Tag: ಟಿ.ಎನ್.ಶೇಷನ್

  • ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ನಿಧನ

    ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ನಿಧನ

    ಚೆನ್ನೈ: ಚುನಾವಣಾ ಆಯೋಗಕ್ಕೆ ಎಂಥ ತಾಕತ್ತಿದೆ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಮಾಜಿ ಮುಖ್ಯಚುನಾವಣಾ ಆಯುಕ್ತ ತಿರುನೆಲ್ಲೈ ನಾರಾಯಣ ಅಯ್ಯರ್ ಶೇಷನ್ (87) ಅವರು ಭಾನುವಾರ ಸಂಜೆ ನಿಧನ ಹೊಂದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ, ಶೇಷನ್ ಅವರ ನಿಧನದ ಸುದ್ದಿಯನ್ನು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ‘ದೇಶದ ಮಾಜಿ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಅವರು ಕೆಲವೇ ಸಮಯಗಳ ಹಿಂದೆ ನಿಧನರಾಗಿದ್ದಾರೆ ಎಂದು ತಿಳಿಸಲು ನನಗೆ ಬೇಸರವಾಗುತ್ತಿದೆ’ ಎಂದು ಖುರೇಷಿ ಬರೆದುಕೊಂಡಿದ್ದಾರೆ.

    ಶೇಷನ್ ಅವರು 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ 1990 ಡಿಸೆಂಬರ್ 12ರಿಂದ 1996 ಡಿಸೆಂಬರ್ 11ರವರೆಗೆ ಕಾರ್ಯನಿರ್ವಹಿಸಿದ್ದರು. 1955ನೇ ಬ್ಯಾಚಿನ ತಮಿಳುನಾಡು ಕೆಡೇರ್ ನ ಐಎಎಸ್ ಅಧಿಕಾರಿಯಾಗಿದ್ದ ಅವರು 1989ರಲ್ಲಿ ಭಾರತ ಸರ್ಕಾರದ 18ನೇ ಕ್ಯಾಬಿನೆಟ್ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸಿದ್ದರು. ಭಾರತ ಸರ್ಕಾರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಶೇಷನ್ ಅವರಿಗೆ 1996ರಲ್ಲಿ ಪ್ರತಿಷ್ಠಿತ ರಾಮನ್ ಮ್ಯಾಗ್ಸಸ್ಸೇ ಪ್ರಶಸ್ತಿಯನ್ನು ನೀಡಲಾಗಿತ್ತು.

    ಟಿ.ಎನ್.ಶೇಷನ್ ಅವರು ಎಂತಹ ಖಡಕ್ ಅಧಿಕಾರಿಯಾಗಿದ್ದರು ಎಂದರೆ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್, ಹಿರಿಯ ಮಂತ್ರಿಯಾಗಿದ್ದ ಸೀತಾರಾಮ ಕೇಸರಿ ಅವರಿಗೆ ನೋಟಿಸ್ ಕೊಟ್ಟು ಆಯೋಗಕ್ಕೆ ಖುದ್ದು ವಿವರಣೆ ನೀಡುವಂತೆ ಮಾಡಿದ್ದರು. ಚುನಾವಣೆಯಲ್ಲಿ ಮದ್ಯ, ಹಣ ಹಂಚಬಾರದು ಎಂಬುದು 1971ರಲ್ಲಿ ರಚಿಸಲಾದ ನೀತಿಸಂಹಿತೆಯಲ್ಲೇ ಇದ್ದ ನಿಯಮ. ಆದರೆ ಅದು ಕರಾರುವಾಕ್ಕಾಗಿ ಜಾರಿಗೆ ಬಂದದ್ದು ಶೇಷನ್ ಅಧಿಕಾರ ಅವಧಿಯಲ್ಲಿ. ಹೀಗೆ ಅನೇಕ ಬದಲಾವಣೆಗಳನ್ನು ಶೇಷನ್ ಅವರು ತಂದಿದ್ದರು.