Tag: ಟೆಸ್ಟಿಂಗ್

  • ಸದ್ಯಕ್ಕೆ ಟಫ್ ರೂಲ್ಸ್ ಜಾರಿಯಿಲ್ಲ: ಸಿಎಂ

    ಸದ್ಯಕ್ಕೆ ಟಫ್ ರೂಲ್ಸ್ ಜಾರಿಯಿಲ್ಲ: ಸಿಎಂ

    ಬೆಂಗಳೂರು: ಕೊರೊನಾ 4ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸದ್ಯಕ್ಕೆ ಟಫ್ ರೂಲ್ಸ್ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

    ಪ್ರಧಾನಿ ಮೋದಿ ಅವರೊಂದು ತುರ್ತು ಸಭೆ ಮುಕ್ತಾಯದ ಬಳಿಕ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯದಲ್ಲಿ ಸಾಫ್ಟ್ ರೂಲ್ಸ್ ಮಾತ್ರ ಜಾರಿ ಮಾಡುತ್ತೇವೆ. ಸ್ವಲ್ಪ ದಿನ ಕಾದು ನೋಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಕೇಂದ್ರದಿಂದ ಯಾವುದೇ ನಿಯಮ ಜಾರಿಗೆ ಸೂಚನೆ ಬಾರದ ಹಿನ್ನಲೆ ಸದ್ಯಕ್ಕೆ ಕಠಿಣ ನಿಯಮ ಜಾರಿ ಮಾಡದೇ ಇರಲು ನಿರ್ಧಾರ ಮಾಡಿದ್ದೇವೆ ಎಂದರು.

    corona

    ಪ್ರಧಾನಿಗಳ 3ಟಿ ಸೂತ್ರ ಅಳವಡಿಕೆಗೆ ನಿರ್ಧರಿಸಿದ್ದು, ರಾಜ್ಯದಲ್ಲಿ ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್‍ಮೆಂಟ್ ಸೂತ್ರ ಅನುಷ್ಠಾನ ಆಗಲಿದೆ. ಇದರ ಜೊತೆಗೆ ಲಸಿಕೆ ಅಭಿಯಾನ ಚುರುಕು ಮಾಡುತ್ತೇವೆ. ಹಾಗೆಯೇ ಮಕ್ಕಳ ಲಸಿಕೆ ಅಭಿಯಾನಕ್ಕೆ ವೇಗ ಕೊಡಲು ನಿರ್ಧಾರ ಮಾಡಿದ್ದೇವೆ. 6 ರಿಂದ 12 ಮತ್ತು 15 ರಿಂದ 18 ಮತ್ತು 60 ವರ್ಷ ಮೇಲ್ಪಟ್ಟವರಿಗೂ ಲಸಿಕೆ ವೇಗ ಹೆಚ್ಚಳ ಮಾಡಿತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಮುಖ್ಯಸ್ಥೆ ಆಗಬೇಕು ಅಂತ ಪ್ರಶಾಂತ್ ಕಿಶೋರ್ ಬಯಸಿದ್ರು

    ಜನರಲ್ಲಿ ಲಸಿಕೆ ಜಾಗೃತಿ, ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತೇವೆ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲ ನಿಯಮ ಸೇರ್ಪಡೆ ಮಾಡುತ್ತಿದ್ದೇವೆ. ಅಂತಾರಾಜ್ಯ ಪ್ರಯಾಣಿಕರಿಗೂ ಕೆಲವು ನಿಯಮ ಜಾರಿಗೆ ಸರ್ಕಾರದ ಚಿಂತನೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೇರಳದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ

    ಆಸ್ಪತ್ರೆ ವ್ಯವಸ್ಥೆ ಬಗ್ಗೆ ಹೇಳಿದ್ದೇವೆ. ಸರ್ಕಾರಿ 50 ಸಾವಿರ ಬೆಡ್, ಖಾಸಗಿ 1 ಲಕ್ಷ ಬೆಡ್ ವ್ಯವಸ್ಥೆ ಮಾಡುತ್ತೇವೆ. ನಾವು ಸನ್ನದ್ಧರಾಗಿದೀವಿ ಅಂತ ಹೇಳಿದ್ದೇವೆ. ಪ್ರಧಾನ ಮಂತ್ರಿಗಳು ಸುದೀರ್ಘವಾಗಿ ರಾಜ್ಯದ ವರದಿ ಬಗ್ಗೆ ಪಡೆದಿದ್ದಾರೆ. ರಾಜ್ಯದ ಸ್ಥಿತಿಗತಿ ಬಗ್ಗೆಯೂ ನಾವು ಹೇಳಿದ್ದೇವೆ. ಸದ್ಯ ಕೋವಿಡ್‌ ನಿಯಂತ್ರಣದಲ್ಲಿದೆ. ಪ್ರತಿ ದಿನ 30 ಸಾವಿರ ಟೆಸ್ಟ್ ಹೆಚ್ಚಳ ಮಾಡಲು ಕ್ರಮ ವಹಿಸಿದ್ದೇವೆ ಎಂದರು.

    ಏಪ್ರಿಲ್ 9ರ ಬಳಿಕ ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟ್ ಹೆಚ್ಚಳ ಮಾಡುತ್ತೇವೆ. ಬೆಂಗಳೂರಿಗೆ ಹೆಚ್ಚು ಗಮನ ಕೊಟ್ಟಿದ್ದೇವೆ. ಟೆಸ್ಟಿಂಗ್ ಹೆಚ್ಚು ಮಾಡಲು ಕ್ರಮ ವಹಿಸಿದ್ದೇವೆ. ಸಾರ್ವಜನಿಕವಾಗಿ ಸ್ಥಳಗಳಲ್ಲಿ ಕೊವೀಡ್ ನಿಯಮ ಪಾಲನೆಗೆ ಕ್ರಮ ಕೈಗೊಳ್ಳುತ್ತೇವೆ ಹಾಗೂ ವಿಮಾನ ನಿಲ್ದಾಣ ಇರೋದ್ರಿಂದ ಹೆಚ್ಚು ಪರೀಕ್ಷೆ ಮಾಡಲು ಕ್ರಮ ವಹಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

  • ಟೆಸ್ಟಿಂಗ್ ಪ್ರಮಾಣ ಕಡಿಮೆಯಾಗಿಲ್ಲ, ವಿಧಾನ ಬದಲಾಗಿದೆ ಅಷ್ಟೆ- ಬೊಮ್ಮಾಯಿ ಸಮರ್ಥನೆ

    ಟೆಸ್ಟಿಂಗ್ ಪ್ರಮಾಣ ಕಡಿಮೆಯಾಗಿಲ್ಲ, ವಿಧಾನ ಬದಲಾಗಿದೆ ಅಷ್ಟೆ- ಬೊಮ್ಮಾಯಿ ಸಮರ್ಥನೆ

    – ಇಸ್ಕಾನ್‍ನ ಅಕ್ಷಯ ಪಾತ್ರೆಯಿಂದ ಕಾರ್ಮಿಕರಿಗೆ ಆಹಾರ

    ಬೆಂಗಳೂರು: ಕೊರೊನಾ ಟೆಸ್ಟಿಂಗ್ ಪ್ರಮಾಣ ಕಡಿಮೆಯಾಗಿಲ್ಲ, ಟೆಸ್ಟ್ ಮಾಡುವ ವಿಧಾನ ಬದಲಾಗಿದೆ ಅಷ್ಟೆ ಎಂದು ಹೇಳುವ ಮೂಲಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟೆಸ್ಟಿಂಗ್ ಕಡಿಮೆಯಾಗಿರುವುದನ್ನು ಒಪ್ಪಿಕೊಳ್ಳದೆ, ಸಮರ್ಥಿಸಿಕೊಂಡಿದ್ದಾರೆ.

    ಇಂದು ಕೆ.ಆರ್.ಮಾರ್ಕೆಟ್‍ನಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆಯಿಂದ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಆಹಾರ ಪೂರೈಕೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಟೆಸ್ಟಿಂಗ್ ಕಡಿಮೆಯಾಗಿದ್ದಕ್ಕೆ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂಬ ಚರ್ಚೆ ನಡೆಯುತ್ತಿರುವ ಬಗ್ಗೆ ಸ್ಪಷ್ಟಪಡಿಸಿದರು. ಟೆಸ್ಟಿಂಗ್ ಪ್ರಮಾಣ ಕಡಿಮೆಯಾಗಿಲ್ಲ, ಟೆಸ್ಟ್ ಮಾಡುವ ವಿಧಾನ ಬದಲಾಗಿದೆ. ಪಾಸಿಟಿವ್ ಬಂದವರ ಕಟುಂಬ ಹಾಗೂ ಸುತ್ತಮುತ್ತಲಿನವರ ಟೆಸ್ಟ್ ನಡೆಯುತ್ತಿದೆ. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟ್ ಮಾಡುತ್ತಿಲ್ಲ. ಹೀಗಾಗಿ ಸಂಖ್ಯೆ ಕಡಿಮೆ ಆಗಿರಬಹುದು ಎಂದರು.

    ಲಾಕ್‍ಡೌನ್ ಮುಂದುವರಿಕೆ ಬಗ್ಗೆ ಸಿಎಂ ಮಟ್ಟದಲ್ಲಿ ಇನ್ನು ಚರ್ಚೆ ನಡೆದಿಲ್ಲ. ಸಿಎಂ ಅಂಕಿ, ಅಂಶ ಪಡೆಯುತ್ತಿದ್ದಾರೆ. ಇಂದು ಟಾಸ್ಕ್ ಫೋರ್ಸ್ ಸಭೆ ನಡೆಯುತ್ತಿದೆ. ಏನು ತೀರ್ಮಾನ ಆಗುತ್ತೆ ಅನ್ನೋದು ನೋಡಬೇಕು. ಟಾಸ್ಕ್ ಫೋರ್ಸ್ ಸಭೆಯ ತೀರ್ಮಾನದ ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಇದೇ ವೇಳೆ ತಿಳಿಸಿದರು.

    ಅಕ್ಷಯಪಾತ್ರೆಯಿಂದ ಆಹಾರ
    ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆಯಿಂದ ಕೂಲಿ ಕಾರ್ಮಿಕರು ಹಾಗೂ ಬರವಡಿಗೆ ಆಹಾರ ಪೂರೈಕೆ ಮಾಡುವ ಕಾರ್ಯಕ್ರಮಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಇಂದು ಕೆ.ಆರ್.ಮಾರ್ಕೆಟ್‍ನಲ್ಲಿ ಚಾಲನೆ ನೀಡಿದರು. ಕೂಲಿ ಕಾರ್ಮಿಕರಿಗೆ ಆಹಾರ ಪೂರೈಕೆ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದ್ದು, ಫುಡ್ ರಿಲೀಫ್ ಸೆಂಟರ್ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಆಯುಕ್ತ ಕಮಲ್‍ಪಂತ್ ಉಪಸ್ಥಿತರಿದ್ದರು.

  • ಕೋವಿಡ್ ಟೆಸ್ಟ್ ಮಾಡದೆ ಸಾಮಗ್ರಿಗಳ ವ್ಯರ್ಥ- ಇಬ್ಬರು ಆರೋಗ್ಯ ಸಿಬ್ಬಂದಿ ಅಮಾನತು

    ಕೋವಿಡ್ ಟೆಸ್ಟ್ ಮಾಡದೆ ಸಾಮಗ್ರಿಗಳ ವ್ಯರ್ಥ- ಇಬ್ಬರು ಆರೋಗ್ಯ ಸಿಬ್ಬಂದಿ ಅಮಾನತು

    ಬೆಂಗಳೂರು: ಕೋವಿಡ್ ಟೆಸ್ಟ್ ಮಾಡದೆ ಸಾಮಗ್ರಿಗಳನ್ನು ವ್ಯರ್ಥ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆರೋಗ್ಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ಯಲಹಂಕ ವಲಯದ ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಮಾಡದೆ ಟೆಸ್ಟಿಂಗ್ ಸಾಮಗ್ರಿಗಳನ್ನು ವ್ಯರ್ಥ ಮಾಡುತ್ತಿದ್ದರು. ಅಲ್ಲದೆ ಹೆಚ್ಚು ಟೆಸ್ಟ್ ಮಾಡಿದಂತೆ ಲೆಕ್ಕ ನೀಡುತ್ತಿದ್ದರು. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

    ದೃಶ್ಯಾವಳಿ ಗಮನಿಸಿದ ಆಧಾರದ ಮೇಲೆ ಇಬ್ಬರು ಸ್ವಾಬ್ ಕಲೆಕ್ಟರ್ ಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳನ್ನು ನಿರೀಕ್ಷಣಾ ವಿಚಾರಣೆ ಬಳಿಕ ಕಡ್ಡಾಯವಾಗಿ ಅಮಾನತುಗೊಳಿಸುವಂತೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಆದೇಶ ಹೊರಡಿಸಿದ್ದಾರೆ.

    ನಗರದ ಆಡುಗೋಡಿ ಔಷಧಾಲಯಕ್ಕೆ ಮುಖ್ಯ ಆಯುಕ್ತರು ಇಂದು ಬೆಳಗ್ಗೆ ಭೇಟಿ ನೀಡಿ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ನೀಡುವ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದು. ಈ ವೇಳೆ ಲಸಿಕೆ ಪಡೆಯಲು ಬಂದ ನಾಗರಿಕರ ಜೊತೆ ಮಾತನಾಡಿ, ಲಸಿಕೆ ನೀಡುವ ಬಗ್ಗೆ ಹಾಗೂ ಪಡೆದ ನಂತರ ಅಭಿಪ್ರಾಯ ಪಡೆದರು. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಪ್ರಮುಖವಾಗಿ 60 ವರ್ಷ ಮೇಲ್ಪಟ್ಟವರಿಗೆ ಬೇಗ ಲಸಿಕೆ ಪಡೆಯಲು ತಿಳಿಸಿ ಎಂದು ಮನವಿ ಮಾಡಿದರು.

    ವ್ಯಾಕ್ಸಿನೇಷನ್ ಗಾಗಿ ನಗರದಲ್ಲಿ ಸುಮಾರು 500 ಸೈಟ್‍ಗಳಿದ್ದು, ಪ್ರತಿ ಸೈಟ್‍ನಲ್ಲಿಯೂ ಕನಿಷ್ಟ 100 -150 ವ್ಯಾಕ್ಸಿನೇಷನ್ ನೀಡುವ ಗುರಿ ಹೊಂದಲಾಗಿದೆ. ಅಲ್ಲದೆ ಈಗಿರುವ ಸೈಟ್ ಗಳ ಜೊತೆಗೆ ಹೆಚ್ಚುವರಿಯಾಗಿ ಅಗತ್ಯವಿರುವ ಕಡೆ ಸೈಟ್ ಗಳನ್ನು ತೆರೆದು ಹೆಚ್ಚು ವ್ಯಾಕ್ಸಿನೇಷನ್ ನೀಡಲು ಪಾಲಿಕೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಲಸಿಕೆ ಪಡೆಯುವವರಿಗೆ ಅವಶ್ಯಕವಿರುವ ಕಡೆ ವಾಹನಗಳ ವ್ಯವಸ್ಥೆಯನ್ನೂ ಅಯಾ ವಲಯ ಆಯುಕ್ತರ ಮಟ್ಟದಲ್ಲಿ ಮಾಡಲಾಗುವುದು ಎಂದರು.

    ಬಾಷ್ ಸಂಸ್ಥೆ ಸಹಭಾಗಿತ್ವದಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಿದ್ದು, ಇದನ್ನು ಪಾಲಿಕೆಗೆ ಪಡೆಯಲಿದ್ದೇವೆ. ಈ ಸಂಬಂಧ ಬಾಷ್ ಸಂಸ್ಥೆ ಹಾಗೂ ಪಾಲಿಕೆ ಜೊತೆ ಚರ್ಚೆ ನಡೆಯುತ್ತಿದ್ದು, ಕೋವಿಡ್ ಆರೈಕೆ ಕೇಂದ್ರ ಪ್ರಾರಂಭಿಸಲು ಇನ್ನೆರಡು ದಿನದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ರವರು ತಿಳಿಸಿದರು.

    ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ವಲಯಗಳಲ್ಲಿ ಸುಮಾರು 50 ಹಾಸಿಗೆ ಸಾಮಥ್ರ್ಯದ 2 ಅಥವಾ 3 ಕೋವಿಡ್ ಆರೈಕೆ ಕೇಂದ್ರಗಳನ್ನು ಶೀಘ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಣ್ಣ ಪ್ರಮಾಣದ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ಮನೆಯಲ್ಲಿ ಪ್ರತ್ಯೇಕವಾಗಿರಲು ಸಾಧ್ಯವಾಗದಂತಹ ಸೋಂಕಿತರನ್ನು ಆರೈಕೆ ಕೇಂದ್ರಗಳಲ್ಲಿರಿಸಿ, ಚಿಕಿತ್ಸೆ ನೀಡಿ, ಆರೈಕೆ ಮಾಡಲಾಗವುದು ಎಂದರು.

    ಕೋರಮಂಗಲದ ಫೋರಂ ಮಾಲ್ ಹತ್ತಿರವಿರುವ ಪ್ರೆಸ್ಟೀಜ್ ಅಪಾರ್ಟ್‍ಮೆಂಟ್ ನಲ್ಲಿನ ಟೆಸ್ಟಿಂಗ್ ಕಾರ್ಯ ವೀಕ್ಷಿಸಿದರು. ಅಪಾರ್ಟ್‍ಮೆಂಟ್ ನ ಪದಾಧಿಕಾರಿಗಳೊಂದಿಗೆ ಮಾತನಾಡಿ, ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಕೋರಿದರು.

  • ದಾವಣಗೆರೆ ಸಂಪೂರ್ಣ ಲಾಕ್‍ಡೌನ್- 21 ಕೊರೊನಾ ಸೋಂಕಿತರ ಮಾಹಿತಿ ಇಲ್ಲಿದೆ

    ದಾವಣಗೆರೆ ಸಂಪೂರ್ಣ ಲಾಕ್‍ಡೌನ್- 21 ಕೊರೊನಾ ಸೋಂಕಿತರ ಮಾಹಿತಿ ಇಲ್ಲಿದೆ

    – 293 ಜನರ ವರದಿಗಾಗಿ ಕಾಯ್ತಿರೋ ಜಿಲ್ಲಾಡಳಿತ

    ದಾವಣಗೆರೆ: ಆರೆಂಜ್ ಝೋನ್‍ನಲ್ಲಿದ್ದ ದಾವಣಗೆರೆಯಲ್ಲಿ ಒಮ್ಮಿಂದೊಮ್ಮಲೆ ಕೊರಾನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಇಂದು ಒಂದೇ ದಿನ 21 ಪ್ರಕರಣಗಳು ಹೆಚ್ಚಾಗುವ ಮೂಲಕ ರೆಡ್ ಝೋನ್‍ಗೆ ತಿರುಗುವ ಸಾಧ್ಯತೆ ಹೆಚ್ಚಾಗಿದೆ.

    ಒಟ್ಟು 330 ಸ್ಯಾಂಪಲ್ ಗಳ ಪೈಕಿ 37ರ ವರದಿ ಬಂದಿದ್ದು, ಇದರಲ್ಲಿ ಬರೋಬ್ಬರಿ 21 ಮಂದಿಗೆ ಕೊರೊನಾ ತಗುಲಿರೋದು ದೃಢಪಟ್ಟಿದೆ. ಇನ್ನೂ 293 ಜನರ ವರದಿ ಬರುವುದು ಬಾಕಿ ಇದೆ. ಇವರ ವರದಿ ಏನಾಗುತ್ತದೋ ಎಂದು ಜಿಲ್ಲೆಯ ಜನ ಭಯಭೀತರಾಗಿದ್ದಾರೆ.

    ರೋಗಿ ನಂಬರ್ 556 ಮತ್ತು 533 ಸಂಪರ್ಕದಿಂದ ಈ ಪ್ರಕರಣಗಳು ಬಂದಿವೆ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕದಿಂದ ಇಷ್ಟು ಜನರಿಗೆ ಸೋಂಕು ಹಬ್ಬಿದೆ. ಶನಿವಾರ ದಾವಣಗೆರೆಯಲ್ಲಿ 10 ಪ್ರಕರಣಗಳಿದ್ದವು. ಇಂದು 21 ಪ್ರಕರಣಗಳು ಪತ್ತೆಯಾಗಿದ್ದು, ದಾವಣಗೆರೆಯಲ್ಲಿ ಇದೀಗ ಒಟ್ಟು 31 ಸಕ್ರಿಯ ಪ್ರಕರಣಗಳಿವೆ. ಇದು ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನರಿಗೆ ಆಘಾತವನ್ನುಂಟು ಮಾಡಿದೆ.

    ಎರಡು ದಿನಗಳ ಹಿಂದೆ 94, ನಿನ್ನೆ 72, ಇಂದು 164 ಸ್ಯಾಂಪಲ್ ಕಳುಹಿಸಲಾಗಿತ್ತು. 21 ಪಾಸಿಟಿವ್ ಪ್ರಕರಣ ಬಂದ ಹಿನ್ನೆಲೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್, ಡಿಸಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ಹನುಮಂತರಾಯ ಸೇರಿದಂತೆ ವಿವಿಧ ಅಧಿಕಾರಿಗಳು ತುರ್ತು ಸಭೆ ನಡೆಸಿದರು.

    ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ದಾವಣಗೆರೆ ಸಂಪೂರ್ಣ ಲಾಕ್‍ಡೌನ್ ಆಗಲಿದ್ದು, ಯಾವುದೇ ಅಂಗಡಿ ತೆರೆಯುವಂತಿಲ್ಲ. ದಾವಣಗೆರೆ ರೆಡ್ ಝೋನ್‍ಗೆ ಬರಲಿದೆ. 21 ಪಾಸಿಟಿವ್ ಬಂದಿರುವುದರಿಂದ ಕಂಟೈನ್‍ಮೆಂಟ್ ಝೋನ್ ಆಗಲಿದೆ. ಕಂಟೈನ್‍ಮೆಂಟ್ ಝೋನ್ ನಲ್ಲಿ ದವಸ, ಧಾನ್ಯ ಸಿಗುವುದಿಲ್ಲ, ಆನ್ ಲೈನ್ ವ್ಯವಸ್ಥೆ ಮಾಡಿಕೊಳ್ಳಬಹದಾಗಿದೆ. ಬಾರ್ ಗಳನ್ನು ಕೂಡ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಎಲ್ಲೆಲ್ಲಿ ಎಷ್ಟು, ಯಾರ್ಯಾರಿಗೆ ಸೋಂಕು?
    ಜಾಲಿನಗರ 12, ಇಮಾಮ್ ನಗರ 6, ಕೆಟಿಜೆ ನಗರ 1, ಬೇತೂರು ರಸ್ತೆ 1, ಯಲ್ಲಮ್ಮನ ದೇವಸ್ಥಾನದ ಬಳಿ 1 ಪ್ರಕರಣ ಪತ್ತೆಯಾಗಿದ್ದು, 9 ಜನ ಪುರುಷರು, ಮೂವರು ಬಾಲಕರು, ಒಬ್ಬ ಬಾಲಕಿ, 8 ಮಹಿಳೆಯರಿಗೆ ಸೋಂಕು ತಗುಲಿದೆ.

    ಸೋಂಕಿತರ ವಿವರ
    1. 30 ವರ್ಷದ, ಪುರುಷ, ಜಾಲಿನಗರ
    2. 52 ವರ್ಷದ ಮಹಿಳೆ, ಇಮಾಮ್ ನಗರ
    3. 38 ವರ್ಷದ ಪುರುಷ, ಜಾಲಿನಗರ
    4. 32 ವರ್ಷದ ಮಹಿಳೆ ಇಮಾಮ್ ನಗರ
    5. 35 ವರ್ಷದ ಪುರುಷ, ಇಮಾಮ್ ನಗರ
    6. 32 ವರ್ಷದ ಮಹಿಳೆ, ಇಮಾಮ್ ನಗರ
    7. 12 ವರ್ಷದ ಬಾಲಕಿ, ಇಮಾಮ್ ನಗರ
    8. 7 ವರ್ಷದ ಬಾಲಕ, ಇಮಾಮ್ ನಗರ
    9. 38 ವರ್ಷದ ಪುರುಷ, ಬೇತೂರು ರಸ್ತೆ
    10. 49 ವರ್ಷದ ಮಹಿಳೆ, ಕೆಟಿಜೆ ನಗರ
    11. 27 ವರ್ಷದ ಪುರುಷ, ಮೂರನೇ ತಿರುವು, ಜಾಲಿನಗರ
    12. 25 ಪುರುಷ, ಜಾಲಿನಗರ
    13. 33 ವರ್ಷ ಪುರುಷ, ಯಲ್ಲಮ್ಮನ ಟೆಂಪಲ್, ಮೂರನೇ ತಿರುವು
    14. 62 ವರ್ಷದ ಮಹಿಳೆ, ಜಾಲಿನಗರ
    15. 34 ವರ್ಷದ ಮಹಿಳೆ, ಜಾಲಿನಗರ
    16. 20 ವರ್ಷದ ಮಹಿಳೆ, ಜಾಲಿನಗರ
    17. 22 ವರ್ಷದ ಮಹಿಳೆ, ಜಾಲಿನಗರ
    18. 6 ವರ್ಷದ ಬಾಲಕ, ಜಾಲಿನಗರ
    19. 70 ವರ್ಷದ ಪುರುಷ, ಜಾಲಿನಗರ
    20. 42 ವರ್ಷದ ಪುರುಷ, ಜಾಲಿನಗರ
    21. 11 ವರ್ಷದ ಬಾಲಕ, ಜಾಲಿನಗರ

  • ದೇಶದಲ್ಲೇ ಮೊದಲ ಬಾರಿಗೆ ದಕ್ಷಿಣ ಕೊರಿಯಾ ಕಿಟ್ ಮೂಲಕ ರ‍್ಯಾಪಿಡ್ ಟೆಸ್ಟ್

    ದೇಶದಲ್ಲೇ ಮೊದಲ ಬಾರಿಗೆ ದಕ್ಷಿಣ ಕೊರಿಯಾ ಕಿಟ್ ಮೂಲಕ ರ‍್ಯಾಪಿಡ್ ಟೆಸ್ಟ್

    – ಟಾಟಾ ಸಂಸ್ಥೆಯ ಸಿಎಸ್‍ಆರ್ ಅನುದಾನದಲ್ಲಿ ಕಿಟ್

    ಕೋಲಾರ: ದೇಶದಲ್ಲೇ ಮೊದಲ ಬಾರಿಗೆ ದಕ್ಷಿಣ ಕೊರಿಯಾ ರ‍್ಯಾಪಿಡ್ ಟೆಸ್ಟಿಂಗ್ ಕಿಟ್‍ಗಳ ಪ್ರಾಯೋಗಿಕ ಪರೀಕ್ಷೆಗೆ ಕೋಲಾರ ಜಿಲ್ಲೆ ಮುಂದಾಗಿದೆ.

    ಸುಮಾರು 6 ಸಾವಿರ ಮಂದಿಗೆ ರ‍್ಯಾಪಿಡ್ ಟೆಸ್ಟ್ ಮಾಡುವುದಕ್ಕೆ ಕೋಲಾರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಜ್ಜಾಗಿದೆ. ಎಲ್ಲೆಡೆ ಸಂಚಲನ ಮೂಡಿಸಿರುವ ಹಾಗೂ ಸಾಕಷ್ಟು ಸಮಯ ವ್ಯರ್ಥ ಮಾಡುತ್ತಿರುವ ರಕ್ತ ಮಾದರಿ ಹಾಗೂ ಗಂಟಲು ದ್ರವ ಸಂಗ್ರಹಿಸಿ ಎರಡು ದಿನಗಳ ಕಾಲ ವರದಿಗಾಗಿ ಕಾಯುವ ಬದಲಿಗೆ ಪ್ರಾಥಮಿಕ ಹಂತದಲ್ಲೆ ಪರೀಕ್ಷೆಗೆ ಒಳಪಡಿಸುವ ರ‍್ಯಾಪಿಡ್ ಟೆಸ್ಟ್ ಇದಾಗಿದೆ.

    ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುವ ಟಾಟಾ ನರ್ವ್ ಸೆಂಟರ್ ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಟಾಟಾ ಸಂಸ್ಥೆ ದೇಶದಲ್ಲೇ ಮೊದಲ ಬಾರಿಗೆ ಸಿಎಸ್‍ಆರ್ ಅನುದಾನದಡಿಯಲ್ಲಿ ಕಿಟ್‍ಗಳನ್ನು ನೀಡಿದೆ. ದಕ್ಷಿಣ ಕೊರಿಯಾ ಕಿಟ್ ಮೂಲಕ ಕೋಲಾರದಲ್ಲಿ ರ‍್ಯಾಪಿಡ್ ಟೆಸ್ಟಿಂಗ್‍ಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತಿದೆ.

    ಕೊರಿಯಾದಿಂದ ಬಂದಿರುವ ಕಿಟ್‍ಗಳಿಂದ ಪರೀಕ್ಷೆ ನಡೆಸಿದ ಕೇವಲ 20 ನಿಮಿಷದಲ್ಲಿ ಫಲಿತಾಂಶ ಸಿಗಲಿದೆ. ಇನ್ನು ರ‍್ಯಾಪಿಡ್ ಟೆಸ್ಟ್ ಮಾಡುವುದರ ಸಲುವಾಗಿ ದಕ್ಷಿಣ ಕೊರಿಯಾದಿಂದ ಸುಮಾರು 1,500 ಕಿಟ್‍ಗಳನ್ನು ಕೋಲಾರಕ್ಕೆ ತರಿಸಲಾಗಿದ್ದು, ಪ್ರತಿನಿತ್ಯ ಸುಮಾರು 200 ಮಂದಿಗೆ ಕರೊನಾ ಪರೀಕ್ಷೆ ನಡೆಯಲಿದೆ. ಈ ಹಿಂದೆ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆ ನಡೆಸಿ, ಬೆಂಗಳೂರಿಗೆ ಕಳುಹಿಸಬೇಕಾಗಿತ್ತು. ಜೊತೆಗೆ ಕೊರೊನಾ ಸೋಂಕು ವರದಿಗಾಗಿ 24 ಗಂಟೆ ಕಾಯುವ ಪರಿಸ್ಥತಿ ಇತ್ತು. ಆದರೆ ಇದೀಗ 20 ನಿಮಿಷಗಳಲ್ಲಿ ಕೋಲಾರದಲ್ಲಿಯೇ ಕೊರೊನಾ ಸೋಂಕು ಪತ್ತೆ ಹಚ್ಚಲಾಗುತ್ತದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ವಿಜಯ್ ಕುಮಾರ್ ತಿಳಿಸಿದ್ದಾರೆ.

  • ಸಂಚಾರಿ ಫೀವರ್ ಕ್ಲಿನಿಕ್ ಕಾರ್ಯಾರಂಭ- ಕ್ವಾರಂಟೈನ್ ಪ್ರದೇಶಗಳಲ್ಲಿ ತಪಾಸಣೆ

    ಸಂಚಾರಿ ಫೀವರ್ ಕ್ಲಿನಿಕ್ ಕಾರ್ಯಾರಂಭ- ಕ್ವಾರಂಟೈನ್ ಪ್ರದೇಶಗಳಲ್ಲಿ ತಪಾಸಣೆ

    ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಅನ್ನು ಸಂಚಾರಿ ಫೀವರ್ ಕ್ಲಿನಿಕ್ ಆಗಿ ಮಾರ್ಪಡಿಸಲಾಗಿದೆ. ಕೊರೊನಾ ಸೋಂಕು ಕಂಡುಬಂದ ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಸಂಚರಿಸಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಪರೀಕ್ಷಿಸಲಾಗುವುದು ಎಂದು ಜಿಲ್ಲಾ ಉಸ್ತವಾರಿ ಸಚಿವರೂ ಆಗಿರುವ ಬೃಹತ್ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು.

    ನಗರದ ಬಿಆರ್ ಟಿಎಸ್ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿನ ಕಂಟ್ರೋಲ್ ರೂಂ ಹಾಗೂ ಸಂಚಾರಿ ಫೀವರ್ ಕ್ಲಿನಿಕ್ ಪರಿಶೀಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಲ್ಲಾಡಳಿತ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿನೂತನ ಪ್ರಯತ್ನ ಮಾಡಲಾಗಿದೆ. ಬಸ್‍ನ್ನು ಸಂಚಾರಿ ಫೀವರ್ ಕ್ಲಿನಿಕ್ ಆಗಿ ಮಾರ್ಪಡಿಸಲಾಗಿದೆ. ಇದು ರಾಜ್ಯದ ಮೊದಲ ಸಂಚಾರಿ ಫೀವರ್ ಕ್ಲಿನಿಕ್ ಆಗಿದೆ. ಕೊರೊನಾ ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಅವರನ್ನು ಅಂಬುಲೆನ್ಸ್ ಮೂಲಕ ಕಿಮ್ಸ್ ಕೊವೀಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು. ಒರ್ವ ಡಾಕ್ಟರ್, ನರ್ಸ್, ಗ್ರೂಪ್ ಡಿ ನೌಕರರು ಸಂಚಾರಿ ಫೀವರ್ ಅಲ್ಲಿ ಕೆಲಸ ನಿರ್ವಹಿಸುತ್ತಾರೆ. ಥರ್ಮಲ್ ಸ್ಕ್ಯಾನರ್, ರಕ್ತ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ ಮಾಡುವ ಯಂತ್ರ ಈ ಬಸ್ಸಿನಲ್ಲಿದೆ ಎಂದು ಮಾಹಿತಿ ನೀಡಿದರು.

    ಅಗತ್ಯ ವಸ್ತುಗಳ ಮಾರಾಟಗಾರರು ಹಾಗೂ ತುರ್ತು ಸಂದರ್ಭಗಳ ಪಾಸು ವಿತರಿಸಲು ಆನ್ ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. www.supportdharwad.in ಮೂಲಕ ವ್ಯಾಪಾರಿಗಳು ಮತ್ತು ವಿವಿಧ ತುರ್ತು ಉದ್ದೇಶಗಳಿಗೆ ಸಾರ್ವಜನಿಕರು ಇ-ಪಾಸ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ ಕ್ಯೂ.ಆರ್.ಕೋಡ್ ಇರುವ ಪಾಸುಗಳನ್ನು ವಿತರಿಸಲಾಗುವುದು. ಇದರಿಂದ ಪಾಸುಗಳ ದುರುಪಯೋಗವಾಗುವುದು ತಪ್ಪುತ್ತದೆ ಎಂದರು.

    ಬಿಆರ್ ಟಿಎಸ್, ಪಾಲಿಕೆ ಹಾಗೂ ಪೊಲೀಸ್ ಕಮಿಷನರೇಟ್ ಕಡೆಯಿಂದ ಅವಳಿ ನಗರದ ವಿವಿಧೆಡೆ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾಗಳನ್ನು ಮಾನಿಟರ್ ಮಾಡಲು ಹೊಸೂರಿನ ಬಿಆರ್ ಟಿಆಸ್ ಕಚೇರಿಯಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. ಈ ಮೂಲಕ ಲಾಕ್‍ಡೌನ್ ಪ್ರದೇಶಗಳಲ್ಲಿ ಜನರು ಅನಗತ್ಯವಾಗಿ ಸಂಚರಿಸುವುದು ಹಾಗೂ ಗುಂಪು ಸೇರಿವುದನ್ನು ತಡೆಗಟ್ಟಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಹಾಗೂ ದೇಶಪಾಂಡೆ ಫೌಂಡೇಶನ್ ವತಿಯಿಂದ ಕೊರೊನಾ ಸೋಂಕಿತರ ಸಂಪರ್ಕ ಸಂಗ್ರಹ, ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳ ನಿಗಾವಹಿಸುವಿಕೆಯ ಕೇಂದ್ರೀಕೃತ ಕಾರ್ಯವನ್ನು ಸಹ ನಿರ್ವಹಿಸಲಾಗುತ್ತಿದೆ ಎಂದರು.

  • ವಿಜಯಪುರದಲ್ಲಿ 686 ಜನರ ಮೇಲೆ ನಿಗಾ, 335ಕ್ಕೂ ಹೆಚ್ಚು ಜನ ಐಸೋಲೇಷನ್‍ಗೆ ಶಿಫ್ಟ್

    ವಿಜಯಪುರದಲ್ಲಿ 686 ಜನರ ಮೇಲೆ ನಿಗಾ, 335ಕ್ಕೂ ಹೆಚ್ಚು ಜನ ಐಸೋಲೇಷನ್‍ಗೆ ಶಿಫ್ಟ್

    – 256 ಸ್ಯಾಂಪಲ್ ನೆಗೆಟಿವ್, 10 ಪಾಸಿಟಿವ್

    ವಿಜಯಪುರ: ಜಿಲ್ಲೆಯಲ್ಲಿ ಇಲ್ಲಿಯವರೆಗೆ 686 ಜನರ ಮೇಲೆ ನಿಗಾ ವಹಿಸಲಾಗಿದ್ದು, 335ಕ್ಕೂ ಹೆಚ್ಚು ಜನರನ್ನು ಐಸೋಲೇಷನ್‍ ನಲ್ಲಿ ಇಡಲಾಗಿದೆ. ಒಟ್ಟು 362 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 256 ಸ್ಯಾಂಪಲ್ ನೆಗೆಟಿವ್ ಬಂದಿವೆ, 10 ಪಾಸಿಟಿವ್ ಬಂದಿವೆ. ಅಲ್ಲದೆ ಇನ್ನೂ 96 ಪ್ರಕರಣಗಳ ಕುರಿತು ಫಲಿತಾಂಶ ಬರಬೇಕಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

    ಇಂದು ಮತ್ತೆ 60 ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷೆಗೆ ಕಳುಹಿಸಲಾಗುವದು. ಇಂದಿನ ಮೂರು ಪಾಸಿಟಿವ್ ವರದಿಗಳ ಪ್ರಕಾರ ಮೊದಲಿನ ಎರಡು ಪ್ರಕರಣಗಳು ರೋಗಿ ನಂ.221 ಗೆ ಸಂಬಂಧಿಸಿದ್ದು. ಸಂಜೆ ಬಂದ 228 ಜನರ ವರದಿಗೆ ಸಂಬಂಧಿಸಿದಂತೆ ಒಂದು ಪಾಜಿಟಿವ್ ಬಂದಿದೆ ಎಂದರು.

    ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಂಪರ್ಕದಿಂದಾಗಿ 228ನೇ ರೋಗಿಗೆ ಸೋಂಕು ತಗುಲಿದೆ. ಇವರ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿಯ ವರೆಗೆ ಈ ಎರಡು ಕುಟುಂಬಗಳಲ್ಲಿ ಮಾತ್ರ ಪಾಸಿಟಿವ್ ಬರುತ್ತಿದೆ. ಅವರೊಂದಿಗಿದ್ದವರಿಗೆ ಬಂದಿಲ್ಲ ಎಂಬುದು ಸಂತೋಷದ ವಿಚಾರ ಎಂದರು.

  • ಟೆಸ್ಟಿಂಗ್ ಕಿಟ್ ಖರೀದಿಸುವಲ್ಲಿ ಭಾರತ ತಡ ಮಾಡಿದೆ: ರಾಹುಲ್ ಗಾಂಧಿ

    ಟೆಸ್ಟಿಂಗ್ ಕಿಟ್ ಖರೀದಿಸುವಲ್ಲಿ ಭಾರತ ತಡ ಮಾಡಿದೆ: ರಾಹುಲ್ ಗಾಂಧಿ

    – ಇದೀಗ ಕೊರತೆ ಉಂಟಾಗಿದೆ

    ನವದೆಹಲಿ: ಕೊರೊನಾ ಟೆಸ್ಟಿಂಗ್ ಕಿಟ್‍ಗಳನ್ನು ಖರೀದಿಸುವಲ್ಲಿ ಕೇಂದ್ರ ಸರ್ಕಾರ ತಡ ಮಾಡಿದೆ, ಹೀಗಾಗಿ ಟೆಸ್ಟಿಂಗ್ ಕಿಟ್‍ಗಳ ಕೊರತೆ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರತಿ ಮಿಲಿಯನ್ ಭಾರತೀಯರಿಗೆ ಕೇವಲ 149 ಜನರನ್ನು ಟೆಸ್ಟ್ ಮಾಡುತ್ತಿದ್ದೇವೆ. ಲಾವೋಸ್ (157), ನೈಜರ್(182) ಹಾಗೂ ಹೊಂಡುರಾನ್(162)ಗಳಂತಹ ಸಣ್ಣ ದೇಶಗಳ ರೀತಿ ಭಾರತದಲ್ಲಿ ಟೆಸ್ಟಿಂಗ್ ಆಗುತ್ತಿದೆ. ಸಾಮೂಹಿಕ ಪರೀಕ್ಷೆ ಕೊರೊನಾ ವಿರುದ್ಧ ಹೋರಾಟದ ಕೀಲಿ ಕೈ ಆಗಿದೆ. ಪ್ರಸ್ತುತ ಆಟದಲ್ಲಿ ನಾವು ಎಲ್ಲಿಯೂ ಇಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ಮೂಲಕ ಟೆಸ್ಟಿಂಗ್ ಕಿಟ್‍ಗಳ ಕೊರತೆ ಇದೆ ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಪ್ರಸ್ತುತ 10,363 ಪ್ರಕರಣಗಳು ಪತ್ತೆಯಾಗಿದ್ದು, 339 ಜನ ಸಾವನ್ನಪ್ಪಿದ್ದಾರೆ. ಇತರ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಸಂಖ್ಯೆಗಳು ತುಂಬಾ ಕಡಿಮೆ. ಭಾರತ ಹೆಚ್ಚು ಪರೀಕ್ಷೆ ನಡೆಸದ ಕಾರಣ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚು ಪರೀಕ್ಷೆ ನಡೆಸಿದರೆ ನೈಜ ಪ್ರಮಾಣ ತಿಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇಟಲಿ ಪ್ರತಿ ಮಿಲಿಯನ್ ಜನರ ಪೈಕಿ 15,935 ಜನರನ್ನು ಪರೀಕ್ಷೆಗೆ ಒಳಪಡಿಸಿದೆ. ಅದೇ ರೀತಿ ಅಮೆರಿಕಾ 8,138 ಜನರನ್ನು ಪರೀಕ್ಷೆಗೆ ಒಳಪಡಿಸಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

    ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಆಹಾರ, ಔಷಧಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಯಾರು ಹೆದರುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರ ವರೆಗೆ ದೇಶಾದ್ಯಂತ ಲಾಕ್‍ಡೌನ್ ವಿಸ್ತರಣೆ ಮಾಡಿದ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿ ಜನ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಗೃಹ ಸಚಿವನಾಗಿ ಔಷಧಿ, ಆಹಾರ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳು ದೇಶದಲ್ಲಿ ಬೇಕಾದಷ್ಟಿದೆ ಎಂದು ದೇಶದ ಪ್ರಜೆಗಳಿಗೆ ಭರವಸೆ ನೀಡುತ್ತಿದ್ದೇನೆ. ಯಾರೂ ಈ ಬಗ್ಗೆ ಚಿಂತಿಸಬೇಕಿಲ್ಲ. ಶ್ರೀಮಂತರು ಬಡವರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತೇನೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರದ ಜೊತೆ ರಾಜ್ಯಗಳು ಕೈ ಜೋಡಿಸಿದ್ದು, ಸಹಕಾರ ನೀಡುತ್ತಿವೆ. ಘೋಷಣೆಯಾಗಿರುವ ಲಾಕ್‍ಡೌನ್ ಪಾಲಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

    ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸ್ಯಾನಿಟೈಸೇಷನ್ ಸಿಬ್ಬಂದಿ, ಪೊಲೀಸರು ಹಾಗೂ ಎಲ್ಲ ಭದ್ರತಾ ಸಿಬ್ಬಂದಿ ಕೊಡುಗೆ ಮಹತ್ತರವಾದದ್ದು. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಅವರ ಕೆಲಸ ನಮಗೆಲ್ಲ ಪ್ರೇರಣೆಯಾಗಬೇಕು. ಎಲ್ಲರೂ ನಿಯಮವನ್ನು ಪಾಲಿಸಿ ಇವರ ಕೆಲಸಕ್ಕೆ ಸಹಕರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.