Tag: ಟಿಬೇಟಿಯನ್ ಮಹಿಳೆ

  • ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ಟಿಬೇಟಿಯನ್ ಮಹಿಳೆ

    ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ಟಿಬೇಟಿಯನ್ ಮಹಿಳೆ

    ಮಡಿಕೇರಿ: ಕೊಡಗಿನ ಗಡಿ ಭಾಗವಾದ ಬೈಲುಕೊಪ್ಪ ಟಿಬೇಟಿಯನ್ ನಿರಾಶ್ರಿತರ ಶಿಬಿರದ ಮಹಿಳೆಯೊಬ್ಬಳ ಮೇಲೆ ಯುವಕರು ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ಕೊಡಗಿನ ಕುಶಾಲನಗರದಲ್ಲಿ ನಡೆದಿತ್ತು. ಈ ಪ್ರಕರಣ ಇದೀಗ ತಿರುವು ಪಡೆಯುತ್ತಿದ್ದು, ತನ್ನ ರಕ್ಷಣೆಗಾಗಿ ಮಹಿಳೆ ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದಾಳೆ. ಅಲ್ಲದೆ ತಾನು ಇರುವ ಮನೆಯನ್ನು ಕೂಡ ಬದಲಾಯಿಸಿದ್ದಾಳೆ.

    ಜನವರಿ 7 ರಂದು ಕುಶಾಲನಗರ ಮಡಿಕೇರಿ ರಸ್ತೆಯ ಹೋಟೆಲ್ ಒಂದರ ಮುಂಭಾಗದಲ್ಲಿ ಬೈಲುಕೊಪ್ಪೆಯ ಟಿಬೇಟಿಯನ್ ನಿರಾಶ್ರಿತರ ಶಿಬಿರದ 7ನೇ ಕ್ಯಾಂಪ್‍ನ ದೇಚನ್ ಯಾಂಗ್ಜಮ್ (25) ಎಂಬಾಕೆಯ ಮೇಲೆ ಕೆಲವು ಯುವಕರು ಹಲ್ಲೆ ನಡೆಸಿದ್ದರು. ಈ ವಿಚಾರವಾಗಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಳು. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದರು.

    ಇದೀಗ ಹೊರಬಂದಿರುವ ಆರೋಪಿ ಮತ್ತು ಆತನ ಸಹಚರರು ಆಕೆಗೆ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಮಹಿಳೆ ದೂರಿದ್ದಾಳೆ. ಪ್ರಕರಣ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ಬಂದಿದ್ದು, ಸ್ಥಳೀಯ ಪೊಲೀಸರಿಂದ ತನಗೆ ನ್ಯಾಯ ದೊರಕಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ. ಅಲ್ಲದೆ ಆರೋಪಿಗಳು ತನ್ನ ಬೈಲುಕೊಪ್ಪೆ ಶಿಬಿರದ ಮನೆಗೆ ಬಂದು ಬೆದರಿಕೆ ಒಡ್ಡುತ್ತಿದ್ದಾರೆ. ತನ್ನ ರಕ್ಷಣೆ ಬಯಸಿ ಮನೆ ಬದಲಾಯಿಸಿದ್ದು, ತಾನು ಮತ್ತು ತನ್ನ 5 ವರ್ಷದ ಹೆಣ್ಣುಮಗಳೊಂದಿಗೆ ದಿನನಿತ್ಯ ಜೀವಭಯದಿಂದ ಇರುವಂತಾಗಿದೆ ಎಂದು ದೂರಿದ್ದಾಳೆ.

    ತಕ್ಷಣ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವುದರೊಂದಿಗೆ ತನಗೆ ಮತ್ತು ಕುಟುಂಬಕ್ಕೆ ರಕ್ಷಣೆ ಒದಗಿಸಬೇಕೆಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರಿಗೆ ದೂರು ನೀಡುವುದಾಗಿ ಮಹಿಳೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.