Tag: ಟ್ಯಾಬ್ಲೆಟ್

  • 1.55 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆಗೆ ನಾಳೆ ಸಿಎಂ ಚಾಲನೆ

    1.55 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆಗೆ ನಾಳೆ ಸಿಎಂ ಚಾಲನೆ

    – ರಾಜ್ಯ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಉಪಕ್ರಮ

    ಬೆಂಗಳೂರು : ಉನ್ನತ ಶಿಕ್ಷಣ ಕಲಿಕೆಯಲ್ಲಿ ಇಡೀ ದೇಶದಲ್ಲೇ ಮೊದಲು ಎನ್ನುವ ಹೆಗ್ಗಳಿಕೆಗೆ ಹೊಂದಿರುವ ‘ಕಲಿಕಾ ನಿರ್ವಹಣಾ ವ್ಯವಸ್ಥೆ’ (Learning Management System) ಬೋಧನೆ-ಕಲಿಕೆಗೆ ಅನುಕೂಲವಾಗುವಂತೆ 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ವಿತರಣೆ ಮಾಡುವ ಮಹತ್ವದ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ.

    ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ನಿವಾರಣೆ ಹಾಗೂ ಡಿಜಿಟಲ್ ಅಂತರವೂ ಅಳಿಸಿಹಾಕುವ ಧ್ಯೇಯದೊಂದಿಗೆ ಸರಕಾರ ಇಷ್ಟು ಬೃಹತ್ ಪ್ರಮಾಣದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ವಿತರಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿಎ.ನ್.ಅಶ್ವತ್ಥನಾರಾಯಣ ತಿಳಿಸಿದರು.

    ಈ ಕಾರ್ಯಕ್ರಮಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯ ಜತೆಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಕೈಜೋಡಿಸಿವೆ ಎಂದು ಅವರು ಹೇಳಿದರು.

    ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಟ್ಯಾಬ್ಲೆಟ್ ಪಿಸಿಗಳನ್ನು ವಿತರಣೆ ಮಾಡುವರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರು ಆಯಾ ಜಿಲ್ಲೆಗಳಲ್ಲಿ ವಿತರಣೆ ಮಾಡುವರು. ವರ್ಚುಯಲ್ ವೇದಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲ ಸಚಿವರು ಜಿಲ್ಲೆಗಳಿಂದ ಭಾಗಿಯಾಗುವರು ಹಾಗೂ ಕೆಲ ವಿದ್ಯಾರ್ಥಿಗಳು ಕೂಡ ಅಭಿಪ್ರಾಯ ಹಂಚಿಕೊಳ್ಳುವರು ಎಂದು ಡಿಸಿಎಂ ಮಾಹಿತಿ ನೀಡಿದರು.

    ಈ ಕಾರ್ಯಕ್ರಮ ಉನ್ನತ ಶಿಕ್ಷಣ ಇಲಾಖೆಯ ‘ವಿಜಯೀಭವ’, ಜ್ಞಾನನಿಧಿ ಯುಟ್ಯೂಬ್ ಚಾನೆಲ್‍ಗಳಲ್ಲಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಫೇಸ್‍ಬುಕ್ & ಟ್ವಿಟ್ಟರ್ ಖಾತೆಗಳಲ್ಲಿ ನೇರ ಪ್ರಸಾರ ಆಗಲಿದೆ. ವೀಕ್ಷಣೆಗೆ ಈ ಲಿಂಕ್ ಕ್ಲಿಕ್ ಮಾಡಿ..
    https://youtube.com/c/VijayiBhava
    https://youtube.com/c/JnanaNidhiDCE
    https://www.facebook.com/Department-of-Collegiate-Education-100568944804207/
    https://twitter.com/collegiate_of?s=09

    ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 87 ಸರ್ಕಾರಿ ಪಾಲಿಟೆಕ್ನಿಕ್ ಹಾಗೂ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.55 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ನೀಡಲಾಗುವುದು. ಈ ಯೋಜನೆಗಾಗಿ ರಾಜ್ಯ ಸರಕಾರ 163 ಕೋಟಿ ರೂ. ವೆಚ್ಚ ಮಾಡಿದೆ. ಇದರ ಜತೆಯಲ್ಲೇ ಸರ್ಕಾರಿ ಕಾಲೇಜುಗಳಲ್ಲಿ 2,500 ಸ್ಮಾರ್ಟ್ ಕ್ಲಾಸ್ ರೂಂಗಳಿಗೆ ಚಾಲನೆ ನೀಡಲಾಗುತ್ತಿದ್ದು, ನಾಳೆಯ ಕಾರ್ಯಕ್ರಮದ ನಿಮಿತ್ತ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸ್ಮಾರ್ಟ್ ಕ್ಲಾಸ್ ರೂಂನ ಒಂದರ ಪ್ರಾತ್ಯಕ್ಷಿಕೆಯೂ ಇರುತ್ತದೆ.

    ಯಾವುದೇ ವಿದ್ಯಾರ್ಥಿ ಸಾಮಾಜಿಕ, ಆರ್ಥಿಕ ಅಥವಾ ಇನ್ನಾವುದೇ ಕಾರಣದಿಂದ ಕೋವಿಡ್ ಕಾಲದಲ್ಲಿ ಕಲಿಕೆಯಿಂದ ವಂಚಿತರಾಗಬಾರದು ಎನ್ನುವುದೇ ಟ್ಯಾಬ್ಲೆಟ್ ಪಿಸಿ ಯೋಜನೆಯ ಮುಖ್ಯ ಉದ್ದೇಶ. ಕೋವಿಡ್ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಎಲ್ಲೇ ಇದ್ದರೂ ಈ ಟ್ಯಾಬ್ಲೆಟ್ ಪಿಸಿಗಳ ಮೂಲಕ ಎಲ್‍ಎಂಎಸ್ ವ್ಯವಸ್ಥೆಯಲ್ಲಿ ಕಲಿಕೆ ಮುಂದುವರಿಸಬಹುದು.

    ಈಗಾಗಲೇ ಕಲಿಕಾ ನಿರ್ವಹಣಾ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ. ಅದರಂತೆ ವಿದ್ಯಾರ್ಥಿಗಳು ಸುಲಭ ವ್ಯಾಸಂಗಕ್ಕೆ ಈ ಟ್ಯಾಬ್ಲೆಟ್ ಗಳು ಸಹಾಯಕ. ವಿದ್ಯಾರ್ಥಿಗಳ ಜ್ಞಾನಾರ್ಜನೆ ಮಟ್ಟವನ್ನೂ ಹೆಚ್ಚಿಸಲು ಇವು ಪೂರಕ. ಇಂದಿನ ಜಾಗತಿಕ ಮಟ್ಟದ ಆಧುನಿಕ ಕಲಿಕಾ ಮಟ್ಟಕ್ಕೆ ತಕ್ಕಂತೆ ಕಲಿಕೆಯನ್ನು ನಿರಂತರವಾಗಿ ಮುಂದುವರಿಸುವುದು ಹಾಗೂ ಆನ್‍ಲೈನ್ ಮೂಲಕವೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಗಳು ನೆರವಾಗುತ್ತವೆ.

    ಈ ಟ್ಯಾಬ್ಲೆಟ್‍ಗಳು ಉತ್ತಮವಾಗಿವೆ ಹಾಗೂ ಕಲಿಕೆಗೆ ಬೇಕಾದ ಎಲ್ಲ ಫೀಚರುಗಳನ್ನು ಒಳಗೊಂಡಿವೆ. ವೈಫೈ, ಸಿಮ್ ಬಳಕೆಯಿಂದ ಇವುಗಳಿಗೆ ಇಂಟರ್ ನೆಟ್ ಸಂಪರ್ಕ ಕಲ್ಪಿಸಬಹುದು. ವೈಫೈ ಲಭ್ಯತೆ ಇಲ್ಲದ ಕಡೆಗಳಲ್ಲಿ ಸಿಮ್ ಬಳಕೆಯ ಮೂಲಕವೇ ಆನ್‍ಲೈನ್ ತರಗತಿಯಲ್ಲಿ ಪಾಲ್ಗೊಳ್ಳಬಹುದು.

    ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ಎಲ್ಲ ವಿದ್ಯಾರ್ಥಿಗಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಾಗಿದ್ದು ಅವರ ಕಲಿಕೆಗೆ ಹೆಗಲು ಕೊಡಬೇಕಾದ ಹೊಣೆಗಾರಿಕೆ ಸರಕಾರದ್ದು. ಇಂಥ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಗಳನ್ನು ನೀಡುವ ಮೂಲಕ ಗ್ರಾಮೀಣ ಕರ್ನಾಟಕದಲ್ಲಿ ಸರಕಾರಿ-ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ನಡುವಿನ ಡಿಜಿಟಲ್ ತಾರತಮ್ಯವನ್ನು ಸಂಪೂರ್ಣವಾಗಿ ಅಳಿಸಿ ಹಾಕಿದಂತಾಗಿದೆ.

  • ಜ್ಞಾನದೀವಿಗೆಗೆ ಟೊಯೋಟಾ ಕಂಪನಿಯಿಂದ 10 ಲಕ್ಷ ರೂ. ದೇಣಿಗೆ

    ಜ್ಞಾನದೀವಿಗೆಗೆ ಟೊಯೋಟಾ ಕಂಪನಿಯಿಂದ 10 ಲಕ್ಷ ರೂ. ದೇಣಿಗೆ

    ಬೆಂಗಳೂರು: ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆಯ, ಜ್ಞಾನದೀವಿಗೆ ಅಭಿಯಾನಕ್ಕೆ ಈಗಲೂ ದೇಣಿಗೆ  ಹರಿಬರುತ್ತಿದೆ. ಜಪಾನ್ ಮೂಲದ ಟೊಯೋಟಾ ಕಂಪನಿ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದೆ.

    ಇಂದು ಪಬ್ಲಿಕ್ ಟಿವಿ ಕಚೇರಿಗೆ ಆಗಮಿಸಿದ ಟೊಯೋಟಾ ಬೊಶೋಕು ಕಂಪನಿಯ ಮುಖ್ಯಸ್ಥ ತಿತ್ಸೂಯಾ ಸುಗಿಸಾಕಿ ಮತ್ತು ಸಂಸ್ಥೆ ಎಂಡಿ ಮೋರಿ ಮಸಾಹಿಕೋ ಅವರು 10 ಲಕ್ಷ ರೂಪಾಯಿ ಮೊತ್ತದ ಚೆಕ್ ಹಸ್ತಾಂತರ ಮಾಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ತಿತ್ಸೂಯಾ ಸುಗಿಸಾಕಿ ಪಬ್ಲಿಕ್ ಟಿವಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಕಳೆದ ಹಲವು ವರ್ಷಗಳಿಂದಲೂ ಟೊಯೋಟಾ ಕಂಪನಿ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.

  • ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ‘ಟ್ಯಾಬ್’ – ಪಬ್ಲಿಕ್ ಟಿವಿ ಸಂಕಲ್ಪ

    ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ‘ಟ್ಯಾಬ್’ – ಪಬ್ಲಿಕ್ ಟಿವಿ ಸಂಕಲ್ಪ

    ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಪಬ್ಲಿಕ್ ಟಿವಿ, ರೋಟರಿ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಉಚಿತ `ಟ್ಯಾಬ್’ ವಿತರಿಸಲು ಮುಂದಾಗಿದೆ.

    ಖಾಸಗಿ ಶಾಲೆಯ ಮಕ್ಕಳು ಈಗಾಗಲೇ ಆನ್‍ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆರ್ಥಿಕ ಕಾರಣದಿಂದಾಗಿ ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಕಾರಣಕ್ಕೆ ಮುಂದೆ ಶಿಕ್ಷಣದಿಂದ ವಂಚಿತರಾಗಬಾರದು. ಈ ಕಾರಣಕ್ಕೆ ಆನ್‍ಲೈನ್ ಶಿಕ್ಷಣ ವಂಚಿತ ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ನೀಡಲು ಮುಂದಾಗುತ್ತಿದ್ದೇವೆ.

    ಗಣಿತ, ಇಂಗ್ಲಿಷ್, ವಿಜ್ಞಾನ, ಸಮಾಜ ಪಠ್ಯವನ್ನು ಟ್ಯಾಬ್ ಒಳಗೊಂಡಿದ್ದು 2 ಲಕ್ಷ ವಿದ್ಯಾರ್ಥಿಗಳಿಗೆ ವಿತರಣೆಯ ಗುರಿಯನ್ನು ಹಾಕಲಾಗಿದೆ. ಡಿಡಿಪಿಐಗಳ ಮೂಲಕ 34 ಜಿಲ್ಲೆಗಳಿಗೂ ವಿತರಣೆಗೆ ಸಂಕಲ್ಪ ಮಾಡಿದ್ದು, ಶಾಲೆಗಳ ಮುಖ್ಯೋಪಾಧ್ಯಾಯರ ಮೂಲಕ ನಿಗಾ ಇಡಲಾಗುವುದು. ಟ್ಯಾಬ್ ದುರ್ಬಳಕೆ ಆಗದಂತೆ ಆ್ಯಪ್ ಆಧಾರಿತ ಲಾಕ್ ಇರಲಿದೆ.

    ಒಂದು ಟ್ಯಾಬ್‍ಗೆ 3,495 ರೂ. ಆಗಲಿದ್ದು, ಈ ಸಹಾಯ ಹಸ್ತಕ್ಕೆ ನೀವು ನೆರವು ನೀಡಬಹುದು. ನೀವು ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ. ಬನ್ನಿ ಸಹಾಯ ಮಾಡೋಣ. ಮಕ್ಕಳ ಭವಿಷ್ಯ ಬೆಳಗಿಸೋಣ.

    ದೇಣಿಗೆ ನೀಡಬಯಸುವ ಮಹಾದಾನಿಗಳಿಗಾಗಿ ಬ್ಯಾಂಕ್ ವಿವರ:
    ಪಬ್ಲಿಕ್ ಟಿವಿ ಎಜುಕೇಷನ್& ಚಾರಿಟೇಬಲ್ ಟ್ರಸ್ಟ್
    ಬ್ಯಾಂಕ್‌ – ಆಕ್ಸಿಸ್ ಬ್ಯಾಂಕ್
    ಖಾತೆ ಸಂಖ್ಯೆ – 916010043440024
    (ಆರ್.ಟಿ.ನಗರ ಬ್ರಾಂಚ್, ಬೆಂಗಳೂರು)
    ಐಎಫ್‍ಎಸ್‍ಸಿ ಕೋಡ್- UTIB0000363 UTIB

  • ಮಾತ್ರೆಯ ಆಕಾರದಲ್ಲಿ ಮೊಟ್ಟೆಯಿಟ್ಟ ಕೋಳಿ- ಕಾರವಾರದಲ್ಲೊಂದು ಅಚ್ಚರಿ

    ಮಾತ್ರೆಯ ಆಕಾರದಲ್ಲಿ ಮೊಟ್ಟೆಯಿಟ್ಟ ಕೋಳಿ- ಕಾರವಾರದಲ್ಲೊಂದು ಅಚ್ಚರಿ

    ಕಾರವಾರ: ಕೋಳಿಯೊಂದು ಟ್ಯಾಬ್ಲೆಟ್ (ಮಾತ್ರೆ) ಆಕಾರದಲ್ಲಿ ಮೊಟ್ಟೆಯಿಟ್ಟ ಅಚ್ಚರಿಯ ಘಟನೆ ಕಾರವಾರದಲ್ಲಿ ನಡೆದಿದೆ.

    ಕೋಳಿ ಮೊಟ್ಟೆ ಹಾಕಿದರೆ ಓವೆಲ್ ಷೇಪ್ ನಲ್ಲಿ ಇರುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಸೆಣಬಾವಿ ಗ್ರಾಮದಲ್ಲಿ ಕೋಳಿ ಮಾತ್ರೆಯಾಕಾರದಲ್ಲಿ ಮೊಟ್ಟೆಯಿಟ್ಟಿದೆ.

    ಮಾಸ್ತಮ್ಮ ಮೊಗೇರ್ ಎಂಬವರ ಮನೆಯಲ್ಲಿ ಕೋಳಿ ಮಾತ್ರೆ ಆಕಾರದಲ್ಲಿ ಮೊಟ್ಟೆ ಇಡುವ ಮೂಲಕ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ. ಕಳೆದ ಎರಡು ದಿನದ ಹಿಂದೆ ಕೋಳಿಯು 12 ಮೊಟ್ಟೆ ಇಟ್ಟಿದ್ದು, ಇದರಲ್ಲಿ ಮೊದಲ ಮೊಟ್ಟೆ ಮಾತ್ರೆ ಆಕಾರದಲ್ಲಿದ್ದು ಮೂರು ಸೆಂಟಿಮೀಟರ್ ನಷ್ಟು ಉದ್ದವಾಗಿದೆ.

    ಇನ್ನು ಈ ರೀತಿಯಾಗಿ ಮೊಟ್ಟೆಯಿಟ್ಟಿದ್ದ ಕೋಳಿ ಕಾವು ನೀಡುತ್ತಿದೆ. ಒಂದು ವೇಳೆ ಮರಿ ಆದಲ್ಲಿ ಯಾವ ರೀತಿ ಕೋಳಿ ಮರಿ ಇರಬಹುದೆಂದು ಕುತೂಹಲ ಎಲ್ಲರನ್ನು ಕಾಡುತ್ತಿದೆ.

  • ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

    ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

    ಕ್ಯಾಲಿಫೋರ್ನಿಯಾ: 7 ವರ್ಷದ ಬಾಲಕಿಯೊಬ್ಬಳು ಗೂಗಲ್ ಸಿಇಒ ಸುಂದರ್ ಪಿಚೈಗೆ ಕೆಲಸ ಬೇಕೆಂದು ಬರೆದ ಪತ್ರ ಈಗ ವೈರಲ್ ಆಗಿದೆ.

    ಇಂಗ್ಲೆಂಡಿನ ಕೋಲೆ ಬ್ರಿಡ್ಜ್ ವಾಟರ್ ಎಂಬಾಕೆ ನನಗೆ ಗೂಗಲ್‍ನಲ್ಲಿ ಉದ್ಯೋಗ ಬೇಕೆಂದು ನೇರವಾಗಿ ಸುಂದರ್ ಪಿಚೈಗೆ ಪತ್ರ ಬರೆದಿದ್ದಾಳೆ. ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಪಿಚೈ, ಶ್ರಮವಹಿಸಿ ಓದಿ ನಿನ್ನ ಕನಸನ್ನ ನನಸು ಮಾಡು. ಶಾಲಾ ಶಿಕ್ಷಣದ ಬಳಿಕ ಗೂಗಲ್‍ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸು ಎಂದು ಮರು ಪತ್ರ ಬರೆದಿದ್ದಾರೆ.

    ಕೆಲ ದಿನಗಳ ಹಿಂದೆ ಬಾಲಕಿ ತನ್ನ ತಂದೆಯ ಜೊತೆ ಉದ್ಯೋಗಕ್ಕೆ ಯೋಗ್ಯವಾದ ಸ್ಥಳ ಯಾವುದು ಎಂದು ಪ್ರಶ್ನೆ ಕೇಳಿದ್ದಾಳೆ. ಇದಕ್ಕೆ ತಂದೆ ಗೂಗಲ್ ಅತ್ಯುತ್ತಮ ಸ್ಥಳ ಎಂದು ಉತ್ತರಿಸಿದ್ದಾರೆ. ಗೂಗಲ್ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳಿದ ಈಕೆ ಕೊನೆಗೆ ನಾನು ಗೂಗಲ್‍ನಲ್ಲಿ ಉದ್ಯೋಗ ಮಾಡಬೇಕು ಎಂದು ಕೇಳಿದ್ದಾಳೆ.

    ಈಕೆಯ ಪ್ರಶ್ನೆಗೆ ತಂದೆ ನನಗೆ ಉದ್ಯೋಗ ಬೇಕೆಂದು ಗೂಗಲ್‍ಗೆ ಒಂದು ಪತ್ರ ಬರೆ ಎಂದು ಸೂಚಿಸಿದ್ದಾರೆ. ಅದರಂತೆ ಆಕೆ ಕಂಪ್ಯೂಟರ್, ರೊಬೊಟ್, ಟ್ಯಾಬ್ಲೆಟ್ ಅಂದರೆ ನನಗೆ ಇಷ್ಟ. ಹೀಗಾಗಿ ನಿಮ್ಮ ಕಂಪೆನಿಯಲ್ಲಿ ಉದ್ಯೋಗ ಬೇಕೆಂದು ಪಿಚೈಗೆ ಪತ್ರ ಬರೆದಿದ್ದಾಳೆ.

    ಈ ಪತ್ರಕ್ಕೆ ಸುಂದರ್ ಪಿಚೈ,”ಪತ್ರ ಬರೆದಿದ್ದಕ್ಕೆ ಧನ್ಯವಾದಗಳು, ರೊಬೊಟ್ ಮತ್ತು ಕಂಪ್ಯೂಟರ್ ಅಂದರೆ ಇಷ್ಟ ಎಂದು ನೀನು ತಿಳಿಸಿರುವುದನ್ನು ಓದಿ ಸಂತೋಷವಾಯಿತು. ಮುಂದೆ ಚೆನ್ನಾಗಿ ಓದಿ ಕನಸನ್ನು ನನಸು ಮಾಡು. ಶಾಲಾ ಶಿಕ್ಷಣ ಮುಗಿದ ಬಳಿಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸು. ನಿನಗೆ ಮತ್ತು ನಿನ್ನ ಕುಟುಂಬಕ್ಕೆ ಒಳ್ಳೆದಾಗಲಿ” ಎಂದು ಮರು ಪತ್ರ ಬರೆದಿದ್ದಾರೆ.