವಾಗಿ ಕಟ್ಟಿ ಕೊಡಲಾಗಿದೆ.

    ಮಗನ ಏಳಿಗೆಯನ್ನೇ ಏದುರು ನೋಡುವ ತಾಯಿ, ಒಂಟಿ ಹೆಣ್ಣನ್ನು ಬೇರೆಯದ್ದೇ ದೃಷ್ಟಿಯಿಂದ ಅಳೆಯೋ ಸಮಾಜ, ಹೆಣ್ಣೊಬ್ಬಳು ಸಿಕ್ಕರೆ ಬೇರೆಯದ್ದೇ ದಂಧೆಗಿಳಿಸಲು ಹಾತೊರೆಯೋ ದುಷ್ಟತನ… ಇದೆಲ್ಲವೂ ಡಬಲ್ ಎಂಜಿನ್‍ನಲ್ಲಿದೆ. ಡಬಲ್ ಮೀನಿಂಗಿನಾಚೆಗೆ ಸಮಾಜದ ಅಂಕುಡೊಂಕುಗಳಿಗೂ ಹಾಸ್ಯದ ಮೂಲಕವೇ ಕಣ್ಣಾಗಿರೋ ಈ ಚಿತ್ರ ಬಹುಶಃ ಎಷ್ಟು ಸಲ ನೋಡಿದರೂ ಒಂದು ಕುತೂಹಲವನ್ನು ಖಂಡಿತಾ ಉಳಿಸಿಕೊಳ್ಳುತ್ತದೆ!

  • ಡಬಲ್ ಇಂಜಿನ್, ಅಥರ್ವ ಈ ವಾರ ಬಿಡುಗಡೆ

    ಡಬಲ್ ಇಂಜಿನ್, ಅಥರ್ವ ಈ ವಾರ ಬಿಡುಗಡೆ

    ಬೆಂಗಳೂರು: ಎಸ್ ಆರ್ ಎಸ್ ಲಾಂಛನದಲ್ಲಿ ತಯಾರಾಗಿರುವ ಮನರಂಜನಾತ್ಮಕ ಚಿತ್ರ ‘ಡಬಲ್ ಇಂಜಿನ್’ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ ಬಾಂಬೆ ಮಿಠಾಯಿ ನಿರ್ದೇಶನ ಮಾಡಿ ಯಶಸ್ವಿ ನಿರ್ದೇಶಕ ಎನಿಸಿಕೊಂಡ ಚಂದ್ರ ಮೋಹನ್ ಈ ಚಿತ್ರವನ್ನೂ ಸಂಪೂರ್ಣ ಮನರಂಜನೆಯ ಅಂಶಗಳೊಂದಿಗೆ ತಯಾರು ಮಾಡಿದ್ದಾರೆ.

    ಅರುಣ್ ಕುಮಾರ್ ಎನ್, ಶ್ರೀಕಾಂತ್ ಮಠಪತಿ, ಮಂದಾರ ಎ, ಮಧು ಎಸ್ ಆರ್ ಎಸ್ ಶುಂಠಿ ಕಾಫಿ, ಮಂಜುನಾಥ್ ನಂಜಪ್ಪ, ಪದ್ಮ ಕೃಷ್ಣಮೂರ್ತಿ, ರಾಜು ಪಟೇಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಉದಯ್ ಕೆ ಮೆಹ್ತಾ ಅವರು ಈ ಚಿತ್ರದ ವಿತರಣೆಯನ್ನು ಮಾಡುತ್ತಿದ್ದಾರೆ.

    ಸುಮನ್ ರಂಗನಾಥ್, ಚಿಕ್ಕಣ್ಣ, ಅಶೋಕ್, ಪ್ರಭು, ಪ್ರಿಯಾಂಕ ಮಲ್ನಾಡ್, ಸಾಧು ಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ತಾರಾಗಣದ ಈ ಚಿತ್ರದಲ್ಲಿ ಮೂವರು ಯುವಕರು ಹಳ್ಳಿಯಲ್ಲಿ ವ್ಯವಸಾಯವನ್ನು ಬಿಟ್ಟು ಬಹುಬೇಗ ಶ್ರೀಮಂತರಾಗಲು ಹೊರಟು ಅನುಭವಿಸುವ ಸಂದರ್ಭಗಳು ಪ್ರಮುಖವಾದವು. ಸೂರ್ಯ ಕಿರಣ್ ಛಾಯಾಗ್ರಹಣ, ವೀರ್ ಸಮರ್ಥ ಸಂಗೀತ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

    ಇದೇ ವಾರ ಅಥರ್ವ ಬರುತ್ತಿದ್ದಾನೆ: ಅಥರ್ವ ಚಿತ್ರದ ಮೂಲಕ ಅರ್ಜುನ್ ಸರ್ಜಾ ಕುಟುಂಬದಿಂದ ಬರುತ್ತಿರುವ ಮತ್ತೊಬ್ಬ ನಾಯಕ. ಅವರೇ ಪವನ್ ತೇಜ. ಮಹಾ ಸಿಂಹ ಮೂವೀಸ್ ಅಡಿಯಲ್ಲಿ ವಿನಯ್ ಕುಮಾರ್ ಎಚ್ ನಿರ್ಮಾಣ ಮಾಡಿರುವ ಈ ಚಿತ್ರದ ನಿರ್ದೇಶಕರು ಅರುಣ್. ರಕ್ಷಯ್ ಎಸ್ ವಿ ಸಹ ನಿರ್ಮಾಪಕರು. ಇದನ್ನೂ ಓದಿ: ಅಥರ್ವ ನಾಯಕ ಪವನ್ ತೇಜಾಗೆ ಅರ್ಜುನ್ ಸರ್ಜಾ ಹೇಳಿದ್ದ ಕಿವಿ ಮಾತೇನು?

    ಹಲವು ತಾಕತ್ತುಗಳ ಸಂಗಮವನ್ನು ಪ್ರಥಮ ಪ್ರಯತ್ನದಲ್ಲೇ ಪವನ್ ತೇಜ ನಿಭಾಯಿಸುತ್ತಿದ್ದಾರೆ. ಸನಮ್ ಶೆಟ್ಟಿ ಈ ಚಿತ್ರದ ಕಥಾ ನಾಯಕಿ. ರಂಗಾಯಣ ರಘು, ತಾರಾ, ಧರ್ಮೇಂದ್ರ ಅರಸ್, ಯಶ್ವಂತ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ, ಟಾಮಿ ರವಿ, ನಿಶಾಂತ್, ಚೇತನ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

    ರಾಘವೇಂದ್ರ ಸಂಗೀತ ನಿರ್ದೇಶನ, ಶಿವ ಸೇನಾ ಛಾಯಾಗ್ರಹಣ, ಮೋಹನ್ ನೃತ್ಯ, ರಾಜು ಕಲಾ ನಿರ್ದೇಶನ, ಸಂತೋಷ್ ಎಂ ಸಂಭಾಷಣೆ, ವಿಜೇತ ಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ.