ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ಪುತ್ರ ನಟ ರಾಮ್‍ಚರಣ್‍ತೇಜಾ ತಂದೆಯ ಬಳಿಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಹುಟ್ಟುಹಬ್ಬದ ಮುನ್ನಾದಿನವೇ ಅಭಿಮಾನಿಗಳಿಗೆ ಈ ಸಂತಸ ಸುದ್ದಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮೆಗಾ ಸ್ಟಾರ್ ಚಿರಂಜೀವಿ ಸಾಮಾಜಿಕ ಜಲತಾಣಗಳಿಗೆ ಎಂಟ್ರಿ ಕೊಟ್ಟಿದ್ದು, ಈ ಮೂಲಕ ಅಭಿಮಾನಿಗಳಿ ಹತ್ತಿರವಾಗಲು ಯತ್ನಿಸಿದ್ದರು. ಇದೀಗ ರಾಮ್ ಚರಣ್ ಸಹ ಅದೇ ಹಾದಿ ತುಳಿದಿದ್ದು, ಅಭಿಮಾನಿಗಳಿಗೆ ಹತ್ತಿರವಾಗಲು ಪ್ರಯತ್ನಿಸಿದ್ದಾರೆ.
ಇದೀಗ ರಾಮ್‍ಚರಣ್‍ತೇಜಾ ಸಿಹಿ ಸುದ್ದಿಯೊಂದನ್ನು ತಿಳಿಸಿದ್ದು, ತಮ್ಮ ತಂದೆಯ ಬಳಿಕ ಅವರೂ ಸಹ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ. ಹಲವು ವರ್ಷಗಳ ಹಿಂದೆ ಟ್ವಿಟ್ಟರ್ ನಿಂದ ದೂರ ಉಳಿದಿದ್ದ ರಾಮ್ ಚರಣ್ ಇದೀಗ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ. ಅದೂ ಸಹ ತಮ್ಮ ತಂದೆ ಖಾತೆ ತೆರೆದು ಕೆಲವೇ ದಿನಗಳ ನಂತರ ಅವರೂ ತೆರೆದಿದ್ದಾರೆ. ಅಲ್ಲದೆ ಹುಟ್ಟುಹಬ್ಬದ ಮುನ್ನಾದಿನ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಪ್ರವೇಶಿಸಿರುವುದು ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ. ಕೇವಲ ಒಂದೇ ದಿನಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.
ಟ್ವೀಟ್ ಖಾತೆ ತೆರೆಯುತ್ತಿದ್ದಂತೆ ಕೊರೊನಾ ಮಹಾಮಾರಿ ತಡೆಗಟ್ಟಲು ಪರಿಹಾರ ಮೊತ್ತ ನೀಡಿರುವ ಪ್ರತಿಯನ್ನು ಹಂಚಿಕೊಂಡಿದ್ದು, ಕೇಂದ್ರ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳಿಗೆ ಒಟ್ಟು 70 ಲಕ್ಷ ರೂ. ನೀಡಿರುವುದಾಗಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದಾದ ಬಳಿಕ ಹುಟ್ಟುಹಬ್ಬಕ್ಕೆ ಜೂನಿಯರ್ ಎನ್‍ಟಿಆರ್ ಅವರ ಡಿಜಿಟಲ್ ಸರ್ಪ್ರೈಸ್ ನೀಡುವ ಕುರಿತ ಟ್ವೀಟನ್ನು ರೀಟ್ವೀಟ್ ಮಾಡಿದ್ದು, ನಾನು ಸರಿಯಾದ ಸಮಯಕ್ಕೇ ಟ್ವಿಟ್ಟರ್ ಖಾತೆ ತೆರೆದಿದ್ದೇನೆ ಅನ್ನಿಸುತ್ತಿದೆ. ಇಲ್ಲವಾದಲ್ಲಿ ನಿಮ್ಮ ಸರ್ಪ್ರೈಸ್ ಮಿಸ್ ಮಾಡಿಕೊಳ್ಳುತ್ತಿದ್ದೆ ಎನ್ನಿಸುತ್ತಿದೆ ಬ್ರೊ ಎಂದು ಹೇಳಿದ್ದಾರೆ. ಅಲ್ಲದೆ ನಾಳೆಯ ವರೆಗೆ ಕಾಯಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ನಂತರ ಎನ್‍ಟಿಆರ್ ಅವರು, ನಿಮ್ಮ ಗಿಫ್ಟನ್ನು ರಾಜಮೌಳಿಯವರಿಗೆ ಕಳುಹಿಸಿದ್ದೇನೆ ಹೀಗಾಗಿ ಗಿಫ್ಟ್ ನಿಮಗೆ ತಲುಪುವುದು ಸ್ವಲ್ಪ ತಡವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಮ್‍ಚರಣ್, ಏನು ಅವರಿಗೆ ಕಳುಹಿಸಿದ್ದೀರಾ, ಇಂದು ನಾನು ಅದನ್ನು ಪಡೆಯಬಹುದೇ ಎಂದು ತಿಳಿಸಿದ್ದಾರೆ.
ಬಳಿಕ ತಂದೆ ಮೆಗಾ ಸ್ಟಾರ್ ಚಿರಂಜೀವಿಯವರ ಟ್ವೀಟ್‍ಗೆ ರೀಟ್ವೀಟ್ ಮಾಡಿದ್ದು, ಚಿರಂಜೀವಿ ಅವರು ಮಗ ಚಿಕ್ಕವನಿದ್ದಾಗಿನ ಫೋಟೋವನ್ನು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ, ಇದಕ್ಕೆ ರಾಮ್‍ಚರಣ್ ಪ್ರತಿಕ್ರಿಯಿಸಿ, ನನ್ನ ಹೀರೋನಿಂದ ಹೃದಯ ಕಲಕುವ ಸಾಲುಗಳು, ಇದರಿಂದಾಗಿ ಈ ದಿನ ಏನಾದರೂ ಸಂಬಂಧವಿದೆಯೇ ಎಂದು ಹೇಳಲಾರೆ, ನಮ್ಮ ಅಪ್ಪ ಮಾಡಿದ್ದಾರೆ ಎಂಬುದು ನನಗೆ ತಿಳಿದಿದೆ. ಶುಭಾಶಯ ತಿಳಿಸಿದ್ದಕ್ಕೆ ಧನ್ಯವಾದ, ಲವ್ ಯು ಅಪ್ಪಾ ಎಂದು ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದಾರೆ.
ಅಭಿಮಾನಿಗಳ ಕುರಿತು ಸಹ ಟ್ವೀಟ್ ಮಾಡಿರುವ ಅವರು, ಮಧ್ಯರಾತ್ರಿಯಿಂದಲೂ ಮೆಸೇಜ್‍ಗಳ ಮೂಲಕ ಶುಭಾಶಯ ತಿಳಿಸುತ್ತಿದ್ದೀರಿ. ನಿಮ್ಮೆಲ್ಲರಿಂದ ನಾನು ಒಂದೇ ಗಿಫ್ಟ್ ಬಯಸುವುದು. ಲಾಕ್‍ಡೌನ್ ಕೊನೆಗೊಳ್ಳುವ ವರೆಗೂ ದಯವಿಟ್ಟು ಮನೆಯಲ್ಲೇ ಇರಿ. ಇದೇ ನೀವು ನನಗೆ ಕೊಡುವ ದೊಡ್ಡ ಉಡುಗೊರೆ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಸದ್ಯ ಆರ್‍ಆರ್‍ಆರ್ ಸಿನಿಮಾದಲ್ಲಿ ರಾಮ್‍ಚರಣ್ ಬ್ಯುಸಿಯಾಗಿದ್ದು, ಕೊರೊನಾ ಲಾಕ್‍ಡೌನ್ ಹಿನ್ನೆಲೆ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಈ ಚಿತ್ರದಲ್ಲಿ ರಾಮ್‍ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಎಸ್.ಎಸ್.ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಒಟ್ಟು ಐದು ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ. ಇತ್ತೀಚೆಗಷ್ಟೇ ಇದರ ಮೋಷನ್ ಪೋಸ್ಟರ್ ಹಾಗೂ ಆರ್‍ಆರ್‍ಆರ್ ಟೈಟಲ್ ಗುಟ್ಟನ್ನು ರಾಜಮೌಳಿ ಅವರು ಬಹಿರಂಗ ಪಡಿಸಿದ್ದಾರೆ. ಹೀಗಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.