Tag: ಟೆಸ್ಟ್ ಪಂದ್ಯ

  • ಇವರು ಯಾರೆಂದು ಗುರುತಿಸಿ- ಹಳೇ ಫೋಟೋ ಹಂಚಿಕೊಂಡು ಹರ್ಭಜನ್ ಪ್ರಶ್ನೆ

    ಇವರು ಯಾರೆಂದು ಗುರುತಿಸಿ- ಹಳೇ ಫೋಟೋ ಹಂಚಿಕೊಂಡು ಹರ್ಭಜನ್ ಪ್ರಶ್ನೆ

    ನವದೆಹಲಿ: ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳನ್ನು ಹರ್ಭಜನ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋ ಭಾರೀ ವೈರಲ್ ಆಗುತ್ತಿದೆ.

    ಫೋಟೋದಲ್ಲಿ ಏನಿದೆ?: ಹರ್ಭಜನ್ ಸಿಂಗ್ ಅವರು ಅಂಡರ್-19 ದಿನಗಳ ಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ 1998/99 ಅಂಡರ್-19 ವಿಶ್ವಕಪ್‌ನಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ. ಚಿತ್ರದಲ್ಲಿ, ಹರ್ಭಜನ್, ಪಾಕಿಸ್ತಾನದ ಮಾಜಿ ಬ್ಯಾಟ್ಸ್ಮನ್ ಹಸನ್ ರಜಾ ಮತ್ತು ಇಮ್ರಾನ್ ತಾಹಿರ್ ಅವರೊಂದಿಗೆ ಪೋಸ್ ನೀಡಿದ್ದಾರೆ. ಭಾರತ ತಂಡದ ಸ್ಪಿನ್ನರ್ ತಮ್ಮ ಜೊತೆಗಿರುವ ಇಬ್ಬರು ವ್ಯಕ್ತಿಗಳನ್ನು ಊಹಿಸಿ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

    ಈ ಚಿತ್ರದಲ್ಲಿ ಶರ್ಟ್ ಧರಿಸದ ವ್ಯಕ್ತಿ ಇಮ್ರಾನ್ ತಾಹಿರ್ ಆಗಿದ್ದಾರೆ. ಹರ್ಭಜನ್ ಸಿಂಗ್ ಮಧ್ಯದಲ್ಲಿದ್ದರೆ, ಹರ್ಭಜನ್ ಅವರ ಎಡ ಭಾಗದಲ್ಲಿ ಹಸನ್ ರಾಜ್ ಇದ್ದಾರೆ. ಈ ಮೂವರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಡಿದ್ದಾರೆ.

    ತಾಹಿರ್ ಅವರು ಮೊದಲು ಕಿರಿಯ ವಿಭಾಗದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. ನಂತರದಲ್ಲಿ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಪಡೆದರು. ಅವರು ದಕ್ಷಿಣ ಆಫ್ರಿಕಾದ ಪರ 20 ಟೆಸ್ಟ್, 107 ಏಕದಿನ, 38 ಟಿ20 ಪಂದ್ಯಗಳನ್ನು ಆಡಿದ್ದಾರೆ.

    ಚಿತ್ರದಲ್ಲಿರುವ ಹಸನ್ ರಾಜ್ ಅವರು 1996 ರಿಂದ 2005ರವರೆಗೆ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು. 7 ಟೆಸ್ಟ್ ಪಂದ್ಯ ಹಾಗೂ 16 ಏಕದಿನ ಪಂದ್ಯಗಳನ್ನು ಆಡಿದ್ದರು.

    ಹರ್ಭಜನ್ ಸಿಂಗ್ ಅವರು ಕೊನೆಯಾದಾಗಿ 2006ರಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದರು. 103 ಟೆಸ್ಟ್, 236 ಏಕದಿನ ಪಂದ್ಯ ಹಾಗೂ 28 ಟಿ20 ಪಂದ್ಯಗಳನ್ನು ಆಡಿದ್ದಾರೆ. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ಪಂದ್ಯವನ್ನು ಭಾರತ ತನ್ನದಾಗಿಸಿಕೊಂಡಿತ್ತು. ಆ ಸಮಯದಲ್ಲಿ ಭಾರತದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಇದನ್ನೂ ಓದಿ: ಓಮಿಕ್ರಾನ್‌ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ

    ಹರ್ಭಜನ್ (417) ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ನಾಲ್ಕನೇ ಬೌಲರ್ ಆಗಿದ್ದಾರೆ. ಇತ್ತೀಚೆಗಷ್ಟೇ ಅವರನ್ನು ರವಿಚಂದ್ರನ್ ಅಶ್ವಿನ್ (427) ಗಣ್ಯರ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ರೋಹಿತ್ ಟೀಂ ಇಂಡಿಯಾದ ನಾಯಕರಾದ ಬಳಿಕ ಸಿಗುತ್ತಿರುವ ವೇತನ ಎಷ್ಟು ಗೊತ್ತಾ?

    ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಸಂದರ್ಭದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗಾಗಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

  • ತಂಡಕ್ಕೆ ಗೆಲುವಿನ ಶ್ರೇಯಸ್ಸು ದೊರೆಯಬೇಕು: ರಾಹುಲ್ ದ್ರಾವಿಡ್

    ತಂಡಕ್ಕೆ ಗೆಲುವಿನ ಶ್ರೇಯಸ್ಸು ದೊರೆಯಬೇಕು: ರಾಹುಲ್ ದ್ರಾವಿಡ್

    ಮುಂಬೈ: ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ ತಮಗೆ ನೀಡಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಯುವ ಆಟಗಾರರಿಗೆ ಹಾಗೂ ತಂಡಕ್ಕೆ ಗೆಲುವಿನ ಶ್ರೇಯಸ್ಸು ದೊರೆಯಬೇಕು ಎಂದು ಟೀಂ ಇಂಡಿಯಾ ತಂಡದ ಕೋಚ್ ರಾಹುಲ್ ದ್ರಾವಿಡ್ ಸಂತಸ ವ್ಯಕ್ತಪಡಿಸಿದರು.

    ಇಂದು ನಡೆದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಈ ಬಗ್ಗೆ ಮಾತನಾಡಿದ ಅವರು, ಕಾನ್ಪುರ್‌ದಲ್ಲಿ ನಡೆದ ಟೆಸ್ಟ್ ಸಂದರ್ಭದಲ್ಲಿ ಗೆಲುವಿನ ಸನಿಹ ಇದ್ದೆವು. ಆದರೆ ಅದೂ ಸಾಧ್ಯವಾಗಿರಲಿಲ್ಲ. ಆದರೆ ಇಂದಿನ ಗೆಲುವು ತಂಡಕ್ಕೆ ಸಲ್ಲಬೇಕು ಎಂದರು.

    ಪ್ರಮುಖ ಆಟಗಾರರು ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದರು. ಆದರೆ, ಯುವ ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ನಿನ್ನೆ ಜಯಂತ್ ಯಾದವ್ ಅಂದುಕೊಂಡತೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಇಂದು ಬೆಳಿಗ್ಗೆ ಅವರು ಉತ್ತಮ ಪ್ರದರ್ಶನ ನೀಡಿ 4 ವಿಕೆಟ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

    ತಂಡದಲ್ಲಿರುವ ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ಮಯಾಂಕ್, ಅಕ್ಷರ್ ಪಟೇಲ್, ಜಯಂತ್ ಯಾದವ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದನ್ನು ನೋಡಿ ಖುಷಿಯಾಗುತ್ತದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ನಾವು ಪಂದ್ಯವನ್ನು ಗೆಲ್ಲಿಸುತ್ತೇವೆ ಎಂಬ ಭರವಸೆಯನ್ನು ಯುವ ಆಟಗಾರರು ಮೂಡಿಸಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಡಿಕ್ಲೇರ್ ಕುರಿತು ಮಾತನಾಡಿದ ದ್ರಾವಿಡ್, ನಾವು ಅದರ ಬಗ್ಗೆ ಹೆಚ್ಚು ಯೋಚಿಸಲು ಸಮಯವಿರಲಿಲ್ಲ. ಅಲ್ಲದೆ, ಈ ಸಮಯದಲ್ಲಿ ಯುವ ಆಟಗಾರರು ಆಡಲು ಕಾಯುತ್ತಿದ್ದರು. ಇದು ಅವರಿಗೆ ವಿಭಿನ್ನ ಪಿಚ್‌ನಲ್ಲಿ ಆಡಲು ಸಹಾಯವಾಗಿದೆ ಎಂದರು. ಇದನ್ನೂ ಓದಿ: 372 ರನ್ ಗಳ ಭರ್ಜರಿ ಜಯ – ಸರಣಿ ಜಯಿಸಿದ ಭಾರತ

    ರಾಹುಲ್ ದ್ರಾವಿಡ್ ಅವರು ಕೋಚ್ ಆದ ಚೊಚ್ಚಲ ಸರಣಿಯಲ್ಲೇ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಪಂದ್ಯ ಶ್ರೇಷ್ಠ ಮಯಾಂಕ್ ಅಗರ್‌ವಾಲ್ ಪಡೆದುಕೊಂಡಿದ್ದರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಆರ್ ಅಶ್ವಿನ್ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಜೊತೆ ನಟಿಸಲು ಸೈ ಎಂದ ಸ್ವೀಟಿ

  • ಟೆಸ್ಟ್ ಪಂದ್ಯದ ಬೌಲರ್‌ಗಳಿಗೆ ಕನಿಷ್ಠ 2 ತಿಂಗಳ ಅಭ್ಯಾಸ ಅಗತ್ಯ- ಐಸಿಸಿ

    ಟೆಸ್ಟ್ ಪಂದ್ಯದ ಬೌಲರ್‌ಗಳಿಗೆ ಕನಿಷ್ಠ 2 ತಿಂಗಳ ಅಭ್ಯಾಸ ಅಗತ್ಯ- ಐಸಿಸಿ

    ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರಿಕೆಟ್ ಮರಳಲು ಮಾರ್ಗಸೂಚಿ ಹೊರಡಿಸಿದೆ. ಕೊರೊನಾ ವೈರಸ್‍ನಿಂದಾಗಿ ಮಾರ್ಚ್ ನಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ. ಇದು ಟೆಸ್ಟ್‌ಗೆ ಪ್ರವೇಶಿಸುವುದು ಬೌಲರ್‌ಗಳಿಗೆ ಅತ್ಯಂತ ಸವಾಲಿನ ಸಂಗತಿಯಾಗಿದೆ.

    ಐಸಿಸಿ ಮಾರ್ಗಸೂಚಿಗಳ ಪ್ರಕಾರ, ಟೆಸ್ಟ್ ಪಂದ್ಯವನ್ನು ಆಡುವ ಮೊದಲು ಬೌಲರ್‌ಗಳಿಗೆ 2-3 ತಿಂಗಳ ತರಬೇತಿ ಅಗತ್ಯವಿದೆ. ಇದು ಬೌಲರ್‌ಗಳ ವಯಸ್ಸು, ಹಳೆಯ ಗಾಯ, ತಂತ್ರ ಮತ್ತು ವೇಗವನ್ನು ಅವಲಂಬಿಸಿರುತ್ತದೆ.

    ಬೌಲರ್‌ಗಳು ಅವಸರದಲ್ಲಿ ಮೈದಾನಕ್ಕಿಳಿದರೆ ಗಾಯದ ಅಪಾಯ ಹೆಚ್ಚಾಗುತ್ತದೆ. 7 ವಾರಗಳ ಕಾಲ ವಿಶ್ರಾಂತಿ ಪಡೆಯುವುದರಿಂದ ಬೆನ್ನುಮೂಳೆಯಲ್ಲಿ ಶೇ.2 ಮೂಳೆ ನೋವು ಕಾಣಿಸಿಕೊಳ್ಳಬಹುದು ಎಂದು ಅಧ್ಯಯನ ಸೂಚಿಸಿದೆ. ಹೀಗಾಗಿ 24 ವಾರಗಳ ತರಬೇತಿ, ಅಭ್ಯಾಸ ಅಗತ್ಯವಿದೆ. ಈ ಮೂಲಕ ಕ್ರಮೇಣ ಬೌಲರ್‌ಗಳ ಮೇಲೆ ಹೊರೆ ಹೆಚ್ಚಿಸಲು ಐಸಿಸಿ ಸೂಚಿಸಿದೆ.

    ಒಬ್ಬ ಬೌಲರ್ ಏಕದಿನ ಪಂದ್ಯಗಳಲ್ಲಿ ಗರಿಷ್ಠ 10 ಮತ್ತು ಟಿ20ಯಲ್ಲಿ 4 ಓವರ್‌ಗಳನ್ನು ಬೌಲ್ ಮಾಡಬಹುದು. 5-6 ವಾರಗಳ ತರಬೇತಿಯ ನಂತರ ಬೌಲರ್ ಏಕದಿನ ಅಥವಾ ಟಿ20 ಪಂದ್ಯಗಳನ್ನು ಆಡಬಹುದು. ಟೀಂ ಇಂಡಿಯಾ ಆಟಗಾರರು ಇನ್ನೂ ತರಬೇತಿ ಪ್ರಾರಂಭಿಸಿಲ್ಲ. ಅವರು ಜೂನ್ 1ರಿಂದ ತರಬೇತಿ ಪ್ರಾರಂಭಿಸಿದರೆ, ಜುಲೈ ಅಂತ್ಯದ ವೇಳೆಗೆ ಅವರು ಸೀಮಿತ ಓವರ್‌ಗಳ ಪಂದ್ಯವನ್ನು ಆಡಲು ಸಿದ್ಧರಾಗುತ್ತಾರೆ. ತಂಡವು ಜುಲೈನಲ್ಲಿ ಶ್ರೀಲಂಕಾಕ್ಕೆ ಪ್ರಯಾಣಿಸಬಹುದು.

    ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇಂಗ್ಲೆಂಡ್ ಪ್ರವಾಸ ಮಾಡಬೇಕಾಗಿದೆ. ಇಂಗ್ಲೆಂಡ್ ಬೌಲರ್‌ಗಳು ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಆದರೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ಆಟಗಾರರು ತರಬೇತಿಯನ್ನು ಪ್ರಾರಂಭಿಸಿಲ್ಲ. ಇದರಿಂದಾಗಿ ಪರಿಸ್ಥಿತಿ ಕಷ್ಟಕರವಾಗಿದೆ. ಪ್ರವಾಸಕ್ಕೆ ಹೋದ ನಂತರ ಎರಡೂ ದೇಶಗಳ ಆಟಗಾರರು ಸಹ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ.

    ಐಸಿಸಿ ನಿಯಮಗಳು:
    ತರಬೇತಿ ಪ್ರಾರಂಭಿಸಲು ಸರ್ಕಾರದ ಅನುಮತಿ ಅಗತ್ಯವಿದೆ. ಆಟಗಾರರು ಸರ್ಕಾರ ಮತ್ತು ಐಸಿಸಿ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆಟ ಆರಂಭಿಸುವ ನಿಟ್ಟಿನಲ್ಲಿ ಯೋಜನೆಯನ್ನು ಸಿದ್ಧಪಡಿಸಲು ಮುಖ್ಯ ವೈದ್ಯಕೀಯ ಅಧಿಕಾರಿಯ ನೇಮಕ ಅಗತ್ಯವಾಗಿದೆ. ಆಟಗಾರರ ಅಪಾಯವನ್ನು ಕಡಿಮೆ ಮಾಡಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಐಸಿಸಿ ಮಾರ್ಗಸೂಚಿಯಲ್ಲಿ ತಿಳಿಸಿದೆ.

    ಚಾರ್ಟರ್ಡ್ ವಿಮಾನಗಳನ್ನು ಪ್ರಯಾಣಕ್ಕಾಗಿ ಬಳಸಬೇಕು. ಈ ಸಮಯದಲ್ಲಿ ಸಾಮಾಜಿಕ ಅಂತರ ಹಾಗೂ ಆರೋಗ್ಯಕರ ಆಹಾರ ಅಗತ್ಯವಾಗಿದೆ. ಸ್ಥಳೀಯ ನಿಯಮಗಳ ಪ್ರಕಾರ ತಂಡವು ಪರೀಕ್ಷೆ ಮತ್ತು ತಪಾಸಣೆಗೆ ಒಳಗಾಗಬೇಕಾಗುತ್ತದೆ. ಲಾಕ್‍ಡೌನ್ ಇದ್ದರೆ ಅದನ್ನು ಪಾಲಿಸಬೇಕು. ಎಲ್ಲಾ ಆಟಗಾರರಿಗೆ ಪ್ರತ್ಯೇಕ ರೂಮ್‍ಗಳನ್ನು ಕಲ್ಪಿಸಬೇಕು ಎಂದು ಐಸಿಸಿ ತಿಳಿಸಿದೆ.

    ಯಾವುದೇ ಆಟಗಾರ ತನ್ನ ವಸ್ತುಗಳನ್ನು ಸಹ ಆಟಗಾರರೊಂದಿಗೆ ಹಂಚಿಕೊಳ್ಳುವಂತಿಲ್ಲ. ಯಾರಾದರೂ ಕಿಟ್‍ಗಳನ್ನು ಹಂಚಿಕೊಂಡರೆ, ನಂತರ ಸ್ಯಾನಿಟೈಜರ್ ಬಳಸಬೇಕು. ವೈಯಕ್ತಿಕ ತರಬೇತಿ ಮೊದಲು ಪ್ರಾರಂಭವಾಗುತ್ತದೆ. ಇದರ ನಂತರ ತಂಡವು ಸಣ್ಣ ಗುಂಪುಗಳಲ್ಲಿ ಒಟ್ಟಿಗೆ ತರಬೇತಿ ಆರಂಭಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.

  • ಸ್ಪಿನ್ ಮಾಂತ್ರಿಕ ಕುಂಬ್ಳೆ 10 ವಿಕೆಟ್ ಸಾಧನೆಗೆ 21ರ ಸಂಭ್ರಮ

    ಸ್ಪಿನ್ ಮಾಂತ್ರಿಕ ಕುಂಬ್ಳೆ 10 ವಿಕೆಟ್ ಸಾಧನೆಗೆ 21ರ ಸಂಭ್ರಮ

    ಬೆಂಗಳೂರು: ಈ ದಿನ ಸುವರ್ಣ ಅಕ್ಷರಗಳನ್ನ ಬರೆದಿಡಬೇಕಾದ ದಿನ. ವೈಟ್ ಅಂಟ್ ವೈಟ್‍ನಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಕ್ರಿಕೆಟ್ ಇತಿಹಾಸ ಬರೆದ ದಿನ. 21 ವರ್ಷಗಳ ಹಿಂದೆ ಅಂದ್ರೆ 1999ರಲ್ಲಿ ಕನ್ನಡಿಗ ಸ್ಪಿನ್ ಮಾಂತ್ರಿಕ ಅನೀಲ್ ಕುಂಬ್ಳೆ ಒಂದೇ ಪಂದ್ಯದಲ್ಲಿ 10 ವಿಕೆಟ್ ಕಿತ್ತು ವಿಶ್ವದಾಖಲೆ ಬರೆದಿದ್ದರು.

    ಅದು 1999 ಫೆಬ್ರವರಿ 7ರಂದು ಬದ್ಧ ವೈರಿ ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯ. ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಐತಿಹಾಸಿಕ ಹೋರಾಟ ಅದು. ಪಾಕಿಸ್ತಾನ ಚೇಸಿಂಗ್‍ಗೆ 420 ರನ್ ಪಡೆದುಕೊಂಡು ಕ್ರೀಸ್‍ಗಿಳಿದಿತ್ತು. ಆಗ ಪಾಕಿಸ್ತಾನ ಪರ ಆರಂಭಿಕರಾಗಿ ಮೈದಾಕ್ಕಿಳಿದು ಶಾಹೀದ್ ಅಫ್ರಿದಿ ಹಾಗೂ ಸಯೀದ್ ಅನ್ವರ್ ಜೊತೆಯಾಟ ನೋಡಿದ ಕ್ರಿಕೆಟ್ ಅಭಿಮಾನಿಗಳು ಇಂಡಿಯಾ ಟೆಸ್ಟ್ ಕೈ ಚೆಲ್ಲುತ್ತೆ ಎಂದು ಭಾವಿಸಿದ್ದರು. ಆದರೆ ಅಫ್ರಿದಿ ಅವರನ್ನ ತಮ್ಮ ಲೆಗ್ ಸ್ಪಿನ್ ಬಲೆಗೆ ಸಿಲುಕಿಸಿದ ಅನಿಲ್ ಕುಂಬ್ಳೆ ಮೊದಲ ವಿಕೆಟ್ ಪತನಕ್ಕೆ ಕಾರಣವಾದರು. ಕುಂಬ್ಳೆ ಎಸೆದ ಚೆಂಡಿಗೆ ಉತ್ತರ ಕೊಡಲು ಕ್ರೀಸ್ ಬಿಟ್ಟು ಮುಂದೆ ಬಂದ ಅಫ್ರಿದಿಯನ್ನು ವಿಕೆಟ್ ಕೀಪರ್ ನಯನ್ ಮೊಂಗಿಯಾ ಸ್ಟಂಪ್ ಮಾಡಿದ್ದರು. ಅಂದು ಪಾಕಿಸ್ತಾನ ಮೊದಲ ವಿಕೆಟ್‍ಗೆ ಶತಕದ ಜೊತೆಯಾಟವಾಡಿತ್ತು.

    ಇಲ್ಲಿಂದ ಕುಂಬ್ಳೆ ವಿಕೆಟ್ ಬೇಟೆ ಶುರುವಾಯಿತು. ನಂತರ ಇಜಾಜ್ ಅಹಮದ್, ದೈತ್ಯ ಇನ್ಜಮಾಮ್ ಉಲ್ ಹಕ್‍ರನ್ನು ತಮ್ಮ ಖೆಡ್ಡಾಗೆ ಕೆಡವಿದ ಕುಂಬ್ಳೆ ವಿಕೆಟ್‍ಗಳ ಸುರಿಮಳೆಗೈದರು. ಬ್ಯಾಟಿಂಗ್ ಪಿಚ್ ಆಗಿರುವ ಕೋಟ್ಲಾ ಮೈದಾನ ಬ್ಯಾಟ್ಸ್‍ಮನ್‍ಗಳಿಗೆ ತದ್ವಿರುದ್ಧವಾಗಿತ್ತು. ಈ ಪಿಚ್ ಕುಂಬ್ಳೆಗೆ ವರದಾನವಾಯಿತು. ಸ್ಪಿನ್ ಜಾದುವಿನಿಂದ ಪಾಕಿಸ್ತಾನದ ಆಟಗಾರರನ್ನು ಕಟ್ಟಿಹಾಕಿದ ಜಂಬೋ ಬ್ಯಾಕ್ ಟು ಬ್ಯಾಕ್ ವಿಕೆಟ್‍ಗಳನ್ನ ಉರುಳಿಸುತ್ತಾ ಹೋದರು.

    ಶ್ರೀನಾಥ್ ಸಾಥ್:
    ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಜೊತೆ ಟೀಂ ಇಂಡಿಯಾದಲ್ಲಿ ಮತ್ತೊಬ್ಬ ಕನ್ನಡಿಗ ಇದ್ದರು. ಅವರೇ ಅಂದಿನ ಸ್ಪೀಡ್ ಸ್ಟಾರ್ ಮೈಸೂರು ಎಕ್ಸ್‍ಪ್ರೆಸ್ ಜಾವಗಲ್ ಶ್ರೀನಾಥ್. ಒಂದು ಕಡೆ ತಮ್ಮ ಆಪ್ತ ಸ್ನೇಹಿತ ಪಾಕ್ ವಿಕೆಟ್‍ಗಳನ್ನು ಚೆಂಡಾಡುತ್ತಿದ್ದರೆ, ಮತ್ತೊಂದು ಕಡೆ ಶ್ರೀನಾಥ್ ಕುಂಬ್ಳೆ ದಾಖಲೆ ನಿರ್ಮಿಸುವುದಕ್ಕೆ ಆಸರೆಯಾಗಿ ನಿಂತಿದ್ದರು.

    ಕುಂಬ್ಳೆ ಪಾಕಿಸ್ತಾನದ 8 ಹಾಗೂ 9ನೇ ವಿಕೆಟ್ ಪಡೆದಿದ್ದಾಗ ಬೌಲಿಂಗ್ ಕ್ರೀಸ್‍ನಲ್ಲಿದ್ದಿದ್ದು ಜಾವಗಲ್ ಶ್ರೀನಾಥ್. ಹೇಗಾದರೂ ಮಾಡಿ ಕುಂಬ್ಳೆಗೆ 10ನೇ ವಿಕೆಟ್ ಸಿಗಬೇಕು ಅಂತ ಹಠಕ್ಕೆ ಬಿದ್ದ ಶ್ರೀನಾಥ್, ಕಳಪೆ ಬೌಲಿಂಗ್ ಮಾಡಿದರು. ಕೊನೆಗೂ ಇತಿಹಾಸ ಸೃಷ್ಟಿಸುವ ಸಮಯ ಬಂದೇ ಬಿಡ್ತು. ಪಾಕಿಸ್ತಾನದ ಕೊನೆ ವಿಕೆಟ್ ಕಬಳಿಸಿ, 2ನೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪೂರೈಸಿದ ಅನಿಲ್ ಕುಂಬ್ಳೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದಾಖಲೆ ಬರೆದರು. 207 ರನ್‍ಗೆ ಪಾಕಿಸ್ತಾನ ಆಲೌಟ್ ಆಯಿತು. 212ರನ್‍ಗಳಿಂದ ಭಾರತ ವಿಜಯೋತ್ಸವ ಆಚರಿಸಿತು. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅನಿಲ್ ಕುಬ್ಳೆ ಅವರ ಈ ಅಮೋಘ ಪ್ರದರ್ಶನಕ್ಕೆ ಇಂದಿಗೆ 21 ವರ್ಷಗಳ ಸಂಭ್ರಮ.

  • ಅಂಪೈರ್, ಎದುರಾಳಿ ಆಟಗಾರನೊಂದಿಗೆ ಅಸಭ್ಯ ವರ್ತನೆ- ಆಸೀಸ್ ವೇಗಿಗೆ ನಿಷೇಧದ ಬರೆ

    ಅಂಪೈರ್, ಎದುರಾಳಿ ಆಟಗಾರನೊಂದಿಗೆ ಅಸಭ್ಯ ವರ್ತನೆ- ಆಸೀಸ್ ವೇಗಿಗೆ ನಿಷೇಧದ ಬರೆ

    ಬ್ರಿಸ್ಬೇನ್: ಅಂಪೈರ್, ಎದುರಾಳಿ ಆಟಗಾರರೊಂದಿಗೆ ಅಸಭ್ಯ ವರ್ತಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಅವರಿಗೆ ನಿಷೇಧದ ಬರೆ ಬಿದ್ದಿದೆ. ಇದರಿಂದಾಗಿ ಮುಂದಿನ ವಾರ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟಿಗೆ ಜೇಮ್ಸ್ ಪ್ಯಾಟಿನ್ಸನ್ ಅಲಭ್ಯವಾಗಲಿದ್ದಾರೆ.

    ದೇಶೀಯ ಪಂದ್ಯದ ಸಂದರ್ಭದಲ್ಲಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ಯಾಟಿನ್ಸನ್ ರನ್ನು ನಿಷೇಧಿಸಲಾಗಿದೆ. ಪ್ಯಾಟಿನ್ಸನ್ ಶೆಫೀಲ್ಡ್  ವಿಕ್ಟೋರಿಯಾ ಪರ ಆಡುವಾಗ ಕ್ವೀನ್ಸ್ ಲ್ಯಾಂಡ್ ಆಟಗಾರ ಮತ್ತು ಅಂಪೈರ್ ಜೊತೆ ಕೆಟ್ಟದಾಗಿ ವರ್ತಿಸಿದರು.

    ಪ್ಯಾಟಿನ್ಸನ್ ಕಳೆದ ವರ್ಷವೂ ನಿಯಮ ಉಲ್ಲಂಘಿಸಿ ಎರಡು ಬಾರಿ ಶಿಕ್ಷೆಗೆ ಗುರಿಯಾಗಿದ್ದರು. ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳದ ಪ್ಯಾಟಿನ್ಸನ್, ಕಳೆದ ವಾರ ತವರಿನಲ್ಲಿ ನಡೆದ ಪಂದ್ಯವೊಂದರಲ್ಲಿ ಕ್ವೀನ್ಸ್ ಲ್ಯಾಂಡ್ ಆಟಗಾರನನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಅಂಪೈರ್ ಜೊತೆಗೂ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಅಂತರಾಷ್ಟ್ರೀಯ ಪಂದ್ಯವೊಂದಕ್ಕೆ ಪ್ಯಾಟಿನ್ಸನ್ ಅವರಿಗೆ ನಿಷೇಧಿಸಲಾಯಿತು. ಈ ಮೂಲಕ ಗಬ್ಬಾದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ಯಾಟಿನ್ಸನ್ ಅಲಭ್ಯವಾಗಲಿದ್ದಾರೆ.

    ಆ ಒಂದು ಕ್ಷಣದಲ್ಲಿ ನಾನು ತಪ್ಪು ಮಾಡಿದ್ದೇನೆ. ಅದನ್ನು ತಕ್ಷಣವೇ ಅರಿತುಕೊಂಡೆ. ಹೀಗಾಗಿ ಅದೇ ಸಮಯದಲ್ಲಿ ಅಂಪೈರ್ ಮತ್ತು ಎದುರಾಳಿ ಆಟಗಾರರಿಗೆ ಕ್ಷಮೆಯಾಚಿಸಿದೆ. ನಾನು ತಪ್ಪು ಮಾಡಿದ್ದೇನೆ. ಇದರಿಂದಾಗಿ ಟೆಸ್ಟ್ ಪಂದ್ಯದಿಂದ ದೂರವಿರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪ್ಯಾಟಿನ್ಸನ್ ತಿಳಿಸಿದ್ದಾರೆ.

    ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಕೂಡ ಜೇಮ್ಸ್ ಪ್ಯಾಟಿನ್ಸನ್ ಅವರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಮೇಲೆ ಒಂದು ವರ್ಷದ ನಿಷೇಧ ಹೇರಿದ ನಂತರ, ಕ್ರಿಕೆಟ್ ಆಸ್ಟ್ರೇಲಿಯಾ ಶಿಸ್ತಿನ ಬಗ್ಗೆ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಪ್ಯಾಟಿನ್ಸನ್ ವಿರುದ್ಧದ ಕಠಿಣ ಕ್ರಮವೂ ಇದಕ್ಕೆ ಸಾಕ್ಷಿ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗುರುವಾರದಿಂದ ಬ್ರಿಸ್ಬೇನ್‍ನಲ್ಲಿ ಪ್ರಾರಂಭವಾಗಲಿದೆ.

  • ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಹಿಟ್‍ಮ್ಯಾನ್

    ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಹಿಟ್‍ಮ್ಯಾನ್

    ಹೈದರಾಬಾದ್: ಬುಧವಾರ ಆರಂಭಗೊಂಡ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್‍ರ ದಾಖಲೆಗೆ ಸಮಾನರಾಗಿದ್ದಾರೆ.

    ಬುಧವಾರ ವೈಝಾಗ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಓಪನರ್ ಗಳಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ ಮತ್ತು ಕನ್ನಡಿಗ ಮಯಾಂಕ್ ಆಗರವಾಲ್ ಉತ್ತಮ ಆಟವಾಡಿದರು. ಆರಂಭಿಕ ಜೊತೆಯಾಟದಲ್ಲಿ ಈ ಜೋಡಿ ಮೊದಲ ದಿನದ ಅಂತ್ಯಕ್ಕೆ 202 ರನ್‍ಗಳ ಜೊತೆಯಾಟವಾಡಿತು. ಈ ಇನ್ನಿಂಗ್ಸ್‍ನಲ್ಲಿ ಶತಕ ಸಿಡಿಸಿ ಮಿಂಚಿದ ರೋಹಿತ್ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಸರಾಸರಿಯಲ್ಲಿ ಡಾನ್ ಬ್ರಾಡ್ಮನ್‍ರಿಗೆ ಸಮಾನದ ದಾಖಲೆ ಮಾಡಿದ್ದಾರೆ.

    ಟೆಸ್ಟ್ ಕ್ರಿಕೆಟ್‍ನ 50 ಕ್ಕೂ ಹೆಚ್ಚಿನ ಇನ್ನಿಂಗ್ಸ್ ಗಳಲ್ಲಿ ಡಾನ್ ಬ್ರಾಡ್ಮನ್ 98.22 ಸರಾಸರಿಯನ್ನು ಹೊಂದಿದ್ದರು. ಟೆಸ್ಟ್ ಕ್ರಿಕೆಟ್‍ನಲ್ಲಿ ಕಳೆದ 15 ಇನ್ನಿಂಗ್ಸ್ ನಲ್ಲಿ ರೋಹಿತ್ 4 ಶತಕ ಮತ್ತು 5 ಅರ್ಧಶತಕದೊಂದಿದೆ ಒಟ್ಟು 884 ರನ್ ಗಳಿಸಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ 10 ಕ್ಕೂ ಹೆಚ್ಚು ಇನ್ನಿಂಗ್ಸ್ ಗಳಲ್ಲಿ 98.22 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು, ರೋಹಿತ್ ಶರ್ಮಾ ಬ್ರಾಡ್ಮನ್ ಅವರ ದಾಖಲೆಗೆ ಸಮಾನರಾಗಿದ್ದಾರೆ.

    ಇದರ ಜೊತೆಗೆ ರೋಹಿತ್ ಶರ್ಮಾ ಇನ್ನೊಂದು ದಾಖಲೆ ಬರೆದಿದ್ದು, ಶಿಖರ್ ಧವನ್, ಕೆ.ಎಲ್ ರಾಹುಲ್ ಮತ್ತು ಪೃಥ್ವಿ ಶಾ ಅವರ ರೀತಿಯಲ್ಲಿ ಓಪನರ್ ಆಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಮೂರು ಮಾದರಿಯ ಪಂದ್ಯಗಳಲ್ಲಿ ಆರಂಭಿಕನಾಗಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ.

    ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ಮಾರ್ಟಿನ್ ಗುಪ್ಟಿಲ್, ತಿಲಕರತ್ನ ದಿಲ್ಶನ್, ಅಹ್ಮದ್ ಶೆಹಜಾದ್, ಶೇನ್ ವ್ಯಾಟ್ಸನ್, ಮತ್ತು ತಮೀಮ್ ಇಕ್ಬಾಲ್ ಅವರ ನಂತರ ರೋಹಿತ್ ಶರ್ಮಾ ಓಪನರ್ ಆಗಿ ಟೆಸ್ಟ್, ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಶತಕ ಗಳಿಸಿದ ವಿಶ್ವದ ಏಳನೇ ಬ್ಯಾಟ್ಸ್ ಮನ್ ಆಗಿದ್ದಾರೆ.

    ವೈಝಾಗ್ ಟೆಸ್ಟ್ ನ ಮೊದಲ ದಿನದಲ್ಲಿ ಸೌತ್ ಅಫ್ರಿಕಾ ಬೌಲರ್ ಗಳ ಬೆವರಿಳಿಸಿದ ಭಾರತದ ಆರಂಭಿಕ ಜೋಡಿ ಔಟ್ ಆಗದೆ ದ್ವಿಶತಕದ ಜೊತೆಯಾಟವಾಡಿದರು. ಇದರಲ್ಲಿ ಶತಕ ಸಿಡಿಸಿ ಮಿಂಚಿದ ರೋಹಿತ್ ಶರ್ಮಾ 174 ಎಸೆತದಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್ ನೊಂದಿಗೆ 115 ರನ್ ಗಳಿಸಿದರೆ ಇವರಿಗೆ ಉತ್ತಮ ಸಾಥ್ ಕೊಟ್ಟ ಕನ್ನಡಿಗ ಮಯಾಂಕ್ ಆಗರವಾಲ್ 183 ಎಸೆತದದಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ನೊಂದಿಗೆ 84 ರನ್ ಸಿಡಿಸಿ ಔಟಾಗದೆ ಉಳಿದಿದ್ದಾರೆ.

  • ರೋಹಿತ್ ಕೈಬಿಟ್ಟಿದ್ದರ ಬಗ್ಗೆ ಮೌನ ಮುರಿದ ಕೊಹ್ಲಿ

    ರೋಹಿತ್ ಕೈಬಿಟ್ಟಿದ್ದರ ಬಗ್ಗೆ ಮೌನ ಮುರಿದ ಕೊಹ್ಲಿ

    ನಾರ್ತ್ ಸೌಂಡ್: ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವ 11 ಜನರ ಪಟ್ಟಿಯಿಂದ ರೋಹಿತ್ ಶರ್ಮಾ ಬದಲಾಗಿ ಹನುಮ ವಿಹಾರಿ ಅವರಿಗೆ ಅವಕಾಶ ನೀಡಲಾಗಿತ್ತು. ಈ ನಿರ್ಧಾರದಿಂದಾಗಿ ಭಾರೀ ಟೀಕೆ ಎದುರಿಸಿದ್ದ ನಾಯಕ ವಿರಾಟ್ ಕೊಹ್ಲಿ ಈಗ ಮೌನ ಮುರಿದಿದ್ದಾರೆ.

    ಹನುಮ ವಿಹಾರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಾಮರ್ಥ್ಯವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ 60 ಅಂಕ, ಇಂಗ್ಲೆಂಡಿಗೆ 24 ಅಂಕ – ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕಾಚಾರ ಹೇಗೆ?

    ಸರಿಯಾದ ಸಂಯೋಜನೆ ಅಗತ್ಯವಾದ ಕಾರಣ ವಿಹಾರಿ ಅವರಿಗೆ ಸ್ಥಾನ ನೀಡಲಾಗಿತ್ತು. ಒಂದು ವೇಳೆ ಅಗತ್ಯಬಿದ್ದರೆ ಅವರು ಬೌಲರ್ ಗಳಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಎಂಬ ವಿಚಾರ ಹೊಂದಿದ್ದೇವು. ಈ ಬಗ್ಗೆ ನಾವು ಮೊದಲು ಸಾಮೂಹಿಕ ಚರ್ಚೆ ನಡೆಸಿದ್ದೇವೆ. ನಂತರ ತಂಡಕ್ಕೆ ಯಾವುದು ಉತ್ತಮ ಎಂದು ನಿರ್ಧರಿಸಲಾಗಿತ್ತು. ಆಡುವ 11 ಜನರ ಬಗ್ಗೆ ಯಾವಾಗಲೂ ಅನೇಕ ಅಭಿಪ್ರಾಯಗಳು ಇರುತ್ತವೆ. ಆದರೆ ತಂಡದ ಹಿತದೃಷ್ಟಿಯಿಂದ ಹುನುಮ ವಿಹಾರಿಗೆ ಮಣೆ ಹಾಕಲಾಯಿತು. ಇದನ್ನು ಜನರು ತಿಳಿದುಕೊಳ್ಳಬೇಕು ಎಂದು ಕೊಹ್ಲಿ ಹೇಳಿದ್ದಾರೆ.

    ಹೌದು ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆದರೆ ಕೈ ಎತ್ತುವ ಇತರ ಜನರಿಂದ ಅವುಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ನಾವು ಎಲ್ಲರನ್ನೂ ಆನಂದಿಸುತ್ತೇವೆ. ಇದು ನಮ್ಮ ಯಶಸ್ಸಿನ ರಹಸ್ಯವಾಗಿದೆ. ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ತಂಡಕ್ಕೆ ಕೊಡುಗೆ ನೀಡುವ ಪರಿಸ್ಥಿತಿಯಲ್ಲಿ ನಾನು ಇದ್ದೇನೆ ಎಂಬುದು ಒಂದು ವರದಾನ. ತಂಡವನ್ನು ಅವರ ಕ್ರೆಡಿಟ್ ಮೂಲಕ ಜಯಿಸಬಹುದು ಅಂತ ಭಾವಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಪಂದ್ಯದಲ್ಲಿ ಭಾರತ ತಂಡದ ಮೊದಲ ಇನ್ನಿಂಗ್ಸ್ ನಲ್ಲಿ ಹನುಮ ವಿಹಾರಿ ಅಷ್ಟೇನು ಉತ್ತಮ ಆಟ ನೀಡಲಿಲ್ಲ. ಈ ವೇಳೆ 32 ರನ್‍ಗಳನ್ನು ಮಾತ್ರ ಗಳಿಸಿದ್ದರು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಅವರು 93 ರನ್ ಗಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಇದರಲ್ಲಿ ಅವರು 10 ಬೌಂಡರಿ ಮತ್ತು 1 ಸಿಕ್ಸ್ ಬಾರಿಸಿದರು. ಅವರಲ್ಲದೆ, ಅಜಿಂಕ್ಯ ರಹಾನೆ ಮೊದಲ ಇನ್ನಿಂಗ್ಸ್ ನಲ್ಲಿ 81 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 102 ರನ್ ಗಳಿಸಿದ್ದಾರೆ. ಕೆ.ಎಲ್.ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲಿ 44 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 38 ರನ್ ಕಲೆ ಹಾಕಿ ತಂಡಕ್ಕೆ ನೆರವಾದರು. ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ಇನ್ನಿಂಗ್ಸ್ ನಲ್ಲಿ 55 ರನ್ ನೀಡಿ 1 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 7 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ಇಶಾಂತ್ ಶರ್ಮಾ ಕೂಡ ಉತ್ತಮ ಬೌಲಿಂಗ್ ಮಾಡಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದಿದ್ದಾರೆ.

    ಅಜಿಂಕ್ಯ ರಹಾನೆ ಅವರನ್ನು ಪ್ಲೇಯರ್ ಆಫ್ ದಿ ಮ್ಯಾಚ್ ಎಂದು ಆಯ್ಕೆ ಮಾಡಲಾಯಿತು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯವು ಆಗಸ್ಟ್ 30 ರಿಂದ ಜಮೈಕಾದ ಸಬಿನಾ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.

  • ಸಚಿನ್ ನಿರ್ಮಿಸಿದ ಆ ದಾಖಲೆಯನ್ನು ವಿರಾಟ್ ಕೂಡ ಮುರಿಯಲು ಸಾಧ್ಯವಿಲ್ಲ – ಸೆಹ್ವಾಗ್

    ಸಚಿನ್ ನಿರ್ಮಿಸಿದ ಆ ದಾಖಲೆಯನ್ನು ವಿರಾಟ್ ಕೂಡ ಮುರಿಯಲು ಸಾಧ್ಯವಿಲ್ಲ – ಸೆಹ್ವಾಗ್

    ನವದೆಹಲಿ: ಕ್ರಿಕೆಟ್‍ನ ಲಿಟ್ಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಎಲ್ಲಾ ದಾಖಲೆಯನ್ನು ಭಾರತದ ನಾಯಕ ವಿರಾಟ್ ಕೊಹ್ಲಿ ಮುರಿಯಬಹುದು. ಆದರೆ ಆ ಒಂದು ದಾಖಲೆಯನ್ನು ಮುರಿಯಲು ಕೊಹ್ಲಿ ಸೇರಿದಂತೆ ಯಾರು ಆಟಗಾರನಿಂದಲೂ ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಹೇಳಿದ್ದಾರೆ.

    ಕ್ರಿಕೆಟ್‍ನ ಮೂರು ಮಾದರಿಯಲ್ಲೂ ಕೊಹ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ-20 ಸೇರಿದಂತೆ ಎಲ್ಲಾ ಮಾದರಿಯಲ್ಲೂ ಎಲ್ಲಾ ರೀತಿಯ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಎಂದು ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದರು.

    ಇಷ್ಟೆಲ್ಲ ದಾಖಲೆ ಬ್ರೇಕ್ ಮಾಡಿರುವ ಕೊಹ್ಲಿ, ಸಚಿನ್ ಅವರು ಮಾಡಿದ ಒಂದು ದಾಖಲೆಯನ್ನು ಮುರಿಯಲು ಆಗುವುದಿಲ್ಲ. ಸಚಿನ್ ಅವರು ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ದಾಖಲೆಯನ್ನು ಕೊಹ್ಲಿ ಸೇರಿದಂತೆ ವಿಶ್ವದ ಯಾವ ಆಟಗಾರನಿಂದ ಮುರಿಯಲು ಸಾಧ್ಯವಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು.

    ಸುದ್ದಿ ವಾಹಿನಿವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೆಹ್ವಾಗ್ ಅವರು, ಈ ಸಮಯದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್ ಮನ್. ಅವರು ಶತಕಗಳನ್ನು ಗಳಿಸುವ ರೀತಿ, ಅವರು ರನ್ ಗಳಿಸುವ ರೀತಿ ನೋಡಿದರೆ ಸಚಿನ್ ತೆಂಡೂಲ್ಕರ್ ಅವರ ಹೆಚ್ಚಿನ ದಾಖಲೆಗಳನ್ನು ಅವರು ಮುರಿಯುತ್ತಾರೆ ಎಂದು ನನಗೆ ಗೊತ್ತಿದೆ. ಆದರೆ ಸಚಿನ್ ತೆಂಡೂಲ್ಕರ್ ಆಡಿದ 200 ಟೆಸ್ಟ್ ಪಂದ್ಯಗಳನ್ನು ಕೊಹ್ಲಿ ಸೇರಿ ಮತ್ತೆ ಯಾವ ಆಟಗಾರನಿಂದ ಮುರಿಯಲು ಸಾಧ್ಯವೇ ಇಲ್ಲ ಎಂದರು.

    ಸಚಿನ್ ಅವರನ್ನು ಬಿಟ್ಟರೆ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ 168 ಟೆಸ್ಟ್ ಪಂದ್ಯಗಳನ್ನು ಆಡಿ ಎರಡನೇ ಸ್ಥಾನದಲ್ಲಿ ಇದ್ದಾರೆ. 2011 ಜೂನ್ 20 ರಂದು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ ಭಾರತದ ಪರವಾಗಿ 77 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 25 ಶತಕಗಳೊಂದಿಗೆ 6,613 ರನ್ ಗಳಿಸಿದ್ದಾರೆ.

    ಈಗ ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವಿರಾಟ್ ಕೊಹ್ಲಿ ಅವರು, ಮೊದಲ ಪಂದ್ಯದಲ್ಲೇ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. 12 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 9 ರನ್ ಗಳಿಸಿದ್ದ ವಿರಾಟ್ ವಿಂಡೀಸ್ ವೇಗಿ ಶಾನನ್ ಗೇಬ್ರಿಯಲ್ ವಿಕೆಟ್ ಒಪ್ಪಿಸಿದ್ದರು.

  • ಆಡಿದ್ದು 532 ಟೆಸ್ಟ್, ಗೆಲುವು 150-ಟೀಂ ಇಂಡಿಯಾ ಟೆಸ್ಟ್ ಪಂದ್ಯದ ಪಯಣ

    ಆಡಿದ್ದು 532 ಟೆಸ್ಟ್, ಗೆಲುವು 150-ಟೀಂ ಇಂಡಿಯಾ ಟೆಸ್ಟ್ ಪಂದ್ಯದ ಪಯಣ

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, 150ನೇ ಟೆಸ್ಟ್ ಗೆದ್ದ ವಿಶ್ವದ 5ನೇ ದೇಶವಾಗಿ ಹೊರ ಹೊಮ್ಮಿದೆ. ಈ ವರ್ಷ ವಿದೇಶಿ ನೆಲದಲ್ಲಿ ಟೀಂ ಇಂಡಿಯಾ ಗೆದ್ದ ನಾಲ್ಕನೇ ಪಂದ್ಯ ಇದಾಗಿದೆ.

    ಆಸ್ಟ್ರೇಲಿಯಾ 384, ಇಂಗ್ಲೆಂಡ್ 364, ವೆಸ್ಸ್ ಇಂಡೀಸ್ 171 ಮತ್ತು ದಕ್ಷಿಣ ಆಫ್ರಿಕಾ 162 ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಇಂದಿನ ಪಂದ್ಯ ಜಯಿಸುವ ಮೂಲಕ ಟೀಂ ಇಂಡಿಯಾ 150ನೇ ಬಾರಿ ವಿಜಯ ಪತಾಕೆ ಹಾರಿಸುವ ಮೂಲಕ 5ನೇ ಸ್ಥಾನವನ್ನು ಪಡೆದುಕೊಂಡಿದೆ.

    1932ರಿಂದ ಭಾರತ ಇದೂವರೆಗೂ 532 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ 150 ಗೆಲುವು, 165 ಸೋಲು ಮತ್ತು 216 ಡ್ರಾ ಮಾಡಿಕೊಂಡಿದ್ದರೆ, ಒಂದು ಪಂದ್ಯ ಟೈಯಲ್ಲಿ ಅಂತ್ಯವಾಗಿದೆ. 562ರಲ್ಲಿ ವಿದೇಶಿ ನೆಲದಲ್ಲಿ 265 ಟೆಸ್ಟ್ ಆಡಿದೆ. ವಿದೇಶದಲ್ಲಿ ಆಡಿದ ಟೆಸ್ಟ್ ಪಂದ್ಯಗಳ ಪೈಕಿ 49ರಲ್ಲಿ ಗೆಲುವು ಸಾಧಿಸಿದ್ರೆ, 113ರಲ್ಲಿ ಸೋಲು ಕಂಡಿತ್ತು. 103 ಪಂದ್ಯಗಳು ಟೀಂ ಇಂಡಿಯಾ ಡ್ರಾ ಮಾಡಿಕೊಂಡಿದೆ. ಇದನ್ನೂ ಓದಿ: ಗಂಗೂಲಿ ದಾಖಲೆ ಟೈ, ಧೋನಿಗೆ ಸಮನಾಗಲು ಕೊಹ್ಲಿಗೆ ಬೇಕು 1 ಗೆಲುವು!

    50 ವರ್ಷಗಳ ನಂತರ ಟೀಂ ಇಂಡಿಯಾ ವಿದೇಶದಲ್ಲಿ ಒಂದೇ ವರ್ಷ ನಾಲ್ಕು ಟೆಸ್ಟ್ ಗಳಲ್ಲಿ ಗೆಲುವು ಕಾಣುವ ಮೂಲಕ ದಾಖಲೆ ಬರೆದಿದೆ. ದಕ್ಷಿಣ ಆಫ್ರಿಕಾದ ಜೋಹನೆಸ್ ಬರ್ಗ್, ಇಂಗ್ಲೆಂಡ್ ನ ಟ್ರೆಂಟಬ್ರಿಜಾ, ಆಸ್ಟ್ರೇಲಿಯಾದ ಅಡಿಲೇಡ್ ಮತ್ತು ಮೆಲ್ಬೊರ್ನ್ ನಲ್ಲಿ ಟೀಂ ಇಂಡಿಯಾ ಗೆದ್ದಿದೆ. ಈ ಹಿಂದೆ 1968ರಲ್ಲಿ ಟೀಂ ಇಂಡಿಯಾ ವಿದೇಶದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಇದಾದ 50 ವರ್ಷದ ಬಳಿಕ ಅಂದ್ರೆ 2018ರಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಹಲವು ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದನ್ನೂ ಓದಿಟೀಂ ಇಂಡಿಯಾಗೆ 150ನೇ ಟೆಸ್ಟ್ ಗೆಲುವು – ಕೀಪರ್ ರಿಷಭ್, ಇಶಾಂತ್ ಶರ್ಮಾ, ಬೂಮ್ರಾ ದಾಖಲೆ!

    2000ನೇ ಇಸವಿಯಿಂದ ಇಂದಿನವರೆಗೂ ಟೀಂ ಇಂಡಿಯಾ 202 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ 89ರಲ್ಲಿ ಗೆಲುವು, 56ರಲ್ಲಿ ಸೋಲು, 57 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 1952ರಲ್ಲಿ ಭಾರತ ತನ್ನ 25ನೇ ಟೆಸ್ಟ್ ನಲ್ಲಿ ಮೊದಲು ಗೆಲುವು ದಾಖಲಿಸಿತ್ತು. 1994ರಲ್ಲಿ 286ನೇ ಟೆಸ್ಟ್ ಪಂದ್ಯದಲ್ಲಿ 50ನೇ ಗೆಲುವನ್ನು ದಾಖಲಿಸಿತು. 27ನೇ ನವೆಂಬರ್ 2009ರಲ್ಲಿ ಆಡಿದ 432ನೇ ಮ್ಯಾಚ್ ನಲ್ಲಿ 100ನೇ ಗೆಲುವು ಪಡೆದಿತ್ತು. ಇಂದು ಆಸ್ಟೇಲಿಯಾ ವಿರುದ್ಧದ ಪಂದ್ಯದಲ್ಲಿ 150ನೇ ಗೆಲುವನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ. ಟೀಂ ಇಂಡಿಯಾ ಈ ವರ್ಷ ಅಂದ್ರೆ 2018ರಲ್ಲಿ ಒಟ್ಟು 48 ಪಂದ್ಯಗಳನ್ನು ಆಡಿದ್ದು, 5 ಟೆಸ್ಟ್ ಗಳನ್ನು ಡ್ರಾ ಮಾಡಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ಮತ್ತೊಂದು ಆಘಾತ!

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ಮತ್ತೊಂದು ಆಘಾತ!

    ಲಂಡನ್: ಆಗಸ್ಟ್ 1 ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ ಮತ್ತೊಂದು ಅಘಾತವನ್ನು ಎದುರಿಸಿದ್ದು, ತಂಡದ ಪ್ರಮುಖ ಸ್ಪೀನರ್ ಆರ್ ಅಶ್ವಿನ್ ಗಾಯದ ಸಮಸ್ಯೆ ಸಿಲುಕಿದ್ದಾರೆ.

    ಎಸ್ಸೆಕ್ಸ್ ತಂಡದ ವಿರುದ್ಧ ಏಕೈಕ ಅಭ್ಯಾಸ ಪಂದ್ಯಕ್ಕೂ ಮೊದಲು ಅಭ್ಯಾಸದ ವೇಳೆ ಅಶ್ವಿನ್ ತಮ್ಮ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಕೈ ಬೆರಳಿಗೆ ಗಾಯವಾದ ಕಾರಣ ಅಶ್ವಿನ್ 2ನೇ ದಿನದ ತರಬೇತಿಗೆ ಗೈರುಹಾಜರಿ ಆಗಿದ್ದರು. ಸದ್ಯ ಅಶ್ವಿನ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ಬಿಸಿಸಿಐ ವೈದ್ಯರು ತಿಳಿಸಿದ್ದಾರೆ. ಆಗಸ್ಟ್ 1 ರಂದು ಆರಂಭವಾಗುವ ಮೊದಲ ಪಂದ್ಯದಲ್ಲಿ ಅಶ್ವಿನ್ ಭಾಗವಹಿಸುವ ನಿರೀಕ್ಷೆ ಇದೆ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಆರಂಭದಲ್ಲೇ ಟೀಂ ಇಂಡಿಯಾ ಆಟಗಾರರು ಗಾಯದ ಸಮಸ್ಯೆ ಎದುರಿಸಿದ್ದರು. ತಂಡದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಹಾಗೂ ಜಸ್‍ಪ್ರೀತ್ ಬುಮ್ರಾ ಗಾಯದ ಸಮಸ್ಯೆಗೆ ಸಿಲುಕಿದ್ದರು.

    ಎಸ್ಸೆಕ್ಸ್ ತಂಡದ ವಿರುದ್ಧದ ಎರಡನೇ ದಿನದಾಟವನ್ನು ಮುಂದುವರಿಸಿದ ದಿನೇಶ್ ಕಾರ್ತಿಕ್ (82 ರನ್) ಅರ್ಧ ಶತಕ ಸಿಡಿಸಿ ಮಿಂಚಿದರು. ಮೊದಲ ದಿನದಾಟದಲ್ಲಿ 33 ರನ್ ಗಳಿಸಿದ್ದ ಪಾಂಡ್ಯ ಕೂಡ 51 ರನ್ ಗಳಿಸಿ ಅರ್ಧಶತಕ ಗಳಿಸಿ ತಂಡದ ಮೊತ್ತ 300 ಗಡಿದಾಟಲು ನೆರವಾದರು. ಬಳಿಕ ಬಂದ ರಿಷಭ್ ಪಂತ್ ಬಿರುಸಿನ ಆಟವಾಡಿ 33 ರನ್ ಗಳಿಸಿದರು. ಇದರೊಂದಿಗೆ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 395 ರನ್ ಗಳಿಸಿ ಅಲೌಟ್ ಆಗಿದೆ.

    ಎಸ್ಸೆಕ್ಸ್ ತಂಡ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿದೆ. ಎಸ್ಸೆಕ್ಸ್ ತಂಡದ ಪರ ಟಾಮ್ ವೆಸ್ಟ್ಲಿ 57 ರನ್ ಹಾಗೂ ಮೈಕಲ್ ಪೆಪ್ಪರ್ 53 ರನ್ ಗಳಿಸಿ ಅರ್ಧಶತಕ ಗಳಿಸಿದ್ದಾರೆ. ಟೀಂ ಇಂಡಿಯಾ ಪರ ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದಿದ್ದಾರೆ. ಎಸ್ಸೆಕ್ಸ್ ವಿರುದ್ಧದ ಪಂದ್ಯದ ಆರಂಭಕ್ಕೂ ಮುನ್ನವೇ ಕ್ರೀಡಾಂಗಣ ಪಿಚ್ ಕುರಿತು ಟೀಂ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿತ್ತು, ಇದರಿಂದ 4 ದಿನಗಳ ಪಂದ್ಯವನ್ನು 3 ದಿನಗಳಿಗೆ ಕಡಿತಗೊಳಿಸಲಾಯಿತ್ತು.