Tag: ಟ್ವೀಟ್

  • ಮತ್ತೆ ಅಧಿಕಾರಕ್ಕೆ ಬಂದರೆ 1 ಲಕ್ಷ ಉದ್ಯೋಗ: ಸಿಎಂ ಚನ್ನಿ ಭರವಸೆ

    ಮತ್ತೆ ಅಧಿಕಾರಕ್ಕೆ ಬಂದರೆ 1 ಲಕ್ಷ ಉದ್ಯೋಗ: ಸಿಎಂ ಚನ್ನಿ ಭರವಸೆ

    ಚಂಡೀಗಢ: ಮತದಾನಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಪಂಜಾಬ್‍ನಲ್ಲಿ ಚುನಾವಣೆ ಕಾವು ಜೋರಾಗಿದ್ದು, ಮತದಾರರನ್ನು ಓಲೈಸಲು ಹಲವು ಭರಪೂರ ಕೊಡುಗೆಗಳನ್ನು ಘೋಷಿಸಲಾಗುತ್ತಿದೆ. ಇದೇ ಹಾದಿಯಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಚಿತ ಕೊಡುಗೆಗಳ ಭರವಸೆ ನೀಡಿದ್ದಾರೆ.

    ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪಂಜಾಬ್‍ನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 1 ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಆರು ತಿಂಗಳಲ್ಲಿ ಬಡವರಿಗೆ ವಸತಿ ಕಲ್ಪಿಸುವುದಾಗಿ ಘೋಷಿಸಿದ್ದಾರೆ. ನಾವು ಶಿಕ್ಷಣ, ಆರೋಗ್ಯ ಮತ್ತು ವಸತಿಗಳಲ್ಲಿ ಕ್ಷೇತ್ರದಲ್ಲಿ ಕೇಂದ್ರಿಕರಿಸಲಿದ್ದು, ಸಣ್ಣ ಉದ್ಯಮಿಗಳಿಗೂ ತೇರಿಗೆ ರಿಯಾಯಿತಿ ನೀಡುತ್ತೇವೆ, ಮಹಿಳೆಯರ ಅಭ್ಯುದಯಕ್ಕಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ ಎಂದು ಚನ್ನಿ ಟ್ವೀಟ್ ಮಾಡಿದ್ದಾರೆ.

    ಆಟಾ – ದಾಲ್ ( ಹಿಟ್ಟು – ಬೇಳೆ ) ಹೊಟ್ಟೆಯನ್ನು ಮಾತ್ರ ತುಂಬಿಸುತ್ತದೆ. ಪಂಜಾಬಿನ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯವಾಗಿದೆ. ಆದರೆ ಖಾಸಗಿ ಸಂಸ್ಥೆಗಳಲ್ಲಿ ಓದುವುದು ತುಂಬಾ ದುಬಾರಿಯಾಗಿದ್ದು, ಪೋಷಕರು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ನಾವು ವಿದ್ಯಾವಂತರಾಗಿದ್ದೇವೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಉಚಿತ ಗುಣಮಟ್ಟದ ಶಿಕ್ಷಣ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

    ಅಕಾಲಿ ಸರ್ಕಾರದ ಅವಧಿಯಲ್ಲಿ ರದ್ದುಪಡಿಸಿದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆಗಳನ್ನು ಮರುಪ್ರಾರಂಭಿಸಲಾಗುವುದು. ಸಾಮಾನ್ಯ ವರ್ಗದ ಬಡ ವಿದ್ಯಾರ್ಥಿಗಳು ಮತ್ತು ರೈತ ಕುಟುಂಬದಿಂದ ಬಂದವರು ಸಹ ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ. ಶುಲ್ಕದ ಮೇಲೆ ಕಡಿಮೆ ನಿಬಂಧನೆಗಳು ಇರುತ್ತವೆ ಎಂದು ಚನ್ನಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಒಡಹುಟ್ಟಿದವರೇ ಕಾಂಗ್ರೆಸ್‌ ನಾಶ ಮಾಡ್ತಾರೆ, ಚಿಂತಿಸಬೇಡಿ: ಯೋಗಿ ಆದಿತ್ಯನಾಥ್‌

    ಯುವಕರಿಗೆ ಉದ್ಯೋಗದ ಭರವಸೆ ನೀಡಿರುವ ಅವರು, ಪ್ರತಿಯೊಬ್ಬ ಯುವಕರು ಉದ್ಯೋಗವನ್ನು ಹೊಂದಿರಬೇಕು, ಇದಕ್ಕಾಗಿ ಸರ್ಕಾರ ಸಾಲ ನೀಡಲಿದೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಹೊಂದಿರುವವರಿಗೆ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಅಥವಾ ಕೆಲಸ ಮಾಡಲು ಬಯಸುವವರಿಗೆ ಖಾತರಿ ಯೋಜನೆಯನ್ನು ಪರಿಚಯಿಸುತ್ತೇವೆ. ಅಂತಹ ಅಭ್ಯರ್ಥಿಗಳ ವಿದೇಶಿ ಪ್ರಯಾಣಕ್ಕೆ ಅನುಕೂಲವಾಗುವ ಯೋಜನೆಗಳನ್ನು ಸಹ ಪರಿಚಯಿಸಲಾಗುವುದು ಎಂದರು. ಇದನ್ನೂ ಓದಿ: ಹಿಜಬ್ ಧರಿಸಿ ಕಲಾಪಕ್ಕೆ ಆಗಮಿಸಿದ ಕಲಬುರಗಿ ಕಾಂಗ್ರೆಸ್‍ ಶಾಸಕಿ

    ನನಗೆ ಮೂರು ತಿಂಗಳು ಮಾತ್ರ ಸಿಕ್ಕಿತು. ಆದರೆ ಐದು ವರ್ಷ ಸಿಕ್ಕರೆ ಒಂದು ಲಕ್ಷ ಉದ್ಯೋಗ ಮಂಜೂರು ಮಾಡುತ್ತೇನೆ, ವಿದೇಶಿ ಆಸ್ಪತ್ರೆಗಳಲ್ಲಿ ಒದಗಿಸುವ ಸೌಲಭ್ಯಗಳ ಮಾದರಿಯಲ್ಲಿ ನಾವು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುತ್ತೇವೆ, ಆರು ತಿಂಗಳಲ್ಲಿ, ಪ್ರತಿಯೊಬ್ಬ ಬಡವನ ತಲೆಯ ಮೇಲೆ ಗಟ್ಟಿಯಾದ ಸೂರು ಇರುವುದನ್ನು ನಾನು ಖಚಿತಪಡಿಸುತ್ತೇನೆ. ಇದು ನನ್ನ ಬದ್ಧತೆ ಎಂದು ಅವರು ಟ್ವಿಟ್ ನಲ್ಲಿ ವಿವರಿಸಿದ್ದಾರೆ.

  • ಹಿಜಬ್-ಕೇಸರಿ ಶಾಲು ಗಲಭೆಗೆ ಬಿಜೆಪಿ ಸರ್ಕಾರವೇ ಕಾರಣ: ಪ್ರಿಯಾಂಕ್ ಖರ್ಗೆ ಆರೋಪ

    ಹಿಜಬ್-ಕೇಸರಿ ಶಾಲು ಗಲಭೆಗೆ ಬಿಜೆಪಿ ಸರ್ಕಾರವೇ ಕಾರಣ: ಪ್ರಿಯಾಂಕ್ ಖರ್ಗೆ ಆರೋಪ

    ಕಲಬುರಗಿ: ಹಿಜಬ್ ಕೇಸರಿ ಶಾಲು ವಿಚಾರವಾಗಿ ರಾಜ್ಯದ ಕಾಲೇಜುಗಳಲ್ಲಿನ ವಾತಾವರಣ ಪ್ರಕ್ಷುಬ್ಧವಾಗಿದ್ದು ಇದಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

    ಟ್ವೀಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಹಲವಾರು ದಿನಗಳಿಂದ ವಿವಾದವಿದ್ದರೂ, ಬಗೆಹರಿಸಲು ಅವಕಾಶವಿದ್ದರೂ ಸರ್ಕಾರ ಬೆಳೆಯಲು ಬಿಟ್ಟಿದೆ. ರಾಜ್ಯಾದ್ಯಂತ ಗಲಭೆಯಾಗುತ್ತದೆ ಎಂದು ನಿಮಗೆ ತಿಳಿದಿರಲಿಲ್ಲವೇ? ಶಾಲು ಹಂಚುವವರನ್ನು, ಪ್ರತಿಭಟನೆ ಸಂಘಟಿಸುವವರನ್ನು ನಿಯಂತ್ರಿಸಲು ಬಿಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶಾಲೆಗಳು ಧರ್ಮ ಪ್ರದರ್ಶನದ ಸ್ಥಳವಲ್ಲ, ಭಾರತೀಯರೆಂಬ ಒಗ್ಗಟ್ಟನ್ನು ಪ್ರದರ್ಶಿಸಿ: ಖುಷ್ಬೂ

    ಟ್ವಿಟ್ಟರ್‍ನಲ್ಲೇನಿದೆ?
    ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಹಾರಬೇಕಾದಲ್ಲಿ ಕೇಸರಿ ಧ್ವಜ ಹಾರಿಸಲಾಯ್ತು. ಸಾಗರದಲ್ಲಿ ಶಾಸಕರ ಎದುರೇ ಹಲ್ಲೆ ಘರ್ಷಣೆ ನಡೆಯಿತು. ಕುಶಾಲನಗರದಲ್ಲಿ ಕೇಸರಿ ಶಾಲು ಧರಿಸಲು ಒಪ್ಪದ ವಿದ್ಯಾರ್ಥಿಗೆ ಚೂರಿ ಇರಿಯಲಾಯ್ತು. ಪ್ರಾಧ್ಯಾಪಕರು, ಪೆÇಲೀಸರ ಮೇಲೆಯೇ ಹಲ್ಲೆಗಳು ನಡೆದವು. ಇದನ್ನೂ ಓದಿ: ಹಿಜಬ್ ವಿವಾದದಲ್ಲಿ ತಪ್ಪು ಮಾಡಿದವರನ್ನು ಬಂಧಿಸಲಿ: ತಂಗಡಗಿ

    ರಾಜ್ಯದ ಯುವಜನತೆಗೆ ಉದ್ಯೋಗ ದೊರಕಿಸಿಕೊಡಬೇಕಾದ ಸರ್ಕಾರ ಶಿಕ್ಷಣವನ್ನು ವಂಚಿಸುತ್ತಿದೆ. ಕೌಶಲ್ಯ ತರಬೇತಿ ನೀಡಬೇಕಾದ ಸರ್ಕಾರ ಕೇಸರಿ ಶಲ್ಯದ ತರಬೇತಿ ನೀಡುತ್ತಿದೆ. ಪುಸ್ತಕ ಕೊಡಬೇಕಾದ ಸರ್ಕಾರ ಕೈಯಲ್ಲಿ ಕಲ್ಲು ಕೋಲು ಕೊಟ್ಟು ಕಳಿಸುತ್ತಿದೆ. ವಿದ್ಯಾಧೀಕ್ಷೆ ಬದಲು ತ್ರಿಶೂಲ ದೀಕ್ಷೆಗೆ ಪ್ರೇರೇಪಿಸುತ್ತಿದೆ.

    ರಾಜ್ಯದ ಓದುವ ಮಕ್ಕಳು ತಮ್ಮ ಭವಿಷ್ಯದ ಚಿಂತನೆ ಏಕೈಕ ಗುರಿಯೊಂದಿಗೆ ಓದುತ್ತಿದ್ದರು. ಬೇಧ ಭಾವ ಅರಿಯದೆ ಆಟ ಪಾಠಗಳಲ್ಲಿ ಒಂದಾಗುತ್ತಿದ್ದರು. ರಾಜಕೀಯ ಹಾಗೂ ಧಾರ್ಮಿಕ ಪ್ರಲೋಭನೆಗೆ ಸಿಲುಕದೆ ನಿಷ್ಕಲ್ಮಶ ಮನಸ್ಸು ಹೊಂದಿದ್ದರು. ಇಂತಹ ಮನಸ್ಸುಗಳಲ್ಲಿ ಈಗ ಏಕಾಏಕಿ ದ್ವೇಷದ ಕಿಚ್ಚು ಹಚ್ಚಲು ಬಿಜೆಪಿ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದೆ. ಇದನ್ನೂ ಓದಿ:  ಬ್ರಿಟಿಷರು ಬಿಜೆಪಿ ರೂಪದಲ್ಲಿ ಮತ್ತೆ ಭಾರತಕ್ಕೆ ಬಂದಿದ್ದಾರೆ: ಲಾಲೂ ಪ್ರಸಾದ್ ಯಾದವ್

    ಸಮಾಜವಾದದ ನೆಲದಲ್ಲಿ ರಾಜ್ಯವೇ ತಲೆ ತಗ್ಗಿಸುವ ಘಟನೆಗಳು ನಡೆದಿವೆ. ನಿಮ್ಮದೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದಿರುವುದು ನಿಮ್ಮ ಅಸಾಮಾಥ್ರ್ಯವೇ ಅಥವಾ ನಿಮ್ಮ ಕುಮ್ಮಕ್ಕು ಇದೆಯೇ? ನೀವು ಜಪಿಸುವ ಯುಪಿ ಮಾಡೆಲ್‍ಅನ್ನು ಜಾರಿಗೊಳಿಸಿ ಕರ್ನಾಟಕವನ್ನು ಬೆಂಕಿಯಲ್ಲಿ ಬೇಯಿಸುವ ಇರಾದೆಯೇ ಎಂದು ಪ್ರಶ್ನಿಸಿದ್ದಾರೆ.

  • ಕಾಂಗ್ರೆಸ್‌ ಹೈಕಮಾಂಡ್‌ಗೆ ಮೂರ್ಛೆ ರೋಗ ತರಿಸಲು ಸಿದ್ದು, ಸಿಧು ಸಾಕು: ಬಿಜೆಪಿ ವ್ಯಂಗ್ಯ

    ಕಾಂಗ್ರೆಸ್‌ ಹೈಕಮಾಂಡ್‌ಗೆ ಮೂರ್ಛೆ ರೋಗ ತರಿಸಲು ಸಿದ್ದು, ಸಿಧು ಸಾಕು: ಬಿಜೆಪಿ ವ್ಯಂಗ್ಯ

    ಬೆಂಗಳೂರು: ಕರ್ನಾಟಕ ಹಾಗೂ ಪಂಜಾಬ್‌ನಲ್ಲಿ ಕಾಂಗ್ರೆಸ್‌ ನಾಯಕರು ಶೀತಲ ಸಮರ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಮತ್ತು ನವಜೋತ್‌ ಸಿಂಗ್‌ ಸಿಧು ವಿರುದ್ಧ ಹರಿಹಾಯ್ದಿದೆ.

    ಪಂಜಾಬ್‌ನಲ್ಲಿ ಚುಣಾವಣೆಗೆ ದಿನಗಣನೆ ಆರಂಭವಾದರೂ ಬಂಡಾಯ ಶಮನವಾಗಿಲ್ಲ. ಅಲ್ಲಿ ಸಿಧು, ಇಲ್ಲಿ ಸಿದ್ದು. ಕಾಂಗ್ರೆಸ್‌ ಹೈಕಮಾಂಡ್‌ಗೆ ಮೂರ್ಛೆ ರೋಗ ತರಿಸುವುದಕ್ಕೆ ಇವರಿಬ್ಬರೇ ಸಾಕು ಎಂದು ಟ್ವೀಟ್‌ ಮಾಡಿ ಬಿಜೆಪಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: Punjab Election: ಚನ್ನಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ – ರಾಹುಲ್‌ ಗಾಂಧಿ ಅಧಿಕೃತ ಘೋಷಣೆ

    ಬಿಜೆಪಿ ಟ್ವೀಟ್‌ನಲ್ಲೇನಿದೆ?
    ರಾಜ್ಯ ಕಾಂಗ್ರೆಸ್ ಶೀತಲ ಸಮರದ ಬಿಸಿ ಈಗ ದಿಲ್ಲಿ ನಾಯಕರಿಗೂ ತಟ್ಟಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ತೇಪೆ ಹಚ್ಚಲು ರಾಹುಲ್ ಗಾಂಧಿ ಅವರು ತಮ್ಮ ಆಪ್ತ ಸಲಹೆಗಾರರನ್ನೇ ಸಿದ್ದರಾಮಯ್ಯ ನಿವಾಸಕ್ಕೆ ಕಳುಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ತೀವ್ರ “ನಿಗಾ” ಘಟಕ ಸೇರುವಂತಾಗಿದೆಯೇ?

    ಒಂದೆಡೆ ಅಧ್ಯಕ್ಷರು ಹಿಜಬ್ ಬಗ್ಗೆ ಪಕ್ಷದವರಿಗೆ ಎಲ್ಲಿಯೂ ಮಾತನಾಡಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಅಧ್ಯಕ್ಷರ ಮಾತನ್ನು ಧಿಕ್ಕರಿಸಿ ಹಿಜಬ್ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ. ಮಾನ್ಯ ಕೆಪಿಸಿಸಿ ಅಧ್ಯಕ್ಷರೇ, ಮುಂದಿನ ನೋಟಿಸ್ ಸಿದ್ದರಾಮಯ್ಯ ಹೆಸರಿಗೆ ಕಳುಹಿಸುತ್ತೀರಾ? ಇದನ್ನೂ ಓದಿ: ಸಿದ್ದರಾಮಯ್ಯರ ಮುತ್ಸದ್ಧಿತನ ಮಸುಕಾಗಿ ತಾಲಿಬಾನ್ ಭೂತ ಹೊಕ್ಕಿದೆ: ಸಿ.ಟಿ. ರವಿ

    ಕಾಂಗ್ರೆಸ್ ಪಕ್ಷಕ್ಕೆ ಪಂಚರಾಜ್ಯಗಳ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳಬೇಕೋ ಇಲ್ಲ ಸಿಧು, ಸಿದ್ದರಾಮಯ್ಯ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕೋ ಎಂಬುದು ತಿಳಿಯದಾಗಿದೆ. ಇವರಿಬ್ಬರ ಜಗಳದಿಂದ ರಾಹುಲ್ ಗಾಂಧಿ ಅವರು ಬೇಸತ್ತು ಹೋಗಿದ್ದಾರೆ. ಪರಿಹಾರಕ್ಕಾಗಿ ಮತ್ತೊಂದು ವಿದೇಶ ಪ್ರವಾಸ ಮಾಡುವುದು ಖಚಿತವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

  • ಕಾಂಗ್ರೆಸ್‌ ನಾಯಕರು ಸತ್ಯಕ್ಕೆ ದೂರವಾದ ಆರೋಪಗಳ 3ನೇ ಅಲೆ ಮುಂದುವರಿಸಿದ್ದಾರೆ: ಸುಧಾಕರ್‌

    ಕಾಂಗ್ರೆಸ್‌ ನಾಯಕರು ಸತ್ಯಕ್ಕೆ ದೂರವಾದ ಆರೋಪಗಳ 3ನೇ ಅಲೆ ಮುಂದುವರಿಸಿದ್ದಾರೆ: ಸುಧಾಕರ್‌

    ಬೆಂಗಳೂರು: ಕೊರೊನಾ ಪ್ರಕರಣ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಟೀಕಾಪ್ರಹಾರ ನಡೆಸಿದ್ದಾರೆ.

    ಟ್ವೀಟ್‌ ಮೂಲಕ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿರುವ ಸುಧಾಕರ್‌ ಅವರು, ಕಾಂಗ್ರೆಸ್‌ ನಾಯಕರ ಆರೋಪಗಳನ್ನು ಸತ್ಯಕ್ಕೆ ದೂರವಾದವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಿಂದ ಹೊರಬಂದಿದ್ದೇನೆ ಮತ್ತೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಾಪ ಹಾಕಿದ: ಇಬ್ರಾಹಿಂ

    ಟ್ವೀಟ್‌ನಲ್ಲೇನಿದೆ?
    ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡುವುದು ಬಿಟ್ಟು ರಾಜಕೀಯ ಲಾಭ ಪಡೆಯಲು ವಿನಾಕಾರಣ ಟೀಕೆ ಮಾಡುವುದು ಎಷ್ಟು ಸರಿ? ಕೊರೊನಾ ಎಂಬುದೇ ಇಲ್ಲ, ಅದು ಬಿಜೆಪಿ ಸೃಷ್ಟಿ ಎನ್ನುವ ಅಧ್ಯಕ್ಷರು ಒಂದು ಕಡೆ. ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡುವ ಪ್ರತಿಪಕ್ಷ ನಾಯಕರು ಇನ್ನೊಂದು ಕಡೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು?

    ಇದಕ್ಕೆ ಮುಖ್ಯ ಕಾರಣ ಲಸಿಕಾಕರಣ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಹಕಾರದಿಂದ ರಾಜ್ಯದಲ್ಲಿ 18 ಮೇಲ್ಪಟ್ಟ ವಯೋಮಾನದವರಿಗೆ 100% ಮೊದಲ ಡೋಸ್ ಪೂರೈಸಿದ್ದು, 87.6% ಜನರಿಗೆ ಎರಡೂ ಡೋಸ್ ನೀಡಲಾಗಿದೆ. ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕತರು, ಹಿರಿಯ ನಾಗರೀಕರಲ್ಲಿ 51% ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ. ಇದನ್ನೂ ಓದಿ: ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು: ಸಿದ್ದರಾಮಯ್ಯ

    ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮ ನಿರಾಧಾರ, ಸತ್ಯಕ್ಕೆ ದೂರವಾದ ಆರೋಪಗಳ ಮೂರನೇ ಅಲೆಯನ್ನು ಮುಂದುವರೆಸಿರುವುದು ವಿಷಾದಕರ. ಕರ್ನಾಟಕದಲ್ಲಿ ಕೋವಿಡ್ ಮರಣ ಪ್ರಮಾಣ ಕೇವಲ 1% ಇದ್ದು, ಮೂರನೇ ಅಲೆಯಲ್ಲಿ 1.9% ಜನ ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಟ್ಟಿಟ್ಟರ್‌ನಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

  • ಆರು ತಿಂಗಳ ಪೂರೈಸಿದ ಬೊಮ್ಮಾಯಿ ಸರ್ಕಾರಕ್ಕೆ ಕಾಂಗ್ರೆಸ್‌ನಿಂದ 6 ಪ್ರಶ್ನೆ

    ಆರು ತಿಂಗಳ ಪೂರೈಸಿದ ಬೊಮ್ಮಾಯಿ ಸರ್ಕಾರಕ್ಕೆ ಕಾಂಗ್ರೆಸ್‌ನಿಂದ 6 ಪ್ರಶ್ನೆ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆರು ತಿಂಗಳ ಆಡಳಿತವನ್ನು ಪೂರೈಸಿದ ಸಂಭ್ರಮಾಚರಣೆಯಲ್ಲಿದೆ. ಇದರ ಮಧ್ಯೆಯೇ ಬೊಮ್ಮಾಯಿ ಅವರ ಆರು ತಿಂಗಳ ಸರ್ಕಾರಕ್ಕೆ 6 ಕಾಂಗ್ರೆಸ್‌ ಆರು ಪ್ರಶ್ನೆಗಳನ್ನು ಕೇಳಿ ಕುಟುಕಿದೆ.

    ಕಾಂಗ್ರೆಸ್‌ ಟ್ವೀಟ್‌ನಲ್ಲೇನಿದೆ?
    ನೋಟ್ ಬ್ಯಾನ್ ಹಾಗೂ ಗಬ್ಬರ್ ಸಿಂಗ್ ಟ್ಯಾಕ್ಸ್‌ಗಳಿಂದಾಗಿ ಶುರುವಾದ ನಿರುದ್ಯೋಗ ಸಮಸ್ಯೆ ಲಾಕ್‌ಡೌನ್‌ ನಂತರ ಉತ್ತುಂಗಕ್ಕೇರಿದೆ. ಸಿಎಂ ಆಗಿ ಅರ್ಧ ವರ್ಷ ಅಧಿಕಾರ ಪೂರೈಸಿದ ಬೊಮ್ಮಾಯಿ ಅವರೇ, ಉದ್ಯೋಗ ಸೃಷ್ಟಿಗೆ ತಾವು ಕೈಗೊಂಡ ಕ್ರಮಗಳೇನು? ರೂಪಿಸಿದ ಯೋಜನೆಗಳೇನು? ಎಷ್ಟು ಉದ್ಯೋಗ ಸೃಷ್ಟಿಯಾಗಿದೆ?

    ಮುಖ್ಯಮಂತ್ರಿಯಾಗಿ ಹಣಕಾಸು ಖಾತೆಯನ್ನು ಖಾತೆಯನ್ನು ನಿಭಾಯಿಸುತ್ತಿರುವ ಬೊಮ್ಮಾಯಿ ಅವರೇ, ತಮ್ಮ ಅಧಿಕಾರದ 6 ತಿಂಗಳಲ್ಲಿ ಹಾಗೂ ನಿಮ್ಮ ಡಬಲ್ ಇಂಜಿನ್ ಸರ್ಕಾರದಲ್ಲಿ ಕೇಂದ್ರದಿಂದ ಯಾವ್ಯಾವ ಯೋಜನೆಗೆ ಎಷ್ಟು ಅನುದಾನ ತಂದಿದ್ದೀರಿ? GST ಬಾಕಿ, ನೆರೆ ಪರಿಹಾರ ಸೇರಿದಂತೆ ಎಷ್ಟು ನೆರವನ್ನು ತಂದಿದ್ದೀರಿ?

    ಬಿಬಿಎಂಪಿಯಲ್ಲಿ ಭ್ರಷ್ಟಾಚಾರ, ಬಿಡಿಎಯಲ್ಲಿ ಭ್ರಷ್ಟಾಚಾರ, ನೇಮಕಾತಿಯಲ್ಲಿ ಭ್ರಷ್ಟಾಚಾರ, ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಗುತ್ತಿಗೆಯಲ್ಲಿ 40% ಕಮಿಷನ್ ಭ್ರಷ್ಟಾಚಾರ. ಈ ಸರ್ಕಾರದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರವೇ. ಬೊಮ್ಮಾಯಿ ಅವರೇ, ಈ 6 ತಿಂಗಳಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಂಡ ಕ್ರಮಗಳೇನು?

    ಸಿಗದ ನೆರೆ ಪರಿಹಾರ, ದೊರಕದ ಕರೋನಾ ಪರಿಹಾರ, ಕುಂಟುವ ಅಡಳಿತಯಂತ್ರ, ಇಲ್ಲದ ವಸತಿ ಯೋಜನೆಗಳು. ಜನರ ಸಮಸ್ಯೆ ಹಲವಾರಿದ್ದರೂ ಒಂದೇ ಒಂದು ಜನತಾ ದರ್ಶನ ಕಾರ್ಯಕ್ರಮ ಮಾಡಿಲ್ಲವೇಕೆ? ಉಪಯೋಗವಿಲ್ಲದ ದೆಹಲಿ ದರ್ಶನಕ್ಕೆ ಹೋಗುವ ತಮಗೆ ಜನತಾದರ್ಶನಕ್ಕೆ ಸಮಯವಿರಲಿಲ್ಲವೇ?

    ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಬೊಮ್ಮಾಯಿ ಅವರು, ರಾಜ್ಯದ ಹಣಕಾಸು ಸ್ಥಿತಿಯನ್ನು ವೃದ್ಧಿಸುವಲ್ಲಿ ಕೈಗೊಂಡ ಕ್ರಮಗಳೇನು? ಆರ್ಥಿಕ ಶಿಸ್ತು ಕಾಪಾಡಲು ರೂಪಿಸಿದ ಯೋಜನೆಗಳೇನು? ತೆರಿಗೆ ಪಾಲು, ಅನುದಾನ, ಪರಿಹಾರ ಮುಂತಾದವುಗಳನ್ನು ಕೇಂದ್ರದಿಂದ ತರುವಲ್ಲಿ ಮಾಡಿದ ಪ್ರಯತ್ನಗಳೇನು?

    ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರಕ್ಕೆ 6 ತಿಂಗಳಗಿದೆ, ನಿಮ್ಮ ಸಚಿವರ ಕೆಲಸಗಳ ಬಗ್ಗೆ ನಿಮಗೆ ತೃಪ್ತಿ ಇದೆಯೇ? ಅಸಮಾಧಾನದಿಂದ ಒಲ್ಲದ ಖಾತೆ ನಿಭಾಯಿಸುತ್ತಿರುವವರು, ಉಸ್ತುವಾರಿಗಾಗಿ ಕಿತ್ತಾಡುವವರು, ತಮ್ಮದೇ ಶಾಸಕರೊಂದಿಗೆ ಮುನಿಸಿಟ್ಟುಕೊಂಡ ಸಚಿವರುಗಳು ನಿಮ್ಮಲ್ಲಿದ್ದಾರೆ, ಅವರ ಕೆಲಸಗಳ ಬಗ್ಗೆ ಸಮಾಧಾನವಿದೆಯೇ ಎಂದು 6 ತಿಂಗಳು ಪೂರೈಸಿರುವ ಬೊಮ್ಮಾಯಿ ಸರ್ಕಾರಕ್ಕೆ 6 ಪ್ರಶ್ನೆಗಳನ್ನು ಕೇಳುವ ಮೂಲಕ ಕಾಂಗ್ರೆಸ್‌ ಚಾಟಿ ಬೀಸಿದೆ.

  • ಸ್ವಯಂ ಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ: ಮತ್ತೆ ಗುಡುಗಿದ ಹೆಚ್‌ಡಿಕೆ

    ಸ್ವಯಂ ಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ: ಮತ್ತೆ ಗುಡುಗಿದ ಹೆಚ್‌ಡಿಕೆ

    ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಾಜಿ ಮುಖ್ಯಮಂತ್ರಿಗಳ ನಡುವಿನ ವಾಕ್ಸಮರ ಮುಂದುವರಿದಿದೆ. ಸಿದ್ದರಾಮಯ್ಯ ವಿರುದ್ಧ ಟ್ವೀಟ್‌ ಮೂಲಕ ಹೆಚ್‌.ಡಿ.ಕುಮಾರಸ್ವಾಮಿ ಮತ್ತೆ ಕಿಡಿಕಾರಿದ್ದಾರೆ.

    ಸ್ವಯಂ ಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ ನಮ್ಮ ಪಕ್ಷ ಮತ್ತು ನಮ್ಮ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಮಾತು ಆಡಿದ ಮೇಲೆ ಅದನ್ನು ದಕ್ಕಿಸಿಕೊಳ್ಳುವ ಯೋಗ್ಯತೆಯೂ ಇರಬೇಕಲ್ಲವೇ? ಆ ಯೋಗ್ಯತೆ ಅವರಿಗಿಲ್ಲ ಎಂದು ಸಿದ್ದು ವಿರುದ್ಧ ಹೆಚ್‌ಡಿಕೆ ಗುಡುಗಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿಯಿಂದ ಓಡಿಸಲಾಗಿದೆ, ಬಾದಾಮಿಯಿಂದ ಓಡಿಸುವುದು ಬಾಕಿ ಇದೆ: ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

    ಹೆಚ್‌ಡಿಕೆ ಟ್ವೀಟ್‌ನಲ್ಲೇನಿದೆ?
    ಸುಖಾಸುಮ್ಮನೆ ಅವರ ಬಗ್ಗೆ ಮಾತನಾಡುವ ತೆವಲು ನಂಗಂತೂ ಇಲ್ಲ. ನಮ್ಮ ಪಕ್ಷದಿಂದ ಎಗರಿಸಿಕೊಂಡು ಹೋದ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದರೆ ನಮ್ಮ ಪಕ್ಷದ ಬಗ್ಗೆ ಏಕೆ ಮಾತನಾಡಬೇಕು? ಜೆಡಿಎಸ್ ಪಕ್ಷವನ್ನು ತುಮಕೂರಿನಿಂದ ಓಡಿಸಿ ಎಂದಿದ್ದು ಯಾವ ಸಂಸ್ಕೃತಿ?

    ಪ್ರಜಾಪ್ರಭುತ್ವದಲ್ಲಿ ಒಂದು ಜಿಲ್ಲೆಯಿಂದಲೇ ಒಂದು ಪಕ್ಷವನ್ನು ಓಡಿಸಿ ಎನ್ನುವುದು ಎಂಥಾ ರಾಜಕಾರಣ? ಲಂಗು ಲಗಾಮು ಇಲ್ಲದೆ ನಾಲಿಗೆ ಜಾರುವ ಇಂಥ ಜನರಿಂದ ನಾನು ಭಾಷೆ, ಸಂಸ್ಕೃತಿ ಬಗ್ಗೆ ಕಲಿಯಬೇಕಿಲ್ಲ. ‘ಸುಳ್ಳಿನ ಸಿದ್ದಪುರುಷ’ನಿಂದ ಭಾಷೆ-ಸಂಸ್ಕೃತಿ ಕುರಿತು ಪಾಠವೇ?

    ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ ಅನ್ನುತ್ತಾರೆ. ಮಾತೆತ್ತಿದರೆ ಕುಮಾರಸ್ವಾಮಿಯದ್ದೇ ಜಪ! ಜತೆಗೆ ಜೆಡಿಎಸ್ ಬಗ್ಗೆ ವಿಷ ಕಾರುವುದು ಸುಳ್ಳಾ? ಅವರ ಹೇಳಿಕೆಗಳನ್ನು ಇಡೀ ರಾಜ್ಯವೇ ಕೇಳಿಸಿಕೊಂಡಿದೆ. ಇದನ್ನೂ ಓದಿ: ನಾನು ಸಿಎಂ ಆಗಬೇಕು ಎಂದು ಕೂಗ್ಬೇಡಿ, ಒಳ ಸಂಚು ಶುರುವಾಗುತ್ತೆ: ಪರಮೇಶ್ವರ್

    ನನ್ನನ್ನು ಕಂಡರೆ ಕುಮಾರಸ್ವಾಮಿಗೆ ಭಯ! ಅಂತಾರೆ. ಇದು ಭ್ರಮೆಯ ಪರಮಾವಧಿ. ಮತ್ತೆ ಸಿಎಂ ಆಗಲ್ಲ ಎಂದು ಖಚಿತವಾದ ಮೇಲೆ ಹತಾಶೆ, ಅಸಹನೆಯ ಬೆಂಕಿಯಲ್ಲಿ ಬೇಯುತ್ತಿದ್ದಾರೆ, ಪಾಪ. ಇದು ವಿಪರೀತಕ್ಕೆ ಹೋಗಿದೆ ಎನ್ನುವುದಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಅವರು ಕೊಟ್ಟ ಹೇಳಿಕೆಗಳೇ ಸಾಕ್ಷಿ. ತುಮಕೂರು ಜಿಲ್ಲೆಯಿಂದ ಓಡಿಸಿ, ಬಿಜೆಪಿಯ ಬಾಲಂಗೋಚಿ; ಇಂತಹ ನುಡಿಮುತ್ತುಗಳು ‘ಸ್ವಯಂ ಘೋಷಿತ ಸಂವಿಧಾನ ಪಂಡಿತ’ನ ರಾಜಕೀಯ ಫಜೀತಿಯ ಪರಾಕಾಷ್ಠೆ. ಯಾರ ಭಯ ಯಾರಿಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ.

    ನಿಜ. ಚುನಾವಣೆಯಲ್ಲಿ ನಮ್ಮ ತಂದೆ ಸೋತಿದ್ದಾರೆ. ನನ್ನ ಅಣ್ಣ ಸೋತಿದ್ದಾರೆ, ನಾನೂ ಸೋತಿದ್ದೇನೆ. ಸೋತ ಮೇಲೆ ನಾವ್ಯಾರೂ ಅಧೀರರಾಗಿಲ್ಲ. ಸೋತಿದ್ದಕ್ಕೆ ನಾವು ಕಣ್ಣೀರು ಹಾಕಿಲ್ಲ. ಸಿದ್ದಹಸ್ತರ ಕಣ್ಣೀರ ಕೋಡಿಯನ್ನು ಕಂಡ ದೇವೇಗೌಡರು ಇನ್ನೂ ನಮ್ಮ ಜತೆ ಇದ್ದಾರೆ.

    ಇನ್ನು ಕಮೀಷನ್ ವ್ಯವಹಾರದಲ್ಲಿ ನಾನು ನೀಟ್, ಕ್ಲೀನ್ ಎನ್ನುತ್ತಿದ್ದಾರೆ ಪ್ರತಿಪಕ್ಷ ನಾಯಕರು. ಐದು ವರ್ಷ ಸಿಎಂ ಆಗಿದ್ದರೂ ನಾನು ಕ್ಲೀನ್ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಹಾಗಾದರೆ, ಇವತ್ತಿಗೂ ಕೇಳಿಸುತ್ತಿರುವ ‘ ಅರ್ಕಾವತಿ ‘ ಆರ್ತನಾದಕ್ಕೆ ಕಾರಣರು ಯಾರು?

    ಈ ಸತ್ಯ ಆಚೆ ಬಿದ್ದರೆ ಆ ಸಿದ್ದಹಸ್ತರು ಮುಖವನ್ನು ಎಲ್ಲಿ ಇಟ್ಟುಕೊಳ್ಳುತ್ತಾರೆ? ದೇವರಾಜ ಅರಸು ಅವರ ನಂತರ ‘ ಐದು ವರ್ಷದ ಮುಖ್ಯಮಂತ್ರಿ ‘ ಎಂದು ಹೇಳಿಕೊಳ್ಳುವ ಅಪರ ಸಿದ್ದಪುರುಷರ ಪಾಡೇನು? ‘ ಐದು ವರ್ಷದ ಮುಖ್ಯಮಂತ್ರಿ ‘ ಎಂಬ ಪ್ರಭಾವಳಿಯ ಕಥೆ ಏನು?

  • ಚಾಮುಂಡೇಶ್ವರಿಯಿಂದ ಓಡಿಸಲಾಗಿದೆ, ಬಾದಾಮಿಯಿಂದ ಓಡಿಸುವುದು ಬಾಕಿ ಇದೆ: ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

    ಚಾಮುಂಡೇಶ್ವರಿಯಿಂದ ಓಡಿಸಲಾಗಿದೆ, ಬಾದಾಮಿಯಿಂದ ಓಡಿಸುವುದು ಬಾಕಿ ಇದೆ: ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

    ಬೆಂಗಳೂರು: ಜಿಡಿಎಸ್‌ ಪಕ್ಷವು ಬಿಜೆಪಿಯ ಬಾಲಂಗೋಚಿ, ತುಮಕೂರಿನಿಂದ ಜೆಡಿಎಸ್‌ನ್ನು ಓಡಿಸಿ, ಆ ಪಕ್ಷಕ್ಕೆ ಸಿದ್ದಾಂತವಿಲ್ಲ ಎಂದೆಲ್ಲ ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

    ಈ ಬಗ್ಗೆ ಶನಿವಾರ ಸರಣಿ ಟ್ವೀಟ್‌ ಮಾಡಿರುವ ಎಚ್‌ಡಿಕೆ, ಜೆಡಿಎಸ್‌ ಪಕ್ಷವನ್ನು ತುಮಕೂರಿನಿಂದ ಓಡಿಸುವುದಿರಲಿ, ನಿಮ್ಮನ್ನೇ ಚಾಮುಂಡೇಶ್ವರಿ ಕ್ಷೇತ್ರದಿಂದ ಓಡಿಸಿದ್ದಾರೆ. ಇನ್ನು ಬಾದಾಮಿ ಕ್ಷೇತ್ರದಿಂದ ಓಡಿಸುವುದು ಬಾಕಿ ಇದೆ ಎಂದು ಟಾಂಗ್‌ ನೀಡಿದ್ದಾರೆ. ಇದನ್ನೂ ಓದಿ: ನೀವು ಲಂಚ ಪಡೆದಿಲ್ಲ ಅಂದ್ರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು – ಸಿದ್ದುಗೆ ಬಿಜೆಪಿ ಪ್ರಶ್ನೆ

    ಹೆಚ್‌ಡಿಕೆ ಟ್ವೀಟ್‌ನಲ್ಲೇನಿದೆ?
    ಒಬ್ಬ ನಾಯಕನನ್ನು ಸೃಷ್ಟಿ ಮಾಡುವ ಯೋಗ್ಯತೆ ಇಲ್ಲ. ಪಕ್ಷ ಕಟ್ಟುವ ಧಂ ಇಲ್ಲ. ಗೆದ್ದಲು ಕಟ್ಟಿದ ಹುತ್ತದಲ್ಲಿ ವಿಷ ಸರ್ಪದಂತೆ ಹೋಗಿ ಸೇರಿಕೊಳ್ಳುವ, ಕಂಡೋರ ಕಷ್ಟದ ಮೇಲೆ ಅಧಿಕಾರ ಅನುಭವಿಸುವ ಸಿದ್ದರಾಮಯ್ಯ.. ನೀವಾ ಜೆಡಿಎಸ್ ಬಗ್ಗೆ ಮಾತನಾಡುವುದು?

    ತುಮಕೂರಿನಿಂದ ಜೆಡಿಎಸ್ ಅನ್ನು ಓಡಿಸಿ ಅನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್‌ನ ಪಿತ್ರಾರ್ಜಿತ ಆಸ್ತಿಯಾ? ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಜನರು ಓಡಿಸಿದ್ದು ಮರೆತುಬಿಟ್ಟಿರಾ? ಈ ಸಲ ಬಾದಾಮಿ ಕ್ಷೇತ್ರದಿಂದಲೂ ಓಡಬೇಕಾಗುತ್ತದೆ, ಕಾಯಿರಿ. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ

    ಕಾಂಗ್ರೆಸ್ ಸೇರುವ ಮುನ್ನ ನೀವು ಯಾರ ಬಾಲಂಗೋಚಿ ಆಗಿದ್ದಿರಿ? ಗುರುಸ್ವಾಮಿ ಅವರೆದುರು ಸೋತುಸುಣ್ಣವಾದ ಮೇಲೆ ಅನುಗ್ರಹಕ್ಕೆ ಬಂದು ಯಾರ ಮುಂದೆ ಗಳಗಳನೆ ಅತ್ತು ರಾಜಕೀಯ ಬಿಟ್ಟು, ವಕೀಲಿ ಮಾಡುತ್ತೇನೆ ಎಂದಿರಿ ಅನ್ನುವುದು ನೆನಪಿದೆಯಾ ಸಿದ್ದರಾಮಯ್ಯ? ಆಗ ನಿಮಗೆ ಬಾಲಂಗೋಚಿತನ ನೆನಪಾಗಲಿಲ್ಲವೆ?

    ಪ್ರತಿಯೊಂದಕ್ಕೂ, ಈ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುತ್ತಿದೆ ಎನ್ನುವ ನಿಮ್ಮ ʼಸುಳ್ಳು ನಾಲಗೆʼ, ಅದೇ ಸರ್ಕಾರ ಬರಲು ಮೂಲ ಕಾರಣರಾದ ʼಸಿದ್ದಪುರುಷʼ ಯಾರು ಎನ್ನುವುದನ್ನು ಹೇಳಲಿಲ್ಲವೇ? ಪಕ್ಷದ್ರೋಹ ತಾಯಿಗೆ ಮಾಡುವ ದ್ರೋಹಕ್ಕೆ ಸಮಾನ. ನಿಮ್ಮ ದ್ರೋಹ ಮುಚ್ಚಿಟ್ಟುಕೊಳ್ಳಲು ಜೆಡಿಎಸ್ ಜಪವಾ ಸಿದ್ದರಾಮಯ್ಯ? ಇದನ್ನೂ ಓದಿ: ಪೊಲೀಸರು ಪ್ರಾಮಾಣಿಕರಾಗಿಲ್ಲ ಅಂದ್ರೆ ನಾಗರಿಕರು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ: ಆರಗ ಜ್ಞಾನೇಂದ್ರ

    siddaramaiah

    ಮತ್ತೆ ಮುಖ್ಯಮಂತ್ರಿ ಆಗಬೇಕೆನ್ನುವ ದುರಾಸೆ, ಅವಕಾಶ ಸಿಗದೇನೋ ಅನ್ನುವ ಹತಾಶೆ. ಅಭ್ಯರ್ಥಿಗಳಿಲ್ಲ, ಜೆಡಿಎಸ್ ಬಿಟ್ಟರೆ ಗತಿ ಇಲ್ಲ ನಿಮ್ಮ ಯೋಗ್ಯತೆಗೆ. ನಮ್ಮವರನ್ನು ಹೈಜಾಕ್ ಮಾಡಿ ಅವರಿಗೆ ಟಿಕೆಟ್ ಆಮಿಷ ತೋರಿಸಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗೆ ತಳ್ಳುವ ನಿಮ್ಮ ʼಕಂತ್ರಿʼ ರಾಜಕೀಯ ಎಲ್ಲರಿಗೂ ಗೊತ್ತಿದೆ.

    ಅಕ್ಕಪಕ್ಕದವರ ತಟ್ಟೆಯಲ್ಲಿರುವುದನ್ನು ಎಗರಿಸುವುದು ಸಿದ್ಧಾಂತವೇ? ʼಆಪರೇಷನ್ ಹಸ್ತʼವೂ ಸಿದ್ಧಾಂತವೇ? ಆಶ್ರಯ ಕೊಟ್ಟ ಪಕ್ಷವನ್ನು, ಅಲ್ಲಿನ ಮೂಲನಿವಾಸಿಗಳನ್ನು ಮುಗಿಸುವುದೇ ಸಿದ್ಧಾಂತವೇ? ನೀವು ಜೆಡಿಎಸ್ ಸಿದ್ಧಾಂತದ ಬಗ್ಗೆ ಮಾತನಾಡುತ್ತೀರಿ? ನಾಚಿಕೆಯಾಗಬೇಕು ನಿಮಗೆ.

    ಸುಳ್ಳು ನಿಮ್ಮ ರಾಜಕೀಯದ ಅಡಿಪಾಯ. ಸುಳ್ಳೇ ನಿಮ್ಮ ರಾಜಕೀಯ ಅಸ್ತಿತ್ವದ ಪ್ರತೀಕ. ಸುಳ್ಳು ಸುಳ್ಳೇ ನಿಮ್ಮ ನರಿಬುದ್ಧಿ ಅವಕಾಶವಾದಿ ರಾಜಕಾರಣ ನಿಜಸ್ವರೂಪ. ಹೀಗೆಂದು ಮಾಜಿ ಮುಖ್ಯಮಂತ್ರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಟ್ವೀಟ್ ದಾಳಿ ನಡೆಸಿದ್ದಾರೆ.

  • ಬಿಜೆಪಿಯ ದ್ವೇಷದ ರಾಜಕಾರಣ ಭಾರತಕ್ಕೆ ಹಾನಿಕಾರಕ: ರಾಹುಲ್ ಗಾಂಧಿ

    ಬಿಜೆಪಿಯ ದ್ವೇಷದ ರಾಜಕಾರಣ ಭಾರತಕ್ಕೆ ಹಾನಿಕಾರಕ: ರಾಹುಲ್ ಗಾಂಧಿ

    ನವದೆಹಲಿ: ಬಿಜೆಪಿಯ ದ್ವೇಷದ ರಾಜಕಾರಣವು ಭಾರತಕ್ಕೆ ಹಾನಿಕಾರಕವಾಗಿದೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಇದು ಕಾರಣವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    ಸಾಮಾಜಿಕ ಶಾಂತಿ ಇಲ್ಲದೇ ದೇಶೀಯ ಮತ್ತು ವಿದೇಶಿ ಕೈಗಾರಿಕೆಗಳು ನಡೆಯಲು ಸಾಧ್ಯವಿಲ್ಲ. ಈ ದ್ವೇಷವನ್ನು ಸಹೋದರತ್ವದಿಂದ ಎದುರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉನ್ನತ ಶಿಕ್ಷಣ ಸಚಿವರು ನಮಗೆ ಕೊಟ್ಟಿದ್ದು ಸಿಹಿಯಲ್ಲ, ಕಹಿ: ಅತಿಥಿ ಉಪನ್ಯಾಸಕರ ಆಕ್ರೋಶ

    ಬಿಜೆಪಿ ಆಡಳಿತದಲ್ಲಿ ನಿರುದ್ಯೋಗ, ತೆರಿಗೆ ಸುಲಿಗೆ, ಹಣದುಬ್ಬರ ಮತ್ತು ದ್ವೇಷದ ರಾಜಕಾರಣ ಎಂಬ ನಾಲ್ಕು ಆಯ್ಕೆಗಳನ್ನು ನೀಡಿ ರಾಹುಲ್ ಗಾಂಧಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಗೆ 347, 396 ಮಂದಿ ಪ್ರತಿಕ್ರಿಯಿಸಿದ್ದು, ಶೇ.35 ರಷ್ಟು ಜನರು ದ್ವೇಷದ ರಾಜಕಾರಣ ಎಂಬ ಆಯ್ಕೆ ಮಾಡಿರುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.

    ಸರ್ಕಾರದ ಎರಡನೇ ಅತಿದೊಡ್ಡ ವೈಫಲ್ಯವೆಂದರೆ ನಿರುದ್ಯೋಗ ಸಮೀಕ್ಷೆಯಲ್ಲಿ ಶೇ.28ರಷ್ಟು ಮಂದಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ನಂತರ 17.2 ರಷ್ಟು ಮಂದಿ ತೆರಿಗೆ ಸುಲಿಗೆ ಮತ್ತು ಶೇ. 19.28ರಷ್ಟು ಮಂದಿ ಹಣದುಬ್ಬರ ಎಂದು ಉತ್ತರಿಸಿದ್ದಾರೆ. ಇದು ಬಿಜೆಪಿ ಸರ್ಕಾರದ ನ್ಯೂನತೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MPSC ಹುದ್ದೆ ಆಕಾಂಕ್ಷಿ ಅನುಮಾನಾಸ್ಪದ ರೀತಿಯಲ್ಲಿ ಕೊಠಡಿಯಲ್ಲಿ ಶವವಾಗಿ ಪತ್ತೆ

    ನಿರುದ್ಯೋಗ ಬಹಳ ದೊಡ್ಡ ಸಮಸ್ಯೆ, ಅದನ್ನು ಪರಿಹರಿಸುವುದು ಪ್ರಧಾನ ಮಂತ್ರಿಯ ಜವಾಬ್ದಾರಿಯಾಗಿದೆ. ದೇಶದ ಜನತೆ ಉತ್ತರ ಕೇಳುತ್ತಿದ್ದಾರೆ, ಕ್ಷಮಾಪಣೆ ಕೇಳುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

  • ಸೈನಾ ನೆಹ್ವಾಲ್ ಟ್ವೀಟ್‍ಗೆ ಸಿದ್ದಾರ್ಥ್ ಅವಹೇಳನಕಾರಿ ಕಾಮೆಂಟ್ – ನೆಟ್ಟಿಗರು ಗರಂ

    ಸೈನಾ ನೆಹ್ವಾಲ್ ಟ್ವೀಟ್‍ಗೆ ಸಿದ್ದಾರ್ಥ್ ಅವಹೇಳನಕಾರಿ ಕಾಮೆಂಟ್ – ನೆಟ್ಟಿಗರು ಗರಂ

    ನವದೆಹಲಿ: ತಮಿಳು ನಟ ಸಿದ್ದಾರ್ಥ್ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧ ಲೈಂಗಿನ ಅವಹೇಳನಕಾರಿ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ಕುರಿತಂತೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. ಯಾವುದೇ ರಾಷ್ಟ್ರದಲ್ಲಿ ಪ್ರಧಾನ ಮಂತ್ರಿಗೆ ಭದ್ರತೆ ಸಿಗದೇ ಇದ್ದರೆ, ಆ ದೇಶದಲ್ಲಿ ನಾವೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಜರೂಕತೆಯನ್ನು ನಾನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್- ಪಲ್ಸರ್ ಸುನಿಯ ವಕೀಲರೇ ಈಗ ಸಾಕ್ಷಿಧಾರ

    ಸೈನಾ ನೆಹ್ವಾಲ್ ಅವರ ಈ ಟ್ವೀಟ್‍ಗೆ ಕಾಲಿವುಡ್ ನಟ ಸಿದ್ದಾರ್ಥ್, ವಿಶ್ವದ ಸಟಲ್ ಕಾಕ್ ಚಾಂಪಿಯನ್. ದೇವರಿಗೆ ಧನ್ಯವಾದಗಳು ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ. ರೆಹಾನ್ನಾ ನಿಮಗೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

    ಪುರುಷನ ಮರ್ಮಾಂಗವನ್ನು ಗ್ರಾಮ್ಯವಾಗಿ ‘ಕಾಕ್’ ಎಂದು ಕರೆಯಲಾಗುತ್ತದೆ. ಈ ಟ್ವೀಟ್ ಮೂಲಕ ಸಿದ್ದಾರ್ಥ್ ಸೈನಾ ಅವರನ್ನು ಲೈಂಗಿಕವಾಗಿ ಅವಮಾನಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಧ್ವನಿಯನ್ನು ಅಡಗಿಸುವ ಅನೇಕ ಪ್ರಯತ್ನಗಳು ನಡೆದಿವೆ: ಭಾವನಾ ಮೆನನ್

    ಸಿದ್ದಾರ್ಥ್ ಅವರ ಈ ಟ್ವೀಟ್‍ಗೆ ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು, ಈ ಟ್ವೀಟ್ ಅರ್ಥಪೂರ್ಣವಾದ್ದಲ್ಲ ಮತ್ತು ಇದು ಯಾರಿಗೂ ಬಳಸಲು ಯೋಗ್ಯವಲ್ಲದ ಭಾಷೆ. ಯಾವುದೇ ಭಿನ್ನಾಭಿಪ್ರಾಯ ಇರಲಿ, ಮಾತನಾಡುವಾಗ ಸಭ್ಯತೆ ಇರಬೇಕು. ಸೈನಾ ನೆಹ್ವಾಲ್ ನಮ್ಮ ದೇಶದ ಕ್ರೀಡಾ ಹೆಮ್ಮೆ, ಅವರಿಗೆ ರಾಜಕೀಯ ಮಾಡುವ ಹಕ್ಕಿದೆ. ರಾಷ್ಟ್ರದ ಉಳಿದವರ ಅಭಿಪ್ರಾಯ. ನೀವು ಅವರ ಹೇಳಿಕೆಯನ್ನು ಒಪ್ಪದಿದ್ದಲ್ಲಿ ಚರ್ಚೆ ಮಾಡಿ, ಆದರೆ ಅವರ ಆಲೋಚನೆ ಮತ್ತು ಚಿಂತನೆಗಳನ್ನು ಕೀಳಾಗಿ ಕಾಣುವುದಲ್ಲ. ಅವಹೇಳನಕಾರಿ ಟ್ವೀಟ್ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.

    ರಾಷ್ಟ್ರೀಯ ಮಹಿಳಾ ಆಯೋಗ ಗರಂ ಆಗಿದ್ದು ಸಿದ್ದಾರ್ಥ್ ಖಾತೆಯನ್ನೇ ಬ್ಲಾಕ್ ಮಾಡುವಂತೆ ಟ್ವಿಟ್ಟರ್‌ಗೆ ಪತ್ರ ಬರೆದಿದೆ.

  • ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ: ಸಿ.ಟಿ.ರವಿ

    ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ: ಸಿ.ಟಿ.ರವಿ

    ನವದೆಹಲಿ: ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

    ಪಂಜಾಬ್‌ ರ‍್ಯಾಲಿಗೆ ತೆರಳುತ್ತಿದ್ದ ಪ್ರಧಾನಿ ಮೋದಿ(Narendra Modi) ಅವರು ಫ್ಲೈಓವರ್‌ನಲ್ಲಿ 20 ನಿಮಿಷ ಸಿಲುಕಿದ್ದಕ್ಕೆ ಭದ್ರತಾ ಲೋಪವೇ(security breach) ಕಾರಣ ಎಂದು ಸಿ.ಟಿ.ರವಿ ಟ್ವೀಟ್‌ ಮಾಡಿ ಖಂಡಿಸಿದ್ದಾರೆ. ಪಂಜಾಬ್‌ನ ಫ್ಲೈಓವರ್‌ನಲ್ಲಿ ಪಿಎಂ ಮೋದಿ ಅವರು ಸಿಲುಕಿಕೊಂಡಿದ್ದು ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಿದಂತಿದೆ. ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರದ ದುರಹಂಕಾರದಿಂದ ಈ ಭದ್ರತಾ ಲೋಪ ಉಂಟಾಗಿದೆ. ಮುಂಬರುವ ಚುನಾವಣೆಯಲ್ಲಿ ನಕಲಿ ಗಾಂಧಿಗಳಿಗೆ ಪಂಜಾಬ್‌ನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ

    ತಾನು ಸುರಕ್ಷಿತವಾಗಿ ತಲುಪಿದ್ದೇನೆ ಎಂಬ ಪ್ರಧಾನಿ ಮೋದಿ ಅವರ ಟ್ವೀಟ್‌ ಅನ್ನು ಹಂಚಿಕೊಂಡಿರುವ ಸಿ.ಟಿ.ರವಿ, ಸೋನಿಯಾ ಮಾತೆಯನ್ನು ಮೆಚ್ಚಿಸಲು ಹೋಗಿ ಪಂಜಾಬ್‌ ಸಿಎಂ ಚನ್ನಿ ಅವರು ಭಾರತ ಮಾತೆಗೆ ದ್ರೋಹ ಬಗೆದಿದ್ದಾರೆ. ಕಾಂಗ್ರೆಸ್‌ನ ಈ ಹೇಯ ಕೃತ್ಯವನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ ಮತ್ತು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್‌ನ ಇಬ್ಬರು ನಾಯಕರು ಮಾತನಾಡಿಕೊಳ್ಳುತ್ತಿರುವ ವೀಡಿಯೋವನ್ನು ಹಂಚಿಕೊಂಡಿರುವ ಸಿ.ಟಿ.ರವಿ, ಫ್ಲೈಓವರ್‌ನಲ್ಲಿ ಇಂದು ಆದ ಘಟನೆ ಸಂಬಂಧ ಕಾಂಗ್ರೆಸ್‌ ನಾಯಕರೊಂದಿಗೆ ರಾಹುಲ್‌ ಗಾಂಧಿಯವರು ರಹಸ್ಯ ಸಭೆಯನ್ನೇನಾದರೂ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

    ಪಂಜಾಬ್‌ನಲ್ಲಿ ರ‍್ಯಾಲಿ ಮತ್ತು ಹುತಾತ್ಮರ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ಕಾರ್ಯಕ್ರಮ ಇಂದು ಆಯೋಜಿಸಲಾಗಿತ್ತು. ಕಾರಣಾಂತರಗಳಿಂದ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದು ಭದ್ರತೆ ಲೋಪ ಎಂದು ಪಂಜಾಬ್‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪಿಎಂ ಮೋದಿ ಹಾಗೂ ಬಿಜೆಪಿ ಸರ್ಕಾರ ಗಂಭೀರ ಆರೋಪ ಮಾಡಿತ್ತು. ಆದರೆ ಈ ಆರೋಪವನ್ನು ಪಂಜಾಬ್‌ ಕಾಂಗ್ರೆಸ್‌ ತಳ್ಳಿಹಾಕಿದೆ. ರ‍್ಯಾಲಿಯಲ್ಲಿ ಜನರೇ ಭಾಗವಹಿಸಿರಲಿಲ್ಲ. ಹೀಗಾಗಿ ಮೋದಿ ಅವರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.