Tag: ಟೆಸ್ಲಾ

  • ಭಾರತದಲ್ಲಿ ಮೊದಲ ಟೆಸ್ಲಾ ಕಾರು ಮಾರಾಟ – ‘ಮಾಡೆಲ್‌ Y’ ಕಾರು ಖರೀದಿಸಿದ ಮಹಾರಾಷ್ಟ್ರ ಸಾರಿಗೆ ಸಚಿವ

    ಭಾರತದಲ್ಲಿ ಮೊದಲ ಟೆಸ್ಲಾ ಕಾರು ಮಾರಾಟ – ‘ಮಾಡೆಲ್‌ Y’ ಕಾರು ಖರೀದಿಸಿದ ಮಹಾರಾಷ್ಟ್ರ ಸಾರಿಗೆ ಸಚಿವ

    ಮುಂಬೈ: ಭಾರತದಲ್ಲಿ ಮೊದಲ ಟೆಸ್ಲಾ ಕಾರು (Tesla Car) ಮಾರಾಟವಾಗಿದೆ. ‘ಮಾಡೆಲ್‌ Y’ ಟೆಸ್ಲಾ ಕಾರನ್ನು ಸಚಿವರೊಬ್ಬರು ಖರೀದಿಸಿದ್ದಾರೆ.

    ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ‘ಟೆಸ್ಲಾ ಎಕ್ಸ್‌ಪೀರಿಯೆನ್ಸ್ ಸೆಂಟರ್’ನಿಂದ ಕಾರು ಮಾರಾಟವಾಗಿದೆ. ಮೊದಲ ಟೆಸ್ಲಾ (ಮಾದರಿ Y) ಕಾರನ್ನು ರಾಜ್ಯದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಭಾರತಕ್ಕೆ ಟೆಸ್ಲಾ ಎಂಟ್ರಿ | ಮೈಲೇಜ್‌ ಎಷ್ಟು? ಬೇರೆ ದೇಶದಲ್ಲಿ ದರ ಎಷ್ಟಿದೆ? ಭಾರತದಲ್ಲಿ ದುಬಾರಿ ಯಾಕೆ?

    ಭಾರತದಲ್ಲಿ ಮೊದಲನೆಯದಾದ ‘ಟೆಸ್ಲಾ ಎಕ್ಸ್‌ಪೀರಿಯೆನ್ಸ್ ಸೆಂಟರ್’ ಅನ್ನು ಜುಲೈ 15 ರಂದು ಉದ್ಘಾಟಿಸಲಾಗಿತ್ತು. ‘ಭಾರತದ ಮೊದಲ ಟೆಸ್ಲಾ ಕಾರು ಮಾಡೆಲ್ ವೈ ಖರೀದಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಮತ್ತು ಭಾರತದ ಮೊದಲ ಟೆಸ್ಲಾ ಕಾರಿನ ಮಾಲೀಕ ಪ್ರತಾಪ್ ಸರ್ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.

    ರಾಜ್ಯದ ಸಾರಿಗೆ ಸಚಿವನಾಗಿ, ನಾನು ಇದನ್ನು ಖರೀದಿಸಿದ್ದೇನೆ. ಮಹಾರಾಷ್ಟ್ರ ಸರ್ಕಾರ ಯಾವಾಗಲೂ ಪರಿಸರ ಸ್ನೇಹಿ ಕಾರುಗಳನ್ನು ರಸ್ತೆಗಳಿಗೆ ತರಲು ಪ್ರಯತ್ನಿಸುತ್ತದೆ. ಪರಿಸರ ಸ್ನೇಹಿ ವಾಹನಗಳನ್ನು ಸಾಧ್ಯವಾದಷ್ಟು ಬಳಸಲು ನಾನು ಈ ಸಾರ್ವಜನಿಕ ಜಾಗೃತಿ ಮೂಡಿಸುತ್ತೇನೆ. ಮುಂದಿನ 10 ವರ್ಷಗಳಲ್ಲಿ ರಸ್ತೆಗಳಲ್ಲಿ ಗರಿಷ್ಠ ಸಂಖ್ಯೆಯ ವಿದ್ಯುತ್ ವಾಹನಗಳನ್ನು ಹೊಂದಲು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಿದ್ಯುತ್ ವಾಹನ ತಯಾರಿಕಾ ಕಂಪನಿಗಳಿಗೆ ಎಲ್ಲಾ ಅನುಕೂಲಗಳನ್ನು ಒದಗಿಸಲು ಸಾರಿಗೆ ಇಲಾಖೆ ಪ್ರಯತ್ನಿಸುತ್ತಿದೆ. ಅಂತಹ ವಾಹನಗಳ ಮಾಲೀಕರಿಗೂ ನಾವು ಸೌಲಭ್ಯಗಳನ್ನು ಒದಗಿಸಿದ್ದೇವೆ ಎಂದಿದ್ದಾರೆ.

    ನಾನು ನನ್ನ ಮೊಮ್ಮಗನಿಗಾಗಿ ಈ ಕಾರನ್ನು ಖರೀದಿಸಿದ್ದೇನೆ. ಇದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡುತ್ತದೆ. ಕಾರನ್ನು ಖರೀದಿಸಲು ಶಕ್ತರಾಗಿರುವ ಪೋಷಕರು ತಮ್ಮ ಮಕ್ಕಳನ್ನು ಈ ಕಾರುಗಳಲ್ಲಿ ಶಾಲೆಗಳಿಗೆ ಬಿಟ್ಟರೆ ಪರಿಸರ ಸ್ನೇಹಿ ಕಾರುಗಳ ಬಗ್ಗೆ ಸಾರ್ವಜನಿಕ ಜಾಗೃತಿ ಇರುತ್ತದೆ. ಮಕ್ಕಳು ಇದರ ಬಗ್ಗೆ ಚರ್ಚಿಸುತ್ತಾರೆ. ಜನರು ಹೆಚ್ಚು ಹೆಚ್ಚು ಪರಿಸರ ಸ್ನೇಹಿ ಕಾರುಗಳನ್ನು ಖರೀದಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಟೆಸ್ಲಾ: 5 ಮಾಡೆಲ್‌ Y ವಾಹನಗಳು ಈಗಾಗಲೇ ಮುಂಬೈಗೆ ಎಂಟ್ರಿ

  • ಭಾರತಕ್ಕೆ ಟೆಸ್ಲಾ ಎಂಟ್ರಿ | ಮೈಲೇಜ್‌ ಎಷ್ಟು? ಬೇರೆ ದೇಶದಲ್ಲಿ ದರ ಎಷ್ಟಿದೆ? ಭಾರತದಲ್ಲಿ ದುಬಾರಿ ಯಾಕೆ?

    ಭಾರತಕ್ಕೆ ಟೆಸ್ಲಾ ಎಂಟ್ರಿ | ಮೈಲೇಜ್‌ ಎಷ್ಟು? ಬೇರೆ ದೇಶದಲ್ಲಿ ದರ ಎಷ್ಟಿದೆ? ಭಾರತದಲ್ಲಿ ದುಬಾರಿ ಯಾಕೆ?

    ಮುಂಬೈ: ವಿಶ್ವದ ಎಲೆಕ್ಟ್ರಿಕ್‌ ಕಾರು (Electric Car) ದಿಗ್ಗಜ ಕಂಪನಿ ಟೆಸ್ಲಾ (Tesla) ಭಾರತಕ್ಕೆ ಅಧಿಕೃತವಾಗಿ ಎಂಟ್ರಿಯಾಗಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಜಿಲ್ಲೆಯಲ್ಲಿ ದೇಶದ ಮೊದಲ ಶೋ ರೂಮ್‌ ಇಂದು ಉದ್ಘಾಟನೆಯಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ (Devendra Fadnavis) ಟೆಸ್ಲಾ ಕಾರು ಶೋ ರೂಮ್‌ ಅನ್ನು ಉದ್ಘಾಟಿಸಿದರು.

    ಕಾರು ಬುಕ್ಕಿಂಗ್‌ ಮಾಡುವ ಗ್ರಾಹಕರು ಮುಂಗಡವಾಗಿ 22,220 ರೂ. ಹಣವನ್ನು ಪಾವತಿಸಬೇಕಾಗುತ್ತದೆ. ಕಾರುಗಳನ್ನು ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ವಿತರಣೆ ಮಾಡಲಾಗುತ್ತದೆ.

    ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಟೆಸ್ಲಾ ಫೆಬ್ರವರಿ 2025 ರಲ್ಲಿ ಭಾರತದ ಅತ್ಯಂತ ದುಬಾರಿ ವಾಣಿಜ್ಯ ಜಿಲ್ಲೆಯಾದ ಮುಂಬೈನ BKC ಯಲ್ಲಿ 4,000 ಚದರ ಅಡಿ ಶೋರೂಮ್ ಜಾಗಕ್ಕೆ ಐದು ವರ್ಷಗಳ ಅವಧಿಗೆ 23.38 ಕೋಟಿ ರೂ. ಪಾವತಿಸಿದೆ.

    ಕಾರಿನ ಬೆಲೆ ಎಷ್ಟು?
    ಟೆಸ್ಲಾ ಮಾಡೆಲ್‌ ವೈ (Model Y) ಎರಡು ಮಾದರಿಯ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. Model Y Rear-Wheel Drive (RWD) 60 ಲಕ್ಷ ರೂ., Model Y Long Range RWD 68 ಲಕ್ಷ ರೂ. ದರವನ್ನು ನಿಗದಿ ಮಾಡಿದೆ.

    ಯಾವ ಬಣ್ಣಕ್ಕೆ ಎಷ್ಟು ದರ?
    ಪಿಯರ್ ವೈಟ್ ಮತ್ತು ಡೈಮಂಡ್ ಬ್ಲಾಕ್ : 95,000 ರೂ.
    ನೀಲಿ: 1.25 ಲಕ್ಷ ರೂ.
    ಕ್ವಿಕ್ ಸಿಲ್ವರ್ ಮತ್ತು ಅಲ್ಟ್ರಾ ರೆಡ್: 1.85 ಲಕ್ಷ ರೂ. ಇದನ್ನೂ ಓದಿ: ಭಾರತ್-NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಇನ್ನೋವಾ ಹೈಕ್ರಾಸ್‌ಗೆ ಸಿಕ್ತು 5 ಸ್ಟಾರ್ ರೇಟಿಂಗ್

    ಮೈಲೇಜ್‌ ಎಷ್ಟು?
    ಮಾಡೆಲ್‌ ವೈ ರಿಯರ್‌ ವೀಲ್‌ ಡ್ರೈವ್‌ ಕಾರನ್ನು ಒಂದು ಬಾರಿ ಫುಲ್‌ ಚಾರ್ಜ್‌ ಮಾಡಿದರೆ 500 ಕಿ.ಮೀ ಪ್ರಯಾಣಿಸಬಹುದು. 201 ಕಿಮೀ/ಗಂ ಟಾಪ್‌ ಸ್ಫೀಡ್‌ ಆಗಿದ್ದು 5.9 ಸೆಕೆಂಡಿನಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

    ಲಾಂಗ್‌ ರೇಂಜ್‌ ರಿಯರ್‌ ವೀಲ್‌ ಡ್ರೈವ್‌ ಕಾರನ್ನು ಒಂದು ಬಾರಿ ಫುಲ್‌ ಚಾರ್ಜ್‌ ಮಾಡಿದರೆ 622 ಕಿ.ಮೀ ಪ್ರಯಾಣಿಸಬಹುದು. 201 ಕಿಮೀ/ಗಂ ಟಾಪ್‌ ಸ್ಫೀಡ್‌ ಆಗಿದ್ದು 5.6 ಸೆಕೆಂಡಿನಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.  ಇದನ್ನೂ ಓದಿ: ಹೊಸ ಮಹೀಂದ್ರಾ XUV 3XO ‘REVX’ ಶ್ರೇಣಿ ಬಿಡುಗಡೆ; ಹೊಸತೇನಿದೆ?

    ಬೇರೆ ದೇಶಗಳಲ್ಲಿ ದರ ಎಷ್ಟು?
    ಮಾಡೆಲ್‌ ವೈ ಲಾಂಗ್‌ ರೇಂಜ್‌ ರಿಯರ್‌ ವೀಲ್‌ ಡ್ರೈವ್‌
    ಅಮೆರಿಕ – 44,900 ಡಾಲರ್‌ (38.61 ಲಕ್ಷ ರೂ.)
    ಚೀನಾ – 2,63,500 ಯುವಾನ್‌(31.55 ಲಕ್ಷ ರೂ.)
    ಜರ್ಮನಿ – 45,970 ಯುರೋ(46.10 ಲಕ್ಷ ರೂ.)

    ದುಬಾರಿ ಯಾಕೆ?
    ಭಾರತದಲ್ಲಿ ಮಾರಾಟವಾಗುವ ಟೆಸ್ಲಾ ಕಾರುಗಳು ಚೀನಾದ ಶಾಂಘೈನಿಂದ ಆಗಮಿಸಿವೆ. ಎಲೆಕ್ಟ್ರಿಕ್‌ ಕಾರುಗಳಿಗೆ ಆಮದು ಸುಂಕ ವಿಧಿಸುವ ಕಾರಣದಿಂದಾಗಿ ಬೆಲೆ ದುಬಾರಿಯಾಗಿವೆ. ಅಮೆರಿಕ, ಚೀನಾ, ಜರ್ಮನಿಯಲ್ಲಿ ಟೆಸ್ಲಾ ತನ್ನ ಉತ್ಪದನಾ ಘಟಕವನ್ನು ತೆರೆದಿರುವ ಕಾರಣ ಅಲ್ಲಿ ಬೆಲೆ ಕಡಿಮೆಯಿದೆ.

    ಕೇಂದ್ರ ಸರ್ಕಾರ ಟೆಸ್ಲಾಗೆ ಭಾರತದಲ್ಲಿ ಉತ್ಪದನಾ ಘಟಕ ತೆರೆಯುವಂತೆ ಸೂಚಿಸಿತ್ತು. ಆದರೆ ಟೆಸ್ಲಾ ಕಂಪನಿ ಭಾರತದಲ್ಲಿ ಉತ್ಪದನಾ ಘಟಕ ತೆರೆಯಲು ಆಸಕ್ತಿ ತೋರಿಲ್ಲ. ಚೀನಾದಿಂದ ಆಮದು ಮಾಡಿರುವ ಕಾರಣ ಭಾರತದಲ್ಲಿ ಟೆಸ್ಲಾ ಕಾರುಗಳ ಬೆಲೆ ಜಾಸ್ತಿಯಿದೆ. ಹತ್ತಿರ ಹತ್ತಿರ ಟೆಸ್ಲಾ ಕಾರುಗಳಿಗೆ 21 ಲಕ್ಷ ರೂ. ಆಮದು ಸುಂಕ ವಿಧಿಸಲಾಗುತ್ತಿದೆ.

  • ಭಾರತಕ್ಕೆ ಟೆಸ್ಲಾ: 5 ಮಾಡೆಲ್‌ Y ವಾಹನಗಳು ಈಗಾಗಲೇ ಮುಂಬೈಗೆ ಎಂಟ್ರಿ

    ಭಾರತಕ್ಕೆ ಟೆಸ್ಲಾ: 5 ಮಾಡೆಲ್‌ Y ವಾಹನಗಳು ಈಗಾಗಲೇ ಮುಂಬೈಗೆ ಎಂಟ್ರಿ

    ನವದೆಹಲಿ: ಎಲಾನ್ ಮಸ್ಕ್ (Elon Musk) ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಐದು ಮಾಡೆಲ್‌ನ Y ವಾಹನಗಳು ಈಗಾಗಲೇ ಮುಂಬೈಗೆ ಎಂಟ್ರಿ ಕೊಟ್ಟಿವೆ.

    ಟೆಸ್ಲಾ (Tesla) ಸೆಂಟರ್‌ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ತೆರೆಯಲಿದೆ. ಮಾರ್ಚ್ ಆರಂಭದಲ್ಲಿ, ಭಾರತದಲ್ಲಿ ತನ್ನ ಮಾರಾಟವನ್ನು ಪ್ರಾರಂಭಿಸಲು ಟೆಸ್ಲಾ ಮುಂಬೈನಲ್ಲಿ ತನ್ನ ಮೊದಲ ಶೋ ರೂಂ ತೆರೆಯಲು ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಇವಿ ತಯಾರಕರು ಮುಂಬೈ ಮತ್ತು ನವದೆಹಲಿಯಲ್ಲಿ ಶೋ ರೂಂ ಸೈಟ್‌ಗಳಿಗಾಗಿ ನೇಮಕಾತಿ ಮತ್ತು ಸ್ಕೌಟಿಂಗ್ ಅನ್ನು ಹೆಚ್ಚಿಸಿದ್ದರು. ಇದನ್ನೂ ಓದಿ: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್‌

    ಚೀನಾದ ಶಾಂಘೈನಲ್ಲಿರುವ ಟೆಸ್ಲಾ ಕಾರ್ಖಾನೆಯಿಂದ ಐದು ಮಾಡೆಲ್ ವೈ ವಾಹನಗಳು ಈಗಾಗಲೇ ಮುಂಬೈಗೆ ಬಂದಿವೆ. ಈ ಕಾರುಗಳ ಬೆಲೆ 27 ಲಕ್ಷ ರೂ. ಎಂದು ಘೋಷಿಸಲಾಗಿತ್ತು. 21 ಲಕ್ಷಕ್ಕಿಂತ ಹೆಚ್ಚಿನ ಆಮದು ಸುಂಕವನ್ನು ವಿಧಿಸಲಾಗಿತ್ತು.

    ಭಾರತದಲ್ಲಿ ಟೆಸ್ಲಾ ಕಂಪನಿಯ ಪ್ರವೇಶವು ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಮಾತುಕತೆಯ ಸಮಯದಲ್ಲಿ, ಎಲಾನ್ ಮಸ್ಕ್ ಕಂಪನಿಯು ಕಡಿಮೆ ಆಮದು ಸುಂಕಕ್ಕಾಗಿ ಲಾಬಿ ಮಾಡುವತ್ತ ಗಮನಹರಿಸಿತ್ತು.‌ ಇದನ್ನೂ ಓದಿ: ಕಪಿಲ್‌ ಶರ್ಮಾ ಕೆಫೆ ಮೇಲೆ ಖಲಿಸ್ತಾನಿ ಭಯೋತ್ಪಾದಕರಿಂದ ಗುಂಡಿನ ದಾಳಿ

    ಟೆಸ್ಲಾ, ಭಾರತದಲ್ಲಿ ತನ್ನ ಕಾರ್ಯ ಪ್ರಾರಂಭಿಸಿದ್ದರೂ, ಎಲೆಕ್ಟ್ರಿಕ್ ವಾಹನ ಕಂಪನಿಯು ಭಾರತದಲ್ಲಿ ಭಾಗಗಳನ್ನು ತಯಾರಿಸಲು ಆಸಕ್ತಿ ಹೊಂದಿಲ್ಲ ಎಂದು ವರದಿಯಾಗಿದೆ. ಕಳೆದ ತಿಂಗಳು ಕೇಂದ್ರ ಬೃಹತ್ ಕೈಗಾರಿಕಾ ಸಚಿವ HD ಕುಮಾರಸ್ವಾಮಿ, ಟೆಸ್ಲಾ ದೇಶದಲ್ಲಿ ತನ್ನ ಶೋ ರೂಂಗಳನ್ನು ವಿಸ್ತರಿಸಲು ಮಾತ್ರ ಬಯಸುತ್ತದೆ ಎಂದು ಹೇಳಿದ್ದರು.

  • ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ| ಮುಂದಿನ ವಾರ ಶೋರೂಂ ಓಪನ್‌ –  EV ಕಾರಿನ ಬೆಲೆ ಎಷ್ಟು?

    ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ| ಮುಂದಿನ ವಾರ ಶೋರೂಂ ಓಪನ್‌ – EV ಕಾರಿನ ಬೆಲೆ ಎಷ್ಟು?

    ಮುಂಬೈ: ಎಲಾನ್ ಮಸ್ಕ್ (Elon Musk) ನೇತೃತ್ವದ ಎಲೆಕ್ಟ್ರಿಕ್‌ ಕಾರು (Electric Car) ಕಂಪನಿ ಟೆಸ್ಲಾ (Tesla) ಮುಂದಿನ ವಾರ ಭಾರತದಲ್ಲಿ (India) ತನ್ನ ಮೊದಲ ಶೋರೂಂ ತೆರೆಯಲಿದೆ.

    ಜುಲೈ 15 ರಂದು ಮುಂಬೈನಲ್ಲಿ ತನ್ನ ಮೊದಲ ಶೋರೂಂ ತೆರೆಯಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ವಿಶ್ವದ ಮೂರನೇ ಅತಿದೊಡ್ಡ ಅಟೋಮೊಬೈಲ್‌ ಮಾರುಕಟ್ಟೆಯಾದ (Automobile Market) ಭಾರತದಲ್ಲಿ ಅಧಿಕೃತ ಕಾರ್ಯಾಚರಣೆಯನ್ನು ಪ್ರಾರಂಭಿಸುವತ್ತ ಒಂದು ಹೆಜ್ಜೆ ಇಟ್ಟಿದೆ.

    ಮಾರ್ಚ್‌ನ ಆರಂಭದಲ್ಲಿ, ಟೆಸ್ಲಾ ಮುಂಬೈನಲ್ಲಿ ತನ್ನ ಮೊದಲ ಶೋರೂಂ ಸ್ಥಳಕ್ಕಾಗಿ ಗುತ್ತಿಗೆ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿತ್ತು. ಯುರೋಪ್ ಮತ್ತು ಚೀನಾದಲ್ಲಿ ಟೆಸ್ಲಾ ಕಾರುಗಳ ಮಾರಾಟ ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಟೆಸ್ಲಾ ಭಾರತಕ್ಕೆ ಎಂಟ್ರಿಯಾಗುತ್ತಿದೆ. ಇದನ್ನೂ ಓದಿ: ಭಾರತ್NCAP ನಲ್ಲಿ ಟಾಟಾ ಹ್ಯಾರಿಯರ್ EVಗೆ ಸಿಕ್ತು 5 ಸ್ಟಾರ್ ರೇಟಿಂಗ್

    ಕೆಲವು ತಿಂಗಳ ಹಿಂದೆ ಟೆಸ್ಲಾ ತನ್ನ ಭಾರತೀಯ ಕಾರ್ಯಾಚರಣೆಗಳಿಗಾಗಿ ತನ್ನ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು. ದೆಹಲಿ-ಎನ್‌ಸಿಆರ್‌ನಲ್ಲಿ ಮತ್ತೊಂದು ಶೋರೂಂ ತೆರೆಯುವ ನಿರೀಕ್ಷೆಯಿದೆ.

    ಕೇಂದ್ರ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಟೆಸ್ಲಾ ಭಾರತದಲ್ಲಿ ಉತ್ಪದನಾ ಘಟಕ ತೆರೆಯುವುದಿಲ್ಲ ಎಂದು ಹೇಳಿದ್ದರು. ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಕಂಪನಿಗಳು ಭಾರತದಲ್ಲಿ ಉತ್ಪದನಾ ಘಟಕೆ ತೆರೆಯಬಾರದು. ಅಮೆರಿಕದಲ್ಲೇ ಉತ್ಪದನಾ ಘಟಕ ತೆರೆಯುವಂತೆ ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಟೆಸ್ಲಾ ಭಾರತದಲ್ಲಿ ಘಟಕ ತೆರೆಯುತ್ತಿಲ್ಲ.

    ಬೆಲೆ ಎಷ್ಟು?
    ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಚೀನಾದಲ್ಲಿ ತಯಾರಾದ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಮುಂದಾಗಿದೆ. ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕ್ರಾಸ್‌ಓವರ್‌ ಎಸ್‌ಯುವಿ ಮಾಡೆಲ್‌ ವೈ ಕಾರುಗಳನ್ನು ಆರಂಭದಲ್ಲಿ ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಸಿದ್ಧತೆ ನಡೆಸಿದೆ. ಇದನ್ನೂ ಓದಿ: 14.89 ಲಕ್ಷಕ್ಕೆ ಹೋಂಡಾ ಸಿಟಿ ಸ್ಪೋರ್ಟ್ ಎಡಿಷನ್ ಬಿಡುಗಡೆ ಕಾರ್‌ನಲ್ಲಿ ಏನು ಬದಲಾವಣೆಯಾಗಿದೆ?

    ಈಗಾಗಲೇ ಟೆಸ್ಲಾ ತನ್ನ ಶಾಂಘೈ ಸ್ಥಾವರದಿಂದ ಐದು ಮಾಡೆಲ್ ವೈ ವಾಹನಗಳನ್ನು ಮುಂಬೈಗೆ ತಂದಿದೆ. ಈ ವಾಹನದ ಮೂಲ ಬೆಲೆ 27.70 ಲಕ್ಷ ರೂ. ಇದೆ. ಚೀನಾದಿಂದ ಭಾರತಕ್ಕೆ ಬಂದ ವೆಚ್ಚ, ಆಮದು ಸುಂಕ ವಿಧಿಸಿದ ಬಳಿಕ ಈ ಕಾರಿನ ದರ ಎಷ್ಟಿರಬಹುದು ಎನ್ನುವುದು ಅಧಿಕೃತವಾಗಿ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಟೆಸ್ಲಾ ಕಾರಿನ ಬೆಲೆ 40 ಲಕ್ಷ ರೂ.ಗಿಂತ ಕಡಿಮೆ ಇರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

    ಹೊಸ ಇವಿ ನೀತಿಯಲ್ಲಿ ಏನಿದೆ?
    ಅಟೋ ಕಂಪನಿಗಳು ಭಾರತದಲ್ಲೇ ಉತ್ಪದನಾ ಘಟಕ ತೆರೆಯಬೇಕು ಎನ್ನುವುದು ಕೇಂದ್ರ ಸರ್ಕಾರದ ವಾದವಾಗಿತ್ತು. ಆದರೆ ಈಗ ಈ ನೀತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಭಾರತದ 2024 ರಲ್ಲಿ ಹೊಸ ಎಲೆಕ್ಟ್ರಿಕ್‌ ವಾಹನ ನೀತಿಯನ್ನು ಅಳವಡಿಸಿದೆ. ಈ ನೀತಿಯ ಪ್ರಕಾರ ಯಾವುದಾದರು ಕಂಪನಿ ಭಾರತದಲ್ಲಿ 4,150 ಕೋಟಿ ರೂ. ಹೂಡಿಕೆ ಮಾಡಿದರೆ ಆ ಕಂಪನಿಯ 35 ಸಾವಿರ ಡಾಲರ್‌ ಅಥವಾ 30 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳ ಮೇಲೆ ಸುಂಕ ರಿಯಾಯಿತಿಗಳನ್ನು ಪಡೆಯಬಹುದು. ಈ ನೀತಿಯ ಅನ್ವಯ ವರ್ಷಕ್ಕೆ 8,000 ಕಾರುಗಳ ಮೇಲೆ 15% ಸುಂಕ ವಿಧಿಸಲಾಗುತ್ತದೆ.

    ಹೊಸ ಎಲೆಕ್ಟ್ರಿಕಲ್‌ ಕಾರು ನೀತಿಯಲ್ಲಿ ಕೆಲ ಷರತ್ತು ಸಹ ಇದೆ. ಕಂಪನಿಯು ಕಾರ್ಯಾಚರಣೆಯ ಮೂರನೇ ವರ್ಷದ ವೇಳೆಗೆ ಭಾರತದಲ್ಲಿ ಕಾರುಗಳನ್ನು ತಯಾರಿಸಲು ಪ್ರಾರಂಭಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕಂಪನಿಯು ಅನುಮೋದನೆ ಪಡೆದರೆ ರಿಯಾಯಿತಿ ದರದ 15% ಸುಂಕ ಮತ್ತು 5% ಜಿಎಸ್‌ಟಿ ಹಾಕಲಾಗುತ್ತದೆ. ಅಂದರೆ 35 ಸಾವಿರ ಡಾಲರ್‌ ಕಾರಿನ ಬೆಲೆ ಸುಮಾರು 36 ಲಕ್ಷ ರೂ. ಆದರೆ ಆಮದು ಮಾಡಿದ 50 ಸಾವಿರ ಡಾಲರ್‌ ಕಾರಿನ ಬೆಲೆಗೆ 52 ಲಕ್ಷ ರೂ. ಆಗಲಿದೆ.

     

  • ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

    ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ನೇಹಿತ ಎಲೋನ್‌ ಮಸ್ಕ್‌ (Elon Musk) ಅವರ ಜಗಳ ಮತ್ತಷ್ಟು ಹೆಚ್ಚಾಗಿದೆ. ಬೀದಿ ಜಗಳ ಹೆಚ್ಚಾಗುತ್ತಿದ್ದಂತೆ ಟೆಸ್ಲಾ (Tesla) ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿದೆ.

    ಮಸ್ಕ್‌ ಅವರು ಟ್ರಂಪ್‌ (Donald Trump) ಅವರನ್ನು ಉಚ್ಚಾಟಿಸಿ ಉಪಾಧ್ಯಕ್ಷ ಜೆಡಿ ವಾನ್ಸ್‌ (JD Vance) ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಹೇಳಿದ ಬೆನ್ನಲ್ಲೇ ಟ್ರಂಪ್‌ ಮಸ್ಕ್‌ ಕಂಪನಿ ಜೊತೆ ಮಾಡಿಕೊಂಡಿದ್ದ ಸರ್ಕಾರಿ ಒಪ್ಪಂದಗಳನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಹೊರ ಬಂದ ಬೆನ್ನಲ್ಲೇ ಟ್ರಂಪ್‌ ವಿರುದ್ಧ ಮಸ್ಕ್‌ ಕೆಂಡಾಮಂಡಲ

    ಮಸ್ಕ್‌ ಅವರು ಟ್ರಂಪ್ ಅವರ ತೆರಿಗೆ ಕಡಿತ ಮತ್ತು ಖರ್ಚಿಗೆ ಸಂಬಂಧಿಸಿದ ಮಸೂದೆಯನ್ನು ಖಂಡಿಸಿ ಎಕ್ಸ್‌ನಲ್ಲಿ ನಿರಂತರ ಪೋಸ್ಟ್‌ ಮಾಡುತ್ತಿದ್ದರು. ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದ ಟ್ರಂಪ್‌ ಈಗ ಮೊದಲ ಬಾರಿಗೆ ಪ್ರತಿಕ್ರಿಯಿಸಿ ಹಳಸಿದ ಸಂಬಂಧಕ್ಕೆ ವಿಷಾದ ವ್ಯಕ್ತಪಡಿದ್ದಾರೆ.

    ಈಗ ಟ್ರಂಪ್‌ ಅವರು ಮಸ್ಕ್ ಅವರ ಇಂಟರ್ನೆಟ್ ಕಂಪನಿ ಸ್ಟಾರ್‌ಲಿಂಕ್ ಮತ್ತು ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್‌ನ ಆದಾಯಕ್ಕೆ ಕೊಕ್ಕೆ ಹಾಕುವುದಾಗಿ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ನಮ್ಮ ಬಜೆಟ್‌ನಲ್ಲಿ ಹಣವನ್ನು ಉಳಿಸಲು ಸುಲಭವಾದ ಮಾರ್ಗವೆಂದರೆ ಮಸ್ಕ್‌ ಜೊತೆ ಮಾಡಿಕೊಂಡಿದ್ದ ಸರ್ಕಾರಿ ಸಬ್ಸಿಡಿಗಳು ಮತ್ತು ಒಪ್ಪಂದಗಳನ್ನು ರದ್ದುಗೊಳಿಸುತ್ತೇನೆ. ಹಿಂದಿನ ಅಧ್ಯಕ್ಷ ಜೋ ಬೈಡನ್‌ ಈ ನಿರ್ಧಾರ ಕೈಗೊಳ್ಳದೇ ಇರುವುದು ನನಗೆ ಆಶ್ಚರ್ಯವ ಉಂಟು ಮಾಡಿದೆ ಎಂದಿದ್ದಾರೆ.

    ಈ ಮಸೂದೆಯ ಬಗ್ಗೆ ಬಹುತೇಕ ಎಲ್ಲರಿಗೆ ಚೆನ್ನಾಗಿ ತಿಳಿದಿದೆ. ಈ ಮಸೂದೆ ಆರಂಭದಲ್ಲಿ ಅವರಿಗೆ ಯಾವುದೇ ಕಾಣಲಿಲ್ಲ. ಆದರೆ ಈಗ ಅವರಿಗೆ ಇದ್ದಕ್ಕಿದ್ದಂತೆ ಸಮಸ್ಯೆ ಕಾಣಿಸಿದೆ ಎಂದು ಟ್ರಂಪ್‌ ಟೀಕಿಸಿದರು.

    ಇಬ್ಬರ ಬೀದಿ ಜಗಳ ಹೆಚ್ಚಾಗುತ್ತಿದ್ದಂತೆ ಟೆಸ್ಲಾ ಷೇರು ಮೌಲ್ಯ ದಾಖಲೆಯ 14%ರಷ್ಟು ಕುಸಿತವಾಗಿದೆ. ಗುರುವಾರ ಒಂದೇ ದಿನ ಒಂದು ಷೇರಿನ ಮೌಲ್ಯ 47 ಡಾಲರ್‌ ಇಳಿದಿದೆ. ಕಳೆದ 5 ದಿನಗಳಲ್ಲಿ 70 ಡಾಲರ್‌ ಇಳಿಕೆಯಾಗಿದೆ.

  • ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ

    ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ

    – ಎಲೆಕ್ಟ್ರಿಕ್‌ ಕಾರು ಉತ್ಪಾದನಾ ಯೋಜನೆಗೆ 4,150 ಕೋಟಿ ರೂ. ಹೂಡಿಕೆ ಮಾಡಲಾಗಿದೆ ಎಂದ ಸಚಿವ

    ನವದೆಹಲಿ: ಅಮೆರಿಕದ ಟೆಸ್ಲಾ ಸಂಸ್ಥೆಯು ಭಾರತದಲ್ಲಿ 2 ಶೋ ರೂಮ್‌ಗಳನ್ನು ತೆರೆಯುವ ಆಸಕ್ತಿ ಮಾತ್ರ ಹೊಂದಿದೆ. ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಹೊಂದಿಲ್ಲ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಯೋಜನೆಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇದು ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದೆ. ಬೃಹತ್ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಯೋಜನೆ ಜಾರಿಗೆ ತರುವ ಚಿಂತನೆ ನಡೆಸಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಇದನ್ನೂ ಓದಿ: ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

    ವಿಶ್ವ ಮಟ್ಟದಲ್ಲಿ ಎಲೆಕ್ಟ್ರಿಕ್ ಯೋಜನೆಗಳಿಗೆ ಭಾರತ ಹೆಸರುವಾಸಿ. 2024 ರಲ್ಲಿ ಈ ಯೋಜನೆ ಆರಂಭ ಮಾಡಲು ನಿರ್ಧರಿಸಿತ್ತು. ಈ ಯೋಜನೆಯಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತದೆ. ಈಗಾಗಲೇ 4,150 ಕೋಟಿಗಳನ್ನು ಹೂಡಿಕೆ ಮಾಡಲಾಗಿದೆ. ವರ್ಷಕ್ಕೆ 8 ಸಾವಿರ ವಾಹನಗಳ ಆಮದಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಬೆನ್ಜ್, ಸ್ಕೋಡಾ, ಕಿಯಾ, ಕಂಪನಿಗಳು ಈ ಯೋಜನೆಗೆ ಆಸಕ್ತಿ ತೋರಿವೆ. ಇನ್ನೂ ಟೆಸ್ಲಾ 2 ಶೋ ರೂಮ್‌ ತೆರೆಯಲು ಆಸಕ್ತಿ ತೋರಿದೆ ಆದ್ರೆ, ಭಾರತದಲ್ಲಿ ಕಾರು ಉತ್ಪಾದನೆ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದರು.

    ಮುಂದುವರಿದು… ಯಾವುದೇ ಕಂಪನಿ ಕಾರು ತಯಾರಿಸಲು ಅವಕಾಶ ಇದೆ. ಮುಂದಿನ ಮೂರು ವರ್ಷಗಳ ಕಾಲ 15% ತೆರಿಗೆ ವಿನಾಯಿತಿ ನೀಡಲಾಗಿದೆ, ಈ ಕಾರ್ಯಕ್ರಮ ಮೂಲಕ ಅರ್ಜಿ ಸಲ್ಲಿಸಿದವರಿಗೆ ಮುಂಗಡ ಹಣ ಕಟ್ಟಬೇಕು. ಒಂದು ವೇಳೆ ಬುಕ್ಕಿಂಗ್‌ ಮಾಡಿದ ಬಳಿಕ ಹಿಂದೇಟು ಹಾಕಿದ್ರೆ ಮುಂಗಡ ಹಣ ವಾಪಸ್ ನೀಡಲಾಗುವುದಿಲ್ಲ. ಲ್ಯಾಂಡ್ ಗಳಿಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಂಪು ಟೆಸ್ಲಾ ಕಾರು ಖರೀದಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

    ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಟೆಸ್ಲಾ ಹಲವಾರು ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸುತ್ತಿದೆ. ಇವುಗಳಲ್ಲಿ ರಾಜಸ್ಥಾನ, ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತು ತೆಲಂಗಾಣ ಸೇರಿವೆ. ಈಗಾಗಲೇ ಇದಕ್ಕೆ ಜಾಗವನ್ನೂ ಗುರುತು ಮಾಡಲಾಗಿದ್ದು, ನೇಮಕಾತಿ ಕೂಡ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಟೆಸ್ಲಾ ಭಾರತ ಎಂಟ್ರಿಯಿಂದ ಟಾಟಾ ಗ್ರೂಪ್‌ಗೆ ಲಾಭ!

  • ಈ ವರ್ಷಾಂತ್ಯದಲ್ಲಿ ಭಾರತಕ್ಕೆ ಬರುತ್ತೇನೆ: ಮಸ್ಕ್‌ ಘೋಷಣೆ

    ಈ ವರ್ಷಾಂತ್ಯದಲ್ಲಿ ಭಾರತಕ್ಕೆ ಬರುತ್ತೇನೆ: ಮಸ್ಕ್‌ ಘೋಷಣೆ

    ವಾಷಿಂಗ್ಟನ್‌: ಈ ವರ್ಷದ ಅಂತ್ಯಕ್ಕೆ ನಾನು ಭಾರತಕ್ಕೆ (India) ಭೇಟಿ ನೀಡುತ್ತೇನೆ ಎಂದು ವಿಶ್ವದ ಶ್ರೀಮಂತ ಉದ್ಯಮಿ, ಟೆಸ್ಲಾ ಕಂಪನಿಯ ಸಂಸ್ಥಾಪಕ ಎಲೋನ್‌ ಮಸ್ಕ್‌ (Elon Musk) ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಎಲೋನ್‌ ಮಸ್ಕ್‌ ಶುಕ್ರವಾರ ದೂರವಾಣಿಯಲ್ಲಿ ಮಾತನಾಡಿದ್ದರು. ಮಾತನಾಡಿದ ಬಳಿಕ ಮೋದಿ ಅವರು ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕ ಒಡಗೂಡಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು.

    ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮಸ್ಕ್‌, ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುವುದು ಗೌರವದ ಸಂಗತಿ. ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

    ಮಸ್ಕ್‌ ಕಳೆದ ವರ್ಷ ಭಾರತಕ್ಕೆ ಬರುವುದಾಗಿ ತಿಳಿಸಿದ್ದರು. ಆದರೆ ಮಸ್ಕ್‌ ಭಾರತಕ್ಕೆ ಬಾರದೇ ಚೀನಾಗೆ ಭೇಟಿ ನೀಡಿ ಉದ್ಯಮ ಸಂಬಂಧ ಮಾತುಕತೆ ನಡೆಸಿದ್ದರು. ಪೀಪಲ್‌ ರಿಪಬ್ಲಿಕ್‌ ಆಫ್‌ ಚೀನಾದ ಪ್ರೀಮಿಯರ್ ಲಿ ಕಿಯಾಂಗ್‌ ಅವರನ್ನು ಮಸ್ಕ್‌ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದನ್ನೂ ಓದಿ: Public TV Explainer: ಭಾರತಕ್ಕೆ ಎಂಟ್ರಿ ಕೊಡಲಿದೆ ಸ್ಟಾರ್‌ಲಿಂಕ್‌: ಸಿಗುತ್ತಾ ಕೇಬಲ್‌, ಟವರ್‌ ರಹಿತ ಹೈಸ್ಪೀಡ್‌ ಇಂಟರ್ನೆಟ್‌? – ದರ ಎಷ್ಟು?

     

     

    ಡೊನಾಲ್ಡ್‌ ಟ್ರಂಪ್‌ ಎರಡನೇ ಬಾರಿ ಅಧ್ಯಕ್ಷರಾದ ಬಳಿಕ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸದ ಸಮಯದಲ್ಲಿ ಮೋದಿ ಅವರು ಮಸ್ಕ್‌ ಅವರನ್ನು ಭೇಟಿಯಾಗಿದ್ದರು.

    2023 ರಲ್ಲಿ ಮೋದಿ ಅವರ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಮಸ್ಕ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಸ್ಕ್‌, ನಾನು ಭಾರತದ (India) ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿ ಎಂದು ಹೇಳಿದ್ದರು.

    ಈ ಭೇಟಿ ನನಗೆ ರೋಮಾಂಚನಕಾರಿ ಅನುಭವ ನೀಡಿದೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಇದರಿಂದಾಗಿ ಅವರ ಬಗ್ಗೆ ನನಗೆ ತಿಳಿದಿದೆ. ಅವರು ನನಗೆ ಭಾರತಕ್ಕೆ ಆಮಂತ್ರಣ ನೀಡಿದ್ದಾರೆ. ಶೀಘ್ರದಲ್ಲೇ ನಾನು ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದಿದ್ದರು.

    2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮಸ್ಕ್ ಬಳಿ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. 2020ರ ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದ್ದ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ.

     

  • ಟೆಸ್ಲಾ ಭಾರತ ಎಂಟ್ರಿಯಿಂದ ಟಾಟಾ ಗ್ರೂಪ್‌ಗೆ ಲಾಭ!

    ಟೆಸ್ಲಾ ಭಾರತ ಎಂಟ್ರಿಯಿಂದ ಟಾಟಾ ಗ್ರೂಪ್‌ಗೆ ಲಾಭ!

    ನವದೆಹಲಿ: ಭಾರತೀಯ ಮಾರುಕಟ್ಟೆಯನ್ನು (Indian Market) ಪ್ರವೇಶಿಸಲು ಟೆಸ್ಲಾ ತಯಾರಿ ನಡೆಸುತ್ತಿದೆ. ಈ ಸಂದರ್ಭದಲ್ಲೇ ಟೆಸ್ಲಾ (Tesla) ಬಿಡಿ ಭಾಗಗಳ ಪೂರೈಕೆದಾರರನ್ನು ಹುಡುಕುತ್ತಿದ್ದು ಟಾಟಾ ಗ್ರೂಪ್ (Tata Group) ಜೊತೆ ಪಾಲುದಾರಿಕೆ ಘೋಷಿಸುವ ಸಾಧ್ಯತೆಯಿದೆ.

    ಟಾಟಾ ಗ್ರೂಪ್ ಕಂಪನಿಯ ಟಾಟಾ ಆಟೋಕಾಂಪ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟಾಟಾ ಟೆಕ್ನಾಲಜೀಸ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್‌ ಕಂಪನಿಗಳು ಟೆಸ್ಲಾದ ಪಾಲುದಾರರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

     

    ಟೆಸ್ಲಾ ಕಾರ್ಯನಿರ್ವಾಹಕರು ಟಾಟಾ ಗ್ರೂಪ್‌ ಕಂಪನಿಗಳನ್ನು ಭೇಟಿಯಾಗಿ ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಬ್ರಿಕೇಶನ್ ವಸ್ತುಗಳ ಸಂಭಾವ್ಯ ಅಭಿವೃದ್ಧಿ ಮತ್ತು ತಯಾರಿಕೆಯ ಬಗ್ಗೆ ಚರ್ಚಿಸಿದ್ದಾರೆ.

    ಒಂದು ವೇಳೆ ಈ ಮಾತುಕತೆಗಳು ಯಶಸ್ವಿಯಾದರೆ ಟಾಟಾಅಟೋಕಾಂಪ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಎಂಜಿನಿಯರಿಂಗ್‌ ಪ್ರೊಡಕ್ಟ್‌ ನೀಡಲಿದೆ. ಟಿಸಿಎಸ್‌ ಸರ್ಕ್ಯೂಟ್‌-ಬೋರ್ಡ್‌ ಟೆಕ್ನಾಲಜಿ ನೀಡಿದರೆ, ಟಾಟಾ ಎಲೆಕ್ಟ್ರಾನಿಕ್ಸ್‌ ಚಿಪ್‌ಗಳನ್ನು ಸಪ್ಲೈ ಮಾಡಲಿದೆ.

    ಒಂದು ಡಜನ್‌ಗಿಂತಲೂ ಹೆಚ್ಚು ಭಾರತೀಯ ಕಂಪನಿಗಳು ಈಗಾಗಲೇ ಅಮೇರಿಕನ್ ಇವಿ ತಯಾರಕರಿಗೆ ನಿರ್ಣಾಯಕ ಘಟಕಗಳನ್ನು ಪೂರೈಸುತ್ತಿವೆ. ಇವುಗಳಲ್ಲಿ ಸಂವರ್ಧನ ಮದರ್‌ಸನ್, ಸುಪ್ರಜಿತ್ ಎಂಜಿನಿಯರಿಂಗ್, ಸೋನಾ ಬಿಎಲ್‌ಡಬ್ಲ್ಯೂ ಪ್ರಿಸಿಶನ್ ಫೋರ್ಜಿಂಗ್ಸ್, ವರ್ರೋಕ್ ಎಂಜಿನಿಯರಿಂಗ್, ಭಾರತ್ ಫೋರ್ಜ್ ಮತ್ತು ಸಂಧಾರ್ ಟೆಕ್ನಾಲಜೀಸ್ ಸೇರಿವೆ.

    ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಟೆಸ್ಲಾ ಹಲವಾರು ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸುತ್ತಿದೆ. ಇವುಗಳಲ್ಲಿ ರಾಜಸ್ಥಾನ, ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತು ತೆಲಂಗಾಣ ಸೇರಿವೆ.

     

  • ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್‌ ಅಪಸ್ವರ

    ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್‌ ಅಪಸ್ವರ

    ವಾಷಿಂಗ್ಟನ್‌: ಭಾರತದಲ್ಲಿ ಟೆಸ್ಲಾ ವಿದ್ಯುತ್‌ಚಾಲಿತ ಕಾರು ತಯಾರಿಕಾ ಘಟಕ ಸ್ಥಾಪನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಪಸ್ವರ ಎತ್ತಿದ್ದಾರೆ. ‘ಇದು ತುಂಬಾ ಅನ್ಯಾಯ’ ಎಂದು ಹೇಳಿದ್ದಾರೆ.

    ಭಾರತ ವಿಧಿಸುವ ಸುಂಕಗಳನ್ನು ತಪ್ಪಿಸಲು ಭಾರತದಲ್ಲಿ ಟೆಸ್ಲಾ ಘಟಕ ನಿರ್ಮಿಸುವ ಇವಿ ತಯಾರಕರ ಯಾವುದೇ ಸಂಭಾವ್ಯ ಯೋಜನೆಗಳು ‘ತುಂಬಾ ಅನ್ಯಾಯ’ ಎಂದು ಟ್ರಂಪ್ ವಿರೋಧಿಸಿದ್ದಾರೆ.

    ಫಾಕ್ಸ್‌ ನ್ಯೂಸ್‌ಗೆ ಎಲಾನ್‌ ಮಸ್ಕ್‌ ಜೊತೆ ನೀಡಿದ ಸಂದರ್ಶನದಲ್ಲಿ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ. ‘ವಿಶ್ವದ ಎಲ್ಲಾ ರಾಷ್ಟ್ರಗಳೂ ಅಮೆರಿಕದಿಂದ ಪ್ರಯೋಜನ ಪಡೆಯುತ್ತಿವೆ. ಆದರೂ ನಮ್ಮ ಸರಕುಗಳ ಮೇಲೆ ದುಬಾರಿ ಸುಂಕ ವಿಧಿಸಲಾಗುತ್ತಿದೆ. ಭಾರತ ಕೂಡ ಇದರಿಂದ ಹೊರತಾಗಿಲ್ಲ. ಹೆಚ್ಚು ಸುಂಕ ವಿಧಿಸುವ ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪಿಸಿ ಕಾರುಗಳನ್ನು ಮಾರಾಟ ಮಾಡಲು ಸಾಧ್ಯವೇ’ ಎಂದು ಟ್ರಂಪ್‌ ಪ್ರಶ್ನಿಸಿದ್ದಾರೆ.

    ಭಾರತ ಅತಿಹೆಚ್ಚು ಪ್ರಮಾಣದಲ್ಲಿ ಸುಂಕ ವಿಧಿಸುತ್ತಿದೆ. ಹೀಗಾಗಿ, ನಾವು ಕೂಡ ಪ್ರತಿಯಾಗಿ ಅಷ್ಟೇ ಸುಂಕವನ್ನು ವಿಧಿಸುತ್ತೇವೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಟ್ರಂಪ್‌ ಮಾತಿಗೆ ‘ಇದು ನ್ಯಾಯಯೋಚಿತ ನಿರ್ಧಾರ’ ಎಂದು ಮಸ್ಕ್‌ ಧ್ವನಿಗೂಡಿಸಿದ್ದಾರೆ.

    ಅಮೆರಿಕಗೆ ಪ್ರವಾಸ ಕೈಗೊಂಡಿದ್ದಾಗ ಪ್ರಧಾನಿ ಮೋದಿ ಅವರು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ, ಭಾರತದ ಮುಂಬೈ ಮತ್ತು ನವದೆಹಲಿಯಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಸಿದ್ಧತೆ ನಡೆಸಲಾಗಿದೆ. ವಿವಿಧ ಹುದ್ದೆಗಳ ಭರ್ತಿಗೆ ಟೆಸ್ಲಾ ಅರ್ಜಿ ಕೂಡ ಆಹ್ವಾನಿಸಿದೆ.

  • ಏಪ್ರಿಲ್‌ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು‌ ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್‌ – ಆರಂಭಿಕ ಬೆಲೆ ಎಷ್ಟು?

    ಏಪ್ರಿಲ್‌ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು‌ ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್‌ – ಆರಂಭಿಕ ಬೆಲೆ ಎಷ್ಟು?

    ವಾಷಿಂಗ್ಟನ್:‌ ಪ್ರಧಾನಿ ನರೇಂದ್ರ ಮೋದಿ ಅವರು ಎಲಾನ್‌ ಮಸ್ಕ್‌ (Elon Musk) ಅವರನ್ನು ಅಮೆರಿಕದಲ್ಲಿ ಭೇಟಿಯಾದ ಬೆನ್ನಲ್ಲೇ ಮಹತ್ವದ ಬೆಳವಣಿಗೆಗಳು ಕಂಡುಬಂದಿವೆ. ಮಸ್ಕ್‌ ನೇತೃತ್ವದ ಟೆಸ್ಲಾ ಕಂಪನಿ ಮುಂದಿನ ಏಪ್ರಿಲ್‌ ವೇಳೆಗೆ ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್‌ ಕಾರುಗಳನ್ನ (Tesla Electric Car) ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.

    ಮೂಲಗಳ ಪ್ರಕಾರ, ರಿಟೇಲ್‌ ಉದ್ಯಮ ಶುರು ಮಾಡಲು ಮುಂದಾಗಿರುವ ಟೆಸ್ಲಾ ಕಂಪನಿಯು ತನ್ನ ಬರ್ಲಿನ್‌ ಪ್ಲ್ಯಾಂಟ್‌ನಿಂದ ಎಲೆಕ್ಟ್ರಿಕ್‌ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಶೋರೂಮ್‌ಗಾಗಿ ಮುಂಬೈನ (Munbai) ಬಾಂದ್ರಾನಲ್ಲಿ ಮತ್ತು ದೆಹಲಿಯ ಏರೋಸಿಟಿಯಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಆದ್ರೆ ಭಾರತದಲ್ಲಿ (India) ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಯಾವುದೇ ಯೋಜನೆಯನ್ನ ಟೆಸ್ಲಾ ಸದ್ಯಕ್ಕೆ ಹೊಂದಿಲ್ಲ. ಇದನ್ನೂ ಓದಿ: ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

    ಆರಂಭಿಕ ಬೆಲೆ ಹೇಗೆ?
    ಸದ್ಯ ರಿಟೇಲ್‌ ವ್ಯಾಪಾರಕ್ಕೆ ಮುಂದಾಗಿರುವ ಟೆಸ್ಲಾ, 25,000 ಡಾಲರ್ (ಸುಮಾರು 22 ಲಕ್ಷ ರೂ.) ಆರಂಭಿಕ ಬೆಲೆಯಿಂದ ಮಾರಾಟ ಪ್ರಾರಂಭಿಸಲು ಪ್ಲ್ಯಾನ್‌ ಮಾಡಿದೆ. ಇದರೊಂದಿಗೆ 2025ರ ಅಂತ್ಯದ ವೇಳೆಗೆ 1 ಶತಕೋಟಿ ವಹಿವಾಟು ನಡೆಸುವ ಗುರಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರ್ ಇ ವಿಟಾರಾ ಅನಾವರಣ; 500 ಕಿಮೀ ರೇಂಜ್

    ಭಾರತದಲ್ಲಿ ಟೆಸ್ಲಾ ನೇಮಕಾತಿ ಶುರು:
    ಅಮೆರಿಕದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌ ಅವರ ಭೇಟಿ ಬಳಿಕ, ಟೆಸ್ಲಾ ಆಟೋಮೊಬೈಲ್‌ ಸಂಸ್ಥೆಯು ಭಾರತದಲ್ಲಿ ನೇಮಕಾತಿಯನ್ನು ಆರಂಭಿಸಿದೆ. ಟೆಸ್ಲಾ ಕಂಪನಿಯು ಗ್ರಾಹಕ ಸಂಪರ್ಕ ಮತ್ತು ಆಡಳಿತ ಸೇರಿದಂತೆ ಒಟ್ಟು 13 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮುಂಬೈ ಮತ್ತು ದೆಹಲಿ ಕೇಂದ್ರಿತ ನೇಮಕಾತಿಗಳಿಗೆ ಟೆಸ್ಲಾ ಮುಂದಡಿ ಇಟ್ಟಿದೆ. ಇದನ್ನೂ ಓದಿ: ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!