Tag: ಟಿ ಆರ್ ಸ್ವಾಮಿ

  • ಟಿ.ಆರ್ ಸ್ವಾಮಿ ಹುದ್ದೆಯನ್ನು ವಾಪಸ್ ಪಡೆದ ಸರ್ಕಾರ

    ಟಿ.ಆರ್ ಸ್ವಾಮಿ ಹುದ್ದೆಯನ್ನು ವಾಪಸ್ ಪಡೆದ ಸರ್ಕಾರ

    ಬೆಂಗಳೂರು: ಟಿ.ಆರ್ ಸ್ವಾಮಿಗೆ ನೀಡಿದ್ದ ಕೆಐಎಡಿಬಿ ಮುಖ್ಯ ಎಂಜಿನಿಯರ್ ಹುದ್ದೆಯನ್ನು ಸಿಎಂ ಯಡಿಯೂರಪ್ಪ ಅವರ ಸರ್ಕಾರ ವಾಪಸ್ ಪಡೆದಿದೆ.

    ಟಿ.ಆರ್.ಸ್ವಾಮಿ ವಿರುದ್ಧ ಭ್ರಷ್ಟಚಾರ ಆರೋಪ ಕೇಳಿಬಂದಿದ್ದ ಕಾರಣ ಹಿಂದಿನ ಸರ್ಕಾರ ಅವರನ್ನು ಅಮಾನತು ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ರಚನೆ ಆದ ನಂತರದಲ್ಲಿ ಮತ್ತೆ ಟಿ.ಆರ್ ಸ್ವಾಮಿಗೆ ಕೆಐಎಡಿಬಿ ಮುಖ್ಯ ಎಂಜಿನಿಯರ್ ಹುದ್ದೆಯನ್ನು ನೀಡಲಾಗಿತ್ತು.

    ಕಳೆದ ವರ್ಷ ಆಕ್ಟೋಬರ್ ನಲ್ಲಿ ಎಸಿಬಿ ದಾಳಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಟಿ.ಆರ್ ಸ್ವಾಮಿಯನ್ನು ಅಮಾನತು ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಟಿ.ಆರ್.ಸ್ವಾಮಿಯನ್ನು ಮತ್ತೆ ನೇಮಕ ಮಾಡಲಾಗಿತ್ತು.

    ಈ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ರಾಜಕೀಯ ವಲಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಈ ಹುದ್ದೆಯನ್ನು ವಾಪಸ್ ಪಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಕಡುಭ್ರಷ್ಟ ಟಿಆರ್ ಸ್ವಾಮಿ ಮನೆಯಿಂದ ಎಸೆಯಲ್ಪಟ್ಟ ಕೋಟಿ ಹಣಕ್ಕೆ ಟ್ವಿಸ್ಟ್

    ಕಡುಭ್ರಷ್ಟ ಟಿಆರ್ ಸ್ವಾಮಿ ಮನೆಯಿಂದ ಎಸೆಯಲ್ಪಟ್ಟ ಕೋಟಿ ಹಣಕ್ಕೆ ಟ್ವಿಸ್ಟ್

    ಬೆಂಗಳೂರು: ಕಡುಭ್ರಷ್ಟ ಟಿಆರ್ ಸ್ವಾಮಿ ಮನೆಯಿಂದ ಎಸೆಯಲ್ಪಟ್ಟ ಕೋಟಿ ಹಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, 14ನೇ ಫ್ಲೋರ್ ನಿಂದ ಎಸೆಯಲ್ಪಟ್ಟ 4 ಕೋಟಿ ರೂ. ಸ್ವಾಮಿಯದ್ದಲ್ಲ ಎಂಬುದಾಗಿ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇದು ಹೆಚ್‍ಡಿಕೆ ಸಂಪುಟದ ಪ್ರಭಾವಿ ಸಚಿವರಿಗೆ ಸೇರಬೇಕಿದ್ದ ಹಣವಾಗಿದೆ. `ಆ’ ಪ್ರಭಾವಿ ಸಚಿವ ದೋಸ್ತಿ ಸರ್ಕಾರದ `ಎಟಿಎಂ ಮಿನಿಸ್ಟರ್’ ಎನ್ನಲಾಗಿದೆ. ಟಿ ಆರ್ ಸ್ವಾಮಿ `ಆ’ ಸಚಿವರಿಗೆ ಹಣ ಸಂದಾಯ ಮಾಡಲು ಕೂಡಿಟ್ಟಿರುವುದಾಗಿ ತಿಳಿದುಬಂದಿದೆ.

    `ಈ ಹಣ ಸಚಿವರದ್ದು.. ನಮ್ ತಂಟೆಗೆ ಬಂದ್ರೆ ಹುಷಾರ್…’ ಎಂದು ಹೇಳಿ ಬೆದರಿಕೆ ಹಾಕುವ ಮೂಲಕ ಸಚಿವರ ಹೆಸರೇಳಿ ತನಿಖಾ ತಂಡವನ್ನು ಬೆದರಿಸಲು ಸ್ವಾಮಿ ಕುಟುಂಬದ ಯತ್ನಿಸಿದೆ. ನೀವು ಬೇಕಿದ್ರೆ ಹೇಳಿಕೆ ರೆಕಾರ್ಡ್ ಮಾಡಿ.. ಕೋರ್ಟ್ ನಲ್ಲಿ ಉಲ್ಟಾ ಹೊಡಿತೀನಿ ಎಂದು ಸ್ವಾಮಿ ಪತ್ನಿ ಹೇಳಿದ್ದಾರೆ. ನಾನು ಕೋರ್ಟ್ ನಲ್ಲಿ ಉಲ್ಟಾ ಹೊಡೆದ್ರೆ ಸಚಿವರು ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತಾರೆ. ಸುಮ್ನೆ ನಮ್ಮೆಜಮಾನ್ರನ್ನು ಸಿಲುಕಿಸಬೇಡಿ. ಸಚಿವರ ಹಣವನ್ನ ತಮ್ಮ ಬಳಿ ಇಟ್ಟುಕೊಂಡಿದ್ರು ಅಷ್ಟೆ. ಆ ಪ್ರಭಾವಿ ಸಚಿವರ ಹಣ ಇಟ್ಟುಕೊಂಡಿದ್ದಕ್ಕೆ ನಮ್ಮ ಯಜಮಾನ್ರಿಗೆ ಯಾಕೆ ಶಿಕ್ಷೆ ಅಂತ ಟಿ ಆರ್ ಸ್ವಾಮಿಯ ಧರ್ಮಪತ್ನಿ ಎಸಿಬಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

    ಎಸಿಬಿ ದಾಳಿ:
    ಕಳೆದ ಮೇ ತಿಂಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕೆಐಎಡಿಬಿ ಚೀಫ್ ಎಂಜಿನಿಯರ್ ಟಿಆರ್ ಸ್ವಾಮಿ, ತನ್ನ ಮನೆಯಲ್ಲಿದ್ದ 4 ಕೋಟಿ ಹಣವನ್ನು ಸೂಟ್ ಕೇಸ್ ಗೆ ತುಂಬಿ ಬಳಿಕ ಅದನ್ನು ಅಪಾರ್ಟ್ ಮೆಂಟ್ ನಿಂದ ಬಾಲ್ಕನಿಯಿಂದ ಹೊರಕ್ಕೆ ಎಸೆದಿದ್ದರು. ಕಂತೆ ಕಂತೆ ನೋಟುಗಳಲ್ಲಿ ಅಪಾರ್ಟ್ ಮೆಂಟ್ ಗಾರ್ಡನ್ ನಲ್ಲಿ ಬಿದ್ದಿರುವುದನ್ನು ಕಂಡ ಎಸಿಬಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಣವನ್ನು ಆಯ್ದುಕೊಂಡು ಬ್ಯಾಗಿಗೆ ತುಂಬಿದ್ದರು. ಬಳಿಕ ಹಣ ಸಮೇತ ಅಪಾರ್ಟ್ ಮೆಂಟ್ ನ 14ನೇ ಮಹಡಿಯಲ್ಲಿದ್ದ ಸ್ವಾಮಿ ಮನೆಗೆ ತೆರಳಿದ್ದರು.

    ಅಧಿಕಾರಿಗಳು ಮನೆಯ ಬಾಗಿಲು ತೆಗೆಯಲು ಹೇಳಿದರೂ ಸುಮಾರು 1 ಗಂಟೆ ಕಾಲ ಬಾಗಿಲು ತೆರೆಯದೇ ಹೈಡ್ರಾಮ ನಡೆಸಿದ್ದರು. ಬಳಿಕ ಹೊರಕ್ಕೆ ಬಂದಿದ್ದು ಅಧಿಕಾರಿಗಳು ತಂದಿದ್ದ ಹಣ ತನ್ನದಲ್ಲ ಎಂದು ವಾದ ನಡೆಸಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ತಮ್ಮದೇ ವರಸೆಯಲ್ಲಿ ಪ್ರಶ್ನೆ ಮಾಡಿದ ಬಳಿಕ ಸ್ವಾಮಿ ಸುಮ್ಮನಾಗಿದ್ದರು ಎಂದು ತಿಳಿದು ಬಂದಿತ್ತು. ಈ ಹಂತದಲ್ಲಿ ಮನೆ ಪ್ರವೇಶಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮನೆಯ ಯಾವ ಮೂಲೆ ಹುಡುಕಿದರೂ ಸಿಗುತ್ತಿದ್ದ ಕಂತೆ ಕಂತೆ ಹಣ ಕಂಡು ದಂಗಾಗಿದ್ದರು. ಮನೆಯಲ್ಲಿದ್ದ ಟಿವಿ ಕೆಳ ಭಾಗ, ಆಡುಗೆ ಮನೆ, ಕ್ಯಾಬಿನ್, ಹಳೆಯ ಬ್ಯಾಗ್, ಸೋಫಾ ಕೆಳಗೆ, ಬಾತ್ ರೂಂ ಬಕೆಟ್ ಗಳಲ್ಲಿ ಹಣ ತುಂಬಿಡಲಾಗಿತ್ತು. ಇದರೊಂದಿಗೆ ಬೆಂಗಳೂರು, ಮೈಸೂರಿನಲ್ಲಿ ಸೈಟ್‍ಗಳು, ಮಕ್ಕಳ ಹೆಸರಲ್ಲಿ ದುಬಾರಿ ಬೆಲೆಯ ಕಾರುಗಳ ಖರೀದಿ ಮಾಡಿರುವ ಕುರಿತ ದಾಖಲೆಗಳು ಪತ್ತೆಯಾಗಿತ್ತು.

    ಮನೆಯಲ್ಲಿ ಏನೇನು ಸಿಕ್ಕಿತ್ತು?
    ಸ್ವಾಮಿ.ಟಿ.ಆರ್: ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv