Tag: ಟೊಯೋಟಾ ಕಂಪನಿ

  • ಮಾರುತಿ ಬಲೆನೊ ಕಾರು ನವೀಕರಣ – 6 ಏರ್‌ಬ್ಯಾಗ್‌ ಸ್ಟ್ಯಾಂಡರ್ಡ್..!

    ಮಾರುತಿ ಬಲೆನೊ ಕಾರು ನವೀಕರಣ – 6 ಏರ್‌ಬ್ಯಾಗ್‌ ಸ್ಟ್ಯಾಂಡರ್ಡ್..!

    ಇತ್ತೀಚಿಗೆ ಟೊಯೋಟಾ ಕಂಪನಿಯು ತನ್ನ ಗ್ಲಾಂಝಾ ಕಾರನ್ನು ನವೀಕರಿಸಿ, ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿತ್ತು. ಈಗ ಮಾರುತಿ ಸುಜುಕಿ ಕಂಪನಿಯ ಸರದಿ. ಬಲೆನೊ (Maruti Baleno) ಕಾರನ್ನು ನವೀಕರಿಸಿರುವ ಕಂಪನಿ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ. ಇದಕ್ಕೂ ಮೊದಲು, ಬಲೆನೊದ ಜೀಟಾ ಮತ್ತು ಆಲ್ಫಾ ಟ್ರಿಮ್‌ಗಳು ಮಾತ್ರ ಆರು ಏರ್‌ಬ್ಯಾಗ್‌ಗಳನ್ನು (six airbags) ಹೊಂದಿದ್ದವು. ಆರು ಏರ್‌ಬ್ಯಾಗ್‌ಗಳನ್ನು ನೀಡುತ್ತಿರುವುದರಿಂದ ಬಲೆನೊ ಕಾರಿನ ಬೆಲೆಗಳು ಶೇಕಡಾ 0.5 ರಷ್ಟು ಹೆಚ್ಚಳವಾಗಿದೆ.

    ಆಲ್ಟೊ, ವ್ಯಾಗನ್ ಆರ್, ಸೆಲೆರಿಯೊ ಮತ್ತು ಈಕೊ ಕಾರುಗಳು ಈಗಾಗಲೇ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತಿವೆ. ಬಲೆನೊ ಈ ಕಾರುಗಳ ಸಾಲಿಗೆ ಹೊಸ ಸೇರ್ಪಡೆ. ನವೀಕರಣದ ನಂತರ ಬಲೆನೊದ ಎಕ್ಸ್-ಶೋರೂಂ ಬೆಲೆ ರೂ. 6.74 ಲಕ್ಷದಿಂದ ರೂ. 9.96 ಲಕ್ಷದವರೆಗೆ ಇದೆ.

    ಬಲೆನೊ ಕಾರಿನ ಇತರ ಸುರಕ್ಷತಾ ವೈಶಿಷ್ಟ್ಯಗಳು ಹೀಗಿವೆ. ಹಿಲ್ ಹೋಲ್ಡ್‌ನೊಂದಿಗೆ ESP, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಬ್ರೇಕ್ ಅಸಿಸ್ಟ್ ಮತ್ತು ISOFIX ಆಂಕರೇಜ್‌ಗಳು. ಆಲ್ಫಾ ಟ್ರಿಮ್‌ನಲ್ಲಿ 360-ಡಿಗ್ರಿ ಕ್ಯಾಮೆರಾ ಕೂಡ ಇದೆ. ಬಲೆನೊದ 1.2-ಲೀಟರ್ ಪೆಟ್ರೋಲ್ ಎಂಜಿನ್‌ 66kW ಶಕ್ತಿ ಮತ್ತು 113Nm ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.

    ಈ ವರ್ಷದ ಅಂತ್ಯದ ವೇಳೆಗೆ ನಮ್ಮ ಎಲ್ಲಾ ಕಾರುಗಳು 6 ಏರ್‌ಬ್ಯಾಗ್‌ಗಳನ್ನು ಹೊಂದಿರುತ್ತವೆ ಎಂದು ಈ ವರ್ಷದ ಏಪ್ರಿಲ್‌ನಲ್ಲಿ ಮಾರುತಿ ಸುಜುಕಿ ಅಧ್ಯಕ್ಷ ಆರ್.ಸಿ.ಭಾರ್ಗವ ಹೇಳಿದ್ದರು. ಎರ್ಟಿಗಾ, ಫ್ರಾಂಕ್ಸ್, ಇಗ್ನಿಸ್, ಎಸ್-ಪ್ರೆಸ್ಸೊ ಮತ್ತು XL6 ಕಾರುಗಳಲ್ಲಿ ಪ್ರಸ್ತುತ 2 ಏರ್‌ಬ್ಯಾಗ್‌ಗಳನ್ನು ಮಾತ್ರ ಹೊಂದಿವೆ. ಅತ್ಯಂತ ಜನಪ್ರಿಯ ಎರ್ಟಿಗಾ ಕಾರು ಅತಿ ಶೀಘ್ರದಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಪಡೆಯುವ ಸಾಧ್ಯತೆ ಇದೆ. ಕಾರಿನ ಬೆಲೆಯೂ ಕೂಡ ಶೇಕಡಾ 1.4 ರಷ್ಟು ಹೆಚ್ಚಳವಾಗುವ ಬಗ್ಗೆ ಕಂಪನಿ ಸುಳಿವು ನೀಡಿದೆ.

  • ಕೋವಿಡ್ ವಿರುದ್ಧ ಹೋರಾಟದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಒತ್ತು

    ಕೋವಿಡ್ ವಿರುದ್ಧ ಹೋರಾಟದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಒತ್ತು

    -ರಾಮನಗರ ಜಿಲ್ಲೆಗೆ 1 ಕೋಟಿ ರೂ. ಮೌಲ್ಯದ ವೈದ್ಯಕೀಯ ಉತ್ಪನ್ನ
    – ತಕ್ಷಣವೇ ನೀಡಲು ಟೊಯೋಟಾ ಕಿರ್ಲೋಸ್ಕರ್ ಒಪ್ಪಿಗೆ

    ಬೆಂಗಳೂರು: ಕೋವಿಡ್ ಎರಡನೇ ಅಲೆಯನ್ನು ಹತ್ತಿಕ್ಕುವ ಉದ್ದೇಶದಿಂದ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಟೊಯೋಟಾ ಕಿರ್ಲೋಸ್ಕರ್ ಕಂಪನಿ ಜತೆ ಶುಕ್ರವಾರ ಮಹತ್ವದ ಸಮಾಲೋಚನೆ ನಡೆಸಿದರು.

    ವರ್ಚುಯಲ್ ವೇದಿಕೆ ಮೂಲಕ ಕಂಪನಿಯ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ಜತೆ ಚರ್ಚೆ ನಡೆಸಿದ ಡಿಸಿಎಂ, ರಾಮನಗರ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಅಗತ್ಯವಾದ ನೆರವನ್ನು ಕಂಪನಿ ವತಿಯಿಂದ ನೀಡುವಂತೆ ಕೋರಿದರು.

    ಈ ಮನವಿಗೆ ಕೂಡಲೇ ಸ್ಪಂದಿಸಿದ ವಿಕ್ರಂ ಕಿರ್ಲೋಸ್ಕರ್ ಅವರು, ತತ್‍ಕ್ಷಣವೇ 1 ಕೋಟಿ ರೂ. ಮೌಲ್ಯದ ವೈದ್ಯಕೀಯ ಉತ್ಪನ್ನಗಳನ್ನು ರಾಮನಗರ ಜಿಲ್ಲೆಗೆ ನೀಡುವುದಾಗಿ ಡಿಸಿಎಂ ಅವರಿಗೆ ತಿಳಿಸಿದರು. ಕಂಪನಿಯ ಜತೆ ರಾಮನಗರ ಜಿಲ್ಲಾಡಳಿತ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ ಎಂದು ಈ ಸಂದರ್ಭದಲ್ಲಿ ಡಿಸಿಎಂ ಅವರು ಟೊಯೋಟಾ ಕಿರ್ಲೋಸ್ಕರ್ ಪ್ರತಿನಿಧಿಗಳಿಗೆ ಹೇಳಿದರು.

    ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಎಂ ಅವರು, “ಕೋವಿಡ್ ನಿರ್ವಹಣೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ. ಟೊಯೋಟಾ ಕಿರ್ಲೋಸ್ಕರ್ ಕಡೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರಾಮನಗರ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಅವರ ನೆರವು ಕೇಳಿದ್ದೇವೆ” ಎಂದರು.

    ಮಾಗಡಿ ಮತ್ತು ಕನಕಪುರದಲ್ಲಿ ಆರ್‌ಟಿಪಿಸಿಆರ್ ಪರೀಕ್ಷಾ ಘಟಕಗಳ ಸ್ಥಾಪನೆ, ರಾಮನಗರ ಜಿಲ್ಲೆಗೆ 50 ವೆಂಟಿಲೇಟರ್‌ಗಳು ಮತ್ತು 50 ಪ್ಯಾರಾ ಮಲ್ಟಿ ಮಾನಿಟರ್‍ಗಳು, ಆಕ್ಸಿಜನ್ ಜನರೇಟರ್‌ಗಳು, 200 ಆಕ್ಸಿಜನ್ ಬೆಡ್‍ಗಳು ಬೇಕೆಂದು ನಾವು ಮನವಿ ಮಾಡಿದ್ದೇವೆ. ಈ ಎಲ್ಲ ಬೇಡಿಕೆಗಳಿಗೆ ಕಂಪನಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಡಿಸಿಎಂ ತಿಳಿಸಿದರು.

    ನಗರದ ಎಂ.ಎಸ್.ರಾಮಯ್ಯ, ಮೈಸೂರು ರಸ್ತೆಯ ರಾಜರಾಜೇಶ್ವರಿ ಮತ್ತು ಕನಕಪುರ ರಸ್ತೆಯ ದಯಾನಂದ ಸಾಗರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳಿಗೆ ತುರ್ತಾಗಿ ಆಕ್ಸಿಜನ್ ಬೆಡ್‍ಗಳ ಅಗತ್ಯವಿದೆ. ಈ ಆಸ್ಪತ್ರೆಗಳಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿ ಇದ್ದು, ಇಂಥ ಹಾಸಿಗೆಗಳ ಮೇಲೆ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ. ಸಾರ್ವಜನಿಕರಿಗೆ ಇಂಥ ಕಡೆ ಉತ್ತಮ ಚಿಕಿತ್ಸೆ ಕೊಡಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

    ಸಭೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ವತಿಯಿಂದ ಸಂದೀಪ್ ಶಾಂತಾರಾಂ ದಲ್ವಿ, ಬಿಡದಿ ಕೈಗಾರಿಕಾ ಪ್ರದೇಶದ ಅಧ್ಯಕ್ಷ ಹೆಗಡೆ ಮುಂತಾದವರು ಇದ್ದರು. ಇದಾದ ನಂತರ ಡಿಸಿಎಂ ಅವರು ವರ್ಚುಯಲ್ ಮೂಲಕವೇ ಪ್ಲಿಪ್‍ಕಾರ್ಟ್ ಪ್ರತಿನಿಧಿಗಳ ಜತೆಯೂ ಮಾತುಕತೆ ನಡೆಸಿದರು.

  • ರೈತರು, ಕಾರ್ಮಿಕರ ಪ್ರತಿಭಟನೆ – ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಲು ಸಿದ್ದರಾಮಯ್ಯ ಆಗ್ರಹ

    ರೈತರು, ಕಾರ್ಮಿಕರ ಪ್ರತಿಭಟನೆ – ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಲು ಸಿದ್ದರಾಮಯ್ಯ ಆಗ್ರಹ

    – ಕಾರ್ಮಿಕ ವಿರೋಧಿ ಕಾನೂನುಗಳೇ ಈ ಅಶಾಂತಿಗೆ ಮೂಲ ಕಾರಣ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ರೈತರು ಮತ್ತು ಕಾರ್ಮಿಕರು ಚಳವಳಿ, ಪ್ರತಿಭಟನೆ ಹಾಗೂ ಸತ್ಯಾಗ್ರಹಗಳಲ್ಲಿ ತೊಡಗಿದ್ದಾರೆ. ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರು, ಕಾರ್ಮಿಕರನ್ನು ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಈ ಕುರಿತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಮುಖ್ಯಾಂಶಗಳು ಹೀಗಿದೆ.

    1. ಬಿಡದಿಯ ಟೊಯೋಟಾ ಕಂಪನಿ: ಕಾರು ತಯಾರಿಸುವ ಈ ಕಂಪನಿ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಘಟಕಗಳನ್ನು ಹೊಂದಿದೆ. ಅದರ ಒಂದು ಘಟಕದಲ್ಲಿ ಸುಮಾರು ಎರಡು ಸಾವಿರ ಜನ ಖಾಯಂ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಕಾರು ಉತ್ಪಾದನಾ ಘಟಕವನ್ನು ಲಾಕೌಟ್ ಮಾಡಲಾಗಿದೆ. ಸುಸೂತ್ರವಾಗಿ ನಡೆಯುತ್ತಿದ್ದ ಈ ಘಟಕ ಕೇಂದ್ರವು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದ ಕೂಡಲೇ ಅದನ್ನು ನೆಪವಾಗಿಟ್ಟುಕೊಂಡು `ನಿರ್ಧಿಷ್ಟ ಕಾಲಾವಧಿಯ ಕಾರ್ಮಿಕರನ್ನು’ (ಹೊಸ ಕಾಯ್ದೆಯಲ್ಲಿ ನಿರ್ದಿಷ್ಟ ಸೇವಾವಧಿಯ ಕಾರ್ಮಿಕರನ್ನು ನೇಮಿಸಿಕೊಳ್ಳುವ ಅವಕಾಶ ಮಾಡಲಾಗಿದೆ) ನೇಮಿಸಿಕೊಂಡು ಹೆಚ್ಚು ಲಾಭ ಗಳಿಸಬಹುದು ಎನ್ನುವ ಉದ್ದೇಶದಿಂದ ವಿಪರೀತ ಕಿರುಕುಳ ನೀಡುತ್ತಿವೆ ಎನ್ನುವುದು ಕಾರ್ಮಿಕರ ಆರೋಪ.

    ಶೋಷಣೆಯನ್ನು ಪ್ರಶ್ನಿಸಿದ ನೌಕರರನ್ನು ಕಂಪನಿ ಅಮಾನತ್ತು ಮಾಡಿದೆ. ಪ್ರತಿಭಟನೆಗೆ ಕೂತರೆ ಕಂಪನಿಗಳು ಕ್ಯಾರೆ ಎನ್ನುತ್ತಿಲ್ಲ. ಬದಲಾಗಿ ಲಾಕೌಟ್ ಮಾಡಿವೆ. ಕಂಪನಿಯ ಮುಂದೆ ಖಾಲಿ ಇದ್ದ ಜಾಗದಲ್ಲಿ ಪ್ರತಿಭಟನೆ ಮಾಡುವುದಕ್ಕಾಗಿ ಹಾಕಿದ್ದ ಶಾಮಿಯಾನವನ್ನು ತೆರವುಗೊಳಿಸಲು ಸರ್ಕಾರ ಕೆಐಎಡಿಬಿ ಮೇಲೆ ಒತ್ತಡ ತಂದಿದೆ. ಕೆಐಡಿಬಿಯು ಆ ಜಾಗದ ಮಾಲೀಕರಿಗೆ ನೋಟಿಸ್ ನೀಡಿ ಶಾಮಿಯಾನವನ್ನು ತೆರವುಗೊಳಿಸಿದೆ. ಕಾರ್ಮಿಕರು ಈಗ ಛತ್ರಿಗಳನ್ನಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕಾರ್ಮಿಕರ ಪ್ರತಿಭಟನೆ 40ನೇ ದಿನಕ್ಕೆ ಕಾಲಿಟ್ಟರೂ ಇದುವರೆಗೂ ಕಂಪನಿಯು ಲಾಕೌಟ್ ತೆರವುಗೊಳಿಸಿ ಮಾತುಕತೆಗೆ ಮುಂದಾಗಿಲ್ಲ.

    2. ವಿಸ್ಟ್ರಾನ್ ಕಾರ್ಮಿಕರ ಪ್ರತಿಭಟನೆ: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ವಿಸ್ಟ್ರಾನ್ ಎಂಬ ಕಂಪನಿಯಲ್ಲಿ ಸುಮಾರು 9,833 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 8,490 ಸಾವಿರ ಜನ ಗುತ್ತಿಗೆ ಕಾರ್ಮಿಕರು. ಸುಮಾರು 1,343 ಖಾಯಂ ಕಾರ್ಮಿಕರಿದ್ದಾರೆ. ಈ ಕಂಪನಿಯು ಅಮೆರಿಕದ ಪ್ರತಿಷ್ಠಿತ ಮತ್ತು ಜಾಗತಿಕ ಮಟ್ಟದಲ್ಲಿ ಅತ್ಯಂತ ಶ್ರೀಮಂತ ಕಂಪನಿಯಾದ ಆಪಲ್ (ಐ-ಫೋನ್) ಕಂಪನಿಗೆ ಉಪಕರಣಗಳನ್ನು ತಯಾರಿಸಿ ಕೊಡುತ್ತಿದೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಸಿಕ 22,000 ರೂಪಾಯಿಗಳ ವೇತನ ನೀಡುತ್ತೇವೆಂದು ಹೇಳಿ ಕೆಲಸಕ್ಕೆ ಸೇರಿಸಿಕೊಂಡು ಬಹುಪಾಲು ಜನರಿಗೆ ಕೇವಲ 8,000 ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿದೆಯೆಂಬ ಆರೋಪವಿದೆ.

    ಕಂಪನಿಯು 8 ಗಂಟೆಗೆ ಬದಲಾಗಿ 12 ಗಂಟೆ ದುಡಿಸಿಕೊಳ್ಳುತ್ತಿದೆ. ಗುತ್ತಿಗೆ ಕಾರ್ಮಿಕರಿಗೆ ಮೂರು ನಾಲ್ಕು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ ಎಂಬ ಮಾಹಿತಿಯನ್ನು ಕಾರ್ಮಿಕ ಸಚಿವರು ಇತ್ತೀಚೆಗೆ ನೀಡಿರುವ ಹೇಳಿಕೆಗಳೂ ಸಮರ್ಥಿಸುತ್ತಿವೆ. ಈ ಗುತ್ತಿಗೆ ಕಾರ್ಮಿಕರಲ್ಲಿ ಬಹುಪಾಲು ಯುವಕರು ಕಾಲೇಜುಗಳಲ್ಲಿ ಕಲಿಯುತ್ತಿರುವವರಾಗಿದ್ದಾರೆ. ಕೊರೊನಾ ಕಾರಣದಿಂದ ಕಾಲೇಜುಗಳನ್ನು ಮುಚ್ಚಿರುವುದರಿಂದ, ಮೂರು ನಾಲ್ಕು ತಿಂಗಳು ದುಡಿದು ಬರುವ ಹಣದಿಂದ ಮುಂದಿನ ಓದನ್ನು ನಿಭಾಯಿಸಬಹುದು ಎಂಬ ಆಸೆಯಿಂದ ಗುತ್ತಿಗೆ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದವರಾಗಿದ್ದಾರೆ. ಅವರಿಗೂ ಸಂಬಳ ನೀಡಿಲ್ಲ. ಕಾರ್ಮಿಕರು ಶೌಚಾಲಯಕ್ಕೆ ಹೋದ ಅವಧಿಯನ್ನು ಕೆಲಸ ಮಾಡದ ಅವಧಿ ಎಂದು ಪರಿಗಣಿಸಿ ತಿಂಗಳಲ್ಲಿ ಎರಡು ಮೂರು ದಿನಗಳ ಸಂಬಳವನ್ನು ಕಡಿತಗೊಳಿಸಲಾಗಿದೆ. ಈ ರೀತಿಯ ಅಮಾನವೀಯ ಸಂಗತಿಗಳು ಕಾರ್ಮಿಕ ವಲಯವನ್ನು ರೊಚ್ಚಿಗೇಳುವಂತೆ ಮಾಡಿವೆ. ಕೋಲಾರದ ಈ ಕಂಪನಿಯ ಸುಮಾರು 7 ಸಾವಿರ ಮಂದಿ ಕಾರ್ಮಿಕರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇವರಲ್ಲಿ ಬಹುಪಾಲು ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆ ಎಂಬುದು ಆತಂಕದ ವಿಚಾರ.

    3. ಅರವಿಂದ್ ಫ್ಯಾಷನ್ಸ್: ರಾಮನಗರ ಜಿಲ್ಲೆಯಲ್ಲಿರುವ ಅರವಿಂದ್ ಫ್ಯಾಷನ್ಸ್ ಎಂಬ ಸಿದ್ಧ ಉಡುಪು ಕಾರ್ಖಾನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕುಸಿದಿದೆ ಎನ್ನುವ ನೆಪ ಹೇಳಿ ಏಕಾ ಏಕಿ ಬಂದ್ ಮಾಡಿದೆ. 12 ವರ್ಷದಿಂದ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಬೆಳಗಾಗುವುದರೊಳಗೆ ಬೀದಿಗೆ ಬಿದ್ದಿದ್ದಾರೆ. ಕಾರ್ಮಿಕರಿಗೆ ಕಾರ್ಮಿಕ ನಿಯಮಗಳ ಪ್ರಕಾರ ಕೊಡಬೇಕಾದ ಹಣವನ್ನೂ ನೀಡದೇ ಏಕಾಏಕಿ ಬಂದ್ ಮಾಡಿರುವುದು ಅಮಾನವೀಯ ಸಂಗತಿಯಾಗಿದೆ. ಇದನ್ನು ವಿರೋಧಿಸಿ ಕಾರ್ಮಿಕರು ನಡೆಸುತ್ತಿರುವ ಹೋರಾಟ 20ನೇ ದಿನಕ್ಕೆ ತಲುಪಿದೆ. ಸರ್ಕಾರ, ಮಂತ್ರಿಗಳು, ಕಾರ್ಮಿಕ ಇಲಾಖೆ ಯಾರೊಬ್ಬರೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.

    ವಾರಗಟ್ಟಲೆ, ತಿಂಗಳುಗಟ್ಟಲೆ ಕಾರ್ಮಿಕರು ಶಾಂತ ರೀತಿಯಿಂದ ಪ್ರತಿಭಟಿಸುತ್ತಿದ್ದರೂ ಕ್ಯಾರೇ ಅನ್ನದ ಸರ್ಕಾರ ಮಂತ್ರಿಗಳು ಕಾರ್ಮಿಕರ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿದ ತಕ್ಷಣ ರೈತರನ್ನು, ಕಾರ್ಮಿಕರನ್ನು ಕಳ್ಳರು, ದರೋಡೆಕೋರರು, ದಾಂಧಲೆಕೋರರು, ರಾಷ್ಟ್ರದ್ರೋಹಿಗಳು ಎಂದು ಬಿಂಬಿಸಿ ಪೊಲೀಸರ ಮೂಲಕ ಇಲ್ಲ ಸಲ್ಲದ ಪ್ರಕರಣಗಳನ್ನು ದಾಖಲಿಸಿ ಗೂಂಡಾಗಿರಿ ನಡೆಸುತ್ತಿವೆ ಎಂಬ ಅಸಮಾಧಾನ ವ್ಯಾಪಕವಾಗುತ್ತಿದೆ.

    ವಿಸ್ಟ್ರಾನ್ ಕಂಪನಿ ಕಾರ್ಮಿಕರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ ಬಳಿಕ, “ಪ್ರಧಾನಿ ಮೋದಿ ಅವರು ತನಗೆ ಕರೆ ಮಾಡಿ ಕಂಪನಿ ಬಗ್ಗೆ ಕಳವಳ ವ್ಯಕ್ತಪಡಿಸಿದರು” ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿಕೆ ನೀಡಿದ್ದಾರೆ. ಪ್ರಧಾನ ಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ಕಾರ್ಮಿಕರಿಗೆ ಸಂಬಳ ಕೊಡದೆ, ಅವರ ಹಕ್ಕುಗಳನ್ನು ಗೌರವಿಸದೆ ಶ್ರಮ ದೋಚಿರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಕಾನೂನುಗಳೇ ಈ ಅಶಾಂತಿಗೆ ಮೂಲ ಕಾರಣ ಎಂದು ಮೊದಲು ಅರಿತುಕೊಳ್ಳಬೇಕು.

    ರಾಜ್ಯದ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್ ರವರು ಕಂಪನಿಯಲ್ಲಿ ಮಹಿಳಾ ಕಾರ್ಮಿಕರನ್ನು ಅಸುರಕ್ಷಿತ ವಾತಾವರಣದಲ್ಲಿ ಹೆಚ್ಚು ಕಾಲ ದುಡಿಸಿಕೊಳ್ಳುತ್ತಿದ್ದುದನ್ನು, ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡದ ವಿಚಾರವನ್ನು ಅಲ್ಲಗಳೆದಿಲ್ಲ. ಕಂಪನಿಯು ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿರುವುದನ್ನು ಒಪ್ಪಿಕೊಂಡೂ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಕಾರ್ಮಿಕರು ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು ಎಂದಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಡಾ.ಅಶ್ವಥ್ ನಾರಾಯಣ್ ಅವರು, “ಬೇಕಿದ್ದರೆ ಕಾರ್ಮಿಕರು ಕಾರ್ಮಿಕ ನ್ಯಾಯಾಲಯಕ್ಕೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಿ” ಎಂದಿದ್ದಾರೆ. ಇದು ಸರ್ಕಾರ ಆಡಳಿತ ನಡೆಸುವ ಕ್ರಮವೇ?

    ಆಡಳಿತದ ಸಮಸ್ಯೆಗಳನ್ನು ನಿಭಾಯಿಸುವುದಕ್ಕೋಸ್ಕರವೇ ಸಂವಿಧಾನದಡಿ ಕಾರ್ಮಿಕ ಕಾಯ್ದೆಗಳನ್ನು ರೂಪಿಸಲಾಗಿದೆ. ದುಡಿಯುವ ವರ್ಗಗಳ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ಮುತ್ಸದ್ಧಿತನ ಮತ್ತು ಪ್ರಬುದ್ಧತೆ, ಮಾನವೀಯತೆ, ಅಂತಃಕರಣಗಳ ಅಗತ್ಯವಿದೆ.

    ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ನಿಷ್ಕ್ರಿಯವಾಗದೆ, ನಿರ್ಲಕ್ಷ್ಯ ಮನೋಭಾವವನ್ನು ತೊರೆದು ಕಂಪನಿಗಳ ಆಡಳಿತ ಮಂಡಳಿಗಳನ್ನು ಮತ್ತು ಕಾರ್ಮಿಕರನ್ನು ಮಾತುಕತೆಗೆ ಕರೆದು ಸೌಹಾರ್ದಯುತವಾಗಿ ಸಮಸ್ಯೆಯನ್ನು ಇತ್ಯಾರ್ಥಪಡಿಸಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಹಾಗೂ ಜಾರಿಗೆ ತಂದಿರುವ ಎಲ್ಲ ಜನವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.