Tag: ಟೆಸ್ಟ್ ಕ್ರಿಕೆಟ್

  • Test Twenty | ಟೆಸ್ಟ್‌ನಲ್ಲೂ ಚುಟುಕು ಕ್ರಿಕೆಟ್ ಶುರು – ಏನಿದು ಟೆಸ್ಟ್ ಟ್ವೆಂಟಿ? ಯಾವಾಗ ಶುರು? ಸ್ವರೂಪ ಹೇಗಿದೆ?

    Test Twenty | ಟೆಸ್ಟ್‌ನಲ್ಲೂ ಚುಟುಕು ಕ್ರಿಕೆಟ್ ಶುರು – ಏನಿದು ಟೆಸ್ಟ್ ಟ್ವೆಂಟಿ? ಯಾವಾಗ ಶುರು? ಸ್ವರೂಪ ಹೇಗಿದೆ?

    2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ (T20 World Cup) ಟೂರ್ನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ನೆನಪಿನಲ್ಲಿಡಬೇಕಾದ ವರ್ಷ. ಏಕೆಂದರೆ ಆಗಷ್ಟೇ ಮಹತ್ವ ಪಡೆದುಕೊಳ್ಳುತ್ತಿದ್ದ ಮೊಟ್ಟ ಮೊದಲ ಚುಟುಕು ಕ್ರಿಕೆಟ್‌ಗೆ ಬುನಾದಿ ಹಾಕಿಕೊಟ್ಟ ಟೂರ್ನಿ ಅದಾಗಿತ್ತು. ಆಗ ಚುಟುಕು ಕ್ರಿಕೆಟ್‌ ಮಾದರಿಯನ್ನ ಬಹಳಷ್ಟು ಜನ ಟೀಕಿಸುತ್ತಿದ್ರು. ಭಾರತ ಚೊಚ್ಚಲ ಟಿ20 ವಿಶ್ವಕಪ್‌ ಮುಡಿಗೇರಿಸಿಕೊಂಡ ಬಳಿಕ ಜನಪ್ರಿಯತೆ ಪಡೆದುಕೊಂಡಿತು. 2008ರಲ್ಲಿ ಪದಾರ್ಪಣೆ ಮಾಡಿದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ಚುಟುಕು ಕ್ರಿಕೆಟ್‌ ಮಹತ್ವವನ್ನ ಜಗತ್ತಿಗೇ ಸಾರಿತು. ಇದೀಗ ಟೆಸ್ಟ್‌ ಕ್ರಿಕೆಟ್‌ (Test Cricket) ಸ್ವರೂಪಕ್ಕೂ ಟಿ20 ಸ್ಪರ್ಶ ನೀಡಲು ಕ್ರಿಕೆಟ್‌ ತಜ್ಞರು ಮುಂದಾಗಿದ್ದಾರೆ.

    ಕ್ರಿಕೆಟ್‌ ದಿಗ್ಗಜರಾದ ಎಬಿ ಡಿವಿಲಿಯರ್ಸ್ (AB De Villiers), ಸರ್ ಕ್ಲೈವ್ ಲಾಯ್ಡ್, ಮ್ಯಾಥ್ಯೂ ಹೇಡನ್ ಮತ್ತು ಹರ್ಭಜನ್ ಸಿಂಗ್ ಅವರನ್ನೊಳಗೊಂಡ ಸಲಹಾ ಮಂಡಳಿಯು ಈ ನಾಲ್ಕನೇ ಸ್ವರೂಪದ ಟೆಸ್ಟ್‌ ಕ್ರಿಕೆಟ್‌ನ್ನು ಅನುಮೋದಿಸಿದ್ದಾರೆ. ಈ ಸ್ವರೂಪದ ಟೂರ್ನಿ 2026ರ ಜನವರಿಯಿಂದಲೇ ಅನುಷ್ಠಾನಕ್ಕೆ ತರಲು ದಿ ಒನ್ ಒನ್ ಸಿಕ್ಸ್ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಕ್ರೀಡಾ ಉದ್ಯಮಿ ಗೌರವ್ ಬಹಿರ್ವಾನಿ ಮುಂದಾಗಿದ್ದಾರೆ.

    ಏನಿದು ಟೆಸ್ಟ್‌ ಟ್ವೆಂಟಿ? ಹೇಗಿರಲಿದೆ ಸ್ವರೂಪ?
    13 ರಿಂದ 19 ವರ್ಷದೊಳಗಿನವರಿಗಾಗಿ ಟೆಸ್ಟ್‌ 20 (Test Twenty) ಕ್ರಿಕೆಟ್‌ ಮಾದರಿಯನ್ನ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಸಹ ರೆಡ್‌ ಬಾಲ್‌ ಕ್ರಿಕೆಟ್‌ ಆಗಿರಲಿದ್ದು, 80 ಓವರ್‌ಗಳ ಪಂದ್ಯವಾಗಿರಲಿದೆ. ಉಭಯ ತಂಡಗಳು ಒಂದು ಪಂದ್ಯದಲ್ಲಿ ತಲಾ 20 ಓವರ್‌ನಂತೆ 2 ಇನ್ನಿಂಗ್ಸ್‌ಗಳನ್ನು ಟೆಸ್ಟ್‌ ಮಾದರಿಯಲ್ಲೇ ಆಡಲಿವೆ. 4 ವಿರಾಮಗಳು ಇರಲಿದ್ದು, ಒಂದು ದಿನದಲ್ಲೇ ಮುಕ್ತಾಯಗೊಳ್ಳುವ ಟೆಸ್ಟ್‌ ಸ್ವರೂಪದ ಕ್ರಿಕೆಟ್‌ ಆಗಿರಲಿದೆ.

    ನಿಯಮ ಹೇಗೆ ಅನ್ವಯ?
    ಪ್ರತಿ ತಂಡವು ಪಂದ್ಯದಲ್ಲಿ ಒಮ್ಮೆಗೆ 4 ಓವರ್‌ ಪವರ್‌ ಪ್ಲೇ ತೆಗೆದುಕೊಳ್ಳಬಹುದಾಗಿದೆ. ಅಲ್ಲದೇ ಮೊದಲ ಇನ್ನಿಂಗ್ಸ್‌ನಲ್ಲಿ 75 ರನ್‌ ಅಥವಾ ಅದಕ್ಕಿಂತಲೂ ಹೆಚ್ಚು ರನ್‌ಗಳಿಂದ ಮುನ್ನಡೆ ಸಾಧಿಸಿದ್ರೆ, ಎದುರಾಳಿ ತಂಡ ಫಾಲೋ ಆನ್‌ ಹೇರಬಹುದಾಗಿದೆ. ಪಂದ್ಯದುದ್ದಕ್ಕೂ ಗರಿಷ್ಠ 5 ಬೌಲರ್‌ಗಳನ್ನ ಬಳಸಬಹುದಾಗಿದೆ. ಪ್ರತಿ ಬೌಲರ್‌ಗೆ ಗರಿಷ್ಠ 8 ಓವರ್‌ ಬೌಲಿಂಗ್‌ ಮಾಡಲು ಅವಕಾಶ ಇರಲಿದೆ.

    ಮೊದಲ ಸೀಸನ್‌ ಯಾವಾಗ?
    ಟೆಸ್ಟ್‌ ಟ್ವೆಂಟಿಯ ಮೊದಲ ಸೀಸನ್‌ 2026ರ ಜನವರಿಯಲ್ಲಿ ಶುರುವಾಗಲಿದೆ. ಮೊದಲ ಟೂರ್ನಿ 6 ಜಾಗತಿಕ ಫ್ರಾಂಚೈಸಿಗಳನ್ನು ಒಳಗೊಂಡಿರಲಿದೆ. ಭಾರತರಿಂದ ಮೂರು ತಂಡಗಳು ಹಾಗೂ ದುಬೈ, ಲಂಡನ್ ಮತ್ತು ಯುನೈಟೆಡ್ ಸ್ಟೇಟ್ಸ್ ಪ್ರತಿನಿಧಿಸುವ ಮೂರು ತಂಡಗಳು ಪಾಲ್ಗೊಳ್ಳಲಿವೆ. ಪ್ರತಿ ತಂಡವು 16 ಆಟಗಾರರನ್ನ ಒಳಗೊಂಡಿರಲಿದ್ದು, 8 ಭಾರತೀಯರು 8 ವಿದೇಶಿ ಆಟಗಾರರು ತಂಡದಲ್ಲಿರಲಿದ್ದಾರೆ.

    ಎಬಿಡಿ ಹೇಳಿದ್ದೇನು?
    ಟೆಸ್ಟ್‌ ಟ್ವೆಂಟಿ ಕುರಿತು ಮಾತನಾಡಿರುವ ಕ್ರಿಕೆಟ್‌ ದಿಗ್ಗಜ ಎಬಿಡಿ ವಿಲಿಯರ್ಸ್‌, ಭವಿಷ್ಯದ ದೃಷ್ಟಿಯಿಂದ ಆಟದ ಸ್ವರೂಪಗಳನ್ನ ನಾವು ಗೌರವಿಸಬೇಕು. ಇದು ಯುವ ಆಟಗಾರರ ಮುಂದಿನ ಭವಿಷ್ಯಕ್ಕೆ ದೊಡ್ಡ ವೇದಿಕೆಯಾಗಲಿದೆ. ಜೊತೆಗೆ ಅಭಿಮಾನಿಗಳಿಗೂ ಹೊಸತನದ ಅನುಭವ ನೀಡುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

  • ವಿಂಡೀಸ್‌ 2-0 ವೈಟ್‌ವಾಶ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ; ಗಿಲ್‌ ನಾಯಕತ್ವದಲ್ಲಿ ಮೊದಲ ಸರಣಿ ಗೆಲುವು

    ವಿಂಡೀಸ್‌ 2-0 ವೈಟ್‌ವಾಶ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ; ಗಿಲ್‌ ನಾಯಕತ್ವದಲ್ಲಿ ಮೊದಲ ಸರಣಿ ಗೆಲುವು

    ನವದೆಹಲಿ: ಕೆ.ಎಲ್‌ ರಾಹುಲ್‌ (KL Rahul) ಅವರ ಅಮೋಘ ಅರ್ಧಶತಕದೊಂದಿಗೆ ಭಾರತ ವೆಸ್ಟ್‌ ಇಂಡೀಸ್‌ ವಿರುದ್ಧ 2ನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲಿ ನಡೆದ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದೆ. ವಿಶೇಷವೆಂದ್ರೆ 37ನೇ ಟೆಸ್ಟ್‌ ಕ್ಯಾಪ್ಟನ್‌ ಶುಭಮನ್‌ ಗಿಲ್‌ (Shubman Gill) ಅವರ ನಾಯಕತ್ವದಲ್ಲಿ ಭಾರತದ ತಂಡದ (Team India) ಮೊದಲ ಜಯ ಕೂಡ ಇದಾಗಿದೆ.

    ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್‌ ಪಂದ್ಯದಲ್ಲಿ ವಿಂಡೀಸ್‌ (West Indies) ಭಾರತಕ್ಕೆ ಸುಲಭ ತುತ್ತಾಯಿತು. 58 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ ಕೊನೆಯ ದಿನದ ಕ್ರೀಸ್‌ ಆರಂಭಿಸಿದ ಭಾರತ ಮತ್ತೆರಡು ವಿಕೆಟ್‌ಗಳನ್ನ ಕಳೆದುಕೊಂಡಿತು. ಆದ್ರೆ ಭಾರತದ ಪರ ಒಂದು ತುದಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಜಯದ ದಡ ಸೇರಿಸುವಲ್ಲಿ ಯಶಸ್ವಿಯಾದರು. 108 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಮತ್ತು 2 ಸಿಕ್ಸರ್‌ನೊಂದಿಗೆ 58 ರನ್ ಗಳಿಸಿ ಅಜೇಯರಾಗಿ ಉಳಿದರು. ವಿಂಡೀಸ್ ಪರ ನಾಯಕ ರೋಸ್ಟನ್ ಚೇಸ್ 2 ವಿಕೆಟ್‌, ಜೋಮೆಲ್ ವಾರಿಕನ್ ಒಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಏನಾಯ್ತು?
    ಮೊದಲ ಇನ್ನಿಂಗ್ಸ್‌ನಲ್ಲಿ ಟಾಸ್‌ ಗೆದ್ದ ಭಾರತ ತಂಡ ಬ್ಯಾಟಿಂಗ್‌ ಆಯ್ದುಕೊಂಡಿತ್ತು. 5 ವಿಕೆಟ್ ಕಳೆದುಕೊಂಡು 518 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ವಿಂಡೀಸ್ ಪ್ರಥಮ ಇನ್ನಿಂಗ್ಸ್ ನಲ್ಲಿ ಕೇವಲ 248 ರನ್ ಗಳನ್ನಷನ್ನೇ ಗಳಿಸಲು ಸಾಧ್ಯವಾಯಿತು. 270 ರನ್ ಗಳ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ನಾಯಕ ಶುಭಮನ್ ಗಿಲ್ ಅವರು ವಿಂಡೀಸ್‌ಗೆ ಫಾಲೋ ಆನ್ ಹೇರಿದರು.

    ವಿಂಡೀಸ್ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪ್ರತಿಹೋರಾಟ ನೀಡಿ 390 ರನ್ ಗಳಿಸಿತಾದರೂ ಜಯದ ಗುರಿ ಕೇವಲ 120 ರನ್ ಗಳಾಗಿದ್ದರಿಂದ ಭಾರತಕ್ಕೆ ಸುಲಭ ತುತ್ತಾಯಿತು. ಪಂದ್ಯವನ್ನು 4ನೇ ದಿನದೊಳಗೇ ಮುಗಿಸುವ ಉತ್ಸಾಹವನ್ನು ಭಾರತ ಹೊಂದಿತ್ತು. ಆದ್ರೆ ಯಶಸ್ವಿ ಜೈಸ್ವಾಲ್ 8 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ ಬಳಿಕ ನಿಧಾನಗತಿಯ ಬ್ಯಾಟಿಂಗ್‌ಗೆ ಇಳಿಯಿತು.

    4ನೇ ದಿನಾಂತ್ಯಕ್ಕೆ 18 ಓವರ್ ಗಳಲ್ಲಿ ಒಂದು ವಿಕೆಟ್‌ಗೆ 63 ರನ್ ಗಳಿಸಿದ್ದ ಭಾರತ ತಂಡ 5ನೇ ದಿನ ಮೊದಲ ಅವಧಿಯಲ್ಲಿ 13 ಓವರ್ ಗಳಲ್ಲಿ ಗೆಲುವಿಗೆ ಅಗತ್ಯವಿದ್ದ ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಕೆಎಲ್ ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿದ್ದ ಸಾಯಿ ಸುದರ್ಶನ್ 76 ಎಸೆತಗಳಲ್ಲಿ 39 ರನ್ ಗಳಿಸಿದ್ರೆ, ನಾಯಕ ಶುಭಮನ್ ಗಿಲ್ 13 ರನ್‌ ಔಟಾದ್ರೆ, ಧ್ರುವ್ ಜುರೆಲ್‌ 6 ರನ್‌ ಗಳಿಸಿ ಅಜೇಯರಾಗುಳಿದರು.

    ಸಂಕ್ಷಿಪ್ತ ಸ್ಕೋರ್
    * ಭಾರತ ಪ್ರಥಮ ಇನ್ನಿಂಗ್ಸ್ 518/5ಡಿ
    ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್ 248ಕ್ಕೆ ಆಲೌಟ್

    * ವೆಸ್ಟ್ ಇಂಡೀಸ್ ದ್ವಿತೀಯ ಇನ್ನಿಂಗ್ಸ್ 390ಕ್ಕೆ ಆಲೌಟ್
    ಭಾರತ ದ್ವಿತೀಯ ಇನ್ನಿಂಗ್ಸ್ 124/3

  • ಮತ್ತೊಮ್ಮೆ ದ್ವಿಶತಕ ಸಿಡಿಸುವ ತವಕದಲ್ಲಿ ಜೈಸ್ವಾಲ್‌ -ಬೃಹತ್‌ ಮೊತ್ತದತ್ತ ಭಾರತ

    ಮತ್ತೊಮ್ಮೆ ದ್ವಿಶತಕ ಸಿಡಿಸುವ ತವಕದಲ್ಲಿ ಜೈಸ್ವಾಲ್‌ -ಬೃಹತ್‌ ಮೊತ್ತದತ್ತ ಭಾರತ

    – ಶತಕ ಬಾರಿಸಿ ಸಚಿನ್‌ ಬಳಿಕ ವಿಶೇಷ ಸಾಧನೆ ಮಾಡಿದ ಯಶಸ್ವಿ

    ನವದೆಹಲಿ: ವಿಂಡೀಸ್‌ (West Indies) ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ 2ನೇ ಪಂದ್ಯದಲ್ಲಿ ಭಾರತ (Team India) ಮೊದಲ ದಿನವೇ 300 ರನ್‌ಗಳ ಗಡಿ ದಾಟಿದೆ. ಮೊದಲ ದಿನದ ಅಂತ್ಯಕ್ಕೆ ಕೇವಲ 2 ವಿಕೆಟ್‌ಗೆ 90 ಓವರ್‌ಗಳಲ್ಲಿ 318 ರನ್‌ ಸಿಡಿಸಿದ್ದು, ಬೃಹತ್‌ ಮೊತ್ತ ಪೇರಿಸುವ ವಿಶ್ವಾಸದಲ್ಲಿದೆ.

    ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೊದಲ ದಿನ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ (Yashasvi Jaiswal) ವಿಕೆಟ್‌ ಬಿಟ್ಟುಕೊಡದೇ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. 173 ರನ್‌ ಗಳಿಸಿ ಕ್ರೀಸ್‌ನಲ್ಲಿರುವ ಯಶಸ್ವಿ ಮತ್ತೊಮ್ಮೆ ದ್ವಿಶತಕ ಸಿಡಿಸುವ ವಿಶ್ವಾಸದಲ್ಲಿದ್ದಾರೆ.

    ಭಾರತ ಪರ ಕೆ.ಎಲ್ ರಾಹುಲ್ (KL Rahul) ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ವಿಕೆಟ್​ಗೆ ಈ ಜೋಡಿ 58 ರನ್​ಗಳ ಜೊತೆಯಾಟ ಆಡಿತು. ರಾಹುಲ್ 54 ಎಸೆತಗಳಲ್ಲಿ 38 ರನ್ ಗಳಿಸಿ ಔಟಾದರು. ಊಟದ ವಿರಾಮದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 145 ಎಸೆತಗಳಲ್ಲಿ 16 ಫೋರ್​ನೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 7ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದರು. ಅತ್ತ ಸಾಯಿ ಸುದರ್ಶನ್ ಕೂಡ ಅರ್ಧಶತಕ ಸಿಡಿಸಿ ಮಿಂಚಿದರು.

    ಸುದರ್ಶನ್‌ ಕೈತಪ್ಪಿದ ಶತಕ
    ಇನ್ನೂ ಅರ್ಧಶತಕ ಗಳಿಸಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದ ಸುದರ್ಶನ್‌ ಶತಕ ವಂಚಿತರಾದರು. 165 ಎಸೆತಗಳಲ್ಲಿ 12 ಬೌಂಡರಿ ಸಹಿತ 87 ರನ್‌ ಗಳಿಸಿ ಔಟಾದರು. ನಂತರ ಕ್ರೀಸ್‌ಗೆ ಬಂದ ಶುಭಮನ್‌ ಗಿಲ್‌ 68 ಎಸೆತಗಳಲ್ಲಿ 20 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ದಿನದ ಕೊನೆಯವರೆಗೂ ವಿಕೆಟ್‌ ಬಿಟ್ಟು ಕೊಡದ ಜೈಸ್ವಾಲ್‌ 253 ಎಸೆತಗಳಲ್ಲಿ 22 ಬೌಂಡರಿ ಸಹಿತ 173 ರನ್‌ ಬಾರಿಸಿದ್ದಾರೆ. ಶನಿವಾರ 2ನೇ ದಿನದ ಆಟ ಮುಂದುವರಿಸಲಿದ್ದಾರೆ.

    ವಿಶೇಷ ದಾಖಲೆ ಬರೆದ ಜೈಸ್ವಾಲ್‌
    ಇನ್ನೂ ಈ ಪಂದ್ಯದ ಮಧ್ಯೆ ಜೈಸ್ವಾಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದರು. ಅವರು 3,000 ರನ್‌ಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು. ಈ ಪಂದ್ಯಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ 25 ಟೆಸ್ಟ್ ಪಂದ್ಯಗಳ 47 ಇನ್ನಿಂಗ್ಸ್‌ಗಳಲ್ಲಿ 2,245 ರನ್ ಗಳಿಸಿದ್ದರು. ಇದರಲ್ಲಿ 6 ಶತಕಗಳು ಮತ್ತು 12 ಅರ್ಧಶತಕಗಳು ಸೇರಿವೆ. ಜೈಸ್ವಾಲ್ ಅವರ ಟೆಸ್ಟ್ ಸರಾಸರಿ ಸುಮಾರು 49.88 ಆಗಿದ್ದು, ಇದನ್ನು ಅತ್ಯುತ್ತಮ ಪರಿಗಣಿಸಬಹುದು.

    ಜೈಸ್ವಾಲ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕವೇ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಆಗಲೂ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದರು. ಅಲ್ಲದೇ 23ನೇ ವರ್ಷ ವಯಸ್ಸಿನವರಲ್ಲಿ ಸಚಿನ್‌ ತೆಂಡೂಲ್ಕರ್‌ ಬಳಿಕ ಅಧಿಕ ಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸಚಿನ್‌ 23 ವರ್ಷದ ಹೊತ್ತಿಗೆ 11 ಶತಕ ಗಳಿಸಿದ್ದರೆ, ಯಶಸ್ವಿ 7 ಶತಕ ಗಳಿಸಿದ್ದಾರೆ. ಇನ್ನುಳಿದಂತೆ ರವಿ ಶಾಸ್ತ್ರಿ ಹಾಗೂ ದಿಲೀಪ್ ವೆಂಗ್‌ಸರ್ಕಾರ್ ತಲಾ 5 ಶತಕ ಗಳಿಸಿದ್ದು, ಕ್ರಮವಾಗಿ ಮೂರು ಮತ್ತು 4ನೇ ಸ್ಥಾನದಲ್ಲಿದ್ದಾರೆ.

  • ವಿಂಡೀಸ್‌ ವಿರುದ್ಧ ಇನ್ನಿಂಗ್ಸ್ & 140 ರನ್‌ಗಳ ಭರ್ಜರಿ ಗೆಲುವು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡ ಭಾರತ

    ವಿಂಡೀಸ್‌ ವಿರುದ್ಧ ಇನ್ನಿಂಗ್ಸ್ & 140 ರನ್‌ಗಳ ಭರ್ಜರಿ ಗೆಲುವು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡ ಭಾರತ

    – ಜಡ್ಡು ಆಲ್‌ರೌಂಡ್‌ ಆಟ; ಶುಭಮನ್‌ ಗಿಲ್‌ ನಾಯಕತ್ವದಲ್ಲಿ ತವರಿನಲ್ಲಿ ಮೊದಲ ಜಯ

    ಅಹಮದಾಬಾದ್: ಭಾರತೀಯ ಸ್ಪಿನ್ನರ್‌ಗಳ ಮೋಡಿ, ರವೀಂದ್ರ ಜಡೇಜಾ ಅವರ ಆಲ್‌ರೌಂಡ್‌ ಪ್ರದರ್ಶನಕ್ಕೆ ಪತರುಗುಟ್ಟಿದ ವೆಸ್ಟ್‌ ಇಂಡೀಸ್‌ (West Indies) ತಂಡ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 146 ರನ್‌ಗಳಿಗೆ ಆಲೌಟ್‌ ಆಗಿದೆ. ಪರಿಣಾಮ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Modi Stadium) ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಇನ್ನೂ ಒಂದು ಇನ್ನಿಂಗ್ಸ್‌ ಬಾಕಿ ಇರುವಂತೆ 140 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

    ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನದ ಅಂತ್ಯಕ್ಕೆ 448 ರನ್‌ ಗಳಿಸಿದ್ದ ಭಾರತ 286 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. 3ನೇ ದಿನ ಡಿಕ್ಲೇರ್‌ ಘೋಷಿಸುತ್ತಿದ್ದಂತೆ ಕಣಕ್ಕಿಳಿದ ವಿಂಡೀಸ್‌ 2ನೇ ಇನ್ನಿಂಗ್ಸ್‌ನಲ್ಲೂ ಭಾರತದ ಸ್ಪಿನ್ನರ್‌ಗಳ ದಾಳಿಗೆ ಪತರುಗುಟ್ಟಿತು. ಅಲಿಕ್ ಅಥನಾಜೆ 38 ರನ್‌, ಜಸ್ಟಿನ್ ಗ್ರೀವ್ಸ್ 25 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನೆಲ ಕಚ್ಚಿದರು. ಹೀಗಾಗಿ ಮೂರನೇ ದಿನವೇ ಭಾರತ ಗೆಲುವು ಸಾಧಿಸಿತು. ಇದನ್ನೂ ಓದಿ: ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ – ಏಕದಿನ ಕ್ರಿಕೆಟ್‌ಗೆ ಗಿಲ್‌ ಕ್ಯಾಪ್ಟನ್‌; ರೋಹಿತ್‌, ಕೊಹ್ಲಿ ನಿವೃತ್ತಿ ಬಯಸಿದ್ಯಾ ಬಿಸಿಸಿಐ?

    2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್‌ ಕಿತ್ತರೆ, ಸಿರಾಜ್‌ 3 ವಿಕೆಟ್‌, ಕುಲ್‌ದೀಪ್‌ ಯಾದವ್‌ 2 ವಿಕೆಟ್‌, ವಾಷಿಂಗ್ಟನ್‌ ಸುಂದರ್‌ 1 ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಆರ್‌ಸಿಬಿ ಸೇಲ್‌ – ಪುಣೆಯ ಶತಕೋಟ್ಯಧಿಪತಿ ಪೂನಾವಾಲಾ ತೆಕ್ಕೆಗೆ ಹೋಗುತ್ತಾ ಬೆಂಗಳೂರು?

    ಇದಕ್ಕೂ ಮುನ್ನ ಮೊದಲ ದಿನ 2 ವಿಕೆಟ್‌ ನಷ್ಟಕ್ಕೆ 121 ರನ್‌ ಗಳಿಸಿದ್ದ ಭಾರತ 2ನೇ ದಿನ 327 ರನ್‌ ಕಲೆ ಹಾಕಿತ್ತು. 2ನೇ ದಿನದ ಅಂತ್ಯಕ್ಕೆ 128 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 448 ರನ್‌ ಗಳಿಸಿತ್ತು. ಮೊದಲ ದಿನ 18 ರನ್‌ಗಳಿಸಿದ್ದ ನಾಯಕ ಶುಭಮನ್‌ ಗಿಲ್‌ 2ನೇ ದಿನ 50 ರನ್‌ ಹೊಡೆದರೆ ಕೆಎಲ್‌ ರಾಹುಲ್‌ 197 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ ಶತಕ ಸಿಡಿಸಿ ಔಟಾದರು. ಧ್ರುವ್ ಜುರೆಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್‌ ಸಿಡಿಸಿ 125 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಧ್ರುವ್ ಜುರೆಲ್ ಮತ್ತು ಜಡೇಜಾ 5ನೇ ವಿಕೆಟಿಗೆ 331 ಎಸೆತಗಳಲ್ಲಿ 206 ರನ್‌ ಜೊತೆಯಾಟವಾಡಿದ್ದರಿಂದ ಭಾರತ ಬೃಹತ್‌ ಮುನ್ನಡೆ ಸಾಧಿಸಿತು.

    ರವೀಂದ್ರ ಜಡೇಜಾ ಔಟಾಗದೇ 104 ರನ್‌ (176 ಎಸೆತ, 6 ಬೌಂಡರಿ, 5 ಸಿಕ್ಸ್‌) ಸಿಡಿಸಿದರೆ ವಾಷಿಂಗ್ಟನ್‌ ಸುಂದರ್‌ 9 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದರು. ಇದನ್ನೂ ಓದಿ: ಯುದ್ಧವನ್ನ ಕ್ರೀಡೆಗೆ ಎಳೆದು ತರೋದು ಹತಾಶೆಯನ್ನ ತೋರಿಸುತ್ತೆ – ಮೋದಿ ಟ್ವೀಟ್‌ಗೆ ನಖ್ವಿ ರಿಯಾಕ್ಷನ್‌

    ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡಿದೆ. 40 ಅಂಕಗಳು, 55.56 ಪಿಸಿಟಿಯೊಂದಿಗೆ (Percentage Of Points Earned) 3ನೇ ಸ್ಥಾನದಲ್ಲಿದ್ದರೆ, 36 ಅಂಕ 100 ಪಿಟಿಸಿ ಗಳಿಸಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. 66.67 ಪಿಸಿಟಿಯೊಂದಿಗೆ ಶ್ರೀಲಂಕಾ 2ನೇ ಸ್ಥಾನದಲ್ಲಿದೆ.

  • 1 ಜಯ, 12 ಅಂಕ ಪಡೆದು ಮೂರನೇ ಸ್ಥಾನಕ್ಕೆ ಭಾರತ ಹೈಜಂಪ್‌!

    1 ಜಯ, 12 ಅಂಕ ಪಡೆದು ಮೂರನೇ ಸ್ಥಾನಕ್ಕೆ ಭಾರತ ಹೈಜಂಪ್‌!

    ಲಂಡನ್‌: ಇಂಗ್ಲೆಂಡ್‌ (England) ವಿರುದ್ಧ ಐದನೇ ಟೆಸ್ಟ್ ಪಂದ್ಯವನ್ನು ಜಯಗಳಿಸುವ ಮೂಲಕ ಭಾರತ (Team India) ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ (ICC World Test Championship) ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.

    5ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ 16 ಅಂಕ ಪಡೆದಿದ್ದರೆ ಇಂಗ್ಲೆಂಡ್‌ 26 ಅಂಕ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿತ್ತು. ಆದರೆ 5ನೇ ಟೆಸ್ಟ್‌ ಪಂದ್ಯವನ್ನು 6 ರನ್‌ಗಳಿಂದ ಜಯಗಳಿಸುವ ಮೂಲಕ ಭಾರತ 28 ಅಂಕ ಪಡೆದು ಮೂರನೇ ಸ್ಥಾನಕ್ಕೆ ಏರಿದರೆ 26 ರನ್‌ನಲ್ಲೇ ಮುಂದುವರಿಯುತ್ತಿರುವ ಇಂಗ್ಲೆಂಡ್‌ ನಾಲ್ಕನೇ ಸ್ಥಾನಕ್ಕೆ ಜಾರಿದೆ.

    5ನೇ ಟೆಸ್ಟ್‌ ಪಂದ್ಯಕ್ಕೂ ಮೊದಲಿದ್ದ ಅಂಕಪಟ್ಟಿ

    ಭಾರತ ಮತ್ತು ಇಂಗ್ಲೆಂಡ್‌ ತಲಾ 5 ಪಂದ್ಯವಾಡಿದ್ದು ಇತ್ತಂಡಗಳು 2 ಜಯ 2 ಸೋಲು, 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಲಾರ್ಡ್ಸ್‌ ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್‌ 22 ರನ್‌ಗಳಿಂದ ಗೆದ್ದುಕೊಂಡಿತ್ತು. ಆದರೆ ಈ ಪಂದ್ಯದಲ್ಲಿ  ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ   2 ಅಂಕ ಕಡಿತವಾಗಿದ್ದರಿಂದ ಇಂಗ್ಲೆಂಡ್‌ 26 ಅಂಕ ಪಡೆದಿದೆ.

    ಆಡಿರುವ ಮೂರು ಪಂದ್ಯಗಳನ್ನು ಗೆದ್ದು 36 ಅಂಕ ಪಡೆದಿರುವ ಆಸ್ಟ್ರೇಲಿಯಾ  ಮೊದಲ ಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯಗಳ ಪೈಕಿ 1 ಜಯ, 1 ಡ್ರಾ ಮಾಡಿಕೊಂಡಿರುವ ಶ್ರೀಲಂಕಾ 16 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಸಿರಾಜ್‌, ಕೃಷ್ಣ ಮ್ಯಾಜಿಕ್‌ – ಭಾರತಕ್ಕೆ ರೋಚಕ 6 ರನ್‌ಗಳ ಜಯ

    5ನೇ ಟೆಸ್ಟ್‌ ಮುಕ್ತಾಯದ ಬಳಿಕ ಪ್ರಕಟವಾದ ಅಂಕಪಟ್ಟಿ

    ಅಂಕ ಹೇಗೆ ನೀಡಲಾಗುತ್ತೆ?
    ಗೆಲುವಿಗೆ 12 ಅಂಕ, ಟೈ ಆದರೆ 6 ಅಂಕ, ಡ್ರಾಗೆ 4 ಅಂಕ ನೀಡಲಾಗುತ್ತದೆ. ತಂಡಗಳನ್ನು ಗೆದ್ದ ಅಂಕಗಳ ಶೇಕಡಾವಾರು ಲೆಕ್ಕಾಚಾರ ಹಾಕಿ ಅಂಕಪಟ್ಟಿ ನೀಡಲಾಗುತ್ತದೆ. ನಿಧಾನಗತಿಯ ಓವರ್ ಮಾಡಿದರೆ ಅಂಕ ಕಡಿತವಾಗುತ್ತದೆ. 2027 ರಲ್ಲಿ ಅಗ್ರ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿದೆ.

  • ಸಿರಾಜ್‌, ಕೃಷ್ಣ ಮ್ಯಾಜಿಕ್‌ – ಭಾರತಕ್ಕೆ ರೋಚಕ 6 ರನ್‌ಗಳ ಜಯ

    ಸಿರಾಜ್‌, ಕೃಷ್ಣ ಮ್ಯಾಜಿಕ್‌ – ಭಾರತಕ್ಕೆ ರೋಚಕ 6 ರನ್‌ಗಳ ಜಯ

    ಲಂಡನ್‌: ನಾಟಕೀಯ ತಿರುವುಗಳಿಂದ ಕೂಡಿದ್ದ ತೆಂಡುಲ್ಕರ್‌- ಆ್ಯಂಡರ್‌ಸನ್‌ ಟೆಸ್ಟ್‌ ಸರಣಿಯ ಐದನೇ ಪಂದ್ಯದ ಐದನೇ ದಿನ ಭಾರತ (Team India)  ಇಂಗ್ಲೆಂಡ್‌ ವಿರುದ್ಧ ರೋಚಕ 6 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ 2-2 ರಲ್ಲಿ ಸಮಬಲಗೊಂಡಿದೆ.

    ಓವಲ್‌ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ನೀಡಿದ್ದ ಬೃಹತ್‌ ರನ್‌ ಬೆನ್ನಟ್ಟಿದ ಇಂಗ್ಲೆಂಡ್‌ (England)  ಅಂತಿಮವಾಗಿ 85.1 ಓವರ್‌ಗಳಲ್ಲಿ 367 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

    2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ 374 ರನ್‌ಗಳ ಬೃಹತ್‌ ಗುರಿಯನ್ನು ಭಾರತ ನೀಡಿತ್ತು. ಬೃಹತ್‌ ಮೊತ್ತವನ್ನು ಗುರಿ ಬೆನ್ನತ್ತಿದ ಇಂಗ್ಲೆಂಡಿಗೆ ಕೊನೆಯ ದಿನ 4 ವಿಕೆಟ್‌ ಸಹಾಯದಿಂದ 35 ರನ್‌ ಬೇಕಿತ್ತು.

    ನಾಲ್ಕನೇಯ ದಿನ ಅಜೇಯರಾಗಿದ್ದ ಸ್ಮಿತ್‌ ನಿನ್ನೆಯ ಮೊತ್ತವಾದ 2 ರನ್‌ಗೆ ಸಿರಾಜ್‌ (Mohammed Siraj) ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಔಟಾದರೆ ಓವರ್‌ಟನ್‌ 8 ರನ್‌ಗಳಿಸಿ ಸಿರಾಜ್‌ ಎಲ್‌ಬಿ ಔಟಾದರು. ಜೋಶ್‌ ಟಂಗ್‌ ಅವರು ಪ್ರಸಿದ್ಧ್‌ ಕೃಷ್ಣ (Prasidh Krishna) ಬೌಲ್ಡ್‌ ಮಾಡಿದರು. 10ನೇಯವರಾಗಿ ಗಂಭೀರವಾಗಿ ಗಾಯಗೊಂಡಿದ್ದ ಕ್ರೀಸ್‌ ವೋಕ್ಸ್‌ ಮೈದಾನಕ್ಕೆ ಇಳಿದಿದ್ದರು. ಇದನ್ನೂ ಓದಿ: ಟೀಕೆಯಿಂದ ಖಿನ್ನತೆಗೆ ಜಾರಿದ್ದೆ, ಆತ್ಮಹತ್ಯೆಗೆ ಯೋಚಿಸಿದ್ದೆ – ಮೌನ ಮುರಿದ ಚಹಲ್‌

    ಗಸ್ ಅಟ್ಕಿನ್ಸನ್ ಅವರು ಕ್ರೀಸ್‌ ವೋಕ್ಸ್‌ಗೆ ಸ್ಟ್ರೈಕ್‌ ನೀಡುತ್ತಿರಲಿಲ್ಲ. ಸ್ಟ್ರೈಕ್‌ ನೀಡಿದ್ದರೆ 1 ಕೈಯಲ್ಲಿ ಬ್ಯಾಟ್‌ ಬೀಸಬೇಕಿತ್ತು. ಓವರ್‌ ಕೊನೆಯಲ್ಲಿ ಒಂದು ರನ್‌ ಓಡುವ ಮೂಲಕ ಮತ್ತೆ ಗಸ್ ಅಟ್ಕಿನ್ಸನ್ ಸ್ಟ್ರೈಕ್‌ಗೆ ಬರುತ್ತಿದ್ದರು. ಆದರೆ ಕೊನೆಗೆ ಸಿರಾಜ್‌ 17 ರನ್‌ ಹೊಡೆದಿದ್ದ ಗಸ್ ಅಟ್ಕಿನ್ಸನ್ ಬೌಲ್ಡ್‌ ಮಾಡುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು.

    ಸಿರಾಜ್‌ 5 ವಿಕೆಟ್‌ ಕಿತ್ತರೆ ಪ್ರಸಿದ್ಧ್‌ ಕೃಷ್ಣ 4 ವಿಕೆಟ್‌ ಪಡೆದರು. ಈ ಪಂದ್ಯದಲ್ಲಿ 9  ವಿಕೆಟ್‌ ಪಡೆದ ಸಿರಾಜ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹ್ಯಾರಿ ಬ್ರೂಕ್‌ ಅವರಿಗೆ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    ಸಂಕ್ಷಿಪ್ತ ಸ್ಕೋರ್‌
    ಭಾರತ ಮೊದಲ ಇನ್ನಿಂಗ್ಸ್‌ 224/10
    ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 247/10
    ಭಾರತ ಎರಡನೇ ಇನ್ನಿಂಗ್ಸ್‌ 396/10
    ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 367/10

  • IND vs ENG Test: ಇಂಗ್ಲೆಂಡ್‌ ಗೆಲುವಿಗೆ 374 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

    IND vs ENG Test: ಇಂಗ್ಲೆಂಡ್‌ ಗೆಲುವಿಗೆ 374 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

    – ಜೈಸ್ವಾಲ್‌ ಅಮೋಘ ಶತಕ; ಆಕಾಶ್‌, ಜಡೇಜಾ, ವಾಷಿಂಗ್ಟನ್‌ ಫಿಫ್ಟಿ ಆಟ

    ಲಂಡನ್‌: ದಿ ಓವಲ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನ 3ನೇ ದಿನದಾಟದಂದು ಯಶಸ್ವಿ ಜೈಸ್ವಾಲ್ ಅಮೋಘ ಶತಕ, ಆಕಾಶ್‌, ಜಡೇಜಾ, ವಾಷಿಂಗ್ಟನ್‌ ಆಕರ್ಷಕ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾವು ಇಂಗ್ಲೆಂಡ್‌ ಗೆಲುವಿಗೆ ದೊಡ್ಡ ಮೊತ್ತದ ಸವಾಲನ್ನು ಒಡ್ಡಿದೆ.

    ಭಾರತವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 396 ರನ್ ಗಳಿಸಿದ್ದು, ಇಂಗ್ಲೆಂಡ್‌ಗೆ 374 ರನ್‌ಗಳ ಗುರಿಯನ್ನು ನೀಡಿದೆ. ಹೆಡಿಂಗ್ಲಿಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿದ ನಂತರ, ಜೈಸ್ವಾಲ್‌ ಇಂಗ್ಲೆಂಡ್‌ ವಿರುದ್ಧ ಮತ್ತೊಂದು ಶತಕ ಗಳಿಸಿದ್ದಾರೆ. 118 ರನ್ ಗಳಿಸಿದ ಜೈಸ್ವಾಲ್, ಸರಣಿಯಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದ್ದಾರೆ.

    ಜೈಸ್ವಾಲ್‌ಗೆ ಸಾಥ್‌ ನೀಡಿದ ಆಕಾಶ್‌ ದೀಪ್‌ ಅರ್ಧಶತಕ ಗಳಿಸಿ ಗಮನ ಸೆಳೆದರು. ಈ ಜೋಡಿ 3ನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟದ ಕೊಡುಗೆ ನೀಡಿತು. ಭಾರತಕ್ಕೆ ಉತ್ತಮ ರನ್‌ಗಳ ಅಡಿಪಾಯ ಹಾಕಿಕೊಡುವಲ್ಲಿ ಇಬ್ಬರು ಪ್ರಮುಖ ಪಾತ್ರ ವಹಿಸಿದರು.

    2ನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ (56) ಮತ್ತು ವಾಷಿಂಗ್ಟನ್ ಸುಂದರ್ (53) ಅರ್ಧಶತಕ ಗಳಿಸಿ ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡುವಲ್ಲಿ ನೆರವಾದರು. ಜಡೇಜಾ ತಾಳ್ಮೆಯ ಆಟವಾಡಿದರೆ, ಸುಂದರ್ ಆಕ್ರಮಣಕಾರಿಯಾಗಿ ಆಡಿದರು.

    2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 396 ರನ್‌ ಗಳಿಸಿ ಆಲೌಟ್‌ ಆಯಿತು. ಇಂಗ್ಲೆಂಡ್‌ ಪರ ಜೋಶ್ ಟಂಗ್ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿ 5 ವಿಕೆಟ್‌ ಪಡೆದರು. ಗಸ್ ಅಟ್ಕಿನ್ಸನ್ 3 ಹಾಗೂ ಜೇಮೀ ಓವರ್ಟನ್ 2 ವಿಕೆಟ್‌ ಕಿತ್ತರು.

  • India vs England Test; ನಿರ್ಣಾಯಕ ಪಂದ್ಯದಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಔಟ್‌

    India vs England Test; ನಿರ್ಣಾಯಕ ಪಂದ್ಯದಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಔಟ್‌

    ಬ್ರಿಟನ್‌: ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮಹತ್ವದ ಬದಲಾವಣೆ ಮಾಡಿಕೊಂಡಿವೆ. ಇಂಗ್ಲೆಂಡ್ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಮತ್ತು ಭಾರತದ ವೇಗಿ ಜಸ್ಪ್ರಿತ್‌ ಬುಮ್ರಾ (Jasprit Bumrah) ಇಬ್ಬರೂ ಓವಲ್‌ನಲ್ಲಿ ಸರಣಿ ನಿರ್ಣಾಯಕ ಪಂದ್ಯದಿಂದ ಹೊರಗುಳಿದಿದ್ದಾರೆ.

    ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭುಜದ ಗಾಯದಿಂದಾಗಿ ಸ್ಟೋಕ್ಸ್ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬುಧವಾರ ದೃಢಪಡಿಸಿದೆ. ಉಪನಾಯಕ ಓಲಿ ಪೋಪ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ. ಇದನ್ನೂ ಓದಿ: ವಾಂಖೆಡೆಯಲ್ಲಿ 6.5 ಲಕ್ಷ ಮೌಲ್ಯದ 261 ಐಪಿಎಲ್ ಜೆರ್ಸಿ ಕಳವು – ಸೆಕ್ಯುರಿಟಿ ಗಾರ್ಡ್ ಅರೆಸ್ಟ್

    ಇಂಗ್ಲೆಂಡ್ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸ್ಟೋಕ್ಸ್, ಸರಣಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದರು. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ.

    ಭಾರತ ಕೂಡ ಬೌಲಿಂಗ್ ಮುಂಚೂಣಿಯಲ್ಲಿಲ್ಲ. ಜಸ್ಪ್ರಿತ್‌ ಬುಮ್ರಾ ಅವರ ಬೆನ್ನಿನ ನೋವು ಸಮಸ್ಯೆ ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆಯಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಗಾಯದಿಂದಾಗಿ ಅವರು ಹಲವು ತಿಂಗಳು ತಂಡದಿಂದ ಹೊರಗುಳಿದಿದ್ದರು. ಇದನ್ನೂ ಓದಿ: ಚೆಸ್‌ ವಿಶ್ವಕಪ್‌ | ಅನುಭವಿ ಕೊನೆರು ಹಂಪಿಗೆ ಸೋಲು, 19ರ ದಿವ್ಯಾ ದೇಶಮುಖ್‌ ಚಾಂಪಿಯನ್‌

    ಬಿಸಿಸಿಐ ವೈದ್ಯಕೀಯ ತಂಡವು ಬುಮ್ರಾ ಮತ್ತು ತಂಡದ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ, ಸರಣಿಯನ್ನು 2-2 ಸಮಬಲಗೊಳಿಸುವ ಅವಕಾಶವಿದೆ. ಇದನ್ನೂ ಓದಿ: Explained| ಬದಲಾದ ಮಾಲ್ಡೀವ್ಸ್‌ – ಇಂಡಿಯಾ ಔಟ್‌ ಹೇಳಿ ಈಗ ಮೋದಿಯನ್ನು ಆಹ್ವಾನಿಸಿದ್ದು ಯಾಕೆ?

  • ಗಿಲ್‌, ರಾಹುಲ್‌ ಶತಕದ ಜೊತೆಯಾಟ – ಭಾರತಕ್ಕೆ 137 ರನ್‌ಗಳ ಹಿನ್ನಡೆ, ಡ್ರಾನತ್ತ ತಿರುಗುತ್ತಾ ಪಂದ್ಯ?

    ಗಿಲ್‌, ರಾಹುಲ್‌ ಶತಕದ ಜೊತೆಯಾಟ – ಭಾರತಕ್ಕೆ 137 ರನ್‌ಗಳ ಹಿನ್ನಡೆ, ಡ್ರಾನತ್ತ ತಿರುಗುತ್ತಾ ಪಂದ್ಯ?

    ಮ್ಯಾಚೆಂಸ್ಟರ್‌: ಇಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಆಂಗ್ಲರಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿತು. 4ನೇ ದಿನದ ಕೊನೇವರೆಗೂ ವಿಕೆಟ್‌ ಬಿಟ್ಟುಕೊಡದ ಕೆ.ಎಲ್‌ ರಾಹುಲ್‌, ಶುಭಮನ್‌ ಗಿಲ್‌ (Shubman Gill) ಜೋಡಿ 377 ಎಸೆತಗಳಲ್ಲಿ 174 ರನ್‌ಗಳ ಜೊತೆಯಾಟ ನೀಡಿ ವಿಕೆಟ್‌ ಉಳಿಸಿಕೊಂಡಿದೆ. ಆದಾಗ್ಯೂ ಇಂಗ್ಲೆಂಡ್‌ 137 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ಜೋ ರೂಟ್‌, ಬೆನ್‌ಸ್ಟೋಕ್ಸ್‌ ಅವರ ಅಮೋಘ ಶತಕ,‌ ಬೆನ್‌ ಡಕೆಟ್‌, ಓಲಿ ಪೋಪ್‌ ಅವರ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್‌ ಕಲೆಹಾಕಿತ್ತು.

    3ನೇ ದಿನದಾಟದಲ್ಲಿ 134 ಎಸೆತಗಳಲ್ಲಿ 77 ರನ್‌ ಗಳಿಸಿದ್ದ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) 4ನೇ ದಿನ ಕಣಕ್ಕಿಳಿದು ಸ್ಪೋಟಕ ಬ್ಯಾಟಿಂಗ್‌ ನಡೆಸಿದರು. 198 ಎಸೆತಗಳಲ್ಲಿ 141 ರನ್‌ (3 ಸಿಕ್ಸರ್‌, 11 ಬೌಂಡರಿ) ಚಚ್ಚಿದರು ಇದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 7,000 ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದರು. ಇದರೊಂದಿಗೆ ಬ್ರ್ಯಾಂಡನ್‌ ಕಾರ್ಸ್‌ (47 ರನ್‌), ಲಿಯಾಮ್‌ ದಾವ್ಸನ್‌ (26 ರನ್‌) ಅವರ ಸಣ್ಣ ಕೊಡುಗೆ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಕಾರಿಯಾಯಿತು.

    ಕೈಕೊಟ್ಟ ಸುದರ್ಶನ್‌, ಜೈಸ್ವಾಲ್‌
    ಇನ್ನೂ 4ನೇ ದಿನ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಯಶಸ್ವಿ ಜೈಸ್ವಾಲ್‌, ಸಾಯಿ ಸುದರ್ಶನ್‌ ಶೂನ್ಯ ಸುತ್ತಿ ಪೆವಿಲಿಯನ್‌ಗೆ ಮರಳಿದ್ರು. ಬಳಿಕ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಕೆ.ಎಲ್‌ ರಾಹುಲ್‌ (KL Rahul ) 87 ರನ್‌ (210 ಎಸೆತ, 8 ಬೌಂಡರಿ) ಗಳಿಸಿದ್ರೆ, ನಾಯಕ ಶುಭಮನ್‌ ಗಿಲ್‌ 78 ರನ್‌ (167 ಎಸೆತ, 10 ಬೌಂಡರಿ) ಗಳಿಸಿದರು. ಭಾನುವಾರ ಈ ಜೋಡಿ 5ನೇ ದಿನದ ಕ್ರೀಸ್‌ ಆರಂಭಿಸಲಿದೆ.

  • Ind vs Eng 4th Test | ಇಂದಿನಿಂದ ಪಂದ್ಯ ಶುರು – ಸರಣಿ ಗೆಲ್ಲುವ ತವಕದಲ್ಲಿ ಇಂಗ್ಲೆಂಡ್‌, ತಿರುಗೇಟು ನೀಡಲು ಭಾರತ ಸಜ್ಜು

    Ind vs Eng 4th Test | ಇಂದಿನಿಂದ ಪಂದ್ಯ ಶುರು – ಸರಣಿ ಗೆಲ್ಲುವ ತವಕದಲ್ಲಿ ಇಂಗ್ಲೆಂಡ್‌, ತಿರುಗೇಟು ನೀಡಲು ಭಾರತ ಸಜ್ಜು

    ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ಭಾರತ (Eng vs Ind) ನಡುವಿನ 4ನೇ ಟೆಸ್ಟ್ ಪಂದ್ಯಕ್ಕೆ ಐತಿಹಾಸಿಕ ಮ್ಯಾಂಚೆಸ್ಟರ್‌ (Manchester) ಕ್ರೀಡಾಂಗಣ ಸಜ್ಜಾಗಿದ್ದು, ಉಭಯ ತಂಡಗಳು ಹಲವು ಬದಲಾವಣೆ ಮಾಡಿಕೊಂಡಿವೆ.

    ಹೌದು. ಇದೀಗ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ (Anderson–Tendulkar Trophy) ಆತಿಥೇಯ ಇಂಗ್ಲೆಂಡ್ ತಂಡವು 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ ಸರಣಿ ಗೆಲ್ಲಲು ಇನ್ನೊಂದು ಗೆಲುವಿನ ಅಗತ್ಯವಿದೆ. ಆದ್ರೆ ಭಾರತ ಸರಣಿ ಗೆಲ್ಲಲು ಇನ್ನುಳಿದ ಎರಡೂ ಪಂದ್ಯಗಳನ್ನೂ ಗೆಲ್ಲಬೇಕಾದ ಅನಿವಾರ್ಯತೆ ಇದೆ. 4ನೇ ಟೆಸ್ಟ್ ಪಂದ್ಯ ಇಂದಿನಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಪಂದ್ಯ ಶುರುವಾಗಲಿದೆ. ಇದನ್ನೂ ಓದಿ: WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ

    ಬೌಲಿಂಗ್‌ ಪಡೆಗೆ ಬುಮ್ರಾ ಸಾರಥ್ಯ
    ಮ್ಯಾಂಚೆಸ್ಟರ್‌ ಪಂದ್ಯಕ್ಕೆ ಟೀಂ ಇಂಡಿಯಾದ ಮೂವರು ಆಟಗಾರರು ಅಲಭ್ಯರಾಗಿದ್ದಾರೆ. 3ನೇ ಟೆಸ್ಟ್ (Test Cricket) ಪಂದ್ಯದ ಬಳಿಕ ನಡೆದ ಅಭ್ಯಾಸದ ವೇಳೆ ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಷ್‌ದೀಪ್‌ ಸಿಂಗ್‌ ಅವರ ಕೈಗೆ ಗಾಯವಾಗಿದ್ದು, ಹೀಗಾಗಿ ಮ್ಯಾಂಚೆಸ್ಟರ್​ ಟೆಸ್ಟ್ ಪಂದ್ಯದಲ್ಲೂ ಅವರು ಕಾಣಿಸಿಕೊಳ್ಳುವುದಿಲ್ಲ. ಇನ್ನೂ ಎಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವಿಗೆ ಕಾರಣವಾಗಿದ್ದ ವೇಗಿ ಆಕಾಶ್ ದೀಪ್ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾರ್ಡ್ಸ್​ ಟೆಸ್ಟ್ ಪಂದ್ಯದ 4ನೇ ದಿನದಾಟದಂದು ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದ ಆಕಾಶ್ ದೀಪ್ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 8 ಓವರ್​ಗಳನ್ನು ಮಾತ್ರ ಎಸೆದಿದ್ದರು ಎಂದು ಟೀಮ್ ಇಂಡಿಯಾ ನಾಯಕ ಶುಭ​ಮನ್ ಗಿಲ್ ತಿಳಿಸಿದ್ದಾರೆ. ಹೀಗಾಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಅವರು ಟೀಂ ಇಂಡಿಯಾ ಬೌಲಿಂಗ್‌ ಪಡೆಯನ್ನ ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಲ್ಲದೇ ಟೀಮ್ ಇಂಡಿಯಾದ ಯುವ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಜಿಮ್​ನಲ್ಲಿನ ತರಬೇತಿ ವೇಳೆ ಅವರ ಮೊಣಕಾಲಿಗೆ ಗಾಯವಾಗಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಅವರು ಹೊರಬಿದ್ದಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ನಿತೀಶ್ ಕುಮಾರ್ ಬದಲಿಗೆ ಅನ್ಶುಲ್‌ ಕಾಂಬೋಜ್‌ ಅವರನ್ನು ಕಣಕ್ಕಿಳಿಸಲಿದೆ ಭಾರತ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಕಿಗೆ ಮತ್ತೆ ಶಾಕ್‌, ಹಿಂದೆ ಸರಿದ ಟೀಂ ಇಂಡಿಯಾ – ಇಂದಿನ ಪಂದ್ಯವೇ ರದ್ದು

    8 ವರ್ಷಗಳ ಬಳಿಕ ಸ್ಪಿನ್ನರ್‌ ಕಣಕ್ಕಿಳಿಸಲಿದೆ ಆಂಗ್ಲ ಪಡೆ
    ಇನ್ನೂ ಸರಣಿ ಗೆಲ್ಲುವ ತವಕದಲ್ಲಿರುವ ಇಂಗ್ಲೆಂಡ್‌ ತಂಡ ಪ್ಲೇಯಿಂಗ್‌ 11 ಬಳಗವನ್ನ ಪ್ರಕಟಿಸಿದ್ದು, ಒಂದೇ ಒಂದು ಬದಲಾವಣೆ ಮಾಡಿಕೊಂಡಿದೆ. ಗಾಯಗೊಂಡಿರುವ ಸ್ಪಿನ್ನರ್ ಶೋಯೆಬ್ ಬಶೀರ್ ಬದಲಿಗೆ ಲಿಯಾಮ್ ಡಾಸನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಬರೋಬ್ಬರಿ 8 ವರ್ಷಗಳ ಬಳಿಕ ಡಾಸನ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲಿದ್ದಾರೆ. ಇದನ್ನೂ ಓದಿ:BCCI ಅಕೌಂಟ್‌ನಲ್ಲಿದೆ 30,000 ಕೋಟಿ ಹಣ – IPLನಿಂದಲೇ ಅತೀ ಹೆಚ್ಚು ಗಳಿಕೆ! 

    ಬಶೀರ್‌ಗೆ ಏನಾಗಿತ್ತು?
    ಶೋಯೆಬ್ ಬಶೀರ್ ಅವರು ಲಾರ್ಡ್ಸ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ಎಡಗೈ ಬೆರಳಿಗೆ ಗಾಯ ಮಾಡಿಕೊಂಡರು. ಭಾರತದ ಎಡಗೈ ಬ್ಯಾಟರ್ ರವೀಂದ್ರ ಜಡೇಜಾ ಅವರ ಬಲವಾದ ಹೊಡೆತ ತಡೆಯಲು ಹೋಗಿ ಬೆರಳು ಮುರಿತಕ್ಕೆ ಒಳಗಾಯಿತು. ಹೀಗಾಗಿ ಅವರು ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಬೇಕಾಗಿ ಬಂತು. ನಂತರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಬಶೀರ್ 3ನೇ ಟೆಸ್ಟ್ ಪಂದ್ಯದಲ್ಲಿ ಕೊನೆಯ ವಿಕೆಟ್ ಪಡೆದು ಇಂಗ್ಲೆಂಡ್‌ಗೆ 22 ರನ್‌ಗಳ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.