– ಪಂಕ್ಚರ್ ಸರಿ ಮಾಡುವ ನೆಪದಲ್ಲಿ ರೇಪ್
– ಸಿಸಿಟಿವಿ ದೃಶ್ಯಾವಳಿಯಿಂದ ಆರೋಪಿಗಳು ಪತ್ತೆ
– ಕೃತ್ಯವೆಸೆಗಿದ ಟ್ರಕ್ ಡ್ರೈವರ್ ಸೇರಿ ನಾಲ್ವರು ಅರೆಸ್ಟ್
ಹೈದರಾಬಾದ್: ತೆಲಂಗಾಣದಲ್ಲಿ ಪಶುವೈದ್ಯೆಯನ್ನು ಓರ್ವ ಟ್ರಕ್ ಚಾಲಕ ಸೇರಿದಂತೆ ಒಟ್ಟು ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿ, ಘಟನಾ ಸ್ಥಳದಿಂದ 25 ಕಿ.ಮೀ ದೂರ ಶವವನ್ನು ಕೊಂಡೊಯ್ದು ಸುಟ್ಟಿರುವುದು ಬಯಲಾಗಿದೆ.
ತೆಲಂಗಾಣದ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪಶುವೈದ್ಯೆಯಾದ ಪ್ರಿಯಾಂಕಾ ರೆಡ್ಡಿ, ಬುಧವಾರ ಬೆಳಗ್ಗೆ ಶಾದ್‍ನಗರದ ತನ್ನ ಮನೆಯಿಂದ ತಾನು ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ನಂತರ ರಾತ್ರಿ ಸ್ಕೂಟಿ ಪಂಕ್ಚರ್ ಆಗಿದೆ ಎಂದು ತನ್ನ ತಂಗಿಗೆ ಕರೆ ಮಾಡಿದ್ದರು. ಆ ಬಳಿಕ ಅವರ ನಾಪತ್ತೆಯಾಗಿದ್ದರು. ಆದರೆ ಗುರುವಾರ ಬೆಳಗ್ಗೆ ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ನ ಕೆಳಗೆ ಪ್ರಿಯಾಂಕಾ ಶವವಾಗಿ ಪತ್ತೆಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ತೊಂಡುಪಲ್ಲಿ ಟೋಲ್ ಪ್ಲಾಝಾ ಬಳಿ ಬೆಳಗ್ಗೆ ವೈದ್ಯೆ ತನ್ನ ಸ್ಕೂಟಿ ಪಾರ್ಕ್ ಮಾಡಿ ಗಚಿಬೌಲಿಗೆ ತೆರೆಳಿದ್ದರು. ಇದನ್ನು ಲಾರಿ ಚಾಲಕ ಮಹ್ಮದ್ ಪಾಷಾ, ಆತನ ಸಹಾಯಕ ಹಾಗೂ ಇನ್ನೂ ಇಬ್ಬರು ಗಮನಿಸಿದ್ದರು. ಸಂಜೆ ವೈದ್ಯೆ ಸ್ಕೂಟಿ ತೆಗೆದುಕೊಂಡು ಹೋಗಲು ಬಂದೇ ಬರುತ್ತಾರೆ ಎಂದು ತಿಳಿದುಕೊಂಡು ಬೇಕಂತಲೆ ವಾಹನವನ್ನು ಪಂಕ್ಚರ್ ಮಾಡಿದ್ದರು.

ರಾತ್ರಿ 8 ಗಂಟೆ ವೇಳೆಗೆ ಗಚಿಬೌಲಿಯಿಂದ ವಾಪಸ್ ಆಗಿದ್ದ ವೈದ್ಯೆ ಟೋಲ್ ಬಳಿ ಸ್ಕೂಟಿ ತೆಗೆದುಕೊಂಡು ಹೋಗಲು ಬಂದಿದ್ದರು. ಆಗ ಸ್ಕೂಟಿ ಪಂಚರ್ ಆಗಿದ್ದನ್ನು ನೋಡಿ ಏನು ಮಾಡುವುದು ಎಂದು ತೋಚದೇ ಆತಂಕದಲ್ಲಿದ್ದರು. ಈ ವೇಳೆ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಆರೋಪಿಗಳು ಪಂಕ್ಚರ್ ರಿಪೇರಿ ಮಾಡಲು ಸಹಾಯ ಮಾಡುತ್ತೇವೆ ಎಂದು ವೈದ್ಯೆಗೆ ನಂಬಿಸಿದರು. ಬಳಿಕ ಸಹಾಯ ಮಾಡುವ ನೆಪದಲ್ಲಿ ವೈದ್ಯೆಯನ್ನು ಟೋಲ್‍ನಿಂದ ತುಸು ದೂರ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿದರು. ನಂತರ ವೈದ್ಯೆಯನ್ನು ಕೊಲೆಗೈದು, ಮೃತದೇಹವನ್ನು ಸುಮಾರು 25 ಕಿ.ಮೀ ದೂರ ಕೊಂಡೊಯ್ದು ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ಕೆಳಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದ ಹತ್ತಿರವಿದ್ದ ಟಯರ್ ರಿಪೇರಿ ಅಂಗಡಿ ಮಾಲೀಕನನ್ನು ವಿಚಾರಿಸಿದಾಗ, ರಾತ್ರಿ ಸುಮಾರು 9:30 ಗಂಟೆಯಿಂದ 10 ಗಂಟೆ ವೇಳೆಯಲ್ಲಿ ಚಾಲಕರು ಸ್ಕೂಟಿ ತೆಗೆದುಕೊಂಡು ಬಂದಿದ್ದರು. ರಿಪೇರಿ ಆದ ಬಳಿಕ ಅದನ್ನು ತೆಗೆದುಕೊಂಡು ಹೋಗಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಹೊರಟಾಗ ಇಬ್ಬರು ಚಾಲಕರು ಸಿಕ್ಕಿಬಿದ್ದಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಪತ್ತೆಯಾಗಿದ್ದು, ಸದ್ಯ 4 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಟೋಲ್ ಪ್ಲಾಝಾ ಬಳಿ ಇದ್ದ ವೈದ್ಯೆಯ ಸ್ಕೂಟಿ, ಬಟ್ಟೆ, ಚಪ್ಪಲಿ ಹಾಗೂ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಿಯಾಂಕಾ ಅವರ ಬಗ್ಗೆ ತಂಗಿ ಭವ್ಯ ಮಾತನಾಡಿ, ನನಗೆ ಪ್ರಿಯಾಂಕಾ ರಾತ್ರಿ 9:15 ಸುಮಾರಿಗೆ ಕರೆ ಮಾಡಿದಳು. ನನ್ನ ಬೈಕ್ ಪಂಕ್ಚರ್ ಆಗಿದೆ. ನನಗೆ ಭಯವಾಗುತ್ತಿದೆ ಎಂದು ಹೇಳಿದಳು. ನಂತರ ನಾನು ಅವಳಿಗೆ ಹತ್ತಿರದ ಟೋಲ್ ಬಳಿ ಹೋಗಲು ಹೇಳಿದೆ. ಆದರೆ ಅವಳು ನನಗೆ ತುಂಬಾ ಭಯವಾಗುತ್ತಿದೆ. ಇಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ ಹಾಗೂ ತುಂಬಾ ಲಾರಿಗಳನ್ನು ಪಾರ್ಕ್ ಮಾಡಲಾಗಿದೆ ಎಂದು ಹೇಳಿದ್ದಳು.

ನಾನು ನಂತರ ಅವಳಿಗೆ ಭಯಪಡಬೇಡ ಬೈಕನ್ನು ಅಲ್ಲೇ ನಿಲ್ಲಿಸಿ ನೀನು ಅಲ್ಲಿಂದ ಬಾ ಎಂದು ಹೇಳಿದೆ. ನಂತರ ಮತ್ತೆ ಅವಳ ಫೋನ್‍ಗೆ ಕರೆ ಮಾಡಿದಾಗ ಅವಳ ಫೋನ್ ಸ್ವಿಚ್ ಆಫ್ ಬಂತು. ಆದರೆ ಬೆಳಗ್ಗೆ ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ಕೆಳಗೆ ಪತ್ತೆಯಾಗದ ರೀತಿಯಲ್ಲಿ ಸುಟ್ಟು ಹೋದ ಅವಳ ದೇಹ ದೊರಕಿದೆ. ಆಕೆ ಹಾಕಿದ್ದ ಚೈನ್ ಲಾಕೆಟ್ ನೋಡಿ ನಾವು ದೇಹವನ್ನು ಗುರುತಿಸಿದೆವು ಎಂದು ಭವ್ಯ ತಿಳಿಸಿದ್ದರು.