Tag: ಟೆಸ್ಲಾ

  • ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಕೊನೆಯ ಹಂತದಲ್ಲಿದೆ ಡೀಲ್‌ ಮಾತುಕತೆ

    ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಕೊನೆಯ ಹಂತದಲ್ಲಿದೆ ಡೀಲ್‌ ಮಾತುಕತೆ

    ವಾಷಿಂಗ್ಟನ್‌: ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾದ ಮುಖ್ಯಸ್ಥ, ವಿಶ್ವದ ನಂಬರ್‌ 1 ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ ಕಂಪನಿ ಬೀಳುವುದು ಬಹುತೇಕ ಖಚಿತವಾಗಿದೆ.

    ಶೇ.9 ರಷ್ಟು ಷೇರು ಖರೀದಿಸಿದ ಬಳಿಕ ಮಸ್ಕ್‌ ಈಗ ಟ್ವಿಟ್ಟರ್‌ನ ದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ಮಸ್ಕ್ ಮೈಕ್ರೋಬ್ಲಾಗಿಂಗ್ ಆಡಳಿತ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ ಬಳಿಕ 41 ಬಿಲಿಯನ್ ಡಾಲರ್‌ಗೆ(ಸುಮಾರು 3 ಲಕ್ಷ ಕೋಟಿ ರೂ.)ಟ್ವಿಟ್ಟರ್‌ನ ಶೇ.100 ಪಾಲನ್ನು ಖರೀದಿಸುತ್ತೇನೆ ಎಂದು ಆಫರ್ ನೀಡಿದ್ದರು.

    ಟ್ವಿಟ್ಟರ್‌ನ ಪ್ರತಿ ಷೇರಿಗೆ 54.20 ಡಾಲರ್‌ (4,124.81 ರೂ.) ಕೊಡುವುದಾಗಿ ಎಲೋನ್‌ ಮಸ್ಕ್‌ ಷೇರುಪೇಟೆ ನಿಯಂತ್ರಣ ಮಂಡಳಿಗೆ ತಿಳಿಸಿದ್ದರು. ಈ ಪ್ರಸ್ತಾಪವನ್ನು ಟ್ವಿಟ್ಟರ್‌ ಬೋರ್ಡ್‌ ಒಪ್ಪಿಕೊಂಡಿದ್ದು ಷೇರು ಖರೀದಿ ಮಾತುಕತೆ ಕೊನೆಯ ಹಂತದಲ್ಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್‌ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್‌?

    ಭಾನುವಾರ ಮಸ್ಕ್‌ ತಂಡ ಟ್ವಿಟ್ಟರ್‌ ಆಡಳಿತ ಮಂಡಳಿಯನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಈ ಮಾತುಕತೆಯಲ್ಲಿ ಮಸ್ಕ್‌ ಭಾಗಿಯಾಗಿದ್ದಾರಾ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ.

    ಮಸ್ಕ್‌ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸುತ್ತೇನೆ ಎಂದು ಘೋಷಣೆ ಮಾಡಿದ ಬಳಿಕ ಷೇರು ಮೌಲ್ಯ ಶೇ.9.2 ರಷ್ಟು ಏರಿಕೆಯಾಗಿದೆ. ಒಂದು ಷೇರಿಗೆ 39 ಡಾಲರ್‌(2,990 ರೂ.) ಮೌಲ್ಯ ಇದ್ದರೆ ಈಗ ಅದು 48.93 ಡಾಲರ್‌ಗೆ(3,754 ರೂ.) ಏರಿಕೆಯಾಗಿದೆ.

    ಜನವರಿ 31 ರಿಂದ ಪ್ರತಿನಿತ್ಯ ಟ್ವಿಟ್ಟರ್‌ ಷೇರನ್ನು ಖರೀದಿಸಲು ಆರಂಭಿಸಿದ್ದ ಮಸ್ಕ್‌ ಏಪ್ರಿಲ್‌ 4 ರಂದು ನಾನು ಟ್ವಿಟ್ಟರ್‌ ಶೇ.9 ರಷ್ಟು ಷೇರನ್ನು ಖರೀದಿಸಿದ್ದೇನೆ ಎಂದು ಪ್ರಕಟಿಸಿದ್ದರು. ಏ.5 ರಂದು ಟ್ವಿಟ್ಟರ್‌ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನವನ್ನು ನೀಡುವುದಾಗಿ ಪ್ರಕಟಿಸಿತ್ತು. ಆದರೆ ಈ ಆಫರ್‌ ಅನ್ನು ಮಸ್ಕ್‌ ತಿರಸ್ಕರಿಸಿದ್ದರು.

    ಮುಕ್ತ ಅಭಿವ್ಯಕ್ತಿಗೆ ಜಗತ್ತಿನ ಎಲ್ಲೆಡೆ ವೇದಿಕೆಯಾಗಬಲ್ಲ ಶಕ್ತಿ ಟ್ವಿಟ್ಟರ್‌ಗೆ ಇದೆ ಎಂಬ ನಂಬಿಕೆಯಿಂದ ನಾನು ಟ್ವಿಟ್ಟರ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಆದರೆ ಈಗ ಇರುವ ಸ್ವರೂಪದಲ್ಲಿದ್ದಾರೆ ಈ ಉದ್ದೇಶ ಈಡೇರುವುದಿಲ್ಲ ಮತ್ತು ಬೆಳೆಯುವುದಿಲ್ಲ. ಹೀಗಾಗಿ ಟ್ವಿಟ್ಟರ್‌ ಅನ್ನು ಖಾಸಗಿ ಕಂಪನಿಯನ್ನಾಗಿ ಪರಿವರ್ತಿಸಬೇಕು ಎಂದು ಟ್ವೀಟ್‌ ಮಾಡಿದ್ದರು.

    ಕ್ಯಾಪಿಟಲ್‌ ಹಿಲ್‌ ಘಟನೆಯ ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಗೆ ಟ್ವಿಟ್ಟರ್‌ ಸಂಪೂರ್ಣ ನಿಷೇಧ ಹೇರಿತ್ತು. ಈ ವಿಚಾರ ಚರ್ಚೆ ಆಗುತ್ತಿದ್ದಾಗ ಮಸ್ಕ್‌ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಹತ್ತಿಕ್ಕಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಯಶಸ್ವಿ ಉದ್ಯಮಿಯಾಗಿರುವ ಮಸ್ಕ್‌ ಟ್ವಿಟ್ಟರ್‌ ಅನ್ನು ದೊಡ್ಡ ಕಂಪನಿಯನ್ನಾಗಿ ಮಾಡಲು ಮುಂದಾಗಿದ್ದಾರೆ.

  • ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್‌ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್‌?

    ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್‌ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್‌?

    ವಾಷಿಂಗ್ಟನ್‌: ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾದ ಮುಖ್ಯಸ್ಥ, ವಿಶ್ವದ ನಂಬರ್‌ 1 ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸಲು ವಾಷಿಂಗ್ಟನ್‌ ಪೋಸ್ಟ್‌ ಅಂಕಣ ಕಾರಣವೇ ಎಂಬ ಪ್ರಶ್ನೆ ಎದ್ದಿದೆ.

    ಹೌದು. ಎಲೋನ್ ಮಸ್ಕ್ ಅವರ ‘ಮುಕ್ತ ಸ್ವಾತಂತ್ರ್ಯ’ ದೃಷ್ಟಿ ಟ್ವಿಟ್ಟರ್‌ಗೆ ಕೆಟ್ಟದ್ದು ಎಂಬ ತಲೆ ಬರಹದಲ್ಲಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ವಾರದ ಹಿಂದೆ ಒಂದು ಅಂಕಣ ಬರೆಯಲಾಗಿತ್ತು.

    ಈ ಅಂಕಣದಲ್ಲಿ ಮಸ್ಕ್‌ ಅವರು ಷೇರು ಖರೀದಿಸಿದ ವಿಚಾರವನ್ನು ಪ್ರಸ್ತಾಪಿಸಿ ಟ್ವಿಟ್ಟರ್‌ ಬೋರ್ಡ್‌ಗೆ ಅವರನ್ನು ನೇಮಕ ಮಾಡುವ ಬಗ್ಗೆ ಬರೆಯಲಾಗಿತ್ತು. ಜೊತೆಗೆ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರಂಗಳನ್ನು ಶ್ರೀಮಂತ ವ್ಯಕ್ತಿಗಳು ನಿಯಂತ್ರಿಸುವುದಕ್ಕೆ ನಿರ್ಬಂಧ ಹೇರಬೇಕು ಎಂದು ಪ್ರಕಟವಾಗಿತ್ತು.

    ಬೇರೆ ಪತ್ರಿಕೆಯಲ್ಲಿ ಈ ಅಂಕಣ ಪ್ರಕಟವಾಗಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಈಗ ಈ ವಿಚಾರ ಭಾರೀ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಒಂದೇ ಬಾರಿಗೆ 32 ಜನರಿಗೆ ವಾಯ್ಸ್ ಕಾಲ್ – ಹೀಗಿವೆ ವಾಟ್ಸಪ್‌ನ 4 ಹೊಸ ಫೀಚರ್ಸ್


    ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯನ್ನು ನ್ಯಾಶ್‌ ಹೋಲ್ಡಿಂಗ್ಸ್‌ ಕಂಪನಿ 2013 ರಲ್ಲಿ 250 ದಶಲಕ್ಷ ಡಾಲರ್‌ ನೀಡಿ ಖರೀದಿಸಿದೆ. ನ್ಯಾಶ್‌ ಹೋಲ್ಡಿಂಗ್ಸ್‌ ಕಂಪನಿಯ ಮಾಲೀಕ ಬೇರೆ ಯಾರು ಅಲ್ಲ. ಸದ್ಯ ವಿಶ್ವದ ನಂಬರ್‌ 2 ಶ್ರೀಮಂತ, ಅಮೆಜಾನ್‌ ಮುಖ್ಯಸ್ಥ ಜೆಫ್‌ ಬೆಜೋಸ್‌ ನ್ಯಾಶ್‌ ಹೋಲ್ಡಿಂಗ್ಸ್‌ ಕಂಪನಿಯ ಮುಖ್ಯಸ್ಥರಾಗಿದ್ದಾರೆ.

    ಜೆಫ್‌ ಬೆಜೋಸ್‌ ಮಾಲೀಕತ್ವದ ಕಂಪನಿಯ ಪತ್ರಿಕೆಯಲ್ಲಿ ತನ್ನ ವಿರುದ್ಧ ಟ್ವಿಟ್ಟರ್‌ ಕುರಿತಾಗಿ ಸರಣಿ ಬರಹಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಮಸ್ಕ್‌ ಈಗ ಟ್ವಿಟ್ಟರ್‌ ಕಂಪನಿಯನ್ನೇ ಖರೀದಿಸಲು ಮುಂದಾಗಿದ್ದಾರೆ ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ.

     Tell that to Jeff Bezos, you know Amazon, The Washington Post buyer/owner. But I guess Musk owning a Free Speech Platform might cause you fear! pic.twitter.com/mZHnsBWXyK

    ಕ್ಯಾಪಿಟಲ್‌ ಹಿಲ್‌ ಘಟನೆಯ ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಗೆ ಟ್ವಿಟ್ಟರ್‌ ಸಂಪೂರ್ಣ ನಿಷೇಧ ಹೇರಿತ್ತು. ಈ ವಿಚಾರ ಚರ್ಚೆ ಆಗುತ್ತಿದ್ದಾಗ ಮಸ್ಕ್‌ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಹತ್ತಿಕ್ಕಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಯಶಸ್ವಿ ಉದ್ಯಮಿಯಾಗಿರುವ ಮಸ್ಕ್‌ ಟ್ವಿಟ್ಟರ್‌ ಅನ್ನು ದೊಡ್ಡ ಕಂಪನಿಯನ್ನಾಗಿ ಮಾಡಲು ಮುಂದಾಗಿದ್ದಾರೆ. ಆದರೆ ಅವರ ಮಾತಿಗೆ ಟ್ವಿಟ್ಟರ್‌ ಬೋರ್ಡ್‌ನಿಂದ ಸರಿಯಾಗಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಈಗ ಟ್ವಿಟ್ಟರ್‌ ಕಂಪನಿಯನ್ನೇ ಖರೀದಿ ಮಾಡಲು ಮುಂದಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್

    ಮಸ್ಕ್‌ ಹೇಳಿದ್ದೇನು?
    ಮುಕ್ತ ಅಭಿವ್ಯಕ್ತಿಗೆ ಜಗತ್ತಿನ ಎಲ್ಲೆಡೆ ವೇದಿಕೆಯಾಗಬಲ್ಲ ಶಕ್ತಿ ಟ್ವಿಟ್ಟರ್‌ಗೆ ಇದೆ ಎಂಬ ನಂಬಿಕೆಯಿಂದ ನಾನು ಟ್ವಿಟ್ಟರ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಆದರೆ ಈಗ ಇರುವ ಸ್ವರೂಪದಲ್ಲಿದ್ದಾರೆ ಈ ಉದ್ದೇಶ ಈಡೇರುವುದಿಲ್ಲ ಮತ್ತು ಬೆಳೆಯುವುದಿಲ್ಲ. ಹೀಗಾಗಿ ಟ್ವಿಟ್ಟರ್‌ ಅನ್ನು ಖಾಸಗಿ ಕಂಪನಿಯನ್ನಾಗಿ ಪರಿವರ್ತಿಸಬೇಕು ಎಂದು ಟ್ವೀಟ್‌ ಮಾಡಿದ್ದರು.

    ಶೇ.9 ರಷ್ಟು ಷೇರು ಖರೀದಿಸಿದ ಬಳಿಕ ಮಸ್ಕ್‌ ಈಗ ಟ್ವಿಟ್ಟರ್‌ನ ದೊಡ್ಡ ಹೂಡಿಕೆದಾರರಾಗಿದ್ದಾರೆ. ಮಸ್ಕ್ ಮೈಕ್ರೋಬ್ಲಾಗಿಂಗ್ ಆಡಳಿತ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ ಬಳಿಕ ಗುರುವಾರ 41 ಬಿಲಿಯನ್ ಡಾಲರ್(ಸುಮಾರು 3 ಲಕ್ಷ ಕೋಟಿ ರೂ.)ಗೆ ಟ್ವಿಟ್ಟರ್‌ನ ಶೇ.100 ಪಾಲನ್ನು ಖರೀದಿಸುವಂತೆ ಕಂಪನಿಗೆ ಆಫರ್ ನೀಡಿದ್ದಾರೆ. ತನ್ನ ಖರೀದಿ ನಿರ್ಧಾರವನ್ನು ಅಮೆರಿಕದ ಸೆಕ್ಯೂರಿಟಿ ಆಂಡ್ ಎಕ್ಸ್ಚೇಂಜ್ ಕಮಿಷನ್‌ಗೆ ಮಸ್ಕ್ ತಿಳಿಸಿದ್ದಾರೆ.

    ಟ್ವಿಟ್ಟರ್‌ನ ಪ್ರತಿ ಷೇರಿಗೆ 54.20 ಡಾಲರ್‌ (₹4,124.81) ಕೊಡುವುದಾಗಿ ಎಲಾನ್‌ ಮಸ್ಕ್‌ ಷೇರುಪೇಟೆ ನಿಯಂತ್ರಣ ಮಂಡಳಿಗೆ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

  • ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್

    ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್

    ವಾಷಿಂಗ್ಟನ್: ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಮಸ್ಕ್‌ನ ಹೊಸ ಆವಿಷ್ಕಾರ ಆಟೋಮೊಬೈಲ್ ಹಾಗೂ ಸಾರಿಗೆ ವಲಯದಲ್ಲಿ ಭವಿಷ್ಯದ ಹೆಜ್ಜೆಯಾಗಲಿದೆ.

    ಎಲೋನ್ ಮಸ್ಕ್ ಇತ್ತೀಚೆಗೆ ಫ್ಯೂಚರಿಸ್ಟಿಕ್ ಸ್ವಯಂ ಚಾಲಿತ ರೋಬೋಟ್ಯಾಕ್ಸಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಸ್ವಯಂಚಾಲಿತ ಟ್ಯಾಕ್ಸಿಗಳು ಜನರ ಪ್ರಯಾಣವನ್ನು ಸುಲಭ ಹಾಗೂ ಪರಿಣಾಮಕಾರಿಯಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: E-ಸೈಕಲ್ ಖರೀದಿಗೆ ಬಂಪರ್ ಆಫರ್ ಕೊಟ್ಟ ದೆಹಲಿ ಸರ್ಕಾರ : ಯಾರಿಗೆ ಸಿಗುತ್ತೆ?

    2019ರಲ್ಲಿ ಮಸ್ಕ್ ಟೆಸ್ಲಾ ಸಂಪೂರ್ಣ ಸ್ವಯಂಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ತಿಳಿಸಿದ್ದರು. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ವಿಶ್ವದ ಶ್ರೀಮಂತ, ಈ ಫ್ಯೂಚರಿಸ್ಟಿಕ್ ಕಾರುಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

    ಮಸ್ಕ್‌ನ ಹೊಸ ಕಾರುಗಳು ಉತ್ಪಾದನೆಯನ್ನು ಸರಳಗೊಳಿಸುವುದಾಗಿ ಹಾಗೂ ಕಾರುಗಳ ಮುಖ್ಯ 3 ಭಾಗಗಳ ಮೇಲೆ ಹೆಚ್ಚಿನ ಗಮನ ಹರಿಸಿರುವುದಾಗಿ ತಿಳಿಸಿದ್ದಾರೆ. ಮಸ್ಕ್ ಇದರೊಂದಿಗೆ ಹೊಸದಾಗಿ ಮಾನವರೂಪಿ ರೋಬೋಟ್ ಅನ್ನು ತಯಾರಿಸುವ ಬಗ್ಗೆಯೂ ಸುಳಿವು ನೀಡಿದ್ದಾರೆ. ಇದು ಮಾನವರು ಮಾಡುವ ಕೆಲಸಗಳಿಗೆ ಪರ್ಯಾಯವಾಗಿ ಬಳಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ

    ಎಲೋನ್ ಮಸ್ಕ್ ಇತ್ತೀಚೆಗೆ ಟ್ವಿಟ್ಟರ್‌ನ ಶೇ.9.2 ರಷ್ಟು ಪಾಲನ್ನು ಖರೀದಿ ಮಾಡಿರುವುದಾಗಿ ಘೋಷಿಸಿದ್ದರು. ಮಸ್ಕ್ ಟ್ವಿಟ್ಟರ್‌ನ ಪಾಲುದಾರನಾಗುತ್ತಿದ್ದಂತೆ ಹಲವು ಹೊಸ ಬದಲಾವಣೆಗಳು ಆಗುವ ಬಗ್ಗೆ ನೆಟ್ಟಿಗರು ಊಹಿಸಿದ್ದಾರೆ.

  • ಎರಡನೇ ಮಗುವನ್ನು ಸ್ವಾಗತಿಸಿದ ಎಲೋನ್ ಮಸ್ಕ್

    ಎರಡನೇ ಮಗುವನ್ನು ಸ್ವಾಗತಿಸಿದ ಎಲೋನ್ ಮಸ್ಕ್

    ನ್ಯೂಯಾರ್ಕ್: ಖ್ಯಾತ ಉದ್ಯಮಿ ಬಿಲಿಯನೇರ್ ಎಲೋನ್ ಮಸ್ಕ್ ಮತ್ತು ಗಾಯಕಿ ಹಾಗೂ ಗೀತರಚನೆಗಾರ್ತಿ ಗ್ರಿಮ್ಸ್ ಅವರು ಡಿಸೆಂಬರ್ 2021ರಲ್ಲಿ ಬಾಡಿಗೆ ಮೂಲಕ ತಮ್ಮ ಎರಡನೇ ಮಗುವನ್ನು ರಹಸ್ಯವಾಗಿ ಸ್ವಾಗತಿಸಿದ್ದಾರೆ.

    ಮಗುವಿನ ಪೂರ್ಣ ಹೆಸರು ಎಕ್ಸಾ ಡಾರ್ಕ್ ಸೈಡೆರೆಲ್, ಅಂತ ಗ್ರಿಮ್ಸ್ ಅವರು ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ಮಾಜಿ ದಂಪತಿ ತಮ್ಮ ಮಗುವಿಗೆ ‘ವೈ’ ಎಂದು ಅಡ್ಡಹೆಸರು ಇಟ್ಟಿದ್ದಾರೆ.

    ಗ್ರೀಮ್ಸ್ ಅವರು ಪೀಪಲ್ ಮ್ಯಾಗಜೀನ್‍ನ ವಿಶೇಷ ಸಂಚಿಕೆಯಲ್ಲಿ ಮಾತನಾಡುತ್ತಾ ತಮ್ಮ ಮಗಳ ವಿಶಿಷ್ಟ ಹೆಸರಿನ ಒಳ ಅರ್ಥವನ್ನು ವಿವರಿಸಿದರು. ಎಕ್ಸಾ ಡಾರ್ಕ್ ಸೈಡೆರೆಲ್ ಎಂದರೆ ಎಕ್ಸಾ ಸೂಪರ್ ಕಂಪ್ಯೂಟಿಂಗ್ ಪದವಾದ ಎಕ್ಸಾಫೆÇ್ಲೀಪ್ಸ್ ಅನ್ನು ಸೂಚಿಸುತ್ತದೆ. ಆದರೆ ಡಾರ್ಕ್ ಎಂಬ ಪದ ‘ಅಜ್ಞಾತ’ ವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.

    ಜನರು ಈ ಹೆಸರಿಗೆ ಭಯಪಡುತ್ತಾರೆ. ಆದರೆ ನಿಜವಾಗಿಯೂ ಇದು ಫೋಟಾನ್‍ಗಳ ಅನುಪಸ್ಥಿತಿಯಾಗಿದೆ. ಡಾರ್ಕ್‍ನ ಒಳ ಅರ್ಥವೆನೆಂದರೆ ನಮ್ಮ ಬ್ರಹ್ಮಾಂಡದ ಸುಂದರವಾದ ರಹಸ್ಯವಾಗಿದೆ. ಈ ಸಂದರ್ಭದಲ್ಲಿ ತಮ್ಮ ಮಗಳ ಎರಡನೇ ಅಡ್ಡ ಹೆಸರಿನ ವಿಶೇಷತೆ ಬಗ್ಗೆ ತಿಳಿಸಿದ ಅವರು, ‘ವೈ’ ನ ಪೂರ್ಣ ಹೆಸರಿನ ಮೂರನೇ ಭಾಗವಾದ ‘ಸೈಡೆರೆಲ್’ ಅನ್ನು ಡೀಯರ್-ಈ-ಎಲ್ ಎಂದು ಉಚ್ಚರಿಸಲಾಗುತ್ತದೆ ಎಂದರು. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌, ಬುಲ್ಡೋಜರ್‌ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ

    ಸೈಡೆರೆಲ್ ಎಂಬ ಪದವು ಬ್ರಹ್ಮಾಂಡದ ನಿಜವಾದ ಸಮಯ, ನಕ್ಷತ್ರದ ಸಮಯ, ಆಳವಾದ ಬಾಹ್ಯಾಕಾಶ ಸಮಯ, ಆದರೆ ನಮ್ಮ ಸಂಬಂಧಿತ ಭೂಮಿಯ ಸಮಯವಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.

    ತಮ್ಮ ಮಗಳಿಗೆ ಒಡಿಸ್ಸಿಯಸ್ ಮಸ್ಕ್ ಎಂದು ಹೆಸರಿಸಲು ಪ್ರಯತ್ನಿಸಿದ್ದರಂತೆ. ಏಕೆಂದರೆ ಒಡಿಸ್ಸಿಯಸ್ ಎಂಬ ಹೆಸರಿಡುವುದು ನನ್ನ ಕನಸಾಗಿತ್ತು. ಆದಾಗ್ಯೂ ನಾನು ಮಗಳಿಗೆ ಎಕ್ಸಾ ಡಾರ್ಕ್ ಸೈಡೆರೇಲ್ ಎಂಬ ಹೆಸರನ್ನು ಇಟ್ಟಿದ್ದೇನೆ ಎಂದು ಗ್ರೀಮ್ಸ್ ತಿಳಿಸಿದ್ದಾರೆ.

    ಗ್ರಿಮ್ಸ್‍ಗೆ ಈಗಾಗಲೇ 22 ತಿಂಗಳ ಮಗು ಇದ್ದು, ಟೆಸ್ಲಾ ಕಂಪನಿಯ ಮಾಲಿಕರಾದ ಎಲೋನ್ ಮಸ್ಕ್ ಜೊತೆ ಮೂರು ವರ್ಷಗಳ ನಂತರ ಇಬ್ಬರೂ ಸೆಪ್ಟೆಂಬರ್ 2021ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದರು. ಆದರೆ ಇವರಿಬ್ಬರು ಮತ್ತೆ ಒಂದಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದನ್ನೂ ಓದಿ: ಪಂಚರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ರಾಜ್ಯಕ್ಕೆ ಬರಲಿದ್ದಾರೆ ಮೋದಿ – ಕಲಬುರಗಿಗೆ ಯಾಕೆ?

    ಪ್ರತ್ಯೇಕತೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಬಹುಶಃ ಅವನನ್ನು ನನ್ನ ಗೆಳೆಯ ಎಂದು ಹೇಳಿಕೊಳ್ಳತ್ತೆನೆ. ಆದರೆ ನಾವು ತುಂಬಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ನಾವು ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತೇವೆ. ಅದಲ್ಲದೆ ನಾವು ಉತ್ತಮ ಸ್ನೇಹಿತರು. ನಾವು ಯಾವಾಗಲೂ ಒಬ್ಬರನ್ನೊಬ್ಬರು ನೋಡುತ್ತಲೇ ಇರುತ್ತೇವೆ. ನಾವು ನಮ್ಮದೇ ಆದ ವಿಷಯವನ್ನು ಹೊಂದಿದ್ದೇವೆ. ಇತರ ಜನರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ ಎಂದರು.

    ಮುಂಬರುವ ದಿನಗಳಲ್ಲಿ ಇವರಿಬ್ಬರು ಹೆಚ್ಚಿನ ಮಕ್ಕಳನ್ನು ಬೆಳೆಸಲು ಯೋಜಿಸಿದ್ದೇವೆ ಎಂದು ಪ್ರಕಟಣೆಗೆ ತಿಳಿಸಿದ್ದು, ನಾವು ಯಾವಾಗಲೂ ಕನಿಷ್ಠ ಮೂರು ಅಥವಾ ನಾಲ್ಕು ಮಕ್ಕಳನ್ನು ಬಯಸುತ್ತಿದ್ದೇವು ಎಂದು ತಿಳಿಸಿದರು.

  • ಟೆಸ್ಲಾ ಕಾರು ಬಗ್ಗೆ ಅಪ್‍ಡೇಟ್ – ಮಸ್ಕ್ ಒತ್ತಡ ತಂತ್ರಗಳಿಗೆ ಬಗ್ಗಲ್ಲ ಎಂದ ಕೇಂದ್ರ

    ಟೆಸ್ಲಾ ಕಾರು ಬಗ್ಗೆ ಅಪ್‍ಡೇಟ್ – ಮಸ್ಕ್ ಒತ್ತಡ ತಂತ್ರಗಳಿಗೆ ಬಗ್ಗಲ್ಲ ಎಂದ ಕೇಂದ್ರ

    ವಾಷಿಂಗ್ಟನ್: ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಭಾರತಕ್ಕೆ ಟೆಸ್ಲಾ ಕಾರು ಮಾರಾಟದ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ. ಭಾರತೀಯ ಟ್ವಿಟ್ಟರ್ ಬಳಕೆದಾರನೊಬ್ಬನ ಪ್ರಶ್ನೆಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡುವ ಮೂಲಕ ಟೆಸ್ಲಾ ಕಾರುಗಳನ್ನು ಮಾರಾಟ ಮಾಡುವ ಬಗ್ಗೆ ಅಪ್‍ಡೇಟ್ ನೀಡಿದ್ದಾರೆ.

    ಎಲೋನ್ ಮಸ್ಕ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆ ಕುರಿತು ಗುರುವಾರ ತಿಳಿಸಿದ್ದಾರೆ. ಟೆಸ್ಲಾ ಕಂಪನಿ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಕಂಪನಿ ಈ ಯೋಜನೆಯ ಕುರಿತಾಗಿ ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜೀನಾಮೆ

    ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಮಸ್ಕ್ ಉತ್ಸುಕರಾಗಿದ್ದಾರೆ. ಆದರೆ ಸರ್ಕಾರದ ಆಮದು ಸುಂಕ ಜಾಸ್ತಿ ವಿಧಿಸಿದ್ದರಿಂದ ಟೆಸ್ಲಾಗೆ ಹಿನ್ನಡೆಯಾಗಿದೆ.

    ಮಸ್ಕ್ ಟ್ವೀಟ್‍ಗೆ ವಿರೋಧ:
    ಎಲೋನ್ ಮಸ್ಕ್ ಅವರ ಈ ಟ್ವೀಟ್‍ಗೆ ಸರ್ಕಾರ ಸಿಟ್ಟಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಎಲೋನ್ ಮಸ್ಕ್ ಸರ್ಕಾರಕ್ಕೆ ಒತ್ತಡ ಹೇರಲು ಮುಂದಾಗಿದ್ದಾರೆ. ಟೆಸ್ಲಾ ಕಾರುಗಳ ಮೇಲಿರುವ ಆಮದು ಸುಂಕವನ್ನು ಕಡಿಮೆ ಮಾಡಲು ಈ ತಂತ್ರ ಅನುಸರಿಸುತ್ತಿದ್ದಾರೆ. ಇಂತಹ ಒತ್ತಡಗಳಿಗೆ ಸರ್ಕಾರ ಮಣಿಯುವುದಿಲ್ಲ. ಟೆಸ್ಲಾ ಸ್ಥಳೀಯವಾಗಿ ಕಾರುಗಳನ್ನು ಉತ್ಪಾದಿಸಿದರೆ ಮಾತ್ರವೇ ಪ್ರಯೋಜನ ಪಡೆಯಲು ಸಾಧ್ಯ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲೇ ಟೆಸ್ಲಾ ಕಾರು ಉತ್ಪಾದನಾ ಘಟಕ: ಸಿಎಂ ಬಿಎಸ್‌ವೈ ಅಧಿಕೃತ ಪ್ರಕಟ

    ಟೆಸ್ಲಾ ಚೀನಾದಲ್ಲಿ ದೊಡ್ಡ ಫ್ಯಾಕ್ಟರಿ ತೆರೆದಿದ್ದು ಏಷ್ಯಾ ಖಂಡದ ದೇಶಗಳಿಗೆ ಇಲ್ಲಿಂದ ಕಾರುಗಳನ್ನು ರಫ್ತು ಮಾಡಲು ಮುಂದಾಗಿತ್ತು. ಇದಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಭಾರತದಲ್ಲಿ ಕಾರನ್ನು ಟೆಸ್ಲಾ ಉತ್ಪಾದಿಸಬೇಕು. ಚೀನಾ ದೇಶದಲ್ಲಿ ಉತ್ಪಾದನೆಯಾದ ಕಾರನ್ನು ಭಾರತದಲ್ಲಿ ಮಾರಾಟ ಮಾಡಬಾರದು. ಇಲ್ಲಿ ಘಟಕ ತೆರೆಯಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಈ ಹಿಂದೆ ತಿಳಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಸ್ಲಾ ಘಟಕ – ಯಾವ ಕಾರು ಬಿಡುಗಡೆಯಾಗಬಹುದು? ಬೆಲೆ ಎಷ್ಟು?

    ಕೆಲ ದಿನಗಳ ಹಿಂದೆ ಎಲೋನ್ ಮಸ್ಕ್ ಅವರ ಸ್ಟಾರ್‍ಲಿಂಕ್ ಕಂಪನಿ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‍ನೆಟ್ ಸೇವೆ ನೀಡಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರ ಕಂಪನಿ ಈ ಯೋಜನೆ ಜಾರಿ ಸಂಬಂಧ ಯಾವುದೇ ಮಾತುಕತೆ ನಡೆಸಿಲ್ಲ. ಹೀಗಾಗಿ ಈ ಸೇವೆ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿತ್ತು.

  • ಕರ್ನಾಟಕದಲ್ಲೇ ಟೆಸ್ಲಾ ಕಾರು ಉತ್ಪಾದನಾ ಘಟಕ: ಸಿಎಂ ಬಿಎಸ್‌ವೈ ಅಧಿಕೃತ ಪ್ರಕಟ

    ಕರ್ನಾಟಕದಲ್ಲೇ ಟೆಸ್ಲಾ ಕಾರು ಉತ್ಪಾದನಾ ಘಟಕ: ಸಿಎಂ ಬಿಎಸ್‌ವೈ ಅಧಿಕೃತ ಪ್ರಕಟ

    – ತುಮಕೂರು ಜಿಲ್ಲೆಯಲ್ಲಿ ಘಟಕ ಸ್ಥಾಪನೆ
    – ಘಟಕ ಸ್ಥಾಪನೆಗೆ 7,725 ಕೋಟಿ ರೂ. ಹೂಡಿಕೆ

    ಬೆಂಗಳೂರು: ಅತ್ಯಾಧುನಿಕ, ಐಷಾರಾಮಿ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಟೆಸ್ಲಾ ಕರ್ನಾಟಕದಲ್ಲಿ ತನ್ನ ಉತ್ಪದನಾ ಘಟಕವನ್ನು ತೆರೆಯಲಿದೆ.

    ಹೌದು. ಉದ್ಯಮಿ ಎಲಾನ್‌ ಮಸ್ಕ್‌ ಮಾಲೀಕತ್ವದ ಟೆಸ್ಲಾ ಕಂಪನಿ ಕರ್ನಾಟಕದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಅಧಿಕೃತವಾಗಿ  ಪ್ರಕಟಿಸಿದ್ದಾರೆ.

    ಈಗಾಗಲೇ ಬೆಂಗಳೂರಿನ ಬಿಡದಿಯಲ್ಲಿ ಜಪಾನಿನ ಟೊಯೋಟಾ ಕಂಪನಿ ತನ್ನ ಉತ್ಪಾದನಾ ಘಟಕವನ್ನು ತೆರೆದಿದೆ. ಈಗ ಅಮೆರಿಕದ ಟೆಸ್ಲಾ ಸಹ ಕರ್ನಾಟಕವನ್ನು ಆಯ್ಕೆ ಮಾಡಿದ್ದು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗವಕಾಶ ಸೃಷ್ಟಿಯಾಗಲಿದೆ.

    ಕೇಂದ್ರ ಬಜೆಟ್‌ ಅನ್ನು ಸ್ವಾಗತಿಸುವ ಕುರಿತು ಯಡಿಯೂರಪ್ಪ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದು, ಅದರಲ್ಲಿ ಟೆಸ್ಲಾ ಘಟಕ ಸ್ಥಾಪನೆಯ ಬಗ್ಗೆ ಪ್ರಸ್ತಾಪವಿದೆ. ಬೆಂಗಳೂರು ಸಮೀಪದ ತುಮಕೂರು ಜಿಲ್ಲೆಯಲ್ಲಿ 7,725 ಕೋಟಿ ರೂ. ವೆಚ್ಚದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ತೆರೆಯಲಿದೆ.

    ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಡಿಸೆಂಬರ್‌ ಕೊನೆಯಲ್ಲಿ 2021ರ ಮೊದಲಾರ್ಧದಲ್ಲಿ ಭಾರತದ ಕಾರು ಮಾರುಕಟ್ಟೆಗೆ ಟೆಸ್ಲಾ ಕಂಪನಿಯ ಕಾರು ಬರಲಿದೆ. ಅಮೆರಿಕದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯು ಭಾರತದಲ್ಲಿ ಮಾರಾಟವನ್ನು ಪ್ರಾರಂಭಿಸುತ್ತದೆ. ನಂತರ ಬೇಡಿಕೆಯ ಅನುಸಾರವಾಗಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ತಯಾರಿಕೆಗೆ ಮುಂದಾಗಲಿದೆ ಎಂಬುದಾಗಿ ತಿಳಿಸಿದ್ದರು.

    ಈ ಹೇಳಿಕೆಯ ಬೆನ್ನಲ್ಲೇ ಎಲ್ಲಿ ಟೆಸ್ಲಾ ತನ್ನ ಘಟಕವನ್ನು ತೆರೆಯಲಿದೆ ಎಂಬ ಪ್ರಶ್ನೆ ಎದ್ದಿತ್ತು.  ಜ.8 ರಂದು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ʼಟೆಸ್ಲಾ ಇಂಡಿಯಾ ಮೋಟಾ​ರ್ಸ್‌ʼ ಹೆಸರಿನಲ್ಲಿ ಕಂಪನಿಯನ್ನು ನೋಂದಣಿ ಮಾಡುವ ಜೊತೆಗೆ ಮೂರು ನಿರ್ದೇಶಕರನ್ನೂ ನೇಮಿಸಲಾಗಿದೆ ಎಂದು ವರದಿಯಾಗಿತ್ತು.

    ಕರ್ನಾಟಕದಲ್ಲಿ ಕಂಪನಿ ತೆರೆಯುವ ಸುದ್ದಿ ಪ್ರಕಟವಾಗುತ್ತಿದ್ದಂತೆ ಗುಜರಾತ್‌, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ನಮ್ಮ ರಾಜ್ಯದಲ್ಲಿ ಘಟಕ ತೆರೆಯುವಂತೆ ಕೇಳಿಕೊಂಡಿತ್ತು. ಅಷ್ಟೇ ಅಲ್ಲದೇ ನಮ್ಮ ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ನೆರವಾಗಲು ಸರ್ಕಾರಗಳು ನೀಡುವ ಸೌಲಭ್ಯಗಳ ಮಾಹಿತಿಯನ್ನು ನೀಡಿವೆ ಎಂದು ವರದಿಯಾಗಿತ್ತು. ಟೆಸ್ಲಾ ಕಂಪನಿಗೆ ಘಟಕ ಸ್ಥಾಪಿಸಲು ಕರ್ನಾಟಕ ಸರ್ಕಾರವು ಬೆಂಗಳೂರು, ತುಮಕೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಜಾಗ ನೀಡುವ ಪ್ರಸ್ತಾಪ ಸಲ್ಲಿಸಿತ್ತು.

    ಪರಿಸರ ಸ್ನೇಹಿ ವಾಹನಗಳನ್ನು ಹೊಂದುವುದರಲ್ಲಿ ಭಾರತದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ. ಟೆಸ್ಲಾ ಕಂಪನಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವನ್ನು ಶೀಘ್ರವೇ ಆರಂಭಿಸಲಿದೆ. ಭಾರತ ಹಾಗೂ ಕರ್ನಾಟಕಕ್ಕೆ ಆಗಮಿಸುತ್ತಿರುವ ಎಲೋನ್‌ ಮಸ್ಕ್‌ಗೆ ಸ್ವಾಗತ ಎಂದು ಸಿಎಂ ಯಡಿಯೂರಪ್ಪ ಅಂದು ಟ್ವೀಟ್‌ ಮಾಡಿದ್ದರು.

    2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಎಲೋನ್ ಮಸ್ಕ್ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಟೆಸ್ಲಾ ಯಾವ ಕಾರನ್ನು ಬಿಡುಗಡೆ ಮಾಡಬಹುದು ಎಂಬುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಆದರೆ ಮಾಡೆಲ್‌ 3 ಸೆಡಾನ್‍ ಕಾರು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಈ ಕಾರಿನ ಬೆಲೆ 55 ರಿಂದ 60 ಲಕ್ಷ ಎಂದು ನಿರೀಕ್ಷಿಸಲಾಗಿದ್ದು ಮುಂದಿನ ತಿಂಗಳು ಭಾರತದಲ್ಲಿ ಬುಕ್ಕಿಂಗ್ ಪ್ರಾರಂಭವಾಗುವ ಸಾಧ್ಯತೆಯಿದೆ. ಐಷಾರಾಮಿ ಕಾರುಗಳಿಗೆ ಹೆಸರಾದ ಮರ್ಸಿಡಿಸ್‌ ಬೆಂಜ್‌ ಕಾರುಗಳಿಗೆ ಟೆಸ್ಲಾ ಕಂಪನಿಯ ಕಾರುಗಳು ಸ್ಪರ್ಧೆ ನೀಡುತ್ತಿವೆ.

    ಮಾಡೆಲ್‌ 3 ವಿಶೇಷತೆ ಏನು?
    ಇಲ್ಲಿಯವರೆಗೆ ಟೆಸ್ಲಾ ಬಿಡುಗಡೆ ಮಾಡಿದ ಕಾರುಗಳ ಪೈಕಿ ಅತ್ಯಂತ ಒಳ್ಳೆಯ ಮಾದರಿ ಇದಾಗಿದ್ದು, ಈ ಕಾರನ್ನು 2017ರಲ್ಲಿ ವಿಶ್ವದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ ಈ ಕಾರಿಗೆ ಪಡೆದುಕೊಂಡಿದೆ. ಎರಡು ಮಾದರಿಯಲ್ಲಿ ಮಾಡೆಲ್ 3 ಕಾರು ಬಿಡುಗಡೆಯಾಗಿದೆ. ಲಾಂಗ್ ರೇಂಜ್ ಮಾದರಿಯ ಕಾರು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಕ್ರಮಿಸಿದರೆ, ಸ್ಟಾಡಂರ್ಡ್ ಮಾದರಿಯ ಕಾರು 354 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. 15 ನಿಮಿಷದಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಗರಿಷ್ಟ 162 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಕಾರಿಗಿದೆ.

  • ಮಸ್ಕ್‌ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಬಳಸಿದರೆ ರಷ್ಯಾದಲ್ಲಿ ದಂಡ

    ಮಸ್ಕ್‌ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಬಳಸಿದರೆ ರಷ್ಯಾದಲ್ಲಿ ದಂಡ

    ಮಾಸ್ಕೋ: ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾದ ಸ್ಥಾಪಕ ಎಲೋನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಬಳಸುವ ಜನರ ಮೇಲೆ ರಷ್ಯಾ ಸರ್ಕಾರ ದಂಡ ವಿಧಿಸುವ ಸಾಧ್ಯತೆಯಿದೆ.

    ಸ್ಪೇಸ್‌ ಎಕ್ಸ್‌ ಸ್ಟಾರ್‌ಲಿಂಕ್‌ ಸರ್ವಿಸ್‌, ಒನ್‌ವೆಬ್‌ ಅಲ್ಲದೇ ರಷ್ಯಾ ಉಪಗ್ರಹ ಹೊರತಾದ ವಿದೇಶಿ ಉಪಗ್ರಹ ಬಳಸಿ ಇಂಟರ್‌ನೆಟ್‌ ಬಳಕೆಗೆ ನಿರ್ಬಂಧ ಹೇರುವ ಸಂಬಂಧ ಕಾನೂನು ತರಲು ರಷ್ಯಾ ಸರ್ಕಾರ ಮುಂದಾಗಿದೆ. ಈ ಉಪಗ್ರಹ ಇಂಟರ್‌ನೆಟ್‌ಗಳಿಂದ ದೇಶಕ್ಕೆ ಭವಿಷ್ಯದಲ್ಲಿ ಬೆದರಿಕೆಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ನಿಷೇಧ ಹೇರಲು ಮುಂದಾಗಿದೆ.

    ರಷ್ಯಾ ಮಾಧ್ಯಮಗಳಲ್ಲಿ ಪ್ರಕಟವಾದಂತೆ ಸಾಮಾನ್ಯ ಜನರು ವಿದೇಶಿ ಉಪಗ್ರಹಗಳ ಇಂಟರ್‌ನೆಟ್‌ ಬಳಕೆ ಮಾಡಿದರೆ 135 ಡಾಲರ್‌ನಿಂದ 405 ಡಾಲರ್‌(ಅಂದಾಜು 9 ಸಾವಿರದಿಂದ 29 ಸಾವಿರ ರೂ.), ಕಂಪನಿಗಳು ಬಳಕೆ ಮಾಡಿದರೆ 6,750 ಡಾಲರ್‌ ನಿಂದ 13,500( ಅಂದಾಜು 4.90 ಲಕ್ಷದಿಂದ 9.84 ಲಕ್ಷ ರೂ.) ದಂಡ ವಿಧಸುವ ಸಾಧ್ಯತೆಯಿದೆ.

    ರಷ್ಯಾದ ನಿರ್ಧಾರಕ್ಕೆ ಎಲೋನ್‌ ಮಸ್ಕ್‌ ಪ್ರತಿಕ್ರಿಯಿಸಿ, ನಾವು ಜನರನ್ನು ಮಂಗಳ ಗ್ರಹಕ್ಕೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಸಹಾಯ ಮಾಡುವವರನ್ನು ಪ್ರಶಂಸಿಸುತ್ತೇವೆ ಎಂದು ಹೇಳಿದ್ದಾರೆ.

    ಸ್ಪೇಸ್‌ ಎಕ್ಸ್‌ ಕಂಪನಿ ತನ್ನ ಫಾಲ್ಕನ್‌ 9 ರಾಕೆಟ್‌ನಿಂದ 944 ಉಪಗ್ರಹವನ್ನು ಉಡಾವಣೆ ಮಾಡಿದೆ. ಒಟ್ಟು 42 ಸಾವಿರ ಸ್ಟಾರ್‌ಲಿಂಕ್‌ ಉಪಗ್ರಹವನ್ನು ಉಡಾವಣೆ ಮಾಡಿ ವಿಶ್ವಕ್ಕೆ ಸೂಪರ್‌ ಫಾಸ್ಟ್‌ ಇಂಟರ್‌ನೆಟ್‌ ನೀಡುವ ಮಹತ್ವದ ಯೋಜನೆಗೆ ಮಸ್ಕ್‌ ಕೈ ಹಾಕಿದ್ದಾರೆ.

  • ಸೂಪರ್‌ ಟೆಕ್ನಾಲಜಿ ಅಭಿವೃದ್ಧಿ ಪಡಿಸಿದವರಿಗೆ 729 ಕೋಟಿ ಬಹುಮಾನ ಘೋಷಿಸಿದ ಮಸ್ಕ್‌

    ಸೂಪರ್‌ ಟೆಕ್ನಾಲಜಿ ಅಭಿವೃದ್ಧಿ ಪಡಿಸಿದವರಿಗೆ 729 ಕೋಟಿ ಬಹುಮಾನ ಘೋಷಿಸಿದ ಮಸ್ಕ್‌

    ವಾಷಿಂಗ್ಟನ್‌: ಶತಕೋಟ್ಯಧಿಪತಿ, ವಿಶ್ವದ ನಂಬರ್‌ 2 ಶ್ರೀಮಂತ ಉದ್ಯಮಿ, ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಕಂಪನಿಯ ಸ್ಥಾಪಕ ಎಲೋನ್‌ ಮಸ್ಕ್‌ ಸೂಪರ್‌ ಪವರ್‌ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಿದವರಿಗೆ 100 ದಶಲಕ್ಷ ಅಮೆರಿಕನ್‌ ಡಾಲರ್‌(ಅಂದಾಜು 729 ಕೋಟಿ ರೂ.) ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ.

    ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಸೆರೆಹಿಡಿಯುವ ಅತ್ಯುತ್ತಮ ತಂತ್ರಜ್ಞಾನವನ್ನು ಕಂಡುಹಿಡಿದವರಿಗೆ 100 ದಶಲಕ್ಷ ಡಾಲರ್‌ ಹಣವನ್ನು ನೀಡುತ್ತೇನೆ ಎಂದು ಮಸ್ಕ್‌ ಟ್ವೀಟ್‌ ಮಾಡಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ ಮುಂದಿನ ವಾರ ವಿವರ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಸ್ಲಾ ಘಟಕ – ಯಾವ ಕಾರು ಬಿಡುಗಡೆಯಾಗಬಹುದು? ಬೆಲೆ ಎಷ್ಟು? 

    ಎಲೆಕ್ಟ್ರಿಕ್‌ ಕಾರು ತಯಾರಿಸುವ ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಏರಿಕೆಯಾಗಿದ್ದ ಕಾರಣ ಕೆಲ ದಿನಗಳ ಹಿಂದೆ ಮಾಸ್ಕ್‌ ವಿಶ್ವದ ನಂಬರ್‌ 1 ಶತಕೋಟಿ ಉದ್ಯಮಿಯಾಗಿ ಹೊರ ಹೊಮ್ಮಿದ್ದರು.

    2020ರ ಜನವರಿಯಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಎಲೋನ್‌ ಮಸ್ಕ್‌ ಈ ಜಾಗತಿಕ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದರು. ಕಳೆದ ಒಂದು ವರ್ಷದಲ್ಲಿ ಮಸ್ಕ್‌ ಸಂಪತ್ತು 150 ಶತಕೋಟಿ ಡಾಲರ್‌ ಹೆಚ್ಚಳವಾಗಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಪತ್ತು ಹೆಚ್ಚಿಸಿಕೊಂಡ ವಿಶ್ವದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆಗೆ ಮಸ್ಕ್‌ ಪಾತ್ರವಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪ್ರತಿ ಗಂಟೆಗೆ 17.36 ದಶಲಕ್ಷ ಡಾಲರ್‌(ಅಂದಾಜು 127 ಕೋಟಿ ರೂ.) ಸಂಪತ್ತು ಗಳಿಸಿದ್ದರಿಂದ ಮಸ್ಕ್‌ ವಿಶ್ವದ ನಂಬರ್‌ 1 ಶ್ರೀಮಂತರಾಗಿ ಹೊರಹೊಮ್ಮಿದ್ದರು. ಕಳೆದ ಒಂದು ವರ್ಷದಲ್ಲಿ ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾದ ಷೇರು ಬೆಲೆ ಭಾರೀ ಏರಿಕೆ ಕಂಡಿದೆ. ಪ್ರಸ್ತುತ ಟೆಸ್ಲಾ ಕಂಪನಿಯಲ್ಲಿ ಮಸ್ಕ್‌ ಶೇ.20 ರಷ್ಟು ಷೇರುಗಳನ್ನು ಹೊಂದಿದ್ದಾರೆ.

    ಟೆಸ್ಲಾ ಕಂಪನಿಯ ಷೇರುಗಳು ಒಂದೇ ವರ್ಷದ ಅವಧಿಯಲ್ಲಿ ಶೇ. 743ರಷ್ಟು ಮೇಲೇರಿವೆ. ವಿಶೇಷ ಏನೆಂದರೆ ಟೆಸ್ಲಾ ಕಂಪನಿ 2020ರಲ್ಲಿ ಒಟ್ಟು 4,99,550 ಕಾರನ್ನು ಉತ್ಪಾದಿಸಿತ್ತು. ಹಾಗೆ ಲೆಕ್ಕ ಹಾಕಿದರೆ ಜಗತ್ತಿನ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಗಳಾದ ಜನರಲ್‌ ಮೋಟರ್ಸ್‌, ಫೋರ್ಡ್‌, ಟೊಯೋಟಾ, ಹೋಂಡಾ ಕಂಪನಿಗಳು ಒಂದೇ ತಿಂಗಳಿನಲ್ಲಿ ಈ ಪ್ರಮಾಣದ ಕಾರುಗಳನ್ನು ಉತ್ಪಾದಿಸುತ್ತಿವೆ. ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್‌ ಕಾರು ದುಬಾರಿಯಾಗಿದ್ದರೂ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆ ಬೇಡಿಕೆ ಹೆಚ್ಚಾಗಲಿದೆ. ಈ ಕಾರಣಕ್ಕೆ ಟೆಸ್ಲಾ ಷೇರುಗಳ ಬೆಲೆ ಏರಿಕೆಯಾಗುತ್ತಿದೆ.

  • ಗಂಟೆಗೆ 127 ಕೋಟಿ ಸಂಪತ್ತು – ಎಲೋನ್‌ ಮಸ್ಕ್‌ ವಿಶ್ವದ ನಂ.1 ಶ್ರೀಮಂತ

    ಗಂಟೆಗೆ 127 ಕೋಟಿ ಸಂಪತ್ತು – ಎಲೋನ್‌ ಮಸ್ಕ್‌ ವಿಶ್ವದ ನಂ.1 ಶ್ರೀಮಂತ

    – ಟೆಸ್ಲಾ 2020ರಲ್ಲಿ ಉತ್ಪಾದಿಸಿದ ಕಾರುಗಳ ಸಂಖ್ಯೆ 4.99 ಲಕ್ಷ
    – ಜೆಫ್‌ ಬೆಜೋಸ್‌ಗೆ 2ನೇ ಸ್ಥಾನ

    ವಾಷಿಂಗ್ಟನ್: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಅಮೆರಿಕದ ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಕಂಪನಿಯ ಸಂಸ್ಥಾಪಕ ಎಲೋನ್‌ ಮಸ್ಕ್‌ ಗಂಟೆಗೆ ಅಂದಾಜು 127 ಕೋಟಿ ರೂ. ಸಂಪತ್ತು ಗಳಿಸುತ್ತಿದ್ದಾರೆ.

    ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 49 ವರ್ಷದ ಎಲೋನ್‌ ಮಸ್ಕ್‌ ಈಗ ಅಮೇಜಾನ್‌ ಸಂಸ್ಥಾಪಕ ಜೆಫ್ ಬೆಜೋಸ್‌ರನ್ನು ಹಿಂದಿಕ್ಕಿದ್ದಾರೆ.

    2017ರಿಂದ ಜೆಫ್‌ ಬೆಜೋಸ್‌ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಈಗ ಮಸ್ಕ್‌ ಸಂಪತ್ತು 195 ಶತಕೋಟಿ ಡಾಲರ್‌( ಅಂದಾಜು 14,23,500 ಕೋಟಿ ರೂ.) ಏರಿಕೆಯಾಗಿದ್ದರೆ ಬಿಜೋಸ್‌ 185 ಶತಕೋಟಿ ಡಾಲರ್‌ ಇದೆ ಎಂದು ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ ತಿಳಿಸಿದೆ.

    2020ರ ಜನವರಿಯಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಎಲೋನ್‌ ಮಸ್ಕ್‌ ಈ ಜಾಗತಿಕ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದರು. ಕಳೆದ ಒಂದು ವರ್ಷದಲ್ಲಿ ಮಸ್ಕ್‌ ಸಂಪತ್ತು 150 ಶತಕೋಟಿ ಡಾಲರ್‌ ಹೆಚ್ಚಳವಾಗಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಪತ್ತು ಹೆಚ್ಚಿಸಿಕೊಂಡ ವಿಶ್ವದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆಗೆ ಮಸ್ಕ್‌ ಪಾತ್ರವಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪ್ರತಿ ಗಂಟೆಗೆ 17.36 ದಶಲಕ್ಷ ಡಾಲರ್‌(ಅಂದಾಜು 127 ಕೋಟಿ ರೂ.) ಸಂಪತ್ತು ಗಳಿಸಿದ್ದರಿಂದ ಮಸ್ಕ್‌ ವಿಶ್ವದ ನಂಬರ್‌ 1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾದ ಷೇರು ಬೆಲೆ ಭಾರೀ ಏರಿಕೆ ಕಂಡಿದೆ. ಮೊದಲ ಪಟ್ಟ ಸಿಕ್ಕಿದ ಹಿನ್ನೆಲೆಯಲ್ಲಿ ಶುಕ್ರವಾರ ಅಮೆರಿಕದ ಷೇರು ಮಾರುಕಟ್ಟೆ ನಾಸ್ಡಾಕ್‌ನಲ್ಲಿ ಒಂದು ಷೇರು ಬೆಲೆ 816 ಡಾಲರ್‌ (ಅಂದಾಜು 59 ಸಾವಿರ) ತಲುಪಿದೆ. ಇದು ಟೆಸ್ಲಾ ಇತಿಹಾಸದಲ್ಲಿ ದಾಖಲೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಟೆಸ್ಲಾ ಕಂಪನಿಯಲ್ಲಿ ಮಸ್ಕ್‌ ಶೇ.20 ರಷ್ಟು ಷೇರುಗಳನ್ನು ಹೊಂದಿದ್ದಾರೆ.

    ಟೆಸ್ಲಾ ಕಂಪನಿಯ ಷೇರುಗಳು ಒಂದೇ ವರ್ಷದ ಅವಧಿಯಲ್ಲಿ ಶೇ. 743ರಷ್ಟು ಮೇಲೇರಿವೆ. ವಿಶೇಷ ಏನೆಂದರೆ ಟೆಸ್ಲಾ ಕಂಪನಿ 2020ರಲ್ಲಿ ಒಟ್ಟು 4,99,550 ಕಾರನ್ನು ಉತ್ಪಾದಿಸಿತ್ತು. ಹಾಗೆ ಲೆಕ್ಕ ಹಾಕಿದರೆ ಜಗತ್ತಿನ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಗಳಾದ ಜನರಲ್‌ ಮೋಟರ್ಸ್‌, ಫೋರ್ಡ್‌, ಟೊಯೋಟಾ, ಹೋಂಡಾ ಕಂಪನಿಗಳು ಒಂದೇ ತಿಂಗಳಿನಲ್ಲಿ ಈ ಪ್ರಮಾಣದ ಕಾರುಗಳನ್ನು ಉತ್ಪಾದಿಸುತ್ತಿವೆ. ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್‌ ಕಾರು ದುಬಾರಿಯಾಗಿದ್ದರೂ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆ ಬೇಡಿಕೆ ಹೆಚ್ಚಾಗಲಿದೆ. ಈ ಕಾರಣಕ್ಕೆ ಟೆಸ್ಲಾ ಷೇರುಗಳ ಬೆಲೆ ಏರಿಕೆಯಾಗುತ್ತದೆ.

    ಅಮೆರಿಕದ ನಾಸಾ ಸ್ಪೇಸ್‌ ಎಕ್ಸ್‌ ಕಂಪನಿ ಅಭಿವೃದ್ದಿ ಪಡಿಸಿದ್ದ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಗಗನ ಯಾನಿಗಳನ್ನು ಕಳುಹಿಸಿಕೊಟ್ಟಿತ್ತು. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿ ರಂಗಕ್ಕೆ ಅವಕಾಶ ಕಲ್ಪಿಸಿತ್ತು.

  • ಭಾರತಕ್ಕೆ ಬರಲಿದೆ ಟೆಸ್ಲಾ : ಎಲೆಕ್ಟ್ರಿಕ್ ಕಾರಿನ ಬೆಲೆ ಎಷ್ಟಿರಬಹುದು?

    ಭಾರತಕ್ಕೆ ಬರಲಿದೆ ಟೆಸ್ಲಾ : ಎಲೆಕ್ಟ್ರಿಕ್ ಕಾರಿನ ಬೆಲೆ ಎಷ್ಟಿರಬಹುದು?

    ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೋಮವಾರ 2021ರ ಮೊದಲಾರ್ಧದಲ್ಲಿ ಭಾರತದ ಕಾರು ಮಾರುಕಟ್ಟೆಗೆ ಟೆಸ್ಲಾ ಕಂಪನಿಯ ಕಾರು ಬರಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲೇ ಟೆಸ್ಲಾ ಕಂಪನಿಯ ಮಾಡೆಲ್ 3 ಸೆಡಾನ್ ಕಾರಿನ ಬೆಲೆ 55 ರಿಂದ 60 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

    ಅಮೆರಿಕದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯು ಭಾರತದಲ್ಲಿ ಮಾರಾಟವನ್ನು ಪ್ರಾರಂಭಿಸುತ್ತದೆ. ನಂತರ ಬೇಡಿಕೆಯ ಅನುಸಾರವಾಗಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ತಯಾರಿಕೆಗೆ ಮುಂದಾಗಲಿದೆ ಎಂದು ಗಡ್ಕರಿ ತಿಳಿಸಿದ್ದರು.

    ಈ ಹೇಳಿಕೆಯ ಬೆನ್ನಲ್ಲೇ ಟೆಸ್ಲಾ ಪ್ರವೇಶವು ಭಾರತೀಯ ವಾಹನ ಉದ್ಯಮಕ್ಕೆ ಒಂದು ಪ್ರಮುಖ ಅಂಶವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟೆಸ್ಲಾದಂತಹ ಬ್ರ್ಯಾಂಡ್ ಭಾರತವನ್ನು ಪ್ರವೇಶಿಸಿದಾಗ ಸಾಮಾನ್ಯವಾಗಿ ಆ ಬ್ರ್ಯಾಂಡ್, ತಂತ್ರಜ್ಞಾನ ಮತ್ತು ವಿಶ್ವದಾದ್ಯಂತ ಗುರುತಿಸಲ್ಪಟ್ಟ ಕಾರಣದಿಂದಾಗಿ ಗ್ರಾಹಕರು ಅದರತ್ತ ಮಾರುಹೋಗುವುದು ಸಹಜ. ಮೊದ ಮೊದಲು ಟೆಸ್ಲಾ ಗ್ರಾಹಕರನ್ನು ಸೆಳೆದು ಎತ್ತರಕ್ಕೆ ಏರಬಹುದು. ಆದರೆ ನಂತರ ಜನರು ಅದರ ತಂತ್ರಜ್ಞಾನವನ್ನು ಗುರುತಿಸಲು ಪ್ರಾರಂಭಿಸುತ್ತಾರೆ ಎಂದು ಐಎಚ್‍ಎಸ್ ಮಾರ್ಕೆಟ್ ನಿರ್ದೇಶಕ ಪುನೀತ್ ಗುಪ್ತಾ ಹೇಳಿದ್ದಾರೆ.

    ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಬಳಸುವುದರಿಂದಾಗಿ ಭಾರತವು ಪ್ರಸ್ತುತ ಎದುರಿಸುತ್ತಿರುವ ತೈಲ ಆಮದಿನ ಅವಲಂಬನೆ ಕಡಿಮೆ ಆಗಬಹುದು ಮತ್ತು ವಾಹನ ಮಾಲಿನ್ಯವನ್ನು ತಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

    ಅದರಂತೆ ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಎಲೋನ್ ಮಾಸ್ಕ್ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. 2016ರಲ್ಲೇ ಈ ರೀತಿಯ ಘೋಷಣೆಯನ್ನು ಟೆಸ್ಲಾ ಮಾಡಿತ್ತು. ನಂತರ ಇದೀಗ ಮತ್ತೆ 2021ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಲಿದೆ ಎಂದು ತಿಳಿದು ಬಂದಿದೆ. ಅದರಂತೆ ಮಾಡೆಲ್ 3 ಸೆಡಾನ್‍ನ ಬೆಲೆ 55 ರಿಂದ 60 ಲಕ್ಷ ಎಂದು ನಿರೀಕ್ಷಿಸಲಾಗಿದ್ದು ಮುಂದಿನ ತಿಂಗಳು ಭಾರತದಲ್ಲಿ ಬುಕ್ಕಿಂಗ್ ಪ್ರಾರಂಭವಾಗಬಹುದು ಎಂದು ವರದಿಯಾಗಿದೆ.

     

    ಕಾರಿನ ವಿಶೇಷತೆಗಳು ಏನು?
    ಇಂದಿನ ವರೆಗೆ ಟೆಸ್ಲಾದಿಂದ ಬಿಡುಗಡೆ ಹೊಂದಿದ ಕಾರುಗಳಲ್ಲಿ ಅತ್ಯಂತ ಒಳ್ಳೆಯ ಮಾದರಿ ಇದಾಗಿದ್ದು, ಈ ಕಾರನ್ನು 2017ರಲ್ಲಿ ವಿಶ್ವದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ. ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ ಈ ಕಾರಿಗೆ ಪಡೆದುಕೊಂಡಿದೆ. ಎರಡು ಮಾದರಿಯಲ್ಲಿ ಮಾಡೆಲ್ 3 ಕಾರು ಬಿಡುಗಡೆಯಾಗಿದೆ. ಲಾಂಗ್ ರೇಂಜ್ ಮಾದರಿಯ ಕಾರು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಕ್ರಮಿಸಿದರೆ, ಸ್ಟಾಡಂರ್ಡ್ ಮಾದರಿಯ ಕಾರು 354 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. 15 ನಿಮಿಷದಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಗರಿಷ್ಟ 162 ಕೀ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಕಾರಿಗಿದೆ.