Tag: ಟ್ವೀಟ್

  • ಮತ್ತೆ ಶುರುವಾಯ್ತು ಮಳೆ – ತಮಿಳುನಾಡಿನ ಅನೇಕ ಪ್ರದೇಶ ಜಲಾವೃತ

    ಮತ್ತೆ ಶುರುವಾಯ್ತು ಮಳೆ – ತಮಿಳುನಾಡಿನ ಅನೇಕ ಪ್ರದೇಶ ಜಲಾವೃತ

    ಚೆನ್ನೈ: ಭಾರೀ ಮಳೆಯಿಂದಾಗಿ ಚೆನ್ನೈ ಸೇರಿದಂತೆ ತಮಿಳುನಾಡಿನ ಅನೇಕ ಪ್ರದೇಶಗಳು ಜಲಾವೃತಗೊಂಡಿದೆ. ಕಳೆದ ಕೆಲವು ದಿನಗಳಿಂದ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಮನ್ಸೂನ್ ಮಳೆಯಾಗುತ್ತಿದೆ. ಇದರಿಂದಾಗಿ ಸಾಮಾನ್ಯಕ್ಕಿಂತ ಸುಮಾರು ಶೇ.75ರಷ್ಟು ಮಳೆ ದಾಖಲಾಗಿದೆ.

    ಜಲಾವೃತ ಪ್ರದೇಶಗಳಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ಸ್ಥಳೀಯ ಅಧಿಕಾರಿಗಳು ಪೊಲೀಸರು, ವಿವಿಧ ಇಲಾಖೆಯ ನೌಕರರು ಜನರ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇವರ ಕಾರ್ಯಕ್ಕೆ ಶ್ಲಾಘನೀಯ ಎಂದರು. ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

    ಸತತ ಮಳೆಯಿಂದಾಗಿ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್‍ಪೇಟ್, ಕಡಲೂರು, ನಾಗಪಟ್ಟಿಣಂ, ಪುದುಕೋಟೆ, ಟುಟಿಕೋರಿನ್, ಅರಿಯಾಲೂರ್, ಪೆರುಂಬಲೂರ್, ದಿಂಡಿಗಲ್, ರಾಣಿಪೇಟೆ, ತಿರುಪತ್ತೂರ್, ತಿರುವಣ್ಣಾಮಲೈ ಮತ್ತು ವೆಲ್ಲೂರು ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಪತ್ನಿ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕೊಂದಿದ್ದ ಪಾಪಿ ಪತಿ ಕೊನೆಗೆ ಶವವಾಗಿ ಪತ್ತೆ

    ಕಳೆದ 200 ವರ್ಷಗಳಲ್ಲಿ ಚೆನ್ನೈನಲ್ಲಿ ಒಂದೇ ತಿಂಗಳಲ್ಲಿ ನಾಲ್ಕನೇ ಬಾರಿಗೆ ಅಧಿಕ ಮಳೆ ದಾಖಲಾಗಿದೆ ಎಂದು ತಜ್ಞರು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಚೆನ್ನೈನ ಆರು ಪರಿಹಾರ ಕೇಂದ್ರಗಳಲ್ಲಿ 653 ಜನರನ್ನು ಇರಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

     

  • ಖ್ಯಾತ ವಿದ್ವಾಂಸ ಪ್ರೊ. ಕೆ.ಎಸ್.ನಾರಾಯಣಾಚಾರ್ಯ ವಿಧಿವಶ

    ಖ್ಯಾತ ವಿದ್ವಾಂಸ ಪ್ರೊ. ಕೆ.ಎಸ್.ನಾರಾಯಣಾಚಾರ್ಯ ವಿಧಿವಶ

    ಬೆಂಗಳೂರು: ಸುಪ್ರಸಿದ್ಧ ಲೇಖಕ ಹಾಗೂ ಹಿರಿಯ ವಿದ್ವಾಂಸ ಪ್ರೊ.ಕೆ.ಎಸ್. ನಾರಾಯಣಾಚಾರ್ಯ(88) ನಿಧನರಾಗಿದ್ದಾರೆ.

    ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ತಮ್ಮ ಬೆಂಗಳೂರಿನ ನಿವಾಸದಲ್ಲಿ ಪ್ರೊ.ಕೆ.ಎಸ್. ನಾರಾಯಣಾಚಾರ್ಯ ಅವರು ಕೊನೆಯುಸಿರೆಳೆದಿದ್ದಾರೆ. ಕೆ. ಎಸ್. ನಾರಾಯಣಾಚಾರ್ಯ ಅವರು, 1933ರಲ್ಲಿ ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದರು. ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಇವರು ಪ್ರವಚನಗಳಿಂದ ಲೇಖನದೆಡೆಗೂ ಮುಖ ಮಾಡಿದರು. ನಂತರ ಪ್ರವಚನ ಮತ್ತು ಕಾದಂಬರಿಕಾರರಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ರಾಮಾಯಣಾಚಾರ್ಯ ಎಂದೇ ಖ್ಯಾತಿ ಪಡೆದಿದ್ದರು. ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟ್ರಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    Koo App

    ಖ್ಯಾತ ಚಿಂತಕರು, ಸುಪ್ರಸಿದ್ಧ ಲೇಖಕರು, ಮೇರು ವಿದ್ವಾಂಸರಾಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದು, ಅತೀವ ದುಃಖ ತಂದಿದೆ. ಅವರು ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದರು. ಅವರ ನಿಧನವು ಕನ್ನಡ ಸಾರಸ್ವತ ಹಾಗೂ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕೃತಿಗಳ ಮೂಲಕ ಸದಾಕಾಲ ಅವರ ನೆನಪು ಸದಾಕಾಲ ಉಳಿಯಲಿ ಮತ್ತು ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ

    Basavaraj Bommai (@bsbommai) 26 Nov 2021

    ಶ್ರೀ ರಾಮಾವತಾರ ಸಂಪೂರ್ಣವಾದಾ, ಶ್ರೀ ರಾಮಾಯಣ ಪಾತ್ರ ಪ್ರಪಂಚ, ಶ್ರೀ ಮಹಾಭಾರತ ಪಾತ್ರ ಪ್ರಪಂಚ ಸೇರಿ ಹಲವಾರು ಪುಸ್ತಕಗಳನ್ನು ಕೆ. ಎಸ್. ನಾರಾಯಣಾಚಾರ್ಯ ಅವರು ಬರೆದಿದ್ದಾರೆ. ಅಲ್ಲದೇ ಇವರಿಗೆ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ವಿದ್ವನ್ಮಣಿ’, ‘ವೇದಭೂಷಣ’, ‘ವಾಲ್ಮೀಕಿ ಹೃದಯಜ್ಞ’, ‘ರಾಮಾಯಣಾಚಾರ್ಯ’, ‘ಮಹಾಭಾರತಾಚಾರ್ಯ’ ಮೊದಲಾದ ಬಿರುದುಗಳು ವಿವಿಧ ಮಠಾಧೀಶರಿಂದ ಕೆ. ಎಸ್. ನಾರಾಯಣಾಚಾರ್ಯ ದೊರೆತಿದೆ.

    ಸದ್ಯ ಕೆ. ಎಸ್.ನಾರಾಯಣಾಚಾರ್ಯ ಅವರ ಅಗಲಿಕೆಗೆ ಅನೇಕ ಮಂದಿ ಸಂತಾಪ ಸೂಚಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಪ್ರಖ್ಯಾತ ವಿದ್ವಾಂಸರು ಹಾಗೂ ಅನೇಕ ಪೌರಾಣಿಕ ಕಾದಂಬರಿಗಳ ರಚನಾಕಾರರಾಗಿದ್ದ ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ನಿಧನ ನೋವಿನ ಸಂಗತಿ. ಪ್ರವಚನ ಮತ್ತು ಕಾದಂಬರಿಕಾರರಾಗಿ ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆಫ್ರಿಕಾದಲ್ಲಿ ರೂಪಾಂತರ ಕೋವಿಡ್ ತಳಿ ಪತ್ತೆ – ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

  • ಬೊಮ್ಮಾಯಿ ನಿಮ್ಮ ಹನಿಮೂನ್ ಕಾಲ ಮುಗಿದಿದೆ: ಸಿದ್ದರಾಮಯ್ಯ

    ಬೊಮ್ಮಾಯಿ ನಿಮ್ಮ ಹನಿಮೂನ್ ಕಾಲ ಮುಗಿದಿದೆ: ಸಿದ್ದರಾಮಯ್ಯ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಹನಿಮೂನ್ ಕಾಲ ಮುಗಿದಿದೆ. ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ. ಅವರನ್ನು ಮಳೆಪೀಡಿತ ಜಿಲ್ಲೆಗಳಿಗೆ ಓಡಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹರಿಹಾಯ್ದಿದ್ದಾರೆ.

    basavaraj bommai

    ಅರ್ಧ ರಾಜ್ಯ ಅಕಾಲಿಕ ಮಳೆಯಿಂದ ತತ್ತರಿಸಿಹೋಗಿದೆ. ಕೈಗೆ ಬಂದ ಬೆಳೆ, ಬಾಯಿಗೆ ಬರದೆ ಗದ್ದೆಯಲ್ಲಿ ಕೊಳೆಯುತ್ತಿದೆ. ರಾಜ್ಯ ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕ ಪ್ರದರ್ಶನ ಮಾಡಿಕೊಂಡು ಹೊರಟಿದೆ. ಜನಸ್ವರಾಜ್ ಅಲ್ಲ, ಇದು ಜನಬರ್ಬಾದ್ ಯಾತ್ರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಮಳೆ-ನೆರೆಗೆ ಸಿಕ್ಕಿ 20ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ, ಹತ್ತು ಸಾವಿರ ಹೆಕ್ಟೇರ್‍ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ, ಮನೆ ಬಿದ್ದು ಜನ ಬೀದಿ ಪಾಲಾಗಿದ್ದಾರೆ. ಇವರ ನೆರವಿಗೆ ಧಾವಿಸಬೇಕಾದ ಬಿಜೆಪಿ ಕರ್ನಾಟಕ ಸರ್ಕಾರ ಜನಸ್ವರಾಜ್ ಎಂಬ ನಾಟಕ ಮಾಡುತ್ತಾ ತಿರುಗಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ

     

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಹನಿಮೂನ್ ಕಾಲ ಮುಗಿದಿದೆ.ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ. ಅವರನ್ನು ಮಳೆಪೀಡಿತ ಜಿಲ್ಲೆಗಳಿಗೆ ಓಡಿಸಿ. ಕಣ್ಣೀರಿಟ್ಟು ಗೋಳಾಡುತ್ತಿರುವ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ಕಾರ್ಯ ಕೈಗೊಳ್ಳಲು ಹೇಳಿ ಎಂದಿದ್ದಾರೆ.

    ಸಾವಿರಾರು ಎಕರೆ ಭೂಮಿಯಲ್ಲಿ ಭತ್ತ, ರಾಗಿ, ಜೋಳ, ತರಕಾರಿ, ಬಾಳೆ, ತೆಂಗು ಎಲ್ಲವೂ ನಾಶವಾಗಿದೆ. ರೈತರು ಕಣ್ಣೀರಿನಿಂದ ಕೈತೊಳೆದುಕೊಳ್ಳುತ್ತಿದ್ದಾನೆ. ಸಚಿವರು ಯಾತ್ರೆಯಲ್ಲಿದ್ದಾರೆ, ಅಧಿಕಾರಿಗಳು ಬೆಚ್ಚನೆ ಮನೆಯಲ್ಲಿದ್ದಾರೆ. ಜನ ಬೀದಿಪಾಲಾಗಿದ್ದಾರೆ. ಇಲ್ಲೊಂದು ಸರ್ಕಾರ ಇದೆಯೇ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ

     

    ಮೊದಲು ಅಧಿಕಾರಿಗಳ ತಂಡ ಕಟ್ಟಿಕೊಂಡು ಮಳೆಪೀಡಿತ ಪ್ರದೇಶಗಳಿಗೆ ಸಚಿವರು ಹೋಗಿ ಮಳೆ ನಷ್ಟದ ಅಂದಾಜು ನಡೆಸಿ ತಾತ್ಕಾಲಿಕ ಪರಿಹಾರ ನೀಡಲು ಸೂಚನೆ ನೀಡಿ. ಗಂಜಿ ಕೇಂದ್ರಗಳನ್ನು ತೆರೆಯಲು ಹೇಳಿ. ನಷ್ಟದ ಸಮೀಕ್ಷೆ ನಡೆಸಿ, ಹೆಚ್ಚಿನ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಮಾಡಿ ಎಂದು ತಿಳಿಸಿದ್ದಾರೆ.

  • ನಾಳೆಯಿಂದ ಕರ್ತಾರ್‌ಪುರ ಕಾರಿಡಾರ್‌ ಪುನಾರಂಭ: ಅಮಿತ್ ಶಾ

    ನಾಳೆಯಿಂದ ಕರ್ತಾರ್‌ಪುರ ಕಾರಿಡಾರ್‌ ಪುನಾರಂಭ: ಅಮಿತ್ ಶಾ

    ನವದೆಹಲಿ: ಕರ್ತಾರ್‌ಪುರ ಕಾರಿಡಾರ್‌ ಅನ್ನು ಬುಧವಾರದಿಂದ ಮತ್ತೆ ತೆರೆಯಲಾಗುವುದಾಗಿ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

    ಈ ಕುರಿತಂತೆ ಅಮಿತ್ ಶಾ ಅವರು, ತಮ್ಮ ಟ್ವಿಟ್ಟರ್‌ನಲ್ಲಿ, ಸಾಕಷ್ಟು ಮಂದಿ ಸಿಖ್ ಯಾತ್ರಾರ್ಥಿಗಳಿಗೆ ಅನುಕೂಲವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ನಾಳೆ ಅಂದರೆ ನವೆಂಬರ್ 17ರಿಂದ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು ಪುನಃ ತೆರೆಯಲು ನಿರ್ಧರಿಸಿದೆ. ಈ ನಿರ್ಧಾರವು ಶ್ರೀ ಗುರುನಾನಕ್ ದೇವ್ ಜಿ ಮತ್ತು ನಮ್ಮ ಸಿಖ್ ರಾಷ್ಟ್ರದ ಬಗ್ಗೆ ಮೋದಿ ಸರ್ಕಾರ ಹೊಂದಿರುವ ಅಪಾರ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ, ಗೃಹ ಸಚಿವರ ಕಾರ್ಯಕ್ರಮಕ್ಕೆ ಸಾರ್ವಜನಿಕರ ಹಣ: ಪ್ರಿಯಾಂಕಾ ಗಾಂಧಿ

    ಶುಕ್ರವಾರ ಸಿಖ್ ಧರ್ಮಗುರು ಗುರುನಾನಕ್ ಜಯಂತಿಗೂ ಮುನ್ನವೇ ಸರ್ಕಾರದಿಂದ ಈ ಪ್ರಕಟನೆ ಹೊರಬಿದ್ದಿದೆ. ಕೋವಿಡ್-19 ಹಿನ್ನೆಲೆ ಪಾಕಿಸ್ತಾನದ ಕರ್ತಾರ್‌ಪುರ ಕಾರಿಡಾರ್‌ ಅನ್ನು 2020ರ ಮಾರ್ಚ್‍ನಲ್ಲಿ ಮುಚ್ಚಲಾಯಿತು. ಆದರೆ 11 ನಾಯಕರನ್ನು ಒಳಗೊಂಡ ಪಂಜಾಬ್ ಬಿಜೆಪಿ ನಾಯಕರ ನಿಯೋಗವು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಗುರುಪೂರ್ಣಿಮೆಗೂ ಮುನ್ನ ಕರ್ತಾರ್‌ಪುರ ಕಾರಿಡಾರ್‌ ಅನ್ನು ಪುರ್ನ ತೆರೆಯುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಇದೀಗ ಈ ನಿರ್ಧಾರ ಹೊರಬಿದ್ದಿದೆ. ಅಟ್ಟಾರಿ-ವಾಘಾ ಗಡಿಯ ಮೂಲಕ ಕರ್ತಾರ್‌ಪುರ ಗುರುದ್ವಾರಕ್ಕೆ ತೆರಳಲು ಸಿಖ್ ಯಾತ್ರಿಗಳಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ.

    ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು 2019ರ ನವೆಂಬರ್ 19ರಂದು ಉದ್ಘಾಟಿಸಲಾಯಿತು. ಈ ಬಾರಿ ಅದರ ಎರಡನೇ ವಾರ್ಷಿಕೋತ್ಸವವಾಗಿದ್ದು, ಗುರುನಾನಕ್ ದೇವ್ ಅವರ 550 ನೇ ಜನ್ಮ ವಾರ್ಷಿಕೋತ್ಸವಕ್ಕೂ ಮುನ್ನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾರಿಡಾರ್ ಅನ್ನು ಉದ್ಘಾಟಿಸಿದ್ದಾರೆ.

    ಕರ್ತಾರ್‌ಪುರ ಗ್ರಾಮವು ರವಿ ನದಿಯ ಪಶ್ಚಿಮ ದಂಡೆಯಲ್ಲಿದೆ. ಇಲ್ಲಿ ಶ್ರೀ ಗುರುನಾನಕ್ ದೇವ್ ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಕಳೆದರು. ಗುರುದ್ವಾರ ಶ್ರೀ ಕರ್ತಾರ್ಪುರ್ ಸಾಹಿಬ್ ಪಾಕಿಸ್ತಾನದ ನರೋವಾಲ್ ಜಿಲ್ಲೆಯಲ್ಲಿ ಸುಮಾರು 4.5 ಕಿಮೀ ದೂರದಲ್ಲಿದೆ. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

  • ಖ್ಯಾತ ಇತಿಹಾಸಕಾರ, ಪದ್ಮ ವಿಭೂಷಣ ಪುರಸ್ಕೃತ ಬಾಬಾಸಾಹೇಬ್ ಪುರಂದರೆ ಇನ್ನಿಲ್ಲ

    ಖ್ಯಾತ ಇತಿಹಾಸಕಾರ, ಪದ್ಮ ವಿಭೂಷಣ ಪುರಸ್ಕೃತ ಬಾಬಾಸಾಹೇಬ್ ಪುರಂದರೆ ಇನ್ನಿಲ್ಲ

    ಮುಂಬೈ: ಖ್ಯಾತ ಇತಿಹಾಸಕಾರ-ಲೇಖಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಬಾಸಾಹೇಬ್ ಪುರಂದರೆ(99) ಅವರು ಇಂದು ವಿಧಿವಶರಾಗಿದ್ದಾರೆ.

    ಕೆಲವು ದಿನಗಳಿಂದ ನ್ಯುಮೋನಿಯಾಗೆ ಒಳಗಾಗಿದ್ದ ಬಾಬಾಸಾಹೇಬ್ ಅವರು ಪುಣೆಯ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಇಂದು ಬೆಳಗ್ಗೆ 10.30ರ ಸುಮಾರಿಗೆ ಪುಣೆಯ ವೈಕುಂಠ ಚಿತಾಗಾರದಲ್ಲಿ ಬಾಬಾಸಾಹೇಬ್ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? : ಕ್ಷಮೆ ಕೇಳಿದ ಹಂಸಲೇಖ

    ಬಾಬಾಸಾಹೇಬ್ ಪುರಂದರೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಬಾಬಾಸಾಹೇಬ್ ಪುರಂದರೆ ಅವರೊಂದಿಗೆ ಮೋದಿ ಅವರು ಕುಳಿತುಕೊಂಡು ಮಾತನಾಡುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಆಗುತ್ತಿರುವ ನೋವನ್ನು ಪದಗಳಲ್ಲಿ ಹೇಳಲಾಗುತ್ತಿಲ್ಲ. ಶಿವಶಾಹಿರ್ ಬಾಬಾಸಾಹೇಬ್ ಪುರಂದರೆಯವರ ನಿಧನವು ಇತಿಹಾಸ ಮತ್ತು ಸಂಸ್ಕೃತಿಕ ಜಗತ್ತಿನಲ್ಲಿ ದೊಡ್ಡ ಶೂನ್ಯವನ್ನು ಉಂಟುಮಾಡಿದೆ. ಮುಂಬರುವ ಪೀಳಿಗೆಯವರು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ತಿಳಿಸಿದಕ್ಕೆ ಅವರಿಗೆ ಧನ್ಯವಾದಗಳು. ಅವರ ಇತರ ಕೃತಿಗಳು ಸಹ ನೆನಪಿನಲ್ಲಿ ಉಳಿಯುತ್ತವೆ.

    “ಶಿವಶಾಹಿರ್ ಬಾಬಾಸಾಹೇಬ್ ಪುರಂದರೆ ಅವರು ಪ್ರಜ್ಞಾವಂತರು ಮತ್ತು ಭಾರತೀಯ ಇತಿಹಾಸದ ಶ್ರೀಮಂತ ಜ್ಞಾನವನ್ನು ಹೊಂದಿದ್ದರು”. ಅವರ ವ್ಯಾಪಕ ಕಾರ್ಯಗಳು ಸದಾ ನೆನಪಿನಲ್ಲಿ ಉಳಿಯುತ್ತದೆ. ಈ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಸಂತಾಪಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಮರಾಠಿಯಲ್ಲಿ ಶಿವಾಜಿ ಮಹಾರಾಜ್ ಕುರಿತಂತೆ ಪುರಂದರೆ ಅವರು ಎರಡು ಭಾಗಗಳಲ್ಲಿ ರಚಿಸಿರುವ 900 ಪುಟಗಳ ಕೃತಿ ರಾಜಾ ಶಿವಛತ್ರಪತಿ ಜನಪ್ರಿಯತೆ ಪಡೆದಿತ್ತು. ಮೊದಲ ಬಾರಿಗೆ 1950ರಲ್ಲಿ ಪ್ರಕಟಗೊಂಡ ಕೃತಿಯು ಈವರೆಗೂ ಹಲವು ಬಾರಿ ಮರುಮುದ್ರಣ ಕಂಡಿದೆ ಹಾಗೂ ಮರಾಠಿಗರ ಪ್ರತಿ ಮನೆಯಲ್ಲಿ ಸ್ಥಾನ ಪಡೆದಿದೆ. ಅಲ್ಲದೇ 1980ರಲ್ಲಿ ಶಿವಾಜಿ ಮಹಾರಾಜ್ ಅವರ ಜೀವನ ಆಧರಿಸಿ ಜಾಣತಾ ರಾಜ ನಾಟಕವನ್ನು ರಚಿಸಿ ನಿರ್ದೇಶಿಸಿದ್ದರು.

  • ಕುಟುಂಬ ರಾಜಕಾರಣದಲ್ಲಿ ಬಿಜೆಪಿ ದೇಶದಲ್ಲೇ ದಾಖಲೆ – ಬಿಜೆಪಿ ವಿರುದ್ಧ ಜೆಡಿಎಸ್ ಕಿಡಿ

    ಕುಟುಂಬ ರಾಜಕಾರಣದಲ್ಲಿ ಬಿಜೆಪಿ ದೇಶದಲ್ಲೇ ದಾಖಲೆ – ಬಿಜೆಪಿ ವಿರುದ್ಧ ಜೆಡಿಎಸ್ ಕಿಡಿ

    ಬೆಂಗಳೂರು: ಕುಟುಂಬ ರಾಜಕಾರಣದಲ್ಲಿ ಬಿಜೆಪಿ ದೇಶದ ಎಲ್ಲ ಪಕ್ಷಗಳ ದಾಖಲೆಗಳನ್ನು ಮುರಿದಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

    ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದ ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಜೆಡಿಎಸ್ ವಾಗ್ದಾಳಿ ನಡೆಸಿದೆ. ಈ ಕುರಿತಂತೆ ಜೆಡಿಎಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಬಿಜೆಪಿ ಹೇಳುವುದೊಂದು, ಮಾಡುವುದು ಇನ್ನೊಂದು. ಮನೆಯಲ್ಲಿ ಒಂದು ಮುಖ, ಬೀದಿಯಲ್ಲಿ ಇನ್ನೊಂದು ಮುಖ. ಒಡಕು ರಾಜಕಾರಣದ ಪಕ್ಷಕ್ಕೆ ಹೊಲಸು ರಾಜಕಾರಣದಲ್ಲಿ ಹೆಚ್ಚು ನಂಬಿಕೆ ಎನ್ನುವುದು ಆಪರೇಷನ್ ಕಮಲದ ಮೂಲಕ ರಚನೆ ಮಾಡಿದ ಸರ್ಕಾರಗಳೇ ಸಾಕ್ಷಿ ಎಂದು ಆಕ್ರೋಶ ಹೊರಹಾಕಲಾಗಿದೆ. ಇದನ್ನೂ ಓದಿ: 11 ವರ್ಷದ ಬಳಿಕ ಮೈದುಂಬಿದ ಸುವರ್ಣಾವತಿ ಜಲಾಶಯ- ನದಿ ಪಾತ್ರದ ಜನರಿಗೆ ಎಚ್ಚರಿಕೆ

    ಕುಟುಂಬ ರಾಜಕಾರಣದಲ್ಲಿ ಬಿಜೆಪಿ ದೇಶದ ಎಲ್ಲ ಪಕ್ಷಗಳ ದಾಖಲೆಗಳನ್ನು ಮುರಿದಿದೆ. ಕರ್ನಾಟಕದ ಮಟ್ಟಿಗಂತೂ ಕೇಸರಿ ಕಲಿಗಳದ್ದು ಸಾರ್ವಕಾಲಿಕ ದಾಖಲೆಯೇ. ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ ಎಂದು ವ್ಯಂಗ್ಯವಾಡಿದೆ.ಪಟ್ಟಿ ಇನ್ನೂ ಇದೆ. ರಾಜ್ಯವಾರು ಬರೆಯುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ. ಕುಟುಂಬ ರಾಜಕಾರಣದ ರೆಂಬೆಕೊಂಬೆಗಳು ಸಮೃದ್ಧವಾಗಿರುವುದು ಎಲ್ಲಿ? ಯಾವ ಪಕ್ಷದಲ್ಲಿ? ಕುಟುಂಬ ರಾಜಕಾರಣದ ವಿರಾಟ ದರ್ಶನ ಆಗುತ್ತಿರುತ್ತಿರುವುದು ಎಲ್ಲಿ? ಇದನ್ನೂ ಓದಿ:  ಹೆಣ್ಣು ಮಗು ಮಾರಾಟ ಮಾಡಿದ್ರಾ ಭಿಕ್ಷುಕ ದಂಪತಿ?

    1.ಯಡಿಯೂರಪ್ಪ ಕುಟುಂಬ:
    ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ. ಹಿರಿಮಗ ಲೋಕಸಭೆ ಸದಸ್ಯ, ಕಿರಿಮಗ ಪಕ್ಷದ ಉಪಾಧ್ಯಕ್ಷ.
    2.ಶೆಟ್ಟರ್ ಕುಟುಂಬ:
    ಜಗದೀಶ್ ಶೆಟ್ಟರ್ ಶಾಸಕರು, ಮಾಜಿ ಸಚಿವ, ಮಾಜಿ ಸಿಎಂ; ಅವರ ತಮ್ಮ ಹಾಲಿ ವಿಧಾನ ಪರಿಷತ್ ಸದಸ್ಯ.
    3.ಅಣ್ಣಾ ಸಾಹೇಬ್ ಕುಟುಂಬ:
    ಪತಿ ಲೋಕಸಭೆ ಸದಸ್ಯ, ಪತ್ನಿ ರಾಜ್ಯದಲ್ಲಿ ಕ್ಯಾಬಿನೆಟ್ ಸಚಿವೆ.
    4.ಬಳ್ಳಾರಿ ರೆಡ್ಡಿ ಕುಟುಂಬ:
    ಕರುಣಾಕರ ರೆಡ್ಡಿ ಶಾಸಕ, ಅವರ ಸಹೋದರ ಸೋಮಶೇಖರ ರೆಡ್ಡಿ ಕೂಡ ಶಾಸಕ. ಇನ್ನೊಬ್ಬ ಸಹೋದರ ಬಿಜೆಪಿ ನಾಯಕರೇ. ಅವರ ಗೆಳೆಯ ಶ್ರೀರಾಮುಲು ಈಗ ಮಂತ್ರಿ. ಮಾಜಿ ಎಂಪಿ ಶಾಂತಾ ಅವರು ಶ್ರೀರಾಮುಲು ತಂಗಿ. ಸಣ್ಣ ಫಕೀರಪ್ಪ ಕೂಡ ಅವರ ಪೈಕಿಯೇ.
    5.ಜಾರಕಿಹೊಳಿ ಕುಟುಂಬ:
    ರಮೇಶ್ ಜಾರಕಿಹೊಳಿ ಮಾಜಿ ಮಂತ್ರಿ -ಶಾಸಕರು.ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಹಾಲಿ ಶಾಸಕರು, ಕೆಎಂಎಫ್ ಸದಸ್ಯರು.
    6.ಲಿಂಬಾವಳಿ ಕುಟುಂಬ:
    ಅರವಿಂದ ಲಿಂಬಾವಳಿ ಶಾಸಕರು, ಅವರ ಭಾವಮೈದ ರಘು ಕೂಡ ಶಾಸಕರಲ್ಲವೇ?
    7.ಉದಾಸಿ ಕುಟುಂಬ:
    ದಿವಂಗತ ಉದಾಸಿ ಅವರು ಮಂತ್ರಿಗಳಾಗಿದ್ದರು. ಅವರ ಮಗ ಈಗ ಸಂಸತ್ ಸದಸ್ಯರಾಗಿದ್ದಾರೆ. ಪಟ್ಟಿ ಇನ್ನೂ ಇದೆ. ರಾಜ್ಯವಾರು ಬರೆಯುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ. ಕುಟುಂಬ ರಾಜಕಾರಣದ ರೆಂಬೆ, ಕೊಂಬೆಗಳು ಸಮೃದ್ಧವಾಗಿರುವುದು ಎಲ್ಲಿ? ಯಾವ ಪಕ್ಷದಲ್ಲಿ? ಕುಟುಂಬ ರಾಜಕಾರಣದ ವಿರಾಟ ದರ್ಶನ ಆಗುತ್ತಿರುತ್ತಿರುವುದು ಎಲ್ಲಿ? ಎಂದು ಪ್ರಶ್ನಿಸಿದೆ. ಇದನ್ನೂ ಓದಿ:  ಸಿದ್ದರಾಮಯ್ಯ ಅವ್ರೆ ಯಾರೋ ಬರೆದ್ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು: ಪ್ರತಾಪ್ ಸಿಂಹ

    ರಾಷ್ಟ್ರ ನಿರ್ಮಾಣ ಬಿಜೆಪಿಯ ಗುರಿಯಲ್ಲ. ಆಪರೇಷನ್ ಕಮಲ ಅದರ ಗರಿ. ಆಪರೇಷನ್ ಕಮಲವನ್ನು ರಾಷ್ಟ್ರೀಕರಣ ಮಾಡಿ ರಾಷ್ಟ್ರಪ್ರೇಮ ಮೆರೆದ ಕುಖ್ಯಾತಿ ಅದರದ್ದು. ಒಡಕು ರಾಜಕಾರಣ ಬಿಜೆಪಿ ನಿತ್ಯ ಕಾಯಕ. ಆಪರೇಷನ್ ಕಮಲ ಅದರ ಅಧಿಕೃತ ರಾಜಧರ್ಮ. ಕುಟುಂಬ ರಾಜಕಾರಣ ಅದರ ಅಧಿಕಾರದ ಸೋಪಾನ ಎಂದಿದೆ.

    ಸವಕಲು ಹೇಳಿಕೆಗಳಿಂದ ಬೇಳೆ ಬೇಯಿಸಿಕೊಳ್ಳುವುದು ಬಿಟ್ಟು ಜನರ ಕೆಲಸ ಮಾಡಿ. ಬೇರೆಯವರ ತಟ್ಟೆಯತ್ತ ನೋಡುವ ಚಾಳಿ ಬಿಟ್ಟರೆ ಉತ್ತಮ ಎಂದು ತಿಳಿ ಹೇಳಿದೆ.

  • ತಾರೆಯರು ಒಗ್ಗಟ್ಟಾಗಿರೋಣ: ಎಲ್ಲ ನಟರಿರುವ ಫೋಟೊ ಹಂಚಿಕೊಂಡು ಜಗ್ಗೇಶ್‌ ಕರೆ

    ತಾರೆಯರು ಒಗ್ಗಟ್ಟಾಗಿರೋಣ: ಎಲ್ಲ ನಟರಿರುವ ಫೋಟೊ ಹಂಚಿಕೊಂಡು ಜಗ್ಗೇಶ್‌ ಕರೆ

    ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಹಠಾತ್‌ ನಿಧನವು ಕನ್ನಡ ಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದೆ. ಚಿತ್ರರಂಗದ ಎಲ್ಲ ನಟರೊಂದಿಗೆ ಸ್ನೇಹ ಬಾಂಧವ್ಯದಿಂದ ಇರುತ್ತಿದ್ದ ನಟ ನಿಧನಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದಾರೆ. ಅಲ್ಲದೇ ಇನ್ಮುಂದೆ ಚಿತ್ರರಂಗದ ಪ್ರತಿ ನಟರು ಸ್ಟಾರ್‌ವಾರ್‌, ಫ್ಯಾನ್‌ವಾರ್‌ ಎಂಬ ವೈಮನಸ್ಸನ್ನು ಪಕ್ಕಕ್ಕಿಟ್ಟು ಒಟ್ಟಾಗಿ ಬಾಳೋಣ ಎಂಬಂತಹ ಸಂದೇಶ ಸಾರಲಾಗಿದೆ.

    ಹೌದು, ಸ್ಯಾಂಡಲ್‌ವುಡ್‌ನ ಪ್ರಮುಖ ನಟರ ಭಾವಚಿತ್ರಗಳು ಒಟ್ಟಿಗೆ ಇರುವ ಫೋಟೊವೊಂದು ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. “ಯುನೈಟೆಡ್‌ ಕೆಎಫ್‌ಐ ಕನ್ನಡ ಚಿತ್ರರಂಗ, ಯುನೈಟೆಡ್‌ ಕೆಎಫ್‌ಐ ಫ್ಯಾನ್ಸ್‌” ಎಂಬ ಸಾಲುಗಳು ಆ ಫೋಟೊದಲ್ಲಿದ್ದು, ನಾವೆಲ್ಲರೂ ಒಗ್ಗಟ್ಟಾಗಿರೋಣ ಎಂಬ ಸಂದೇಶವನ್ನು ಬಿಂಬಿಸುತ್ತಿದೆ. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

    ಈ ಫೋಟೊವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ನಟ ಜಗ್ಗೇಶ್‌, “ಈ ಭಾವ ನನ್ನ ಕಣ್ಣಲ್ಲಿ ಆನಂದಭಾಷ್ಪ ತರಿಸಿತು. ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ. ಕನ್ನಡಿಗರು ನಮ್ಮ ಬಂಧುಗಳು. ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು. ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು. ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ. ಲವ್‌ ಆಲ್‌…” ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ಚಿತ್ರರಂಗದಲ್ಲಿ ನಟರು, ಅಭಿಮಾನಿಗಳು ಪರಸ್ಪರ ವೈಮನಸ್ಸು ಸಾಧಿಸುವುದು ಸಾಮಾನ್ಯ. ಕನ್ನಡ ಚಿತ್ರರಂಗದಲ್ಲೂ ಅಂತಹ ಹಲವಾರು ಸನ್ನಿವೇಶಗಳು ನಡೆದಿವೆ. ಆಗ ಚಿತ್ರರಂಗದ ಹಿರಿಯರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುತ್ತಿದ್ದ ಉದಾಹರಣೆಗಳೂ ಇವೆ. ಇದನ್ನೂ ಓದಿ: ಶೇರ್‌ ಮಾಡೋದನ್ನು ನಿಲ್ಲಿಸಿ – ವೈರಲ್ ಆಗಿರುವ ಅಪ್ಪು ಫೋಟೋ ಸೀಕ್ರೆಟ್ ರಿವಿಲ್

    ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಭಾನ್ವಿತ ನಟರ ಸಾಲು ಸಾಲು ಸಾವುಗಳು (ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್‌, ಪುನೀತ್‌ ರಾಜ್‌ಕುಮಾರ್) ಚಿತ್ರರಂಗದಲ್ಲಿ ಬೇಸರ ಮೂಡಿಸಿದೆ. ಇರುವಷ್ಟು ದಿನ ನಾವೆಲ್ಲ ಒಟ್ಟಾಗಿ, ಯಾವುದೇ ವಿವಾದಗಳಿಗೆ ಆಸ್ಪದ ನೀಡದೇ ಬಾಳೋಣ ಎಂಬ ಆಶಯಗಳನ್ನು ಹಿರಿಯ ನಟರು ವ್ಯಕ್ತಪಡಿಸುತ್ತಿದ್ದಾರೆ.

  • ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್‍ಗೆ ಹೇಳಿದ್ದೇನು?

    ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್‍ಗೆ ಹೇಳಿದ್ದೇನು?

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ ನಾಡಿನ ಖ್ಯಾತ ನಟ-ನಟಿಯರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ತಾವು ಕಂಡಂತೆ ಅಪ್ಪು, ನಟನೊಂದಿಗಿನ ಒಡನಾಟವನ್ನೂ ಸ್ಮರಿಸಿದ್ದಾರೆ. ನಟ ಸುದೀಪ್, ಬಾಲ್ಯದಿಂದಲೂ ನಾನೊಬ್ಬ ಸ್ಟಾರ್ ನಟನನ್ನು ನೋಡಿದ್ದೇನೆ. ಹುಟ್ಟುತ್ತಲೇ ಸ್ಟಾರ್ ಆಗಿದ್ದ ಅಪ್ಪು. ಇಂದು ಆತನಿಲ್ಲದಿರುವುದು ಭರಿಸಲಾಗದ ಶೂನ್ಯ ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.

    PUNEET RAJKUMAR

    ಸುದೀಪ್ ಟ್ವೀಟ್‍ನಲ್ಲೇನಿದೆ..?;

    ಅದು ಬಾಲ್ಯಜೀವನದ ಪಯಣ. ನಾನು ಅಪ್ಪುನನ್ನು ಮೊದಲು ಭೇಟಿಯಾಗಿದ್ದು ಶಿವಮೊಗ್ಗದಲ್ಲಿ. ಆಗಲೇ ಅಪ್ಪು ಸ್ಟಾರ್ ಆಗಿದ್ದರು. ಬಾಲನಟನಾಗಿ ಅಭಿನಯಿಸಿದ್ದ “ಭಾಗ್ಯವಂತರು” ಸಿನಿಮಾ ಹಿಟ್ ಆಗಿದ್ದ ಸಂಭ್ರಮಕ್ಕೆ ಪುನೀತ್ ಪ್ರವಾಸ ಕೈಗೊಂಡಿದ್ದರು. ಆಗ ಸಿನಿಮಾರಂಗದಲ್ಲಿ ನಮ್ಮ ತಂದೆಯ ಹೆಸರೂ ಚಿರಪರಿಚಿತ. ಈ ವೇಳೆ ಪುನೀತ್‍ರನ್ನು ಪೋಸ್ಟರ್ ಬಿಡುಗಡೆ ಮಾಡಲು ಮನೆಗೆ ಕರೆತರಲಾಗಿತ್ತು. ಅದೇ ಮೊದಲು ನಾನು ಅವರನ್ನು ಭೇಟಿಯಾಗಿದ್ದು. ಆ ವೇಳೆ ನನ್ನ ಆಟಿಕೆಗಳನ್ನು ಕಂಡ ಪುನೀತ್‍ಗೆ ಬಹಳ ಕುತೂಹಲ ಮೂಡಿತ್ತು. ಇದನ್ನೂ ಓದಿ: ಮೂರು ವಾರಗಳ ಹಿಂದೆ ಅಪ್ಪು ಜೊತೆ ಮಾತನಾಡಿದ್ದೆ: ರಮ್ಯಾ

    PUNEET RAJKUMAR

    ನಾವಿಬ್ಬರೂ (ಪುನೀತ್-ಸುದೀಪ್) ಆಟವಾಡುತ್ತಿದ್ದಾಗ ಮಹಿಳೆಯೊಬ್ಬರು ತಟ್ಟೆಯಲ್ಲಿ ಊಟ ಹಾಕಿಕೊಂಡು ಪುನೀತ್ ತಿನ್ನಿಸಲು ಓಡಿಬಂದ ಪ್ರಸಂಗ ನನಗೀಗಲೂ ನೆನಪಿದೆ. ಆತನನ್ನು ನೋಡಿ ಅವರು ತುಂಬಾ ಭಾವುಕರಾದರು. ಈ ಚಿತ್ರಣವನ್ನು ಕಂಡು ನಾನು ಕೂತು ಭಾವುಕನಾಗಿದ್ದೆ.

    PUNEET

    ಆ ದಿನ ನೆರೆಹೊರೆಯವರು, ಮಕ್ಕಳೆಲ್ಲ ನಮ್ಮ ಮನೆಯಲ್ಲಿ ದಂಡುದಂಡಾಗಿ ನೆರೆದಿದ್ದರು. ಬೇರೆ ಮಕ್ಕಳಿದ್ದಾರೆಂದಲ್ಲ, ಚಿತ್ರರಂಗದ ದಂತಕಥೆ ಡಾ. ರಾಜ್‍ಕುಮಾರ್ ಅವರ ಪುತ್ರ ಬಾಲಕ ಸ್ಟಾರ್ ಪುನೀತ್ ಬಂದಿದ್ದಾರೆಂಬ ಕಾರಣಕ್ಕೆ ಹೆಚ್ಚಿನ ಮಂದಿ ಅಂದು ಮನೆಯಲ್ಲಿ ನೆರೆದಿದ್ದರು.

    ಅದಾದ ಬಳಿಕ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಕಾರಣ ನಾವಿಬ್ಬರೂ ಹಲವು ಬಾರಿ ಭೇಟಿಯಾಗಿದ್ದೇವೆ. ಪುನೀತ್ ನನಗೆ ಸ್ನೇಹಿತ ಮಾತ್ರವಲ್ಲ, ಅತ್ಯುತ್ತಮ ಸ್ಪರ್ಧಿಯೂ ಹೌದು. ಅಪ್ಪು ಒಬ್ಬ ಅದ್ಭುತ ನಟ, ಡ್ಯಾನ್ಸರ್, ಫೈಟರ್, ಅತ್ಯುತ್ತಮ ವ್ಯಕ್ತಿ ಕೂಡ ಹೌದು. ನನ್ನ ನಟನೆಯನ್ನೂ ಉತ್ತಮಗೊಳಿಸಿಕೊಳ್ಳುವ ಉದ್ದೇಶದಿಂದ ಪುನೀತ್ ಅವರ ನಟನಾ ಸ್ಪರ್ಧೆಯನ್ನು ನಾನು ಸಂತೋಷದಿಂದಲೇ ಸ್ವೀಕರಿಸಿದ್ದೆ. ಅಂತಹ ಅದ್ಭುತ ನಟನ ಪರಂಪರೆಯಲ್ಲಿ ಜೊತೆಗಾರನಾಗಿ ಗುರುತಿಸಿಕೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ ಎಂದು ನಟ ಕಿಚ್ಚ ಸುದೀಪ್ ಅವರು ಪುನೀತ್ ಅವರೊಂದಿಗೆ ಕಳೆದ ಮಧುರ ಕ್ಷಣಗಳನ್ನು ಸ್ಮರಿಸಿದ್ದಾರೆ.

    SUDEEP

    ಚಿತ್ರರಂಗ ಇಂದು ಅಪೂರ್ಣವಾಗಿದೆ. ಕತ್ತಲಾವರಿಸಿದೆ. ಕಾಲ ನಿಜಕ್ಕೂ ಕ್ರೂರಿ. ಈ ನೆಲ ದುಃಖದಿಂದ ಆವರಿಸಿದೆ. ಪ್ರಕೃತಿಯೇ ದುಃಖಿಸುತ್ತಿರುವಂತೆ ನಿನ್ನೆಯ ಸಂದರ್ಭ ಭಾಸವಾಯಿತು. ಮಂಕಾದ ದಿನವದು. ಕಾರ್ಮೋಡ ಕವಿದಂತಹ ಅನುಭವ. ನಾನು ಬೆಂಗಳೂರಿಗೆ ಬಂದ ತಕ್ಷಣ ಪುನೀತ್‍ನನ್ನು ಇರಿಸಿದ್ದ ಜಾಗಕ್ಕೆ ತಕ್ಷಣ ಹೊರಟೆ. ನನ್ನ ಉಸಿರಿನ ಏರಿಳಿತ ಹೆಚ್ಚಾಗಿತ್ತು. ಆ ಸಂದರ್ಭ ವಾಸ್ತವವಾಗಿದ್ದರೂ ಅದನ್ನು ಅರಗಿಸಿಕೊಳ್ಳಲು ನನ್ನಿಂದಾಗಲಿಲ್ಲ.

    ಅಪ್ಪು ಮಲಗಿರುವುದನ್ನು ಕಂಡು ಎಲ್ಲರೆದೆಯ ಮೇಲೆ ಪರ್ವತವೇ ಬಿದ್ದಂತೆ ಭಾಸವಾಯಿತು. ಯಾಕೆ.. ಹೇಗೆ!!!! ಎಂಬಂತಹ ಹಲವು ಪ್ರಶ್ನೆಗಳು, ಮಾತುಗಳು ಹೊರಡುತ್ತಿದ್ದವು. ನಾನು ಸರಿಯಾಗಿ ಉಸಿರಾಡಲು ಸಾಧ್ಯವಾಗದೇ ಹೋದದ್ದು ಅದೇ ಮೊದಲು. ನನ್ನ ಸಹದ್ಯೋಗಿ, ಗೆಳೆಯ, ಬಾರದ ಲೋಕಕ್ಕೆ ಹೋಗಿದ್ದಾನೆ. ಆ ಸ್ಥಿತಿಯಲ್ಲಿ ಆತನನ್ನು ಹೆಚ್ಚು ಸಮಯ ನನ್ನಿಂದ ನೋಡಲಾಗಲಿಲ್ಲ. ಆ ನೋಟ ನನ್ನನ್ನು ಕೊಲ್ಲುತ್ತಿತ್ತು.

    PUNEET

    ಆ ವೇಳೆ ಶಿವಣ್ಣನ ಕಡೆಗೆ ನೋಡಿದೆ. ಆಗ ಶಿವಣ್ಣ ನನ್ನೊಂದಿಗೆ ಹೇಳಿದ, “ಅಪ್ಪು ನನಗಿಂತ 13 ವರ್ಷ ಚಿಕ್ಕವನು. ನನ್ನ ತೋಳುಗಳಲ್ಲಿ ಆತನನ್ನು ಎತ್ತಿ ಆಡಿಸಿದ್ದೇನೆ. ನಾನು ಇಲ್ಲಿಯವರೆಗೂ ಆತನನ್ನು ನೋಡಿಕೊಂಡು ಬಂದಿದ್ದೇನೆ. ಈಗ ನಾನು ಇನ್ಯಾರನ್ನು ನೋಡಲು ಸಾಧ್ಯ…!. ಇದನ್ನೂ ಓದಿ: ಇಂದಲ್ಲ, ನಾಳೆ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

    ಶಿವಣ್ಣನ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಎಲ್ಲರೂ ದಿಗ್ಭ್ರಾಂತರಾಗಿದ್ದಾರೆ, ನೊಂದಿದ್ದಾರೆ, ಛಿದ್ರರಾಗಿದ್ದಾರೆ. ಇದನ್ನು ಸ್ವೀಕರಿಸಲು ಎಲ್ಲರಿಗೂ ಬಹುಕಾಲ ಬೇಕಾಗುತ್ತದೆ. ಖಾಲಿತನ ನಮ್ಮನ್ನು ಆವರಿಸಿದೆ. ಅಪ್ಪುವಿನ ಜಾಗವನ್ನು ಯಾರಿಂದಲೂ ತುಂಬಲಾಗುವುದಿಲ್ಲ. ಒಬ್ಬ ಮಹಾನ್ ವ್ಯಕ್ತಿಗೆ ಸೇರಿದ ಜಾಗವದು. “ಪುನೀತ್”,,,, ನನ್ನ ಪ್ರೀತಿ “ಅಪ್ಪು”. ಶಾಂತನಾಗಿ ಹೋಗು, ಚಿರಶಕ್ತಿ ದೊರೆಕಲಿ ನನ್ನ ಸ್ನೇಹಿತನೇ.

  • ಇದು ಸಾಯುವ ವಯಸ್ಸು ಅಲ್ಲ: ನರೇಂದ್ರ ಮೋದಿ

    ಇದು ಸಾಯುವ ವಯಸ್ಸು ಅಲ್ಲ: ನರೇಂದ್ರ ಮೋದಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅಗಲಿಕೆ ಇಡೀ ಭಾರತೀಯ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟವನ್ನುಂಟು ಮಾಡಿದ್ದು, ಪುನೀತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

    ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್‍ನಲ್ಲಿ, ವಿಧಿಯ ಕ್ರೂರ ತಿರುವು ಪುನೀತ್ ರಾಜ್‍ಕುಮಾರ್ ಎಂಬ ಸಮೃದ್ಧ ಮತ್ತು ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ. ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂಬರುವ ಪೀಳಿಗೆಗಳು ಅವರ ಕೃತಿಗಳು ಮತ್ತು ಅದ್ಭುತ ವ್ಯಕ್ತಿತ್ವಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

     

    ನಟ ಪುನೀತ್ ರಾಜ್‍ಕುಮಾರ್(46) ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಎಂದಿನಂತೆ ಬೆಳಗ್ಗೆ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ಅಪ್ಪು ಬೆಳಗ್ಗೆ 11 ಗಂಟೆ ಸುಮಾರಿಗೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಾರೆ.

  • ಬಿಜೆಪಿಯವರಿಗೆ ಹಸುಗಳ ಮೇಲೆ ಪ್ರೀತಿ ಇದ್ದರೆ ಗೋಮಾಂಸ ರಫ್ತು ನಿಲ್ಲಿಸಲಿ: ಎಚ್.ಸಿ.ಮಹದೇವಪ್ಪ

    ಬಿಜೆಪಿಯವರಿಗೆ ಹಸುಗಳ ಮೇಲೆ ಪ್ರೀತಿ ಇದ್ದರೆ ಗೋಮಾಂಸ ರಫ್ತು ನಿಲ್ಲಿಸಲಿ: ಎಚ್.ಸಿ.ಮಹದೇವಪ್ಪ

    ಮೈಸೂರು: ಬಿಜೆಪಿಯವರಿಗೆ ನಿಜವಾಗಿಯೂ ಹಸುಗಳ ಬಗ್ಗೆ ಪ್ರೀತಿ ಇದ್ದರೆ ಮೊದಲು ಇವರು ಮಾಡುತ್ತಿರುವ ಗೋಮಾಂಸ ರಫ್ತನ್ನು ನಿಲ್ಲಿಸಲಿ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಸವಾಲು ಹಾಕಿದ್ದಾರೆ.

    GOVU POOJA

    ಬಲಿಪಾಡ್ಯಮಿ ದಿನದಂದು ಕಡ್ಡಾಯವಾಗಿ ಗೋಪೂಜೆ ಮಾಡಬೇಕೆಂಬ ರಾಜ್ಯ ಸರ್ಕಾರದ ಆದೇಶ ನಾಟಕೀಯವಾದದ್ದು ಎಂದು ಎಚ್.ಸಿ.ಮಹದೇವಪ್ಪ ಆರೋಪಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ದೀಪಾವಳಿ ಹಬ್ಬದಂದು ದೇವಾಲಯಗಳಲ್ಲಿ ಗೋಪೂಜೆ ಮಾಡಬೇಕೆಂದು ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರವು ದೀಪಾವಳಿಯ ಪೂಜೆ ವೇಳೆ ಸಹಜವಾಗಿ ನಡೆಯುವ ಗೋಪೂಜೆ ಆಚರಣೆಗಳಿಗೂ ತನ್ನ ರಾಜಕೀಯ ಬಣ್ಣ ಬಳಿದಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಬಲಿಪಾಡ್ಯಮಿ ದಿನ ದೇವಾಲಯಗಳಲ್ಲಿ ಗೋಪೂಜೆ ಕಡ್ಡಾಯ: ಧಾರ್ಮಿಕ ದತ್ತಿ ಇಲಾಖೆ

    ಗ್ರಾಮೀಣ ಭಾರತದಲ್ಲಿ ಕೃಷಿಯ ಮೂಲಕ ಬದುಕು ಕಂಡುಕೊಂಡಿರುವ ಎಲ್ಲಾ ರೈತರೂ ದೀಪಾವಳಿ ಮತ್ತು ಸಂಕ್ರಾಂತಿ ಹಬ್ಬದ ವೇಳೆ ಹಸುಗಳ ಮೈತೊಳೆದು, ಅಲಂಕಾರ ಮಾಡಿ ನಂತರ ಕಿಚ್ಚು ಹಾಕಿಸುವಂತಹ ಆಚರಣೆಯು ಅನಾದಿ ಕಾಲದಿಂದಲೂ ಇದೆ. ಈ ಆಚರಣೆಯನ್ನು ನಮ್ಮ ರೈತರು ಬಿಜೆಪಿಗರಿಂದ ಕಲಿಯಬೇಕೇನು ಎಂದು ಪ್ರಶ್ನಿಸಿದ್ದಾರೆ.

    ಬೆಲೆ ಏರಿಕೆಯ ನಡುವೆ ದೀಪಾವಳಿಯೂ ಬೇಡ ಎಂಬ ಪರಿಸ್ಥಿತಿಗೆ ಜನಸಮಾನ್ಯರನ್ನು ನೂಕಿರುವ ಬಿಜೆಪಿಗರು ಗೋವಿನ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ಅತ್ಯಂತ ಹಾಸ್ಯಸ್ಪದ ಬೆಳವಣಿಗೆ ಎಂದು ಲೇವಡಿ ಮಾಡಿದ್ದಾರೆ.

    BEEF

    ಹೈನುಗಾರಿಕೆಯನ್ನೇ ಉಪ ಕಸುಬಾಗಿಸಿಕೊಂಡಿರುವ ನಮ್ಮೆಲ್ಲಾ ರೈತರ ಕುಟುಂಬಗಳಿಗೆ ತಲಾ 2 ಹಸುಗಳನ್ನು ನೀಡುವ ಮೂಲಕ ಹಸುವಿನ ಮತ್ತು ರೈತರ ಬದುಕಿಗೆ ನೆರವಾಗಲಿ. ಗಗನಕ್ಕೆ ಏರಿರುವ ರಸಗೊಬ್ಬರದ ಬೆಲೆ ಇಳಿಸಲಿ. ಕೃಷಿ ಉಪಕರಣಗಳ ಬೆಲೆಯನ್ನು ತಗ್ಗಿಸಿ ಕೃಷಿ ಉತ್ಪಾದನೆಯನ್ನು ಉತ್ತೇಜಿಸಲಿ. ಸುಮ್ಮನೇ ಗೋವಿನ ಹೆಸರಲ್ಲಿ ನಾಟಕವೇಕೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಸುವರ್ಣಸೌಧ ಮುಂದೆ ಮಾತಾಡ್ ಮಾತಾಡ್ ‘ಕನ್ನಡ’ ಗೀತೆಗಳ ಕಲರವ

    ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರವು ಜನಸಮಾನ್ಯರಿಗೆ ಬೆಲೆ ಏರಿಕೆಯ ಕೊಡುಗೆಯನ್ನು ನೀಡಿದ್ದು ದೇಶಪ್ರೇಮದ ಹೆಸರನ್ನು ಹೇಳಿಕೊಂಡು ದೇಶ ನಿವಾಸಿಗಳಿಗೆ ಮೋಸ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಜನಸಾಮಾನ್ಯರು ದಂಗೆ ಏಳುವುದು ಅನಿವಾರ್ಯವಾಗಿ ಕಾಣುತ್ತಿದೆ. ಜನಸಾಮಾನ್ಯರ ನೇರ ಆಕ್ರೋಶವೇ ಇದಕ್ಕೆ ಅಂತಿಮ ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.