Tag: ಟೀ ಮಾರಾಟ

  • ತಂದೆ ಇಲ್ಲ, ಕೊರೊನಾದಿಂದಾಗಿ ತಾಯಿಗೂ ಕೆಲಸವಿಲ್ಲ- ಟೀ ಮಾರಾಟಕ್ಕಿಳಿದ ಬಾಲಕ

    ತಂದೆ ಇಲ್ಲ, ಕೊರೊನಾದಿಂದಾಗಿ ತಾಯಿಗೂ ಕೆಲಸವಿಲ್ಲ- ಟೀ ಮಾರಾಟಕ್ಕಿಳಿದ ಬಾಲಕ

    – ಸಹೋದರಿಯರ ಶಿಕ್ಷಣಕ್ಕೆ ನೆರವು

    ಮುಂಬೈ: ಕೊರೊನಾ ಲಾಕ್‍ಡೌನ್ ಕಾರಣದಿಂದ ಕೆಲಸ ಕಳೆದುಕೊಂಡ ತಾಯಿಯ ನೆರವಿಗೆ ಬಂದ 14 ಬಾಲಕ ಟೀ ಮಾರಾಟ ಮಾಡಲು ಆರಂಭಿಸಿದ್ದಾನೆ. ಆ ಮೂಲಕ ತನ್ನ ಇಬ್ಬರೂ ಸಹೋದರಿಯರ ಶಿಕ್ಷಣಕ್ಕೆ ನೆರವಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಮುಂಬೈನ ಭೆಂಡಿ ಬಜಾರ್ ಪ್ರದೇಶದ ಅಂಗಡಿಯಲ್ಲಿ ಚಹಾ ತಯಾರಿಸುವ ಬಾಲಕ ಸುಭಾನ್, ಹತ್ತಿರದ ಪ್ರದೇಶಗಳಲ್ಲಿ ಟೀ ಮಾರಾಟ ಮಾಡುತ್ತಾನೆ. ಬಾಲಕನಿಗೆ ಯಾವುದೇ ಟೀ ಅಂಗಡಿ ಇಲ್ಲದ ಕಾರಣ ಆತ ಜನರ ಬಳಿಯೇ ತೆರಳಿ ಟೀ ಮಾರಾಟ ಮಾಡುತ್ತಿದ್ದಾನೆ.

    ತನ್ನ ಕುಟುಂಬದ ಕುರಿತು ಮಾತನಾಡಿರುವ ಬಾಲಕ, ನನ್ನ ತಾಯಿ ಶಾಲಾ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಶಾಲೆಗಳು ಮುಚ್ಚಿರುವುದರಿಂದ ಕೆಲಸವಿಲ್ಲ. ಇದರಿಂದ ನಾವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಭೆಂಡಿ ಬಜಾರ್ ಅಂಗಡಿಯಲ್ಲಿ ಚಹಾ ಮಾಡಿ, ನಾಗಪಾಡ, ಭೆಂಡಿ ಬಜಾರ್ ಪ್ರದೇಶಗಳಲ್ಲಿ ಮಾರಾಟ ಮಾಡುತ್ತೇನೆ. ದಿನಕ್ಕೆ 300-400 ರೂ. ಗಳಿಸುತ್ತೇನೆ. ಇದು ನನ್ನ ತಾಯಿಗೆ ಕೊಡುತ್ತೇನೆ ಎಂದು ತಿಳಿಸಿದ್ದಾನೆ.

    ನನ್ನ ಸಹೋದರಿಯರು ಆನ್‍ಲೈನ್ ಮೂಲಕ ಶಿಕ್ಷಣ ಮುಂದುವರಿಸಿದ್ದಾರೆ. ನಾನು ಶಾಲೆಗಳು ಪುನರ್ ಆರಂಭವಾದ ಬಳಿಕ ಶಿಕ್ಷಣವನ್ನು ಮುಂದುವರಿಸುತ್ತೇನೆ ಎಂದು ಸುಭಾನ್ ಹೇಳಿದ್ದಾನೆ. ಸುಭಾನ್ ತಂದೆ 12 ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಅಂದಿನಿಂದಲೇ ತಾಯಿಯವರು ಕುಟುಂಬವನ್ನು ನಡೆಸಿಕೊಂಡು ಬರುತ್ತಿದ್ದರು. ಸದ್ಯ ಶಾಲೆಗಳು ಮುಚ್ಚಿರುವ ಕಾರಣ ಕೆಲಸವನ್ನು ಕಳೆದುಕೊಂಡಿದ್ದಾರೆ.

  • ಮತದಾರರನ್ನು ಸೆಳೆಯಲು ಮತ್ತೆ ಟೀ ಮಾರಾಟ- 339 ಕೋಟಿ ರೂ. ಆಸ್ತಿ ಘೋಷಿಸಿದ ಅಭ್ಯರ್ಥಿಯಿಂದ ಪ್ರಚಾರ

    ಮತದಾರರನ್ನು ಸೆಳೆಯಲು ಮತ್ತೆ ಟೀ ಮಾರಾಟ- 339 ಕೋಟಿ ರೂ. ಆಸ್ತಿ ಘೋಷಿಸಿದ ಅಭ್ಯರ್ಥಿಯಿಂದ ಪ್ರಚಾರ

    ಬೆಂಗಳೂರು: ಆರಂಭದಲ್ಲಿ ಟೀ ಮಾರಾಟ ಮಾಡಿ ನಂತರ ವಿವಿಧ ಉದ್ಯಮಗಳನ್ನು ನಡೆಸಿ ಈಗ ಕೋಟಿ ರೂ. ಒಡೆಯನಾಗಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ತಮ್ಮ ಹಳೆ ಕಸುಬಿನ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.

    ಹೌದು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗಳಲ್ಲೇ ಅತಿ ಹೆಚ್ಚು ಶ್ರೀಮಂತನಾಗಿರುವ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಪಿ.ಅನಿಲ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿದ್ದರು. ಆದರೆ ಕೈ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ನಿಂತಿದ್ದಾರೆ. ಇದನ್ನೂ ಓದಿ: 3ನೇ ಕ್ಲಾಸ್ ಓದಿ ಟೀ ಮಾರಾಟ ಮಾಡುತ್ತಿದ್ದವನ ಆಸ್ತಿ 339 ಕೋಟಿ ರೂ- ಪಕ್ಷೇತರ ಅಭ್ಯರ್ಥಿಯಿಂದ ಆಸ್ತಿ ಘೋಷಣೆ

    ಚುನಾವಣಾ ಆಯೋಗಕ್ಕೆ 339 ಕೋಟಿ ರೂ. ಆಸ್ತಿ ಘೋಷಣೆ ಮಾಡಿರುವ ಅನಿಲ್ ಕುಮಾರ್, ವಿಭಿನ್ನವಾಗಿ ಮತದಾರರ ಮತಗೆಲ್ಲಲು ತಮ್ಮ ಹಳೆಯ ವೃತ್ತಿಯಾದ ಟೀ ವ್ಯಾಪಾರ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

    ಬೊಮ್ಮನಹಳ್ಳಿಯ ಪ್ರಮುಖ ಪ್ರದೇಶಗಳಲ್ಲಿ ಸೈಕಲ್ ನಲ್ಲಿ ಟೀ ಪಾತ್ರೆ ಇಟ್ಟುಕೊಂಡು ಮತದಾರರಿಗೆ ಟೀ ನೀಡಿ ತನಗೆ ಮತವನ್ನು ಹಾಕುವಂತೆ ವಿನಂತಿಸಿಕೊಳ್ಳುತ್ತಿದ್ದು, ಈ ಮೂಲಕ ಬೊಮ್ಮನಹಳ್ಳಿಯ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದಾರೆ.

  • ತಿಂಗಳಿಗೆ 12 ಲಕ್ಷ ರೂ. ಸಂಪಾದಿಸುತ್ತಾರೆ ಟೀ ವ್ಯಾಪಾರಿ!

    ತಿಂಗಳಿಗೆ 12 ಲಕ್ಷ ರೂ. ಸಂಪಾದಿಸುತ್ತಾರೆ ಟೀ ವ್ಯಾಪಾರಿ!

    ಪುಣೆ: ದುಡಿಯುವ ಮನಸ್ಸಿದ್ದರೆ ಯಾವುದೇ ಕೆಲಸವಾದ್ರೂ ಕೀಳಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು ನಗರದ ಟೀ ವ್ಯಾಪಾರಿಯೊಬ್ಬರು ತಿಂಗಳಿಗೆ ಬರೋಬ್ಬರಿ 10-12 ಲಕ್ಷ ರೂ. ವರೆಗೆ ಸಂಪಾದನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಪುಣೆ ಮೂಲದ ಯೆವ್ಲೆ ಟೀ ಹೌಸ್ ಈಗ ನಗರದಲ್ಲಿ ಪ್ರತಿಷ್ಠಿತ ಅಂಗಡಿಯಾಗಿ ಹೊರಹೊಮ್ಮಿದೆ. ಯೆವ್ಲೆ ಟೀ ಕಂಪನಿಯ ಸಹ ಸಂಸ್ಥಾಪಕ ನವನಾಥ್ ಯೆವ್ಲೆ ತಮ್ಮ ಈ ಉದ್ಯಮ ಹೇಗೆ ಬೆಳೆಯಿತೆಂಬ ಬಗ್ಗೆ ಮಾತನಾಡಿ, ಭಾರತೀಯರಿಗೆ ಟೀ ಮಾರಾಟ ಉದ್ಯೋಗಾವಕಾಶವನ್ನೂ ಸೃಷ್ಟಿಸುತ್ತಿದೆ. ಈ ಟೀ ವ್ಯಾಪಾರವೂ ಅತೀ ವೇಗವಾಗಿ ಬೆಳೆಯುತ್ತಿರುವುದು ಇನ್ನಷ್ಟು ಖುಷಿ ತಂದಿದೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

    ನಮ್ಮ ಈ ಟೀ ಬ್ರಾಂಡ್ ಅತೀ ವೇಗವಾಗಿ ಬೆಳೆಯುತ್ತಿರುವುದನ್ನ ನೋಡಿ ನನಗೆ ತುಂಬಾ ಖುಷಿಯಾಗಿದೆ. ಈ ಟೀ ಮಾರಾಟವನ್ನ ಅಂತಾರಾಷ್ಟೀಯ ಮಟ್ಟದ ಬ್ರಾಂಡ್ ಆಗಿ ಪರಿವರ್ತಿಸಬೇಕೆಂಬುದು ನನ್ನ ಕನಸಾಗಿದೆ ಎಂದು ಹೇಳಿದರು.

    2011 ರಲ್ಲಿ ನವನಾಥ್ ಮತ್ತು ಅವರ ಪಾಲುದಾರರು ಈ ಟೀ ಅಂಗಡಿ ಪ್ರಾರಂಭ ಮಾಡಲು ಯೋಚಿಸಿದರು. ನಾಲ್ಕು ವರ್ಷಗಳ ಸತತ ಅಧ್ಯಯನದ ನಂತರ ಉತ್ಪನ್ನದ ಗುಣಮಟ್ಟವನ್ನ ಅಂತಿಮಗೊಳಿಸಲಾಯ್ತು.

    ನಗರದಲ್ಲಿ ಈಗ 2 ಅಂಗಡಿಗಳಿದ್ದು ಪ್ರತಿ ಅಂಗಡಿಯಲ್ಲಿ ಸುಮಾರು 12 ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನಕ್ಕೆ ಸುಮಾರು ಮೂರು ಸಾವಿರದಿಂದ ನಾಲ್ಕು ಸಾವಿರದ ವರೆಗೂ ಟೀ ಮಾರಾಟವಾಗುತ್ತಿದೆ. ಪ್ರತಿ ತಿಂಗಳಿಗೆ 10-12 ಲಕ್ಷದ ವರೆಗೂ ಸಂಪಾದನೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ 100 ಅಂಗಡಿಗಳನ್ನು ತೆರೆಯಲು ಯೋಚಿಸಲಾಗಿದೆ ಎಂದು ನವನಾಥ್ ತಿಳಿಸಿದ್ದಾರೆ.