Tag: ಟೀ ಇಂಡಿಯಾ ಆಟಗಾರರು

  • ಜನನಾಯಕಿ ಅಗಲಿಕೆಯಿಂದ ದೇಶಕ್ಕೆ ನಷ್ಟವಾಗಿದೆ: ಕ್ರೀಡಾ ತಾರೆಯರ ಕಂಬನಿ

    ಜನನಾಯಕಿ ಅಗಲಿಕೆಯಿಂದ ದೇಶಕ್ಕೆ ನಷ್ಟವಾಗಿದೆ: ಕ್ರೀಡಾ ತಾರೆಯರ ಕಂಬನಿ

    ನವದೆಹಲಿ: ಮಂಗಳವಾರ ಹೃದಯಾಘಾತದಿಂದ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ನೆನೆದು ಟೀಂ ಇಂಡಿಯಾ ಆಟಗಾರರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಅವರ ಅಗಲಿಕೆ ದೇಶಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ದುಃಖಿಸಿದ್ದಾರೆ.

    ಮಾಜಿ ಸಚಿವೆ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಭಾರತದ ಹಿರಿಯ, ಅನುಭವಿ ರಾಜಕಾರಣಿ ಕಳೆದುಕೊಂಡಿರುವ ದುಃಖದಲ್ಲಿ ಇಡೀ ದೇಶವಿದೆ. ಗಣ್ಯರಿಂದ ಹಿಡಿದು ಜನಸಾಮಾನ್ಯರವರೆಗೂ ಸುಷ್ಮಾ ಸ್ವರಾಜ್ ನಿಧನಕ್ಕೆ ದುಃಖ ವ್ಯಕ್ತಪಡಿಸುತ್ತಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಮೊಹಮ್ಮದ್ ಕೈಫ್, ಗೌತಮ್ ಗಂಭೀರ್ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ಟ್ವಿಟ್ ಮಾಡಿ ಕಂಬನಿ ಮಿಡಿದಿದ್ದಾರೆ.

    ಸುಷ್ಮಾ ಸ್ವರಾಜ್ ನಿಧನದಿಂದ ನಾನು ದುಃಖಿತನಾಗಿದ್ದೇನೆ. ಅವರು ಒಬ್ಬ ಹಿರಿಯ ರಾಜಕಾರಣಿ ಮತ್ತು ಬಿಜೆಪಿಯ ಆಧಾರಸ್ತಂಭ, ಅವರನ್ನು ಎಲ್ಲರೂ ಪ್ರೀತಿಸುತ್ತಿದ್ದರು. ಈಗಿನ ಕಾಲಘಟ್ಟದಲ್ಲಿ ಅತ್ಯಂತ ಸಹಾಯಕ ಮನೋಭಾವವುಳ್ಳ, ಪ್ರೀತಿಯ ರಾಜಕಾರಣಿಗಳೆಂದು ಅವರನ್ನು ಜನ ನೆನಪಿಸಿಕೊಳ್ಳುತ್ತಾರೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ. ಭಾರತಕ್ಕೆ ಇದು ದೊಡ್ಡ ನಷ್ಟ ಎಂದು ಗೌತಮ್ ಗಂಭೀರ್ ಪಕ್ಷದ ನಾಯಕಿಯ ಅಗಲಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಸುಷ್ಮಾಜೀ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಸುಷ್ಮಾಜೀ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಹೃದಯಪೂರ್ವಕ ಸಂತಾಪ, ಓಂ ಶಾಂತಿ ಎಂದು ಬರೆದು ಸುಷ್ಮಾ ಸ್ವರಾಜ್ ಅವರ ಫೋಟೋ ಹಾಕಿ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ನಮಿಸಿದ್ದಾರೆ.

    ಸುಷ್ಮಾ ಸ್ವರಾಜ್‍ಜೀ ಅವರ ಹಠಾತ್ ನಿಧನದ ಬಗ್ಗೆ ಕೇಳಿ ತುಂಬಾ ದುಃಖವಾಯಿತು. ಸುಷ್ಮಾ ಸ್ವರಾಜ್ ಅವರಿಗೆ ಎಲ್ಲರಿಂದಲೂ ಗೌರವ ಎಂದು ನಮಸ್ಕರಿಸಿ ಬಾಕ್ಸರ್ ವಿಜೇಂದರ್ ಸಿಂಗ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

    ದಿಟ್ಟ ನಡೆ, ಜನರ ವ್ಯಕ್ತಿ ಹಾಗೂ ನಿಜವಾದ ನಾಯಕಿ ಸುಷ್ಮಾ ಸ್ವರಾಜ್ ನಿಧನರಾದ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಮ್ಮ ರಾಷ್ಟ್ರಕ್ಕೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಸೇರಿದಂತೆ ಹಿರಿಯ ಗಣ್ಯರು ಸುಷ್ಮಾ ಸ್ವರಾಜ್ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಧ್ಯಾಹ್ನ 3 ಗಂಟೆ ನಂತರ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.