Tag: ಟ್ಯಾಬರ್ ಅಥ್ಲೆಟಿಕ್ಸ್ ಮೀಟ್

  • ಹಿಮಾದಾಸ್ ಮಿಂಚಿನ ಓಟಕ್ಕೆ ಲಭಿಸಿತು 5ನೇ ಸ್ವರ್ಣ ಪದಕ

    ಹಿಮಾದಾಸ್ ಮಿಂಚಿನ ಓಟಕ್ಕೆ ಲಭಿಸಿತು 5ನೇ ಸ್ವರ್ಣ ಪದಕ

    ನವದೆಹಲಿ: ಭಾರತ ಸ್ಟಾರ್ ಓಟಗಾರ್ತಿ ಹಿಮಾದಾಸ್ ಶನಿವಾರದಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 400 ಮೀಟರ್ ಓಟವನ್ನು ಗೆದ್ದು, ಈ ತಿಂಗಳಲ್ಲಿ ಐದನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಒಂದೇ ತಿಂಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದು, ಭಾರತದ ಕೀರ್ತಿಯನ್ನು ಹಿಮಾ ಹೆಚ್ಚಿಸಿದ್ದಾರೆ. 52.09 ಸೆಕೆಂಡುಗಳಲ್ಲಿ 400 ಮೀಟರ್ ಓಟವನ್ನು ಪೂರ್ಣಗೊಳಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟು ಅತ್ಯುತ್ತಮ ಸಾಧನೆಗೈದಿದ್ದಾರೆ. ಅಲ್ಲದೆ ಕಳೆದ ವರ್ಷ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀ. ಓಟದಲ್ಲಿ ಹಿಮಾ ದಾಸ್ ಅವರು 50.79 ಸೆಕೆಂಡುಗಳ ವೈಯಕ್ತಿಕ ಅತ್ಯುತ್ತಮ ದಾಖಲೆ ಬರೆದಿದ್ದರು.

    ಇದಕ್ಕೂ ಮುನ್ನ ಇದೇ ಟ್ಯಾಬರ್ ಅಥ್ಲೆಟಿಕ್ ಸ್ಪರ್ಧೆಯ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕ್ಲಾಡೋ ಅಥ್ಲೆಟಿಕ್ ಮೀಟ್, ಕುಂಟೊ ಅಥ್ಲೆಟಿಕ್ಸ್ ಮೀಟ್, ಮತ್ತು ಪೊಜ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‍ನಲ್ಲಿ ಹಿಮಾದಾಸ್ ಸ್ವರ್ಣ ಪದಕ ಗೆದ್ದಿದ್ದರು.

    ಐದು ಚಿನ್ನದ ಪದಕದ ಪಟ್ಟಿ:
    1. ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನದ ಪದಕ ಗೆದ್ದಿದ್ದರು.

    2. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಪಡೆದರು.

    3. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.

    4. ಜುಲೈ 18ರಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

    5. ಈಗ ಜುಲೈ 20ರಂದು 400 ಮೀಟರ್ ಓಟವನ್ನು 52.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ತಮ್ಮ ಐದನೇ ಚಿನ್ನದ ಪದಕವನ್ನು ಗಳಸಿದ್ದಾರೆ.

    ಇದರ ಜೊತೆಗೆ ಜೆಪಿ ಜಬೀರ್ ಅವರು ಕೂಡ 400 ಮೀ. ಹರ್ಡಲ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಓಟವನ್ನು 49.66 ಸೆಕೆಂಡ್‍ಗಳಲ್ಲಿ ಜಬೀರ್ ಪೂರ್ಣಗೊಳಿಸಿ ಮೊದಲ ಸ್ಥಾನ ಗಳಿಸಿದರು. ಅಲ್ಲದೆ ಮೊಹಮದ್ ಆನಸ್ ಅವರು 200 ಮೀ. ಓಟವನ್ನು 20.95 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಸ್ಥಾನವನ್ನು ಗಳಿಸಿದ್ದಾರೆ.

    ಹಾಗೆಯೇ 200 ಮೀ. ಓಟವನ್ನು ನಿರ್ಮಲ್ ನೋವಾ ಟಾಮ್ ಅವರು 46.05 ಸೆಕೆಂಡ್‍ಗಳಲ್ಲಿ ಮುಗಿಸಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಎಲ್ಲಾ ಕ್ರಿಡಾಪಟುಗಳು ಭಾರತದ ಕೀರ್ತಿಯನ್ನುನ್ನು ಉತ್ತುಂಗಕ್ಕೆ ಏರಿಸಿದ್ದಾರೆ.