Tag: ಟೊಮೇಟೋ

  • ಹೂ, ಹಣ್ಣು, ತರಕಾರಿ ಬೆಳೆಗಾರರಲ್ಲಿ ಅತಂಕ- ಪರಿಹಾರ ಹೆಚ್ಚಿಸುವಂತೆ ಆಗ್ರಹ

    ಹೂ, ಹಣ್ಣು, ತರಕಾರಿ ಬೆಳೆಗಾರರಲ್ಲಿ ಅತಂಕ- ಪರಿಹಾರ ಹೆಚ್ಚಿಸುವಂತೆ ಆಗ್ರಹ

    – ಬೆಲೆ, ಮಾರುಕಟ್ಟೆ ಇಲ್ಲದೆ ಬೆಳೆಗಾರರು ಕಂಗಾಲು

    ಕೋಲಾರ : ಟೊಮೇಟೋಗೆ ಬೆಲೆ ಇಲ್ಲದೆ ರೈತರು ರಸ್ತೆ ಪಕ್ಕದಲ್ಲಿ ಹಾಗೂ ಕೆರೆಗಳಲ್ಲಿ ಸುರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಲಾರದಲ್ಲಿ ರೈತರು ತಾವು ಬೆಳೆದ ಬೆಳೆಗೆ ಬೆಲೆ ಇಲ್ಲ, ಮಾರುಕಟ್ಟೆ ಇಲ್ಲದ ಹಿನ್ನೆಲೆಯಲ್ಲಿ ಮನನೊಂದ ಕೆರೆಯಲ್ಲಿ ಸುರಿದು ಆಕ್ರೋಶ ಹೊರ ಹಾಕಿದ್ದಾರೆ.

    ಟ್ರಾಕ್ಟರ್ ಮೂಲಕ ಟೊಮೇಟೋ ತುಂಬಿಕೊಂಡು ಬಂದು ಕೆರೆಯಲ್ಲಿ ಸುರಿಯುತ್ತಿದ್ದಾರೆ. ಕೆರೆಯಲ್ಲಿ ಟೊಮೇಟೋ ಸುರಿಯುತ್ತಿದ್ದಂತೆ ಅದನ್ನ ತಿನ್ನಲು ನೂರಾರು ಎಮ್ಮೆಗಳು ಜಮಾಯಿಸಿದ್ದವು. ಕೊರೊನಾ  ಲಾಕ್ ಡೌನ್ ಹೊಡೆತಕ್ಕೆ ಕೋಲಾರದಲ್ಲಿ ರೈತರು ತತ್ತರಿಸಿ ಹೋಗಿದ್ದಾರೆ. ತಾನೂ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಮಾರುಕಟ್ಟೆ ಇಲ್ಲದೆ ರೈತನ ಜೀವನ ಬೀದಿಪಾಲಾಗಿದೆ.

    15 ಕೆಜಿ ತೂಕದ ಟೊಮೇಟೋ ಬಾಕ್ಸ್ ಕೇವಲ 2 ರುಪಾಯಿಗೆ ಮಾರಾಟವಾಗುವ ಮೂಲಕ ನಷ್ಟದಲ್ಲಿ ರೈತನ ಬದುಕು ಮೂರಾ ಬಟ್ಟೆಯಾಗಿದೆ. ಸಾಲ ಮಾಡಿ ಎಕರೆಗೆ ಮೂರು ಲಕ್ಷ ಖರ್ಚು ಮಾಡಿ ಬೆಳೆದ ಬೆಳೆಯನ್ನ ರಸ್ತೆ ಬದಿ ಸುರಿದು ಆಕ್ರೋಶ ಹೊರ ಹಾಕಿರುವ ಟೊಮೇಟೋ ಬೆಳೆಗಾರರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

    ಸಾವಿರಾರು ಹೆಕ್ಟೇರು ಪ್ರದೇಶದಲ್ಲಿ ರೈತರು ಬೆಳೆಗಳನ್ನ ಸುರಿಯುತ್ತಿದ್ದಾರೆ. ಹಾಗಾಗಿ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಪರಿಹಾರದ ಹಣ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆಯಂತ್ತಾಗಿದೆ. ಹಾಗಾಗಿ ರೈತರ ನೆರವಿಗೆ ಸರ್ಕಾರ ಇರುವುದೇ ಆದಲ್ಲಿ ಪರಿಹಾರದ ಹಣ ಹೆಚ್ಚುಮಾಡುವಂತೆ ಕೋಲಾರದ ರೈತರು ಒತ್ತಾಯ ಮಾಡಿದ್ದಾರೆ.

  • ಸೂಕ್ತ ಬೆಲೆಯಿಲ್ಲದೆ ಟೊಮೇಟೋ ಬೆಳೆಗೆ ಬೆಂಕಿ ಹಚ್ಚಿದ ರೈತ

    ಸೂಕ್ತ ಬೆಲೆಯಿಲ್ಲದೆ ಟೊಮೇಟೋ ಬೆಳೆಗೆ ಬೆಂಕಿ ಹಚ್ಚಿದ ರೈತ

    ನೆಲಮಂಗಲ: ಲಾಕ್‍ಡೌನ್ ಎಫೆಕ್ಟ್ ನಿಂದಾಗಿ ಟೊಮೇಟೋ ಬೆಳೆದ ರೈತರು ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಈ ಬಾರಿ ಬೆಳೆ ಚೆನ್ನಾಗಿ ಇದ್ದರು ಕೂಡ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಬಂದಿರುವುದರಿಂದಾಗಿ ಮನನೊಂದು ಬೆಳೆಗೆ ಬೆಂಕಿ ಹಚ್ಚಿರುವ ಘಟನೆ ನೆಲಮಂಗಲದಲ್ಲಿ ವರದಿಯಾಗಿದೆ.

    ಇದೀಗ ಟೊಮೇಟೋ ಕೆಜಿಗೆ 2 ರೂಪಾಯಿಯಂತೆ ರೈತರಿಂದ ಖರೀದಿಯಾದರೆ, 10 ರೂಪಾಯಿಗೆ ದಲ್ಲಾಳಿ ಮಾರುವಂತಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕಾಜಿಪಾಳ್ಯ ಹಾಗೂ ಕುತ್ತಿನಗೆರೆ ಗ್ರಾಮಸ್ಥರ ಕಥೆ ವ್ಯಥೆ ಇದ್ದಾಗಿದ್ದು, ಇದರಿಂದ ಮನನೊಂದು ಟೊಮೇಟೋ ಗಿಡಕ್ಕೆ ಬೆಂಕಿ ಹಚ್ಚುವ ಮೂಲಕ ರೈತರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ತಮ್ಮ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನೀಡಲು ಸರ್ಕಾರಕ್ಕೆ ಒತ್ತಾಯಿಸಿದ ರೈತರು, ಕೋವಿಡ್ ಸಂದರ್ಭದಲ್ಲಿ ಕಿಟ್ ವಿತರಿಸುವವರಾದರೂ ನೇರವಾಗಿ ಟೊಮೇಟೋ ನಮ್ಮಿಂದ ಖರೀದಿಸಿ ಎಂದು ಮನವಿಮಾಡಿಕೊಂಡಿದ್ದಾರೆ.

    ಈ ಕುರಿತು ರಾಜ್ಯ ಸರ್ಕಾರಕ್ಕೆ ಸಹ ಮನವಿ ಮಾಡಿಕೊಂಡಿರುವ ರೈತರು ನಮಗೆ ಬೆಂಬಲ ಬೆಲೆ ನೀಡಿ ಸಹಕಾರಿಯಾಗಿ. ಇದರೊಂದಿಗೆ ದಾನಿಗಳು ನೇರವಾಗಿ ರೈತರಿಂದ ಸ್ಥಳದಲ್ಲೇ ಟೊಮೇಟೋ ಖರೀದಿಸಿದರೆ ಮಾಡಿದ ಖರ್ಚು ಆದರೂ ಸಿಗುತ್ತದೆ ಎಂದು ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.

  • ಅರಿಶಿನಕುಂಟೆ ಬಳಿ 30 ಅಡಿ ಎತ್ತರದ ಫ್ಲೈಓವರ್ ನಿಂದ ಕೆಳಗೆ ಬಿದ್ದ ಟೆಂಪೋ- ಟೊಮೇಟೋ ಚೆಲ್ಲಾಪಿಲ್ಲಿ, ಟ್ರಾಫಿಕ್ ಜಾಮ್

    ಅರಿಶಿನಕುಂಟೆ ಬಳಿ 30 ಅಡಿ ಎತ್ತರದ ಫ್ಲೈಓವರ್ ನಿಂದ ಕೆಳಗೆ ಬಿದ್ದ ಟೆಂಪೋ- ಟೊಮೇಟೋ ಚೆಲ್ಲಾಪಿಲ್ಲಿ, ಟ್ರಾಫಿಕ್ ಜಾಮ್

    ಬೆಂಗಳೂರು: ಟೊಮೇಟೊ ತುಂಬಿದ ಟೆಂಪೋ ಫ್ಲೈಓವರ್ ನಿಂದ ಕೆಳಗೆ ಬಿದ್ದ ಘಟನೆ ನೆಲಮಂಗಲದ ಅರಿಶಿನಕುಂಟೆ ಬಳಿ ನಡೆದಿದೆ.

    30 ಅಡಿ ಎತ್ತರದ ಫ್ಲೈಓವರ್ ನಿಂದ ಕೆಳಗೆ ಬಿದ್ದ ಪರಿಣಾಮ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಟೊಮೇಟೊ ಚಲ್ಲಾಪಿಲ್ಲಿಯಾಗಿದೆ.

    ಚಿಕ್ಕಬೆಳವಂಗಲದಿಂದ ರೈತರು ಯಶವಂತಪುರ ಮಾರುಕಟ್ಟೆಗೆ ಟೊಮೇಟೋ ರವಾನೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ಟೆಂಪೋದಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

     

    ಘಟನೆಯಿಂದ ಕೆಲಕಾಲ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.