Tag: ಟಿ20

  • ನಾಳೆ ಟಾಸ್ ಮಾಡಲು ಬರುತ್ತಿದ್ದಂತೆ ದಾಖಲೆ ಬರೆಯಲಿದ್ದಾರೆ ರೋಹಿತ್

    ನಾಳೆ ಟಾಸ್ ಮಾಡಲು ಬರುತ್ತಿದ್ದಂತೆ ದಾಖಲೆ ಬರೆಯಲಿದ್ದಾರೆ ರೋಹಿತ್

    ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ನವೆಂಬರ್ 7ರಂದು ಟಾಸ್ ಮಾಡಲು ರಾಜ್‌ಕೋಟ್ ಅಂಗಳಕ್ಕೆ ಇಳಿಯುತ್ತಿದ್ದಂತೆ ಭಾರತದ ಪರ ದಾಖಲೆ ಬರೆಯಲಿದ್ದಾರೆ. ನಾಳೆ ನಡೆಯಲಿರುವ ಬಾಂಗ್ಲಾದೇಶ ವಿರುದ್ಧ ವೃತ್ತಿ ಜೀವನದ 100ನೇ ಅಂತರಾಷ್ಟ್ರೀಯ ಟಿ20 ಪಂದ್ಯವನ್ನು ರೋಹಿತ್ ಶರ್ಮಾ ಆಡಲಿದ್ದಾರೆ. ಈ ಮೂಲಕ 100 ಟಿ20 ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

    ಸದ್ಯ ರೋಹಿತ್ ಶರ್ಮಾ ಅತಿ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯ ಆಡಿದ ಪಟ್ಟಿಯಲ್ಲಿ ಜಂಟಿ ಸ್ಥಾನವನ್ನು ಪಡೆದಿದ್ದು, ಪಾಕಿಸ್ತಾನದ ಆಲ್‌ರೌಂಡರ್ ಶೋಯೆಬ್ ಮಲಿಕ್ ಮೊದಲ ಸ್ಥಾನದಲ್ಲಿದ್ದಾರೆ.

    ಶೋಯೆಬ್ ಮಲಿಕ್ ಇಲ್ಲಿವರೆಗೂ 111 ಪಂದ್ಯಗಳನ್ನು ಆಡಿದ್ದು, ಮಲಿಕ್ ನಂತರದ ಸ್ಥಾನದಲ್ಲಿ 99 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ಶಾಹಿದ್ ಆಫ್ರಿದಿ ಇದ್ದಾರೆ. ನಾಳೆಯ ಪಂದ್ಯ ಆಡುವ ಮೂಲಕ ಆಫ್ರಿದಿಯನ್ನು ಹಿಂದಿಕ್ಕಿ ರೋಹಿತ್ ಶರ್ಮಾ ಎರಡನೇ ಸ್ಥಾನಕ್ಕೆ ಏರಲಿದ್ದಾರೆ. 98 ಅಂತರಾಷ್ಟ್ರೀಯ ಟಿ20 ಪಂದ್ಯವಾಡಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.

    ಯಾರು ಎಷ್ಟು ಪಂದ್ಯವಾಡಿದ್ದಾರೆ?
    ಅತಿ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯವಾಡಿದ ಭಾರತೀಯ ಕ್ರಿಕೆಟರಲ್ಲಿ ರೋಹಿತ್ ಶರ್ಮಾ ಮೊದಲಿಗರಾಗಿದ್ದಾರೆ. ಉಳಿದಂತೆ ಧೋನಿ (98), ಸುರೇಶ್ ರೈನಾ (78), ವಿರಾಟ್ ಕೊಹ್ಲಿ (72), ಯುವರಾಜ್ ಸಿಂಗ್ (57), ಶಿಖರ್ ಧವನ್ (56) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

    ಹಿಟ್ ರೆಕಾರ್ಡ್:
    99 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ 2,452 ರನ್‌ಗಳನ್ನು ಗಳಿಸಿ, ಅತ್ಯಧಿಕ ರನ್ ಹೊಂದಿರುವ ಮೊದಲ ಆಟಗಾರರಾಗಿದ್ದಾರೆ. 72 ಪಂದ್ಯಗಳಲ್ಲಿ 2450 ರನ್ ಪೇರಿಸಿರುವ ನಾಯಕ ವಿರಾಟ್ ಕೊಹ್ಲಿ ಹಿಟ್ ಮ್ಯಾನ್ ಬೆನ್ನ ಹಿಂದೆಯೇ ಇದ್ದಾರೆ. ದೆಹಲಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ರೋಹಿತ್ ಶರ್ಮಾ ಹಿಂದಿಕ್ಕಿದ್ದರು. 106 ಸಿಕ್ಸರ್ ಮೂಲಕ ಅತಿ ಹೆಚ್ಚು ಸಿಕ್ಸ್ ಹೊಡೆದ ಆಟಗಾರರಾಗಿದ್ದಾರೆ. ನಾಲ್ಕು ಶತಕದ ಮೂಲಕ ಅಧಿಕ ಸೆಂಚುರಿ ಹೊಡೆದ ಆಟಗಾರ ಎನಿಸಿಕೊಂಡಿದ್ದಾರೆ.

  • ‘ನಾನು ಬಿಸಿಸಿಐ ಅಧ್ಯಕ್ಷ, ರೆಗ್ಯುಲರ್ ಕ್ಯಾಪ್ಟನ್ ಅಲ್ಲ’- ರೋಹಿತ್ ಗರಂ

    ‘ನಾನು ಬಿಸಿಸಿಐ ಅಧ್ಯಕ್ಷ, ರೆಗ್ಯುಲರ್ ಕ್ಯಾಪ್ಟನ್ ಅಲ್ಲ’- ರೋಹಿತ್ ಗರಂ

    ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದು, ತಾನು ಬಿಸಿಸಿಐ ಅಧ್ಯಕ್ಷ ಅಥವಾ ತಂಡದ ರೆಗ್ಯುಲರ್ ನಾಯಕನಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.

    ಪಂದ್ಯದ ಕುರಿತು ಮಾಧ್ಯಮಗಳ ಎದುರು ಮಾಹಿತಿ ನೀಡಲು ಆಗಮಿಸಿದ್ದ ರೋಹಿತ್ ಅವರಿಗೆ ಸುದ್ದಿಗೋಷ್ಠಿಯ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿರುದ್ಧ ಕೇಳಿ ಬಂದ ವಿಮರ್ಶೆಗಳ ಕುರಿತ ಪ್ರಶ್ನೆ ಎದುರಾಗಿದ್ದು, ಈ ಪ್ರಶ್ನೆ ಎದುರಾಗುತ್ತಿದಂತೆ ರೋಹಿತ್ ಗರಂ ಆಗಿ ಮಾತನಾಡಿದರು.

    ಮೊದಲು ಅನುಷ್ಕಾ ಶರ್ಮಾರ ಅವರ ವಿಮರ್ಶೆ ಮಾಡಿ ಹೇಳಿಕೆ ನೀಡಿದ್ದ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಫಾರೂಖ್ ಇಂಜಿನಿಯರ್, ಅನುಷ್ಕಾ ಶರ್ಮಾ ಖಡಕ್ ಉತ್ತರ ನೀಡುತ್ತಿದಂತೆ ಕ್ಷಮೆ ಕೋರಿದ್ದರು. ಈ ಬೆಳವಣಿಗೆಗಳ ಬಗ್ಗೆ ರೋಹಿತ್ ರನ್ನು ಪ್ರಶ್ನಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ರೋಹಿತ್, ನಾನು ಬಿಸಿಸಿಐ ಅಧ್ಯಕ್ಷ, ತಂಡದ ರೆಗ್ಯುಲರ್ ಕ್ಯಾಪ್ಟನ್ ಕೂಡ ಅಲ್ಲ. ಈ ವಿಷಯದ ಬಗ್ಗೆ ನಾನು ಮಾತನಾಡುವುದು ಏನಿದೆ? ಈ ಬಗ್ಗೆ ನೀವು ನೇರವಾಗಿ ಫಾರೂಖ್ ಅವರನ್ನೇ ಪ್ರಶ್ನೆ ಮಾಡಿ. ಅವರು ಏನು ಹೇಳಿದ್ದಾರೆ ಎಂಬುವುದು ತಿಳಿಯುತ್ತದೆ. ನಾನು ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು. ಇದನ್ನು ಓದಿ: ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ ಬೆನ್ನಲ್ಲೇ ಕ್ಷಮೆ ಕೇಳಿದ ಫಾರೂಖ್

    ವಿಶ್ವ ದಾಖಲೆ ಸನಿಹ: ಇತ್ತ ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸುವ ಸನಿಹದಲ್ಲಿದ್ದು, ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಸಿಡಿಸಿದ ಆಟಗಾರ ಎನಿಸಿಕೊಳ್ಳಲು ರೋಹಿತ್‌ಗೆ 8 ರನ್ ಗಳ ಅಗತ್ಯವಿದೆ. ಸದ್ಯ 2,450 ರನ್ ಗಳಿರುವ ಕೊಹ್ಲಿ ನಂ.1 ಪಟ್ಟದಲ್ಲಿದ್ದು, ರೋಹಿತ್ 2,443 ರನ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೇ ರೋಹಿತ್, ಕೊಹ್ಲಿ ದಾಖಲೆಯನ್ನು ಮುರಿಯುವ ಅವಕಾಶವನ್ನು ಪಡೆದಿದ್ದಾರೆ.

  • INDvBAN: ರೋಹಿತ್ ಹೆಗಲಿಗೆ ಟಿ20 ನಾಯಕತ್ವ- ಸಂಜು ಸ್ಯಾಮ್ಸನ್‍ಗೆ ಚಾನ್ಸ್

    INDvBAN: ರೋಹಿತ್ ಹೆಗಲಿಗೆ ಟಿ20 ನಾಯಕತ್ವ- ಸಂಜು ಸ್ಯಾಮ್ಸನ್‍ಗೆ ಚಾನ್ಸ್

    ಮುಂಬೈ: ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟಿ20, ಟೆಸ್ಟ್ ಸರಣಿಗೆ ಬಿಸಿಸಿಐ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರೋಹಿತ್ ಶರ್ಮಾ ಹೆಗಲಿಗೆ ಟಿ20 ಸರಣಿ ನಾಯಕತ್ವ ನೀಡಿ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

    2018 ಅಕ್ಟೋಬರ್ ನಿಂದ ಕೊಹ್ಲಿ ವಿಶ್ರಾಂತಿ ಇಲ್ಲದೇ ಆಡುತ್ತಿದ್ದು, ಟೀಂ ಇಂಡಿಯಾ ಆಡಿರುವ 56 ಪಂದ್ಯಗಳಲ್ಲಿ 48 ಪಂದ್ಯಗಳನ್ನು ಆಡಿದ್ದಾರೆ. ಆದ್ದರಿಂದ ಕೊಹ್ಲಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.

    ಯುವ ಆಟಗಾರರಾದ ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಅವರಿಗೆ ಟಿ20 ಟೂರ್ನಿಗೆ ಕರೆ ನೀಡಿದ್ದು, ಉಳಿದಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯಲ್ಲಿ ಆಟಗಾರರಿಗೆ ಅವಕಾಶ ನೀಡಲಾಗಿದೆ. ನ.3 ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

    ವಿಜಯ್ ಹಜಾರೆ ಟೂರ್ನಿಯಲ್ಲಿ ಸಂಜು ಸ್ಯಾಮನ್ಸ್ ತಮ್ಮ ಮೊದಲ ದ್ವಿಶತಕ ಸಿಡಿಸಿ ಆಯ್ಕೆ ಸಮಿತಿ ಗಮನ ಸೆಳೆಯಲು ಯಶಸ್ವಿಯಾಗಿದ್ದಾರೆ. ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗಿರುವ ಸಂಜು, 129 ಎಸೆತಗಳಲ್ಲಿ 212 ರನ್ ಗಳಿಸಿದ್ದರು. ಇತ್ತ ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ನಡೆದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ದುಬೆ ಕೂಡ ಸಿಮೀತ ಓವರ್ ಗಳ ಸರಣಿಗೆ ಅವಕಾಶ ಪಡೆದಿದ್ದಾರೆ. ಉಳಿದಂತೆ ಬಿಸಿಸಿಐ ಆಯ್ಕೆ ಸಮಿತಿ ಟೆಸ್ಟ್ ಸರಣಿಗೂ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಬಾಂಗ್ಲಾ ವಿರುದ್ಧದ ಸರಣಿಯ ಆಟಗಾರರನ್ನೇ ಉಳಿಸಿಕೊಂಡಿದೆ. ಟೆಸ್ಟ್ ಟೂರ್ನಿ ನ.14 ರಿಂದ ಆರಂಭವಾಗಲಿದ್ದು, 2ನೇ ಟೆಸ್ಟ್ ಪಂದ್ಯ ನ.22 ರಂದು ನಡೆಯಲಿದೆ.

    ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕೃಣಾಲ್ ಪಾಂಡ್ಯ, ಯಜುವೇಂದ್ರ ಚಹಲ್, ರಾಹುಲ್ ಚಹರ್, ದೀಪಕ್ ಚಹಾರ್, ಖಲೀಲ್ ಅಹ್ಮದ್, ಶಿವಂ ದುಬೆ, ಶಾರ್ದುಲ್ ಠಾಕೂರ್.

    ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅರ್ಗವಾಲ್, ಚೇತೇಶ್ವರ ಪೂಜಾರಾ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ಸಹಾ (ವಿಕೆಟ್ ಕೀಪರ್), ಜಡೇಜಾ, ಆರ್.ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶುಬ್ ಮನ್ ಗಿಲ್, ರಿಷಬ್ ಪಂತ್.

  • ‘ಆಡೋದಾದ್ರೆ ಆಡಿ ಇಲ್ಲ ಅಂದ್ರೆ ಬೇಡ’ – ಲಂಕಾ ತಂಡಕ್ಕೆ ಪಾಕ್ ಸಂದೇಶ

    ‘ಆಡೋದಾದ್ರೆ ಆಡಿ ಇಲ್ಲ ಅಂದ್ರೆ ಬೇಡ’ – ಲಂಕಾ ತಂಡಕ್ಕೆ ಪಾಕ್ ಸಂದೇಶ

    ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಂದಿನ ಶ್ರೀಲಂಕಾ ವಿರುದ್ಧದ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲು ನಿರಾಕರಿಸಿದ್ದು, ಆ ಮೂಲಕ ಟೂರ್ನಿ ಆಡಿದರೆ ಪಾಕ್‍ನಲ್ಲಿ ಆಡಿ ಇಲ್ಲ ಬೇಡ ಎಂಬ ಸಂದೇಶವನ್ನು ನೀಡಿದೆ.

    ಪಾಕಿಸ್ತಾನದಲ್ಲಿ ನಡೆಲಿರುವ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಶ್ರೀಲಂಕಾ ಕೆಲ ಆಟಗಾರರು ನಿರಾಕರಿಸಿದ್ದರು. ಅಲ್ಲದೇ ಕ್ರಿಕೆಟ್ ಬೋರ್ಡ್ ಗೆ ಶ್ರೀಲಂಕಾ ಸರ್ಕಾರ ಕೂಡ ಟೂರ್ನಿಯ ಸಂದರ್ಭದಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಿತ್ತು. ಪರಿಣಾಮ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸುವ ಸಲಹೆಯನ್ನು ಪಾಕ್‍ಗೆ ನೀಡಿತ್ತು. ಇದನ್ನು ಓದಿ:  ಪಾಕ್ ಸಚಿವರ ಹೇಳಿಕೆಗೆ ಶ್ರೀಲಂಕಾ ಟಾಂಗ್

    ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಲಹೆಯನ್ನು ತಿರಸ್ಕರಿಸಿರುವ ಪಿಸಿಬಿ, ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸುವ ಸಲಹೆಯನ್ನು ತಳ್ಳಿ ಹಾಕಿದೆ. ಒಂದೊಮ್ಮೆ ಈ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಿದರೆ ಮುಂದಿನ ದಿನಗಳಲ್ಲೂ ಇದೇ ರೀತಿಯ ಒತ್ತಡವನ್ನು ವಿದೇಶಿ ತಂಡಗಳಿಂದ ಎದುರಿಸಬಹುದು ಎಂಬ ಚಿಂತೆ ಪಿಸಿಬಿಗೆ ತಲೆ ನೋವು ತಂದಿದೆ. ಅಲ್ಲದೇ ಶ್ರೀಲಂಕಾ ಕ್ರಿಕೆಟ್ ಟೂರ್ನಿಯ ಬೆನ್ನಲ್ಲೇ ಪಾಕ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಇಲ್ಲಿಯೂ ವಿದೇಶಿ ಆಟಗಾರರು ಭಾಗವಹಿಸಿಸುವುದು ಕಷ್ಟಸಾಧ್ಯ ಎನ್ನಲಾಗಿದೆ. ಇದನ್ನು ಓದಿ: ಭಾರತದ ಒತ್ತಡಕ್ಕೆ ಮಣಿದು ಲಂಕಾ ಕ್ರಿಕೆಟ್ ಆಟಗಾರರು ಬರುತ್ತಿಲ್ಲ – ಪಾಕ್ ಸಚಿವ

    ಶ್ರೀಲಂಕಾ ತಂಡದ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲು ನಿರಾಕರಿಸಿದ ಪರಿಣಾಮ ಬೋರ್ಡ್ ಸ್ಟಾರ್ ಆಟಗಾರರು ಇಲ್ಲದ ಹೊಸ ಆಟಗಾರರ ತಂಡವನ್ನು ಪ್ರಕಟಿಸಿತ್ತು. ಪಾಕ್ ನ ಕರಾಚಿ ಹಾಗೂ ಲಾಹೋರಿನಲ್ಲಿ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ವೇಳಾಪಟ್ಟಿ ನಿಗದಿಯಾಗಿದೆ. ಸೆ.27 ರಿಂದ ಆ.9ರ ವರೆಗೂ ಟೂರ್ನಿ ನಡೆಯಲಿದೆ.

    ಶ್ರೀಲಂಕಾ ಆಟಗಾರರು ಪಾಕ್ ಟೂರ್ನಿಯಲ್ಲಿ ಆಡಲು ನಿರಾಕರಿಸುತ್ತಿದಂತೆ ಪಾಕ್ ಸಚಿವ ಫವಾದ್ ಹುಸೇನ್ ಚೌಧರಿ ಭಾರತ ಕ್ರೀಡಾ ಸಚಿವಾಲಯದ ವಿರುದ್ಧ ಕಿಡಿಕಾರಿ, ತಮ್ಮ ರಾಜಕೀಯ ಕುತಂತ್ರ ಬುದ್ಧಿಯನ್ನು ತೋರಿಸಿದ್ದರು. ಆದರೆ ಪಾಕ್ ಸಚಿವರ ಹೇಳಿಕೆಗೆ ತಿರುಗೇಟು ನೀಡಿದ್ದ ಶ್ರೀಲಂಕಾ ಆಟಗಾರರ ಈ ನಿರ್ಧಾರಕ್ಕೆ, ಪಾಕಿಸ್ತಾನವೇ ಕಾರಣ ಎಂದು ಟಾಂಗ್ ನೀಡಿದ್ದರು.

  • ಕೆನಡಾ ಗ್ಲೋಬಲ್ ಟಿ20 ಲೀಗ್‍- ‘ದುಡ್ಡು ಕೊಟ್ಟರೆ ಮಾತ್ರ ಆಡುತ್ತೇವೆ’

    ಕೆನಡಾ ಗ್ಲೋಬಲ್ ಟಿ20 ಲೀಗ್‍- ‘ದುಡ್ಡು ಕೊಟ್ಟರೆ ಮಾತ್ರ ಆಡುತ್ತೇವೆ’

    ಟೊರೆಂಟೊ: ಕ್ರಿಕೆಟ್ ಜನಪ್ರಿಯತೆಯನ್ನ ಹೆಚ್ಚಿಸಲು ಇತ್ತೀಚೆಗೆ ಕ್ರಿಕೆಟ್ ಲೀಗ್‍ಗಳನ್ನು ಆಯೋಜಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಟೂರ್ನಿ ಇಂತಹ ಟೂರ್ನಿಗಳ ಮತ್ತೊಂದು ಮುಖವನ್ನು ತೋರಿಸಿದೆ.

    ವಿಶ್ವ ಕ್ರಿಕೆಟ್‍ನ ಪ್ರಮುಖ ಕ್ರಿಕೆಟಿಗರು ಭಾಗವಹಿಸಿದ್ದ ಕೆನಡಾ ಗ್ಲೋಬಲ್ ಟಿ20 ಕ್ರಿಕೆಟ್ ಟೂರ್ನಿಯ ಭಾಗವಾಗಿ ಬುಧವಾರ ನಡೆಯಬೇಕಿದ್ದ ಪಂದ್ಯದಲ್ಲಿ ಯಾರು ಊಹೆ ಮಾಡದ ಘಟನೆಯೊಂದು ನಡೆದಿದೆ. ನಿಗದಿತ ವೇಳಾಪಟ್ಟಿ ಅನ್ವಯ ಮಾಂಟ್ರಿಯಲ್ ಟೈಗರ್ಸ್ ಮತ್ತು ಟೊರೆಂಟೊ ನ್ಯಾಷನಲ್ ತಂಡಗಳು ಬುಧವಾರ ಪಂದ್ಯವಾಡಬೇಕಿತ್ತು. ಆದರೆ ಆಟಗಾರರು ಪಂದ್ಯಕ್ಕೆ ಸಮಯವಾಗುತ್ತಿದಂತೆ ತಮ್ಮ ಬೇಡಿಕೆ ಮುಂದಿಟ್ಟು ಮೈದಾನಕ್ಕೆ ತೆರಳದೆ ಹೋಟೆಲ್ ನಲ್ಲೇ ಉಳಿದುಕೊಂಡಿದ್ದರು.

    ಭಾರತದ ಕಾಲಮಾನದ ಅನ್ವಯ ಬುಧವಾರದ ಪಂದ್ಯ ರಾತ್ರಿ 10 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಆಟಗಾರರು ತಮಗೆ ಟೂರ್ನಿ ಆಯೋಜಕರು ಭಾರೀ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದಾರೆ. ತಮ್ಮ ಹಣವನ್ನು ನೀಡಿದರೆ ಮಾತ್ರ ಆಡುವುದಾಗಿ ಪಟ್ಟು ಹಿಡಿದಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆಟಗಾರರ ನಿರ್ಧಾರದ ಪರಿಣಾಮ ನಿಗದಿತ ಸಮಯವಾದರು ಪಂದ್ಯ ಆರಂಭಗೊಂಡಿರಲಿಲ್ಲ.

    ಇತ್ತ ಪಂದ್ಯವನ್ನು ಪ್ರಸಾರ ಮಾಡಬೇಕಿದ್ದ ವಾಹಿನಿಗಳು ಕಾರಣಾಂತರಗಳಿಂದ ಪಂದ್ಯ ತಡವಾಗುತ್ತಿದೆ ಎಂಬ ಸ್ಕ್ರೋಲಿಂಗ್ ನೀಡಿ ಹಳೆ ಪಂದ್ಯವನ್ನೇ ಮರು ಪ್ರಸಾರ ಮಾಡಿದ್ದವು. ಇತ್ತ ಟೂರ್ನಿಯ ಆಯೋಜಕರು ಆಟಗಾರರ ಮನವೊಲಿಕೆಗೆ ಮುಂದಾಗಿದ್ದರು. ಸರಿಸುಮಾರು 2 ಗಂಟೆಗಳು ತಡವಾಗಿ ಪಂದ್ಯ ಆರಂಭವಾಗಿತ್ತು. ಯುವರಾಜ್ ಸಿಂಗ್ ನಾಯಕತ್ವದ ಟೊರೆಂಟೊ ನ್ಯಾಷನಲ್ಸ್ ತಂಡದಲ್ಲಿ ಬ್ರೆಂಡನ್ ಮೆಕಲಮ್, ಪೋಲಾರ್ಡ್ ರಂತಹ ಖ್ಯಾತ ಆಟಗಾರರು ಇದ್ದು, ಮಾಂಟ್ರಿಯಲ್ ಟೈಗರ್ಸ್ ಪರ ಸುನಿಲ್ ನರೇನ್, ತಿಸಾರ ಪೆರೆರಾ ಸೇರಿದಂತೆ ಹಲವು ಆಟಗಾರರು ಆಡುತ್ತಿದ್ದಾರೆ. ತಡವಾಗಿ ಆರಂಭವಾದ ಈ ಪಂದ್ಯದಲ್ಲಿ ಮೊದಲು ಯುವಿ ನೇತೃತ್ವದ ತಂಡ ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಅ ಬಳಿಕ ಗುರಿ ಬೆನ್ನತ್ತಿದ ಟೈಗರ್ಸ್ ತಂಡ 19.3 ಓವರ್ ಗಳಲ್ಲಿ 154 ರನ್ ಗಳಿಸಿ ಅಲೌಟ್ ಆಯ್ತು. ಪಂದ್ಯದಲ್ಲಿ 35 ರನ್ ಗೆಲುವು ಪಡೆದ ಟೊರೆಂಟೊ ನ್ಯಾಷನಲ್ಸ್ ತಂಡ ಟೂರ್ನಿಯಲ್ಲಿ ಪ್ಲೇ ಆಫ್‍ಗೆ ಆರ್ಹತೆ ಪಡೆಯಿತು.

  • ಅಂತರಾಷ್ಟ್ರೀಯ ದಾಖಲೆಯ ಸನಿಹದಲ್ಲಿ ಕೆಎಲ್ ರಾಹುಲ್

    ಅಂತರಾಷ್ಟ್ರೀಯ ದಾಖಲೆಯ ಸನಿಹದಲ್ಲಿ ಕೆಎಲ್ ರಾಹುಲ್

    ಮುಂಬೈ: ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಟಿ20 ಕ್ರಿಕೆಟ್ ಪಂದ್ಯದಲ್ಲಿ ಅಪರೂಪದ ದಾಖಲೆ ಮಾಡುವ ಸನಿಹದಲ್ಲಿದ್ದಾರೆ.

    ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ವೇಗವಾಗಿ 1 ಸಾವಿರ ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲು 121 ರನ್ ಗಳಿಸಬೇಕಿದೆ. ಇದುವರೆಗೂ 24 ಇನ್ನಿಂಗ್ಸ್ ಗಳಲ್ಲಿ 879 ರನ್ ಗಳಿಸುವ ರಾಹುಲ್, ವೆಸ್ಟ್ ಇಂಡೀಸ್ ವಿರುದ್ಧ ಟೂರ್ನಿಯಲ್ಲಿ ಈ ಸಾಧನೆ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಟಿ20 ಕ್ರಿಕೆಟ್‍ನಲ್ಲಿ ರಾಹುಲ್ 2 ಶತಕ, 5 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಅಜೇಯ 110 ರನ್ ರಾಹುಲ್ ಅವರ ಗರಿಷ್ಠ ಮೊತ್ತವಾಗಿದೆ.

    ಒಂದೊಮ್ಮೆ ವಿಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ರಾಹುಲ್ 121 ರನ್ ಗಳಿಸಿದರೆ ಕೇವಲ 25ನೇ ಇನ್ನಿಂಗ್ಸ್ ನಲ್ಲಿ 1 ಸಾವಿರ ರನ್ ಪೂರೈಸಿದ ಆಟಗಾರ ಎನಿಸಿಕೊಳ್ಳಿದ್ದಾರೆ. ಸದ್ಯ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಬಾಬರ್ ಅಜಮ್ ಹೆಸರಿನಲ್ಲಿ ಈ ದಾಖಲೆ ಇದ್ದು, ಅಜಮ್ 26 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಸಿಡಿಸಿದ್ದರು. ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದು, 27 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಒಂದೊಮ್ಮೆ ರಾಹುಲ್ 121 ರನ್ ಸಿಡಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ದಾಖಲೆಯನ್ನು ನಿರ್ಮಿಸಲಿದ್ದಾರೆ.

  • ಆಟಗಾರರೊಂದಿಗೆ ಕೊಹ್ಲಿ ಪೋಸ್ – ರೋಹಿತ್ ಕಾಣಿಸುತ್ತಿಲ್ಲ ಎಂದ ನೆಟ್ಟಿಗರು

    ಆಟಗಾರರೊಂದಿಗೆ ಕೊಹ್ಲಿ ಪೋಸ್ – ರೋಹಿತ್ ಕಾಣಿಸುತ್ತಿಲ್ಲ ಎಂದ ನೆಟ್ಟಿಗರು

    ನವದೆಹಲಿ: ಟೀಂ ಇಂಡಿಯಾ ನಾಯಕ, ಉಪನಾಯಕ ರೋಹಿತ್ ಶರ್ಮಾ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕೊಹ್ಲಿ ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದ್ದರು. ಆದರೆ ಸದ್ಯ ಅವರು ವಿಂಡೀಸ್ ಪ್ರವಾಸದ ಸಂದರ್ಭದಲ್ಲಿ ಹಂಚಿಕೊಂಡಿರುವ ಫೋಟೋ ಮತ್ತೆ ನೆಟ್ಟಿಗರಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ.

    ಕೊಹ್ಲಿರನ್ನ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಅನ್ ಫಾಲೋ ಮಾಡಿದ್ದು, ಅನುಷ್ಕಾ ಶರ್ಮಾ ಕೂಡ ಇದೇ ರೀತಿ ಮಾಡಿದ್ದ ಪರಿಣಾಮ ಸಾಕಷ್ಟು ಸುದ್ದಿಗಳು ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಟೂರ್ನಿಗೂ ಮುನ್ನ ಸುದ್ದಿಗೋಷ್ಠಿ ನಡೆಸಿ ರೋಹಿತ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದಿದ್ದರು.

    ವೆಸ್ಟ್ ಇಂಡೀಸ್ ಸರಣಿಗೆ ತೆರಳಿರುವ ಕೊಹ್ಲಿ ಸದ್ಯ ಅಮೆರಿಕದಲ್ಲಿ ಇರುವುದು ತಿಳಿದಿರುವ ಸಂಗತಿ. ಈ ಸಂದರ್ಭದಲ್ಲಿ ಆಟಗಾರರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿ ಸರಣಿಗೆ ಸಿದ್ಧ ಎಂದಿದ್ದಾರೆ. ಆದರೆ ಈ ಫೋಟೋವನ್ನು ನೋಡಿದ ಕೆಲ ಅಭಿಮಾನಿಗಳು ಮಾತ್ರ ಕೊಹ್ಲಿ ವಿರುದ್ಧ ಗರಂ ಆಗಿದ್ದಾರೆ.

    ಫೋಟೋದಲ್ಲಿ ರವೀಂದ್ರ ಜಡೇಜಾ, ಭುವನೇಶ್ವರ್, ರಾಹುಲ್ ಸೇರಿದಂತೆ ಇತರ ಆಟಗಾರರು ಇದ್ದು ಆದರೆ ಉಪ ನಾಯಕ ರೋಹಿತ್ ಮಾತ್ರ ಫೋಟೋದಲ್ಲಿ ಇಲ್ಲ. ಇದನ್ನು ಗಮನಿಸಿರುವ ನೆಟ್ಟಿಗರು, ಕೊಹ್ಲಿ ನಮ್ಮ ನಡುವೆ ಎಲ್ಲವೂ ಸರಿ ಇದೆ ಎನ್ನುತ್ತಾರೆ. ಆದರೆ ಪ್ರತಿ ಬಾರಿಯೂ ಕೊಹ್ಲಿ ಶೇರ್ ಮಾಡುವ ಫೋಟೋಗಳಲ್ಲಿ ರೋಹಿತ್ ಇರುತ್ತಾರೆ ಅಲ್ವಾ? ಆದರೆ ಈ ಬಾರಿ ಏಕೆ ರೋಹಿತ್ ಇಲ್ಲ ಎಂದು ಪ್ರಶ್ನಿಸಿದ್ದಾರೆ.

    ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ನಾಳೆ ನಡೆಯಲಿದೆ. ಪಂದ್ಯದಲ್ಲಿ ರೋಹಿತ್ ಶರ್ಮಾ, ಧವನ್ ಭಾರತದ ಪರ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದ್ದು, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ. ಬೌಲಿಂಗ್ ಪಡೆಯಲ್ಲಿ ಭುವನೇಶ್ವರ್ ಕುಮಾರ್, ರಾಹುಲ್ ಚಹರ್, ಕುಲ್ದೀಪ್ ಸೈನಿ, ಖಲೀಲ್ ಅಹ್ಮದ್ ಸ್ಥಾನ ಪಡೆಯುವ ಸಾಧ್ಯತೆ ಇದೆ.

  • ಅಭಿಮಾನಿಗಳಿಗೆ ಸಿಹಿ ಸುದ್ದಿ – ಮತ್ತೆ ನೋಡ್ಬಹುದು ಯುವಿ ಬ್ಯಾಟಿಂಗ್

    ಅಭಿಮಾನಿಗಳಿಗೆ ಸಿಹಿ ಸುದ್ದಿ – ಮತ್ತೆ ನೋಡ್ಬಹುದು ಯುವಿ ಬ್ಯಾಟಿಂಗ್

    ಮುಂಬೈ: ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದ ಯುವರಾಜ್ ಸಿಂಗ್ ಮತ್ತೆ ಬ್ಯಾಟಿಂಗ್ ನಡೆಸಲು ಸಿದ್ಧತೆ ನಡೆಸಿದ್ದು, ಕೆನಡಾ ಗ್ಲೋಬಲ್ ಟಿ20 ಟೂರ್ನಿಗೆ ಸಹಿ ಹಾಕಿದ್ದಾರೆ.

    ಟೂರ್ನಿಯ ಟೊರೆಂಟೊ ನ್ಯಾಷನಲ್ಸ್ ತಂಡದ ಪರ ಯುವರಾಜ್ ಆಡುವುದು ಖಚಿತವಾಗಿದ್ದು, ಬಿಸಿಸಿಐ ಕೂಡ ಯುವಿಗೆ ಅನುಮತಿಯನ್ನು ನೀಡಿದೆ. ಜುಲೈ 25 ರಿಂದ ಆರಂಭವಾಗುವ ಟೂರ್ನಿಯಲ್ಲಿ ಯುವರಾಜ್ ಭಾಗವಹಿಸುತ್ತಿದ್ದಾರೆ.

    ಈಗಾಗಲೇ ಟೂರ್ನಿಯಲ್ಲಿ ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ರುಸೆಲ್, ಸುನೀಲ್ ನರೇನ್, ಕ್ರಿಸ್ ಲೀನ್, ಡ್ವೇನ್ ಬ್ರಾವೋ, ಡುಪ್ಲೆಸಿಸ್, ಶಾಹಿದ್ ಆಫ್ರಿದಿ, ಶಕೀಬ್ ಹಲ್ ಹಸನ್ ಸೇರಿದಂತೆ ಹಲವು ಆಟಗಾರರು ಭಾಗವಹಿಸುತ್ತಿದ್ದಾರೆ. ಇವರಲ್ಲಿ ಬ್ರೆಂಡನ್ ಮೆಲಕಮ್ ಅವರು ಮಾತ್ರ ಟೊರೆಂಟೊ ನ್ಯಾಷನಲ್ಸ್ ಪರ ಆಡುತ್ತಿದ್ದಾರೆ.

    ಈ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸುತ್ತಿದ್ದು, 22 ಪಂದ್ಯಗಳು ಟೂರ್ನಿಯಲ್ಲಿ ನಡೆಯಲಿದೆ. ಜೂನ್ 10 ರಂದು ಯುವಿ ಅಂತರಾಷ್ಟ್ರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದರು. ಅಲ್ಲದೇ ಈ ವೇಳೆ ತಾವು ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು. ಇದರಂತೆ ಕೆನಡಾ ಟಿ20 ಲೀಗ್ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ರಾಷ್ಟ್ರೀಯ ತಂಡಕ್ಕೆ ಮರಳಲು ದ್ರಾವಿಡ್ ಕಾರಣ: ಕೆಎಲ್ ರಾಹುಲ್

    ರಾಷ್ಟ್ರೀಯ ತಂಡಕ್ಕೆ ಮರಳಲು ದ್ರಾವಿಡ್ ಕಾರಣ: ಕೆಎಲ್ ರಾಹುಲ್

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಆಟಗಾರರ ಕೆಎಲ್ ರಾಹುಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

    ತವರಿನ ಪಂದ್ಯದಲ್ಲಿ ಅರ್ಧ ಶತಕ ಸಿಡಿಸುವ ಅವಕಾಶ ಕಳೆದುಕೊಂಡರು ಸಹ ಬಿರುಸಿನ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದಾರೆ. ಇದೇ ವೇಳೆ ಕಾಫಿ ವಿತ್ ಕರಣ್ ಶೋ ವಿವಾದ ಬಳಿಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಕೋಚ್ ರಾಹುಲ್ ದ್ರಾವಿಡ್ ಕಾರಣ ಎಂದಿದ್ದಾರೆ.

    ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್, ಇದು ನನಗೆ ಬಹಳ ಕಠಿಣ ಸಮಯವಾಗಿತ್ತು. ಒಬ್ಬ ಆಟಗಾರನಾಗಿ ಕ್ರೀಡಾಂಗಣದಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಕೂಡ ಕಠಿಣ ಸಂದರ್ಭಗಳನ್ನು ಎದುರಿಸಿದ್ದೇನೆ. ಎಲ್ಲರಿಗೂ ಕಷ್ಟದ ದಿನಗಳು ಇದ್ದೇ ಇರುತ್ತೆ. ಈ ಅವಧಿಯಲ್ಲಿ ಆಟದ ಮೇಲೆ ಹೆಚ್ಚಿನ ಗಮನ ಹರಿಸಲು ಸಮಯ ಸಿಕ್ಕಿತ್ತು. ಎಲ್ಲರಂತೆ ನಾನು ಬಂದ ಸಂಗತಿಗಳನ್ನು ಸ್ವೀಕರಿಸಿದ್ದೇನೆ ಎಂದಿದ್ದಾರೆ.

    ನಾನು ಪಡೆದ ಅವಕಾಶಗಳಿಗೆ ಸೂಕ್ತ ನ್ಯಾಯ ನೀಡಲು, ಅವಕಾಶಗಳನ್ನು ಎಣಿಸುತ್ತಾ ತಲೆ ಕೆಳಗಿಳಿಸಿ ನನ್ನ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಹರಿಸಿದ್ದೆ. ‘ಎ’ ತಂಡದ ಪರ ಆಡಲು ನನಗೆ ಉತ್ತಮ ಅವಕಾಶ ಲಭ್ಯವಾಯಿತು. ಈ ವೇಳೆ ನನಗೆ ಟೀಂ ಇಂಡಿಯಾ ಶ್ರೇಷ್ಠ ಪುತ್ರರ ಪೈಕಿ ಒಬ್ಬರಾದ ದ್ರಾವಿಡ್ ಅವರ ಮಾರ್ಗದರ್ಶನ ಲಭಿಸಿತು. ಪರಿಣಾಮ ನನ್ನ ನ್ಯೂನತೆಗಳಿಂದ ಹೊರಬರಲು ಸಾಧ್ಯವಾಯಿತು ಎಂದಿದ್ದಾರೆ.

    ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಬ್ರೇಕ್ ಲಭ್ಯವಾದ ಕಾರಣ ಇಂಡಿಯಾ ಎ ಪರ ಆಡಲು ಅವಕಾಶ ಲಭಿಸಿತು. ಇಲ್ಲಿ ಆಟದ ಮೇಲಿನ ಒತ್ತಡ ಕಡಿಮೆ ಇರುವ ಕಾರಣ ನನ್ನ ಕೌಶಲ್ಯಗಳ ಬಗ್ಗೆ ಗಮನ ನೀಡಿಲು ಸಾಧ್ಯವಾಯಿತು. ಆದರಿಂದಲೇ ಸದ್ಯದ 2 ಪಂದ್ಯಗಳ ಪ್ರದರ್ಶನ ಉತ್ತಮವಾಗಿದೆ. ರಾಹುಲ್ ದ್ರಾವಿಡ್ ಅವರೊಂದಿಗೆ ಹೆಚ್ಚಿನ ಸಮಯ ಕಳೆದೆ. ಅವರೊಂದಿಗೆ ಹೆಚ್ಚು ಮಾತನಾಡಿದ್ದೇನೆ. ಇದೇ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲು ಕಾರಣವಾಯಿತು. ಮುಂದಿನ ದಿನಗಳಲ್ಲಿಯೂ ಉತ್ತಮ ಪ್ರದರ್ಶನವನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದರು.

    ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ರಾಹುಲ್, 2ನೇ ಪಂದ್ಯದಲ್ಲಿ 47 ರನ್ ಸಿಡಿಸಿ ಔಟಾಗಿದ್ದರು. ಇದರ ನಡುವೆಯೂ ತಂಡ ಸರಣಿ ಸೋಲುಂಡ ಪರಿಣಾಮ ಮುಂದಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕಮ್ ಬ್ಯಾಕ್ ಮಾಡುವ ವಿಶ್ವಾಸವನ್ನು ತಂಡ ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮ್ಯಾಕ್ಸ್ ವೆಲ್ ಅಬ್ಬರದ ಶತಕ – ಕೊಹ್ಲಿ ಪಡೆಗೆ ಸರಣಿ ಸೋಲಿನ ಮುಖಭಂಗ

    ಮ್ಯಾಕ್ಸ್ ವೆಲ್ ಅಬ್ಬರದ ಶತಕ – ಕೊಹ್ಲಿ ಪಡೆಗೆ ಸರಣಿ ಸೋಲಿನ ಮುಖಭಂಗ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ, ಆಸ್ಟ್ರೇಲಿಯಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಆಸೀಸ್ 7 ವಿಕೆಟ್ ಗೆಲುವು ಪಡೆದಿದ್ದು, ಈ ಮೂಲಕ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

    ಟೀಂ ಇಂಡಿಯಾ ನೀಡಿದ 191 ರನ್ ಗಳ ಗುರಿ ಬೆನ್ನಟ್ಟಿದ ಆಸೀಸ್ 2 ಎಸೆತ ಬಾಕಿ ಇರುವಂತೆಯೇ 194 ರನ್ ಸಿಡಿಸಿ ಜಯ ಪಡೆಯಿತು. ಆಸ್ಟ್ರೇಲಿಯಾ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಮ್ಯಾಕ್ಸ್ ವೆಲ್ ಶತಕ ಸಿಡಿಸಿ ಗೆಲುವಿನ ರೂವಾರಿಯಾದರು. 55 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್ ಸಿಡಿಸಿದ ಮ್ಯಾಕ್ಸ್ ವೆಲ್ ಅಜೇಯ 113 ರನ್ ಗಳಿಸಿದರು. ಉಳಿದಂತೆ ಆರಂಭಿಕ ಶಾರ್ಟ್ 40 ರನ್ ಹಾಗೂ ಹ್ಯಾಂಡ್ಸ್ ಕಂಬ್ 20 ರನ್ ಗಳಿಸಿ ಅಜೇಯರಾಗಿ ಉಳಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ಆರಂಭಿಕ ಜೋಡಿಯಾಗಿ ಕಣಕ್ಕೆ ಇಳಿದ ಧವನ್ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಕೇವಲ 26 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗು 3 ಬೌಂಡರಿಗಳ ಮೂಲಕ 47 ರನ್ ಗಳಿದ್ದ ವೇಳೆ ವೇಗಿ ನಾಥನ್ ಕೌಂಟರ್ ನೈಲ್ ಗೆ ವಿಕೆಟ್ ಒಪ್ಪಿಸಿದ್ದರು. ಪರಿಣಾಮ ಸರಣಿಯಲ್ಲಿ ಸತತ 2ನೇ ಅರ್ಧಶತಕ ಸಿಡಿಸುವ ಅವಕಾಶ ವಂಚಿತರಾದ್ರು.

    ರಾಹುಲ್ ಔಟಾಗುತ್ತಿದಂತೆ 14 ರನ್ ಗಳಿಸಿದ್ದ ಧವನ್ ಕೂಡ ವಿಕೆಟ್ ಒಪ್ಪಿಸಿದರು. ಇತ್ತ ಯುವ ಆಟಗಾರ ಪಂತ್ 1 ರನ್‍ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ರಾಹುಲ್ ಔಟಾಗುತ್ತಿದಂತೆ ಕಣಕ್ಕೆ ಇಳಿದ ನಾಯಕ ಕೊಹ್ಲಿ ಪಂದ್ಯದಲ್ಲಿ ತಮ್ಮ ಕ್ಲಾಸಿ ಪ್ರದರ್ಶನದ ಮೂಲಕ ಗಮನ ಸೆಳೆದರು. ಇತ್ತ ಧೋನಿ ಕೂಡ ಟೀಕೆಗಳಿಗೆ ಉತ್ತರಿಸುವಂತೆ ಬ್ಯಾಟ್ಸ್ ಬೀಸಿದರು. 23 ಎಸೆತಗಳನ್ನು ಎದುರಿಸಿದ ಧೋನಿ 3 ಬೌಂಡರಿ, 3 ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಔಟಾದರು. ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿದ ಧೋನಿ ಅಂತರಾಷ್ಟ್ರಿಯ ಕ್ರಿಕೆಟ್ ನಲ್ಲಿ 350 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದರು.

    ಇತ್ತ ನಾಯಕ ಕೊಹ್ಲಿ ಕೂಡ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿ ತಂಡದ ರನ್ ವೇಗವನ್ನು ಹೆಚ್ಚಿಸಿದರು. 38 ಎಸೆತಗಳಲ್ಲಿ 72 ಭರ್ಜರಿ 6 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿದ ಕೊಹ್ಲಿ 72 ರನ್ ಗಳಿಸಿ ಔಟಾಗದೆ ಉಳಿದರು. ಪರಿಣಾಮ ಭಾರತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರತ 190 ರನ್ ಗಳಿಸಿತು. ಪಂದ್ಯದಲ್ಲಿ 2 ಬೌಂಡರಿ ಸಿಡಿಸಿದ ವೇಳೆ ಕೊಹ್ಲಿ ಟಿ20 ಮಾದರಿಯಲ್ಲಿ ಒಟ್ಟಾರೆ 223 ಬೌಂಡರಿಗಳನ್ನು ಸಿಡಿಸಿದ ಸಾಧನೆ ಮಾಡಿ ಶ್ರೀಲಂಕಾದ ದಿಲ್ಶನ್ ದಾಖಲೆಯನ್ನು ಸರಿಗಟ್ಟಿದರು. 80 ಪಂದ್ಯಗಳಲ್ಲಿ ದಿಲ್ಶನ್ಲ್ 223 ಬೌಂಡರಿ ಸಿಡಿಸಿದ್ದರು. ಉಳಿದಂತೆ ಭಾರತದ ಪರ ಕೊಹ್ಲಿ ಮತ್ತು ರೋಹಿತ್ ಮಾತ್ರ 200ಪ್ಲಸ್ ಬೌಂಡರಿ ಸಿಡಿಸಿದ ಸಾಧನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv