ಸಿಡ್ನಿ: ಆಸೀಸ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ಧವನ್‍ರ ಬಿರುಸಿನ ಆಟಗಾದ ನೆರವಿನಿಂದ ಟೀಂ ಇಂಡಿಯಾ 6 ವಿಕೆಟ್ ಅಂತರದ ಜಯ ಪಡೆದಿದ್ದು, ಸರಣಿಯನ್ನು 1-1ರಿಂದ ಸಮ ಮಾಡಿಕೊಂಡಿದೆ.
ರೋಚಕ ಹೋರಾಟದಿಂದ ಕೂಡಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ 30 ಎಸೆತಗಳಲ್ಲಿ 52 ರನ್ ಗಳಿಸುವ ಗುರಿ ಹೊಂದಿತ್ತು. 16ನೇ ಓವರ್ ನಲ್ಲಿ ಕೊಹ್ಲಿ ಸಿಕ್ಸರ್, ಬೌಂಡರಿ ಸಮೇತ 11 ರನ್ ಸಿಡಿಸಿದರು. 17ನೇ ಮತ್ತು 18ನೇ ಓವರ್ ನಲ್ಲಿ 2 ಸಿಕ್ಸರ್ ಸಮೇತ 24 ರನ್ ಹರಿದು ಬಂದವು. 19ನೇ ನಲ್ಲಿ ಕಾರ್ತಿಕ್ ಬೌಂಡರಿ ಸಿಡಿಸಿ ತಂಡದ ಒತ್ತಡವನ್ನ ನಿಭಾಯಿಸಿದರು. ಈ ಓವರ್ ನಲ್ಲಿ 11 ರನ್ ಹರಿದು ಬಂತು.
ಅಂತಿಮ 6 ಎಸೆತಗಳಿಗೆ 5 ರನ್ ಅಗತ್ಯವಿತ್ತು. ಈ ವೇಳೆ ಕೊಹ್ಲಿ 2 ಬೌಂಡರಿ ಸಿಡಿಸಿ ಭಾರತ ಗೆಲುವು ಖಚಿತ ಪಡಿಸಿದರು. ಅಂತಿಮವಾಗಿ ಭಾರತ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿ ವಿಜಯದ ನಗೆ ಬೀರಿತು. ಕೊಹ್ಲಿ ಔಟಾಗದೇ 61 ರನ್(41 ಎಸೆತ, 4 ಬೌಂಡರಿ, 2 ಸಿಕ್ಸರ್) ದಿನೇಶ್ ಕಾರ್ತಿಕ್ ಔಟಾಗದೇ 22 ರನ್(18 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.
ಆಸೀಸ್ ವಿರುದ್ಧದ ಟಿ20 ಟೂರ್ನಿಯ ಮಾಡು ಇಲ್ಲವೇ ಮಾಡಿ ಎಂಬಂತೆ ಗೆಲ್ಲಲೇಬೇಕಾದ ಒತ್ತಡದ ಎದುರಿಸಿದ ಟೀಂ ಇಂಡಿಯಾಗೆ ಆರಂಭಿಕರಾದ ಧವನ್, ರೋಹಿತ್ ಉತ್ತಮ ಆರಂಭ ಓದಗಿಸಿದರು. ಇಬ್ಬರು ಮೊದಲ ವಿಕೆಟ್‍ಗೆ 5.3 ಓವರ್ ಗಳಲ್ಲಿ 68 ರನ್ ಕಾಣಿಕೆ ನೀಡಿದರು.
ಬಿರುಸಿನ ಆಟವಾಡಿದ ಧವನ್ ಕೇವಲ 22 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 41 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಟೀಂ ಇಂಡಿಯಾಗೆ ಅಘಾತ ನೀಡಿದ ಜಾಂಪಾ 23 ರನ್ ಗಳಿಸಿದ್ದ ರೋಹಿತ್ ವಿಕೆಟ್ ಕಬಳಿಸಿದರು.
ಈ ಹಂತದಲ್ಲಿ ಬಂದ ಕೆಎಲ್ ರಾಹುಲ್ 14 ರನ್ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇತ್ತ ಮರು ಎಸೆತದಲ್ಲೇ ರಿಷಭ್ ಪಂತ್ ಶೂನ್ಯ ಸುತ್ತಿದರು. ಈ ಮೂಲಕ 14ನೇ ಓವರ್ ನಲ್ಲಿ ಬೌಲ್ ಮಾಡಿದ ಟೈ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು. 2 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತ ಈ ಮೊತ್ತಕ್ಕೆ ಮತ್ತೆರಡು ವಿಕೆಟ್ ಕಳೆದುಕೊಂಡು ಸ್ವಲ್ಪ ಅಪಾಯಕ್ಕೆ ಸಿಕ್ಕಿತು.
ವಿಕೆಟ್ ಬಿದ್ದರೂ ಬಿರುಸಿನ ಆಟ ಪ್ರದರ್ಶಿಸಿದ ನಾಯಕ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 50 ರನ್ ಸಿಡಿಸಿದರು. ಇತ್ತ ನಾಯಕ ಕೊಹ್ಲಿಗೆ ಸಾಥ್ ನೀಡಿದ ದಿನೇಶ್ ಕಾರ್ತಿಕ್ 18 ಎಸೆತಗಳಲ್ಲಿ 22 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 164 ರನ್ ಪೇರಿಸಿತ್ತು. ಆಸೀಸ್ ಪರ ದಿಟ್ಟ ಆರಂಭ ನೀಡಿದ ನಾಯಕ ಆ್ಯರೋನ್ ಫಿಂಚ್ ಹಾಗೂ ಮ್ಯಾಥ್ಯೂ ಶಾರ್ಟ್ ಬಿರುಸಿನ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 8.3 ಓವರ್ ಗಳಲ್ಲಿ 68 ರನ್ ಸಿಡಿಸಿತ್ತು.
ಈ ವೇಳೆ ದಾಳಿಗಿಳಿದ ಕುಲದೀಪ್ ಯಾದವ್ 23 ಎಸೆತಗಳಲ್ಲಿ 28 ರನ್ ಗಳಿಸಿದ್ದ ಫಿಂಚ್ ವಿಕೆಟ್ ಪಡೆದರು. ಇದಾದ ಬೆನ್ನಲ್ಲೇ ಕೃಣಾಲ್ ಪಾಂಡ್ಯ 33 ರನ್ ಗಳಿಸಿದ್ದ ಶಾರ್ಟ್ ವಿಕೆಟ್ ಪಡೆದರು. ಇದರೊಂದಿಗೆ ಆಸೀಸ್ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಬಳಿಕ ಬಂದ ಬೆನ್ ಮೆಕ್ ಡರ್ಮಾಟ್ ಶೂನ್ಯ ಸುತ್ತಿದ್ದರು. ಕಳೆದ ಎರಡು ಪಂದ್ಯದಲ್ಲಿ ಬಿರುಸಿನ ಆಟವಾಡಿದ್ದ ಮಾಕ್ಸ್ ವೆಲ್ 13 ರನ್ ಗಳಿಸಿ ನಿರ್ಗಮಿಸಿದರು.
ಈ ಹಂತದಲ್ಲಿ ಬಿರುಸಿನ ಪ್ರದರ್ಶನ ನೀಡಿದ ಅಲೆಕ್ಸ್ ಕ್ಯಾರಿ 19 ಎಸೆತಗಳಲ್ಲಿ 27 ರನ್ ಗಳಿಸಿದರು. ಮತ್ತೆ ತಮ್ಮ ಬೌಲಿಂಗ್ ಮೂಲಕ ಕಮಲ್ ಮಾಡಿದ ಕೃಣಾಲ್ ಪಾಂಡ್ಯ ಕ್ಯಾರಿ ವಿಕೆಟ್ ಪಡೆದರು. ಬಳಿಕ ಬಂದ ಕ್ರಿಸ್ ಲಿನ್ 13 ರನ್ ಗಳಿಸಿ ರನೌಟ್‍ಗೆ ಬಲಿಯಾದರೆ, ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿದ ಮಾರ್ಕಸ್ ಸ್ಟೊಯಿನಿಸ್ 15 ಎಸೆತಗಳಲ್ಲಿ 25 ರನ್ ಹಾಗೂ ನೇಥನ್ ಕೌಲ್ಟರ್ ನೈಲ್ 13ರನ್ ಗಳಿಸಿ ಅಜೇಯರಾಗಿ ಉಳಿದು ತಂಡ ಸವಾಲಿನ ಮೊತ್ತ ಪೇರಿಸಲು ಕಾರಣರಾದರು.
ಟೀಂ ಇಂಡಿಯಾ 36 ರನ್ ನೀಡಿ ಕೃಣಾಲ್ ಪಾಂಡ್ಯ 4 ವಿಕೆಟ್ ಪಡೆದು ಆಸೀಸ್ ನೆಲದಲ್ಲಿ ಭಾರತ ತಂಡದ ಪರ ಉತ್ತಮ ಸಾಧನೆ ಮಾಡಿದ ಬೌಲರ್ ಎಣಿಸಿಕೊಂಡದರು. ಉಳಿದಂತೆ ಕುಲದೀಪ್ ಯಾದವ್ 1 ವಿಕೆಟ್ ಪಡೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv