Tag: ಟಿ20

  • ಭುವಿ ದಾಳಿಗೆ ಧೂಳಿಪಟವಾದ ಶ್ರೀಲಂಕಾ – ಭಾರತಕ್ಕೆ 38 ರನ್‍ಗಳ ಜಯ

    ಭುವಿ ದಾಳಿಗೆ ಧೂಳಿಪಟವಾದ ಶ್ರೀಲಂಕಾ – ಭಾರತಕ್ಕೆ 38 ರನ್‍ಗಳ ಜಯ

    ಕೊಲಂಬೋ: ಭುವನೇಶ್ವರ್ ಕುಮಾರ್ ದಾಳಿಗೆ ನಲುಗಿದ ಶ್ರೀಲಂಕಾ ತಂಡ ಮೊದಲ ಟಿ20 ಪಂದ್ಯದಲ್ಲಿ ಭಾರತದೆದುರು ಮಂಡಿಯೂರಿದೆ. ಭಾರತ ತಂಡ 38ರನ್‍ಗಳ ಭರ್ಜರಿ ಜಯ ದಾಖಲಿಸಿದೆ.

    ಶ್ರೀಲಂಕಾ ತಂಡಕ್ಕೆ ಮಾರಕವಾಗಿ ಎರಗಿದ ಭುವನೇಶ್ವರ್ ಕುಮಾರ್ 3.3 ಓವರ್ ಎಸೆದು 22 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಭುವಿ ಭಾರತಕ್ಕೆ 39ರನ್‍ಗಳ ಗೆಲುವು ತಂದು ಕೊಟ್ಟರು.

    ಗೆಲ್ಲಲು 165ರನ್‍ಗಳ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಚರಿತ್ ಅಸಲಂಕಾ 44ರನ್(26 ಎಸೆತ, 3 ಬೌಂಡರಿ, 3 ಸಿಕ್ಸ್), ಅವಿಷ್ಕಾ ಫರ್ನಾಂಡೊ 26ರನ್(23 ಎಸೆತ, 3 ಬೌಂಡರಿ), ದಾಸುನ್ ಶಾನಕಾ 16ರನ್(14 ಎಸೆತ, 1 ಸಿಕ್ಸ್) ಮಿನೋಡ್ ಭನುಕಾ 10ರನ್( 7 ಎಸೆತ, 2 ಬೌಂಡರಿ) ಬಾರಿಸಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‍ಮ್ಯಾನ್ ಕೂಡ ಒಂದಂಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ 18.3 ಓವರ್‍ಗಳಲ್ಲಿ 126 ರನ್‍ಗಳಿಗೆ ಶ್ರೀಲಂಕಾ ತಂಡ ಸರ್ವಪತನ ಕಂಡಿತು.

    ದೀಪಕ್ ಚಹರ್ 2 ವಿಕೆಟ್ ಕಿತ್ತರೆ, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಕಿತ್ತರು.

    ಪೈಪೋಟಿ ಮೊತ್ತ ಕಲೆಹಾಕಿದ ಭಾರತ
    ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಭಾರತ ತಂಡ ಖಾತೆ ತೆರೆಯುದರೊಳಗಡೆ ಆರಂಭಿಕ ಆಟಗಾರ ಪೃಥ್ವಿ ಶಾ ಅವರನ್ನು ಕಳೆದುಕೊಂಡಿತು. ಶಾ ತನ್ನ ಡೆಬ್ಯೂ ಪಂದ್ಯದಲ್ಲೇ ಶೂನ್ಯ ಸುತ್ತಿದ್ದರು. ಬಳಿಕ ಜೊತೆಯಾದ ಶಿಖರ್ ಧವನ್ ಮತ್ತು ಸಂಜು ಸ್ಯಾಮ್ಸನ್ ಎರಡನೇ ವಿಕೆಟ್ 51ರನ್ (36 ಎಸೆತ)ಗಳ ಜೊತೆಯಾಟವಾಡಿದರು. ಈ ವೇಳೆ ಎಲ್‍ಬಿ ಬಲೆಗೆ ಬಿದ್ದ ಸಂಜು ಸ್ಯಾಮ್ಸನ್ 27 ರನ್(20 ಎಸೆತ, 1 ಸಿಕ್ಸ್) ಸಿಡಿಸಿ, ಡಿ ಸಿಲ್ವಾ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟ್ ಬೀಸಿದರು. ಧವನ್ ಜೊತೆಗೂಡಿ 3 ವಿಕೆಟ್‍ಗೆ 62(48)ರನ್ ಗಳ ಜೊತೆಯಾಟವಾಡಿ ಈ ಜೋಡಿ ಭಾರತದ ಮೊತ್ತವನ್ನು ನೂರರ ಗಡಿದಾಟಿಸಿತು.

    ಇನ್ನೇನೂ ಅರ್ಧಶತಕದ ಹೊಸ್ತಿಲ್ಲಲ್ಲಿ ಎಡವಿದ ಧವನ್ 46ರನ್(36 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಇವರ ಹಿಂದೆಯೇ ಅರ್ಧಶತಕ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ 50 ರನ್(34 ಎಸೆತ, 5 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಕಳೆದುಕೊಂಡರು. ಕಡೆಯಲ್ಲಿ ಇಶಾನ್ ಕಿಶಾನ್ ಅಜೇಯ 20 ರನ್(14 ಎಸೆತ, 1 ಬೌಂಡರಿ, 1 ಸಿಕ್ಸ್) ಚಚ್ಚಿ ಭಾರತದ ಮೊತ್ತವನ್ನು 160ರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 164ರನ್ ಗಳಿಸಿತು.

    ಶ್ರೀಲಂಕಾ ಪರ ದುಷ್ಮಂತ ಚಮೀರ ಮತ್ತು ವಾನಿಂದು ಹಸರಂಗ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಚಮಿಕಾ ಕರುಣರತ್ನ 1 ವಿಕೆಟ್ ಪಡೆದರು.

  • ಫ್ಯಾಬಿಯನ್ ಅಲೆನ್ ಫ್ಯಾಬುಲಸ್ ಕ್ಯಾಚ್ – ಫಿಂಚ್‍ಗೆ ಪಂಚ್

    ಫ್ಯಾಬಿಯನ್ ಅಲೆನ್ ಫ್ಯಾಬುಲಸ್ ಕ್ಯಾಚ್ – ಫಿಂಚ್‍ಗೆ ಪಂಚ್

    ಸೈಂಟ್ ಲೂಸಿಯಾ: ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದಲ್ಲಿ ವಿಂಡೀಸ್ ತಂಡದ ಆಲ್‍ರೌಂಡರ್ ಫ್ಯಾಬಿಯನ್ ಅಲೆನ್ ಅದ್ಭುತವಾದ ಒಂದು ಕ್ಯಾಚ್ ಹಿಡಿಯುವ ಮೂಲಕ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಅವರಿಗೆ ಪಂಚ್ ನೀಡಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

    ವಿಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆರೋನ್ ಫಿಂಚ್, ಹೇಡನ್ ವಾಲ್ಷ್ ಹಾಕಿದ ಲೋ ಫುಲ್‍ಟಾಸ್ ಎಸೆತವನ್ನು ಲಾಂಗ್ ಆನ್ ಮೇಲೆ ಬಾರಿಸಲು ಯತ್ನಿಸಿದರು. ಈ ವೇಳೆ ಲಾಂಗ್ ಆನ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಲೆನ್ ಓಡಿ ಬಂದು ಡೈವ್ ಹೊಡೆದು ಅದ್ಭುತ ಕ್ಯಾಚ್ ಮೂಲಕ ಫಿಂಚ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಈ ಕ್ಯಾಚ್ ಕಂಡ ಅಭಿಮಾನಿಗಳು ಮತ್ತು ಸ್ವತಃ ಫಿಂಚ್ ಕೂಡ ಒಂದು ಕ್ಷಣ ದಂಗಾದರು.

    ಈ ಪಂದ್ಯದಲ್ಲಿ ವಿಂಡೀಸ್ 16 ರನ್‍ಗಳಿಂದ ಗೆದ್ದು ಐದು ಪಂದ್ಯಗಳ ಟಿ20 ಸರಣಿಯನ್ನು ಗೆದ್ದು 4-1ರಿಂದ ಗೆದ್ದು ಬೀಗಿದೆ.

    ಐದನೇ ಪಂದ್ಯದಲ್ಲಿ ಫ್ಯಾಬಿಯನ್ ಅಲೆನ್ ಹಿಡಿದ ಕ್ಯಾಚ್ ಬಳಿಕ ಸ್ವತಃ ಅವರೇ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಇದು ಹಕ್ಕಿಯಲ್ಲ, ವಿಮಾನವಲ್ಲ,  ಸೂಪರ್ ಮ್ಯಾನ್ ಕೂಡ ಅಲ್ಲ ನಿಮ್ಮ ಹುಡುಗ ಫ್ಯಾಬಿಯನ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಒಂದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ

     

    View this post on Instagram

     

    A post shared by WINDIES Cricket (@windiescricket)

    ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ಪರ ಫ್ಯಾಬಿಯನ್ ಅಲೆನ್ ಉತ್ತಮ ಪ್ರದರ್ಶನ ತೋರಿದ್ದು, ಈ ಮೂಲಕ ಮುಂದಿನ ಟಿ20 ವಿಶ್ವಕಪ್‍ಗೆ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಹೊಂದಿದ್ದಾರೆ.

  • ಟಿ20 ಕ್ರಿಕೆಟ್‍ನಲ್ಲಿ ಗೇಲ್ ವಿಶ್ವದಾಖಲೆ ಆಟ – ವಿಂಡೀಸಿಗೆ ಸರಣಿ

    ಟಿ20 ಕ್ರಿಕೆಟ್‍ನಲ್ಲಿ ಗೇಲ್ ವಿಶ್ವದಾಖಲೆ ಆಟ – ವಿಂಡೀಸಿಗೆ ಸರಣಿ

    ಸೈಂಟ್ ಲೂಸಿಯಾ: ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಟಿ20 ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟಿನಲ್ಲಿ 14 ಸಾವಿರ ರನ್‍ಗಳ ಗಡಿಯನ್ನು ದಾಟಿದ ವಿಶ್ವದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಗೇಲ್ ಪಾತ್ರವಾಗಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಜಂಪಾ ಎಸೆದ ಇನ್ನಿಂಗ್ಸ್ ನ  9ನೇ ಓವರ್ ನಲ್ಲಿ ಸಿಕ್ಸರ್ ಸಿಡಿಸಿ ಗೇಲ್ ಈ ದಾಖಲೆ ಬರೆದರು. ಮೂರನೇ ಟಿ20 ಪಂದ್ಯಕ್ಕೂ ಮೊದಲು ಗೇಲ್ 13,971 ರನ್ ಹೊಡೆದಿದ್ದರು.

    ಮೊದಲ ಎರಡು ಪಂದ್ಯದಲ್ಲಿ ಕ್ರಮವಾಗಿ 4, 13 ರನ್ ಹೊಡೆದಿದ್ದ ಗೇಲ್ ಮೂರನೇ ಪಂದ್ಯದಲ್ಲಿ 67 ರನ್(38 ಎಸೆತ, 4 ಬೌಂಡರಿ, 7 ಸಿಕ್ಸರ್) ಹೊಡೆದು ಔಟಾದರು.

    ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 141 ರನ್ ಹೊಡೆದರೆ ವಿಂಡೀಸ್ 14.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್‍ಗಳಿಸಿ ಜಯಗಳಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ದಾಖಲೆಯೊಂದಿಗೆ 67 ರನ್ ಸಿಡಿಸಿದ ಗೇಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದನ್ನೂ ಓದಿ : ಐಪಿಎಲ್‍ನಲ್ಲಿ ಸಿಕ್ಸರ್‌ಗಳ ದಾಖಲೆಯ ಒಡೆಯನಾದ ಕ್ರಿಸ್ ಗೇಲ್

    ಗೇಲ್ ನಂತರದ ಸ್ಥಾನವನ್ನು ವಿಂಡೀಸಿನ ಪೊಲಾರ್ಡ್(10,836 ರನ್), ಪಾಕಿಸ್ತಾನದ ಶೋಯೆಬ್ ಮಲ್ಲಿಕ್(10,074 ರನ್), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್(10,017 ರನ್), ವಿರಾಟ್ ಕೊಹ್ಲಿ(9,992 ರನ್) ಪಡೆದಿದ್ದಾರೆ.

    2013ರಲ್ಲಿ ನಡೆದ ಐಪಿಎಲ್‍ಲ್ಲಿ ಗೇಲ್ ಆರ್‌ಸಿಬಿ ಪರ ಆಡಿ ಪುಣೆ ವಾರಿಯರ್ಸ್ ವಿರುದ್ಧ ಔಟಾಗದೇ 175 ರನ್ ಹೊಡೆದಿದ್ದರು. ಇದು ಟಿ20ಯಲ್ಲಿ ಗೇಲ್ ಅವರ ಅತ್ಯಧಿಕ ಮೊತ್ತವಾಗಿದೆ.

    ಗೇಲ್ ಒಟ್ಟು 431 ಟಿ20 ಪಂದ್ಯಗಳಿಂದ 14,038 ರನ್ ಚಚ್ಚಿದ್ದಾರೆ. 37.63 ಸರಾಸರಿ, 146.18 ಸ್ಟ್ರೈಕ್ ರೇಟ್ ನೊಂದಿಗೆ 22 ಶತಕ, 87 ಅರ್ಧಶತಕ ಹೊಡೆದಿದ್ದಾರೆ. 1083 ಬೌಂಡರಿ, 1028 ಸಿಕ್ಸರ್ ಸಿಡಿಸಿದ್ದಾರೆ.

  • ಐಪಿಎಲ್ ಬಳಿಕ ಯುಎಇನಲ್ಲಿ ಟಿ20 ವಿಶ್ವಕಪ್ ಫಿಕ್ಸ್?

    ಐಪಿಎಲ್ ಬಳಿಕ ಯುಎಇನಲ್ಲಿ ಟಿ20 ವಿಶ್ವಕಪ್ ಫಿಕ್ಸ್?

    ದುಬೈ: ಕೊರೊನಾದಿಂದಾಗಿ ಮುಂದೂಡಲ್ಪಟ್ಟ ಐಪಿಎಲ್‍ನ ಎರಡನೇ ಭಾಗವನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್‍ನಲ್ಲಿ ಯುಎಇನಲ್ಲಿ ನಡೆಸಲು ಈಗಾಗಲೇ ಬಿಸಿಸಿಐ ತೀರ್ಮಾನಿಸಿದೆ. ಇದಾದ ಬಳಿಕ ಅಕ್ಟೋಬರ್ 17 ರಿಂದ ಇಲ್ಲೇ ಟಿ20 ವಿಶ್ವಕಪ್‍ನ್ನು ಕೂಡ ನಡೆಸಲು ದಿನಾಂಕ ನಿಗದಿಯಾಗಿದೆ ಎಂದು ವರದಿಯಾಗಿದೆ.

    2021ರ ಟಿ20 ವಿಶ್ವಕಪ್‍ನ್ನು ಭಾರತದಲ್ಲೇ ನಡೆಸಬೇಕೆಂದು ಬಿಸಿಸಿಐ ಶತಪ್ರಯತ್ನ ನಡೆಸುತ್ತಿತ್ತು. ಆದರೆ ಕೊರೊನಾದಿಂದಾಗಿ ಭಾರತದಲ್ಲಿ ಟಿ20 ವಿಶ್ವಕಪ್ ನಡೆಸಲು ಕಷ್ಟವಾಗಿರುವುದರಿಂದಾಗಿ ಇದೀಗ ಪಂದ್ಯಗಳು ಯುಎಇಗೆ ಶಿಫ್ಟ್ ಆಗಿದೆ. ಮೂಲಗಳ ಪ್ರಕಾರ ಪಂದ್ಯಗಳ ಆರಂಭ ಮತ್ತು ಫೈನಲ್‍ನ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 17 ರಂದು ಪ್ರಾರಂಭಗೊಂಡು ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯುವ ಸಾಧ್ಯತೆಗಳಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

    ಈ ಕುರಿತು ಬಿಸಿಸಿಐನಿಂದ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಈ ಹಿಂದೆ ಭಾರತದಲ್ಲಿ ಅಕ್ಟೋಬರ್ ಸಮಯ ಮಳೆಗಾಲವಾಗಿರುವುದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ ಇದೀಗ ಇದೇ ದಿನಾಂಕದಂದು ಯುಎಇ ಮತ್ತು ಓಮನ್‍ನಲ್ಲಿ ಟಿ20 ಪಂದ್ಯಗಳು ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಒಟ್ಟು 16 ತಂಡಗಳು ಭಾಗವಹಿಸುವ ಈ ಟಿ20 ಕೂಟದ ಮೊದಲ 12 ಪಂದ್ಯಗಳು ಯುಎಇ ಮತ್ತು ಮುಂದಿನ ಪಂದ್ಯಗಳು ಓಮನ್‍ನಲ್ಲಿ ನಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  • 2007ರ ಟಿ20ಗೆ ನಾನು ನಾಯಕನಾಗುವ ನಿರೀಕ್ಷೆ ಹೊಂದಿದ್ದೆ, ಆದರೆ ಧೋನಿ ಆಯ್ಕೆಯಾದ್ರು – ಯುವಿ

    2007ರ ಟಿ20ಗೆ ನಾನು ನಾಯಕನಾಗುವ ನಿರೀಕ್ಷೆ ಹೊಂದಿದ್ದೆ, ಆದರೆ ಧೋನಿ ಆಯ್ಕೆಯಾದ್ರು – ಯುವಿ

    ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಇತಿಹಾಸ. ಆದರೆ ಈ ಟೂರ್ನಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶನ ನೀಡಿದ್ದ ಯುವರಾಜ್ ಸಿಂಗ್ ಟೀಂ ಇಂಡಿಯಾ ನಾಯಕನಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ವಿಚಾರ ಈಗ ಬಯಲಾಗಿದೆ.

    ಏಕದಿನ ಕ್ರಿಕೆಟ್‍ನಲ್ಲಿ ಮಿಂಚುತ್ತಿದ್ದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಜಹೀರ್ ಖಾನ್ ಸೇರಿದಂತೆ ಭಾರತದ ಹಿರಿಯ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಟಿ20ಗೆ ಮುನ್ನಡೆಸುವವರು ಯಾರು ಎಂಬ ಚರ್ಚೆ ನಡೆದಿತ್ತು. ಈ ವೇಳೆ ನನಗೆ ನಾಯಕನ ಪಟ್ಟ ಸಿಗಬಹುದು ಎಂಬ ನಿರೀಕ್ಷೆಯನ್ನು ನಾನು ಇಟ್ಟುಕೊಂಡಿದ್ದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ‘ಯುವಿ ಬೆನ್ನಿಗೆ ಧೋನಿ, ಕೊಹ್ಲಿ ಚೂರಿ ಹಾಕಿದ್ದರು’- ಯುವರಾಜ್ ಸಿಂಗ್ ತಂದೆ ಆರೋಪ

    ಈ ಬಗ್ಗೆ ಮಾತನಾಡಿದ ಯುವಿ, ಭಾರತವು 50 ಓವರ್ ಗಳ ವಿಶ್ವಕಪ್ ಅನ್ನು ಕಳೆದುಕೊಂಡಿತ್ತು. ಅಲ್ಲದೇ ಎರಡು ತಿಂಗಳ ಇಂಗ್ಲೆಂಡ್ ಪ್ರವಾಸವಿತ್ತು. ಬಳಿಕ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ನಡುವೆ ಒಂದು ತಿಂಗಳ ಪ್ರವಾಸವೂ ಇತ್ತು. ತದನಂತರ ಒಂದು ತಿಂಗಳು ಟಿ 20 ವಿಶ್ವಕಪ್ ನಿಗದಿಯಾಗಿತ್ತು. 4 ತಿಂಗಳ ಕಾಲ ಮನೆಯಿಂದ ದೂರ ಇದ್ದ ಹಿನ್ನೆಲೆಯಲ್ಲಿ ಹಿರಿಯ ಆಟಗಾರರು ವಿರಾಮ ಪಡೆಯಲು ಬಯಸಿದ್ದರು ಮತ್ತು ಯಾರೂ ಟಿ 20ಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಸಂದರ್ಭದಲ್ಲಿ ಟಿ20 ವಿಶ್ವಕಪ್‍ಗೆ ನನ್ನನ್ನು ಭಾರತದ ತಂಡದ ನಾಯಕನನ್ನಾಗಿ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಎಂಎಸ್ ಧೋನಿ ಅವರನ್ನು ನಾಯಕನಾಗಿ ಘೋಷಿಸಲಾಯಿತು ಎಂದು ತಿಳಿಸಿದರು.

    ನಾಯಕನಾಗಿ ಆಯ್ಕೆಯಾದ ನಂತರ ನನ್ನ ಮತ್ತು ಧೋನಿ ನಡುವಿನ ಸಂಬಂಧದ ಬಗ್ಗೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಅವರು, ನಾನು ಯಾವಾಗಲೂ ನಾಯಕನ ಹಿಂದೆ ಇರುತ್ತೇನೆ ಎಂದು ಹೇಳಿದರು.

    2007ರ ವಿಶ್ವಕಪ್ ಬಳಿಕ ಭಾರತ ಯುವ ತಂಡವಾಗಿದೆ. ಆ ವೇಳೆ ಲಾಲ್‍ಚಂದ್ ರಜಪೂತ್ ನಮ್ಮ ಕೋಚ್ ಆಗಿದ್ದರು ಮತ್ತು ವೆಂಕಟೇಶ್ ಪ್ರಸಾದ್ ನಮ್ಮ ಬೌಲಿಂಗ್ ಕೋಚ್ ಆಗಿದ್ದರು. ಯುವ ನಾಯಕ ಮುನ್ನಡೆಸುತ್ತಿದ್ದ ಯುವ ತಂಡವಾಗಿತ್ತು. ಈ ಟೂರ್ನಿ ವೇಳೆ ನಮ್ಮ ಬಳಿ ಹೆಚ್ಚಿನ ತಂತ್ರಗಾರಿಕೆ ಇತ್ತು ಎಂದು ನಾನು ಭಾವಿಸುವುದಿಲ್ಲ. ಟಿ20 ತಂತ್ರಗಳ ಬಗ್ಗೆ ಯಾರಿಗೂ ಸುಳಿವು ಇರಲಿಲ್ಲ. ಯಾಕೆಂದರೆ ಇದು ಮೊದಲ ಪಂದ್ಯಾವಳಿ ಆಗಿತ್ತು. ಹೀಗಾಗಿ ನಾವು ನಮಗೆ ತಿಳಿದ ರೀತಿಯಲ್ಲಿ ಹೋಗಿ ಆಡಲು ಮುಂದಾದೆವು ಎಂದು ಅಂದಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ಈ ವಿಶ್ವಕಪ್‍ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ ಓವರಿನ 6 ಎಸೆತಗಳನ್ನು ಯುವರಾಜ್ ಸಿಕ್ಸರ್ ಗೆ ಅಟ್ಟಿ ವಿಶ್ವದಾಖಲೆ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಯುವರಾಜ್ 16 ಎಸೆತಗಳಲ್ಲಿ 58 ರನ್ ಚಚ್ಚಿದ್ದರು. ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಯುವಿ 30 ಎಸೆತಗಳಲ್ಲಿ 70 ರನ್ ಹೊಡೆದಿದ್ದರು. 5 ಬೌಂಡರಿ, 5 ಸಿಕ್ಸರ್ ಸಿಡಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದರು. ಈ ಆಟಕ್ಕೆ ಪಂದ್ಯಶ್ರೇಷ್ಠ ಗೌರವವನ್ನು ಯುವಿ ಪಡೆದಿದ್ದರು. ಇದನ್ನೂ ಓದಿ: ಬ್ರಾಡಿ, ಓ ನನ್ನ ಗೆಳೆಯ ನೀನೊಂದು ದಂತಕಥೆ: ಯುವರಾಜ್ ಸಿಂಗ್

  • ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್

    ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್

    ಮುಂಬೈ: ಭಾರತ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಿದ್ದಾರೆ.

    ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸೂರ್ಯಕುಮಾರ್ ಯಾದವ್ ಅವರಿಗೆ, ನಿಮ್ಮ ನೆಚ್ಚಿನ ಶಾಟ್ ಯಾವುದು? ನೀವಾಡಿದ ಬೆಸ್ಟ್ ಇನ್ನಿಂಗ್ಸ್ ಯಾವುದು? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ ಬಳಿಕ ಧೋನಿ ಮತ್ತು ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಉತ್ತರಿಸಿ ಎಂದಿದ್ದಾರೆ. ಇದಕ್ಕೆ ಸೂರ್ಯಕುಮಾರ್ ಯಾದವ್, ಧೋನಿ ಎಂದರೆ ಲೆಜೆಂಡ್ ಮತ್ತು ಕೊಹ್ಲಿ ಎಂದರೆ ಸ್ಫೂರ್ತಿಯೆಂದು ತಿಳಿಸಿದ್ದಾರೆ.

    ಇದಾದ ಬಳಿಕ ಐಪಿಎಲ್‍ನಲ್ಲಿ ಒಂದೇ ತಂಡದ ಪರ ಆಡುವ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಪರ ಕೇಳಿದ ಪ್ರಶ್ನೆಗೆ ರೋಹಿತ್ ಎಂದರೆ ಹಿಟ್‍ಮ್ಯಾನ್ ಎಂದು ವಿವರಿಸಿದ್ದಾರೆ. ಇದರೊಂದಿಗೆ ನನ್ನ ಜೀವನದ ಬೆಸ್ಟ್ ಇನ್ನಿಂಗ್ಸ್ ಎಂದರೆ ಅದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿರುವುದು ಎಂದು ಉತ್ತರಿಸಿದ್ದಾರೆ.

    ಸೂರ್ಯಕುಮಾರ್ ಯಾದವ್ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಅಬ್ಬರಿಸಿ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿದ್ದರು. ಈ ವರ್ಷದ ಆರಂಭದಲ್ಲಿ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಭಾರತದ ಪರ ಕಣಕ್ಕಿಳಿದಿದ್ದರು. ಈ ಸರಣಿಯಲ್ಲಿ ಆಡಿದ 3 ಪಂದ್ಯಗಳಿಂದ 89 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದರು.

  • ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ-ದಕ್ಷಿಣ ಆಫ್ರಿಕಾ ತಂಡದಲ್ಲಿ ಎಬಿಡಿ?

    ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ-ದಕ್ಷಿಣ ಆಫ್ರಿಕಾ ತಂಡದಲ್ಲಿ ಎಬಿಡಿ?

    ಜೋಹಾನ್ಸ್ ಬರ್ಗ್: ಮಿಸ್ಟರ್ 360 ಖ್ಯಾತಿಯ ಎಬಿಡಿ ವಿಲಿಯರ್ಸ್ ಮರಳಿ ದಕ್ಷಿಣ ಆಫ್ರಿಕಾ ತಂಡ ಸೇರಲು ವೇದಿಕೆ ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯಲ್ಲಿ ಎಬಿಡಿ ಕಾಣಿಸಿಕೊಳ್ಳುವ ಬಗ್ಗೆ ಆಫ್ರಿಕಾ ತಂಡದ ನಿರ್ದೇಶಕ ಗ್ರೇಮ್ ಸ್ಮಿತ್ ಸುಳಿವೊಂದನ್ನು ನೀಡಿದ್ದಾರೆ.

    ಎಬಿಡಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಮೂರು ವರ್ಷಗಳು ಕಳೆದಿದೆ. 2018ರಲ್ಲಿ ವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ನಂತರ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಫ್ರಾಂಚೈಸಿ ಟಿ20 ಲೀಗ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತಿಚೇಗೆ ಭಾರತದಲ್ಲಿ ಕೊರೊನಾದಿಂದಾಗಿ ಮೂಂದುಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಕೂಡ ಎಬಿಡಿ ಆರ್​ಸಿಬಿ ತಂಡದ ಪರ ಬ್ಯಾಟ್‍ಬೀಸಿದ್ದರು. ಆರ್​ಸಿಬಿ ಪರ ಒಟ್ಟು 7 ಪಂದ್ಯಗಳಿಂದ 207 ರನ್ ಗಳಿಸಿದ್ದರು. ಈ ಎಲ್ಲಾ ಪ್ರದರ್ಶನವನ್ನು ಗಮನಿಸಿ ವಿಲಿಯರ್ಸ್ ಅವರನ್ನು ಮರಳಿ ಆಫ್ರಿಕಾ ತಂಡದಲ್ಲಿ ಸೇರಿಸಿಕೊಳ್ಳಲು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಿರ್ಧಾರ ಮಾಡಿದೆ.

    ಈ ಮೊದಲು 2021 ಟಿ20 ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಪುನಾರಾಗಮನ ಮಾಡುವ ನಿರೀಕ್ಷೆ ಇತ್ತು. ಆದರೆ ಇದೀಗ ಈ ಮೊದಲೇ ಎಬಿಡಿ ಆಫ್ರಿಕಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ವದಂತಿ ಹರಿದಾಡುತ್ತಿದೆ. ಐಪಿಎಲ್‍ಗೂ ಮುಂಚೆ ವಿಲಿಯರ್ಸ್ ಜೊತೆ ಮಾತನಾಡಿರುವ ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಷರ್, ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿ ನಿಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿ. ನಂತರ ಮುಂದೆ ರಾಷ್ಟ್ರೀಯ ತಂಡದಲ್ಲಿನ ಬಾಗಿಲು ತಾನಾಗಿಯೇ ತೆರೆಯಲಿದೆ. ಎಂದು ಮತ್ತೆ ಪುನರಾಗಮನದ ಕುರಿತು ಸಣ್ಣ ಸುಳಿವೊಂದನ್ನು ನೀಡಿದ್ದರು.

    ಆ ಬಳಿಕ ಇದೀಗ ಕ್ರಿಕಟ್ ದಕ್ಷಿಣ ಆಫ್ರಿಕಾದ ಡೈರೆಕ್ಟರ್ ಆಗಿರುವ ಮಾಜಿ ಆಟಗಾರ ಗ್ರೇಮ್ ಸ್ಮಿತ್, ಎಬಿಡಿ ಪುನಾರಾಗಮನದ ಸುಳಿವು ನೀಡಿದ್ದು, ಮುಂದೆ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ಯಾಪ್ಟನ್ ಎಬಿಡಿ ಸಹಿತ ಇಮ್ರಾನ್ ತಾಹೀರ್, ಕ್ರೀಸ್ ಮೋರಿಸ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಇದರಿಂದಾಗಿ ಆಫ್ರಿಕಾ ತಂಡ ಬಲಿಷ್ಠಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕೆರಿಬಿಯನ್ ಕ್ರಿಕೆಟ್ ಪಾಡ್‍ಕ್ಯಾಸ್ಟ್, ಕ್ರಿಕೆಟ್ ದಕ್ಷಿಣ ಆಫ್ರಿಕಾದ ಡೈರೆಕ್ಟರ್ ಗ್ರೇಮ್ ಸ್ಮಿತ್ ತಿಳಿಸಿರುವಂತೆ ದಕ್ಷಿಣ ಆಫ್ರಿಕಾ ತಂಡ ಜೂನ್‍ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಆಫ್ರಿಕಾ ಟಿ20 ತಂಡದಲ್ಲಿ ಎಬಿಡಿ ವಿಲಿಯರ್ಸ್, ಇಮ್ರಾನ್ ತಾಹೀರ್ ಮತ್ತು ಕ್ರೀಸ್ ಮೋರಿಸ್ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಬರೆದುಕೊಂಡಿದೆ.

    ಎಬಿಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾ ಪರ ಒಟ್ಟು 78 ಟಿ20 ಪಂದ್ಯಗಳನ್ನು ಆಡಿದ್ದು, 135.17 ಸ್ಟ್ರೇಕ್ ರೇಟ್‍ನಲ್ಲಿ 10 ಅರ್ಧಶತಕ ಸಹಿತ 1672 ರನ್ ಗಳಿಸಿದ್ದಾರೆ.

  • ವಿರಾಟ್ ದಾಖಲೆ ಮುರಿದ ಕೆ.ಎಲ್ ರಾಹುಲ್

    ವಿರಾಟ್ ದಾಖಲೆ ಮುರಿದ ಕೆ.ಎಲ್ ರಾಹುಲ್

    ಚೆನ್ನೈ: ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ ಮ್ಯಾನ್ ಪಂಜಾಬ್ ತಂಡದ ನಾಯಕ ಕೆ.ಎಲ್ ರಾಹುಲ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ವೇಗವಾಗಿ 5 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.

    ಭಾರತದಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಪಂಜಾಬ್ ತಂಡದ ನಾಯಕನಾಗಿರುವ ಕೆ.ಎಲ್ ರಾಹುಲ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ರಾಹುಲ್ ಈ ಸಾಧನೆಗಾಗಿ 143 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡರೆ, ಕೊಹ್ಲಿ 5000 ರನ್‍ಗಾಗಿ 167 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಇದನ್ನು ಗಮನಿಸಿದಾಗ ರಾಹುಲ್, ವಿರಾಟ್‍ಗಿಂತ ವೇಗವಾಗಿ ರನ್ ಶಿಖರವನ್ನು ಕಟ್ಟುತ್ತಿದ್ದಾರೆ.

    ರಾಹುಲ್‍ಗಿಂತ ಮೊದಲು ವಿಶ್ವ ಕ್ರಿಕೆಟ್‍ನಲ್ಲಿ ವೇಗವಾಗಿ 5000 ರನ್‍ಗಳಿಸಿದವರ ಪಟ್ಟಿಯಲ್ಲಿ ಪಂಜಾಬ್ ತಂಡದ ಆಟಗಾರ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರೀಸ್ ಗೇಲ್ ಕೇವಲ 132 ಪಂದ್ಯಗಳಲ್ಲಿ 5000 ರನ್ ಪೂರೈಸಿದರೆ ನಂತರದ ಸ್ಥಾನ ಇದೀಗ ರಾಹುಲ್ ಪಾಲಾಗಿದೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಶೇನ್ ಮಾರ್ಷ್ 144 ಇನ್ನಿಂಗ್ಸ್ ನಲ್ಲಿ 5000 ಸಾವಿರ ರನ್ ಸಿಡಿಸಿದರೆ, ನಂತರದ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಅಜಂ ಇದ್ದು ಇವರು 5000 ರನ್‍ಗಾಗಿ 145 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ನಂತರ ಈ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿರುವ ಆಸ್ಟ್ರೇಲಿಯಾದ ಆರೋನ್ ಫಿಂಚ್ 159 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.

    ಟಿ20 ಕ್ರಿಕೆಟ್‍ನಲ್ಲಿ ವೇಗವಾಗಿ 5ಸಾವಿರ ರನ್ ಬಾರಿಸಿರುವ ಭಾರತೀಯ ಆಟಗಾರರ ಬಗ್ಗೆ ಗಮನಿಸಿದಾಗ ಕೆ.ಎಲ್ ರಾಹುಲ್ ಮೊದಲಿಗರಾಗಿ ಕಾಣಿಸಿಕೊಳ್ಳುತ್ತಿದ್ದು, ಇವರು 5000 ರನ್‍ಗಾಗಿ 143 ಇನ್ನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ 167 ಇನ್ನಿಂಗ್ಸ್ ಮತ್ತು ಚೆನ್ನೈ ತಂಡದ ಆಟಗಾರ ಸುರೇಶ್ ರೈನಾ 173 ಇನ್ನಿಂಗ್ಸ್ ಗಳಲ್ಲಿ 5000 ರನ್ ಪೂರೈಸಿದ್ದಾರೆ.

    ರಾಹುಲ್ ಕೇವಲ ಐಪಿಎಲ್‍ನಲ್ಲಿ 2808 ರನ್ ಗಳಿಸಿದ್ದಾರೆ. ಅದೇ ರೀತಿ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ರಾಹುಲ್ ಈಗಾಗಲೇ 4 ಪಂದ್ಯಗಳಿಂದ 161 ರನ್ ಕಲೆಹಾಕಿ ಪಂಜಾಬ್ ಪರ ಬ್ಯಾಟಿಂಗ್‍ನಲ್ಲಿ ಮಿಂಚುತ್ತಿದ್ದಾರೆ.

  • 8 ವರ್ಷದ ಬಳಿಕ ಭಾರತ, ಪಾಕ್ ನಡುವೆ ಕ್ರಿಕೆಟ್ ಸರಣಿ ?

    8 ವರ್ಷದ ಬಳಿಕ ಭಾರತ, ಪಾಕ್ ನಡುವೆ ಕ್ರಿಕೆಟ್ ಸರಣಿ ?

    ನವದೆಹಲಿ: ಕ್ರಿಕೆಟ್‍ನಲ್ಲಿ ಬದ್ಧವೈರಿಗಳಾಗಿ ಗುರುತಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು 8 ವರ್ಷಗಳ ಬಳಿಕ ಮತ್ತೆ ಎದುರುಬದುರಾಗುವ ನೀರಿಕ್ಷೆ ಇದೆ. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತದೊಂದಿಗೆ ಮಾತುಕತೆ ನಡೆಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಕಾಶ್ಮೀರ ಗಡಿ ವಿಚಾರವಾಗಿ ಮತ್ತು ಇತರ ಸಮಸ್ಯಗಳಿಂದಾಗಿ ಸಂಬಂಧ ಕಡಿತಗೊಂಡಿತು. ಹಾಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಸರಣಿಯು ಕೂಡ ನಡೆಯುತ್ತಿರಲಿಲ್ಲ.

    ಭಾರತ ಹಾಗೂ ಪಾಕಿಸ್ತಾನ ನಡುವೆ 8 ವರ್ಷಗಳ ಹಿಂದೆ 2012-2013 ರಲ್ಲಿ ಕ್ರಿಕೆಟ್ ಸರಣಿಯ ಬಳಿಕ ಈ ವರೆಗೆ ಈ ಎರಡು ದೇಶಗಳು ದ್ವಿಪಕ್ಷೀಯ ಸರಣಿ ಆಡಿಲ್ಲ. ಈ ಎರಡು ತಂಡಗಳು ಐಸಿಸಿ ಏರ್ಪಡಿಸುವ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದವು. ಆದರೆ ಇದೀಗ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ರಾಜತಾಂತ್ರಿಕ ಸಮಸ್ಯೆ ಬಗ್ಗೆ ಎರಡು ದೇಶಗಳು ಮಾತುಕತೆ ನಡೆಸಿದ ಬೆನ್ನಲೇ ಕ್ರಿಕೆಟ್ ಸರಣಿ ಆಯೋಜಿಸುವ ಕುರಿತು ನಿರ್ಧರಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ.

    ಪಾಕಿಸ್ತಾನದ ಮಾಧ್ಯಗಳ ವರದಿ ಪ್ರಕಾರ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗಿಂತ ಮೊದಲು ಭಾರತ ಹಾಗೂ ಪಾಕಿಸ್ತಾನ ನಡುವೆ ಚುಟುಕು ಕ್ರಿಕೆಟ್ ಸರಣಿ ನಡೆಸಲು ಚಿಂತನೆ ನಡೆದಿದ್ದು, ಪಾಕಿಸ್ತಾನ ಸರ್ಕಾರ, ಪಿಸಿಬಿಗೆ ತಂಡವನ್ನು ರಚಿಸಿ ತಯಾರಿ ನಡೆಸಲು ಅಧಿಕಾರಿ ವರ್ಗಕ್ಕೆ ತಿಳಿಸಿದೆ ಎಂದು ವರದಿಯಾಗಿದೆ.

    ಈ ಕುರಿತು ಪಿಸಿಬಿ ಅಧ್ಯಕ್ಷರಾದ ಎಹ್ಸಾನ್ ಮಣಿ ಪ್ರತಿಕ್ರಿಯಿಸಿದ್ದು, ಬಿಸಿಸಿಐನ ಯಾವುದೇ ಅಧಿಕಾರಿಗಳು ಕ್ರಿಕೆಟ್ ಸರಣಿ ಬಗ್ಗೆ ನಮ್ಮ ಜೊತೆ ಮಾತುಕತೆ ನಡೆಸಿಲ್ಲ ಎಂದಿದ್ದಾರೆ. ಅದರೆ ಮೂಲಗಳ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ನಡೆಯುವುದು ಖಚಿತ ಎಂದು ಸುದ್ದಿ ಬಿತ್ತರವಾಗುತ್ತಿದೆ.

    ಈ ಎಲ್ಲಾ ಆಗುಹೋಗುಗಳ ನಡುವೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಜಯದ ಬಳಿಕ ನಾವು ಟಿ20 ವಿಶ್ವಕಪ್‍ಗೂ ಮುನ್ನ ಹಲವು ಟಿ20 ಪಂದ್ಯಗಳನ್ನು ಆಡಲಿದ್ದೇವೆಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ಭಾರತ ಹಾಗೂ ಪಾಕಿಸ್ತಾನ ಸರಣಿಗೆ ಪುಷ್ಟಿ ಕೊಡುವಂತಿದೆ.

    ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಸರಣಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಿಲಿದ್ಯಾ ಅಥವಾ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸುತ್ತಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

  • ಭಾರತ, ಇಂಗ್ಲೆಂಡ್ ನಡುವಿನ ಮೊದಲ ಟಿ-20 ವೀಕ್ಷಿಸಿದ 28 ವಿದ್ಯಾರ್ಥಿಗಳಿಗೆ ಕೊರೊನಾ

    ಭಾರತ, ಇಂಗ್ಲೆಂಡ್ ನಡುವಿನ ಮೊದಲ ಟಿ-20 ವೀಕ್ಷಿಸಿದ 28 ವಿದ್ಯಾರ್ಥಿಗಳಿಗೆ ಕೊರೊನಾ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯವನ್ನು ನರೇಂದ್ರ ಮೋದಿ ಸ್ಟೇಡಿಯಂಗೆ ತೆರಳಿ ವೀಕ್ಷಿಸಿದ್ದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ಕ್ಯಾಂಪಸ್‍ನ 28 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ.

    ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ-20 ಸರಣಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು. ಮೊದಲ ಎರಡು ಟಿ-20 ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದ್ದ ಗುಜಾರಾತ್ ಕ್ರಿಕೆಟ್ ಅಸೋಸಿಯೇಷನ್ ನಂತರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಕಾರಣ ಉಳಿದ ಮೂರು ಪಂದ್ಯಗಳಿಗೆ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿತ್ತು. ಮೊದಲ ಪಂದ್ಯವನ್ನು ಸ್ಟೇಡಿಯಂಗೆ ತೆರಳಿ ವೀಕ್ಷಿಸಿದ್ದ, ಐಐಎಂಎ ಕ್ಯಾಂಪಸ್‍ನ 5 ವಿದ್ಯಾರ್ಥಿಗಳಲ್ಲಿ ಮೊದಲು ಕೊರೊನಾ ದೃಢಪಟ್ಟ ಹಿನ್ನೆಲೆ ಉಳಿದ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿದಾಗ ಒಟ್ಟು 28 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ.

    ಈಗಾಗಲೇ ಕಾಲೇಜು ಕ್ಯಾಂಪಸ್‍ನ ಬಹುತೇಕ ಎಲ್ಲರನ್ನು ಪರೀಕ್ಷೆಗೊಳಪಡಿಸಲಾಗಿದ್ದು ಉಳಿದವರ ವರದಿ ಇನ್ನಷ್ಟೇ ಬರಬೇಕಾಗಿದೆ ಎಂದು ಕಾಲೇಜಿನ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.