Tag: ಟಿ.ಬಿ.ಜಯಚಂದ್ರ

  • ‘ಮನೆ ಮನೆಗೆ ಕಾಂಗ್ರೆಸ್’ಗೆ ಬಂದ ‘ಕೈ’ ಸಚಿವರಿಗೆ ಜನರ ಫುಲ್ ಕ್ಲಾಸ್!

    ‘ಮನೆ ಮನೆಗೆ ಕಾಂಗ್ರೆಸ್’ಗೆ ಬಂದ ‘ಕೈ’ ಸಚಿವರಿಗೆ ಜನರ ಫುಲ್ ಕ್ಲಾಸ್!

    ತುಮಕೂರು: ಮನೆ ಮನೆಗೆ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮಕ್ಕೆ ಹೊರಟ ಹಾಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಸ್ವಕ್ಷೇತ್ರದಲ್ಲಿ ಸಾರ್ವಜನಿಕರು ಸಚಿವರನ್ನೇ ತರಾಟೆ ತೆಗೆದುಕೊಂಡಿದ್ದಾರೆ.

    ಶಿರಾ ತಾಲ್ಲೂಕಿನ ಚಿರತಹಳ್ಳಿ ಗ್ರಾಮಸ್ಥರು ಅಭಿವೃದ್ಧಿ ಕೆಲಸ ಮಾಡದ ಸಚಿವರ ವಿರುದ್ಧ ಸಚಿವರ ಕಾರಿಗೆ ಘೆರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಕ್ಕೆ ಆಗಮಿಸಿದ್ದ ಸಚಿವ ಜಯಚಂದ್ರ ಅವರ ಕಾರು ಅಡ್ಡಗಟ್ಟಿದ ಗ್ರಾಮಸ್ಥರು ಚುನಾವಣೆ ಪ್ರಚಾರಕ್ಕೆ ಮಾತ್ರ ಗ್ರಾಮಕ್ಕೆ ಬರುತ್ತೀರಾ…? ಗೆದ್ದ ಮೇಲೆ ಇತ್ತ ಮುಖಮಾಡಿಯೂ ನೋಡಿಲ್ಲ. ಕಳೆದ ನಾಲ್ಕೂವರೆ ವರ್ಷದಿಂದ ಎಲ್ಲಿ ಹೋಗಿದ್ರಿ ಸ್ವಾಮಿ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಗ್ರಾಮಕ್ಕೆ ಬರದಂತೆ ಸಚಿವರನ್ನ ತಡೆದರು. ಮನೆಮನೆಗೆ ಕಾಂಗ್ರೆಸ್ ನ ಪ್ರಚಾರ ಕಾರ್ಯಕ್ರಮದ ಆರಂಭದಲ್ಲೇ ಸಚಿವರಿಗೆ ತರಾಟೆ ತೆಗೆದುಕೊಂಡಿರುವುದು ಸಚಿವರಿಗೆ ತೀವ್ರ ಮುಖಭಂಗ ಉಂಟಾಗಿದೆ.

    ಕೊನೆಗೆ ಅರ್ಧ ಗಂಟೆ ನಂತರ ಪರಿಸ್ಥಿತಿ ಶಾಂತವಾದ ಬಳಿಕ ಸಚಿವರು ಮತ್ತೆ ಗ್ರಾಮಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

  • ಸಿದ್ದರಾಮಯ್ಯ ಸರ್ಕಾರದಲ್ಲಿ ಮೇವು ಹಗರಣ- 22 ಕೋಟಿ ರೂ. ಲೂಟಿ, ಉಪಲೋಕಾಯುಕ್ತರ ತನಿಖೆಯಲ್ಲಿ ದೃಢ

    ಸಿದ್ದರಾಮಯ್ಯ ಸರ್ಕಾರದಲ್ಲಿ ಮೇವು ಹಗರಣ- 22 ಕೋಟಿ ರೂ. ಲೂಟಿ, ಉಪಲೋಕಾಯುಕ್ತರ ತನಿಖೆಯಲ್ಲಿ ದೃಢ

    ತುಮಕೂರು: ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ತುಮಕೂರು ಜಿಲ್ಲೆಯಲ್ಲೇ ಭಾರಿ ಮೇವು ಹಗರಣ ನಡೆದಿದೆ. ಮೇವು ವಿತರಣೆಯಲ್ಲಿ ಬರೊಬ್ಬರಿ 22 ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಅವರ ವರದಿಯಲ್ಲಿ ಬಹಿರಂಗವಾಗಿದೆ.

    ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ನಿವಾಸಿ ಮಲ್ಲಿಕಾರ್ಜುನ್ ಎನ್ನುವವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಉಪಲೋಕಾಯುಕ್ತ ನ್ಯಾ. ಅಡಿಯವರು ಬರಗಾಲದ ಹಿನ್ನಲೆಯಲ್ಲಿ ಪ್ರಾರಂಭಿಸಿದ ಗೋ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು. ಇಲ್ಲಿ ಭಾರಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಮೇವು ಖರೀದಿಸಿರುವ ರಸೀದಿಗಳಿಗೂ, ದಾಸ್ತಾನು ನಿರ್ವಹಣೆ ಪುಸ್ತಕದಲ್ಲಿರುವ ಮಾಹಿತಿಗೂ ವ್ಯತ್ಯಾಸ ಕಂಡುಬಂದಿದೆ.

    ತುಮಕೂರು ಜಿಲ್ಲೆಯ 7 ತಾಲೂಕುಗಳ ಗೋಶಾಲೆ ನಿರ್ವಹಣೆಗೆ ಬಿಡುಗಡೆ ಮಾಡಿದ 33.96 ಲಕ್ಷ ರೂ. ಅಕ್ರಮ ನಡೆದಿದೆ. ಅದೇ ರೀತಿ ಮೇವು ಖರೀದಿಯಲ್ಲೂ 21.98 ಕೋಟಿ ರೂ ದುರ್ಬಳಕೆ ಅಗಿದೆ. ಕಾನೂನು ಸಚಿವ ಟಿ.ಬಿ.ಜಯಚಂದ್ರರ ಸ್ವಕ್ಷೇತ್ರ ಶಿರಾದಲ್ಲಿ ಬರೋಬ್ಬರಿ 6.55 ಕೋಟಿ ರೂ. ಅಕ್ರಮವಾಗಿದೆ. ಉಳಿದಂತೆ ಗುಬ್ಬಿಯಲ್ಲಿ 1 ಕೋಟಿ, ಗೃಹಸಚಿವರ ಕ್ಷೇತ್ರ ಕೊರಟಗೆರೆಯಲ್ಲಿ 1.55 ಕೋಟಿ, ತಿಪಟೂರಲ್ಲಿ 2.99 ಕೋಟಿ, ತುರುವೇಕೆರೆಯಲ್ಲಿ 1.49 ಕೋಟಿ, ಪಾವಗಡದಲ್ಲಿ 3.10 ಕೋಟಿ, ಚಿಕ್ಕನಾಯಕನ ಹಳ್ಳಿಯಲ್ಲಿ 4.92 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಉಪಲೋಕಾಯುಕ್ತರ ವರದಿಯಲ್ಲಿ ಹೇಳಲಾಗಿದೆ.