Tag: ಟೆಕ್ನಾಲಜಿ ಸ್ಕೂಲ್

  • ಪ್ರೌಢ ಶಾಲೆ ಹಂತದಲ್ಲೇ ಟೆಕ್ನಾಲಜಿ ಸ್ಕೂಲ್: ಬೊಮ್ಮಾಯಿ

    ಪ್ರೌಢ ಶಾಲೆ ಹಂತದಲ್ಲೇ ಟೆಕ್ನಾಲಜಿ ಸ್ಕೂಲ್: ಬೊಮ್ಮಾಯಿ

    ಹುಬ್ಬಳ್ಳಿ: ಪ್ರೌಢ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣಕ್ಕೆ ಒತ್ತು ಕೊಡಬೇಕು. ಇದಕ್ಕಾಗಿ ತಾಂತ್ರಿಕ ಶಿಕ್ಷಣ ಆಧಾರಿತ ಶಾಲೆಗಳನ್ನು (ಟೆಕ್ನಾಲಜಿ ಸ್ಕೂಲ್ಸ್) ಆರಂಭಿಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಐಟಿ, ಬಿಟಿ ಇಲಾಖೆಯಿಂದ ನಗರದಲ್ಲಿ ನಡೆದ ಇನ್ನೊವೇಷನ್ ಆ್ಯಂಡ್ ಇಂಪ್ಯಾಕ್ಟ್(ನಾವೀನ್ಯತೆ ಮತ್ತು ಪರಿಣಾಮ) ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಹುಬ್ಬಳ್ಳಿ ವಲಯದಲ್ಲಿ ಹೊಸ ತಾಂತ್ರಿಕತೆಯ ಉದ್ಯಮದ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು ಎಂದರು.

    1960ರಷ್ಟು ಹಿಂದೆಯೇ ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಟೆಕ್ನಾಲಜಿ ಹೈ ಸ್ಕೂಲ್ ಇತ್ತು. ಆದರೆ ನಂತರ ಅದನ್ನು ಮುಚ್ಚಲಾಯಿತು. ಮಕ್ಕಳಲ್ಲಿ ಗ್ರಹಿಕೆ ಶಕ್ತಿ ಹೆಚ್ಚಾಗಿರುವುದರಿಂದ ಹೈ ಸ್ಕೂಲ್ ಮಟ್ಟದಲ್ಲೇ ತಾಂತ್ರಿಕ ಶಿಕ್ಷಣಕ್ಕೆ ಒತ್ತು ಕೊಡುವುದು ಮುಖ್ಯ. ಹೀಗಾಗಿ ಪ್ರೌಢ ಶಾಲಾ ಹಂತದಲ್ಲಿ ಪ್ರತ್ಯೇಕ ಕೆಲ ಟೆಕ್ನಾಲಜಿ ಸ್ಕೂಲ್ ಗಳನ್ನು ಆರಂಭಿಸುವುದು ಸೂಕ್ತ ಎಂದು ಹೇಳಿದರು. ಇದನ್ನೂ ಓದಿ: ರೈತರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ, ಬಿಜೆಪಿ ರೈತರ ಪರವಿದೆ: ಅಶ್ವತ್ಥ ನಾರಾಯಣ

    ಅಟಲ್ ಬಿಹಾರಿ ವಾಜಪೇಯಿ ಟಿಂಕರಿಂಗ್ ಲ್ಯಾಬ್ ಗಳನ್ನು ಮೇಲ್ದರ್ಜೆಗೇರಿಸಿ, ಈ ಹಂತದಲ್ಲಿ ಸ್ವಲ್ಪ ಮಟ್ಟಿಗಾದರೂ ಕೃತಕ ಬುದ್ಧಿಮತ್ತೆಯನ್ನು (ಎಐ) ಅಳವಡಿಸುವ ಅಗತ್ಯವಿದೆ. 150 ಐಟಿಐ ಕಾಲೇಜುಗಳನ್ನು ಉನ್ನತ ದರ್ಜೆಗೇರಿಸಿರುವಂತೆಯೇ ಪಾಲಿಟೆಕ್ನಿಕ್ ಕಾಲೇಜುಗಳನ್ನೂ ಉನ್ನತ ದರ್ಜೆಗೇರಿಸಬೇಕು ಎಂದು ಸಲಹೆ ನೀಡಿದರು.

    ಐಟಿ, ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಎಐ (ಕೃತಕ ಬುದ್ಧಿಮತ್ತೆ) ಮತ್ತು ಡಾಟಾ ಎಂಜಿನಿಯರಿಂಗ್ ಗೆ ಸಂಬಂಧಿಸಿದ ಉತ್ಕೃಷ್ಠತಾ ಕೇಂದ್ರವನ್ನು (ಸೆಂಟರ್ ಆಫ್ ಎಕ್ಸಲೆನ್ಸ್) ಹುಬ್ಬಳ್ಳಿಯಲ್ಲಿ ಶೀಘ್ರವೇ ಸ್ಥಾಪಿಸಲಾಗುವುದು ಎಂದರು. ಇದನ್ನೂ ಓದಿ:  ನಿರ್ಭೀತ, ನೈಜ ಕಾಂಗ್ರೆಸ್ಸಿಗಳು ಪ್ರಿಯಾಂಕಾ ಗಾಂಧಿ: ರಾಗಾ

    ಹೊಸ ತಾಂತ್ರಿಕ ಬೆಳವಣಿಗೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‍ಇಪಿ-2020) ಆಶಯವಾಗಿದೆ. ಮುಂದಿನ ವರ್ಷದಿಂದಲೇ ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಕೋಡಿಂಗ್ ಕಲಿಕೆಯನ್ನು ಪಠ್ಯಕ್ರಮದ ಭಾಗವನ್ನಾಗಿ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಇಂಟರ್ನ್‍ಶಿಪ್ ಅವಧಿ 3 ವಾರಗಳಷ್ಟು ಇದ್ದಿದ್ದನ್ನು 30 ವಾರಗಳಿಗೆ ಹೆಚ್ಚಿಸಲಾಗಿದೆ. ಇಂಟರ್ನ್‍ಶಿಪ್ ಗಾಗಿ ವಿದೇಶಗಳಿಗೆ ಹೋಗುವುದಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

    ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಹುಬ್ಬಳ್ಳಿ ವಲಯವನ್ನು ಹಾರ್ಡ್ ವೇರ್ ಉತ್ಪಾದನಾ ನೆಲೆಯನ್ನಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.

    ರಾಜ್ಯ ನವೋದ್ಯಮ ದೂರದರ್ಶಿತ್ವ ಮಂಡಳಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮಾತನಾಡಿ, ಎಐ (ಕೃತಕ ಬುದ್ಧಿಮತ್ತೆ) ಮತ್ತು ರೊಬೊಟಿಕ್ಸ್ ಗಳು ಈಗ ಪ್ರತಿಯೊಂದು ಕ್ಷೇತ್ರದ ಚಾಲಕ ಶಕ್ತಿಗಳಾಗಿವೆ. ಹೀಗಾಗಿ ಎಐ ಆಧಾರಿತ ಕೃಷಿ ತಾಂತ್ರಿಕತೆ, ಕ್ಲೈಮೆಟ್ ಟೆಕ್, ಸ್ಪೇಸ್ ಟೆಕ್ ಉದ್ದಿಮೆಗಳನ್ನು ಹುಬ್ಬಳ್ಳಿ ವಲಯದಲ್ಲಿ ಸ್ಥಾಪಿಸುವುದು ಸೂಕ್ತ ಎಂದರು.

    ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯಕ್ಷ ಬಿ.ವಿ.ನಾಯ್ಡ ಮಾತನಾಡಿ, ಆನ್ ಲೈನ್ ಶಿಕ್ಷಣವನ್ನು ಎಲ್ಲರಿಗೂ ಸಿಗುವಂತೆ ಮಾಡಲು ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುವ ಯೋಜನೆಯನ್ನು ಸರ್ಕಾರಗಳು ಹೊಂದಿವೆ. ಇದೇ ಸಂದರ್ಭದಲ್ಲಿ ಟ್ಯಾಬ್ ಗಳನ್ನು ಚೀನಾ ಸೇರಿದಂತೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಬದಲು ನಮ್ಮಲ್ಲೇ ಇವುಗಳನ್ನು ತಯಾರಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಆಲೋಚಿಸಬೇಕು. ಅಲ್ಲದೆ ಬೆಂಗಳೂರಿನಾಚೆ ಉದ್ದಿಮೆಗಳನ್ನು ಸ್ಥಾಪಿಸುವ ಕಂಪನಿಗಳಿಗೆ ತೆರಿಗೆ ವಿನಾಯಿತಿ ಕೊಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರು. ಇದನ್ನೂ ಓದಿ:  ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    ಐಟಿ, ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಕೆಎಲ್‍ಇ ತಾಂತ್ರಿಕ ವಿ.ವಿ. ಕುಲಪತಿ ಅಶೋಕ್ ಎಸ್.ಶೆಟ್ಟರ್, ಏಕಸ್ ಕಂಪನಿಯ ಸಿಇಒ ಅರವಿಂದ್ ಮಲ್ಲಿಗೇರಿ, ಡಾ.ಗುಡಸಿ, ಪ್ರೊ.ಮಹೇಶ್, ಸಂಜೀವ್ ಗುಪ್ತ, ವಿವೇಕ್ ಪವಾರ್, ಐಟಿ, ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಮತ್ತಿತರರು ಇದ್ದರು.