Tag: ಟಿ20

  • ಶ್ರೀಲಂಕಾ ವಿರುದ್ಧದ ಟಿ20ಯಲ್ಲೂ ಟೀಂ ಇಂಡಿಯಾಗೆ ಗೆಲುವು

    ಶ್ರೀಲಂಕಾ ವಿರುದ್ಧದ ಟಿ20ಯಲ್ಲೂ ಟೀಂ ಇಂಡಿಯಾಗೆ ಗೆಲುವು

    ಕೊಲಂಬೋ: ಶ್ರೀಲಂಕಾ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಜಯಗಳಿಸಿದೆ. ಈ ಮೂಲಕ ಟೆಸ್ಟ್, ಏಕದಿನ, ಟಿ20 ಪಂದ್ಯವನ್ನೂ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.

    171 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಭಾರತ 19.2 ಓವರ್ ಗಳಲ್ಲಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ಪರವಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಷ್ ಪಾಂಡೆ ಆಕ್ರಮಣಕಾರಿಯಾಗಿ ಆಡಿದರು. ಕೇವಲ 30 ಎಸೆತಗಳಲ್ಲಿ ಕೊಹ್ಲಿ ಅರ್ಧ ಶತಕ ದಾಖಲಿಸಿದರು. 19ನೇ ಓವರ್‍ನಲ್ಲಿ 54 ಎಸೆತಗಳಲ್ಲಿ 82 ರನ್ ಗಳಿಸಿದ್ದ ಕೊಹ್ಲಿ ಔಟಾದರು. ರೋಹಿತ್ ಶರ್ಮಾ 9 (8 ಬಾಲ್), ಕೆ.ಎಲ್.ರಾಹುಲ್ 24 (18) ರನ್ ಗಳಿಸಿ ಔಟಾದರು. ಬೌಂಡರಿ ಮೂಲಕ ಗೆಲುವಿನ ರನ್ ಬಾರಿಸಿ ಮನೀಷ್ ಪಾಂಡೆ ಅರ್ಧ ಶತಕ ದಾಖಲಿಸಿದರು. ಶ್ರೀಲಂಕಾ ಪರವಾಗಿ ಉದನ, ಲಸಿತ್ ಮಾಲಿಂಗ, ಪ್ರಸನ್ನ ತಲಾ 1 ವಿಕೆಟ್ ಗಳಿಸಿದರು.

    ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲೇ ಶ್ರೀಲಂಕಾ ತಂಡ ಆಕ್ರಮಣಕಾರಿ ಆಟಕ್ಕಿಳಿದಿತ್ತು. ಆದರೆ 3ನೇ ಓವರ್ ನಲ್ಲೇ ಭುವನೇಶ್ವರ್ ಕುಮಾರ್ ಮೊದಲ ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ಗೆ ಆಗಮಿಸಿದ ಮುನವೀರ ಆಕ್ರಮಣಕಾರಿ ಆಟಕ್ಕಿಳಿದರು. ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಸ್ಪಿನ್ನರ್ ಕುಲದೀಪ್ ಯಾದವ್ ಎಸೆತದಲ್ಲಿ ಬೌಲ್ಡ್ ಆದ್ರು. ಶ್ರೀಲಂಕಾ ಪರವಾಗಿ ಡಿಕ್ವೆಲ್ಲಾ 17 (14 ಬಾಲ್), ಪ್ರಿಯಾಂಜನ್ 40 (40 ಬಾಲ್), ಪಿರೇರಾ 11 (7 ಬಾಲ್), ಪ್ರಸನ್ನ 11 (8 ಬಾಲ್), ಉದನ 19 (10), ಮ್ಯಾಥ್ಯೂಸ್ 7 (5) ರನ್ ಗಳಿಸಿದರು. ನಿಗದಿತ 20 ಓವರ್ ಗಳು ಮುಗಿದಾಗ ಶ್ರೀಲಂಕಾ 7 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತ್ತು.

    ಟೀಂ ಇಂಡಿಯಾ ಪರವಾಗಿ ಚಹಲ್ 3, ಕುಲದೀಪ್ ಯಾದವ್ 2, ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ 1 ವಿಕೆಟ್ ಗಳಿಸಿದರು.

  • ಸ್ಟ್ರೇಟ್ ಹಿಟ್ ಬಾಲ್ ತಲೆಗೆ ಬಡಿಯಿತು: ಗಂಭೀರ ಗಾಯಗೊಂಡು ಪಿಚ್ ಮೇಲೆ ಬಿದ್ದ ಬೌಲರ್

    ಸ್ಟ್ರೇಟ್ ಹಿಟ್ ಬಾಲ್ ತಲೆಗೆ ಬಡಿಯಿತು: ಗಂಭೀರ ಗಾಯಗೊಂಡು ಪಿಚ್ ಮೇಲೆ ಬಿದ್ದ ಬೌಲರ್

    ಎಜ್‍ಬಾಸ್ಟನ್: ಕ್ರಿಕೆಟ್ ಆಡುವ ವೇಳೆ ತಲೆಗೆ ಬಾಲ್ ಬಡಿದು ಗಂಭೀರವಾಗಿ ಬೌಲರ್ ಗಾಯಗೊಂಡಿರುವ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ.

    ಶನಿವಾರ ನಡೆದ ಟಿಂ 20 ಕ್ರಿಕೆಟ್ ವೇಳೆ ನಾಟಿಂಗ್‍ಹ್ಯಾಮ್‍ಶೈರ್ ಬೌಲರ್ ಲ್ಯೂಕ್ ಫ್ಲೆಚರ್ ಗಂಭೀರವಾಗಿ ಗಾಯಗೊಂಡಿದ್ದು, ಈಗ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.

    ಟಿ20 ಬ್ಲಾಸ್ಟ್ ಕ್ರಿಕೆಟ್ ವೇಳೆ ಲ್ಯೂಕ್ ಫ್ಲೆಚರ್ ಬೌಲ್ ಮಾಡುತ್ತಿದ್ದರು. ಸ್ಟ್ರೈಕ್‍ನಲ್ಲಿ ಬರ್ಮಿಂಗ್‍ಹ್ಯಾಮ್ ತಂಡದ ಬ್ಯಾಟ್ಸ್ ಮನ್ ಸಾಮ್ ಹೈನ್ ಇದ್ದರು. ಲ್ಯೂಕ್ ಫ್ಲೆಚರ್ ಅವರ ಎಸೆತವನ್ನು ಬಲವಾಗಿ ಸಾಮ್ ಹೈನ್ ಬಲವಾಗಿ ಹೊಡೆದಿದ್ದರು. ಬಿರುಸಿನ ಹೊಡೆತದಿಂದಾಗಿ ಬಾಲ್ ನೇರವಾಗಿ ಫ್ಲೆಚರ್ ತಲೆಗೆ ಬಡಿದಿದೆ.

    ತಲೆಗೆ ಬಾಲ್ ಬಿದ್ದ ಕೂಡಲೇ ಫ್ಲೆಚರ್ ಪಿಚ್ ಮೇಲೆ ಬಿದ್ದಿದ್ದಾರೆ. ಕೂಡಲೇ ಏನಾಯ್ತು ಎಂದು ಉಳಿದ ಆಟಗಾರರು ಸಹಾಯಕ್ಕೆ ಧಾವಿಸಿದ್ದಾರೆ. ಮುಂದೆ ಬಂದು ಫ್ಲೆಚರ್ ಅವರನ್ನು ನೋಡಿ ಶಾಕ್ ಆಗಿ ಆಟಗಾರರು ಹಿಂದಕ್ಕೆ ಸರಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    28 ವರ್ಷದ ಲ್ಯೂಕ್ ಫ್ಲೆಚರ್ ಅವರನ್ನು ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 30 ನಿಮಿಷದ ಬಳಿಕ ಪಂದ್ಯ ಮತ್ತೆ ಆರಂಭವಾಯಿತು.

     

    https://twitter.com/ThomasWalsh1/status/883776741872893952

  • 2018ರಲ್ಲಿ ಟಿ20 ವಿಶ್ವಕಪ್ ಇಲ್ಲ, 2020ಕ್ಕೆ ಮುಂದಿನ ಟೂರ್ನಿ

    2018ರಲ್ಲಿ ಟಿ20 ವಿಶ್ವಕಪ್ ಇಲ್ಲ, 2020ಕ್ಕೆ ಮುಂದಿನ ಟೂರ್ನಿ

    ಲಂಡನ್: ಐಸಿಸಿ ಸದಸ್ಯ ರಾಷ್ಟ್ರಗಳ ನಡುವೆ ಟೂರ್ನಿಗಳಿಗೆ ದಿನಾಂಕ ನಿಗದಿಯಾಗಿರುವುದರಿಂದ 2018ರಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ರದ್ದಾಗಿದೆ.

    ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜನೆ ಆಗುತ್ತಿದ್ದ ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿ 2018ರಲ್ಲಿ ಆಯೋಜನೆ ಆಗುವುದಿಲ್ಲ. 2020ರಲ್ಲಿ ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್ ನಡೆಯಲಿದೆ ಎಂದು ಐಸಿಸಿಯ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿದೆ.

    ಸದಸ್ಯ ರಾಷ್ಟ್ರಗಳ ಮಧ್ಯೆ ಹಲವು ದ್ವಿಪಕ್ಷೀಯ ಸರಣಿಗಳು ನಡೆಯಲು ಈಗಾಗಲೇ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ರದ್ದಾಗಿದೆ ಎಂದು ಐಸಿಸಿಯ ಉನ್ನತ ಮೂಲಗಳು ತಿಳಿಸಿವೆ.

    ಅಷ್ಟೇ ಅಲ್ಲದೇ ವಿವಿಧ ದೇಶಗಳು ತನ್ನದೇ ಆದ ಟಿ20 ಟೂರ್ನಿಗಳನ್ನು ಆಯೋಜಿಸುತ್ತಿರುವುದಿಂದ ಐಸಿಸಿ ವಿಶ್ವಕಪ್ ಟೂರ್ನಿ ನಡೆಸದೇ ಇರಲು ನಿರ್ಧರಿಸಿದೆ.

    ದ್ವಿಪಕ್ಷೀಯ ಸರಣಿ ನಡೆದರೆ ಕ್ರಿಕೆಟ್ ಬೋರ್ಡ್ ಗಳಿಗೆ ಟಿವಿ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಸಿಗುತ್ತದೆ. ಅದರಲ್ಲೂ ಭಾರತ ಯಾವುದಾದರೂ ದೇಶದ ಪ್ರವಾಸ ಕೈಗೊಂಡರೆ ಕ್ರಿಕೆಟ್ ಆಯೋಜನೆ ಮಾಡುವ ಬೋರ್ಡ್ ಗೆ ಟಿವಿ ಹಕ್ಕು ರೂಪದಲ್ಲಿ ಕೋಟಿಗಟ್ಟಲೇ ಹಣ ಸಿಗುತ್ತದೆ.

    ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಬಳಿಕ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ಪ್ರವಾಸವನ್ನು ಕೈಗೊಳ್ಳಲಿದೆ. 2021ರ ಚಾಂಪಿಯನ್ಸ್ ಕ್ರಿಕೆಟ್ ಟೂರ್ನಿ ಭಾರತದಲ್ಲಿ ನಡೆಯಲಿದೆ.

    ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ನಡೆಸಲು ಐಸಿಸಿ ಮುಂದಾಗುತ್ತಿದ್ದು, ಸೋಮವಾರದಿಂದ ಆರಂಭವಾಗಲಿರುವ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ.

    ಈ ಹಿಂದೆ ಟಿ20 ವಿಶ್ವಕಪ್ ಕ್ರಿಕೆಟ್ ದಕ್ಷಿಣ ಆಫ್ರಿಕಾ(2007), ಇಂಗ್ಲೆಂಡ್(2009), ವೆಸ್ಟ್ ಇಂಡೀಸ್(2010), ಶ್ರೀಲಂಕಾ(2012), ಬಾಂಗ್ಲಾದೇಶ(2014), ಭಾರತ(2016)ದಲ್ಲಿ ನಡೆದಿತ್ತು.

  • ಟೀಂ ಇಂಡಿಯಾದ ಬ್ಯಾಟಿಂಗ್, ಫೀಲ್ಡಿಂಗ್ ಕೋಚ್‍ಗೆ 15 ಲಕ್ಷ ರೂ. ಸಂಬಳ!

    ಟೀಂ ಇಂಡಿಯಾದ ಬ್ಯಾಟಿಂಗ್, ಫೀಲ್ಡಿಂಗ್ ಕೋಚ್‍ಗೆ 15 ಲಕ್ಷ ರೂ. ಸಂಬಳ!

    ಮುಂಬೈ: ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರು ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರಿಗೆ ಪ್ರತಿ ತಿಂಗಳು 15 ಲಕ್ಷ ರೂ. ಸಂಬಳವನ್ನು ಬಿಸಿಸಿಐ ನಿಗದಿ ಮಾಡಿದೆ.

    ಇಲ್ಲಿಯವರೆಗೆ ಬಂಗಾರು ಮತ್ತು ಶ್ರೀಧರ್ ಅವರಿಗೆ ಪ್ರತಿ ತಿಂಗಳು 10 ಲಕ್ಷ(ಇಂಡಿಯನ್ ಪ್ರೀಮಿಯರ್ ಲೀಗ್‍ನ 2 ತಿಂಗಳು ಹೊರತು ಪಡಿಸಿ 10 ತಿಂಗಳ ಕಾಲ, ಒಂದು ವರ್ಷಕ್ಕೆ 1 ಕೋಟಿ)ರೂ. ಸಂಬಳವನ್ನು ಪಡೆಯುತ್ತಿದ್ದರು.

    ಎರಡು ವರ್ಷಗಳ ಕಾಲ ಹಿರಿಯರ ತಂಡದ ಜೊತೆ ಇದ್ದ ಇವರು ಸಂಬಳವನ್ನು ಹೆಚ್ಚಳ ಮಾಡುವಂತೆ ಈ ಹಿಂದೆಯೇ ಮನವಿ ಸಲ್ಲಿಸಿದ್ದರು. ಆದರೆ ಈಗ ಈ ಮನವಿ ಪುರಸ್ಕೃತವಾಗಿದ್ದು ಶೇ.50 ರಷ್ಟು ಸಂಬಳ ಏರಿಕೆಯಾಗಿದೆ.

    ಈ ಹಿಂದೆ ಇದ್ದ ಬಿಸಿಸಿಐ ಆಡಳಿತ ಮಂಡಳಿ ಶೇ.100 ರಷ್ಟು ಸಂಬಳ ಏರಿಕೆಯ ಪ್ರಸ್ತಾಪನ್ನು ಒಪ್ಪಿತ್ತು. ಆದರೆ ಕಳೆದ ತಿಂಗಳು ಶೇ.25ರಷ್ಟು ಸಂಬಳ ಏರಿಸಲು ಬಿಸಿಸಿಐ ನಿರ್ಧರಿಸಿತ್ತು. ಬಿಸಿಸಿಐ ಈ ನಿರ್ಧಾರಕ್ಕೆ ಸಿಬ್ಬಂದಿಯಿಂದ ವಿರೋಧ ವ್ಯಕ್ತವಾಗಿತ್ತು. ಈಗ ಕೋಚ್ ಅನಿಲ್ ಕುಂಬ್ಳೆ ಸುಪ್ರೀಂ ನೇಮಿಸಿದ್ದ ಆಡಳಿತ ಸಮಿತಿಯ ಜೊತೆ ಸಭೆ ನಡೆಸಿ ಶೇ.50ರಷ್ಟು ಸಂಬಳವನ್ನು ಏರಿಸಿದ್ದಾರೆ.

    ಬುಧವಾರ ಆಟಗಾರರ ಸಂಭಾವನೆ ಮತ್ತು ಪಂದ್ಯದ ಶುಲ್ಕವನ್ನು ಆಡಳಿತ ಮಂಡಳಿ ದುಪ್ಟಟ್ಟು ಮಾಡಿತ್ತು. 2016ರ ಅಕ್ಟೋಬರ್ 1ರಿಂದ ಪರಿಷ್ಕೃತ ಸಂಭಾವನೆ ಮತ್ತು ಶುಲ್ಕ ಜಾರಿಗೆ ಬರಲಿದೆ.

    ಎಷ್ಟಿತ್ತು? ಈಗ ಎಷ್ಟು ಆಗಿದೆ?
    `ಎ’ ದರ್ಜೆಯಲ್ಲಿರುವ ಆಟಗಾರರು ಈ ಮೊದಲು ಕೋಟಿ ರೂ. ಪಡೆಯುತ್ತಿದ್ದರೆ ಈU ಆ ಮೊತ್ತವು 2 ಕೋಟಿ ರೂ.ಗೆ ಏರಿಕೆಯಾಗಿದೆ. ಬಿ ದರ್ಜೆ ಮತ್ತು ಸಿ ದರ್ಜೆಗಳ ಆಟಗಾರರು ಕ್ರಮವಾಗಿ 50 ಲಕ್ಷ ರೂ. ಮತ್ತು 25 ಲಕ್ಷ ರೂ. ಪಡೆಯುತ್ತಿದ್ದರು. ಅವರು ಇನ್ನು ಮುಂದೆ ಕ್ರಮವಾಗಿ 1 ಕೋಟಿ ರೂ. ಮತ್ತು 50 ಲಕ್ಷ ರೂ. ಹಣವನ್ನು ಪಡೆಯಲಿದ್ದಾರೆ.

    ಟೆಸ್ಟ್ ಪಂದ್ಯದಲ್ಲಿ ಆಡುವ ಆಟಗಾರರು ಶುಲ್ಕವನ್ನು 7.50 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದ್ದರೆ, ಏಕದಿನ ಮತ್ತು ಟ್ವೆಂಟಿ 20 ಪಂದ್ಯಗಳಲ್ಲಿ ಆಡುವವರ ಶುಲ್ಕವನ್ನು ಕ್ರಮವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

    ಎ ದರ್ಜೆ:
    ವಿರಾಟ್ ಕೊಹ್ಲಿ, ಮಹೇಂದ್ರಸಿಂಗ್ ಧೋನಿ, ಆರ್. ಆಶ್ವಿನ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜ, ಮುರಳಿ ವಿಜಯ್.

    ಬಿ ದರ್ಜೆ:
    ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಸ್‍ಪ್ರೀತ್ ಬೂಮ್ರಾ, ಯುವರಾಜ್ ಸಿಂಗ್.

    ಸಿ ದರ್ಜೆ :
    ಶಿಖರ್ ಧವನ್, ಅಂಬಟಿ ರಾಯುಡು, ಅಮಿತ್ ಮಿಶ್ರಾ, ಕೇದಾರ್ ಜಾಧವ್, ಯಜುವೇಂದ್ರ ಚಾಹಲ್, ಪಾರ್ಥಿವ್ ಪಟೇಲ್, ಜಯಂತ್ ಯಾದವ್, ಮನೀಷ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆಶಿಶ್ ನೆಹ್ರಾ, ಮನದೀಪ್ ಸಿಂಗ್, ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ರಿಷಭ್ ಪಂತ್.

  • ವಿಶ್ವದಲ್ಲೇ ಫಸ್ಟ್: ಟಿ20 ಕ್ರಿಕೆಟ್‍ನಲ್ಲಿ 300 ರನ್ ಬಾರಿಸಿ ಇತಿಹಾಸ ಸೃಷ್ಟಿಸಿದ ಮೋಹಿತ್

    ನವದೆಹಲಿ: ವಿಶ್ವದಲ್ಲೇ ಮೊದಲ ಬಾರಿಗೆ ಟಿ-20 ಕ್ರಿಕೆಟ್‍ನಲ್ಲಿ ತ್ರಿಶತಕ ಬಾರಿಸುವ ಮೂಲಕ ದೆಹಲಿಯ ಯುವ ಕ್ರಿಕಟರ್ ಅಸಾಮಾನ್ಯ ಸಾಧನೆ ಮಾಡಿದ್ದಾರೆ.

    ಮಂಗಳವಾರದಂದು ದೆಹಲಿಯ ಲಲಿತ್ ಪಾರ್ಕ್‍ನಲ್ಲಿ ನಡೆದ ಫ್ರೆಂಡ್ಸ್ ಪ್ರೀಮಿಯರ್ ಲೀಗ್ ಟ-20 ಮ್ಯಾಚ್‍ನಲ್ಲಿ ಮಾವಿ ಇಲೆವೆನ್ ತಂಡದ ಬ್ಯಾಟ್ಸ್ ಮನ್ ಮೋಹಿತ್ ಅಹ್ಲಾವತ್ 72 ಎಸೆತಗಳಲ್ಲಿ ಬರೋಬ್ಬರಿ 300 ರನ್ ಗಳಿಸಿ ಇತಿಹಾಸ ಬರೆದಿದ್ದಾರೆ. ಮೋಹಿತ್ 39 ಸಿಕ್ಸರ್ ಹಾಗೂ 14 ಬೌಂಡರಿ ಚಚ್ಚಿದ್ದಾರೆ.

    ಕೊನೆಯ ಓವರ್‍ನ ಕೊನೆಯ ಐದು ಎಸೆತದಲ್ಲಿ ಸತತ ಐದು ಸಿಕ್ಸರ್ ಹಾಗೂ ಕೊನೆಯ ಎರಡು ಓವರ್‍ನಲ್ಲಿ ಒಟ್ಟು 50 ರನ್ ಗಳಿಸಿದ ಮೋಹಿತ್ ತ್ರಿಬಲ್ ಸೆಂಚುರಿ ಪೂರ್ತಿ ಮಾಡಿದ್ರು. ಈ ಪಂದ್ಯದಲ್ಲಿ ಮಾವಿ ತಂಡ 20 ಓವರ್‍ಗಳಲ್ಲಿ 416 ರನ್ ಗಳಿಸ್ತು. ಮೋಹಿತ್ ತಂಡ 216 ರನ್‍ಗಳ ಅಂತರದಿಂದ ಗೆಲುವು ಸಾಧಿಸಿತು.

    ಫ್ರೆಂಡ್ಸ್ ಎಲೆವೆನ್ ತಂಡದ ವಿರುದ್ಧ ಆಡಿದ 21 ವರ್ಷದ ಮೋಹಿತ್, 2015ರಲ್ಲಿ ರಣಜಿ ಟ್ರೋಫಿಗಾಗಿ ಆಟವಾಡಿದ್ದರು. ದೆಹಲಿಗಾಗಿ ಮೂರು ಫಸ್ಟ್ ಕ್ಲಾಸ್ ಪಂದ್ಯಗಳನ್ನ ಆಡಿದ್ದು, ಅವುಗಲ್ಲಿ ಕೇವಲ 5 ರನ್ ಗಳಿಸಿದ್ದರು ಎಂದು ವರದಿಯಾಗಿದೆ.

    ಈ ಹಿಂದೆ ಇಂಗ್ಲೆಂಡ್‍ನ ಲಂಕಶೈರ್‍ನಲ್ಲಿ ನಡೆದ ಸ್ಥಳೀಯ ಟಿ20 ಲೀಗ್‍ನಲ್ಲಿ ಧನುಕಾ ಪತಿರಾನಾ ಎಂಬವರು 72 ಬಾಲ್‍ಗಳಿಗೆ 277 ರನ್ ಗಳಿಸಿದ್ದರು. ಶ್ರೀಲಂಕಾ ಮೂಲದ ಧನುಕಾ ಈ ಮ್ಯಾಚ್‍ನಲ್ಲಿ 29 ಸಿಕ್ಸರ್ ಹಾಗೂ 18 ಬೌಂಡರಿ ಬಾರಿಸಿದ್ದರು.

  • ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಿತ್ತ ಚಹಲ್ ಚೆಸ್‍ನಲ್ಲೂ ಚಾಂಪಿಯನ್ ಆಗಿದ್ರು!

    ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಿತ್ತ ಚಹಲ್ ಚೆಸ್‍ನಲ್ಲೂ ಚಾಂಪಿಯನ್ ಆಗಿದ್ರು!

    ಬೆಂಗಳೂರು: ಮೂರನೇ ಟಿ20 ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಹಠಾತ್ ಕುಸಿತ ಕಾಣಲು ಕಾರಣರಾದ ಯಜುವೇಂದ್ರ ಚಹಲ್ ಒಂದು ಕಾಲದಲ್ಲಿ ಚೆಸ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

    ಹೌದು, ಹರ್ಯಾಣ ರಾಜ್ಯದ ಚಹಲ್ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕ್ರಿಕೆಟ್ ಜೊತೆಗೆ ಚೆಸ್ ಆಡುತ್ತಿದ್ದರು. ಏಷ್ಯಾ ಮತ್ತು ವಿಶ್ವ ಯೂಥ್ ಚಾಂಪಿಯನ್ ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲದೇ ಅಂಡರ್ – 12 ವಯಸ್ಸಿನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು.

    ಎಳವೆಯಲ್ಲೇ ವಿಶೇಷ ಸಾಧನೆ ಮಾಡಿದ್ದರೂ ಚೆಸ್‍ನಲ್ಲಿ ಯಾಕೆ ಮುಂದುವರಿಯಲಿಲ್ಲ ಎಂದು ಕೇಳಿದ್ದಕ್ಕೆ, ಚೆಸ್ ನಲ್ಲಿ ಸಾಧನೆ ಮಾಡಬೇಕಾದರೆ ವರ್ಷಕ್ಕೆ 50 ಲಕ್ಷ ರೂ. ಬೇಕಾಗುತ್ತದೆ. ಆದರೆ ನನಗೆ ಪ್ರಯೋಜಕರ ಕೊರತೆಯಿಂದ ಮುಂದುವರಿಯಲು ಸಾಧ್ಯವಾಗಲಿಲ್ಲ. ಆದರೆ ಹವ್ಯಾಸವಾಗಿ ಚೆಸ್ ಆಡುತ್ತೇನೆ ಎಂದು ಈ ಹಿಂದೆ ಮಾಧ್ಯಮವೊಂದಕ್ಕೆ ತಿಳಿಸಿದ್ದರು.

    ಚೆಸ್ ನಿಮಗೆ ಯಾವ ರೀತಿ ಸಹಕಾರವಾಗಿದೆ ಎಂದು ಕೇಳಿದ್ದಕ್ಕೆ, ವಿಶೇಷವಾಗಿ ಟಿ 20ಯಲ್ಲಿ ಬ್ಯಾಟ್ಸ್ ಮನ್‍ಗಳು ದೊಡ್ಡ ಶಾಟ್‍ಗಳನ್ನು ಹೊಡೆಯುತ್ತಾರೆ. ಇದರಿಂದಾಗಿ ಬೌಲರ್‍ಗಳ ಮೇಲೆ ಒತ್ತಡ ಜಾಸ್ತಿ ಇರುತ್ತದೆ. ಆದರೆ ನಾನು ಬಹಳ ಶಾಂತವಾಗಿ ಇರುತ್ತೇನೆ. ಚೆಸ್ ತರಬೇತಿಯಿಂದಾಗಿ ನಾನು ನನ್ನ ಬೌಲಿಂಗ್ ಎಸೆಯುವ ಬಗ್ಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದರು.

    ಫಿಡೆ ವಿಶ್ವ ಚೆಸ್ ಶ್ರೇಯಾಕ ಪಟ್ಟಿಯಲ್ಲಿ ಈಗಲೂ ಚಹಲ್ ಹೆಸರು ಇದ್ದು 1956ನೇ ಸ್ಥಾನದಲ್ಲಿದ್ದಾರೆ. 1990 ಜುಲೈ 23ರಂದು ಜನಿಸಿದ ಚಹಲ್, ಮೂರು ಏಕದಿನ ಮತ್ತು 6 ಟಿ20 ಪಂದ್ಯವನ್ನು ಆಡಿದ್ದಾರೆ. ಟಿ20ಯಲ್ಲಿ 11 ವಿಕೆಟ್, ಏಕದಿನದಲ್ಲಿ 6 ವಿಕೆಟ್ ಪಡೆದಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಮೂರನೇ ಟಿ20ಯಲ್ಲಿ ಚಹಲ್ 25 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಭಾರತ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಕಾರಣಕ್ಕಾಗಿ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು.

     ಇದನ್ನೂ ಓದಿ: 8 ರನ್‍ಗಳಿಗೆ 8 ವಿಕೆಟ್ ಪತನ: ಇದು ಚಹಲ್ ಕಮಾಲ್- ಭಾರತಕ್ಕೆ ಸರಣಿ