Tag: ಟೋಲ್ ಗೇಟ್

  • ಟ್ರಕ್‍ನಿಂದ ಕೆಳಗೆ ಬಿದ್ದವು ರಾಶಿ ರಾಶಿ ಬಿಯರ್ ಬಾಟಲ್‍ಗಳು- ವಿಡಿಯೋ ನೋಡಿ

    ಟ್ರಕ್‍ನಿಂದ ಕೆಳಗೆ ಬಿದ್ದವು ರಾಶಿ ರಾಶಿ ಬಿಯರ್ ಬಾಟಲ್‍ಗಳು- ವಿಡಿಯೋ ನೋಡಿ

    ಜೈಪುರ್: ಟೋಲ್ ಗೇಟ್ ಕೌಂಟರ್ ಬಳಿಯ ರೋಡ್ ಡಿವೈಡರ್ ಗೆ ಟ್ರಕ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಬಿಯರ್ ಬಾಟಲ್‍ಗಳು ರಾಶಿ ರಾಶಿಯಾಗಿ ಕೆಳಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಜಸ್ಥಾನದ ಜೈಪುರ್-ಅಜ್ಮಿರ್ ರಾಷ್ಟ್ರೀಯ ಹೆದ್ದಾರಿಯ ಕಿಶನ್‍ಗಂಜ್ ಟೋಲ್ ಗೇಟ್‍ನಲ್ಲಿ ಶುಕ್ರವಾರ ಘಟನೆ ನಡೆದಿದೆ. ಬಿಯರ್ ಬಾಟಲ್‍ಗಳು ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಎಲ್ಲ ದೃಶ್ಯ ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ವೇಗವಾಗಿ ಬಂದ ಟ್ರಕ್ ಕಿಶನ್‍ಗಂಜ್ ಟೋಲ್ ಗೇಟ್ ಕೌಂಟರ್ ಸಮೀಪದ ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಟ್ರಕ್‍ನಲ್ಲಿದ್ದ ಬಿಯರ್ ಬಾಟಲ್‍ಗಳು ಮುಂದೆ ಇದ್ದ ಕೌಂಟರ್, ಕಾರು ಸೇರಿದಂತೆ ಕೆಲ ವಾಹಗಳ ಮೇಲೆ ಬಿದ್ದಿವೆ. ಬಾಟಲ್‍ಗಳು ಗೋಡೆ ಹಾಗೂ ವಾಹಗಳಿಗೆ ತಾಕಿ ಒಡೆದಿದ್ದು, ಬಿಯರ್ ಹೊಳೆಯೇ ಹರಿದಿದೆ. ಟ್ರಕ್ ಮುಂದಿದ್ದ ಕಾರು ಹಾಗೂ ಜೀಪ್‍ಗಳ ಗಾಜು ಒಡೆದಿವೆ. ಕಾರಿನಲ್ಲಿದ್ದ ಅದರಲ್ಲಿದ್ದ ಚಾಲಕನಿಗೆ ಗಾಜಿನ ಚೂರುಗಳು ಚುಚ್ಚಿ ಗಂಭೀರವಾಗಿ ಗಾಯಗೊಂಡಿದ್ದಾನೆ.

    ವೇಗವಾಗಿ ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದ ಟ್ರಕ್ ಕೂಡಾ ಜಖಂಗೊಂಡಿದ್ದು, ರಸ್ತೆ ಹಾಗೂ ಟೋಲ್ ಗೇಟ್ ಹಣ ಪಡೆಯುವ ಕೌಂಟರ್ ನಲ್ಲಿ ಬೀಯಲ್ ಹೊಳೆ ಹರೆದಿದೆ. ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಟೋಲ್ ಗೇಟ್ ಸಮೀಪದಲ್ಲಿಯೇ ಸ್ಪೀಡ್ ಬ್ರೇಕರ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಟೋಲ್ ಗೇಟ್ ಸಮೀಪದಲ್ಲಿಯೇ ಸ್ಪೀಡ್ ಬ್ರೇಕರ್

    ಬೆಂಗಳೂರು: ಕಳೆದ ವಾರವಷ್ಟೇ ಕಾರ್ ಚಾಲಕನೊಬ್ಬ ಟೋಲ್ ಶುಲ್ಕ ಪಾವತಿ ಮಾಡದೇ ಪರಾರಿಯಾಗಲು ಹೋಗಿ, ಸಿಬ್ಬಂದಿಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದ ಕುರಿತು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಬಿತ್ತರವಾದ ಬಳಿಕ ಎಚ್ಚೆತ್ತುಕೊಂಡ ಟೋಲ್ ಆಡಳಿತ ಮಂಡಳಿ, ಟೋಲ್ ಗೇಟ್ ಸಮೀಪದಲ್ಲಿಯೇ ಸ್ಪೀಡ್ ಬ್ರೇಕರ್ ಹಾಕಿದ್ದಾರೆ.

    ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನವಯುಗ ಟೋಲ್‍ನಲ್ಲಿ ಘಟನೆ ನಡೆದಿದ್ದು, ತುಮಕೂರು ಕಡೆಯಿಂದ ಬಂದ ಸ್ವಿಫ್ಟ್ ಕಾರಿನ ಚಾಲಕ ಕೇವಲ 20 ರೂ. ಟೋಲ್ ಶುಲ್ಕ ಪಾವತಿ ಮಾಡದೇ ಪರಾರಿಯಾಗಲು ಯತ್ನಿಸಿದ್ದ. ಕಾರನ್ನು ತಡೆಯಲು ಹೋಗಿದ್ದ ಸಿಬ್ಬಂದಿ ವೀರೇಂದ್ರಗೆ ಚಾಲಕ  ಡಿಕ್ಕಿಹೊಡೆದು ಕಾರನ್ನು ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡು ಹೋಗಿದ್ದ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೀರೇಂದ್ರ ಸಹಾಯಕ್ಕೆ ಟೋಲ್ ಆಡಳಿತ ಮಂಡಳಿ ಮುಂದಾಗಿರಲಿಲ್ಲ. ಸಂಸ್ಥೆಯ ಅಮಾನವೀಯ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವೀರೇಂದ್ರ ತಮ್ಮ ಗ್ರಾಮಕ್ಕೆ ಮರಳಿದ್ದರು.

    ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಟೋಲ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಎಚ್ಚೆತ್ತು ಕೊಂಡಿದ್ದಾರೆ. ಇತ್ತ ಅಧಿಕಾರಿಗಳು ಟೋಲ್ ಸಮೀಪದಲ್ಲಿ ಸ್ಪೀಡ್ ಬ್ರೇಕರ್ ಹಾಕಿದರೆ, ಮತ್ತೊಂದು ಕಡೆ ಸಿಬ್ಬಂದಿ ವೀರೇಂದ್ರಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುವ ನಿರ್ಧಾರ ಕೈಗೊಂಡಿದ್ದಾರೆ.

  • ಫ್ಲೈಓವರ್ ಪೂರ್ಣಗೊಳಿಸದೇ ಟೋಲ್ ಸಂಗ್ರಹ- ಸಿಬ್ಬಂದಿಯನ್ನು ಓಡಿಸಿದ ಸ್ಥಳೀಯರು!

    ಫ್ಲೈಓವರ್ ಪೂರ್ಣಗೊಳಿಸದೇ ಟೋಲ್ ಸಂಗ್ರಹ- ಸಿಬ್ಬಂದಿಯನ್ನು ಓಡಿಸಿದ ಸ್ಥಳೀಯರು!

    ಮಂಗಳೂರು: ಫ್ಲೈಓವರ್ ಕೆಲಸ ಪೂರ್ತಿಗೊಳಿಸದೆ ಟೋಲ್ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಸಿಬ್ಬಂದಿಯನ್ನು ಓಡಿಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳೂರಿನ ತಲಪಾಡಿಯಲ್ಲಿ ನಡೆದಿದೆ.

    ಚತುಷ್ಪಥ ಕಾಮಗಾರಿ ನಡೆಸಿದ ನವಯುಗ್ ಕಂಪನಿ ಮಂಗಳೂರಿನ ತಲಪಾಡಿ ಬಳಿಯ ಫ್ಲೈಓವರ್ ಕೆಲಸ ಪೂರ್ತಿಗೊಳಿಸದೆ ಟೋಲ್ ಸಂಗ್ರಹಿಸುತ್ತಿದೆ. ಇದನ್ನು ವಿರೋಧಿಸಿ ಸ್ಥಳೀಯರು ಟೋಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿ ಕಳೆದ ಎರಡು ವರ್ಷಗಳಿಂದ ನವಯುಗ ಕಂಪನಿ ಟೋಲ್ ಹಣ ಸಂಗ್ರಹಿಸುತ್ತಿದೆ. ಆದರೆ ತೊಕ್ಕೊಟ್ಟು ಜಂಕ್ಷನ್ ಮತ್ತು ಪಂಪ್ ವೆಲ್ ವೃತ್ತದಲ್ಲಿ ಹಲವು ವರ್ಷಗಳಿಂದ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದೆ ಆದರೆ ಟೋಲ್ ಹಣ ಮಾತ್ರ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

    ಈ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಗಡುವು ನೀಡಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಟೋಲ್ ಸಂಗ್ರಹ ಮಾಡದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಹೊತ್ತು ವಾಹನಗಳಿಂದ ಟೋಲ್ ಸಂಗ್ರಹಿಸದಂತೆ ತಡೆದ ಸ್ಥಳೀಯರು, ಮೇಲ್ಸೇತುವೆ ಪೂರ್ತಿಗೊಳಿಸದೆ ಟೋಲ್ ಹೇಗೆ ತಗೋತೀರಿ ಅಂತಾ ಪ್ರಶ್ನೆ ಮಾಡಿದ್ದಾರೆ. ಸದ್ಯ ಸ್ಥಳೀಯರು ಟೋಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಈಗ ವೈರಲ್ ಆಗಿದೆ.

  • ಕನ್ನಡಪರ ಸಂಘಟನೆ ಹೆಸರಲ್ಲಿ ಗೂಂಡಾಗಿರಿ – ಟೋಲ್ ಸಿಬ್ಬಂದಿಗೆ ಹೊಡೆದ ಕಾರ್ಯಕರ್ತರು

    ಕನ್ನಡಪರ ಸಂಘಟನೆ ಹೆಸರಲ್ಲಿ ಗೂಂಡಾಗಿರಿ – ಟೋಲ್ ಸಿಬ್ಬಂದಿಗೆ ಹೊಡೆದ ಕಾರ್ಯಕರ್ತರು

    ಬೆಂಗಳೂರು: ತಾವು ಕನ್ನಡಪರ ಸಂಘಟನೆಯ ಕಾರ್ಯಕರ್ತರೆಂದು ಹೇಳಿ ಟೋಲ್ ಸಿಬ್ಬಂದಿಯ ಮೇಲೆ ಮನ ಬಂದಂತೆ ಹಲ್ಲೆ ಮಾಡಿರುವ ಘಟನೆ ನೆಲಮಂಗಲ ಸಮೀಪದ ಲ್ಯಾಂಕೋ ದೇವಿಹಳ್ಳಿ ಟೋಲ್ ಗೇಟ್ ನಲ್ಲಿ ನಡೆದಿದೆ.

    ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಟೋಲ್ ಶುಲ್ಕ ಕಟ್ಟುವ ಕುರಿತು ಸಿಬ್ಬಂದಿಯೊಂದಿಗೆ ವಾದಕ್ಕಿಳಿದಿದ್ದಾರೆ. ಟೋಲ್ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಹೋಗಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಟೋಲ್ ಬೂತ್ ಗ್ಲಾಸ್ ಗಳನ್ನು ಹೊಡೆದುಹಾಕಿದ್ದಾರೆ.

    ನಮ್ಮ ರಾಜ್ಯದಲ್ಲಿ ನಾವೇಕೆ ಟೋಲ್ ಕೊಡಬೇಕು? ಇದು ನಮ್ಮ ನೆಲ ನಾವು ಟೋಲ್ ಕಟ್ಟಲ್ಲ ಎಂದು ಟೋಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಟೋಲ್ ಕಟ್ಟಲೇ ಬೇಕು ಎಂದು ಸಿಬ್ಬಂದಿ ಹೇಳಿದಾಗ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಟೋಲ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ.

    ಸುದ್ದಿ ತಿಳಿಯುತ್ತಿದ್ದಮತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಆದರೆ ಸಂಘಟನೆಯ ಕಾರ್ಯಕರ್ತರು ಮಾತ್ರ ಟೋಲ್ ಸಿಬ್ಬಂದಿ ತಮ್ಮ ಧ್ವಜ ಹಾಗೂ ಶಾಲಿನ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಅವರು ಕ್ಷಮಾಪಣೆ ಕೇಳಬೇಕೆಂದು ಕೆಲ ಕಾಲ ಧರಣಿ ನಡೆಸಿದರು.

  • ಒಂದೇ ವರ್ಷದಲ್ಲಿ 127 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಕಾರು ಮಾಲೀಕನಿಗೆ ಬಿತ್ತು ಲಕ್ಷ ಲಕ್ಷ ದಂಡ!

    ಒಂದೇ ವರ್ಷದಲ್ಲಿ 127 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಕಾರು ಮಾಲೀಕನಿಗೆ ಬಿತ್ತು ಲಕ್ಷ ಲಕ್ಷ ದಂಡ!

    ಹೈದರಾಬಾದ್: ನಗರದ ಹೊಂಡಾ ಜಾಜ್ ಮಾಲೀಕನಿಗೆ ಸಂಚಾರಿ ಪೊಲೀಸರು ಒಂದು ವರ್ಷದಲ್ಲಿ ಸುಮಾರು 1.82 ಲಕ್ಷ ರೂ. ದಂಡ ವಿಧಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಭಾರೀ ಮೊತ್ತದ ದಂಡ ವಿಧಿಸಲು ಪ್ರಮುಖ ಕಾರಣ ಕಾರು ಮಾಲೀಕ ಒಂದು ವರ್ಷದಲ್ಲಿ ಅಂದರೆ 2017 ಏಪ್ರಿಲ್ 4 ರಿಂದ 2018 ಮಾರ್ಚ್ 10 ರ ನಡುವೆ ಸುಮಾರು 127 ಬಾರಿ ವೇಗ ಮಿತಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಪ್ರತಿ ಬಾರಿಯೂ ಪೊಲೀಸರು ಕಾರು ಮಾಲೀಕನಿಗೆ ಇ-ಚಲನ್ ಪೋರ್ಟಲ್ ಮೂಲಕ ದಂಡ ವಿಧಿಸಿ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಮೂಲಗಳ ಪ್ರಕಾರ ನಗರದ ಹೊರ ವರ್ತುಲ ರಸ್ತೆಯು ಹೆಚ್ಚು ಅಪಘಾತ ಸಂಭವಿಸುವ ರಸ್ತೆಯಾಗಿದ್ದು, ಸಾಲು ಸಾಲು ಸರಣಿ ಅಪಘಾತ ಪ್ರಕರಣಗಳಿಂದಾಗಿ ರಸ್ತೆಯ ವೇಗದ ಮಿತಿಯನ್ನು ಗಂಟೆಗೆ 120 ಕಿ.ಮೀ ನಿಂದ 100 ಕಿ.ಮೀ ಇಳಿಸಲಾಗಿತ್ತು. ಆದರೆ ಪ್ರತಿ ಬಾರಿ ಈ ಸ್ಥಳದಲ್ಲೇ ಹೋಂಡ ಜಾಜ್ ಕಾರು ಮಾಲೀಕ ಅತೀ ವೇಗದಿಂದ ಕಾರು ಚಾಲನೆ ಮಾಡಿ ನಿಯಮ ಉಲ್ಲಂಘಿಸಿದ್ದಾನೆ. ಇದರಿಂದ ಪ್ರತಿ ಬಾರಿ ದಂಡ ಪ್ರಮಾಣ 1,435 ರೂ. ಆಗಿದ್ದ ಹಿನ್ನೆಲೆಯಲ್ಲಿ ಈಗ ದಂಡದ ಮೊತ್ತ 1.82 ಲಕ್ಷ ರೂ. ಆಗಿದೆ.

    ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಾಫಿಕ್ ಪೊಲೀಸ್ ಆಧಿಕಾರಿಯೊಬ್ಬರು, ಕಾರು ನೋಂದಣಿ ದಾಖಲಾತಿ ಸಮಯದಲ್ಲಿ ಕೊಟ್ಟ ಫೋನ್ ನಂಬರ್ ಗೆ ಪ್ರತಿ ಬಾರಿ ಉಲ್ಲಂಘನೆಯ ವಿಷಯವನ್ನು ತಕ್ಷಣ ಇ-ಚಲನ್ ಪೋರ್ಟಲ್ ಕಳುಹಿಸಲಾಗುತ್ತದೆ. ಈಗ ಈ ಕಾರು ಎಲ್ಲಿದೆ ಎಂದು ತಿಳಿದು ಬಂದಿಲ್ಲ ಆದರೆ ಎಲ್ಲ ಟೋಲ್ ಗೇಟ್‍ಗಳಿಗೆ ವಾಹನದ ಸಂಖ್ಯೆಯನ್ನು ನೀಡಿ ವಾಹನವನ್ನು ತಡೆ ಹಿಡಿಯುವಂತೆ ಆದೇಶಿಸುತ್ತೇವೆ ಹಾಗೂ ಆದಷ್ಟು ಬೇಗ ದಂಡವನ್ನು ಪಾವತಿಸುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ನಗರ ಮತ್ತು ಹೈವೇಯಲ್ಲಿ ಕಾರು, ಬೈಕ್‍ಗಳು ಮತ್ತಷ್ಟು ಜಾಸ್ತಿ ವೇಗದಲ್ಲಿ ಹೋಗಬಹುದು!

  • 2 ನಿಮಿಷ ತಡವಾಗಿದ್ದಕ್ಕೆ ಟೋಲ್ ಸಿಬ್ಬಂದಿ ಮೇಲೆ 35ಕ್ಕೂ ಹೆಚ್ಚು ಕಿಡಿಗೇಡಿಗಳಿಂದ ಹಲ್ಲೆ

    2 ನಿಮಿಷ ತಡವಾಗಿದ್ದಕ್ಕೆ ಟೋಲ್ ಸಿಬ್ಬಂದಿ ಮೇಲೆ 35ಕ್ಕೂ ಹೆಚ್ಚು ಕಿಡಿಗೇಡಿಗಳಿಂದ ಹಲ್ಲೆ

    ನೆಲಮಂಗಲ: ಎರಡು ನಿಮಿಷ ಟೋಲ್ ಸಿಬ್ಬಂದಿ ಬಸ್ ಬಿಡದಿದ್ದಕ್ಕೆ 35ಕ್ಕೂ ಹೆಚ್ಚು ಕಿಡಿಗೇಡಿಗಳು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಟೋಲ್ ಆಪರೇಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆಯು ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಜಾಸ್ ಟೋಲ್‍ನಲ್ಲಿ ನಡೆದಿದ್ದು, ಟೋಲ್ ಆಪರೇಟರ್ ಮೇಲೆ ಹಲ್ಲೆ ಮಾಡಿ ಟೋಲ್ ಬೂತ್‍ನಲ್ಲಿದ್ದ ಯಂತ್ರೋಪಕರಣಗಳನ್ನ ಧ್ವಂಸ ಮಾಡಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಸುಮಾರು 35 ಜನರ ತಂಡ ಟೋಲ್ ಆಪರೇಟರ್ ನಾಗರಾಜು ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲಾ ದೃಶ್ಯಗಳು ಟೋಲ್‍ನ ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಶನಿವಾರ ಸಂಜೆ 7.30ರ ಸುಮಾರಿಗೆ ಘಟನೆ ಸಂಭವಿಸಿದೆ. ದಾಂಧಲೆ ನಡೆಸಿದ ಗುಂಪಿನಲ್ಲಿದ್ದ ಎಲ್ಲರೂ ಹಿಂದಿ ಭಾಷೆ ಮಾತಾನಾಡುತ್ತಿದ್ದು, ಸ್ಥಳೀಯ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

    ಘಟನೆಯ ವೇಳೆ ಟೋಲ್ ಬೂತ್ ನಂ. 1ರಿಂದ ಆಪರೇಟರ್‍ನನ್ನು ಹೊರದಬ್ಬಲು ಕಿಡಿಗೇಡಿಗಳು ಯತ್ನಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಗೂಂಡಾ ವರ್ತನೆ ತೋರಿದ ಎಲ್ಲಾ ಕಾರ್ಮಿಕರು ಸದ್ಯ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

    https://www.youtube.com/watch?v=nPwLgcqyW48

  • ಬಸ್ ತಳ್ಳಿದ ಪ್ರಭಾರ ಎಸ್‍ಪಿ- ಕೆಎಸ್‍ಆರ್‍ಟಿಸಿ ಡ್ರೈವರ್‍ಗೆ ಕ್ಲಾಸ್

    ಉಡುಪಿ: ಸಾಸ್ತನದಲ್ಲಿ ನಡೆಯುತ್ತಿರುವ ಟೋಲ್ ಗೇಟ್ ಪ್ರತಿಭಟನೆ ವೇಳೆ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ಬಂಧಿಸಿ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ತುಂಬಲಾಯ್ತು. ಬಸ್ ತುಂಬಿದರೂ ನಿಂತಿದ್ದ ಬಸ್ಸು ಸ್ಟಾರ್ಟ್ ಆಗ್ಲೇ ಇಲ್ಲ. ಹೈವೇ ಮಧ್ಯೆ ಬಸ್ ಇದ್ದುದರಿಂದ ರೋಡ್ ಬ್ಲಾಕ್ ಆಯ್ತು. ದಿಕ್ಕು ತೋಚದ ಪ್ರಭಾರ ಎಸ್‍ಪಿ ವಿಷ್ಣುವರ್ಧನ ಪ್ರತಿಭಟನಾಕಾರರನ್ನು ತುಂಬಿದ್ದ ಬಸ್ ತಳ್ಳಲು ಶುರು ಮಾಡಿದರು.

    ಪ್ರಭಾರ ಎಸ್‍ಪಿ ಸೇರಿದಂತೆ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್- ಎಸ್‍ಐ ಮಧು ಸೇರಿದಂತೆ ಪೊಲೀಸರು ಬಸ್ಸನ್ನು ಸುಮಾರು ದೂರ ತಳ್ಳಿದರು. ವಿಪರೀತ ಜನ ಇದ್ದುದರಿಂದ ಮತ್ತಷ್ಟು ದೂರ ಬಸ್ಸನ್ನು ತಳ್ಳಿ ಜರ್ಕ್ ಹೊಡೆದು ಸ್ಟಾರ್ಟ್ ಮಾಡಿಸಬೇಕಾಯ್ತು.

    ಪೊಲೀಸರು ಬಂದೋಬಸ್ತ್ ಮಾಡುವುದರ ಜೊತೆ ಎಕ್ಸ್ಟ್ರಾ ಡ್ಯೂಟಿ ಮಾಡಬೇಕಾಗಿ ಬಂತು. ಬಂಧಿತರನ್ನು ಸ್ಥಳಾಂತರಗೊಳಿಸಿ ಬಂದ ಪೊಲೀಸರು, ಕೆಎಸ್‍ಆರ್‍ಟಿಸಿ ಚಾಲಕ ಮತ್ತು ನಿರ್ವಾಹಕನಿಗೆ ಚೆನ್ನಾಗಿಯೇ ಕ್ಲಾಸ್ ತಗೊಂಡ್ರಂತೆ. ಮೊದಲೇ ಉರಿ ಬಿಸಿಲಿನಲ್ಲಿ ಅರ್ಧ ದಿನ ನಿಂತು ಬೆಂದಿದ್ದ ಪೊಲೀಸರಿಗೆ ಬಸ್ ಚಾಲೂ ಆಗದಿದ್ದುದು ಸಿಕ್ಕಾಪಟ್ಟೆ ಗರಂ ಆಗಲು ಕಾರಣವಾಯ್ತು.

    ಉಡುಪಿಯ ಸಾಸ್ತಾನದಲ್ಲಿ ಟೋಲ್ ಗೇಟ್ ವಿಚಾರವಾಗಿ ದೊಡ್ಡ ಪ್ರತಿಭಟನೆ ನಡೆಯಿತು. ಹೈವೇ ಕಾಮಗಾರಿ ಪೂರ್ಣಗೊಳ್ಳದೆ ಸುಂಕ ವಸೂಲಿ ಮಾಡಬಾರದೆಂದು ಪ್ರತಿಭಟನಾಕಾರರು ಟೋಲ್ ಮುತ್ತಿಗೆ ಮಾಡಿದ್ರು.

     

  • ಹೈವೇ ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ಸಂಗ್ರಹಿಸಿದ್ದಕ್ಕೆ ಪಡುಬಿದ್ರೆ, ಸಾಸ್ತಾನದಲ್ಲಿ ಪ್ರತಿಭಟನೆ

    -ಮುಂಜಾಗ್ರತ ಕ್ರಮವಾಗಿ ಗೇಟ್ 2 ಕಿಮೀ ವ್ಯಾಪ್ತಿ ನಿಷೇಧಾಜ್ಞೆ ಜಾರಿ

    ಉಡುಪಿ: ಜಿಲ್ಲೆಯ ಪಡುಬಿದ್ರೆ ಹಾಗೂ ಸಾಸ್ತಾನ ಟೋಲ್ ಗೇಟ್ ಪ್ರತಿಭಟನೆಯ ಕಾವು ಏರಿದೆ. ಮುಂಜಾಗ್ರತಾ ಕ್ರಮವಾಗಿ ಹೆಜಮಾಡಿ ಹಾಗೂ ಕೋಟ ಟೋಲ್ ಗೇಟ್ ವ್ಯಾಪ್ತಿಯ 2 ಕಿಮಿ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

    ಉಡುಪಿಯಲ್ಲಿ ಹೈವೇ ಕಾಮಗಾರಿ ಪೂರ್ಣಗೊಂಡಿಲ್ಲ. ಈ ನಡುವೆಯೇ ಟೋಲ್ ಸಂಗ್ರಹ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರ ವಿರುದ್ಧ ಸ್ಥಳೀಯ ಹೋರಾಟಗಾರರು ಸಿಡಿದೆದ್ದಿದ್ದಾರೆ. ಪರಿಸ್ಥಿತಿ ಕೈಮೀರಬಹುದು ಎಂಬ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ವ್ಯಾಪ್ತಿಯ ಸರಹದ್ದಿನ ಹೆಜಮಾಡಿ ಟೋಲ್ ಗೇಟ್ ಮತ್ತು ಕೋಟ ಠಾಣಾ ವ್ಯಾಪ್ತಿಯ ಸಾಸ್ತಾನ ಗುಂಡ್ಮಿ ಟೋಲ್ ಗೇಟಿನಲ್ಲಿ ಫೆಬ್ರವರಿ 9 ರಿಂದ ಟೋಲ್ ಸಂಗ್ರಹ ಮಾಡಲು ಆರಂಭಿಸಿದ್ದು, ಈ ಸಂಬಂಧ ಪ್ರತಿಭಟನೆ, ಮುಷ್ಕರ, ಬಂದ್ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವಾಗುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ಸರಹದ್ದಿನ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸೆಕ್ಷನ್ ಹಾಕಿರುವುದಾಗಿ ಹೇಳಿದ್ದಾರೆ.

    ಕುಂದಾಪುರ ಸಮೀಪದ ಸಾಸ್ತಾನ ಗುಂಡ್ಮಿ ಟೋಲ್ ಗೇಟಿನ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಫೆಬ್ರವರಿ 10 ರ ಬೆಳಿಗ್ಗೆ 6 ರಿಂದ ಫೆಬ್ರವರಿ 15 ರ ಮಧ್ಯರಾತ್ರಿ 12 ಗಂಟೆಯವರಗೆ ಸೆಕ್ಷನ್ 144 ಅನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೆಗೊಳಿಸುವಂತೆ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ.

    ಜಿಲ್ಲಾಧಿಕಾರಿಗಳ ಮನವಿಯಂತೆ ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಗೇಟ್ ಪ್ರದೇಶ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಾರ್ವಜನಿಕ ಆಸ್ತಿ ಕಾಪಾಡುವ ಅವಶ್ಯಕತೆ ಕಂಡು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಎಸ್.ಪಿ ಕೆ.ಟಿ ಬಾಲಕೃಷ್ಣ ಹೇಳಿದ್ದಾರೆ.