Tag: ಟೂರ್ ಆಫ್ ಡ್ಯೂಟಿ

  • ‘ಟೂರ್ ಆಫ್ ಡ್ಯೂಟಿ’ ಮಾಡಿದವರಿಗೆ ನಮ್ಮ ಸಂಸ್ಥೆಯಲ್ಲಿ ಉದ್ಯೋಗ – ಆನಂದ್ ಮಹೀಂದ್ರಾ

    ‘ಟೂರ್ ಆಫ್ ಡ್ಯೂಟಿ’ ಮಾಡಿದವರಿಗೆ ನಮ್ಮ ಸಂಸ್ಥೆಯಲ್ಲಿ ಉದ್ಯೋಗ – ಆನಂದ್ ಮಹೀಂದ್ರಾ

    ನವದೆಹಲಿ: ಭಾರತೀಯ ಸೇನೆಯ ‘ಟೂರ್ ಆಫ್ ಡ್ಯೂಟಿ’ ಅಡಿ ಕರ್ತವ್ಯ ನಿರ್ವಹಿಸಿದ ಯೋಧರಿಗೆ ನಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡುವುದಾಗಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.

    ಟೂರ್ ಆಫ್ ಡ್ಯೂಟಿ ಪ್ರಸ್ತಾಪವನ್ನು ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ. ಈ ಸಂಬಂಧ ಸೇನೆಗೆ ಇಮೇಲ್ ಮಾಡಿರುವ ಅವರು, “ಕೆಲ ದಿನಗಳ ಹಿಂದೆ ಟೂರ್ ಆಫ್ ಡ್ಯೂಟಿ ಬಗ್ಗೆ ತಿಲಿಯಿತು. ಮಿಲಿಟರಿ ತರಬೇತಿ ಯುವಕರಿಗೆ ನೀಡುವುದು ಬಹಳ ಸಹಕಾರಿ. ಮಿಲಿಟರಿ ಮಾನದಂಡದ ಪ್ರಕಾರ ಅವರು ಆಯ್ಕೆ ಆಗುವ ಕಾರಣ ಆ ವ್ಯಕ್ತಿಗಳನ್ನು ನಮ್ಮ ಕಂಪನಿಯಲ್ಲಿ ಸಂತೋಷದಿಂದ ಸ್ವೀಕರಿಸುತ್ತೇವೆ” ಬರೆದಿದ್ದಾರೆ.

    ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಯುವ ಜನತೆಯಲ್ಲಿರುತ್ತದೆ. ಆದರೆ ಯಾವುದೋ ಕಾರಣದಿಂದಾಗಿ ಈ ಆಸೆ ಈಡೇರುವುದಿಲ್ಲ. ಆದರೆ ಈಗ 3 ವರ್ಷಗಳ ಕಾಲ ತಾತ್ಕಾಲಿಕ ಉದ್ಯೋಗ ನೀಡುವ ಬಗ್ಗೆ ಭಾರತೀಯ ಸೇನೆ ಗಂಭೀರ ಚಿಂತನೆ ನಡೆಸಿದೆ.

    ಮಿಲಿಟರಿ ಸೇರಿದರೆ ನಿವೃತ್ತಿಯಾಗುವರೆಗೆ ಕರ್ತವ್ಯ ಮಾಡಬೇಕಾಗುತ್ತದೆ. ಆದರೆ ಈಗ ಮೂರು ವರ್ಷಗಳ ಕಾಲ `ಟೂರ್ ಆಫ್ ಡ್ಯೂಟಿ’ ಹೆಸರಿನಲ್ಲಿ ಯುವಜನತೆಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅನುಮತಿ ನೀಡಲು ಮುಂದಾಗಿದೆ. ಸೇನೆಗೆ ಸೇರುವವರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಅವರನ್ನು ಉತ್ತೇಜಿಸಲು ಈ ಯೋಜನೆಗೆ ಕೈ ಹಾಕಿದೆ.

    ಒಂದು ವೇಳೆ ಈ ಪ್ರಸ್ತಾಪಕ್ಕೆ ಅನುಮತಿ ಸಿಕ್ಕರೆ ಆರಂಭದಲ್ಲಿ 100 ಅಧಿಕಾರಿಗಳು ಮತ್ತು 1 ಸಾವಿರ ಸೈನಿಕರ ನೇಮಕವಾಗಲಿದೆ. ಈ ಸಂಬಂಧ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಪ್ರತಿಕ್ರಿಯಿಸಿ, ವಿವಿಧ ಸೇನಾ ಕಮಾಂಡ್ ಗಳ ಪ್ರತಿಕ್ರಿಯೆ ಪಡೆಯಲಾಗಿದೆ. ಟೂರ್ ಆಫ್ ಡ್ಯೂಟಿಯನ್ನು ಪ್ರಯೋಗಿಕವಾಗಿ ಆರಂಭಿಸಲಾಗುತ್ತಿದ್ದು, ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನೇಮಕವಾಗಲಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

    26/ 27 ವಯಸ್ಸಿನ ಯುವಜನತೆಗೆ ತರಬೇತಿ ನೀಡಿ ಉದ್ಯೋಗ ನೀಡಿದಾಗ ತಾತ್ಕಲಿಕವಾಗಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ. ಇಲ್ಲಿ ಸೇವೆ ಸಲ್ಲಿಸಿದ ಬಳಿಕ ಪ್ರಮಾಣಪತ್ರ ನೀಡಲಾಗುತ್ತದೆ. ಒಂದು ವೇಳೆ ಸೇನೆಯಲ್ಲಿ ಮುಂದುವರಿಯಲು ಆಸಕ್ತಿ ತೋರಿಸಿದರೆ ಅವರನ್ನು ಮುಂದುವರಿಸಲಾಗುತ್ತದೆ. ಟೂರ್ ಆಫ್ ಡ್ಯೂಟಿಯನ್ನು ಪೂರ್ಣಗೊಂಡ ಬಳಿಕ ಆ ಸೈನಿಕರು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದಲ್ಲಿ ಅವರ ಇಷ್ಟದ ಉದ್ಯೋಗಕ್ಕೆ ಸೇರಬಹುದು ಎಂಬ ನಂಬಿಕೆಯನ್ನು ಸೇನೆ ಇಟ್ಟುಕೊಂಡಿದೆ.

    ಯುವಜನತೆಗೆ ಸೇನೆ ಸೇರಬೇಕೆಂಬ ಆಸೆ ಇರುತ್ತದೆ. ಆದರೆ ಪೂರ್ಣಾವಧಿಗೆ ಸೇರಬೇಕೆಂಬ ಆಸೆ ಇರುವುದಿಲ್ಲ. ಸೇನೆಯ ಬಗ್ಗೆ ತಿಳಿದುಕೊಳ್ಳಲು, ರಾಷ್ಟ್ರ ಭಕ್ತಿ ತೋರಿಸಲು, ಸಾಹಸ, ಅನುಭವ ಪಡೆದುಕೊಳ್ಳಲು ಇದು ಸಹಕಾರಿಯಾಗಲಿದೆ.

    ನಾಗರಿಕರಿಗೆ ಮೂರು ವರ್ಷಗಳ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಈಗಾಗಲೇ ಇಸ್ರೇಲಿನಲ್ಲಿದೆ. ಭಾರತದಲ್ಲಿ ಆಸಕ್ತರಿಗೆ ಮಾತ್ರ ಅವಕಾಶ ನೀಡುತ್ತಿದ್ದು ಇಸ್ರೇಲಿನಲ್ಲಿ ಇದು ಕಡ್ಡಾಯ. ಇಸ್ರೇಲ್ ಸುತ್ತ 7 ರಾಷ್ಟ್ರಗಳು ಇರುವ ಅಗತ್ಯಬಿದ್ದಾಗ ಜನರ ನೆರವನ್ನು ಪಡೆಯಲು ಸೇನಾ ತರಬೇತಿಯನ್ನು ನೀಡುತ್ತದೆ. 18 ವರ್ಷ ಮೇಲ್ಪಟ್ಟ ಯುವಕರು 36 ತಿಂಗಳ ಕಾಲ, ಯುವತಿಯರು 24 ತಿಂಗಳ ಕಾಲ ಸೇನಾ ತರಬೇತಿ ಪಡೆಯುವುದನ್ನು ಇಸ್ರೇಲ್ ಕಡ್ಡಾಯಗೊಳಿಸಿದೆ.