Tag: ಟ್ಯಾಬ್ಲೋ

  • ಟ್ಯಾಬ್ಲೋಗಳನ್ನು ಮೋದಿ ಸರ್ಕಾರ ಆಯ್ಕೆ ಮಾಡಲ್ಲ – ರಾಜ್ಯಗಳ ಆರೋಪಕ್ಕೆ ಕರಂದ್ಲಾಜೆ ತಿರುಗೇಟು

    ಟ್ಯಾಬ್ಲೋಗಳನ್ನು ಮೋದಿ ಸರ್ಕಾರ ಆಯ್ಕೆ ಮಾಡಲ್ಲ – ರಾಜ್ಯಗಳ ಆರೋಪಕ್ಕೆ ಕರಂದ್ಲಾಜೆ ತಿರುಗೇಟು

    ನವದೆಹಲಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಟ್ಯಾಬ್ಲೋಗಳು ಯಾವುದು ಇರಬೇಕು? ಯಾವುದು ಇರಬಾರದು ಎನ್ನುವುದನ್ನು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ನಿರ್ಧರಿಸುವುದಿಲ್ಲ. ಆದರೆ ರಾಜ್ಯಗಳು ವರ್ಷದಿಂದ ವರ್ಷಕ್ಕೆ ತಪ್ಪು ಮಾಹಿತಿಯನ್ನು ಬಳಸಿಕೊಂಡು ಕೇಂದ್ರದಿಂದ ಅವಮಾನವಾಗಿದೆ ಎಂಬ ಅದೇ ಹಳೆಯ ತಂತ್ರವನ್ನು ಮುಂದುವರಿಸಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

    ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಶ್ಚಿಮ, ಬಂಗಾಳ, ಕೇರಳ ಟ್ಯಾಬ್ಲೋಗಳಿಗೆ ಅನುಮತಿ ನೀಡದೇ ಅನ್ಯಾಯ ಮಾಡಲಾಗಿದೆ ಎಂಬ ಅರೋಪಕ್ಕೆ ಶೋಭಾ ಕರಂದ್ಲಾಜೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಹೇಳಿಕೆಯಲ್ಲಿ ಏನಿದೆ?
    ಗಣರಾಜ್ಯೋತ್ಸವ ಪರೇಡ್‌ನಲ್ಲಿ ತಮ್ಮ ರಾಜ್ಯದ ಟ್ಯಾಬ್ಲೋಗಳನ್ನು ಹೊರಗಿಟ್ಟ ಬಗ್ಗೆ ರಾಜ್ಯದ ಸಿಎಂಗಳು ಇತ್ತೀಚೆಗೆ ಪತ್ರಗಳನ್ನು ಬರೆಯುತ್ತಿರುವುದನ್ನು ನಾವು ನೋಡಿದ್ದೇವೆ. ಇದು ಪ್ರಾದೇಶಿಕ ಅಭಿಮಾನದೊಂದಿಗೆ ತಪ್ಪಾಗಿ ತಳುಕು ಹಾಕಿಕೊಂಡಿದ್ದು, ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಬಿಂಬಿಸಲಾಗುತ್ತಿದೆ. ಇದನ್ನೂ ಓದಿ: ಟ್ಯಾಬ್ಲೊ ವಿಚಾರದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ – ಸಿಡಿದೆದ್ದ ರಾಜ್ಯಗಳು

    ಬಹುಶಃ ಸಿಎಂಗಳಿಗೆ ತಮ್ಮದೇ ಆದ ಸಕಾರಾತ್ಮಕ ಅಜೆಂಡಾ ಇಲ್ಲ, ಅವರು ವರ್ಷದಿಂದ ವರ್ಷಕ್ಕೆ ತಪ್ಪು ಮಾಹಿತಿಯನ್ನು ಬಳಸಿಕೊಂಡು ಅದೇ ಹಳೆಯ ತಂತ್ರವನ್ನು ಮುಂದುವರಿಸಿ ಕೇಂದ್ರದಿಂದ ಅವಮಾನ ಆಗಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಟ್ಯಾಬ್ಲೋಗಳನ್ನು ಮೋದಿ ಸರ್ಕಾರ ನಿರ್ಧಾರ ಮಾಡುತ್ತಿಲ್ಲ. ಕಲೆ, ಸಂಸ್ಕೃತಿ, ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಸಂಯೋಜನೆ ಇತ್ಯಾದಿ ಕ್ಷೇತ್ರದ ಗಣ್ಯರನ್ನು ಒಳಗೊಂಡ ತಜ್ಞರ ಸಮಿತಿ ಸರಣಿ ಸಭೆ ನಡೆಸಿ ವಿವಿಧ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳಿಂದ ಸ್ವೀಕರಿಸಲಾದ ಟ್ಯಾಬ್ಲೋಗಳ ಪ್ರಸ್ತಾಪಗಳನ್ನು ಪರಿಶೀಲಿಸುತ್ತದೆ. ಥೀಮ್, ಪರಿಕಲ್ಪನೆ, ವಿನ್ಯಾಸ ಮತ್ತು ದೃಶ್ಯ ಈ ಮಾನದಂಡಗಳ ಆಧಾರದ ಮೇಲೆ ಶಿಫಾರಸು ಮಾಡಲಾಗುತ್ತದೆ.

    ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ಗಾಗಿ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳಿಂದ ಒಟ್ಟು 56 ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿತ್ತು. ಈ 56 ರಲ್ಲಿ ಅಂತಿಮವಾಗಿ 21 ಪ್ರಸ್ತಾವನೆಗಳನ್ನು ಆಯ್ಕೆ ಮಾಡಲಾಗಿದೆ. ಸಮಯದ ಕೊರತೆಯಿಂದ ಕೆಲ ಪ್ರಸ್ತಾವನೆಗಳನ್ನು ತಿರಸ್ಕರಿಸುವುದು ಸಹಜ. ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಪ್ರಸ್ತಾವನೆಗಳನ್ನು ವಿಷಯ ತಜ್ಞರ ಸಮಿತಿಯು ಸರಿಯಾದ ಪ್ರಕ್ರಿಯೆ ಮತ್ತು ಸೂಕ್ತ ಚರ್ಚೆಯ ನಂತರ ತಿರಸ್ಕರಿಸಿದೆ. ಇದನ್ನೂ ಓದಿ: ಕೇರಳವನ್ನು ಪ್ರಶ್ನಿಸಬೇಕೇ ಹೊರತು ಕೇಂದ್ರವನ್ನಲ್ಲ: ಸಿದ್ದುಗೆ ಬಿಜೆಪಿ ತಿರುಗೇಟು

    2018 ಮತ್ತು 2021 ರಲ್ಲಿ ಅದೇ ಮೋದಿ ಸರ್ಕಾರದ ಅಡಿಯಲ್ಲಿ ಅದೇ ಪ್ರಕ್ರಿಯೆ ಮತ್ತು ವ್ಯವಸ್ಥೆಯ ಮೂಲಕ ಕೇರಳದ ಪ್ರಸ್ತಾಪಗಳನ್ನು ಅಂಗೀಕರಿಸಲಾಗಿದೆ. ಅದೇ ರೀತಿ 2016, 2017, 2019, 2020 ಮತ್ತು 2021 ರಲ್ಲಿ ಅದೇ ಮೋದಿ ಸರ್ಕಾರ ಇದ್ದಾಗ ತಮಿಳುನಾಡಿನ ಟ್ಯಾಬ್ಲೋ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿತ್ತು.

    2016, 2017, 2019 ಮತ್ತು 2021 ರಲ್ಲಿ ಮೋದಿ ಸರ್ಕಾರ ಆಡಳಿತದಲ್ಲಿದ್ದಾಗ ಪಶ್ಚಿಮ ಬಂಗಾಳದ ಪ್ರಸ್ತಾಪಗಳಿಗೆ ಅನುಮತಿ ನೀಡಲಾಗಿತ್ತು ಎಂಬುದನ್ನು ಸಹ ಗಮನಿಸಬೇಕು. ಈ ಬಾರಿಯ ಪರೇಡ್‌ನಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆಯ ಟ್ಯಾಬ್ಲೋ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರನ್ನು ಒಳಗೊಂಡಿದೆ. ಅದ್ದರಿಂದ ನೇತಾಜಿ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ.

  • ಪ್ರತಿಭಟನಾಕಾರರ ಆಕ್ರೋಶಕ್ಕೆ ವಿಜಯನಗರ ಸಾಮ್ರಾಜ್ಯದ ಟ್ಯಾಬ್ಲೊ ಜಖಂ

    ಪ್ರತಿಭಟನಾಕಾರರ ಆಕ್ರೋಶಕ್ಕೆ ವಿಜಯನಗರ ಸಾಮ್ರಾಜ್ಯದ ಟ್ಯಾಬ್ಲೊ ಜಖಂ

    ನವದೆಹಲಿ: ಪ್ರತಿಭಟನಾಕಾರರ ಆಕ್ರೋಶಕ್ಕೆ ವಿಜಯ ನಗರ ಸಾಮ್ರಾಜ್ಯದ ಟ್ಯಾಬ್ಲೊ ತುತ್ತಾಗಿದ್ದು, ಜಖಂ ಆಗಿದೆ. ಶ್ರೀಕೃಷ್ಣದೇವರಾಯನ ವೇಷದಲ್ಲಿದ್ದ ಡಾ.ರಾಜಕುಮಾರ್ ಮೂರ್ತಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.

    ಗಲಭೆಕೋರರು ನಡೆಸಿದ ದಾಂಧಲೆಯಿಂದ ಕೆಂಪುಕೋಟೆ ಸಂಪೂರ್ಣ ಹಾಳಾಗಿ ಹೋಗಿದೆ. ಸೆಕ್ಯೂರಿಟಿ ರೂಂನಿಂದ ಹಿಡಿದುಕೊಂಡು, ಪರಿಶೀಲನಾ ಕೊಠಡಿ, ಸಿಸಿಟಿವಿ, ಕಂಪ್ಯೂಟರ್, ಟಿಕೆಟ್ ಕೌಂಟರ್, ಫ್ಯಾನ್, ಪೀಠೋಪಕರಣ, ಬ್ಯಾರಿಕೇಡ್‍ಗಳನ್ನು ಧ್ವಂಸ ಮಾಡಲಾಗಿದೆ. ಕಂಡ ಕಂಡ ಗಾಜುಗಳನ್ನು ಧ್ವಂಸ ಮಾಡಲಾಗಿದೆ. ವೈರ್ ಗಳನ್ನು ಕಟ್ ಮಾಡಲಾಗಿದ್ದು, ಕೆಂಪುಕೋಟೆಯ ಎಲ್ಲಾ ಕಡೆ ವಿದ್ಯುತ್ ಸರಬರಾಜಿಗೂ ವ್ಯತ್ಯಯ ಉಂಟಾಗಿದೆ. ಪೊಲೀಸ್ ಜೀಪ್ ಜಖಂ ಆಗಿದ್ದು, ಕೆಲಸಕ್ಕೆ ಬಾರದಂತಾಗಿದೆ. ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.

    ಕೆಂಪುಕೋಟೆ ಹಿಂಸಾಚಾರದ ಮತ್ತಷ್ಟು ಘನಘೋರ ದೃಶ್ಯಗಳು ಒಂದೊಂದಾಗೇ ಬೆಳಕಿಗೆ ಬರ್ತಿವೆ. ಇದರಲ್ಲಿನ ಒಂದು ದೃಶ್ಯದಲ್ಲಂತೂ, ರೈತರ ವೇಷದಲ್ಲಿದ್ದ ಪಾತಕಿಗಳು ದೊಡ್ಡಮಟ್ಟದ ಹಿಂಸಾಕಾಂಡವನ್ನೇ ಸೃಷ್ಟಿಸಿರೋದು ಕಂಡು ಬರುತ್ತೆ. ಖಾಲಿ ಮಾಡಿಸಲು ಬಂದ ಪೊಲೀಸರ ಮೇಲೆ ಕಿಡಿಗೇಡಿಗಳು ತಿರುಗಿಬಿದ್ದಿದ್ದಾರೆ. ಗಲಭೆಕೋರರಿಂದ ತಪ್ಪಿಸಿಕೊಳ್ಳಲು, ತಮ್ಮ ಪ್ರಾಣ ಉಳಿಸಿಕೊಳ್ಳಲು ಕೆಂಪುಕೋಟೆ ಸಮೀಪದಲ್ಲಿದ್ದ 15 ಅಡಿ ಆಳದ ಕಂದಕಕ್ಕೆ ಪೊಲೀಸರು ಧುಮುಕುತ್ತಾರೆ. ಕೆಲವರು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿಬೀಳುತ್ತಾರೆ. ಕೇವಲ ಇಲ್ಲೇ 150ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

    ಟ್ರ್ಯಾಕ್ಟರ್ ಮೂಲಕ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು, ದೊಣ್ಣೆಗಳ ಮೂಲಕ ಜಖಂ ಮಾಡುವ ದೃಶ್ಯವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಈ ಮಧ್ಯೆ ಗಲಭೆಕೋರರು ಟ್ಯಾಬ್ಲೋ ಗಳನ್ನು ಬಿಟ್ಟಿಲ್ಲ. ಅದರಲ್ಲೂ ಪ್ರತಿಭಟನಕಾರರ ಆಕ್ರೋಶಕ್ಕೆ ವಿಜಯ ನಗರ ಸಾಮ್ರಾಜ್ಯದ ಟ್ಯಾಬ್ಲೊ ಬಲಿಯಾಗಿದೆ.

  • ಭಾರತದಾದ್ಯಂತ ಇಂದು 72ನೇ ಗಣರಾಜ್ಯೋತ್ಸವ ಸಂಭ್ರಮ

    ಭಾರತದಾದ್ಯಂತ ಇಂದು 72ನೇ ಗಣರಾಜ್ಯೋತ್ಸವ ಸಂಭ್ರಮ

    ನವದೆಹಲಿ: ಇಂದು 72ನೇ ಗಣರಾಜ್ಯೋತ್ಸವ. ಒಂದೆಡೆ ಕೊರೊನಾ, ಮತ್ತೊಂದೆಡೆ ಕೃಷಿ ಕಾಯ್ದೆ ವಿರುದ್ಧ ಮೊಳಗಿರುವ ಅನ್ನದಾತನ ರಣಕಹಳೆ. ಇದರ ನಡುವೆ ಭಾರತದಾದ್ಯಂತ ಇಂದು ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ.

    72 ವರ್ಷಗಳ ಗಣತಂತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವು ರಾಷ್ಟ್ರೀಯ ಹಬ್ಬವೊಂದನ್ನು ಆಚರಿಸ್ತಿದ್ದೇವೆ. ಹಾಗಾಗಿ ಗಣರಾಜ್ಯೋತ್ಸವ ಹಿಂದೆಂದಿಗಿಂತಲೂ ಭಿನ್ನ ವಿಭಿನ್ನವಾಗಿದೆ. ಗಣರಾಜ್ಯೋತ್ಸವ ಅಂದರೆ ಭಾರತದ ಶಕ್ತಿ, ಸಾಂಸ್ಕøತಿಕ ಪರಂಪರೆಯನ್ನು ಪ್ರದರ್ಶಿಸೋ ದಿನ. ಆದರೆ ಕೊರೊನಾದಿಂದ ಎಲ್ಲದರಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ದೆಹಲಿ ರಾಜಪಥದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆರಂಭವಾಗಲಿದೆ.

    ಪ್ರಧಾನಿ ಮೋದಿ ಮೊದಲಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಬಳಿಕ ಸೇನೆಗೌರವ ಸ್ವೀಕರಿಸಿ ರಾಜಪಥ್‍ಗೆ ಆಗಮಿಸಲಿದ್ದಾರೆ. ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಲಿದ್ದಾರೆ. ಬಳಿಕ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ನಂತರ ಸೇನೆಯ ಶಕ್ತಿ ಪ್ರದರ್ಶನ ನಡೆಯಲಿದೆ.

    ರಾಜಪಥ್‍ನಲ್ಲಿ ಸಾಗೋ ಪರೇಡ್‍ನ ಅಂದ ಹೆಚ್ಚಿಸೋದೇ ಟ್ಯಾಬ್ಲೋಗಳು. ಕರ್ನಾಟಕದಿಂದ ಈ ಬಾರಿ ವಿಜಯನಗರ ಸಾಮ್ರಾಜ್ಯದ ಗತವೈಭವ ಅನಾವರಣಗೊಳ್ಳಲಿದೆ. ಹಂಪಿಯ ಸ್ತಬ್ಧಚಿತ್ರ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಕಲಾವಿದ ಶಶಿಧರ ಅಡಪ ನೇತೃತ್ವದ ತಂಡ ರೂಪಿಸಿರುವ ಸ್ತಬ್ಧಚ್ರಿತ್ರದಲ್ಲಿ ಸೈನ್ಯದ ಮಹತ್ವ, ಹಂಪಿಯ ವಾಸ್ತುಶಿಲ್ಪ, ಐತಿಹಾಸಿಕ ದೇವಾಲಯಗಳ ಸೊಬಗು ಎದ್ದು ಕಾಣುತ್ತಿವೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ಉಗ್ರನರಸಿಂಹನ ಮೂರ್ತಿ ಇದೆ. ಜೊತೆಗೆ ಅಂಜನಾದ್ರಿ ಬೆಟ್ಟ, ಕೃಷ್ಣದೇವರಾಯನ ಪಟ್ಟಾಭಿಷೇಕದ ಸಂದೇಶವೂ ಇರಲಿದೆ. ಸ್ತಬ್ಧಚಿತ್ರದ ಜೊತೆಗೆ ಶಿವಮೊಗ್ಗ ರಂಗಾಯಣದ 12 ಮಂದಿ ಕಲಾವಿದರು ಹೆಜ್ಜೆ ಹಾಕಲಿದ್ದಾರೆ.

    ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದ ವಿವಿಧ ಸಂಸ್ಕøತಿಯ ಅನಾವರಣವೇ ಇಲ್ಲಿ ಆಗುತ್ತದೆ. ಈ ಬಾರಿ 32 ಟ್ಯಾಬ್ಲೋಗಳು ಸಾಗಲಿದೆ. ವಿವಿಧ ರಾಜ್ಯ ಮತ್ತು ಕೇಂದ್ರಾದಳಿತ ಪ್ರದೇಶದ 17 ಸ್ತಬ್ಧಚಿತ್ರ, 9 ಸಚಿವಾಲಯಗಳ ಟ್ಯಾಬ್ಲೋ ಮತ್ತು ರಕ್ಷಣಾ ಇಲಾಖೆಯ 6 ಟ್ಯಾಬ್ಲೋ ರಾಜಪಥದಲ್ಲಿ ಸಾಗಲಿದೆ. ಅಯೋಧ್ಯೆಯ ರಾಮಮಂದಿರ ಈ ಬಾರಿ ಉತ್ತರ ಪ್ರದೇಶದ ಟ್ಯಾಬ್ಲೋ ಆಗಿದೆ.

  • ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಾಮ ಮಂದಿರ ಟ್ಯಾಬ್ಲೋ- ಯುಪಿ ಸರ್ಕಾರದಿಂದ ಸಿದ್ಧತೆ

    ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಾಮ ಮಂದಿರ ಟ್ಯಾಬ್ಲೋ- ಯುಪಿ ಸರ್ಕಾರದಿಂದ ಸಿದ್ಧತೆ

    – ದೀಪೋತ್ಸವ, ರಾಮಾಯಣದ ಪ್ರಸಂಗ ಪ್ರದರ್ಶನ

    ಲಕ್ನೋ: ಈ ಬಾರಿ ಗಣರಾಜ್ಯೋತ್ಸವದ ಪರೇಡ್‍ಗೆ ಉತ್ತರ ಪ್ರದೇಶ ವಿಶೇಷ ರೀತಿಯ ಟ್ಯಾಬ್ಲೋ ಸಿದ್ಧಪಡಿಸುತ್ತಿದ್ದು, ಅಯೋಧ್ಯೆ ಹಾಗೂ ರಾಮ ಮಂದಿರದ ಮಾದರಿಯನ್ನು ಪ್ರದರ್ಶಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಸಂಪೂರ್ಣ ಅಯೋಧ್ಯೆ ಚಿತ್ರಣ, ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮಾದರಿ ಹಾಗೂ ದೀಪಾವಳಿ ವೇಳೆ ನಡೆದ ದೀಪೋತ್ಸವವನ್ನು ಪ್ರದರ್ಶಿಸಲಿದೆ. ಉತ್ತರ ಪ್ರದೇಶ ಸರ್ಕಾರ ಇದಕ್ಕಾಗಿ ಸಂಪೂರ್ಣ ಸಿದ್ಧತೆ ನಡೆಸಿದ್ದು, ಅಯೋಧ್ಯೆಯ ರಾಮಮಂದಿರದ ಮಾದರಿ ಸಹ ಟ್ಯಾಬ್ಲೋದ ಭಾಗವಾಗಲಿದೆ. ಅಲ್ಲದೆ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ನಡೆದ ದೀಪೋತ್ಸವದ ಚಿತ್ರಣವನ್ನು ಸಹ ಟ್ಯಾಬ್ಲೋ ಒಳಗೊಂಡಿರುತ್ತದೆ.

    ದೀಪಾವಳಿಯ ದೀಪೋತ್ಸವದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ದೀಪ ಬೆಳಗಿಸುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಭಾಗವಹಿಸಿದ್ದರು. ಈ ದೀಪೋತ್ಸವದ ಚಿತ್ರಣವನ್ನು ಸಹ ಟ್ಯಾಬ್ಲೋ ಒಳಗೊಂಡಿರುತ್ತದೆ.

    ಕೇವಲ ರಾಮ ಮಂದಿರ, ದೀಪೋತ್ಸವ, ಅಯೋಧ್ಯೆ ಮಾತ್ರವಲ್ಲ ಸಾಮಾಜಿಕ ಸಾಮರಸ್ಯದ ಅಂಶಗಳು ಹಾಗೂ ರಾಮಾಯಣದ ದೃಶ್ಯಗಳನ್ನು ಅಯೋಧ್ಯೆಯ ಟ್ಯಾಬ್ಲೋಗೆ ಸೇರಿಸಲು ಚಿಂತಿಸಲಾಗಿದೆ.

  • ಪಶ್ಚಿಮ ಬಂಗಾಳ ಬಳಿಕ ಮಹಾರಾಷ್ಟ್ರ, ಬಿಹಾರ, ಕೇರಳ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕಾರ

    ಪಶ್ಚಿಮ ಬಂಗಾಳ ಬಳಿಕ ಮಹಾರಾಷ್ಟ್ರ, ಬಿಹಾರ, ಕೇರಳ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕಾರ

    ಪಾಟ್ನಾ: ಪಶ್ಚಿಮ ಬಂಗಾಳ ನಂತರ ಮಹಾರಾಷ್ಟ್ರ, ಬಿಹಾರ, ಕೇರಳ ಸ್ತಬ್ಧಚಿತ್ರವನ್ನು ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‍ಗೆ ತಿರಸ್ಕರಿಸಲಾಗಿದೆ.

    ಬಿಹಾರ ಮಾಹಿತಿ ಕೇಂದ್ರ ಈ ಬಗ್ಗೆ ಸ್ಪಷ್ಟಗೊಳಿಸಿದೆ. ಪಶ್ಚಿಮ ಬಂಗಾಳ ನಂತರ ಮಹಾರಾಷ್ಟ್ರ, ಬಿಹಾರ, ಕೇರಳ ರಾಜ್ಯ ಕಳಿಸಿದ್ದ ಸ್ತಬ್ಧಚಿತ್ರಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

    ರಕ್ಷಣಾ ಖಾತೆ ಮಾಹಿತಿ ಪ್ರಕಾರ, ತಜ್ಞರ ಸಮಿತಿಯ ಆಕ್ಷೇಪಣೆ ನಂತರ ಬಿಹಾರ ಸ್ತಬ್ಧಚಿತ್ರ ಪ್ರಸ್ತಾಪನೆಯನ್ನು ತಿರಸ್ಕರಿಸಲಾಗಿದೆ. ಪಶ್ಚಿಮ ಬಂಗಾಳ ಸರ್ಕಾರ ಕನ್ಯಾಶ್ರೀ, ಹಸಿರು ರಕ್ಷಣೆ -ಸ್ವಚ್ಛ ಪರಿಸರ ಹಾಗೂ ಜಲ ಧಾರೆ ಪರಿಕಲ್ಪನೆಯ ಪ್ರಸ್ತಾಪನೆಗಳನ್ನು ಸಲ್ಲಿಸಿತ್ತು. ವಿಶಿಷ್ಟ ಪರಿಕಲ್ಪನೆ ಟ್ಯಾಬ್ಲೋ ಆಯ್ಕೆಗೆ ಪ್ರಧಾನ ಮಾನದಂಡ. ಈ ಮೂರರಲ್ಲಿ ಯಾವುದೂ ವಿಶಿಷ್ಟವಲ್ಲ ಎಂದು ಪಶ್ಚಿಮ ಬಂಗಾಳದ ಟ್ಯಾಬ್ಲೋ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು.

    ಹಾಗೆಯೇ ಗಣರಾಜ್ಯೋತ್ಸವ ಪರೇಡ್‍ನ ಟ್ಯಾಬ್ಲೋಗಳಲ್ಲಿ ಯಾವುದೇ ರಾಜಕೀಯ ಪಕ್ಷ ಹಾಗೂ ರಾಜಕೀಯ ಅಜೆಂಡಾಗಳ ಪರಿಕಲ್ಪನೆ ಟ್ಯಾಬ್ಲೋ ಮಾಡುವಂತಿಲ್ಲ. ಆದರೆ ಬಿಹಾರ್ ಹಾಗೂ ಮಹಾರಾಷ್ಟ್ರ ರಾಜಕೀಯ ಪರಿಕ್ಪನೆ ಟ್ಯಾಬ್ಲೋಗಳ ಪ್ರಸ್ತಾವನೆ ಸಲ್ಲಿಸಿತ್ತು. ಆದ್ದರಿಂದ ಈ ರಾಜ್ಯಗಳ ಟ್ಯಾಬ್ಲೋಗಳನ್ನು ತಜ್ಞರ ಸಮಿತಿ ತಿರಸ್ಕರಿಸಿದೆ.

    ಈ ಬಗ್ಗೆ ಆರ್‍ಜೆಡಿ ವಕ್ತಾರ ಮ್ರಿತುಂಜನ್ ತಿವಾರಿ ಪ್ರತಿಕ್ರಿಯಿಸಿ, ಈ ಹಿಂದೆ ಕೇಂದ್ರ ಸರ್ಕಾರ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ ಎಂಬ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈಗ ನಮ್ಮ ಗಣರಾಜ್ಯೋತ್ಸವದ ಟ್ಯಾಬ್ಲೋಗಳನ್ನು ತಿರಸ್ಕರಿದೆ. ಬಿಜೆಪಿ ಎರಡು ಇಂಜಿನ್ ಸರ್ಕಾರ ನಡೆಸುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಕಿಡಿಕಾರಿದ್ದಾರೆ.

    ಇತ್ತ ಮಹಾರಾಷ್ಟ್ರ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕೃತಗೊಂಡಿದ್ದಕ್ಕೆ ಎನ್‍ಸಿಪಿ ನಾಯಕಿ ಸುಪ್ರಿಯಾ ಸುಳೆ ಟ್ವೀಟ್ ಮಾಡಿ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಟ್ಯಾಂಬ್ಲೋಗಳ ಪ್ರಸ್ತಾವಣೆ ತಿರಸ್ಕರಿಸಿದೆ. ಗಣರಾಜ್ಯೋತ್ಸವ ದೇಶದ ಹಬ್ಬ. ಆದ್ದರಿಂದ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಈ ಹಬ್ಬದಲ್ಲಿ ಭಾಗಿಯಾಗಲು ಅವಕಾಶ ಕೊಡಬೇಕು. ಆದರೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಕೆಲ ರಾಜ್ಯಗಳ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಹಾಗೆಯೇ ಕೇರಳ ಟ್ಯಾಂಬ್ಲೋ ಪ್ರಸ್ತಾವನೆ ತಿರಸ್ಕೃತಗೊಂಡಿರುವುದು ರಾಜಕೀಯ ಪ್ರೇರಿತ ಎಂದು ಕೇರಳ ಕಾನೂನು ಸಚಿವ ಎ.ಕೆ ಬಾಲನ್ ಕಿಡಿಕಾರಿದ್ದಾರೆ.

    ತಜ್ಞರ ಸಮಿತಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ವಿವಿಧ ಇಲಾಖೆಗಳ ಟ್ಯಾಬ್ಲೋ ಪ್ರಸ್ತಾಪನೆಗಳನ್ನು ಪರಿಶೀಲಿಸಿ, ಗಣರಾಜ್ಯೋತ್ಸವ ಪರೇಡ್‍ನ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಟ್ಯಾಬ್ಲೋಗಳನ್ನು ಅಂತಿಮಗೊಳಿಸುತ್ತದೆ. 2020ರ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಲು ರಾಜ್ಯಗಳಿಂದ 32 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 24 ಪ್ರಸ್ತಾವನೆಗಳು ಬಂದಿದ್ದವು. ಅದರಲ್ಲಿ ಒಟ್ಟು 22 ಪ್ರಸ್ತಾಪನೆಗಳನ್ನು ಅಂತಿಮ ಮಾಡಲಾಗಿದೆ.

  • ಗಣರಾಜ್ಯೋತ್ಸವದಲ್ಲಿ ಪ.ಬಂಗಾಳ ಟ್ಯಾಬ್ಲೋ ಇಲ್ಲ – ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ ಸರ್ಕಾರ

    ಗಣರಾಜ್ಯೋತ್ಸವದಲ್ಲಿ ಪ.ಬಂಗಾಳ ಟ್ಯಾಬ್ಲೋ ಇಲ್ಲ – ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಡುವಿನ ಜಟಾಪಟಿ ಮುಂದುವರಿದಿದ್ದು, ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಪಶ್ಚಿಮ ಬಂಗಾಳ ಟ್ಯಾಬ್ಲೋ(ಸ್ತಬ್ಧಚಿತ್ರ) ಪ್ರದರ್ಶನ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

    ರಕ್ಷಣಾ ಸಚಿವಾಲಯಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ತಜ್ಞರ ಸಮಿತಿ ಎರಡು ಬಾರಿ ಟ್ಯಾಬ್ಲೋ ಮಾದರಿಯನ್ನು ಸಲ್ಲಿಕೆ ಮಾಡಿತ್ತು. ಈ ಬಾರಿಯ ಗಣರಾಜ್ಯೋತ್ಸವಕ್ಕೆ 16 ರಾಜ್ಯಗಳಿಂದ 22, ಕೇಂದ್ರಾಡಳಿತ ಪ್ರದೇಶ ಹಾಗೂ 6 ಕೇಂದ್ರ ಸಚಿವಾಲಯಗಳ ಒಟ್ಟು 56 ಟ್ಯಾಬ್ಲೋಗಳು ಪ್ರದರ್ಶನಗೊಳ್ಳಲಿದೆ.

    ಪಶ್ಚಿಮ ಬಂಗಾಳ ಸಲ್ಲಿಕೆ ಮಾಡಿದ್ದ ಪ್ರಸ್ತಾಪಗಳನ್ನು 2 ಬಾರಿ ತಜ್ಞರ ಸಮಿತಿ ಸಭೆ ನಡೆಸಿ ಚರ್ಚೆ ನಡೆಸಿದ ಬಳಿಕ ತಿರಸ್ಕರಿಸಿದೆ. ಈ ಸಮಿತಿಯಲ್ಲಿ ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಸಂಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಒಳಗೊಂಡಿರುತ್ತದೆ. ತನ್ನ ನಿರ್ಧಾರವನ್ನು ಮಾಡುವ ಮೊದಲು ಸ್ತಬ್ಧಚಿತ್ರದ ಪರಿಕಲ್ಪನೆ, ವಿನ್ಯಾಸ ಮತ್ತು ದೃಶ್ಯ ಪ್ರಭಾವವನ್ನು ಪರಿಶೀಲನೆ ನಡೆಸುತ್ತದೆ. ಸಮಯದ ಅಭಾವದಿಂದ ಪ್ರಸ್ತಾವನೆಯಲ್ಲಿ ಬಂದಿರುವ ಪರಿಕಲ್ಪನೆಗಳಲ್ಲಿ ಉತ್ತಮವಾಗಿರುವುದನ್ನು ಮಾತ್ರ ಸಮಿತಿ ಆಯ್ಕೆ ಮಾಡುತ್ತದೆ.

    ಇತ್ತ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಕೆಲ ನಿರ್ಣಯಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇತ್ತೀಚೆಗಷ್ಟೇ ಸಿಎಂ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಎನ್‍ಸಿಆರ್ ಹಾಗೂ ಪೌರತ್ವ ಕಾಯ್ದೆಯನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದಿದ್ದರು.

  • ಮಳೆಯಲ್ಲೇ ಕೈಕೊಟ್ಟ ಮಳೆ ಕೊಯ್ಲು ಟ್ಯಾಬ್ಲೋ

    ಮಳೆಯಲ್ಲೇ ಕೈಕೊಟ್ಟ ಮಳೆ ಕೊಯ್ಲು ಟ್ಯಾಬ್ಲೋ

    ಉಡುಪಿ: ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ವರ್ಷಧಾರೆಯ ನಡುವೆಯೇ 73ನೇ ಸ್ವಾತಂತ್ರೋತ್ಸವವನ್ನು ಜಿಲ್ಲಾಡಳಿತ ಕಡೆಯಿಂದ ಆಚರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹೆಚ್ಚಿಸಿ ಜನಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ಪಂಚಾಯತ್ ಟ್ಯಾಬ್ಲೋ ಕೈಕೊಟ್ಟಿದೆ.

    ಜಲವರ್ಷ 2019- ಮಳೆ ನೀರು ಸಂರಕ್ಷಣೆಯನ್ನು ಸಾರುವ ಟ್ಲ್ಯಾಬ್ಲೋವನ್ನು ಉಡುಪಿ ಜಿಲ್ಲಾ ಪಂಚಾಯತ್ ಸಿದ್ಧಪಡಿಸಿತ್ತು. ಟ್ಯಾಬ್ಲೋವನ್ನು ಜಿಲ್ಲಾ ಕ್ರೀಡಾಂಗಣಕ್ಕೆ ತಂದು ನಿಲ್ಲಿಸಲಾಗಿತ್ತು. ಪಥಸಂಚಲನ ನಂತರ ಇನ್ನೇನೋ ಮೈದಾನಕ್ಕೆ ಒಂದು ಸುತ್ತು ತರಬೇಕು ಎನ್ನುವಷ್ಟರಲ್ಲಿ ಭಾರೀ ಗಾಳಿ ಮಳೆಯಾಗಿದೆ. ಟ್ಯಾಬ್ಲೋ ವಾಹನ ನಿಂತಲ್ಲೇ ಕೈ ಕೊಟ್ಟಿದೆ.ಭಾರೀ ಮಳೆಗೆ ವಾಹನ ಚಾಲು ಆಗ್ತಿಲ್ಲ. ಕೆಟ್ಟು ನಿಂತಿದೆ ಸರ್ ಎಂದು ಚಾಲಕ ಪೊಲೀಸರಲ್ಲಿ ಹೇಳಿದ್ದಾನೆ.

    ತಳ್ಳಿ ಜರ್ಕ್ ಹಾಕುವ ಪ್ರಯತ್ನ ಮಾಡಿದರೂ ಸ್ಟಾರ್ಟ್ ಆಗಲೇ ಇಲ್ಲ. ಅಷ್ಟೊತ್ತಿಗೆ ಪಥ ಸಂಚಲನ ಮುಗಿದು ಡಿಸಿ ಭಾಷಣ ಶುರು ಮಾಡಿದ್ದರು. ಇನ್ನು ಟ್ಯಾಬ್ಲೋ ಮೈದಾನದ ಬದಿಯಲ್ಲೇ ನಿಂತಿದ್ದರೆ ಆಭಾಸ ಆಗುತ್ತೆ ಎಂದು ಸಂಬಂಧಪಟ್ಟವರು ಟ್ಯಾಬ್ಲೋವನ್ನು ಮೈದಾನದಿಂದ ಹೊರಕ್ಕೆ ತಳ್ಳಿ ಸೈಡಿಗಿಟ್ಟರು. ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್ ಮಳೆ ನೀರು ಉಳಿಸುವ ಜನಜಾಗೃತಿ ಕಾರ್ಯಕ್ರಮದ ಟ್ಯಾಬ್ಲೋ ಭಾರೀ ಮಳೆಗೇ ಕೈಕೊಟ್ಟಿದ್ದು ನಗೆಪಾಟಲಿಗೆ ಕಾರಣವಾಯಿತು.

  • ಐತಿಹಾಸಿಕ ಮಡಿಕೇರಿ ದಸರೆಗೆ ಕ್ಷಣಗಣನೆ!

    ಐತಿಹಾಸಿಕ ಮಡಿಕೇರಿ ದಸರೆಗೆ ಕ್ಷಣಗಣನೆ!

    ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾದ ದಶಮಂಟಪ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಈ ಬಾರಿ ಸರಳ ದಸರಾ ಅಚರಣೆ ಮಾಡುತ್ತಿರುವ ಹಿನ್ನಲೆಯಲ್ಲಿ ನಗರದ 10 ಪ್ರಮುಖ ದೇವಾಲಯಗಳಿಂದ ಸಿದ್ಧವಾಗಿರುವ ದಶಮಂಟಪಗಳ ಪ್ರದರ್ಶನಕ್ಕಾಗಿ ಸಾವಿರಾರು ಜನರು ಕಾದು ಕುಳಿತಿದ್ದಾರೆ.

    ಪ್ರವಾಹದ ಹಿನ್ನೆಲೆಯಲ್ಲಿ ಐತಿಹಾಸಿಕ ಮಡಿಕೇರಿ ದಸರಾ ಸರಳವಾಗಿ ಆಚರಿಸಲು ಈ ಬಾರಿ ನಿರ್ಧರಿಸಲಾಗಿದೆ. ಹೀಗಾಗಿ ದಶಮಂಟಪದ ಮೆರವಣಿಗೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಗಲಿನಲ್ಲಿ ಮೈಸೂರು ದಸರಾ, ರಾತ್ರಿ ಮಡಿಕೇರಿ ದಸರಾ ಎಂದೇ ಪ್ರಸಿದ್ದಿಕೊಂಡಿರುವ ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರಿ ವರ್ಣ ರಂಜಿತ ದಶಮಂಟಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಜನರು ರಾತ್ರಿಯ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

    ರಾತ್ರಿ 11 ಗಂಟೆ ನಂತರ ಆರಂಭಗೊಳ್ಳುವ ದಶಮಂಟಪಗಳ ಪ್ರದರ್ಶನ ನಗರದ ಹಲವೆಡೆ ಮುಂಜಾನೆವರೆಗೂ ಸಂಚರಿಸಿ ಪ್ರದರ್ಶನ ನೀಡಲಿವೆ. ಪೌರಾಣಿಕ ಹಿನ್ನೆಲೆಯ ಕತೆಯನ್ನು ಪ್ರದರ್ಶನಮಾಡಲು ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿ ಸೇರಿದಂತೆ 10 ದೇವಾಲಯಗಳೂ ಕೂಡ ಒಂದೊಂದು ಕಥೆಯನ್ನು ಆಯ್ಕೆಮಾಡಿಕೊಂಡು ಪ್ರದರ್ಶನ ನೀಡಲು ಸಿದ್ಧವಾಗಿದೆ. ಅಲ್ಲದೇ ರಾಜ್ಯದ ವಿವಿಧೆಡೆಗಳಿಂದ ಆಗಮಿಸೋ, ಲಕ್ಷಾಂತರ ಜನರು ದಶಮಂಟಪ ಪ್ರದರ್ಶನ ವೀಕ್ಷಣೆಗೆ ಕಾಯುತ್ತಿದ್ದಾರೆ.

    ಯಾವೆಲ್ಲ ಮಂಟಪ ಇದೆ?
    ಶ್ರೀ ಪೇಟೆರಾಮ ಮಂದಿರ ದಸರಾ ಸಮಿತಿಯ ನಂದಿಯಿಂದ ಶಿವ ದರ್ಶನ, ದೇಚೂರು ಶ್ರೀ ರಾಮ ಮಂದಿರ ದಸರಾ ಸಮಿತಿಯ ಪಂಚಮುಖಿ ಆಂಜನೇಯನ ದರ್ಶನ, ಶ್ರೀ ದಂಡಿನ ಮಾರಿಯಮ್ಮ ದಸರಾ ಸಮಿತಿಯ ಆದಿ ಶಕ್ತಿಯಿಂದ ಶುಂಭ ನೀಶುಂಭರ ಸಂಹಾರ, ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ದಸರಾ ಸಮಿತಿಯ ಗಣಪತಿಯಿಂದ ಗಜಾಸುರನ ಸಂಹಾರ, ಶ್ರೀ ಕಂಚಿ ಕಾಮಾಕ್ಷಿ ಮತ್ತು ಮುತ್ತು ಮಾರಿಯಮ್ಮ ಬಾಲಕ ಮಂಡಳಿ ದಸರಾ ಸಮಿತಿಯಿಂದ ಗಣಪತಿಯಿಂದ ಗಜಾಸುರನ ವಧೆ, ಶ್ರೀ ಕುಂದುರು ಮೊಟ್ಟೆಚೌಟಿ ಮಾರಿಯಮ್ಮ ದಸರಾ ಸಮಿತಿಯಿಂದ ಶಿವ ಪುರಾಣದ ಕುಮಾರಕಾಂಡ, ಶ್ರೀ ಕೋದಂಡರಾಮ ದಸರಾ ಸಮಿತಿಯಿಂದ ಶ್ರೀ ದೇವಿ ಮಹಾತ್ಮೆಯ ಚಂಡ ಮುಂಡರ ವಧೆ, ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿ ದಸರಾ ಸಮಿತಿಯಿಂದ ದಕ್ಷಯಜ್ಞ, ಶ್ರೀ ಕೋಟೆ ಗಣಪತಿ ದಸರಾ ಸಮಿತಿಯಿಂದ ಗಣಪತಿ ಪರಶುರಾಮ ಕಾಳಗ ಹಾಗೂ ಶ್ರೀ ಕರವಲೆ ಭಗವತಿ ದಸರ ಉತ್ಸವ ಸಮಿತಿಯ ಶ್ರೀ ದೇವಿ ಮಹಾತ್ಮೆಯ ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಸಾಗಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

    ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

    ಉಡುಪಿ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ 2ನೇ ಪರ್ಯಾಯ ಆರಂಭಿಸಿದ್ದಾರೆ.

    ಪಲಿಮಾರು ಪರ್ಯಾಯ ಉತ್ಸವದಲ್ಲಿ ಭಕ್ತಿ-ಭಾವ, ಅಭಿಮಾನ ಮನೆ ಮಾಡಿತು. ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದ ಶ್ರೀಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರಿದರು. ಈ ಮೂಲಕ ದ್ವಿತೀಯ ಪರ್ಯಾಯ ಆರಂಭವಾಯಿತು. ಅದ್ಧೂರಿ ಸಮಾರಂಭಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅಲ್ಲದೇ ಸಂಪ್ರದಾಯದಂತೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಬಂದ ಪಲಿಮಾರು ಮಠಾಧೀಶರಿಗೆ ಭವ್ಯ ಸ್ವಾಗತ ಕೋರಲಾಯಿತು.

    ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ವೈಭವದ ಮೆರವಣಿಗೆ ರಥಬೀದಿಯಲ್ಲಿ ಸಾಗಿತು. ಮೆರವಣಿಗೆಯಲ್ಲಿ ಅಷ್ಟಮಠಾಧೀಶರು ಭಾಗಿಯಾದ್ರು. ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅಖಂಡ ಭಜನೋತ್ಸವಕ್ಕೆ ಅವರು ಚಾಲನೆ ನೀಡಿದರು. ಜೊತೆಗೆ ಎರಡು ವರ್ಷಗಳ ಕಾಲ ಕಡೆಗೋಲು ಕೃಷ್ಣನ ಪೂಜಾ ಕೈಂಕರ್ಯವನ್ನು ಸ್ವಾಮೀಜಿ ನಿಭಾಯಿಸಲಿದ್ದಾರೆ. ಒಟ್ಟಿನಲ್ಲಿ ಪರ್ಯಾಯವನ್ನು ಜನರು ಹಬ್ಬದಂತೆ ಆಚರಿಸಿದರು.

    ಈ ಬಾರಿಯ ಪರ್ಯಾಯ ಕಾರ್ಯಕ್ರಮ ಹಿಂದೆಂದಿಗಿಂತಲೂ ವೈಭವದಿಂದ ನಡೆಯಿತು. ವಿದ್ಯುತ್ ಅಲಂಕರದಿಂದ ಉಡುಪಿ ನಗರಿ ಕಂಗೊಳಿಸಿದ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿತು. ನಗರದ ಜೋಡುಕಟ್ಟೆಯಲ್ಲಿ 3.15 ರ ಸುಮಾರಿಗೆ ಅಷ್ಟಮಠಾಧೀಶರ ಸಂಗಮವಾಯಿತು. ಪಲಿಮಾರು ಸ್ವಾಮಿಗಳ ಎರಡನೇ ಪರ್ಯಾಯ ಮಹೋತ್ಸವ ಆರಂಭಕ್ಕೆ ಮುನ್ನ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಕೆ ಮಾಡಲಾಯ್ತು. ಪಲಿಮಾರು, ಕೃಷ್ಣಾಪುರ, ಶಿರೂರು, ಕಾಣಿಯೂರು, ಸೋದೆ, ಅದಮಾರುಕಿರಿಯ ಸ್ವಾಮೀಜಿ ಪರ್ಯಾಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ರಾಷ್ಟ್ರದ ವಿವಿಧೆಡೆಯಿಂದ ಬಂದ ಸಾಂಸ್ಕೃತಿಕ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಜೋಡುಕಟ್ಟೆಯಲ್ಲಿ ಕುಳಿತು ಅಷ್ಟಮಠಾಧೀಶರು ಮೆರವಣಿಗೆ ವೀಕ್ಷಣೆ ಮಾಡಿದರು. ಜೋಡು ಕಟ್ಟೆಯಿಂದ ರಾಜ ಮಾರ್ಗದಲ್ಲಿ ಮೆರವಣಿಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದರು.

    ತಟ್ಟಿರಾಯ, ಬಿರುದಾವಳಿಗಳು, ಛತ್ರ, ಚಾಮರ, ಕೊಂಬು ಕಹಳೆ, ಚಂಡೆ, ನಾಸಿಕದ ಬ್ಯಾಂಡ್, ಭಜನಾ ತಂಡಗಳು, ಬೆಂಕಿಯ ಚೆಂಡು, ಕವಾಯತು, ವೀರಗಾಸೆ, ಕುಡುಬಿ ನೃತ್ಯ, ಪಟ್ಟದ ಕುಣಿತ ಸಹಿತ ಹತ್ತಾರು ಜನಪದ ತಂಡಗಳು, ಕೀಲುಕುದುರೆ, ಬೇತಾಳ ಡೊಳ್ಳುಕುಣಿತ, ಗೊಂಬೆ ಕುಣಿತ, ಕರಗ ಗೊಂಬೆ, ಹುಲಿ ವೇಷ ಕುಣಿತ ಎಲ್ಲರನ್ನು ಸೆಳೆಯಿತು. ಯಕ್ಷಗಾನ ತಂಡ, ಕೇರಳ ಚೆಂಡೆ, ಪೂಜಾ ಕುಣಿತ, ಮಹಿಷಾಸುರ ಟ್ಯಾಬ್ಲೋ, ದೇವಿ, ಮಧ್ವಾಚಾರ್ಯರು, ವಾದಿರಾಜ ಸ್ವಾಮೀಜಿ, ಉಡುಪಿ ಕೃಷ್ಣನ ಟ್ಯಾಬ್ಲೋ ಮೆರವಣಿಗೆಯಲ್ಲಿದ್ದವು.

    ಮೂವರು ಟ್ಯಾಬ್ಲೋ ಪಲ್ಲಕ್ಕಿಯಲ್ಲಿ- ಇಬ್ಬರು ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಪರ್ಯಾಯ ಮಹೋತ್ಸವದ ಸ್ವಾಮೀಜಿಗಳ ಪಲ್ಲಕ್ಕಿ ಮೆರವಣಿಗೆ ಮೂರು ರೀತಿಯ ಸಂಪ್ರದಾಯಗಳಿಗೆ ಸಾಕ್ಷಿಯಾಯ್ತು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯೇರಿ ಮುಂದಿನ ಪರ್ಯಾಯ ಪೀಠಾಧಿಪತಿ ಪಲಿಮಾರುಶ್ರೀ ಬಂದರು. ಒಟ್ಟು ಮೂರು ವಿಧದ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳ ಮೆರವಣಿಗೆ ನಡೆಯಿತು.

    ಪಲ್ಲಕ್ಕಿಯನ್ನು ಟ್ಯಾಬ್ಲೋದಲ್ಲಿಟ್ಟು ಹೊರಟ ಪಲಿಮಾರು ಸ್ವಾಮೀಜಿಯನ್ನು ಕೃಷ್ಣಾಪುರಶ್ರೀ, ಕಾಣಿಯೂರು ಸ್ವಾಮೀಜಿ ಟ್ಯಾಬ್ಲೋ ಪಲ್ಲಕ್ಕಿಯ ಮೂಲಕವೇ ಹಿಂಬಾಲಿಸಿದರು. ಆದ್ರೆ ಶೀರೂರು ಸ್ವಾಮೀಜಿ ವಿಭಿನ್ನತೆ ಪ್ರದರ್ಶನ ಮಾಡಿದ್ರು. ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಗಣಪತಿ ಮೂರ್ತಿಯಿಟ್ಟ ಶೀರೂರುಶ್ರೀ, ತಾನು ಟ್ಯಾಬ್ಲೋದಲ್ಲಿ ಸಾಗಿದರು. ಶೀರೂರು ಸ್ವಾಮೀಜಿ ಪೇಟ ತೊಟ್ಟು ಪುಟ್ಟ ಟ್ಯಾಬ್ಲೋದಲ್ಲಿ ಕುಳಿತು ಭಕ್ತರ ಗಮನ ಸೆಳೆದರು.

    ಸೋದೆ ಸ್ವಾಮೀಜಿ ಮತ್ತು ಅದಮಾರು ಸ್ವಾಮೀಜಿ ಮಾನವ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದರು. ಸೋದೆ ವಿಶ್ವವಲ್ಲಭ ಸ್ವಾಮೀಜಿ ಮತ್ತು ಅದಮಾರು ಕಿರಿಯಶ್ರೀ ಈಶಪ್ರಿಯರು ಸಾಂಪ್ರದಾಯಿಕತೆ ಕಾಪಾಡಿಕೊಂಡರು. ಪಲ್ಲಕ್ಕಿಯನ್ನು ಮಾನವರು ಹೊತ್ತು ಸಾಗಿದರು. ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳನ್ನು ಹೊರುವ ಪದ್ಧತಿ ನಡೆದುಕೊಂಡು ಬರುತ್ತಿದೆ. ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮೀಜಿ ಸಾಗಿ ಸಂಪ್ರದಾಯ ಮುಂದುವರೆಸಿದರು.

    ಟ್ಯಾಬ್ಲೋ ಪಲ್ಲಕ್ಕಿಯ ಸಲಹೆ ಎರಡು ವರ್ಷದ ಹಿಂದೆ ಪೇಜಾವರಶ್ರೀ ನೀಡಿದ್ದರು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯಿಟ್ಟು ಮಾನವರು ಹೊರುವ ಸಂಪ್ರದಾಯ ನಿಲ್ಲಿಸೋಣ ಅಂತ ಹೇಳಿ ಕಳೆದ ಪರ್ಯಾಯದಲ್ಲಿ ಬದಲಾವಣೆ ತಂದಿದ್ದರು. ಪೇಜಾವರ ಸಲಹೆಯನ್ನು ನಾಲ್ವರು ಸ್ವಾಮೀಜಿ ಒಪ್ಪಿದ್ದರು, ಇಬ್ಬರು ಒಪ್ಪಿಲ್ಲ. ಒಬ್ಬರು ಎರಡೂ ಬೇಡವೆಂದು ಪಲ್ಲಕ್ಕಿಯಲ್ಲಿ ದೇವರನ್ನು ಇಟ್ಟು, ತಾನು ಟ್ಯಾಬ್ಲೋದಲ್ಲಿ ಬಂದಿದ್ದಾರೆ.