Tag: ಟ್ರಾಫಿಕ್ ರೂಲ್ಸ್

  • ಹೆಲ್ಮೆಟ್ ಧರಿಸದ ಟ್ರ್ಯಾಕ್ಟರ್ ಚಾಲಕನಿಗೆ ಬಿತ್ತು ದಂಡ

    ಹೆಲ್ಮೆಟ್ ಧರಿಸದ ಟ್ರ್ಯಾಕ್ಟರ್ ಚಾಲಕನಿಗೆ ಬಿತ್ತು ದಂಡ

    ಲಕ್ನೋ: ಹೆಲ್ಮೆಟ್ ಧರಿಸದ ಟ್ಯ್ರಾಕ್ಟರ್ ಚಾಲಕನಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿ ಪೇಚಿಗೆ ಸಿಲುಕಿದ್ದಾರೆ. ಉತ್ತರ ಪ್ರದೇಶದ ಹಾಪುಡ ಜಿಲ್ಲೆಯ ಗಢಮುತ್ತೇಶ್ವರ ನಿವಾಸಿಗೆ ಪೊಲೀಸರು ದಂಡ ಹಾಕಿದ್ದಾರೆ.

    ಗಢಮುತ್ತೇಶ್ವರ ನಿವಾಸಿ ತನ್ನ ಟ್ರ್ಯಾಕ್ಟರ್ ನಲ್ಲಿ ಹೊರಟ್ಟದ್ದನು. ಡ್ರೈವಿಂಗ್ ಲೈಸನ್ಸ್ ಮತ್ತು ಹೆಲ್ಮೆಟ್ ಇಲ್ಲವೆಂದು ಪೊಲೀಸರು 3 ಸಾವಿರ ರೂ. ಚಲನ್ ಚಾಲಕನಿಗೆ ನೀಡಿದ್ದಾರೆ. ದಂಡದ ರಶೀದಿ ಸಾಮಾಜಿಕ ವೈರಲ್ ಆಗುತ್ತಿದ್ದಂತೆ ನೀಡಿರುವ ಚಲನ್ ನ್ನು ಪೊಲೀಸರು ರದ್ದುಗೊಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಈಗಾಗಲೇ ನೀಡಿರುವ ಚಲನ್ ರದ್ದುಪಡಿಸಲಾಗಿದೆ. ಟ್ರ್ಯಾಕ್ಟರ್ ಬದಲು ದ್ವಿಚಕ್ರ ವಾಹನದ ನಂಬರ್ ರಶೀದಿಯಲ್ಲಿ ದಾಖಲಾಗಿದೆ. ಮೇಲ್ನೋಟಕ್ಕೆ ಟೈಪಿಂಗ್ ತಪ್ಪಾಗಿದೆ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

    ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಟ್ರ್ಯಾಕ್ಟರ್ ಚಾಲಕನೋರ್ವ ದಂಡ ಭಯದಿಂದಾಗಿ ಹೆಲ್ಮೆಟ್ ಧರಿಸಿದ್ದನು. ಹುಬ್ಬಳ್ಳಿ ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • ಹಸು ಟ್ರಾಫಿಕ್ ರೂಲ್ಸ್ ಪಾಲಿಸುತ್ತಿರುವ ವಿಡಿಯೋ ಹಂಚಿಕೊಂಡ ನಟಿ ಪ್ರೀತಿ

    ಹಸು ಟ್ರಾಫಿಕ್ ರೂಲ್ಸ್ ಪಾಲಿಸುತ್ತಿರುವ ವಿಡಿಯೋ ಹಂಚಿಕೊಂಡ ನಟಿ ಪ್ರೀತಿ

    ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಹಸು ಟ್ರಾಫಿಕ್ ರೂಲ್ಸ್ ಪಾಲಿಸುತ್ತಿರುದ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ಪ್ರೀತಿ ತಮ್ಮ ಟ್ವಿಟ್ಟರಿನಲ್ಲಿ 9 ಸೆಕೆಂಡ್‍ ಇರುವ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಹಸು ಟ್ರಾಫಿಕ್ ಸಿಗ್ನಲ್‍ನಲ್ಲಿ ಬೇರೆ ವಾಹನಗಳ ಜೊತೆ ಅದು ಕೂಡ ನಿಂತಿದೆ. “ಜನರ ಬಗ್ಗೆ ಮರೆತು ಬಿಡಿ. ನಮ್ಮ ಪ್ರಾಣಿಗಳು ಸಹ ಟ್ರಾಫಿಕ್ ನಿಯಮವನ್ನು ಪಾಲಿಸುತ್ತದೆ. ನನ್ನ ಮಾತಲ್ಲಿ ನಂಬಿಕೆ ಇಲ್ಲದಿದ್ದರೆ, ಈ ವಿಡಿಯೋ ನೋಡಿ” ಎಂದು ಟ್ವೀಟ್ ಮಾಡಿದ್ದಾರೆ.

    ಈ ವಿಡಿಯೋವನ್ನು ಟ್ವೀಟ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗುತ್ತಿದ್ದು, ಇದುವರೆಗೂ 56 ಸಾವಿರಕ್ಕೂ ಹೆಚ್ಚು ವ್ಯೂ ಹಾಗೂ 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಪ್ರೀತಿ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ಈ ವಿಡಿಯೋ ನೋಡಿ ಹಲವು ಮಂದಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು, ಅಲ್ಲಿರುವ ಕೆಲವು ಜನರಿಗಿಂತ ಈ ಹಸು ಟ್ರಾಫಿಕ್ ನಿಯಮಗಳನ್ನು ಚೆನ್ನಾಗಿ ತಿಳಿದುಕೊಂಡಿದೆ ಎಂದು ನನಗೆ ಎನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕಲವರು, ಇದಕ್ಕೆ ಹೇಳುವುದು ಮನುಷ್ಯರಿಗಿಂತ ಪ್ರಾಣಿಗಳೇ ಉತ್ತಮ ಎಂದು ಕಮೆಂಟ್ ಮಾಡಿದ್ದಾರೆ.

    ಪ್ರೀತಿ ತಮ್ಮ ಟ್ವಿಟ್ಟಿರಿನಲ್ಲಿ ವೈಯಕ್ತಿಕ ಹಾಗೂ ಕೆಲಸಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ. ಸದ್ಯ ಅವರು ಟ್ವೀಟ್ ಮಾಡಿರುವ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಪ್ರೀತಿ ಜಿಂಟಾ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಕೊನೆಯದಾಗಿ ಸೂಪರ್ ಹಿಟ್ ‘ಭಯಾಜಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

  • ತಪ್ಪು ಚಲನ್ ನೀಡಿದ್ದಕ್ಕೆ ಪತ್ನಿ, ಮಕ್ಕಳೊಂದಿಗೆ ರಸ್ತೆಯಲ್ಲಿ ಧರಣಿಗೆ ಕುಳಿತ ಚಾಲಕ

    ತಪ್ಪು ಚಲನ್ ನೀಡಿದ್ದಕ್ಕೆ ಪತ್ನಿ, ಮಕ್ಕಳೊಂದಿಗೆ ರಸ್ತೆಯಲ್ಲಿ ಧರಣಿಗೆ ಕುಳಿತ ಚಾಲಕ

    ನವದೆಹಲಿ: ಪೊಲೀಸರು ನನಗೆ ತಪ್ಪು ಚಲನ್ ನೀಡಿದ್ದಾರೆ ಎಂದು ಆರೋಪಿಸಿ ಚಾಲಕನೋರ್ವ ಕುಟುಂಬ ಸಮೇತನಾಗಿ ರಸ್ತೆಯಲ್ಲಿಯೇ ಪ್ರತಿಭಟನೆ ಕುಳಿತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಹೊಸ ಟ್ರಾಫಿಕ್ ನಿಯಮ ಜಾರಿಯಾಗಿ ಒಂದೂವರೆ ತಿಂಗಳಾಗಿದೆ. ಭಾರೀ ದಂಡಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿವೆ. ದೆಹಲಿಯ ದ್ವಾರಕಾ ಸೆಕ್ಟರ್-1ರಲಿ ಸಿಗ್ನಲ್ ದಾಟಿದ್ದಕ್ಕೆ ಚಾಲಕ ಮನೀಶ್ ನಿಗೆ ಪೊಲೀಸರು ದಂಡದ ರಶೀದಿ ನೀಡಿದ್ದರು. ದಂಡದ ರಶೀದಿ ಪಡೆಯದ ಮನೀಶ್ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರ ಮೇಲೆ ನಾನು ಹಲ್ಲೆ ಮಾಡಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಲ್ಲದೇ ತಪ್ಪು ಚಲನ್ ಸಹ ನೀಡಿದ್ದಾರೆ ಎಂದು ದೂರಿನಲ್ಲಿ ಮನೀಶ್ ಉಲ್ಲೇಖಿಸಿದ್ದನು. ಇದನ್ನೂ ಓದಿ: ಧಾರವಾಡ-ತಪ್ಪು ಚಲನ್ ನೀಡಿದ್ದಕ್ಕೆ ಪತ್ನಿ, ಮಕ್ಕಳೊಂದಿಗೆ ರಸ್ತೆಯಲ್ಲಿ ಧರಣಿಗೆ ಕುಳಿತ ಚಾಲಕ

    ಪೊಲೀಸರು ಮನೀಶ್ ವಾಹನದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರಿಂದ, ಅಕ್ಟೋಬರ್ 2ರಿಂದ ಮನೆಯಲ್ಲಿಯೇ ಇದ್ದನು. ಭಾನುವಾರ ತನ್ನ ಕುಟುಂಬದ ಸಮೇತ ರಸ್ತೆಯಲ್ಲಿ ಬಂದ ಕುಳಿತ ಮನೀಶ್ ನ್ಯಾಯಬೇಕೆಂದು ಘೋಷಣೆ ಕೂಗಲಾರಂಭಿಸಿದ್ದಾನೆ. ರಸ್ತೆ ಮಧ್ಯೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರತಿಭಟನೆಗೆ ಕುಳಿತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮನೀಶ್ ಮನವೊಲಿಸುವ ಪ್ರಯತ್ನಿಸಿದ್ದಾರೆ. ಯಾರ ಮಾತು ಕೇಳದಿದ್ದಾಗ ಪೊಲೀಸರು ಮನೀಶ್ ಮತ್ತು ಆತನ ಪತ್ನಿಯನ್ನು ರಸ್ತೆಯ ಬದಿ ಬಲವಂತವಾಗಿ ಎಳೆದು ತಂದು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಏಳು ಸೆಕೆಂಡ್ ಇರುವಾಗಲೇ ಹೋಗಿದ್ದೇನೇಯೇ ಹೊರತು ಸಿಗ್ನಲ್ ಜಂಪ್ ಮಾಡಿಲ್ಲ. ದಂಡವನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ಹಲ್ಲೆಯ ಆರೋಪ ಮಾಡುತ್ತಿದ್ದಾರೆ ಎಂದು ಮನೀಶ್ ಆರೋಪಿಸಿದ್ದಾನೆ.

  • ಪರ್ಸ್ ತೆಗೆದು ತೋರಿಸು, ಸಾಕಾಗಲ್ಲ ಇನ್ನು ಕೊಡು- ದಂಡದ ಹಣ ಜೇಬಿಗಿಳಿಸಿಕೊಂಡ ಪೇದೆ

    ಪರ್ಸ್ ತೆಗೆದು ತೋರಿಸು, ಸಾಕಾಗಲ್ಲ ಇನ್ನು ಕೊಡು- ದಂಡದ ಹಣ ಜೇಬಿಗಿಳಿಸಿಕೊಂಡ ಪೇದೆ

    ದಾವಣಗೆರೆ: ಹೊಸ ಮೋಟಾರು ವಾಹನ ನಿಯಮವನ್ನು ಕರ್ನಾಟಕದಲ್ಲಿ ಸಡಿಲಿಸಲಾಗಿದೆ. ಆದರೂ ಸವಾರರು ನಿಯಮಗಳ ಉಲ್ಲಂಘನೆ ಮಾಡಿ ದಂಡ ಪಾವತಿಸುತ್ತಿದ್ದಾರೆ. ಈ ನಡುವೆ ಕೆಲ ಟ್ರಾಫಿಕ್ ಪೊಲೀಸರು ಹಳೇಯ ದಂಡದ ಮೊತ್ತ ತಿಳಿಸಿ 500 ರಿಂದ 600 ರೂ. ಯನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ದಾವಣಗೆರೆಯ ಬಿ.ಪಿ. ರಸ್ತೆಯಲ್ಲಿ ದಕ್ಷಿಣ ಸಂಚಾರಿ ಠಾಣೆಯ ಮುಖ್ಯ ಪೇದೆ ರವಿ ಹಣ ಜೇಬಿಗಳಿಸಿಕೊಳ್ಳುವ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಫೋನ್‍ಪೇಯಿಂದ ಹಣ ಕೀಳ್ತಾರೆ – ಪಬ್ಲಿಕ್ ಕ್ಯಾಮೆರಾ ಕಂಡ ಕೂಡ್ಲೇ ಓಡ್ತಾರೆ ಟ್ರಾಫಿಕ್ ಪೊಲೀಸ್ರು

    ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕಬೇಕು. ಬಿ.ಪಿ.ರಸ್ತೆಯಲ್ಲಿ ಕರ್ತವ್ಯದ ಮೇಲಿದ್ದ ಪೇದೆ ರವಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರನನ್ನ ತಡೆದು ಹಣ ಕೇಳಿರುವ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿದೆ. ಸವಾರರು ಸರ್ ನಮ್ಮ ಬಳಿ ಹಣ ಇಲ್ಲ. ಇಷ್ಟೇ ಇರೋದು ದಯವಿಟ್ಟು ತೆಗೆದುಕೊಳ್ಳಿ ಎಂದಿದ್ದಾರೆ. ಪೇದೆ ರವಿ ಮಾತ್ರ ಇಷ್ಟು ಸಾಕಾಗಲ್ಲ, ಪರ್ಸ್ ಚೆಕ್ ಮಾಡು, ತೋರಿಸು ಹಣ ಇದೆ ಅಲ್ವಾ ಕೊಡು ಎಂದು ಪೀಡಿಸುವ ಮೂಲಕ ಸಾರ್ವಜನಿಕವಾಗಿ ಹಣ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ವಿಡಿಯೋ: ರಸೀದಿ ನೀಡದೇ ದಂಡ ವಸೂಲಿ ಮಾಡ್ತಿರೋ ಚಿಕ್ಕೋಡಿ ಟ್ರಾಫಿಕ್ ಪೊಲೀಸ್

    ಮುಖ್ಯ ಪೇದೆ ರವಿ ಪ್ರತಿನಿತ್ಯ ಇದೇ ರೀತಿ ಸವಾರರಿಂದ ಹಣ ವಸೂಲಿ ಮಾಡುತ್ತಾರೆ. ಹಣ ಪಡೆದಿದ್ದಕ್ಕೆ ಯಾವುದೇ ರಶೀದಿ ಸಹ ನೀಡಲ್ಲ. ದಂಡಕ್ಕೆ ರಶೀದಿ ಕೇಳಿದ್ರೆ ಸಬೂಬು ಹೇಳಿ ಸವಾರರು ಕಳುಹಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕೆಲವು ದಿನಗಳ ಹಿಂದೆ ಇದೇ ರೀತಿ ಟ್ರಾಫಿಕ್ ಪೊಲೀಸ್ ಹಣ ಪಡೆಯುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ:  ಟ್ರಾಫಿಕ್ ಪೊಲೀಸ್ ಲಂಚ ಸ್ವೀಕರಿಸಿದ ವೀಡಿಯೋ ವೈರಲ್, ಕೆಲಸದಿಂದ ವಜಾ

  • ದುಬಾರಿ ಟ್ರಾಫಿಕ್ ದಂಡಕ್ಕೆ ಸರ್ಕಾರ ಬ್ರೇಕ್

    ದುಬಾರಿ ಟ್ರಾಫಿಕ್ ದಂಡಕ್ಕೆ ಸರ್ಕಾರ ಬ್ರೇಕ್

    ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಸರ್ಕಾರ ದುಬಾರಿ ದಂಡಕ್ಕೆ ಬ್ರೇಕ್ ಹಾಕಿದೆ.

    ಇದೇ ತಿಂಗಳ 3 ರಿಂದ ಅಂದರೆ ಕಳೆದ 15 ದಿನಗಳಿಂದ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಯಾಗಿ, ದೇಶಾದ್ಯಂತ ದುಬಾರಿ ದಂಡ ಹೇರಲಾಗಿತ್ತು. ಈ ದಂಡಕ್ಕೆ ಸವಾರರು ಬೇಸತ್ತು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈ ಸಂದರ್ಭದಲ್ಲಿ ಸಾರಿಗೆ ಸಚಿವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ದಂಡ ಇಳಿಸುವ ಭರವಸೆ ನೀಡಿದ್ದರು.

    ಗುಜರಾತ್ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ದಂಡ ಇಳಿಸುವ ಭರವಸೆ ನೀಡಿದರು. ಆದರೆ ಎಷ್ಟು ಪ್ರಮಾಣದಲ್ಲಿ ದಂಡದ ಇಳಿಕೆ ಮಾಡುತ್ತೇವೆ ಎನ್ನುವ ಬಗ್ಗೆ ಅಧಿಕೃತ ಆದೇಶ ನೀಡಿರಲಿಲ್ಲ. ಇಂದು ರಾತ್ರಿ ದುಬಾರಿ ದಂಡ ಇಳಿಕೆಯ ಬಗ್ಗೆ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ.

    ಕುಡಿದು ಮದ್ಯಪಾನ ಮಾಡಿದ್ದಲ್ಲಿ ಈ ಹಿಂದೆ ವಿಧಿಸಲಾಗಿದ್ದ 10 ಸಾವಿರ ರೂ. ದಂಡವನ್ನು ಹಾಗೆಯೇ ಮುಂದುವರಿಸಲಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಿಗೆ ಆಯುಕ್ತ ಶಿವಕುಮಾರ್, ಗುಜರಾತ್ ಮಾದರಿಯಲ್ಲಿ ದಂಡ ಇಳಿಸಿಲ್ಲ. ಮೋಟಾರು ವಾಹನ ಕಾಯ್ದೆಯಲ್ಲಿನ ತಿದ್ದುಪಡಿಯ 24 ಉಲ್ಲಂಘನೆಗಳಲ್ಲಿ 18 ಉಲ್ಲಂಘನೆಗಳ ದಂಡ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.

  • ಮಾಜಿ ಸಚಿವರಿಗೆ ಟ್ರಾಫಿಕ್ ನಿಯಮ ಅನ್ವಯ ಆಗಲ್ವಾ? ರಸ್ತೆಯಲ್ಲಿಯೇ ಬಸ್ ಪಾರ್ಕ್

    ಮಾಜಿ ಸಚಿವರಿಗೆ ಟ್ರಾಫಿಕ್ ನಿಯಮ ಅನ್ವಯ ಆಗಲ್ವಾ? ರಸ್ತೆಯಲ್ಲಿಯೇ ಬಸ್ ಪಾರ್ಕ್

    -ಪಾರ್ಕ್ ಮಾಡ್ಬೇಡಿ ಅನ್ನೋರು ಇಲ್ಲ

    ಬೆಂಗಳೂರು: ಸಿಕ್ಕಸಿಕ್ಕ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುವಂತಿಲ್ಲ, ಕೆಟ್ಟು ನಿಂತ ವಾಹನಗಳನ್ನು ಪಾರ್ಕ್ ಮಾಡಿದರೆ ಗಂಟೆಗಳ ಲೆಕ್ಕದಲ್ಲಿ ಫೈನ್ ಹಾಕುತ್ತಾರೆ. ಆದರೆ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಅನ್ನು ಚಾಮರಾಜಪೇಟೆಯ ರೋಡ್‍ನಲ್ಲಿ ಪಾರ್ಕ್ ಮಾಡಲಾಗುತ್ತಿದೆ.

    ರಸ್ತೆ ಕಿರಿದಾಗಿದರೂ ಬಿಂದಾಸ್ ಆಗಿ ಬಸ್‍ಗಳನ್ನು ಚಾಮರಾಜಪೇಟೆಯ ರಸ್ತೆಯಲ್ಲಿ ಪಾರ್ಕ್ ಮಾಡಲಾಗಿದೆ. ಹೀಗೆ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡುವ ವಾಹನಕ್ಕೆ ಒಂದು ಸಾವಿರ ದಂಡ ವಿಧಿಸಬೇಕು. ಆದರೆ ಜಮೀರ್ ಅವರ ಬಸ್ಸಿಗೆ ದಂಡ ಬಿಡಿ ಬಸ್ ಅನ್ನು ರಸ್ತೆಯಲ್ಲಿ ಪಾರ್ಕ್ ಮಾಡಬೇಡಿ ಎಂದು ಪೊಲೀಸರು ಹೇಳುತ್ತಿಲ್ಲ.

    ಕೆಟ್ಟು ನಿಂತ ಬಸ್‍ಗಳನ್ನು ಕೂಡ ಇನ್ನೊಂದು ಸಿಗ್ನಲ್ ಪಕ್ಕದ ರಸ್ತೆಯಲ್ಲಿ ವರ್ಷಾನುಗಟ್ಟಲೆಯಿಂದ ಪಾರ್ಕ್ ಮಾಡಲಾಗಿದೆ. ಟ್ರಾಫಿಕ್ ನಿಯಮದ ಪ್ರಕಾರ ಕೆಟ್ಟು ನಿಂತ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡಿದರೆ, ಗಂಟೆಗಳ ಲೆಕ್ಕದಲ್ಲಿ ದಂಡ ವಿಧಿಸಬೇಕು. ಆದರೆ ಜಮೀರ್ ಬಸ್‍ಗೆ ಇದ್ಯಾವುದು ಅನ್ವಯವಾಗಲ್ವಾ ಎಂಬ ಪ್ರಶ್ನೆಯೊಂದು ಮೂಡಿದೆ.

    ಬಸ್ ಪಾರ್ಕ್ ಮಾಡಿದರಿಂದ ವಾಹನ ಸವಾರರಿಗೆ ಸಂಚರಿಸಲು ಕಷ್ಟವಾಗುತ್ತದೆ. ಜಮೀರ್ ಅವರು ಸಂಚಾರ ಮಾಡುವ ಬಸ್ ಪಾರ್ಕ್ ಮಾಡುವ ಜೊತೆ ಕೆಟ್ಟು ಹೋದ ಬಸ್‍ಗಳನ್ನು ಕೂಡ ಪಾರ್ಕ್ ಮಾಡುತ್ತಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಬಸ್‍ಗಳನ್ನು ಪಾರ್ಕ್ ಮಾಡಲಾಗಿದೆ. ಆದರೆ ಇದೂವರೆಗೂ ಪೊಲೀಸರು ದಂಡ ವಿಧಿಸಿಲ್ಲ.

  • ಬೆಂಗ್ಳೂರಿನಲ್ಲಿ 8 ದಿನಕ್ಕೆ ಬರೋಬ್ಬರಿ 2.40 ಕೋಟಿ ರೂ. ಟ್ರಾಫಿಕ್ ಫೈನ್

    ಬೆಂಗ್ಳೂರಿನಲ್ಲಿ 8 ದಿನಕ್ಕೆ ಬರೋಬ್ಬರಿ 2.40 ಕೋಟಿ ರೂ. ಟ್ರಾಫಿಕ್ ಫೈನ್

    ಬೆಂಗಳೂರು: ರಾಜ್ಯದಲ್ಲಿ ಯಾವಾಗ ಟ್ರಾಫಿಕ್ ದಂಡವನ್ನು ಇಳಿಸುತ್ತಾರೆ ಎಂಬುವುದು ಮಾತ್ರ ಇರುವರೆಗೂ ಸ್ಪಷ್ಟವಾಗಿಲ್ಲ. ಆದರೆ ಕಳೆದ 8 ದಿನಗಳಲ್ಲಿ ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 2.40 ಕೋಟಿ ಹಣ ದಂಡದ ರೂಪದಲ್ಲಿ ವಸೂಲಾಗಿದೆ.

    ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಅಡಿ ಹೊಸ ನಿಯಮಗಳು ಅನ್ವಯವಾದ ಬಳಿಕ ಇದುವರೆಗೂ 84,589 ಪ್ರಕರಣಗಳು ದಾಖಲಾಗಿವೆ. ವಿಶೇಷ ಎಂದರೆ ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ಕೇವಲ 150 ಪ್ರಕರಣಗಳು ಮಾತ್ರ ಇದುವರೆಗೂ ದಾಖಲಾಗಿವೆ.  ಇದನ್ನೂ ಓದಿ: ಮದ್ಯ ಸೇವಿಸಿ ಕಾರು ಓಡಿಸಿ ಆಟೋಗೆ ಡಿಕ್ಕಿ ಹೊಡೆದ ಆರ್‌ಟಿಓ ಇನ್ಸ್‌ಪೆಕ್ಟರ್

    ಕಳೆದ 8 ದಿನಗಳ ಅವಧಿಯಲ್ಲಿ 84,589 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡಿದ್ದ 16,710 ಪ್ರಕರಣ, ಹಿಂಬದಿ ಸವಾರ ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡಿದ್ದ ಸಂಬಂಧ 10,977 ಪ್ರಕರಣಗಳು, ಸಿಗ್ನಲ್ ಜಂಪ್ 10,128 ಪ್ರಕರಣ, ನೋ ಪಾರ್ಕಿಂಗ್ 10,867 ಪ್ರಕರಣ, ಡ್ರಿಂಕ್ ಅಂಡ್ ಡ್ರೈವ್ ಅಡಿ 150 ಪ್ರಕರಣಗಳು ದಾಖಲಾಗಿದೆ. ಒಟ್ಟು 60 ವಿವಿಧ ಬಗೆಯ ಸಂಚಾರ ನಿಯಮಗಳ ಉಲ್ಲಂಘನೆ ಅಡಿ ದಂಡವನ್ನು ವಿಧಿಸಲಾಗುತ್ತಿದೆ. ದಿನವೊಂದಕ್ಕೆ ಸರಾಸರಿ 29 ಲಕ್ಷ ರೂ. ದಂಡದ ಹಣ ಸಂಗ್ರಹವಾಗುತ್ತಿದೆ. ಹೀಗೆ ಮುಂದುವರೆದರೆ ಟ್ರಾಫಿಕ್ ಪೊಲೀಸರ ಕಡೆಯಿಂದ ಸರ್ಕಾರದ ಬೊಕ್ಕಸಕ್ಕೆ ತಿಂಗಳಿಗೆ 8 ಕೋಟಿ ಆದಾಯ ಲಭಿಸಲಿದೆ. ಸೆ.12 ಬೆಳಗ್ಗೆ 10 ಗಂಟೆಯಿಂದ ಸೆ.13 ಬೆಳಗ್ಗೆ 10 ಅವಧಿಯಲ್ಲಿ ನಗರದಲ್ಲಿ 18,503 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಒಟ್ಟು 60,80,500 ರೂ. ದಂಡ ಸಂಗ್ರಹವಾಗಿದೆ. ಇದನ್ನು ಓದಿ: ಕರ್ನಾಟಕದಲ್ಲಿ ಟ್ರಾಫಿಕ್ ದಂಡದ ಮೊತ್ತ ಇಳಿಯುವುದು ಅನುಮಾನ

    ಇತ್ತ ಉತ್ತರ ಪ್ರದೇಶದ ಸಿದ್ದಾರ್ಥನಗರ ಜಿಲ್ಲೆಯಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ಬೈಕ್ ಸವಾರನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ನಡುವೆ, ಹಲವು ರಾಜ್ಯಗಳಲ್ಲಿ ದಂಡದ ಪ್ರಮಾಣ ಇಳಿಸಲು ಸಾರಿಗೆ ಸಚಿವ ನಿತಿನ್ ಗಡ್ಕರಿ ಗರಂ ಆಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚರ್ಚಿಸಲು ಎಲ್ಲಾ ರಾಜ್ಯಗಳ ಸಭೆ ಕರೆಯಲು ನಿರ್ಧರಿಸಿದ್ದಾರೆ. ಈ ಬೆಳವಣಿಯಿಂದ ರಾಜ್ಯದಲ್ಲಿ ಟ್ರಾಫಿಕ್ ದಂಡದ ಇಳಿಕೆ ಮಾಡುತ್ತಾರಾ ಎಂಬ ಅನುಮಾನ ಅನುಮಾನ ಮೂಡಿದೆ.  ಇದನ್ನೂ ಓದಿ: ನಾಯಕರ ‘ದಂಡ’ಯಾತ್ರೆ – ಟ್ರಾಫಿಕ್ ನಿಯಮಕ್ಕೆ ಸಿಎಂ ಡೋಂಟ್‍ಕೇರ್

  • ಉಡುಪಿಯಲ್ಲಿ ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಜನ

    ಉಡುಪಿಯಲ್ಲಿ ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಜನ

    ಉಡುಪಿ: ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯ್ದೆಯ ದಂಡ ವಸೂಲಿ ವಿರುದ್ಧ ಸಾರ್ವಜನಿಕರು ಅಲ್ಲಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಈಗ ಉಡುಪಿಯಲ್ಲೂ ಈ ರೀತಿಯ ಘಟನೆ ನಡೆದಿದೆ.

    ನಗರದ ಪಿಪಿಸಿ ಕಾಲೇಜು ಸಮೀಪ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ನಿಂತಿದ್ದರು. ಸಮೀಪದಲ್ಲಿ ಉಡುಪಿ ನಗರದ ಪಿಪಿಸಿ ಕಾಲೇಜ್ ಬಳಿ ಸಮವಸ್ತ್ರ ಧರಿಸದ, ಮಫ್ತಿಯಲ್ಲಿ ಇರುವ ಪೊಲೀಸರು ದ್ವಿಚಕ್ರ ವಾಹನಗಳನ್ನು ತಡೆದು ದಂಡ ವಸೂಲಿಗೆ ಇಳಿದಿದ್ದರು.

    ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ಇಲ್ಲದ ಈ ಪೊಲೀಸರು ಕರ್ತವ್ಯ ಪಾಲನೆಯಲ್ಲಿ ಇದ್ದದ್ದು ಸಂಶಯ ಮೂಡಿಸುವಂತಿತ್ತು. ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಮತ್ತು ವಿದ್ಯಾರ್ಥಿಗಳು, ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಅಲ್ಲಿಯೇ ಸ್ವಲ್ಪ ದೂರದಲ್ಲಿ ಇಲಾಖಾ ಜೀಪಿನಲ್ಲಿದ್ದ ಟ್ರಾಫಿಕ್ ಎಸ್‍ಐ ಅವರನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಲಾಖಾ ವಾಹನದಲ್ಲಿದ್ದ ಟ್ರಾಫಿಕ್ ಎಸ್‍ಐ ದೂರದಲ್ಲಿ ವಾಹನದೊಳಗೆ ಕುಳಿತ್ತಿದ್ದರು. ಸಮವಸ್ತ್ರ ಧರಿಸದ ಪೊಲೀಸ್ ಸಿಬ್ಬಂದಿಯನ್ನು ವಾಹನ ತಡೆದು ನಿಲ್ಲಿಸಲು ಇಳಿಸಲಾಗಿತ್ತು. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು ಈ ರಾದ್ಧಾಂತಕ್ಕೆ ಕಾರಣವಾಯಿತು. ಜನರಲ್ಲಿ ಸರ್ಕಾರದ ದಂಡದ ಕುರಿತು ಇದ್ದ ಆಕ್ರೋಶ ಈಗ ಪೊಲೀಸರ ಮೇಲೆ ಶಿಫ್ಟಾಗಿದೆ.

  • ಹೆಲ್ಮೆಟ್ ಇಲ್ಲದೆ ಜಾಲಿ ರೈಡ್ – ತಡೆಯೋಕೆ ಹೋದ್ರೆ ಪೊಲೀಸರ ಮೇಲೆಯೇ ಹಲ್ಲೆ

    ಹೆಲ್ಮೆಟ್ ಇಲ್ಲದೆ ಜಾಲಿ ರೈಡ್ – ತಡೆಯೋಕೆ ಹೋದ್ರೆ ಪೊಲೀಸರ ಮೇಲೆಯೇ ಹಲ್ಲೆ

    ಬೆಂಗಳೂರು: ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸವಾರರನ್ನು ಪ್ರಶ್ನಿಸಿದಕ್ಕೆ ನೈಜಿರಿಯನ್ಸ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಕಮ್ಮನಹಳ್ಳಿ ವ್ಯಾಪ್ತಿಯಲ್ಲಿ ಹೆಲ್ಮೆಟ್ ಇಲ್ಲದೆ ಓಡಾಡುತ್ತಿದ್ದ ನೈಜಿರಿಯನ್ಸ್ ಪ್ರಜೆಗಳಿಬ್ಬರನ್ನು ಪೊಲೀಸರು ತಡೆದಿದ್ದರು. ಬಳಿಕ ಹೆಲ್ಮೆಟ್ ಹಾಗೂ ದಾಖಲೆ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಪ್ರಶ್ನಿಸುತ್ತಿದ್ದಂತೆ ಇಬ್ಬರು ಜೋರು ಧ್ವನಿಯಲ್ಲಿ ಗಲಾಟೆ ಶುರು ಮಾಡಿ, ಎಎಸ್‍ಐ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಹಲ್ಲೆ ತಡೆಯುವುದಕ್ಕೆ ಹೋದ ಪೇದೆಯ ಮೇಲೆ ಹಲ್ಲೆ ಮಾಡಿದ್ದಾರೆ.

    ನಗರದ ಹೆಣ್ಣೂರು, ಕಮ್ಮನಹಳ್ಳಿ, ಅಮೃತಹಳ್ಳಿ, ಬಾಗಲೂರು, ರಾಮಮೂರ್ತಿನಗರ ಭಾಗದಲ್ಲಿ ಹೆಚ್ಚಾಗಿ ನೈಜಿರಿಯನ್ಸ್ ವಾಸ ಮಾಡುತ್ತಿದ್ದಾರೆ. ಇವರು ಯಾರಿಗೂ ಹೆದರುವುದಿಲ್ಲ. ಅಲ್ಲದೆ ಪೊಲೀಸರು ಕೂಡ ಇವರನ್ನು ತಡೆಯುವುದಕ್ಕೆ ಭಯಪಡುತ್ತಾರೆ. ಏಕೆಂದರೆ ಸುಖಾಸುಮ್ಮನೆ ಕೇಸ್ ಹಾಕುತ್ತಾರೆ, ಹೆಚ್ಚು ಕಡಿಮೆ ಆದರೆ ನಮ್ಮ ಕೆಲಸಕ್ಕೆ ಕುತ್ತು ಬರುತ್ತೆ ಎಂದು ನೋಡಿ ನೋಡದ ರೀತಿ ವರ್ತಿಸಿದ್ದಾರೆ.

    ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಹಿಂದಿ, ಇಂಗ್ಲೀಷ್ ಭಾಷೆ ಬಿಟ್ಟು ಅವರ ಸ್ಥಳೀಯ ಭಾಷೆಯಲ್ಲಿ ಮಾತಾನಾಡುವುದಕ್ಕೆ ಶುರು ಮಾಡುತ್ತಾರೆ. ಪೊಲೀಸರು ಎಷ್ಟೇ ಹೇಳಿದರೂ, ಅದೇ ಅರ್ಥವಾಗದ ಭಾಷೆಯಲ್ಲಿ ಜಗಳಕ್ಕೆ ಬಿದ್ದು ನಡುರಸ್ತೆಯಲ್ಲೇ ಹೈಡ್ರಾಮ ಮಾಡುತ್ತಾರೆ. ಕೊನೆಗೆ ಅವರ ಹತ್ತಿರ ಜಗಳ ಮಾಡುವುದಕ್ಕೆ ಆಗದೇ ಪೊಲೀಸರೇ ಅವರನ್ನು ಬಿಟ್ಟು ಕಳುಹಿಸುತ್ತಾರೆ.

    ಹಲ್ಲೆಗೊಳಾಗಾದ ಪೊಲೀಸರು ಸಹ ಈ ಬಗ್ಗೆ ದೂರು ನೀಡಲು ಹೋಗುವುದಿಲ್ಲ. ಯಾಕೆ ದೂರು ನೀಡುವುದಿಲ್ಲ ಎಂದು ಪೊಲೀಸರಲ್ಲಿ ಪ್ರಶ್ನಿಸಿದಾಗ, ನಾವು ದೂರು ನೀಡಿದರೆ ಅವರ ದೇಶದ ರಾಯಭಾರಿ ಕಚೇರಿಯಿಂದ ನೋಟಿಸ್ ಕಳುಹಿಸುತ್ತಾರೆ. ನೋಟಿಸ್, ಕೇಸ್ ಎಂದು ಓಡಾಡುವುದಕ್ಕೆ ನಮಗೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ.

  • ದುಬಾರಿ ಟ್ರಾಫಿಕ್ ದಂಡಕ್ಕೆ ಗುಜರಾತ್ ಸರ್ಕಾರದಿಂದ ಬ್ರೇಕ್

    ದುಬಾರಿ ಟ್ರಾಫಿಕ್ ದಂಡಕ್ಕೆ ಗುಜರಾತ್ ಸರ್ಕಾರದಿಂದ ಬ್ರೇಕ್

    ಗಾಂಧಿನಗರ: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ಷೇಪ ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ಗುಜರಾತ್ ಸರ್ಕಾರ ದಂಡ ಪ್ರಮಾಣವನ್ನು ಕಡಿತಗೊಳಿಸಿದೆ.

    ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಹೊಸ ಕಾಯ್ದೆಯಲ್ಲಿ ವಿಧಿಸುತ್ತಿರುವ ದಂಡದ ಮೊತ್ತ ಗರಿಷ್ಠ ಪ್ರಮಾಣದಲ್ಲಿದ್ದು, ಈ ಬಗ್ಗೆ ಚರ್ಚೆ ನಡೆಸಿ ಕೆಲ ದಂಡದ ಮೊತ್ತಗಳನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಗುಜರಾತ್ ಸರ್ಕಾರದ ಹೊಸ ನಿಯಮಗಳಂತೆ ಹೆಲ್ಮೆಟ್ ಧರಿಸದಿದ್ದರೆ 500 ರೂ. ದಂಡವನ್ನು ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸೆ.1ರಿಂದ ಜಾರಿ ಮಾಡಿದ್ದ ಹೊಸ ತಿದ್ದುಪಡಿ ಕಾಯ್ದೆಯ ಅನ್ವಯ ಈ ಮೊತ್ತ 1 ಸಾವಿರ ರೂ. ಇತ್ತು. ಸೀಟ್ ಬೆಲ್ಟ್ ಧರಿಸದಿದ್ದರೆ 1 ಸಾವಿರ ಬದಲಾಗಿ 500 ರೂ., ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ದ್ವಿಚಕ್ರ ವಾಹನ ಸವಾರರಿಗೆ 2 ಸಾವಿರ ರೂ., ಉಳಿದ ವಾಹನಗಳಿಗೆ 3 ಸಾವಿರ ರೂ. ನಿಗದಿ ಮಾಡಲಾಗಿದೆ. ಆದರೆ ಲೈಸನ್ಸ್, ಆರ್ ಸಿ, ವಿಮೆ ಮೊದಲ ಬಾರಿಗೆ ಇಲ್ಲದಿದ್ದರೆ 500 ರೂ. ದಂಡ ವಿಧಿಸಿದರೆ, 2ನೇ ಬಾರಿಗೆ ಈ ಮೊತ್ತ ಕೇಂದ್ರ ಸರ್ಕಾರ ನೀತಿಗೆ ಅಡಿ ಅನ್ವಯವಾಗಲಿದೆ. ಇದನ್ನು ಓದಿ: ಸಿದ್ಧಪಡಿಸಿಕೊಂಡ ನೆಟ್ಟಿಗರು- ವೈರಲಾಯ್ತು ವಿಡಿಯೋ

    ತ್ರಿಬಲ್ ರೈಡಿಂಗ್ ಮಾಡುವವರಿಗೆ ವಿಧಿಸಲಾಗುತ್ತಿದ್ದ 1 ಸಾವಿರ ರೂ. ದಂಡವನ್ನು 100 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಮಾಲಿನ್ಯ ಪ್ರಮಾಣ ಪತ್ರ ಪಡೆಯದ ವಾಹನಗಳಿಗೆ ನಿಗದಿ ಮಾಡಿದ್ದ 10 ಸಾವಿರಗಳನ್ನು ಸಣ್ಣ ವಾಹನಗಳಿಗೆ 1 ಸಾವಿರ ರೂ. ಭಾರೀ ವಾಹನಗಳಿಗೆ 3 ಸಾವಿರ ರೂ.ಗೆ ಇಳಿಸಲಾಗಿದೆ.

    ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಯನ್ನು ಜಾರಿ ಮಾಡಿದ ಸಂದರ್ಭದಿಂದ ಇದುವರೆಗೂ ಭಾರೀ ಮೊತ್ತ ದಂಡ ಪಾವತಿಸಿದ್ದ ಸುದ್ದಿಗಳು ಸಾಕಷ್ಟು ಸದ್ದು ಮಾಡಿದ್ದವು. ಅಲ್ಲದೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ನಾನು ಕೂಡ ನಿಯಮ ಉಲ್ಲಂಘಿಸಿದ ಪರಿಣಾಮ ದಂಡ ಪಾವತಿ ಮಾಡಿದ್ದೇನೆ. ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ. ನಿಯಮ ಉಲ್ಲಂಘಿಸಿ ಅಪಘಾತದಿಂದ ಮೃತಪಟ್ಟ ವ್ಯಕ್ತಿ ಕುಟುಂಬದವರನ್ನು ನೀವು ಕೇಳಿ ನೋಡಿ. ಅವರ ನೋವು ಏನು ಎನ್ನುವುದು ಗೊತ್ತಾಗಬೇಕು. ಹೊಸ ನೀತಿಯಿಂದ ಹಿಂದೆ ಸರಿಯುವುದಿಲ್ಲ, ಕಠಿಣ ನಿಯಮಗಳು ಜಾರಿಯಾದರೆ ಮಾತ್ರ ಶಿಸ್ತು ಉಂಟಾಗಲು ಸಾಧ್ಯ ಅಭಿಪ್ರಾಯ ಪಟ್ಟಿದ್ದರು. ಆದರೆ ನಿತಿನ್ ಗಡ್ಕರಿ ಅವರು ಹೇಳಿಕೆ ಬೆನ್ನಲ್ಲೇ ಗುಜರಾತ್ ಸರ್ಕಾರವೇ ದಂಡ ಮೊತ್ತಕ್ಕೆ ಕತ್ತರಿ ಹಾಕಿದೆ. ಇದನ್ನು ಓದಿ: ಟ್ರಾಫಿಕ್ ರೂಲ್ಸ್ ಉಲ್ಲಂಘನೆ- ಬೈಕಿಗೆ 23, 24 ಸಾವಿರ ರೂ, ಆಟೋಗೆ 32 ಸಾವಿರ ರೂ. ದಂಡ